Sunday, 15th December 2024

ವಿಸ್ತರಣೆಗೆ ಒಪ್ಪಿಗೆ ಕೊಡುವುದರಿಂದ ಕಳೆದುಕೊಳ್ಳುವುದೇನು ?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ಕೆಲ ದಿನಗಳಿಂದ ರಾಜ್ಯದಲ್ಲಿ ಕೇಳಿಬರುತ್ತಿರುವ ಒಂದೇ ಒಂದು ಪ್ರಶ್ನೆಯೆಂದರೆ, ‘ಸಂಪುಟ ವಿಸ್ತರಣೆ ಯಾವಾಗ?’ ಎಂದು. ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ 17 ವಲಸಿಗರೊಂದಿಗೆ, ಮೂಲ ಬಿಜೆಪಿಯಲ್ಲಿಯೂ ಸಾಲು ಸಾಲು ಮಂದಿ ಸಂಪುಟಕ್ಕೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಸರಕಾರ ಅಧಿಕಾರಕ್ಕೆ ಬಂದು ಹತ್ತಿರ ಹತ್ತಿರ ಎರಡು ವರ್ಷ ಕಳೆಯುತ್ತಿರುವ ಈ ಸಮಯದಲ್ಲಿ, ವಿಸ್ತರಣೆ ಅಥವಾ ಪುನಾರಚನೆಯ ಕೂಗು ಸಹಜವೂ ಹೌದು.

ಆದರೆ ದೆಹಲಿ ನಾಯಕರು ಮಾತ್ರ ಇದಕ್ಕೆ ಹೆಚ್ಚು ಸೊಪ್ಪು ಹಾಕುತ್ತಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಅಽ
ಕಾರಕ್ಕೆ ಬಂದ ದಿನದಿಂದಲೂ, ಒಂದಿಲ್ಲೊಂದು ವಿಷಯದಲ್ಲಿ ಯಡಿಯೂರಪ್ಪ ಹಾಗೂ ಪಕ್ಷದ ವರಿಷ್ಠರ ನಡುವೆ ಸಾಮ್ಯತೆಯ ಕೊರತೆ ಎದ್ದು ಕಾಣುತ್ತಿತ್ತು. ಅನೇಕ ಬಾರಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಬೇಕು ಎಂದು ಸಿಎಂ ಹೋದರೂ, ಸಮಯ ನೀಡದೇ ಸತಾಯಿಸಿರುವುದನ್ನು ನೋಡಿದ್ದೇವೆ.

ಈಗ ಸಂಪುಟ ವಿಸ್ತರಣೆ ವಿಷಯದಲ್ಲಿಯೂ ಇದೇ ರೀತಿ ನಡೆದುಕೊಳ್ಳುತ್ತಿರುವುದು ಏಕೆ ಎನ್ನುವ ಪ್ರಶ್ನೆಗೆ ಬಿಜೆಪಿ ನಾಯಕರ ಬಳಿ ಉತ್ತರವಿಲ್ಲವಾಗಿದೆ. ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಅಥವಾ ಯಾವುದೇ ಪಕ್ಷವಾಗಲಿ ಅಧಿಕಾರಕ್ಕೆ ಬಂದ ಒಂದೆರೆಡು ವರ್ಷದ ಬಳಿಕ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡುವುದು ಸಹಜ ಪ್ರಕ್ರಿಯೆ. ಯಾವುದೇ ಭಿನ್ನಮತ, ಬಂಡಾಯ, ಅಸಮಾ ಧಾನ, ಪಕ್ಷಾಂತರ ಇಲ್ಲದಿದ್ದರೂ ಇದು ನಡೆಯುತ್ತದೆ. ನಡೆಯಲೇಬೇಕು. ಈ ಸಮಯದಲ್ಲಿ ಪಕ್ಷಕ್ಕೆ ‘ಬೇಕಾಗುವವರನ್ನು’, ಜಾತಿ, ಪ್ರಾದೇಶಿಕ ಲೆಕ್ಕಾಚಾರದಲ್ಲಿ ಸಚಿವರ ನ್ನಾಗಿ ಮಾಡುವುದು ಸಹಜ. ಅದರಲ್ಲೂ ಬಿಜೆಪಿ ಈ ಬಾರಿ ಅಧಿಕಾರದ ಗದ್ದುಗೆ ಏರಿದ ರೀತಿಯಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಈ ರೀತಿ ವಿಸ್ತರಣೆ ಮಾಡಬೇಕಾಗುವುದು ಅನಿವಾರ್ಯ.

ಕಾಂಗ್ರೆಸ್-ಜೆಡಿಎಸ್‌ನಿಂದ ಬಿಜೆಪಿ ಹಾರಿಬಂದ 17 ಜನರು ಬರುವಾಗ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟುಕೊಂಡೇ ಬಂದಿದ್ದರು. ಅದರಲ್ಲೂ ಮುನಿರತ್ನ, ವಿಶ್ವನಾಥ್ ಬಂದಿದ್ದೇ ಕ್ಯಾಬಿನೆಟ್ ದರ್ಜೆಯನ್ನು ಪಡೆಯುವುದಕ್ಕಾಗಿ. ಈ ಎಲ್ಲರನ್ನು ಪಕ್ಷಕ್ಕೆ ಸೇರಿಸಿ ಕೊಳ್ಳುವಾಗ, ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿಯೇ, ಯಡಿಯೂರಪ್ಪ ಅವರು ಕೆಲವರಿಗೆ ಸಚಿವ ಸ್ಥಾನದ ಭರವಸೆ, ಇನ್ನು ಕೆಲವರಿಗೆ ಪ್ರಮುಖ ನಿಗಮ ಮಂಡಳಿಯ ಭರವಸೆ ನೀಡಿ ಸೇರಿಸಿಕೊಂಡಿರುವುದು.

ವಲಸಿಗರದ್ದು ಇದಾದರೆ, ಮೂಲ ಬಿಜೆಪಿಯಲ್ಲಿರುವ ಹಲವು ಹಿರಿಯ ಶಾಸಕರು, ತಮಗೆ ಸಚಿವ ಸ್ಥಾನ ನೀಡಿ ಎಂದು ಒತ್ತಡ ಹೇರುತ್ತಿದ್ದಾರೆ. ಮೊದಲ ಹಂತದಲ್ಲಿ ನಡೆದ ಸಂಪುಟ ರಚನೆ, ವಿಸ್ತರಣೆ ವೇಳೆ ಸ್ಥಾನ ಸಿಗದಿದ್ದಾಗ, ‘ಮುಂದಿನ ಬಾರಿ ಕೊಡುತ್ತೇವೆ’ ಎಂದು ಹೇಳಿ ಸಾಗಿಹಾಕಿದ್ದರು. ಇದೀಗ ಉಪಚುನಾವಣೆಯಲ್ಲಿ ಗೆದ್ದ ಮುನಿರತ್ನ, ಮೇಲ್ಮನೆ ಸದಸ್ಯರಾಗಿ ಆಯ್ಕೆಯಾದ ವಿಶ್ವನಾಥ್, ಎಂಟಿಬಿ, ಶಂಕರ್ ಸಹ ಸಂಪುಟದಲ್ಲಿ ಸೇರಿಕೊಳ್ಳಲು ನಿಂತಿದ್ದಾರೆ. ಇವರೊಂದಿಗೆ ಮೂಲ ಬಿಜೆಪಿಯ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ರಾಮದಾಸ್, ರೇಣುಕಾಚಾರ್ಯ ಸೇರಿದಂತೆ ಹತ್ತು ಹಲವರು ಹಿರಿತನಕ್ಕೆ ಬೆಲೆ ನೀಡಿ ಸ್ಥಾನನೀಡುವಂತೆ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಆದ್ದರಿಂದ ಈ ಒತ್ತಡದಿಂದ ಹೊರಬರಲು ಹಾಗೂ ಕೊಟ್ಟ ಮಾತು ಉಳಿಸಿಕೊಳ್ಳಲು ಸಂಪುಟ ವಿಸ್ತರಣೆ ಅವಕಾಶ ನೀಡಿ ಎಂದು ಯಡಿಯೂರಪ್ಪ ಅವರು ವರಿಷ್ಠರ ಮುಂದೆ ಕೇಳಿಕೊಂಡರೂ, ಅದಕ್ಕೆ ಉತ್ತರವಿಲ್ಲ. ಅಷ್ಟಕ್ಕೂ ಯಡಿಯೂರಪ್ಪ ಅವರು ವರಿಷ್ಠರ ಬಳಿ ಕೇಳುತ್ತಿರುವುದು, ಸರಕಾರ ರಚನೆಗೊಂಡು ಎರಡು ವರ್ಷ ಕಳೆಯುತ್ತಿರುವ ಅವಧಿಯಲ್ಲಿ ಸಂಪುಟ ವಿಸ್ತರಣೆ ಮಾಡಲು ಅವಕಾಶವನ್ನು. ಆದರೆ ವರಿಷ್ಠರು ಈ ರೀತಿ ಮೌನಕ್ಕೆ ಶರಣಾಗಿರುವುದು ಅಥವಾ ಅವಕಾಶ ನೀಡದೇ  ಸತಾಯಿಸು ತ್ತಿರುವುದು, ಯಡಿಯೂರಪ್ಪ ಅವರನ್ನು ಕುಗ್ಗಿಸಲು ಎನ್ನುವುದಕ್ಕೆ ಎಂದಾದರೆ, ಇದರಿಂದ ಬಿಎಸ್‌ವೈಗಿಂತ ಹೆಚ್ಚಿನ ಔಟoo ಆಗುವುದು ಬಿಜೆಪಿ ಎನ್ನುವುದನ್ನು ವರಿಷ್ಠರು ಅರಿಯಬೇಕಿದೆ.

ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಎಂದಿದ್ದರೂ ಆಗಲೇಬೇಕಾದ ಪ್ರಕ್ರಿಯೆ. ಆದ್ದರಿಂದ ಎದುರಾಗಲಿರುವ ಸಾಲು ಸಾಲು ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಒಪ್ಪಿಗೆ ಕೊಡುವುದು ಜಾಣ ನಡೆಯಲ್ಲವೇ? ಸಂಪುಟ ವಿಸ್ತರಣೆಯ ವಿಷಯ ಬಂದಾಗಲೆಲ್ಲ ಒಂದೊಂದು ಕಾರಣ ನೀಡುತ್ತಲೇ ಬಂದಿರುವ ವರಿಷ್ಠರಿಗೆ ಇದೀಗ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ, ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ಎದುರಾಗಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಎದುರಾಗಿದ್ದರಿಂದ ಡಿಸೆಂಬರ್ 30ರ ತನಕ ಸಂಪುಟ ವಿಸ್ತರಣೆಗೆ ಬ್ರೇಕ್ ಬೀಳಲಿದೆ. ಇದಾಗು ತ್ತಿದ್ದಂತೆ, ಏನಾದರೂ ಮಸ್ಕಿ-ಬಸವಕಲ್ಯಾಣ ಚುನಾವಣೆ ಘೋಷಣೆಯಾದರೆ, ಮುಂದಿನ ವರ್ಷದ ಫೆಬ್ರವರಿ ತನಕ ಸಂಪುಟದ ಬಗ್ಗೆ ಕಮಕ್ ಕಿಮಿಕ್ ಎನ್ನುವಂತಿಲ್ಲ. ಹಾಗೆಂದ ಮಾತ್ರಕ್ಕೆ, ಗ್ರಾಮ ಪಂಚಾಯಿತಿ ಚುನಾವಣಾ ಘೋಷಣೆ ಏನು ಏಕಾಏಕಿ ಆಗಿರುವುದಲ್ಲ. ಕಳೆದ ಎರಡು ಮೂರು ತಿಂಗಳಿನಿಂದ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇತ್ತು. ರಾಜ್ಯ ಬಿಜೆಪಿ ನಾಯಕರು, ಈ ಬಗ್ಗೆ ಕೇಂದ್ರ ನಾಯಕರ ಗಮನಕ್ಕೆ ತಂದಿದ್ದರು.

ಉಪಚುನಾವಣೆ ಮುಗಿಯುತ್ತಿದ್ದಂತೆ ಸಂಪುಟ ವಿಸ್ತರಣೆಗೆ ಅವಕಾಶ ನೀಡಿದ್ದರೆ, ಈ ವೇಳೆ ಯಡಿಯೂರಪ್ಪ ಅವರ ಸಂಪುಟದಲ್ಲಿ ಮತ್ತಷ್ಟು ಹೊಸ ಸಚಿವರು ಕೂರುತ್ತಿದ್ದರು. ಆದರೆ ವರಿಷ್ಠರಿಗೆ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಆಸಕ್ತಿಯಿಲ್ಲವೋ ಅಥವಾ ಯಡಿಯೂರಪ್ಪ ಅವರ ಸರಕಾರದ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರೋ ಎನ್ನುವ ಅನುಮಾನಗಳು ಎಲ್ಲರಲ್ಲಿದೆ. ಹಾಗೆ ನೋಡಿದರೆ ಬಿಜೆಪಿ ಅದರಲ್ಲಿಯೂ ಕರ್ನಾಟಕದ ಬಿಜೆಪಿ ವಿಷಯಕ್ಕೆ ಬಂದಾಗ ಅಧಿಕಾರ ಹಿಡಿಯುವ ತನಕ ಒಂದಾಗಿರುವ ನಾಯಕರು ಅಧಿಕಾರಕ್ಕೆ ಬರುತ್ತಿದ್ದಂತೆ ಒಳಜಗಳ ಭುಗಿಲೇಳುತ್ತವೆ.

ಈಗಲೂ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹವಿಲ್ಲ ಎಂದಲ್ಲ. ಆದರೆ ಸದ್ಯಕ್ಕೆ ದೆಹಲಿ ನಾಯಕರು ಸತಾಯಿಸುತ್ತಿರುವುದೇ ದೊಡ್ಡ ಸಮಸ್ಯೆಯಾಗಿರುವುದರಿಂದ ರಾಜ್ಯದ ನಾಯಕರು ಒಂದಾಗಿರುವ ರೀತಿಯಲ್ಲಿ ತೋರಿಸಿಕೊಳ್ಳುತ್ತಿದ್ದಾರೆ. ಈ ರೀತಿ ಅಽಕಾರಕ್ಕೆ ಬಂದಾಗ, ಅದನ್ನು ಹಾಳು ಮಾಡಿಕೊಳ್ಳುವುದು ಇದೇ ಮೊದಲಲ್ಲ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ವಿಜಯಪತಾಕೆ ಹಾರಿಸಿ, ಆಡಳಿತ ಚುಕ್ಕಾಣಿ ಹಿಡಿದಾಗಲೂ ಇದೇ ಆಗಿತ್ತು.

2008ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕಾರಕ್ಕೆ ಬಿಜೆಪಿ ಬಂದ ಆರಂಭದ ದಿನದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ
ಸರಕಾರ ರಚನೆಯಾದ ಕೆಲವೇ ತಿಂಗಳಲ್ಲಿ, ಆಂತರಿಕ ಕಿತ್ತಾಟ ಹೆಚ್ಚಾಯಿತು. ಆ ಸಮಯದಲ್ಲಿ ಬಿಜೆಪಿ ನಾಯಕರ ನಡೆ ನೋಡಿ ದರೆ, ಕಪ್ಪೆಯ ಕಥೆ ನೆನಪಾಗುತ್ತದೆ. ’ಒಮ್ಮೆ ಕಪ್ಪೆಗಳನ್ನೆಲ್ಲ ಒಂದು ಬಾಟಲಿಯಲ್ಲಿ ಹಾಕಿ, ಆ ಬಾಟಲಿಯಿಂದ ಹೊರಗೆ ಆಹಾರ ವನ್ನು ಇಡಲಾಗಿತ್ತಂತೆ. ನಾಲ್ಕೈದು ಬಾಟಲಿಯಲ್ಲಿ ಈ ರೀತಿ ಕಪ್ಪೆಗಳನ್ನು ಬಿಡಲಾಗಿತ್ತು. ಒಂದೊಂದು ಬಾಟಲಿಯಲ್ಲಿ ಒಂದೊಂದು ದೇಶದ ಕಪ್ಪೆಗಳನ್ನು ಬಿಡಲಾಗಿತ್ತು. ಎಲ್ಲ ದೇಶದ ಕಪ್ಪೆಗಳು ಒಂದರ ಮೇಲೊಂದು ನಿಂತು, ಇನ್ನೊಂದು ಕಪ್ಪೆ ಯನ್ನು ಮೇಲಕ್ಕೆ ಹೋಗುವಂತೆ ಸಹಾಯ ಮಾಡುತ್ತಿದ್ದವಂತೆ.

ಆದರೆ ಒಂದು ಬಾಟಲಿಯ ಕಪ್ಪೆಗಳು ಮಾತ್ರ, ಒಂದು ಮೇಲಕ್ಕೆ ಹೋಗುತ್ತಿದ್ದಂತೆ ಇನ್ನೊಂದು ಕಪ್ಪೆ ಕೆಳಕ್ಕೆ ಎಳೆಯುತ್ತಿತ್ತಂತೆ. ಹಾಗೇ ಬಿಜೆಪಿಯಲ್ಲಿಯೂ ಒಬ್ಬರ ಕಾಲನ್ನು ಒಬ್ಬರು ಎಳೆದುಕೊಳ್ಳುತ್ತ ಯಾರಿಗೂ ಅಧಿಕಾರ ಸಿಗದೇ, ಮತ್ತೊಬ್ಬರ ಪಾಲಾಗು ವಂತೆ ಮಾಡಿದರೆ ಹೊರತು, ಇನ್ಯಾವ ಸಾಧನೆಯನ್ನು ಮಾಡಲಿಲ್ಲ.

2008ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾದರು. ಪ್ರತಿಬಾರಿ ಬದಲಾವಣೆ ವೇಳೆಯೂ, ಒಬ್ಬ ಆಕಾಂಕ್ಷಿ ಇನ್ನೊಬ್ಬ ಆಕಾಂಕ್ಷಿಯನ್ನು ಕೆಳಕ್ಕೆ ಇಳಿಸಲು ತಂತ್ರರೂ ಪಿಸುತ್ತಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ಬಳಿಕ, ಜಗದೀಶ್ ಶೆಟ್ಟರ್ ಅವರ ಬಳಿಕ ಸದಾನಂದಗೌಡ ಅಧಿಕಾರಕ್ಕೆ ಬಂದರು. ಈ ಅವಧಿಯಲ್ಲಿ ಆಡಳಿತ ಪಕ್ಷದಲ್ಲಿ ಸೃಷ್ಟಿಯಾದ ಗೊಂದಲ ಅಷ್ಟಿಷ್ಟಲ್ಲ. ಈ ಎಲ್ಲದ ಫಲವಾಗಿ 2012ರಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಯಡಿಯೂರಪ್ಪ ಮತ್ತು ತಂಡ ಕೆಜೆಪಿಯನ್ನು ಸ್ಥಾಪಿಸಿತು.

ಈ ನೂತನ ಪಕ್ಷದ ಸ್ಥಾಪನೆ ಬಿಜೆಪಿ ಹಾಗೂ ಕೆಜೆಪಿ ಇಬ್ಬರಿಗೂ ಲಾಭಕ್ಕಿಂತ ನಷ್ಟೇ ಹೆಚ್ಚಾಗಿತ್ತು. ಅಂತಿಮವಾಗಿ ಈ ಇಬ್ಬರ
ನಡುವಿನ ಒಡೆದ ಮತಗಳ ಲಾಭವನ್ನು ಪಡೆದಿದ್ದು ಕಾಂಗ್ರೆಸ್. 2013ರ ಚುನಾವಣೆಯಲ್ಲಿ ಈ ಲಾಭ ಪಡೆದು ಕಾಂಗ್ರೆಸ್ ಸ್ಪಷ್ಟಬಹುಮತದೊಂದಿಗೆ ಸರಕಾರ ರಚಿಸಿದರೆ, ಆಡಳಿತರೂಢ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದು, ಅಧಿಕೃತ ಪ್ರತಿಪಕ್ಷ ವಾಗಿಯೂ ಹೊರಹೊಮ್ಮಲು ಸಾಧ್ಯವಾಗದ ಸ್ಥಿತಿ ತಲುಪಿತ್ತು.

ಬಳಿಕ ಯಡಿಯೂರಪ್ಪ ನೇತೃತ್ವದ ಕೆಜೆಪಿ ಬಿಜೆಪಿ ಜತೆ ಸೇರಿದ ಬಳಿಕ ಪ್ರತಿಪಕ್ಷ ಸ್ಥಾನ ಬಿಜೆಪಿಗೆ ಸಿಕ್ಕಿದ್ದು. ಈ ರೀತಿ ಅಧಿಕಾರಕ್ಕೆ ಬಂದಾಗ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾದ ನಾಯಕರಲ್ಲಿ ಈಗಾಗಲೇ ಅಸಮಾಧಾನದ ಹೊಗೆ ಶುರುವಾಗಿದೆ. ಇದಕ್ಕೆ ಸೊಪ್ಪು ಹಾಕುವ ರೀತಿ ಯಲ್ಲಿ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಆದ್ದರಿಂದ ಹಲವು ಆಕಾಂಕ್ಷಿಗಳು, ಬೆಂಗಳೂರು ಟು ದೆಹಲಿ, ದೆಹಲಿ ಟು ಬೆಂಗಳೂರು ಓಡಾಡಿಕೊಂಡು, ದಿನಕ್ಕೊಂದು ವಿವಾದ ಸೃಷ್ಟಿಸುತ್ತಿದ್ದಾರೆ.

ಈಗಾಗಲೇ ರೇಣುಕಾಚಾರ್ಯ, ರಮೇಶ್ ಜಾರಕಿಹೊಳಿ ಹಾಗೂ ಸಿ.ಪಿ ಯೋಗಿಶ್ವರ ನಡುವೆ ಬಹಿರಂಗ ಜಗಳಗಳೇ ಆರಂಭವಾಗಿವೆ. ಇದರೊಂದಿಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಸವಗೌಡ ಪಾಟೀಲ್ ಯತ್ನಾಳ್ ಆಗ್ಗಾಗೆ ಹೇಳಿಕೆ ಕೊಡು ತ್ತಿದ್ದರೂ, ಅವರ ವಿರುದ್ಧ ಯಾವುದೇ ಕ್ರಮ ತಗೆದುಕೊಳ್ಳುವ ಲೆಕ್ಕಾಚಾರದಲ್ಲಿ ಬಿಜೆಪಿ ವರಿಷ್ಠರಿಲ್ಲ. ಇನ್ನು ಯತ್ನಾಳ್ ಯಡಿಯೂರಪ್ಪ ವಿರುದ್ಧ ಬಹಿರಂಗ ಹೇಳಿಕೆ ನೀಡಿದಾಗಲೆಲ್ಲ, ಯತ್ನಾಳ್‌ರನ್ನು ಕರೆದು ಬುದ್ದಿ ಹೇಳಬೇಕಾದವರೇ ಯಡಿಯೂರಪ್ಪ ಅವರನ್ನು ಕುಗ್ಗಿಸಲು ಪರೋಕ್ಷ ಬೆಂಬಲ ನೀಡುವ ಕೆಲಸಕ್ಕೆ ಕೈಹಾಕಿದರೆ, ಇದರಿಂದ ಪಕ್ಷಕ್ಕಾಗುವ ಡ್ಯಾಮೇಜ್ ಎಷ್ಟು ಎನ್ನುವುದನ್ನು ಯೋಚಿಸಬೇಕು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ನೆರೆ ಪರಿಹಾರ, ಜಿಎಸ್‌ಟಿ ಹಣ ಬಿಡುಗಡೆ, ಸಂಪುಟ ವಿಸ್ತರಣೆ ಹೀಗೆ ಪ್ರತಿ ವಿಷಯ ಬಂದಾಗಲೂ ಕೇಂದ್ರದ ನಾಯಕರು ರಾಜ್ಯವನ್ನು ಗಂಭೀರವಾಗಿ ಪರಿಗಣಿಸಿದ್ದನ್ನು ಕಂಡೇ ಇಲ್ಲ ಎನ್ನಬಹುದು. ಯಡಿಯೂರಪ್ಪ ಅವರಿಗೆ ಮುಜುಗರ ಉಂಟು ಮಾಡುವುದಕ್ಕೆ ಈ ರೀತಿ ಮಾಡಿದ್ದರೂ, ಇಡೀ ರಾಜ್ಯಕ್ಕಾದ ಹಿನ್ನಡೆ ಎಂದೇ ಬಿಂಬಿತವಾಗುತ್ತದೆ. ಇದರಿಂದ ರಾಜ್ಯದಲ್ಲಿರುವ ಪಕ್ಷ ಸಂಘಟನೆಯ ಬೇರು ಸಡಿಲವಾಗುತ್ತಾ ಸಾಗುತ್ತದೆ ಎನ್ನುವುದನ್ನು ವರಿಷ್ಠ ರೇಕೆ ಯೋಚಿಸುತ್ತಿಲ್ಲ ಎನ್ನುವುದು ಅನೇಕರಿಗೆ ಇರುವ ಯಕ್ಷ ಪ್ರಶ್ನೆಯಾಗಿದೆ.

ಬಿಜೆಪಿ ವಿಷಯದಲ್ಲಿ ಯಡಿಯೂರಪ್ಪ ಅವರನ್ನುನೋಡುವುದಾದರೆ, ಕರ್ನಾಟಕದ ಮಟ್ಟಿಗೆ ಮತ್ತದೇಯಾದ ಛಾಪನ್ನು ಮೂಡಿಸಿರುವ ನಾಯಕ. ರಾಜ್ಯದಲ್ಲಿ ಬಿಜೆಪಿ ಬಾವುಟ ಕಟ್ಟಲು ಜನರಿಲ್ಲದ ವೇಳೆಯಲ್ಲಿ, ಅನಂತಕುಮಾರ, ಈಶ್ವರಪ್ಪ ಸೇರಿದಂತೆ ಅನೇಕರನ್ನು ಸೇರಿಸಿಕೊಂಡು ಪಕ್ಷ ಸಂಘಟನೆಗೆ ಇಡೀ ರಾಜ್ಯ ಸುತ್ತಿದವರು. ಈಗಿನ ರೀತಿ ಐಷಾರಾಮಿ ಕಾರುಗಳಿರಲಿಲ್ಲ. ಸೈಕಲ್, ಬಸ್‌ನಲ್ಲಿಯೂ ಪ್ರಯಾಣಿಸಿ ಪಕ್ಷವನ್ನು ಈ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.

ಹೀಗಿರುವಾಗ, ಅವರ ಹಿರಿತನಕ್ಕೆ ಗೌರವ ನೀಡಬೇಕಾಗಿತ್ತು ಎನ್ನುವುದು ಅನೇಕ ಬಿಜೆಪಿಗರ ಮಾತಾಗಿದೆ. ಈ ಎಲ್ಲವನ್ನು ಪಕ್ಕಕ್ಕೆ ಇಟ್ಟು ನೋಡುವುದಾದರೂ, ರಾಜ್ಯದ ಅಭಿವೃದ್ಧಿಗೆ ಪೂರ್ಣ ಪ್ರಮಾಣದ ಸರಕಾರ ರಚನೆಯಾಗಬೇಕಲ್ಲವೇ? ಅದಕ್ಕಾದರೂ ಅವಕಾಶ ನೀಡಬಹುದಾಗಿತ್ತು. ಹಾಗೇ ನೋಡಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲಿಯೂ ಸಂಪುಟ ಪುನಾರಚನೆಗೆ ಅವಕಾಶ ಕೇಳಿಲ್ಲ. ಅವರಿಗಿರುವುದು ಸರಕಾರ ರಚಿಸುವ ವೇಳೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಬೇಕೆನ್ನುವುದು. ಇದಕ್ಕೂ ಒಪ್ಪಿಗೆ ಕೊಡದಿದ್ದಾಗ, ಮೂರು ಸ್ಥಾನಗಳಿಗೆ ನಾನು ಸೂಚಿಸಿದವರನ್ನು ತಗೆದುಕೊಂಡು , ಬಾಕಿ ಸ್ಥಾನಗಳಿಗೆ ಹೈಕಮಾಂಡ್ ಸೂಚಿಸಿದವರಿಗೆ ಸ್ಥಾನ ನೀಡೋಣ ಎನ್ನುವ ಮಾತನ್ನು ಹೇಳಿದರು.

ಅದನ್ನು ಒಪ್ಪುವುದಕ್ಕೂ ಪಕ್ಷದ ವರಿಷ್ಠರು ಸಿದ್ಧರಿಲ್ಲ. ಯಡಿಯೂರಪ್ಪ ಅವರಿಗೆ ದೆಹಲಿ ವ್ಯವಹಾರವೇನು ಹೊಸದಲ್ಲ. ಆದರೆ ದಿಲ್ಲಿ ಬಿಜೆಪಿ ಕಚೇರಿಯಲ್ಲಿ ಅಮಿತ್ ಶಾ ಪ್ರಭಾವಳಿ ಹೆಚ್ಚಾಗುತ್ತಿದ್ದಂತೆ, ಯಡಿಯೂರಪ್ಪ ಅವರ ಮಾತು ನಡೆಯುತ್ತಿಲ್ಲ. ಪ್ರತಿಯೊಂದನ್ನು ಶಾ ಮೂಲಕವೇ ಹೇಳಿಸಬೇಕು ಹಾಗೂ ಅವರೇ ಒಪ್ಪಿಗೆ ಕೊಡಬೇಕು ಎನ್ನುವ ಸ್ಥಿತಿ ಬಿಜೆಪಿಯಲ್ಲಿ ತಲುಪಿದೆ. ಪಕ್ಷದ ವರಿಷ್ಠರೂ ಸಹ, ಸಂಪುಟ ವಿಸ್ತರಣೆ ಎನ್ನುವ ವಿಷಯ ಬಂದಾಗಲೆಲ್ಲ ಅಧಿವೇಶನ ಅಥವಾ ಯಾವುದಾದರೂ ಚುನಾ ವಣೆಯ ನೆಪವನ್ನು ಹೇಳಿ ಮುಂದಕ್ಕೆ ಸಾಗಿ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಯಡಿಯೂರಪ್ಪ ಅವರು ಲಿಂಗಾಯತ ಅಸ ಬಳಸಿದಾಗ, ವಿಸ್ತರಣೆ ಅವಕಾಶ ನೀಡುವುದಕ್ಕೆ ಒಪ್ಪಿಗೆ ನೀಡಿದ ರೀತಿ ಮಾಡಿದ್ದ ವರಿಷ್ಠರು, ಈ ವಿಷಯ ಹಿಂದಕ್ಕೆ ಹೋಗುತ್ತಿದ್ದಂತೆ ಪುನಃ ‘ಅದೇ ರಾಗ’ ಎನ್ನುವ ರೀತಿಯಲ್ಲಿ ಕಾರಣಗಳನ್ನು ನೀಡುತ್ತಾ ಬಂದಿ ದ್ದಾರೆ. ವರಿಷ್ಠರ ಈ ನಡೆ ಬಿಜೆಪಿಯ ಹಲವು ಕಾರ್ಯಕರ್ತರಿಗೆ ಬೇಸರ ತರಿಸಿದ್ದರಲ್ಲಿ ಅನುಮಾನವಿಲ್ಲ. ರಾಜ್ಯವೊಂದರ ಮುಖ್ಯಮಂತ್ರಿಗೆ ಪ್ರತಿಹೆಜ್ಜೆಗೂ ಮುಜುಗರಕ್ಕೆ ಸಿಲುಕಿಸುವ ಪ್ರಯತ್ನ ಮಾಡಿದರೆ, ಮುಂದೆ ಅವರ ಫೇಸ್‌ವ್ಯಾಲ್ಯು ಇಟ್ಟುಕೊಂಡು ಮತ ಕೇಳುವುದಕ್ಕಾದರೂ ಸಾಧ್ಯವೇ ಎನ್ನುವ ಪ್ರಶ್ನೆಗಳು ಮೂಡಿಬರುತ್ತಿವೆ. ಆದರೆ ಈ ಪ್ರಶ್ನೆಗಳೆಲ್ಲ ಬಹುತೇಕ ನಾಯಕ ಗಂಟಲಿ ನಿಂದ ಹೊರಬರುತ್ತಿಲ್ಲ. ಕಾರಣ ‘ಬಿಜೆಪಿ ಶಿಸ್ತಿ ಪಕ್ಷ !’

ಬಿಜೆಪಿ ನಾಯಕರು ಇತ್ತೀಚಿಗೆ ನಡೆದುಕೊಳ್ಳುತ್ತಿರುವ ನಡೆಯನ್ನು ನೋಡಿದಾಗ ‘ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುವಂತಿದೆ’. ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಮಾಡಲೇಬೇಕು ಎನ್ನುವ ತೀರ್ಮಾನವನ್ನು ವರಿಷ್ಠರು ತಗೆದುಕೊಂಡಿದ್ದರೆ, ಅದನ್ನು ಯಡಿಯೂರಪ್ಪ ಹಾಗೂ ಅವರ ತಂಡಕ್ಕೆ ಸ್ಪಷ್ಟವಾಗಿ ತಿಳಿಸಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ. ‘ಇತ್ತ ಅಕ್ಕಿಯ ಮೇಲಾಸೆ, ನೆಂಟರ ಮೇಲಿನ ಪ್ರೀತಿ’ ಹೆಚ್ಚು ದಿನ ಮುಂದುವರಿಸಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟ. ಇಲ್ಲದಿದ್ದರೆ ಪಕ್ಷ ದೊಳಗಿನ ಕಿತ್ತಾಟದಲ್ಲಿ ಈ ಹಿಂದಿನ ರೀತಿಯಲ್ಲಿಯೇ ಮತ್ತೊಂದು ಪಕ್ಷ ಲಾಭ ಪಡೆಯುವುದರಲ್ಲಿ ಅನುಮಾನವಿಲ್ಲ.