ಅಭಿಮತ
ಸುಜಯ ಆರ್.ಕೊಣ್ಣೂರ್
ಇತ್ತೀಚೆಗೆ ಪಬ್ಲಿಕ್ ಟಿ.ವಿ.ಯಲ್ಲೊಂದು ಚರ್ಚೆ ನಡೆಯುತ್ತಿತ್ತು. ಬಹಳ ದಿನಗಳ ನಂತರ ಒಂದು ಒಳ್ಳೆಯ ವಿಷಯಾಧಾರಿತ,
ಸಾಮಾಜಿಕ ಪ್ರಜ್ಞೆಯನ್ನು ತಿಳಿಸುವ ಆರೋಗ್ಯಕರ ಮಾತುಕತೆ ಅದಾಗಿತ್ತು. ಅಬ್ಬರಿಸಿ, ಬೊಬ್ಬಿರಿವ ರೀತಿಯದಾಗಿರಲಿಲ್ಲ. ಮಾದಕದ್ರವ್ಯದ ವ್ಯಸನಿಗಳು ಮತ್ತು ಆ ವಿಷಯಕ್ಕೆ ಸಂಬಂಧಪಟ್ಟಂತೆ ಎಷ್ಟೋ ಜನಗಳ ವಿಷಯ ಬೆಳಕಿಗೆ ಬಂದಿದೆ.
ಅವರೆಲ್ಲರೂ ಸಿನಿಮಾ ರಂಗಕ್ಕೆ ಸೇರಿದವರು. ಹಾಗಿದ್ದಲ್ಲಿ, ಈ ಮಾದಕದ್ರವ್ಯದ ನಂಟು, ರಾಜಕೀಯ ರಂಗ, ಉದ್ಯಮ ರಂಗ, ಪತ್ರಿಕಾ/ ಮಾಧ್ಯಮ ರಂಗ ಹಾಗೂ ಇನ್ನಿತರ ರಂಗಗಳಲ್ಲಿಲ್ಲವೇ? ಬೇರೆ ರಂಗದವರಲ್ಲಿ ಯಾರೂ ಈ ವಿಷಯವನ್ನು ಬಹಿರಂಗ ಪಡಿಸದೇ ಇರುವ ಕಾರಣ ಏನಿರಬಹುದು? ಸಿನಿಮಾರಂಗಕ್ಕೆ ಮಾತ್ರ ಯಾಕೆ ಈ ನಂಟು ತಳಕು ಹಾಕಿ ಕೊಂಡಿದೆ? ಎಂಬಿತ್ಯಾದಿ ವಿಷಯಗಳು. ಚರ್ಚೆಯಲ್ಲಿ ಹಿರಿಯ ಪತ್ರಕರ್ತರೊಬ್ಬರು ಕೆಲವು ಪ್ರಮುಖ ವಿಷಯಗಳನ್ನು ತಿಳಿಸಿದರು.
ಮೊದಲನೆಯದಾಗಿ, ಈಗ ಕೇಳಿಬರುತ್ತಿರುವ ನಟಿಮಣಿಯರೆಲ್ಲಾ, ಕನ್ನಡ ನಾಡಿನವರಲ್ಲ. ಹೊರಗಡೆ ಯಿಂದ ಬಂದವರಿಗೆ ಇಲ್ಲಿ ಹೆಚ್ಚಿನ ಆದ್ಯತೆ ಕೊಟ್ಟು ಅವರಿಗೆ ಸುಲಭದಲ್ಲಿ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳು ಸಿಗುವಂತಾಗಿದೆ. ಅವರಿಗೆ ನಮ್ಮ ಕನ್ನಡ ನಾಡಿನ ಸಂಸ್ಕೃತಿ, ಆಚಾರ – ವಿಚಾರಗಳ ಬಗ್ಗೆ ಯಾವ ನಿಗಾ ಕೂಡಾ ಇರುವುದಿಲ್ಲ. ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ಯಾವ ಅಭಿಮಾನವೂ ಇರುವುದಿಲ್ಲ. ಹಣ ಗಳಿಕೆಯೊಂದೇ ಮುಖ್ಯ. ತಮಗೆ ಬೇಕಾದಂತೆ ಸ್ವಚ್ಛಂದವಾಗಿ ವ್ಯವಹರಿಸುತ್ತಾರೆ.
ಇದರಿಂದಾಗಿ ನಮ್ಮ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ. ನಮ್ಮಲ್ಲಿ ಲಾಗಾಯ್ತಿನಿಂದ ಒಂದು ಭಾವನೆಯಿದೆ. ಸಿನಿಮಾ ರಂಗವಿರಲಿ, ನಾಟಕ ಅಥವಾ ಯಕ್ಷಗಾನವಿರಲಿ, ಪ್ರದರ್ಶನ ಕಲೆಗಳಿಗೆ ಹೆಣ್ಣುಮಕ್ಕಳು ಬಂದರೆಂದರೆ ಅವರು ನಡತೆಗೆಟ್ಟವರು
ಅನ್ನುತ್ತಿದ್ದರು. ಆದರೆ ಕಾಲ ಬದಲಾದಂತೆ ಅದು ಒಂದು ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳುತ್ತಾ ಬಂತು. ಆಗ ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲೂ ತಮ್ಮ ನೈಪುಣ್ಯತೆಯನ್ನು ಮೆರೆಯುತ್ತಾ ಬಂದರು. ಹಿಂದೆ ಸಿನಿಮಾದಲ್ಲಿನ ಮುಖ್ಯ ಪಾತ್ರಧಾರಿಗಳು ಹೊರಗಡೆ ಸಾಮಾಜಿಕ ಜೀವನದಲ್ಲಿ ತಮ್ಮ ಮೇಲೆ ಜನರಿಟ್ಟ ಒಂದು ಇಮೇಜ್ ಅನ್ನು ಕಾಯ್ದುಕೊಳ್ಳುತ್ತಿದ್ದರು.
ಒಮ್ಮೆ ಡಾ.ರಾಜ್ ಕುಮಾರ್ ಅವರು ವಿಮಾನದಿಂದ ಇಳಿದು ನಿಲ್ದಾಣದ ಕಡೆಗೆ ಬರುವಾಗ ಒಬ್ಬ ವ್ಯಕ್ತಿ, (ಅಲ್ಲಿಯೇ ಕೆಲಸ ಮಾಡುವವನು) ಪ್ರತೀ ಬಾರಿ ಅವರನ್ನು ತದೇಕಚಿತ್ತದಿಂದ ನೋಡುತ್ತಿದ್ದುದನ್ನು ಅವರು ಗಮನಿಸಿ ಕೇಳಿದರಂತೆ. ನಾನು ಪ್ರತೀ ಬಾರಿ ಬಂದಾಗಲೂ ನೀವು ಹೀಗೇಕೆ ನನ್ನನ್ನು ನೋಡುತ್ತೀರಿ? ಅದಕ್ಕೆ ಆ ವ್ಯಕ್ತಿ, ನಾನು ಪ್ರತೀ ಬಾರಿ ನೋಡಿದಾಗಲೂ ನೀವು ಬೇರೆ ಬೇರೆ ಥರದ ಉಡುಗೆ ತೊಟ್ಟಿರುತ್ತೀರಿ. ಆದರೆ, ನೀವು ಪಂಚೆ ಮತ್ತು ಶರ್ಟ್‌ನಲ್ಲಿ ಮಾತ್ರ ಬಹಳ ಚೆನ್ನಾಗಿ ಕಾಣಿಸುತ್ತೀರಿ ಎಂದ ನಂತೆ. ಅಂದಿನಿಂದ ಡಾ.ರಾಜ್ ಕುಮಾರ್ ಅವರು ಸಾಮಾಜಿಕ ಜೀವನದಲ್ಲಿ ತಮ್ಮ ಉಡುಗೆಯನ್ನು ಪಂಚೆ ಮತ್ತು ಶರ್ಟ್‌ಗೆ ಸೀಮಿತ ಮಾಡಿಕೊಂಡರಂತೆ. ಇನ್ನೊಂದು ಸಂಗತಿ, ಅವರು ದಿನಕ್ಕೆ ಒಮ್ಮೆ ಅಥವಾ ಎರಡು ಬಾರಿ ಸಿಗರೇಟ್ ಸೇದುತ್ತಿದ್ದರಂತೆ.
ಒಮ್ಮೆ ಟೀ ಅಂಗಡಿ ಹುಡುಗ ಡಾ.ರಾಜ್ ಕುಮಾರ್ ಅವರು ಸಿಗರೇಟ್ ಸೇದುವುದನ್ನು ನೋಡಿ ಅವಾಕ್ಕಾದನಂತೆ. ನಂತರ
ಡಾ.ರಾಜ್ ಕುಮಾರ್ ಅವರು ಸಿಗರೇಟ್ ಸೇದುವುದನ್ನು ಬಿಟ್ಟು ಬಿಟ್ಟರಂತೆ. ಇದು ಸಾಮಾಜಿಕ ಪ್ರಜ್ಞೆ. ಪ್ರಸಿದ್ಧ ನಟಿಯರಾದ, ಲಕ್ಷ್ಮಿ, ಸರಿತಾ, ಕಾಂಚನಾ, ಮಾಧವಿ, ಅಂಬಿಕಾ, ಲಕ್ಷ್ಮಿ, ಜಯಪ್ರದಾ ಇನ್ನೂ ಎಷ್ಟೋ ಜನ ನಟಿಯರಿದ್ದಾರೆ. ಇವರ್ಯಾರೂ ಈ
ರೀತಿಯ ವಿವಾದಗಳಿಗೆ ಸಿಲುಕಿಲ್ಲವಲ್ಲ? ಅವರನ್ನು ನಾವು ಈಗಲೂ ಗೌರವದಿಂದ ನೋಡುತ್ತೇವೆ. ಅವರ ನಂತರದಲ್ಲಿ ಬಂದ ಪ್ರೇಮ, ಶೃತಿ, ಸುಧಾರಾಣಿ, ರಮ್ಯಾ, ರಕ್ಷಿತಾ, ರಾಧಿಕಾ ಪಂಡಿತ್, ಇನ್ನೂ ಅನೇಕರಿದ್ದಾರೆ. ಇವರ್ಯಾರೂ ಪಾರ್ಟಿ ಸಂಸ್ಕೃತಿಯಲ್ಲಿ
ಮೆರೆದು ಹೆಸರು ಕೆಡಿಸಿಕೊಂಡವರಲ್ಲ. ಈಗಿನವರು ಮಾತ್ರ ಹೀಗೇಕೆ? ನಮ್ಮ ಪೌರಾಣಿಕ ಹಾಗೂ ಎಷ್ಟೋ ಸಾಮಾಜಿಕ ಚಿತ್ರ ಗಳಲ್ಲಿ ಸತ್ಯ ನಾರಾಯಣ ಪೂಜೆ ಮಾಡುವಾಗ, ನಾವು ಚಿತ್ರ ನೋಡುತ್ತಾ ಭಕ್ತಿ ಪರವಶರಾಗುತ್ತಿದ್ದೆವು.
ಆದರೆ, ಈಗಿನ ಚಿತ್ರಗಳಲ್ಲಿ ಸತ್ಯ ನಾರಾಯಣ ಪೂಜೆ ನಡೆಯುತ್ತಿರುವಾಗ, ನಾಯಕ – ನಾಯಕಿ ಚಪ್ಪಲಿ ಹಾಕಿಕೊಂಡು ಹೋಗು ತ್ತಾರೆ. ಇದು ನಮ್ಮ ಸಂಸ್ಕೃತಿಯಲ್ಲಿಲ್ಲ. ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಈ ರಂಗದಿಂದ ಎಲ್ಲಿ ಆಗುತ್ತಿದೆ? ಸಿನಿಮಾ ರಂಗದಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ಅವರು ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚಾರ, ವಿಚಾರ ಗಳನ್ನು ಬಂಧಿಸುವ ಸೇತುವಾಗಬೇಕು. ಯಾಕಂದ್ರೆ, ಜನ ಅವರನ್ನು ಒಂದು ಮಾದರಿಯಾಗಿ ನೋಡುತ್ತಾರೆ. ಜನ ದುಡ್ಡು ಕೊಟ್ಟು, ಸಿನಿಮಾ ನೋಡುವುದರಿಂದ ತಾನೇ ಅವರ ವ್ಯಕ್ತಿತ್ವ ಬೆಳೆಯುವುದು. ಪ್ರೇಕ್ಷಕರಿಲ್ಲದಿದ್ದರೆ ಅವರು ಏನೂ ಅಲ್ಲ.
ಹಾಗಾಗಿ ಅವರು ಪ್ರದರ್ಶನ ಕಲೆಯ ಹೊರಗಡೆ ಕೂಡಾ ಅಘೋಷಿತವಾಗಿ ಕೆಲವು ನಿಬಂಧನೆಗಳನ್ನು ಹಾಕಿಕೊಳ್ಳಲೇಬೇಕು. ಆ ಒಂದು ಇಮೇಜ್ ಅನ್ನು ಕಾಪಾಡಿಕೊಳ್ಳಲೇ ಬೇಕು. ಈ ಒಂದು ಸಾಮಾಜಿಕ ಪ್ರಜ್ಞೆ ಅವರಲ್ಲಿ ಇರಬೇಕು. ಈಗಿನ ನಟಿಯರಲ್ಲಿ ಆ ಸಾಮಾಜಿಕ ಪ್ರಜ್ಞೆ ಇಲ್ಲ. ಹೆಚ್ಚಿನವರು ಹೊರಗಡೆಯಿಂದ ಬಂದವರು. ಅವರಿಗೆ ನಮ್ಮ ನಾಡು, ನುಡಿಯ ಬಗ್ಗೆ ಗೌರವ ಇಲ್ಲ. ಇವರಲ್ಲಿ ಕೆಲವರು ದಿಢೀರ್ ಹಣ ಮಾಡಬೇಕೆಂಬ ಅತಿಯಾಸೆಗೆ ಬಿದ್ದು, ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಇದು ಇಡೀ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ರಾಜಕೀಯ ರಂಗದಲ್ಲಿರುವವರ ಮಕ್ಕಳು ಎಷ್ಟೋ ಜನ ಈ ಡ್ರಗ್ಸ್ ವಿಚಾರದಲ್ಲಿ ಸಿಕ್ಕಿ ಹಾಕಿಕೊಂಡು, ನಂತರ ಆ ವಿಷಯಗಳನ್ನೆಲ್ಲಾ ಬಯಲಾಗದಂತೆ ಮುಚ್ಚಿ ಹಾಕಲಾಯಿತು.
ಪೊಲೀಸ್ ಅಧಿಕಾರಿಗಳು, ದೊಡ್ಡ ದೊಡ್ಡ ಉದ್ಯಮಿಗಳು ಎಲ್ಲರೂ ಈ ನಶೆಯ ದಿಶೆಯತ್ತ ಹೆಜ್ಜೆ ಹಾಕಿದವರೇ. ಅಲ್ಲಿ ಅವರ
ಬಂಡವಾಳ ಬಿಚ್ಚಿಡಲು ಯಾರೂ ಧೈರ್ಯದಿಂದ ಮುಂದೆ ಬರುತ್ತಿಲ್ಲ. ಈ ಕಾರ್ಯಕ್ರಮ ನೋಡಿದ ಮೇಲೆ ನನಗನ್ನಿಸಿದ್ದು. ಈ ರೀತಿಯ ಹಗರಣಗಳನ್ನೆಲ್ಲಾ ಬಯಲಿಗೆಳೆದು, ತಪ್ಪಿತಸ್ಥರಿಗೆ, ದುಷ್ಕರ್ಮಿಗಳಿಗೆ, ದೇಶದ ಯುವ ಜನಾಂಗದ ಹಾದಿ ತಪ್ಪಿಸುತ್ತಿರುವ ದೇಶ ದ್ರೋಹಿಗಳಿಗೆ ಸರಿಯಾದ ಶಿಕ್ಷೆ ನೀಡುವಂತಾಗಬೇಕು. ಇದಕ್ಕೆಲ್ಲಾ ದೃಢ ನಿರ್ಧಾರ ತೆಗೆದುಕೊಳ್ಳಲು ಸಮರ್ಥ ವ್ಯಕ್ತಿಗಳು ಅಧಿಕಾರದಲ್ಲಿರಬೇಕು. ಅವರು ನಿಷ್ಪಕ್ಷಪಾತ ಭಾವದಿಂದ ಕೆಲಸ ಮಾಡಬೇಕು ಎಂದರೆ, ಅವರು ಕ್ಲೀನ್ ಹ್ಯಾಂಡ್ ಆಗಿರಬೇಕು.
ಅಂಥವರು ಯಾರ ಭಯ ಇರದೇ ದೃಢ ನಿರ್ಧಾರ ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ ಯೋಗಿ ಆದಿತ್ಯನಾಥ್. ಅವರಿಗೆ ಯಾರ ಭಯವೂ ಇಲ್ಲ. ಸಂಸಾರದ ಬಂಧನವೂ ಇಲ್ಲ. ಅಧಿಕಾರಶಾಹಿಗಳಂತೆ ಮುಂದಿನ ನಾಲ್ಕು ತಲೆಮಾರಿನವರು ಕುಳಿತು ತಿಂದರೂ ಕರಗದಷ್ಟು ಆಸ್ತಿ ಮಾಡಿಡಬೇಕೆಂಬ ಅತಿಯಾಸೆಯೂ ಇಲ್ಲ. ಹಾಗಿದ್ದಲ್ಲಿ ನಿರ್ವಿಕಾರ ಭಾವದಿಂದ, ದೇಶವನ್ನು ಮುನ್ನಡೆಸುತ್ತಾರೆ.
ನಮ್ಮ ಆಡಳಿತ ವ್ಯವಸ್ಥೆಯ ಯಂತ್ರಕ್ಕೆ ಹಿಡಿದ ಭ್ರಷ್ಟಾಚಾರದ ತುಕ್ಕನ್ನು ಬಿಡಿಸಲು ಸಶಕ್ತ, ಬಂಧ ಮುಕ್ತ ವ್ಯಕ್ತಿಗಳೇ ಬೇಕು. ನಮ್ಮಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ಮಟ್ಟಹಾಕಲು ಯಾರೂ ಸಶಕ್ತರಿಲ್ಲ. ಅವರವರಿಗೆ ಅವರವರ ಬಣ್ಣ ಎಲ್ಲಿ ಬಯಲಾಗುವುದೋ ಎಂಬ ದಿಗಿಲು. ನೋಡಿ ಕ್ಲೀನ್ ಹ್ಯಾಂಡ್ ಆಗಿದ್ದರೆ, ಯಾವುದಕ್ಕೂ, ಯಾರ ಮುಲಾಜೂ ಇರುವುದಿಲ್ಲ.
ನಮ್ಮಲ್ಲಿ ಹಾಗಲ್ಲ, ಮುಟ್ಟಿದರೆ, ನಾವೇ ಕಲ್ಲು ಹಾಕಿ ಕೆಸರು ಸಿಡಿಸಿಕೊಂಡಂತಾಗುವುದೇನೋ ಎಂಬ ಶಂಕೆಯಿಂದ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಿಲ್ಲ. ಯಾವುದೇ ಪಕ್ಷ ಬರಲಿ, ಎಲ್ಲರೂ ಒಂದೇ ದೋಣಿಯ ಕಳ್ಳರೇ! ಕಟ್ಟುನಿಟ್ಟಿನ ಕ್ರಮ
ಕೈಗೊಳ್ಳಲಾಗುವುದು ಎಂಬ ಆ ವಾಕ್ಯವೇ ಹೇಸಿಗೆ ಹುಟ್ಟಿಸುತ್ತದೆ. ಅದೆಲ್ಲಾ ಎಂದೆಂದಿಗೂ ಬೊಗಳೆಯೇ. ಹಾವು ಸಾಯಲ್ಲ, ಕೋಲು ಮುರಿಯಲ್ಲ. ಇವರು ಕ್ರಮ ತೆಗೆದುಕೊಳ್ಳುವುದರಲ್ಲೇ ಅಧಿಕಾರ ಮುಗಿದುಹೋಗುತ್ತದೆ. ಅಷ್ಟೊತ್ತಿಗೆ ದುಷ್ಕರ್ಮಿಗಳು ಎಲ್ಲಾ ಸಾಕ್ಷ್ಯಾಧಾರಗಳನ್ನೂ ನಾಶಪಡಿಸಿ, ಆರಾಮಾಗಿ ರಂಗೋಲಿ ಕೆಳಗೆ ನುಸುಳಿ ತಪ್ಪಿಸಿಕೊಂಡಿರುತ್ತಾರೆ.
ನಂತರ ಅವರು ನಮ್ಮೆದುರಿಗೆ ಓಡಾಡಿಕೊಂಡಿರುತ್ತಾರೆ. ಬಾಯಿದ್ದೂ ಮೂಕರಾಗಿ, ಕಿವಿಯಿದ್ದೂ ಕಿವುಡರಾಗಿ, ಅಧಿಕಾರವಿದ್ದೂ ಕೈ ಕಟ್ಟಿದಂತಾಗಿ, ಬಾಲ ಮುದುರಿದ ನಾಯಿಗಳಂತೆ ಹೇಡಿಗಳಾಗಿ ಕೂರ ಬೇಕಾಗುತ್ತದೆ. ಛೇ! ಎಂಥ ದಯನೀಯ ಸ್ಥಿತಿ ಇದು.
ಪರಿಸ್ಥಿತಿಯನ್ನು ಹತೋಟಿಗೆ ತರುವ ಹೊತ್ತಿಗೆ, ದುಷ್ಕರ್ಮಿಗಳು ಕೈಗೆಟುಕದಷ್ಟು ದೂರ ಸಾಗಿರುತ್ತಾರೆ. ಎಂದು ಕಾಂಬೆವೋ ನಮ್ಮ ರಾಜಕೀಯ ಯಂತ್ರದ ಕಿಲುಬಿಗೊಂದು ಗತಿ ಕಾಣಿಸುವ ತಂತ್ರ? ಭೂ ಮಾಫಿಯಾ ಹಾಗೆಯೇ ಇದೆ, ಲಂಚಗುಳಿತನ ಎಲ್ಲೂ ಕಡಿಮೆ ಆಗಿಲ್ಲ. ಡ್ರಗ್ಸ್ ಮಾಫಿಯಾ ಹೆಚ್ಚುತ್ತಿದೆ. ಎಷ್ಟೇ ಪಾರದರ್ಶಕತೆ ಮಾಡುತ್ತೇವೆಂದರೂ, ಹೊಸ ತಂತ್ರಜ್ಞಾನವನ್ನೇ ಕವಡೆ ಯಾಗಿಸಿಕೊಂಡು ಅದರಲ್ಲೂ ಸುಳ್ಳು ದಾಖಲೆಗಳ ಸೃಷ್ಟಿ ಮಾಡಿ, ಹಣದಾಹಕ್ಕೆ ದಾಸರಾಗಿರುವವರ ದಂಡು ಬಹಳ ದೂರದ ತನಕ ತನ್ನ ಕಬಂಧ ಬಾಹುಗಳನ್ನು ಚಾಚಿದೆ.
ನಮ್ಮ ಮುಂದಿನ ಜನಾಂಗಕ್ಕೆ ನಾವು ಇಂತಹ ಸಮಾಜವನ್ನು ಉಡುಗೊರೆಯಾಗಿ ಕೊಡುತ್ತಿದ್ದೇವೆಯೇ? ಅಂಕದ ಪರದೆ ಸರಿದಾಗ, ಅದಿನ್ನೆಷ್ಟು ಜನರ ಬಣ್ಣ ಬಯಲಾಗುವುದೋ ದೇವರೇ ಬಲ್ಲ.