Sunday, 15th December 2024

ದಾಖಲೆ ಹೊರಬರುವುದು ಯಾವಾಗ ?

ಅಶ್ವತ್ಥಕಟ್ಟೆ

ರಾಜಕೀಯ ಎನ್ನುವುದೇ ‘ಆರೋಪ-ಪ್ರತ್ಯಾರೋಪ’ಗಳ ಜಂಗಿಕುಸ್ತಿ. ಈ ಜಂಗಿಕುಸ್ತಿಯಲ್ಲಿ ವಿರೋಧಿಯನ್ನು ಸೋಲಿಸುವುದರೊಂದಿಗೆ, ತಮ್ಮ ಮಾತುಗಳ ಮೂಲಕ ಜನರನ್ನು ಯಾರು
ನಂಬಿಸುವರೋ ಅವರೇ ಬಲಶಾಲಿಗಳು. ಅದರಲ್ಲಿಯೂ ಕರ್ನಾಟಕದಂಥ ರಾಜಕೀಯ ವಾತಾವರಣದಲ್ಲಿ ಮಾತೇ ಮಾಣಿಕ್ಯ. ಉತ್ತರ ಭಾರತದ ಕೆಲವು ರಾಜ್ಯಗಳ ರೀತಿಯಲ್ಲಿ ಅಥವಾ ನೆರೆಯ ಆಂಧ್ರಪ್ರದೇಶದಲ್ಲಿರುವ ‘ತೋಳ್ಬಲ’ದ ರಾಜಕೀಯ ಮಾಡೆಲ್ ಕರ್ನಾಟಕದಲ್ಲಿ ಈವರೆಗೆ ಬಹುದೊಡ್ಡ ಪರಿಣಾಮವನ್ನು ಬೀರಿಲ್ಲ.

ಮಾತು, ಆರೋಪವನ್ನು ಮುಂದಿಟ್ಟುಕೊಂಡೇ ಕರ್ನಾಟಕದಲ್ಲಿ ಬಹುತೇಕ ಪಕ್ಷಗಳು ಅಸ್ತಿತ್ವ ಉಳಿಸಿಕೊಂಡಿವೆ. ಮಾತಿನ ಬಲದೊಂದಿಗೆ ಹಣಬಲ ವಿರಬೇಕು ಎನ್ನುವುದು ಎರಡನೇ ಮಾತು. ಇಂಥ ಇತಿಹಾಸ ವಿರುವ ಕರ್ನಾಟಕ ರಾಜಕೀಯದಲ್ಲಿ ಇತ್ತೀಚಿನ ದಿನಗಳಲ್ಲಿ ಮಾತು ಎಲ್ಲೆ ಮೀರುತ್ತಿದೆ ಎನ್ನುವುದು ಒಂದು ಭಾಗವಾದರೆ, ಆರೋಪಗಳು ಕೇವಲ ‘ಆ ಕ್ಷಣ’ಕ್ಕೆ ಸೀಮಿತ ವಾಗಿರುವಂತೆ ಭಾಸವಾಗುತ್ತಿದೆ.

ಹೌದು, ಕರ್ನಾಟಕದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಪ್ರತಿಪಕ್ಷ ಸ್ಥಾನದಲ್ಲಿರಲಿ, ಎದುರಾಳಿಯ ಮೇಲೆ ಯಾವುದೇ ಆರೋಪ ಹೊರಿಸಿಬಿಡುವುದು ಸಾಮಾನ್ಯ. ಬಳಿಕ ಅದರ ದಾಖಲೆ ಗಳನ್ನು ಕೇಳಿದರೆ, ‘ಸೂಕ್ತ ಸಮಯದಲ್ಲಿ ಸೂಕ್ತ ದಾಖಲೆ’ ಎನ್ನುವ ಮಾತನ್ನು ಹೇಳುವ ಮೂಲಕ ಸಮಯ ಸಾಗಹಾಕಿಬಿಡುವುದನ್ನು ನೋಡಿದ್ದೇವೆ. ಆದರೆ ಈ ಸೂಕ್ತ ಸಮಯ ಎಂದು ಬರುತ್ತದೆ ಎನ್ನುವ ಪ್ರಶ್ನೆಗೆ ಮಾತ್ರ ಯಾವ ರಾಜಕಾರಣಿಯ ಬಳಿಯೂ ಉತ್ತರವಿಲ್ಲ. ಈ ರೀತಿಯ ‘ಹಿಟ್ ಆಂಡ್ ರನ್’ ರಾಜಕಾರಣಿಗಳು ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ, ಬಹುತೇಕ ಎಲ್ಲ ಪಕ್ಷದಲ್ಲಿಯೂ ಈ ರೀತಿಯ ನಡವಳಿಕೆ ಇತ್ತೀಚಿನ ದಿನದಲ್ಲಿ ಹೆಚ್ಚಾಗುತ್ತಿರುವುದು ಸಾಮಾನ್ಯವಾಗಿದೆ.

ಸಾಮಾಜಿಕ ಜಾಲತಾಣ ಬರುವ ಮೊದಲಾದರೆ, ಸುದ್ದಿಗೋಷ್ಠಿ ಅಥವಾ ಮಾಧ್ಯಮಗಳ ಮೂಲಕ ಈ ರೀತಿ ಮಾಡಬೇಕಾಗಿತ್ತು. ದಾಖಲೆಸಹಿತ ಆರೋಪವೋ, ದಾಖಲೆರಹಿತ ಆರೋಪವೋ ಎಂದು ಪರಾಮರ್ಶಿಸುವ ಕೆಲಸವನ್ನು ಮಾಧ್ಯಮಗಳಾದರೂ ಮಾಡುತ್ತಿದ್ದವು. ಆದರೀಗ ಅದೆಲ್ಲ ಬೇಕಿಲ್ಲ, ಬೆಳಗ್ಗೆ ಒಂದು, ಸಂಜೆಯೊಂದು ಪೋಸ್ಟ್ ಮಾಡಿ ದರೆ ಸಾಕು. ಆ ಆರೋಪ ಅಥವಾ ಪೋಸ್ಟ್‌ನ ಸತ್ಯಾಸತ್ಯತೆ ಅರಿಯುವ ಮೊದಲೇ, ‘ವೈರಲ್ ಆಗಿ’ ಆಗಬೇಕಾದ ಡ್ಯಾಮೇಜ್ ಆಗಿರುತ್ತದೆ.

ಇದು ಕೇವಲ ಯಾವುದೋ ಒಂದು ಪಕ್ಷಕ್ಕೆ ಸಂಬಂಧಿಸಿರುವ ಸಮಸ್ಯೆಯಾಗಿ ಉಳಿದಿಲ್ಲ. ಬಿಜೆಪಿಗರ ಮೇಲೆ ಕಾಂಗ್ರೆಸಿಗರು, ಕಾಂಗ್ರೆಸಿಗರ ಮೇಲೆ ಬಿಜೆಪಿಗರು ಈ ರೀತಿ ಆರೋಪ ಮಾಡಿ ಹೋಗುವ ನಾಯಕರಿಗೆ ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಆರೋಪ ಮಾಡಿಸಿಕೊಂಡ ವ್ಯಕ್ತಿ, ತಾನೇನೂ ಮಾಡಿಲ್ಲ ಎನ್ನುವುದನ್ನು ‘ಪ್ರೂವ್’ ಮಾಡಬೇಕಾದ ಒತ್ತಡ ಹಾಗೂ ಅನಿವಾರ್ಯತೆಗೆ ಸಿಲುಕುತ್ತಾನೆ. ಬಹುತೇಕ ಸಮಯದಲ್ಲಿ ಇಂದು ಆರೋಪ ಹೊತ್ತಿರುವ ವ್ಯಕ್ತಿ, ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಬದಲಿಗೆ, ‘ಅವರ ಕಾಲದಲ್ಲಿ ಆಗಿಲ್ಲವೇ?’ ಎನ್ನುವ ಪ್ರಶ್ನೆ ಎತ್ತುತ್ತಾನೆ. ಅದಕ್ಕೆ ದಾಖಲೆಗಳನ್ನು ಕೇಳಿದರೆ ಪುನಃ ‘ಸಮಯ ಬಂದಾಗ ಕೊಡುತ್ತೇನೆ’ ಎನ್ನುವ ಸಿದ್ಧ ಉತ್ತರ ದೊಂದಿಗೆ ಜಾಗ ಖಾಲಿಮಾಡುತ್ತಾನೆ.

ಕಳೆದೊಂದು ವರ್ಷದಿಂದ ಈ ರೀತಿಯ ಹಿಟ್ ಆಂಡ್ ರನ್ ಸಂಸ್ಕೃತಿ ಹೆಚ್ಚುತ್ತಿದೆ. ಉದಾಹರಣೆಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ‘ಸರಕಾರವಿಡೀ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಈ ಎಲ್ಲದಕ್ಕೂ ನನ್ನ ಬಳಿಯಿರುವ ಪೆನ್‌ಡ್ರೈವ್‌ನಲ್ಲಿ ದಾಖಲೆಗಳಿವೆ’ ಎನ್ನುವ ಮಾತನ್ನು ಹೇಳಿದ್ದರು. ಈ ಪೆನ್‌ಡ್ರೈವ್ ಬಗ್ಗೆ ಕೇಳಿದಾಗೆಲ್ಲಾ
ಜೇಬಿನಲ್ಲಿದ್ದ ಪೆನ್‌ಡ್ರೈವ್ ಹೊರ ತೆಗೆಯುವುದು, ‘ಇಗೋ ಇದರಲ್ಲಿದೆ’ ಎನ್ನುವುದು ಅವರ ಅಭ್ಯಾಸವಾಗಿತ್ತು. ಆದರೆ ವರ್ಷ ಕಳೆದರೂ ಈ ಪೆನ್‌ಡ್ರೈವ್‌ನಲ್ಲಿರುವ ದಾಖಲೆಗಳು ಮಾತ್ರ ಕುಮಾರಸ್ವಾಮಿ ಅವರಿಂದ ಹೊರಬಂದಿಲ್ಲ.

ಕುಮಾರಸ್ವಾಮಿ ಅವರು ಈ ರೀತಿ ಆರೋಪ ಮಾಡಿ ಹೋಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹತ್ತು ಹಲವು ಪ್ರಕರಣಗಳಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಗರ್ಜಿಸಿ ಬಳಿಕ ಸುಮ್ಮನಾಗಿ ಮತ್ತೊಂದು ಹೊಸ ಆರೋಪ ಪಟ್ಟಿಯನ್ನು ಮಾಧ್ಯಮದ ಮುಂದೆ ತಂದಿದ್ದಾರೆ. ಇದೇ ಕಾರಣಕ್ಕೆ ‘ಹಿಟ್ ಆಂಡ್ ರನ್’ ಎನ್ನುವ ಬಿರುದು ಅವರಿಗೆ ಸಿಕ್ಕಿದೆ. ಹಿಟ್ ಆಂಡ್ ರನ್ ಸಂಸ್ಕೃತಿ ಆರಂಭಿಸಿದ್ದು ಅವರೇ ಆಗಿರಬಹುದು. ಆದರೆ ಇತ್ತೀಚಿನ ದಿನದಲ್ಲಿ ಎಲ್ಲ ಪಕ್ಷದ ವರೂ ಇದೇ ದಾರಿಯಲ್ಲಿ ಸಾಗುತ್ತಿದ್ದಾರೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಉದಾಹರಣೆಗೆ, ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ೪೦ ಪರ್ಸೆಂಟ್ ಸರಕಾರ, ಪೇಟಿಎಂ ಸರಕಾರ ಸೇರಿದಂತೆ ಹತ್ತು ಹಲವು ಗಂಭೀರ ಆರೋಪಗಳನ್ನು ದಿನಕ್ಕೊಂದರಂತೆ ಮಾಡುತ್ತಾ ಸಾಗಿದರು. ಆದರೆ ಈ ಯಾವುದಕ್ಕೂ ದಾಖಲೆಗಳನ್ನು ಮಾತ್ರ ನೀಡಲಿಲ್ಲ.

ಬಿಜೆಪಿ ಸರಕಾರದ ವಿರುದ್ಧ ಆರೋಪ ಮಾಡುವ ಪ್ರತಿ ಹಂತದಲ್ಲಿಯೂ, ಇದಕ್ಕೆ ಯಾವುದಾದರೂ ದಾಖಲೆಗಳನ್ನು ನೀಡಿ ಎಂದು ಹತ್ತು ಹಲವು ಸಮಯದಲ್ಲಿ ಕೇಳಿದಾಗಲೂ, ಸಮಯ ಬಂದಾಗ ನೀಡುತ್ತೇವೆ ಎಂದರೇ ಹೊರತು ಯಾವುದನ್ನೂ ನೀಡಲಿಲ್ಲ. ಕಾಂಗ್ರೆಸ್ ತಾನು ಘೋಷಿಸಿದ ಪಂಚಗ್ಯಾರಂಟಿಗಳು ಮತ್ತು ಈ ಸರಣಿ ಆರೋಪಗಳ ಬಲದೊಂದಿಗೆ ರಾಜ್ಯದಲ್ಲಿ
ಅಽಕಾರದ ಗದ್ದುಗೆಯನ್ನು ಹಿಡಿಯಿತು. ಅಧಿಕಾರಕ್ಕೆ ಬಂದ ಬಳಿಕವಾದರೂ ಬಿಜೆಪಿ ಸರಕಾರದ ಅವಽಯ ಒಂದೊಂದೇ ಭ್ರಷ್ಟಾಚಾರದ ದಾಖಲೆಗಳನ್ನು ಕಾಂಗ್ರೆಸಿಗರು ಬಹಿರಂಗ
ಪಡಿಸುತ್ತಾರೆ ಎಂದೇ ಅನೇಕರು ಭಾವಿಸಿದ್ದರು. ಆದರೆ ಅಧಿಕಾರಕ್ಕೆ ಬಂದು ವರ್ಷ ಕಳೆದರೂ, ‘ಸಮಯ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ’, ‘ತನಿಖೆ ನಡೆಸುತ್ತಿರುವ ಸಂಸ್ಥೆಗಳ ಮುಂದೆ ಮಾಹಿತಿ ನೀಡುತ್ತೇವೆ’ ಎನ್ನುವ ಉತ್ತರದ ಮೂಲಕ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನು ಮುಂದುವರಿಸಿದ್ದಾರೆ.

ಇದು ಕೇವಲ ಕಾಂಗ್ರೆಸ್‌ಗೆ ಸೀಮಿತ ವಾಗಿಲ್ಲ. ಕಾಂಗ್ರೆಸ್ ಸರಕಾರ ಅಽಕಾರಕ್ಕೆ ಬರುತ್ತಿದ್ದಂತೆ ಬಿಜೆಪಿಯವರೂ ಇದೇ ಚಾಳಿಯನ್ನು ಮುಂದುವರಿಸಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಸುಮಾರು ೧೪ ಹಗರಣ ನಡೆದಿವೆ ಎನ್ನುವ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡಿಕೊಂಡು ಬಂದಿದ್ದರು. ಈ ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸುವ ಮಾತಗಳನ್ನು ಆಡಿದ್ದ ನಾಯಕರು, ಅಧಿಕಾರಕ್ಕೆ ಬರುತ್ತಿದ್ದಂತೆ ಎಸ್‌ಐಟಿ, ನ್ಯಾಯಾಂಗ ತನಿಖೆ ಯಂತೆ ವಿವಿಧ ಮಾದರಿಯಲ್ಲಿ ಪ್ರಕರಣಗಳನ್ನು ತನಿಖೆಗೆ ಒಳಪಡಿಸಿದ್ದರು. ಆದರೆ ತನಿಖೆ ಆರಂಭಗೊಂಡು ವರ್ಷ
ಕಳೆದರೂ, ಆ ಸಂಸ್ಥೆಗಳ ಮುಂದೆ ಯಾವುದೇ ದಾಖಲೆಗಳನ್ನು ಸಲ್ಲಿಕೆ ಮಾಡಿಲ್ಲ. ಬಿಜೆಪಿ ವಿರುದ್ಧ ಕೇಳಿಬಂದ ಬಹುದೊಡ್ಡ ಆರೋಪವೆಂದರೆ, ೪೦ ಪರ್ಸೆಂಟ್ ಕಮಿಷನ್. ಈ ಆರೋಪಕ್ಕೆ ಗುತ್ತಿಗೆದಾರರ ಸಂಘದವರು ದಾಖಲೆ ನೀಡಬೇಕಿತ್ತು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದಾಖಲೆ ನೀಡುವುದಾಗಿ ಒಂದೆರಡು ಬಾರಿ ಹೇಳಿದರೇ ಹೊರತು, ದಾಖಲೆಗಳನ್ನು ನೀಡಿದ್ದಾರೆ ಎನ್ನುವುದಕ್ಕೆ ಯಾವುದೇ ಮಾಹಿತಿಗಳಿಲ್ಲ ಎನ್ನುವುದು ವಿಪರ್ಯಾಸ.

ಇನ್ನು, ಈ ರೀತಿಯ ಆರೋಪಗಳ ಬಳಿಕ ಸಾಮಾನ್ಯವಾಗಿ ಕೇಳಿಬರುವ ಮಾತೆಂದರೆ, ಪ್ರಕರಣವನ್ನು ವಿಶೇಷ ತನಿಖಾ ದಳಕ್ಕೆ ಒಪ್ಪಿಸಿದ್ದೇವೆ ಅಥವಾ ನ್ಯಾಯಾಂಗ ತನಿಖೆ ಮಾಡ
ಲಾಗುವುದು ಎನ್ನುವುದು. ಕರ್ನಾಟಕದಲ್ಲಿ ಈವರೆಗೆ ಈ ರೀತಿಯ ಭ್ರಷ್ಟಾಚಾರದ ಆರೋಪದ ಕಾರಣಕ್ಕೆ ನೂರಾರು ನ್ಯಾಯಾಂಗ ತನಿಖೆ ನಡೆದಿರುವ ಉದಾಹರಣೆಗಳಿವೆ. ಆರಂಭಿಕ ಕೆಲ ವಾರಗಳ ಕಾಲ ಈ ನ್ಯಾಯಾಂಗ ತನಿಖೆಗೆ ಭಾರಿ ಬೇಡಿಕೆಯಿರುತ್ತದೆ. ಎಲ್ಲರೂ ‘ಫೋಕಸ್’ ಆಗಿರು ತ್ತಾರೆ. ಆದರೆ ಅದಾದ ಬಳಿಕ ಈ ನ್ಯಾಯಾಂಗ ವರದಿ ಏನಾಯಿತು? ತನಿಖಾ ಸಂಸ್ಥೆಗಳು ಏನಾದವು ಎನ್ನುವುದೇ ಬಹುತೇಕರಿಗೆ ತಿಳಿಯುವುದಿಲ್ಲ. ಇನ್ನು ಈ ಸಂಸ್ಥೆಗಳು ಒಂದು ವರ್ಷ, ಎರಡು ವರ್ಷ ಓಡಾಡಿ, ಸುತ್ತಾಡಿ ‘ಸಾಕ್ಷ್ಯ’ ಸಂಗ್ರಹಿಸಿ ಒಂದು ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತವೆ. ಆದರೆ ಈ ವರದಿ ಸಲ್ಲಿಕೆಯಾದ ಬಳಿಕ ಮುಂದೇನು ಎನ್ನುವುದು ಮಾತ್ರ ಯಾರಿಗೂ ಗೊತ್ತಿಲ್ಲ. ರಾಜ್ಯದ ಇತಿಹಾಸದಲ್ಲಿ ಈವರೆಗೆ ಬೆರಳೆಣಿಕೆಯಷ್ಟು ನ್ಯಾಯಾಂಗ ವರದಿಗಳ ಆಧಾರದಲ್ಲಿ ತನಿಖೆ, ಶಿಕ್ಷೆಯಾಗಿದೆಯೇ ಹೊರತು, ಇನ್ನುಳಿದ ಎಲ್ಲ ವರದಿಗಳು ‘ರೆಕಾರ್ಡ್ ರೂಮ್’ನಲ್ಲಿ ಧೂಳು ಹಿಡಿದು ಕೂತಿವೆ.

ಹಾಗಾದರೆ, ಈ ಎಲ್ಲ ನ್ಯಾಯಾಂಗ ತನಿಖೆಯ ನಾಟಕಗಳನ್ನು ಮಾಡುವುದಾದರೂ ಏಕೆ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಾರೆ. ಇದಕ್ಕೆ ಸರಳ ಉತ್ತರ ‘ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು’ ಎನ್ನುವುದಲ್ಲದೇ ಮತ್ತೇನೂ ಇಲ್ಲ. ಯಾವುದೇ ರಾಜಕೀಯ ನಾಯಕನ ವಿರುದ್ಧ ಆರೋಪ ಕೇಳಿಬಂದಾಗ, ಆ ಕ್ಷಣದಲ್ಲಿ ಆ ಪ್ರಕರಣವನ್ನು ‘ಡೈವರ್ಟ್’ ಮಾಡಿದರೆ ಆತ ಬಚಾವಾಗುತ್ತಾನೆ. ಅದಕ್ಕೆ ಈ ರೀತಿಯ ವಿಶೇಷ ತನಿಖಾ ತಂಡ, ನ್ಯಾಯಾಂಗ ತನಿಖೆ ಎನ್ನುವ ಮೂಲಕ ವಿಷಯವನ್ನು ತಣ್ಣಗೆ ಮಾಡುತ್ತಾರೆ. ರಾಜಕೀಯ ಪಕ್ಷಗಳು ತಮಗೆ ಬೇಕಾದಾಗ ಈ ರೀತಿಯ ‘ಭ್ರಷ್ಟಾಚಾರ’ ದಾಖಲೆಗಳ ಬಗ್ಗೆ ಪ್ರಸ್ತಾಪಿಸುತ್ತವೆಯೇ ಹೊರತು, ಭ್ರಷ್ಟಾಚಾರದ ದಾಖಲೆಗಳನ್ನು ಎಂದಿಗೂ ಬಹಿರಂಗಪಡಿಸಿದ ಉದಾಹರಣೆಗಳಿಲ್ಲ.

ಇನ್ನು ದಾಖಲೆಗಳನ್ನು ಬಿಡುಗಡೆಗೊಳಿಸಿದರೂ, ‘ಒನ್‌ಸೈಡ್’ ದಾಖಲೆ ಗಳನ್ನು ಜನರಿಗೆ ತೋರಿಸಿ ತಮಗೆ ಬೇಕಾದ ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಾರೆಯೇ ಹೊರತು, ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ರೀತಿಯಲ್ಲಿ ಈವರೆಗೆ ಯಾವುದೇ ದಾಖಲೆ ಬಿಡುಗಡೆಯ ಘೋಷಣೆಗಳನ್ನು ಮಾಡಿಲ್ಲ ಎನ್ನುವುದು ಕಟುಸತ್ಯ. ಈಗಲೂ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ ಮಾಡುವುದಾಗಿ, ಬಿಜೆಪಿಗರು, ಜೆಡಿಎಸ್ ನಾಯಕರು ಹೇಳುತ್ತಾರೆ.

ಇದಕ್ಕೆ ಪ್ರತ್ಯುತ್ತರವಾಗಿ ‘ಬಿಜೆಪಿ ಅವಧಿಯ ದಾಖಲೆ’ಗಳನ್ನು ನಾವು ಬಿಡುಗಡೆ ಮಾಡುತ್ತೇ ವೆಂದು ಕಾಂಗ್ರೆಸಿಗರು ಹೇಳುತ್ತಾರೆ. ಆದರೆ ಮತಕೊಟ್ಟು ಗೆಲ್ಲಿಸಿರುವ ಮತಪ್ರಭು ಮಾತ್ರ ‘ಅಕ್ರಮ’ ದಾಖಲೆಗಳ ಬಿಡುಗಡೆ ದಿನದ ಎಣಿಕೆಯಲ್ಲಿ ತೊಡಗಿರಬೇಕಷ್ಟೇ. ಒಬ್ಬರ ಮೇಲೊಬ್ಬರು ‘ದಾಖಲೆ’ ಯುದ್ಧ ಮಾಡುತ್ತಿರುವುದು ನೋಡಿದಾಗ, ಒಂದು ದಿನ ಎಲ್ಲ ಸರಕಾರದ ಅವಧಿಯಲ್ಲಿ
ನಡೆದಿರುವ ಅಕ್ರಮಗಳ ದಾಖಲೆಗಳನ್ನು ಯಾರಾದರೊಬ್ಬರು ಗುಡ್ಡೆ ಹಾಕಬೇಕು ಎನ್ನುವುದು ಬಹುತೇಕರ ಕನಸಾಗಿದೆ. ಆದರೆ ಈ ಕೆಲಸವನ್ನು ಮಾಡುವವರ‍್ಯಾರು ಎನ್ನುವುದೇ ಈಗಿರುವ ಯಕ್ಷಪ್ರಶ್ನೆ !