Wednesday, 18th September 2024

ಅವನು ಸತ್ತಾಗಲೇ, ಅವನು ಅವಳೆಂದು ಗೊತ್ತಾಯಿತು !

ಹಿಂದಿರುಗಿ ನೋಡಿದಾಗ

೧೮೬೫ರಲ್ಲಿ ಓರ್ವ ಬ್ರಿಟಿಷ್ ಸೈನ್ಯದ ಶಸ್ತ್ರವೈದ್ಯನು ಮರಣಿಸಿದ. ಅವನ ಮರಣದಲ್ಲಿ ಅಂತಹ ವಿಶೇಷವೇನಿರಲಿಲ್ಲ. ಅವನಿಗೆ ವಿಪರೀತ ಭೇದಿಯಾಗು ತ್ತಿತ್ತು. ವೈದ್ಯರು ತಾವು ಮಾಡಬಹುದಾದ ಎಲ್ಲ ಚಿಕಿತ್ಸೆಯನ್ನು ಮಾಡಿದರು. ಆದರೂ ಅವನು ಬದುಕಲಿಲ್ಲ. ಏಕೆಂದರೆ ಅಂದಿನ ದಿನಗಳಲ್ಲಿ, ಪ್ರತಿಜೈವಿಕಗಳಾಗಲಿ (ಆಂಟಿ ಬಯೋಟಿಕ್ಸ್) ಅಥವ ಜೀವಾಮೃತವಾಗಲಿ (ಓಆರ್‌ಎಸ್) ಗೊತ್ತಿಲ್ಲದ ದಿನಗಳಲ್ಲಿ ವಿಪರೀತ ಭೇದಿಗೆ ತುತ್ತಾದವರು ಸಾಯುವುದು ಸರ್ವ ಸಾಮಾನ್ಯವಾಗಿತ್ತು. ಯಾರೂ ಈ ಶಸ್ತ್ರವೈದ್ಯನ ಸಾವಿನ ಬಗ್ಗೆ ಅಷ್ಟು ತಲೆಯನ್ನು ಕೆಡಿಸಿಕೊಳ್ಳಲಿಲ್ಲ. ಆದರೆ ಅವನ
ಶವ ಸಂಸ್ಕಾರದ ವೇಳೆಯಲ್ಲಿ ಹೊರಬಂದ ಸತ್ಯ ಇಡೀ ಮಿಲಿಟರಿ ವೈದ್ಯಕೀಯ ಸಿಬ್ಬಂದಿಯನ್ನು ಮಾತ್ರವಲ್ಲ, ಇಡೀ ಬ್ರಿಟೀಷ್ ಸಮಾಜವನ್ನೇ ಬೆಕ್ಕಸ ಬೆರಗಾಗಿಸಿತು.

ಜೇಮ್ಸ್ ಮಿರಾಂಡ ಬ್ಯಾರಿ (೧೭೮೯-೧೮೬೫) ಸೈನ್ಯದಲ್ಲಿ ಒಬ್ಬ ವೈದ್ಯನು ಗಳಿಸಬಹುದಾದ ಅತ್ಯುತ್ತನ್ನತ ಎರಡನೆಯ ಹುದ್ದೆ, ಇನ್‌ಸ್ಪೆಕ್ಟರ್ ಜನರಲ್ ಅಥವ ಬ್ರಿಗೇಡಿಯರ್ ಸ್ಥಾನವನ್ನು ತಲುಪಿದ್ದ. ಶವಸಂಸ್ಕಾರವನ್ನು ಮಾಡುವ ಮೊದಲು ಅವನ ಉಡುಪನ್ನು ಕಳಚಿ ದೇಹಕ್ಕೆ ಸ್ನಾನವನ್ನು ಮಾಡಿಸು ವುದು ಅಂದಿನ ಸಂಪ್ರದಾಯ. ಸ್ನಾನವನ್ನು ಮಾಡಿಸಬೇಕೆಂದು ಜೇಮ್ಸ್ ಬ್ಯಾರಿಯ ಉಡುಪನ್ನು ಕಳಿಚಿದ ಮಹಿಳೆ, ತನ್ನ ಕಣ್ಣನ್ನೇ ನಂಬದಾದಳು. ಏಕೆಂದರೆ ಆಕೆಯ ಎದುರಿಗೆ ಒಂದು ಪರ್ಫೆಕ್ಟ್ ಫೀಮೇಲ್ ಅಂದರೆ ಪರಿಪೂರ್ಣವಾದ ಮಹಿಳೆಯ ದೇಹವಿತ್ತು! ಜೇಮ್ಸ್ ಬ್ಯಾರಿ ಗಂಡಸಾಗಿರಲಿಲ್ಲ,
ಹೆಂಗಸಾಗಿದ್ದಳು. ಈ ಸುದ್ದಿಯನ್ನು ಕೇಳಿದ ಹಲವರು ಆಶ್ಚರ್ಯ ಚಕಿತರಾದರೆ, ಕೆಲವರು ಬ್ಯಾರಿ ಬಹುಶಃ ಗಂಡಲ್ಲ ಎಂದು ನನಗೆ ಅನುಮಾನ ಬಂದಿತ್ತು ಎಂದು ಗೊಣಗಿಕೊಂಡರು.

ಎರಡು ವರ್ಷಗಳ ನಂತರ, ಬ್ರಿಟನ್ನಿನ ಖ್ಯಾತ ಕಾದಂಬರಿಕಾರ ಚಾರ್ಲ್ಸ್ ಡಿಕನ್ಸ್ (೧೮೧೨-೧೮೭೦) ಎಲ್ಲಾ ಮಿಸ್ಟರಿ ಸ್ಟಿಲ್ ಎಂಬ ಬರಹವನ್ನು ಬರೆದ. ಇಷ್ಟು ವರ್ಷಗಳ ಜೇಮ್ಸ್ ಬ್ಯಾರಿ ಎಲ್ಲ ಕಣ್ಣಿಗೆ ಮಣ್ಣೆರಚಿ ಹೇಗೆ ತಾನು ಹೆಣ್ಣಲ್ಲ ಎನ್ನುವುದನ್ನು ಮುಚ್ಚಿಟ್ಟ ಎನ್ನುವುದು ಇವತ್ತಿಗೂ ಒಂದು ನಿಗೂಢ
ಎಂಬರ್ಥದ ಬರಹವಾಗಿತ್ತು. ಮುಂದಿನ ದಿನಗಳಲ್ಲಿ ಜೇಮ್ಸ್ ಬ್ಯಾರಿಯ ಬಗ್ಗೆ ಅನೇಕ ಕಾದಂಬರಿಗಳು (ಉದಾ: ದಿ ಸ್ಟ್ರೇಂಜ್ ಸ್ಟೋರಿ ಆಫ್ ಜೇಮ್ಸ್ ಬ್ಯಾರಿ; ಲೇಖಕಿ ಐಸೊಬೆಲ್ ರೇ;) ಹಾಗೂ ಒಂದು ನಾಟಕವೂ ರಂಗಪ್ರಯೋಗವನ್ನು ಕಂಡಿತು.

ಅಧಿಕೃತ ದಾಖಲೆಗಳ ಅನ್ವಯ ಬ್ರಿಟನ್ನಿನ ಮೊದಲ ವೈದ್ಯೆ ಎಲಿಜ಼ಬೆತ್ ಗ್ಯಾರಟ್ ಆಂಡರ್ಸನ್ (೧೮೩೬-೧೯೧೭). ಈಕೆ ೧೮೬೫ರಲ್ಲಿ ವೈದ್ಯಕೀಯ ಪದವಿಯನ್ನು ಪಡೆದಳು. ಆದರೆ ಈಕೆಯು ಪದವಿಯನ್ನು ಪಡೆಯುವ ಕಾಲಕ್ಕೆ ಜೇಮ್ಸ್ ಬ್ಯಾರಿ ಮರಣಿಸಿದ್ದ! ಅಂದರೆ ಬಹುಶಃ ಜೇಮ್ಸ್ ಬ್ಯಾರಿ ಬ್ರಿಟನ್ನಿನ
ಮೊತ್ತ ಮೊದಲ ಮಹಿಳಾ ವೈದ್ಯೆ ಎಂದು ಕರೆಯಬೇಕಾಗುತ್ತದೆ. ಚಾರ್ಲ್ಸ್ ಡಿಕನ್ಸ್ ಹೇಳುವ ಹಾಗೆ ಜೇಮ್ಸ್ ಬ್ಯಾರಿಯ ಕಥಾನಕವು ಕುತೂಹಲವೂ ಹಾಗೂ ನಿಗೂಢವೂ ಆಗಿದೆ. ಜೇಮ್ಸ್ ಮಿರಾಂಡ ಬ್ಯಾರಿಯ ಮೂಲ ಹೆಸರು ಮಾರ್ಗರೆಟ್ ಆನ್ ಬರ್ಕ್ಲೆ. ೧೭೮೯ರಲ್ಲಿ ಐರ್ಲೆಂಡಿನ ಕಾರ್ಕ್ ದ್ವೀಪದಲ್ಲಿ ಹುಟ್ಟಿ ದಳು. ತಂದೆ ಜೆರೇಮಿಯ ಹಾಗೂ ತಾಯಿ ಮೇರಿ ಆನ್ ಬಲ್ಕಿ. ಮಾರ್ಗರೆಟ್ ಎರಡನೆಯ ಮಗುವಾಗಿದ್ದಳು.

ಬರ್ಕ್ಲೆ ಕುಟುಂಬವು ಒಂದು ಕಿರಾಣಿ ಅಂಗಡಿಯನ್ನು ನಡೆಸುತ್ತಿತ್ತು. ಜೆರೇಮಿಯ ದುಂದುಗಾ ರನಗಿದ್ದ. ಹಾಗಾಗಿ ಅವನ ಶ್ರೀಮಂತಿಕೆಯಲ್ಲಿ ಕರಗಿತು. ಸಾಲಗಾರನಾದ. ಸಾಲವನ್ನು ತೀರಿಸಲು ಆಗಲಿಲ್ಲ. ಆಗ ಅವನನ್ನು ಡಬ್ಲಿನ್ ನಗರದಲ್ಲಿ ಸಿಟಿ ಮಾರ್ಶಾಲ್ಸಿಯಕ್ಕೆ, ಅಂದರೆ ಸಾಲಗಾರರ ಸೆರೆಮನೆಗೆ ಕಳುಹಿಸಿದರು. ತಾಯಿ ಮತ್ತು ಮಗಳು ಲಂಡನ್ನಿಗೆ ಬಂದರು. ಲಂಡನ್ನಿನಲ್ಲಿ ಜೇಮ್ಸ್ ಬ್ಯಾರಿ ಎಂಬ ತಾಯಿಯ ಅಣ್ಣ, ಸೋದರಮಾವನಿದ್ದ. ಬ್ಯಾರಿ ಕಲಾವಿದನಾಗಿದ್ದ. ಹಾಗಾಗಿ ಮಾರ್ಗರೆಟ್, ಜೇಮ್ಸ್ ಬ್ಯಾರಿಯ ಎಲ್ಲರ ಸ್ನೇಹವನ್ನು ಗಳಿಸಿಕೊಂಡಳು. ಆಗ ಅವಳಿಗೆ ಸುಮಾರು ೧೮ ವರ್ಷಗಳ ಹರೆಯ. ಅವರಲ್ಲಿ ವೆನಿಜ಼ೂಲ ದೇಶದ ಕ್ರಾಂತೀಕಾರಿ ಜನರಲ್ ಫ್ರಾನ್ಸಿಸ್ಕೋ ದ ಮಿರಾಂಡ (೧೭೫೦- ೧೮೧೬) ಹಾಗೂ ವೈದ್ಯ ಎಡ್ವರ್ಡ್ ಫೈಯರ್ (೧೭೬೧- ೧೮೨೬) ತುಂಬಾ ಇಷ್ಟವಾದರು.

ಎಡ್ವರ್ಡ್ ಫೈಯರ್, ಜೇಮ್ಸ್ ಬ್ಯಾರಿ ಕೊನೆಯ ದಿನಗಳಲ್ಲಿ ಅವನ ವೈದ್ಯಕೀಯ ಅಗತ್ಯಗಳನ್ನು ನೋಡಿಕೊಂಡಿದ್ದ ಹಾಗೂ ಅವನ ಬಗ್ಗೆ ಒಂದು ಪುಸ್ತಕವನ್ನೂ ಬರೆದಿದ್ದ. ಮಿರಾಂಡ ಮತ್ತು ಫೈಯರ್ ಜೇಮ್ಸ್ ಬ್ಯಾರಿಯ ಕುಟುಂಬಕ್ಕೆ ಆತ್ಮೀಯರಾಗಿದ್ದ ಕಾರಣ, ಅವರಿಬ್ಬರೂ ಸೇರಿ ಮಾರ್ಗರೆಟ್ಟಳ ಶಿಕ್ಷಣದ ಹೊರೆಯನ್ನು ಹೊತ್ತರು. ಜೇಮ್ಸ್ ಮರಣದ ನಂತರ, ಅವನ ಆಸ್ತಿಯು ಮಾರ್ಗರೇಟಳಿಗೆ ದೊರೆಯಿತು. ಹಾಗಾಗಿ ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಾಗಿದ್ದ ಹಣಕಾಸಿನ ನೆರವು ಸುಲಭವಾಗಿ ದೊರೆಯಿತು.

ಮಾರ್ಗರೇಟಳಿಗೆ ಎಡಿನ್ ಬರೋ ವಿಶ್ವವಿದ್ಯಾಲಯದಲ್ಲಿ ಪ್ರವೇಶ ದೊರೆತಿತ್ತು. ನವೆಂಬರ್ ೩೦, ೧೮೦೯. ಲೇಡಿ ಸ್ಮಾಕ್ ಎಂಬ ಹಡಗನ್ನು ಹತ್ತಿ ಹೊರಟಳು. ಮಾರ್ಗರೆಟ್ ಆನ್ ಬರ್ಕ್ಲೆ, ತನ್ನ ಹೆಸರನ್ನು ಜೇಮ್ಸ್ ಮಿರಾಂಡ ಬ್ಯಾರಿ ಎಂದು ಬದಲಿಸಿಕೊಂಡಳು. ಹೆಸರಿಗೆ ತಕ್ಕ ಹಾಗೆ ಗಂಡುಡುಗೆಯನ್ನು ಧರಿಸಿದಳು. ಮ-ರಿನಂತಹ ಉದ್ದವಾದ ಬಟ್ಟೆಯನ್ನು ತೆಗೆದು ಕೊಂಡು, ತನ್ನ ಸ್ತನಗಳ ಸುಳಿವು ಸಿಗದ ಹಾಗೆ ಬಿಗಿಯಾಗಿ ಬಿಗಿದಳು. ಭುಜವು ಎದ್ದು ಕಾಣುವಂತಹ ಬಟ್ಟೆಯನ್ನು ತೊಟ್ಟಳು.

ಕುತ್ತಿಗೆ ಮುಚ್ಚುವಂತಹ ಕೋಟನ್ನು ಧರಿಸುತ್ತಿದ್ದಳು. ಆಕೆ ಅಷ್ಟು ಎತ್ತರವಿರಲಿಲ್ಲ. ಅದಕ್ಕಾಗಿ ಎತ್ತರದ ಬೂಟನ್ನು ಧರಿಸಿದಳು. ಇಷ್ಟೆಲ್ಲ ಮಾಡಿದರೂ, ಗಡ್ಡ ಮೀಸೆಗಳಿಲ್ಲದ ಆಕೆಯ ಮುಖದಲ್ಲಿ ಕೋಮಲತೆಯು ಎದ್ದು ಕಾಣುತ್ತಿತ್ತು. ಆದರೆ ಆಕೆಯು ತನ್ನ ವರ್ತನೆಯನ್ನು ಬದಲಿಸಿಕೊಂಡಳು. ಧ್ವನಿಯ
ಬದಲಿಸಿಕೊಂಡಳು. ಈಗ ಆಕೆಯ ಧ್ವನಿಯು ಕರ್ಕಶವಾಯಿತು. ಅನಾಗರಿಕನಂತೆ ಒರಟುತನವನ್ನು ಬೆಳೆಸಿಕೊಂಡಳು. ಅಪ್ಪಟ ಹೆಣ್ಣಾಗಿದ್ದ ಮಾರ್ಗ ರೆಟ್ ತನ್ನ ಹುಟ್ಟನ್ನೇ ಬದಲಿಸಿಕೊಂಡು, ಗಂಡು ಜೇಮ್ಸ್ ಬ್ಯಾರಿಯಾದದ್ದಕ್ಕೆ ಬಲವಾದ ಕಾರಣವಿದೆ. ಏಕೆಂದರೆ ಅಂದಿನ ಬ್ರಿಟಿಷ್ ಸಮಾಜದಲ್ಲಿ
ಹೆಣ್ಣು ಮಕ್ಕಳು ವೈದ್ಯಕೀಯ ಶಿಕ್ಷಣವನ್ನು ಪಡೆಯಲಾಗಲಿ, ವೈದ್ಯರಾಗಿ ಕೆಲಸ ಮಾಡುವುದಕ್ಕಾಗಲಿ ಅನುಮತಿಯಿರಲಿಲ್ಲ.

ಹೆಂಗಸರು ಎಂದರೆ ದ್ವಿತೀಯ ದರ್ಜೆಯ ಪ್ರಜೆಗಳಾಗಿದ್ದರು. ಹೆಂಗಸರು ಗಂಡಸರಷ್ಟು ಬುದ್ಧಿವಂತರಲ್ಲ. ಅವರಿಗೆ ಗಂಡಸರಷ್ಟು ಕಾರ್ಯಕ್ಷಮತೆ ಯಿರುವುದಿಲ್ಲ. ಅವರು ಮಕ್ಕಳನ್ನು ಹೆರುವ ಯಂತ್ರಗಳು. ಅವರಿಗೆ ವಿದ್ಯೆ ಯಾಕೆ ಬೇಕು ಎನ್ನುವ ಧೋರಣೆಯು ಅಂದಿನ ದಿನಗಳಲ್ಲಿ ಧಾರಾಳವಾಗಿತ್ತು.
ಹಾಗಾಗಿ ಹೆಣ್ಣು ಮಕ್ಕಳಿಗೆ ಓದುವುದಕ್ಕೆ ಅಂತಹ ಪ್ರೋತ್ಸಾಹ ವಿರಲಿಲ್ಲ. ಹಾಗಿರುವಾಗ ಹೆಣ್ಣು ಮಕ್ಕಳು ವೈದ್ಯಕೀಯ ಶಿಕ್ಷಣವನ್ನು ಪಡೆಯುವುದು ಕನಸಿನ ಮಾತಾಗಿತ್ತು. ಆದರೆ ವೈದ್ಯಳಾಗಲೇಬೇಕು (ಬಹುಶಃ ಫೈಯರ್ ಪ್ರಭಾವ ಇದ್ದಿರಬೇಕು) ಎನ್ನುವ ಹಠ ಆಕೆಗೆ ಇದ್ದ ಕಾರಣ, ಆಕೆ ತನ್ನ ಆಸೆಯ
ನ್ನು ಕೈಗೂಡಿಸಿಕೊಳ್ಳಲು ತನ್ನ ಲಿಂಗವನ್ನೇ ಬದಲಿಸಿಕೊಂಡಳು.

ಜೇಮ್ಸ್ ಬ್ಯಾರಿ ಎಡಿನ್‌ಬರೋ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮ ವಿದ್ಯಾರ್ಥಿಯೆನಿಸಿಕೊಂಡ. ಎಲ್ಲಿಯೋ ಫೇಲಾಗದೆ ಅಂತಿಮ ವರ್ಷಕ್ಕೆ ಬಂದ. ಆದರೆ ವಿದ್ಯಾಲಯದ ಆಡಳಿತ ವರ್ಗದವರು ಜೇಮ್ಸ್ ಬ್ಯಾರಿ ಅಂತಿಮ ಪರೀಕ್ಷೆಯನ್ನು ತೆಗೆದುಕೊಳ್ಳದಂತೆ ತಡೆಯಾeಯನ್ನು ಹೊರಡಿಸಿದರು. ಏಕೆಂದರೆ ಗಡ್ಡ ಮೀಸೆಗಳಲ್ಲಿದ ಎಳೆಯನನ್ನು ವೈದ್ಯನೆಂದು ಕರೆಯುವುದು ಹೇಗೆ? ಹುಡುಗ ಇನ್ನೂ ಸ್ವಲ್ಪ ಬೆಳೆಯಲಿ ಎಂದು ಆಡಳಿತದ ವರ್ಗದ ನಿಲುವುದು. ಆದರೆ ಜೇಮ್ಸ್ ಬ್ಯಾರಿ ಡೇವಿಡ್ ಸ್ಟೂವರ್ಟ್ ಎರ್ಸ್ಕಿನ್ (೧೭೪೨-೧೮೨೯) ಎಂಬ ಶ್ರೀಮಂತನನ್ನು (ಅರ್ಲ್ ಆಫ್ ಬುಕನ್) ಭೇಟಿಯಾದ. ಆ ಶ್ರೀಮಂತನು ಆಡಳಿತ ವರ್ಗದ ಜತೆಯಲ್ಲಿ ಮಾತುಕತೆಯನ್ನಾಡಿ ಜೇಮ್ಸ್ ಬ್ಯಾರಿಯು ಅಂತಿಮ ವರ್ಷದ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುಮತಿಯನ್ನು ಕೊಡಿಸಿದ.

ಹಾಗಾಗಿ ಜೇಮ್ಸ್ ಬ್ಯಾರಿ, ಎಲ್ಲ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ, ೧೮೧೨ನೆಯ ವರ್ಷದಲ್ಲಿ ತನ್ನ ವೈದ್ಯಕೀಯ ಪದವಿಯನ್ನು ಪೂರ್ಣ ಗೊಳಿಸಿದ. ಜೇಮ್ಸ್ ಬ್ಯಾರಿ ಪದವಿಯನ್ನು ಪಡೆಯುತ್ತಿದ್ದಂತೆಯೇ ಬ್ರಿಟಿಷ್ ಸೇನೆಯಲ್ಲಿ ಹಾಸ್ಪಿಟಲ್ ಅಸಿಸ್ಟಂಟ್ ಆಗಿ ಜುಲೈ ೬, ೧೮೧೩ರಂದು ಚೆಲ್ಸಿಯದಲ್ಲಿ ಕೆಲಸಕ್ಕೆ ಸೇರಿಕೊಂಡ. ನಂತರ ತನ್ನ ವೈದ್ಯಕೀಯ ನೈಪುಣ್ಯತೆಯಿಂದ -ಮೌತ್‌ನಲ್ಲಿದ್ದ ರಾಯಲ್ ಮಿಲಿಟರಿ ಆಸ್ಪತ್ರೆಯಲ್ಲಿ ಅಸಿಸ್ಟಂಟ್ ಸ್ಟಾಫ್ ಸರ್ಜನ್ ಎಂಬ ಹುದ್ದೆಗೆ ಏರಿದ (ಡಿಸೆಂಬರ್ ೭, ೧೮೧೫). ಇದು ಮಿಲಿಟರಿ ಪರಿಭಾಷೆಯಲ್ಲಿ ಲೆಫ್ಟಿನಂಟ್ ಹುದ್ದೆಗೆ ಸರಿಸಮನಾಗಿತ್ತು.

೧೮೧೬. ಡೇವಿಡ್ ಸ್ಟೂವರ್ಟ್ ಎರ್ಸ್ಕಿನ್‌ನಿಂದ ಒಂದು ಪತ್ರವನ್ನು ಪಡೆದುಕೊಂಡ. ದಕ್ಷಿಣ ಆಫ್ರಿಕದ ಕೇಪ್‌ಟೌನಿಗೆ ಬಂದ. ಕೇಪ್ ಟೌನಿನ ಗವರ್ನರ್ ಆಗಿದ್ದ ಲಾರ್ಡ್ ಚಾರ್ಲ್ಸ್ ಹೆನ್ರಿ ಸಾಮರ್ಸೆಟ್ (೧೭೬೭-೧೮೩೧) ನನ್ನು ಭೇಟಿಯಾದ. ಗವರ್ನರನ ಮಗಳಿಗೆ ಅನಾರೋಗ್ಯವಾಗಿತ್ತು. ಜೇಮ್ಸ್ ಬ್ಯಾರಿ
ಪವಾಡಸದೃಶ ರೀತಿಯಲ್ಲಿ ಆಕೆಯನ್ನು ಗುಣಪಡಿಸಿದ. ಗವರ್ನರನಿಗೆ ಜೇಮ್ಸ್ ಬ್ಯಾರಿ ತುಂಬಾ ಹಿಡಿಸಿದ. ಅವರ ಕುಟುಂಬ ವೈದ್ಯನಾಗಿ, ವಿಸ್ತೃತ ಸದಸ್ಯನಾಗುವ ಗೌರವವನ್ನು ಪಡೆದ. ಅವರ ಮನೆಯಲ್ಲಿಯೇ ಉಳಿದ. ಜನರು ಸಾಮರ್ಸೆಟ್ ಹಾಗೂ ಜೇಮ್ಸ್ ಬ್ಯಾರಿ ಸಲಿಂಗಕಾಮಿಗಳು ಎಂದು ತಮಷೆ ಮಾಡಿಕೊಂಡು ನಗುತ್ತಿದ್ದರು. ೧೮೨೨. ಗವರ್ನರ್ ಸಾಮರ್ಸೇಟ್ ಜೇಮ್ಸ್ ಬ್ಯಾರಿಯನ್ನು ಕಲೋನಿಯಲ್ ಮೆಡಿಕಲ್ ಇನ್‌ಸ್ಪೆಕ್ಟರ್ ಎಂಬ ಹುದ್ದೆಗೆ ಆಯ್ಕೆ
ಮಾಡಿದ. ಈ ಹುದ್ದೆಯು ಮಹತ್ವಯುತವಾದ ಹುದ್ದೆಯಾಗಿತ್ತು. ಅಟ್ಟದಿಂದ ಒಮ್ಮೆಲೆ ಗುಡ್ಡಕ್ಕೆ ಜಿಗಿದಂತಾಗಿತ್ತು.

ಜೇಮ್ಸ್ ಬ್ಯಾರಿ ತನ್ನ ಕಾರ್ಯಕ್ಷಮತೆಯಿಂದ ಬಹಳ ಬೇಗ ಪ್ರಸಿದ್ಧನಾದ. ೧೮೨೬. ಓರ್ವ ತಾಯಿಯು ಹೆರಿಗೆ ನೋವಲ್ಲಿದ್ದಳು. ಹೆರಿಗೆ ಸುಸೂತ್ರವಾಗಿ ಮುಗಿಯುವ ಲಕ್ಷಣಗಳಿರಲಿಲ್ಲ. ಹಾಗಾಗಿ ಜೇಮ್ಸ್ ಬ್ಯಾರಿ ಸಿಸೇರಿಯನ್ ಶಸಚಿಕಿತ್ಸೆಯನ್ನು ಮಾಡಿ ಮಗುವನ್ನು ಹೊರತೆಗೆದ. ತಾಯಿ ಮತ್ತು ಮಗುವು
ಆರೋಗ್ಯವಾಗಿದ್ದರು. ಇದು ಆಫ್ರಿಕ ಖಂಡದಲ್ಲಿ ಓರ್ವ ಬ್ರಿಟಿಷ್ ವೈದ್ಯನು ಮಾಡಿದ ಮೊದಲ ಸಿಸೇರಿಯನ್ ಶಸ್ತ್ರಚಿಕಿತ್ಸೆಯಾಗಿತ್ತು. ಆ ಮಗುವಿಗೆ ಜೇಮ್ಸ್ ಬ್ಯಾರಿ ಮುನಿಕ್ ಎಂದು ನಾಮಕರಣವನ್ನು ಮಾಡಿದರು. (ಮುಂದಿನ ದಿನಗಳಲ್ಲಿ ಈ ವಂಶದ ಕುಡಿ ಜೇಮ್ಸ್ ಬ್ಯಾರಿ ಮುನಿಕ್ ಹೆರ್ಟ್ಜಾಗ್ ಎಂಬುವವನು ದಕ್ಷಿಣ ಆಫ್ರಿಕದ ಪ್ರಧಾನಿಯಾದ) ಕೇಪ್ ಟೌನಿನಲ್ಲಿ ಜೇಮ್ಸ್ ಬ್ಯಾರಿ ತನ್ನ ಕ್ರಾಂತೀಕಾರೀ ಕೆಲಸಗಳಿಂದ ಪ್ರಖ್ಯಾತನಾದ. ಮಾನವ ಹಕ್ಕುಗಳನ್ನು ಪ್ರತಿ ಪಾದಿಸಿದ.

ಸಾರ್ವಜನಿಕ ಆರೋಗ್ಯದ ಅಗತ್ಯವನ್ನು ಮನಗಂಡು ಅವನ್ನು ಕಾರ್ಯರೂಪಕ್ಕೆ ತಂದ. ಕೇಪ್ ಟೌನಿನಲ್ಲಿ ನಕಲಿ ವೈದ್ಯರು ಹಾಗೂ ನಕಲೀ ಔಷಧಿಗಳು ಸಾಕಷ್ಟು ಇದ್ದವು. ಜೇಮ್ಸ್ ಬ್ಯಾರಿ ಈ ಬಗ್ಗೆ ಕೇಪ್ ಟೌನಿನ ಗವರ್ನರ್ ಆಗಿದ್ದ ಲಾರ್ಡ್ ಚಾರ್ಲ್ಸ್ ಹೆನ್ರಿ ಸಾಮರ್ಸೆಟ್ (೧೭೬೭-೧೮೩೧) ಇಂತಹವರನ್ನು
ನಿಗ್ರಹಿಸಲು ಆಗ್ರಹಿಸಿದ. ಏಕೆಂದರೆ ಈ ನಕಲಿ ವೈದ್ಯರು ಅಸ್ವಸ್ಥರನ್ನು ಹುಡುಕಿ, ಅವರ ಅನಾರೋಗ್ಯವನ್ನು ಗುಣಪಡಿಸುವುದಾಗಿ ಇಲ್ಲದ ಸುಳ್ಳುಗಳನ್ನು ಹೇಳಿ, ಅವರಿಗೆ ನಕಲಿ ಔಷಧಗಳನ್ನು ನೀಡಿ ಹಣವನ್ನು ದೋಚುತ್ತಿದ್ದರು. ಇಡೀ ನಗರದಲ್ಲಿ ನೈರ್ಮಲ್ಯಕ್ಕೆ ಆದ್ಯತೆಯನ್ನು ನೀಡಿದ.

ಕೊಳೆಗೇರಿಗಳಲ್ಲಿ ಸ್ವಚ್ಛತೆಯ ಮಹತ್ವವನ್ನು ಸಾರಿದ. ಅಂದಿನ ದಿನಗಳಲ್ಲಿ ಜೈಲುಗಳಲ್ಲಿ ಖೈದಿಗಳ ಜತೆಯಲ್ಲಿ ಕುಷ್ಠ ರೋಗಿಗಳೂ ಇದ್ದರು. ಇವರನ್ನು ಪ್ರತ್ಯೇಕವಾಗಿರಿಸಿದ. ಎಲ್ಲರೂ ಸ್ವಚ್ಛತೆಯ ನಿಯಮಗಳನ್ನು ಪರಿಪಾಲಿಸಬೇಕೆಂದ. ಸಮಾಜದ ಅತ್ಯಂತ ಕಡು ಬಡವನಿಗೂ ಕುಡಿಯಲು ಶುದ್ಧ ನೀರು ದೊರೆಯಬೇಕೆಂದ. ಜೇಮ್ಸ್ ಬ್ಯಾರಿ ತನ್ನ ಹೆಣ್ಣುತನವನ್ನು ಮುಚ್ಚಿಡಲು ಗಂಡಸಿನ ಒರಟುತನವನ್ನು ಮೈಗೂಡಿಸಿಕೊಂಡಿದ್ದ ಕಾರಣ ಎಲ್ಲರ
ಮೇಲೂ ದರ್ಪದಿಂದ ಕೂಗಾಡುತ್ತಿದ್ದ. ಜಗಳವಾಡುತ್ತಿದ್ದ. ಕೈಕೈ ಮಿಲಾಯಿಸಲು ಹಿಂದೆಗೆಯುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಫ್ಲಾರೆನ್ಸ್ ನೈಂಟಿಂಗೇಲ್ (೧೮೨೦-೧೯೧೦) ಒಳಗೊಂಡಂತೆ ಬಹುಪಾಲು ಜನರು ಜಗಳಗಂಟ ಜೇಮ್ಸ್ ಬ್ಯಾರಿಯನ್ನು ಇಷ್ಟಪಡುತ್ತಿರಲಿಲ್ಲ.

ಜೇಮ್ಸ್ ಬ್ಯಾರಿ ಜಮೈಕ, ಸೈಂಟ್ ಹೆಲೀನ, ಕೋ-, ವೆಸ್ಟ್ ಇಂಡೀಸ್, ಮಾಲ್ಟ, ಮುಂತಾದ ಕಡೆ ಕೆಲಸವನ್ನು ಮಾಡಿದ. ನಂತರ ೧೮೫೭ರಲ್ಲಿ ಕೆನಡ ದೇಶಕ್ಕೆ
ವರ್ಗಾವಣೆಯಾದ. ಇಲ್ಲಿ ಜೇಮ್ಸ್ ಬ್ಯಾರಿ ಇನ್‌ಸ್ಪೆಕ್ಟರ್ ಜೆನರಲ್ ಆಫ್ ಮಿಲಿಟರಿ ಹಾಸ್ಪಿಟಲ್ಸ್ ಎಂಬ ಉನ್ನತ ಹುದ್ದೆಗೆ ಆಯ್ಕೆಯಾದ. ೧೯೫೯. ಜೇಮ್ಸ್ ಬ್ಯಾರಿ ಅನಾರೋಗ್ಯ ಪೀಡಿತನಾದ ಕಾರಣ ಲಂಡನ್ನಿಗೆ ಹಿಂದಿರುಗಿದ. ೧೯೬೫ರಲ್ಲಿ ಭೇದಿಯ ಕಾರಣ ಮರಣಿಸಿದ. ತನ್ನ ಮರಣ ಶಾಸನದಲ್ಲಿ, ತನ್ನ
ಮರಣಾನಂತರ ಯಾವುದೇ ರೀತಿಯ ಮರಣೋತ್ತರ ಶವ ಪರೀಕ್ಷೆಯನ್ನು ಮಾಡಬಾರದು, ಉಟ್ಟ ಬಟ್ಟೆಗಳ ಸಮೇತ ಸಂಸ್ಕಾರ ಮಾಡಬೇಕು ಎಂದು ಸ್ಪಷ್ಟವಾಗಿ ಬರೆದಿದ್ದ. ಆದರೆ ಅದು ಸಕಾಲದಲ್ಲಿ ಬೆಳಕಿಗೆ ಬಾರದ ಕಾರಣ ಜೇಮ್ಸ್ ಬ್ಯಾರಿ ವಾಸ್ತವದಲ್ಲಿ ಗಂಡಲ್ಲ, ಮಾರ್ಗರೆಟ್ ಆನ್ ಬರ್ಕ್ಲೆ ಎನ್ನುವ
ಹೆಣ್ಣು ಎಂಬ ವಿಷಯವು ಜಗಜ್ಜಾಹೀರಾಯಿತು. ಇಲ್ಲದಿದ್ದರೆ, ಹೆಣ್ಣು ಗಂಡಾಗಿ ಬದುಕನ್ನು ನಡೆಸಿದ ಗುಟ್ಟು, ಕಾಲಗರ್ಭದಲ್ಲಿ ಸದಾ ಕಾಲಕ್ಕೂ ಸಮಾಧಿಯಾಗಿ ಬಿಡುತ್ತಿತ್ತು.

Leave a Reply

Your email address will not be published. Required fields are marked *