Sunday, 15th December 2024

ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿದೆ ಅರ್ಧ ದಾರಿ !

ಯಶೋ ಬೆಳಗು

yashomathy@gmail.com

ಈ ಜಗತ್ತಿಗೆ ಬರುವಾಗ ನಾವು ಯಾರನ್ನೂ ನಂಬಿಕೊಂಡು ಬಂದಿರುವುದಿಲ್ಲ. ಚುಕ್ಕು ತಟ್ಟಿ ತೊಟ್ಟಿಲಲ್ಲಿ ಮಲಗಿಸಿದ ಅಮ್ಮನಿಗೆ ಕಾಣದಂತೆ ಅಂಬೆಗಾಲಿಕ್ಕುತ್ತ ಹೊಸ್ತಿಲು ದಾಟಿದವರು ನಾವೇ ತಾನೇ? ಪಕ್ಕದಲ್ಲಿ ಕಂಡ ಗೋಡೆ, ಕುರ್ಚಿಗಳನ್ನು ಗಟ್ಟಿಯಾಗಿ ಹಿಡಿಯುತ್ತ ಮೆಲ್ಲಗೆ ನಮ್ಮ ಕಾಲಮೇಲೆ ಎದ್ದು ನಿಂತವರು ನಾವೇ ತಾನೇ? ನಡೆವಾಗ ಎಡವಿ ಬಿದ್ದು ಮೊಳಕಾಲು ಮುರಿದು ಕೊಂಡವರೂ ನಾವೇ ಅಲ್ಲವೇ?

ಶ್ರಾವಣ ಅಂದರೆ ಹೊಸತನದ ಆರಂಭದ ಸೂಚನೆಯೆಂಬಂತೆ ಮನದಲ್ಲಿ ಮಗುವಾಗಿ ನಗುತ್ತದೆ!

ಜಡಿ ಹಿಡಿದು ಆಕಾಶದಿಂದ ಧಾರೆಧಾರೆಯಾಗಿ ಭುವಿಗಿಳಿವ ವರ್ಷ ಧಾರೆಯ ಜತೆಜತೆಗೆ ಹಬ್ಬಗಳ ಸಾಲು ಸಾಲು. ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ  ಇರುವ ಏಳು ದಿನಗಳಲ್ಲಿ ಮೂರು ದಿನಗಳು ಲಕ್ಷ್ಮಿ, ನಾರಾಯಣ ಹಾಗೂ ಈಶ್ವರನ ಆರಾಧನೆ.  ಇಂಥದ್ದೇ ಶ್ರಾವಣ ಮಾಸದಲ್ಲಿ ನಾನು ‘ಹಾಯ್ ಬೆಂಗಳೂರು’ ಕಚೇರಿಗೆ ಆಕಸ್ಮಿಕವಾಗಿ ಸೇರಿದ್ದು.

ಅದಾದ ಒಂದೇ ವರ್ಷಕ್ಕೆ ಇದೇ ಶ್ರಾವಣ ಮಾಸದಲ್ಲಿ ಅಕ್ಷರಲೋಕದ ಗಂಧ-ಗಾಳಿಯರಿಯದಿದ್ದ ಯಶೋಮತಿ ಎಂಬ ಹುಡುಗಿಗೆ ಅಕ್ಷರಬ್ರಹ್ಮ ನಾದ ರವಿ ಬೆಳಗೆರೆ ಮೊದಲ ಬಾರಿಗೆ ಪ್ರಪೋಸ್ ಮಾಡಿದ್ದು! ಅದಾದ ಮತ್ತೊಂದು ವರ್ಷದ ನಂತರ ಇದೇ ಶ್ರಾವಣದ ಹಾಯ್ ಕಚೇರಿ ಕದಿರೇನಹಳ್ಳಿಯ ಟೀಚರ್ಸ್ ಕಾಲೊನಿಯ ಬಾಡಿಗೆ ಕಟ್ಟಡ ದಿಂದ ಪದ್ಮನಾಭನಗರದಲ್ಲಿ ಈಗಿರುವ ಸ್ವಂತ ಕಟ್ಟಡಕ್ಕೆ ಬದಲಾಗಿದ್ದು.

ಸರಿಯಾಗಿ ಇಪ್ಪತ್ತೈದು ವರ್ಷಗಳ ನಂತರ ಇದೇ ಶ್ರಾವಣ ಸೋಮವಾರದಂದು ‘ವಿಶ್ವವಾಣಿ’ ಪತ್ರಿಕೆಯಲ್ಲಿ ನನ್ನ ಅಂಕಣ ಬರಹವನ್ನು ಆರಂಭಿಸಿದ್ದು. ಹಾಗೂ ಇದೇ ಶ್ರಾವಣ ಮಾಸದ ಶ್ರವಣ ನಕ್ಷತ್ರದಲ್ಲಿ ಶ್ರೀಮನ್ನಾರಾಯಣ ಜನಿಸಿದ್ದು. ಇದೇ ಶ್ರಾವಣ ಮಾಸದ ಎರಡನೇ ಶುಕ್ರವಾರ ಅವನನ್ನರಸಿಕೊಂಡು ಭುವಿಗೆ ಬಂದ ಮಹಾಲಕ್ಷ್ಮಿಯನ್ನು ವರಗಳನ್ನು ಕರುಣಿಸುವ ವರಮಹಾಲಕ್ಷ್ಮಿಯಾಗಿ ಸಿಂಗರಿಸಿ ನಲಿಯುತ್ತ ಸಡಗರದಿಂದ ಆಚರಿಸುವುದು. ಹಾಗೂ ಇಂಥದ್ದೇ ವರಮಹಾಲಕ್ಷ್ಮಿಯ ಹಬ್ಬ ದಂದು ಜಯಲಕ್ಷ್ಮಿಯಾಗಿ ಜನಿಸಿ ಆನಂತರ ಪಾರ್ವತಿಯ ಹೆಸರಿನಲ್ಲಿ ಬೆಳಗೆರೆಯ ಪಾರ್ವತಮ್ಮನಾಗಿ ನಮ್ಮ ರವಿ ಬೆಳಗೆರೆಗೆ ಜನ್ಮ ನೀಡಿದ್ದು! ಹೀಗಾಗಿ ವರಮಹಾಲಕ್ಷ್ಮಿಯ ಹಬ್ಬವನ್ನು ಬೆಳಗೆರೆ ಪಾರ್ವತಮ್ಮನವರ ಜನ್ಮದಿನದ ನೆನಪಾಗಿಯೂ ಆಚರಿಸು ವುದು ರೂಢಿಗೆ ಬಂತು.

ದೇವರನ್ನು ಹುಡುಕಿಕೊಂಡು ಹಿಮಾಲಯದವರೆಗೂ ಹೋಗಿ ಅದೆಲ್ಲ ಭ್ರಮೆ ಎನ್ನುವ ನಿರ್ಧಾರಕ್ಕೆ ಬಂದು ತನ್ನ ಬರವಣಿಗೆಯ ದೇವರನ್ನು ಕಾಣುತ್ತಿದ್ದ ರವಿಗೆ ಈ ಆಚರಣೆಗಳಲ್ಲ ಯಾವ ನಂಬಿಕೆಯಾಗಲೀ, ಆಸಕ್ತಿಯಾಗಲೀ ಇರಲಿಲ್ಲ. ಆದರೆ ನಿನ್ನ ನಂಬಿಕೆ, ಶ್ರದ್ಧೆಯನ್ನು ನಾನು ಗೌರವಿಸುತ್ತೇನೆ ಎನ್ನುತ್ತ ಯಾವುದಕ್ಕೂ ಅಡ್ಡಿ ಮಾಡದೆ ಅದರಲ್ಲಿ ಪಾಲ್ಗೊಳ್ಳುತ್ತಿದ್ದ ಅವರ ಪ್ರೀತಿಯ
ಪರಿಗೆ ನಾನು ಸದಾ ಚಿರಋಣಿ.

ಆ ದೇವರ ವಿಚಾರದ ಬಗ್ಗೆ ಮನೆಯಲ್ಲಿ ನಡೆಯುತ್ತಿದ್ದ ಚರ್ಚೆಯನ್ನೆಲ್ಲ ಗಮನಿಸುತ್ತಿದ್ದ ಮಗ ಒಮ್ಮೆ I Don’t believe
God!  ಅಮ್ಮಾ, ಎನ್ನುತ್ತ ತೀರ್ಥ-ಪ್ರಸಾದಗಳನ್ನು ಸವಿಯುತ್ತಿದ್ದುದನ್ನು ಕಂಡು, ಸರಿಹೋಯ್ತು, ಇನ್ನು ಈ ಮನೆಯಲ್ಲಿ ಆ ದೇವರಿಗೆ ನಾನೇ ಗತಿ ಅಂದುಕೊಳ್ಳುತ್ತಾ… ‘ಹ್ಞೂ ಕಣೋ, ನಿನ್ನ ವಯಸ್ಸಲ್ಲಿ ನಾನೂ ಹೀಗೇ ಅನ್ನುತ್ತಿದ್ದೆ. ಆ ಹೊಗೆ, ಧಗೆ, ಹಾರ, ಅಲಂಕಾರಗಳನ್ನೆಲ್ಲ ಹೊತ್ತುಕೊಂಡು ಸದಾ ನಗುನಗುತ್ತಲೇ ಆಶೀರ್ವಾದದ ಕೈಯೆತ್ತಿ ನಿಂತ ಭಗವಂತ ಇನ್ನೂ ಯಾಕೆ ನಮ್ಮ ಕಾಟ ತಾಳಲಾರದೆ ಓಡಿಹೋಗಿಲ್ಲ? ಅನ್ನುವ ಪ್ರಶ್ನೆ ತುಂಬ ಕಾಡುತ್ತಿತ್ತು.

ಆದರೆ ಕೇಳಿದ್ರೆ ಅಜ್ಜಿ ಬೈತಾರೆ ಎಂದು ಸುಮ್ಮನಿರ್ತಿದ್ದೆ…’ ಎಂದೆ ನಗುತ್ತಾ. ‘ಅಮ್ಮಾ, ದಿನಾ ದೇವರ ಮುಂದೆ ಪ್ರಾರ್ಥನೆ
ಮಾಡ್ತಿರ್ತೀಯಲ್ಲ…ಏನಂತ ಕೇಳ್ತಿರ್ತೀಯ ದೇವರನ್ನ?’ ಅಂದ. ನೋಡು ಪುಟ್ಟಾ, ದಿನಾ ಬೆಳಗಾದರೆ ತರಕಾರಿಯವರು, ದಿನಸಿಯವರು, ಹಾಲಿನವರು, ಪೇಪರ್ ಹಾಕೋ ಹುಡುಗರಿಂದ ಹಿಡಿದು ರಾತ್ರಿ ನಿದ್ರೆಗೆ ಜಾರುವವರೆಗೂ ನಮಗೆ ಬೇಕೋ ಬೇಡವೋ ಒಂದಷ್ಟು ಜನರನ್ನ ನಾವು ಭೇಟಿ ಮಾಡಲೇ ಬೇಕಾಗುತ್ತದೆ.

ಯಾರ ಯಾರ ಮನಸಲ್ಲಿ ಅದೇನೇನು ಭಾವನೆಗಳಿರುತ್ತವೋ ಯಾರಿಗೆ ಗೊತ್ತು? ನನಗಂತೂ ದೇವರು ಇಷ್ಟು ಮುದ್ದಾದ ಮಗ, ಇಷ್ಟು ಚೆಂದದ ಮನೆ, ಇದ್ದಷ್ಟು ದಿನವೂ ಚೆಂದಗೆ ನೋಡಿಕೊಂಡ ಪತಿ ಎಲ್ಲವನ್ನೂ ನಾನು ಕೇಳದೆಯೇ ಕೊಟ್ಟಿದ್ದಾನೆ. ಆ ಭಗವಂತನಿಗೆ ಯಾವಾಗ, ಯಾರಿಗೆ ಏನು ಕೊಡಬೇಕಂತ ಚೆನ್ನಾಗಿ ಗೊತ್ತಿರುತ್ತದೆ…. ಅದಕ್ಕೇ ಯಾರ್ಯಾರು ಯಾವ್ಯಾವ ಭಾವನೆಗಳೊಂದಿಗೆ ನಮ್ಮನ್ನು ಭೇಟಿಯಾಗ್ತಾರೋ ಅದನ್ನು ಎರಡರಷ್ಟು ಅವರಿಗೇ ಕೊಟ್ಟುಬಿಡು. ಸದಾ ಕಾಲ ನನಗೆ ನಿನ್ನ
ರಕ್ಷಣೆಯೊಂದಿರಲಿ ಸಾಕು ಎಂದು ಕೇಳಿಕೊಳ್ತೀನಿ ಅಷ್ಟೆ ಅಂದೆ.

ಕೊರೋನಾ ಎಂಬ ಸೂಕ್ಷ್ಮಾಣು ಮಹಾಮಾರಿಯಾಗಿ ಆರ್ಭಟಿಸುತ್ತಿದ್ದ ಸಮಯದಲ್ಲಿ ಕಚೇರಿಯಿಂದ ಬಹಳ ಬೇಗನೇ ಮನೆಗೆ ಬಂದು ಬಿಡುತ್ತಿದ್ದರು ರವಿ. ಅಂದೂ ಬೇಗನೇ ಬಂದಿದ್ದರು. ಮಾರನೆಯ ದಿನ ವರಮಹಾಲಕ್ಷ್ಮಿಯ ಪೂಜೆಗೆ ನಾನು ಎಲ್ಲವನ್ನೂ ಸಿದ್ಧಗೊಳಿಸುತ್ತಿದ್ದೆ. ತನ್ನ ಅಮ್ಮನ ನೆನಪುಗಳ ಮಾತಾಡುತ್ತ ಅವರು ಊಟ ಮುಗಿಸಿ ನಿದ್ರೆಗೆ ಜಾರುವಷ್ಟರ ಸಾಕಷ್ಟು ಸಮಯ ವಾಗಿತ್ತು. ಉಳಿದ ಕೆಲಸಗಳನ್ನೆಲ್ಲ ಮುಗಿಸಿ ನಾನು ಮಲಗುವಾಗ ಕತ್ತಲು ಕರಗಿ ಬೆಳಕು ಮೂಡುವ ಸೂಚನೆಗಳ ಆರಂಭ ವಾಗಿತ್ತು.

ಆಯಾಸದಿಂದ ಹಾಗೇ ಕಣ್ಮುಚ್ಚಿದವಳಿಗೆ ಗಾಢನಿದ್ರೆ. ಇದ್ದಕ್ಕಿದ್ದಂತೆ ಛಂಗ ಛಂಗನೆ ನೆಗೆಯುತ್ತ ಸರ್ಪವೊಂದು ಮನೆಯೊಳಗೆ ಪ್ರವೇಶಿಸಿ ಬಿಟ್ಟಿತು. ‘ಅರೆ, ಹಾವು ಹಾವು’ ಎಂದು ಕೂಗಿಕೊಳ್ಳುವಷ್ಟರಲ್ಲಿ ಎಲ್ಲರಿಗೂ ಎಚ್ಚರ. ಅಪ್ಪ-ಮಗ ಇನ್ನೂ ಸವಿನಿದ್ರೆಯ ಇzರೆ. ಸದ್ಯ ರೂಮಿನ ಬಾಗಿಲು ಭದ್ರವಾಗಿ ಹಾಕಿದೆ ಎಂದು ಖಾತರಿ ಪಡಿಸಿಕೊಳ್ಳುವಷ್ಟರಲ್ಲಿ ಅದು ಮನೆಯ ಮೊದಲನೆ ಮಹಡಿಗೂ ಹರಿದು ಅವರು ಮಲಗಿದ್ದ ಬಾಗಿಲ ಸಮೀಪ ಹಾದು ನೋಡನೋಡುತ್ತಲೇ ಬಂದಂತೆಯೇ ಛಂಗನೆ ಹೊರಗೆ
ಹಾರಿ ಹೋಗಿದ್ದು ಕಂಡು ‘ಅಬ್ಬ! ಸದ್ಯ ಹೊರಹೋಯ್ತಲ್ಲ’ ಎಂದು ನಿಟ್ಟುಸಿರಾಗುವಷ್ಟರಲ್ಲಿ ಎಚ್ಚರ.

ನಡೆದದ್ದು ಕನಸೋ-ನನಸೋ ಅರ್ಥವಾಗದ ದಿಗ್ಭ್ರಮೆ! ಮಾರನೆಯ ದಿನ ಬೆಳಗ್ಗೆ ಪೂಜೆ ನಡೆಸಿಕೊಡಲು ಬಂದ ಅರ್ಚಕರಿಗೆ ವಿಷಯ ತಿಳಿಸಿ ‘ಈ ಕನಸಿನ ಅರ್ಥವೇನು?’ ಎಂದು ಕೇಳಿದೆ. ಅವರು ಕಣ್ಮುಚ್ಚಿ ಧ್ಯಾನ ಮಾಡುತ್ತ ನಿಮ್ಮ ಮನಸಿಗೆ ತೋಚುವ ಎರಡು ಸಂಖ್ಯೆಗಳನ್ನು ಹೇಳಿ ಎಂದರು. ಹೇಳಿದ ನಂತರ ಸಂಖ್ಯಾಶಾಸದಲ್ಲಿ ಅದಕ್ಕಿರುವ ಅರ್ಥವನ್ನು ಹುಡುಕುತ್ತ, ಏನೂ ಹೆದರಬೇಡಿ ಇಷ್ಟರ ನಿಮಗೆ ಕೊಪ್ಪರಿಗೆ ತುಂಬ ಹಣ ಸಿಗುವ ಸಾಧ್ಯತೆ ಇದೆ ಎಂದಾಗ ಮನಸಿಗೆ ನಿರುಮ್ಮುಳ.

ಆರತಿ- ಪ್ರಸಾದ ತೆಗೆದುಕೊಳ್ಳಲು ಕೆಳಗಿಳಿದು ಬಂದ ರವಿಗೆ ವಿಷಯ ತಿಳಿಸಿದಾಗ ಅವರು ಎಂದಿನಂತೆ ಹಾಸ್ಯ ಮಾಡುತ್ತ,
‘ಕೊಪ್ಪರಿಗೆ ಹಣ ಸಿಕ್ಕಾಗ ನನಗೊಂಚೂರು ಸಾಲ ಕೊಡಮ್ಮಾ’ ಅನ್ನುತ್ತಾ ಕಚೇರಿಗೆ ಹೊರಟರು. ನಾನೂ ಆ ವಿಷಯವನ್ನು ಅ ಮರೆತುಬಿಟ್ಟೆ. ಆದರೆ, ಅದಾದ ಮೂರೇ ತಿಂಗಳಿಗೆ ರವಿಯನ್ನು ದೈಹಿಕ ರೂಪದಲ್ಲಿ ಶಾಶ್ವತವಾಗಿ ಕಳೆದುಕೊಂಡು ಬಿಟ್ಟೆ.
ಕೊಪ್ಪರಿಗೆಯ ಹಣವಿರಲಿ, ಮನೆಯಲ್ಲಿದ್ದ ಆಭರಣವೆಲ್ಲ ಒಂದೊಂದೇ ಖಾಲಿಯಾಗುತ್ತ ಬಂತು.

ಈ ಒಂದೂವರೆ ವರ್ಷ ಅದ್ಯಾವ್ಯಾವ ರೀತಿಯ ಪಲ್ಲಟಗಳು! ನಗುವಾಗ ನಕ್ಕು, ಅಳುವಾಗ ಅತ್ತು ಈಗ ಮುಗಿದಿದೆ ಅರ್ಧ ದಾರಿ. ನನ್ನದು ಅಂದುಕೊಂಡಿದ್ದು ಕೈ ಕೊಡವಿಕೊಂಡು ಒಮ್ಮೆಲೇ ಕತ್ತಲಲ್ಲಿ ಕರಗಿಹೋಗಿ, ಎಲ್ಲವನ್ನೂ ಏಕಾಂಗಿಯಾಗಿ ನಿಭಾಯಿಸುವ ಸಂದರ್ಭ ಧುತ್ತೆಂದು ಎದುರಾದಾಗ I became totally blank. ಕಣ್ಣು ತೆರೆದರೆ ಭೂಮಿಯಂತೆ ಜನ, ವಸ್ತುಗಳೆಲ್ಲ ಗಿರ್ರನೆ ತಿರುಗುತ್ತಿವೆಯೇನೋ ಅನ್ನುವ ಅನುಭವ.

ಅಮ್ಮಾ, I am with you ಎಂಬ ಎರಡು ಮುಗ್ಧ ಕಂಗಳಲ್ಲಿ ಭರವಸೆಯ ಬೆಳಕು… ಇಷ್ಟು ದಿನ ಅವರವರ ಪಾಡಿಗಿದ್ದ ಜನರೆಲ್ಲ ಸುತ್ತ ನೆರೆದು ತಮ್ಮ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತ ಅವರೇ ನಮ್ಮ ಜಗತ್ತೇನೋ ಎಂಬ ಭ್ರಮೆ
ಯಡಿಯಲ್ಲಿ ‘ಜನ ಏನಂದುಕೊಳ್ತಾರೋ?’ ಅನ್ನುವ ಭಯದಿಂದ ನಗುವೂ ನೇಪಥ್ಯಕ್ಕೆ ಸರಿದುಹೋಯ್ತು. ಈ ಜಗತ್ತಿಗೆ ಬರುವಾಗ ನಾವು ಯಾರನ್ನೂ ನಂಬಿಕೊಂಡು ಬಂದಿರುವುದಿಲ್ಲ.

ಚುಕ್ಕು ತಟ್ಟಿ ತೊಟ್ಟಿಲಲ್ಲಿ ಮಲಗಿಸಿದ ಅಮ್ಮನಿಗೆ ಕಾಣದಂತೆ ಅಂಬೆಗಾಲಿಕ್ಕುತ್ತ ಹೊಸ್ತಿಲು ದಾಟಿದವರು ನಾವೇ ತಾನೇ? ಪಕ್ಕದಲ್ಲಿ ಕಂಡ ಗೋಡೆ, ಕುರ್ಚಿಗಳನ್ನು ಗಟ್ಟಿಯಾಗಿ ಹಿಡಿಯುತ್ತ ಮೆಲ್ಲಗೆ ನಮ್ಮ ಕಾಲಮೇಲೆ ಎದ್ದು ನಿಂತವರು ನಾವೇ ತಾನೇ? ನಡೆವಾಗ ಎಡವಿ ಬಿದ್ದು ಮೊಳಕಾಲು ಮುರಿದುಕೊಂಡವರೂ ನಾವೇ ಅಲ್ಲವೇ? ಹಾಗಾದರೆ ಎಲ್ಲಿಂದ ಶುರುವಾಯಿತು ಈ ಅವಲಂಬನೆ? ‘ನಾನಿದ್ದೇನೆ ನಿನ್ನೊಂದಿಗೆ’ ಅಂದಕೂಡಲೇ ನಮ್ಮ ಅಸ್ತಿತ್ವವನ್ನೇ ಮರೆತು ಎಲ್ಲದಕ್ಕೂ ಅವರ ಮೇಲೆ ಅವಲಂಬಿತರಾಗಿ ಬಿಡುವ ತಪ್ಪು ಕೂಡ ನಮ್ಮದೇ ಅಲ್ಲವೇ? ರೆಕ್ಕೆ ಬಡಿಯಲು ಕಲಿತ ಮರುಕ್ಷಣದಿಂದ ತನ್ನ ಜೀವನದ ಹೊಣೆಯನ್ನು ತಾನೇ ಹೊರವ ಪುಟ್ಟ ಹಕ್ಕಿಗಿರುವ ಚೈತನ್ಯ ನಮಗ್ಯಾಕಿಲ್ಲ? ಯಾಕಂದ್ರೆ ನಾವೆಲ್ಲ meterialistics.

ಮನೆ-ಮನಗಳ ನಡುವೆ ಜಾತಿ- ಧರ್ಮ, ಧೋರಣೆ, ಹಣ, ಅಂತಸ್ತು, ಸ್ಥಾನಮಾನ ಎನ್ನುತ್ತ ನಮ್ಮ ನಮ್ಮ ನಡುವೆ ಗೋಡೆಗಳ ನ್ನೆಬ್ಬಿಸಿಕೊಂಡು ಬಿಟ್ಟಿದ್ದೇವೆ. ನಮ್ಮ ಅಂತಃಶಕ್ತಿಯನ್ನು ಮರೆತು ನಾಲ್ಕು ಜನ ಮೆಚ್ಚುವಂತೆ ನಡೆಯುವುದನ್ನು ರೂಢಿಸಿಕೊಂಡು ಬಿಟ್ಟಿದ್ದೇವೆ. ಅದರೊಳ ಒಳಗೇ ನಡೆಯುವ ಮೇಲು-ಕೀಳೇಂಬ ಕಿತ್ತಾಟಗಳ ನಾವು ಕಳೆದುಹೋಗಿದ್ದೇವೆ. ಇರಲಿ ಜಗತ್ತು ಅದರ ಪಾಡಿಗದು. ನಾವು ನಮ್ಮಂತಿ ರೋಣ.

ನಮ್ಮ ಮನಸ್ಸಿಗೊಪ್ಪುವಂತೆ ನಡೆಯೋಣ. ಅನ್ನುವವರು ಎಲ್ಲದಕ್ಕೂ ಅನ್ನುತ್ತಲೇ ಇರುತ್ತಾರೆ. ಹಾಗಂತ ಕತ್ತಲು-ಬೆಳಗಾಗು ವುದು ನಿಂತಿದೆಯೇ. ಎಲ್ಲರೂ ನಡೆದ ಹೆzರಿಗಿಂತ ನಾವಾಗಿ ಮಾಡಿಕೊಳ್ಳುವ ಕಾಲುದಾರಿಯಲ್ಲಿ ನಡೆವುದು ಉತ್ತಮ’ ಅಲ್ಲವೇ?