Thursday, 12th December 2024

ತರುಣರು ಎಂದರೆ ಯಾರು ?

ಅಭಿವ್ಯಕ್ತಿ

ಎಸ್‌.ಎ.ವಾರದ

ಏಳಿ! ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ. ಯುವಕರು ಹೇಡಿಗಳಾಗಬಾರದು, ನೀವು ಎಂದಿಗೂ ಪರಾವಲಂಬಿಗಳಲ್ಲ, ನಿಮ್ಮ ಬದುಕಿನ ಶಿಲ್ಪಿಗಳು ನೀವೇ!  ಎನ್ನುವ ಸ್ವಾಮಿ ವಿವೇಕಾನಂದರ ಈ ವಾಣಿಯನ್ನು ತರುಣರು ಅರ್ಥೈಸಿಕೊಳ್ಳಲೇಬೇಕಾದ ಅನಿವಾರ್ಯತೆ.

15ನೇ ವಯಸ್ಸಿನಿಂದ ಆರಂಭವಾಗಿ 24ನೇ ವಯಸ್ಸಿನವರೆಗೆ ಇರುವ ಕಾಲವನ್ನು ‘ತಾರುಣ್ಯ’ ಅಥವಾ ‘ಯೌವ್ವನ’ ಕಾಲ ಎಂದು ಕರೆಯುತ್ತಾರೆ. ಮನುಷ್ಯನ ಜೀವನದಲ್ಲಿ ತಾರುಣ್ಯವೆಂಬುದು ಅತೀ ಮುಖ್ಯವಾದ ಜೀವನದ ಘಟ್ಟವೆಂದೆ ಹೇಳಬಹುದು.
ಏಕೆಂದರೆ ಈ ಸಮಯದಲ್ಲಿ ಮನುಷ್ಯನ ದೇಹದ ಬೆಳವಣಿಗೆ ಮತ್ತು ಮಾನಸಿಕ ಬೆಳವಣಿಗೆ ಅತೀ ಹೆಚ್ಚಿನ ವೇಗದಲ್ಲಿ ನಡೆಯು ತ್ತದೆ. ಈ ಕಾಲದಲ್ಲಿ ಮನುಷ್ಯ ಏಳಿಗೆ ಕಾಣುತ್ತಾನೆ, ಜವಾಬ್ದಾರಿ ಹೊಂದುತ್ತಾನೆ, ಆರ್ಥಿಕವಾಗಿ ಸ್ವಾವಲಂಬಿಯಾಗಲು ಬಯಸುತ್ತಾನೆ.

ಹೊಸ ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾನೆ. ತಂದೆ ತಾಯಿಗಳ ಪ್ರೀತಿಯ ಆವರಣದಿಂದ ಹೊರಗೆ ಬಂದು ನಿಜವಾದ ಪ್ರಪಂಚದ ಪರಿಚಯ ಮಾಡಿಕೊಳ್ಳುತ್ತಾನೆ. ಜೀವನದಲ್ಲಿ ಮುಂದಾಲೋಚನೆಯನ್ನು ಮಾಡುವ ವಸಂತಕಾಲ. ತಾರುಣ್ಯವನ್ನು ಜೇನು ಹುಳಕ್ಕೆ ಹೋಲಿಸಬಹುದು. ಏಕೆಂದರೆ ದುಂಬಿಯು ಹೇಗೆ ಸಕಾಲದಲ್ಲಿ ಜೇನನ್ನು ಶೇಖರಿಸಿ ಮುಂದೆ ತನಗೆ ಬೇಕಾದಲ್ಲಿ
ಉಪಯೋಗಿಸುತ್ತದೆಯೋ ಹಾಗೆಯೇ ಯೌವನದಲ್ಲಿ ಚೆನ್ನಾಗಿ ದುಡಿದು, ಕ್ರಮಬದ್ಧತೆಯಿಂದ ನಡೆದು ಆರೋಗ್ಯವನ್ನು ಕಾಪಾಡಿ ಕೊಂಡು ಬಂದಲ್ಲಿ ಮುಂದೆ ಜೀವನ ಸುಖಮಯವಾಗಿ ನಡೆಸಬಹುದು.

ತಾರುಣ್ಯ ಜೀವನದಲ್ಲಿ ಬರುವ ಅತೀ ಸುಂದರವಾದ, ಅದ್ಬುತವಾದ ಮತ್ತು ಚಕಿತಗೊಳಿಸುವಂತಹ ಕಾಲ. ಈ ಕಾಲವನ್ನು ಕೆಟ್ಟ ರೀತಿಗಳಿಗೆ ಅಂದರೆ ಕುಡಿತ, ತಂಬಾಕು, ಪ್ರೀತಿ – ಪ್ರೇಮ, ಕಳ್ಳತನ, ದರೋಡೆ, ಕೊಲೆ, ರೌಡಿತನ ಹೀಗೆ ಅನೇಕ ಕೆಟ್ಟ ಹಾಗೂ ತಪ್ಪು
ದಾರಿಗಳಲ್ಲಿ ನಡೆದು ಅತಿ ಅಪರೂಪವಾಗಿ ದೊರೆಯುವ ತಾರುಣ್ಯವನ್ನು ಹಾಳುಮಾಡಿಕೊಂಡರೆ ಮುಂದೆ ಜೀವನದಲ್ಲಿ ಒಳ್ಳೆಯ ಮನುಷ್ಯನಾಗಿ ಬದಕುವುದು ಅಸಾಧ್ಯ. ಹಾಗಾಗಿ ನಮ್ಮ ಜೀವನ, ನಮ್ಮ ಯೌವನ ನಮ್ಮ ಡಿತದಲ್ಲಿಯೇ ಇಟ್ಟುಕೊಂಡು
ಅದನ್ನು ಸಾಕಾರಗೊಳಿಸುವುದು ಅತೀ ಮುಖ್ಯ.

ಈಗಿನ ಕಾಲದ ತರುಣರು ಯಾವುದೋ ಆಮಿಷಕ್ಕೊಳಗಾಗಿ ತಮಗೆ ಅರಿವಿಲ್ಲದಂತೆಯೇ ದಾರಿ ತಪ್ಪುತ್ತಿರುವುದು ದೊಡ್ಡ ದುರಂತವೇ ಸರಿ. ಇಂದಿನ ಕಾಲದಲ್ಲಿ ನಡೆಯುತ್ತಿರುವ ಅದೆಷ್ಟೋ ಕೃತ್ಯಗಳು ತರುಣರಿಂದಾಗುತ್ತಿರುವುದಕ್ಕೆ ಹೊಣೆಗಾರರು
ಅವರಲ್ಲ. ಅವರನ್ನು ದಾರಿ ತಪ್ಪಿಸುತ್ತಿರೋ ಕೆಟ್ಟ ದುಶ್ಚಟಗಳು, ಪ್ರಭಾವಿ ಆಮಿಷಗಳು, ಮಾರ್ಗ ದರ್ಶನದ ಕೊರತೆ, ಮೌಲ್ಯಗಳ ಅಧಃಪತನ. ತಮ್ಮ ಇಡೀ ಜೀವನವನ್ನೇ ಧಾರೆಯೆರದು ನಮ್ಮನ್ನು ತರುಣರನ್ನಾಗಿ ಮಾಡಿದ ನಮ್ಮ ತಂದೆ ತಾಯಿಯರನ್ನೊಮ್ಮೆ ನೋಡಿ ಮನುಷ್ಯರಾಗಬೇಕಾಗಿರುವುದು ಅಷ್ಟೇ ಮುಖ್ಯ.

ತರುಣರು ಎಂದರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಕೇವಲ ವಯಸ್ಸನ್ನು ನೋಡಿ ಅಳೆಯುವುದಲ್ಲ. ಸದಾ ಉತ್ಸಾಹಿಗಳಾಗಿ ಯಾವುದೇ ದೌರ್ಬಲ್ಯವಿಲ್ಲದೇ ತಮ್ಮನ್ನು ಹಾಗೂ ತಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವರೋ ಅವರೇ ನಿಜವಾದ ತರುಣರು ಎಂದರೆ ತಪ್ಪಾಗಲಿಕ್ಕಿಲ್ಲ. ಯಾವುದೋ ಕೆಟ್ಟ ಚಟಗಳ ದಾಸರಾಗಿ ಯೌವನದಲ್ಲಿ ಬದಕುವ ಉತ್ಸಾಹವನ್ನು ಕಳೆದು ಕೊಂಡಿರುವ ಮಂದಮತಿಗಳನ್ನು ತರುಣರು ಎನ್ನಲಾಗದು.

ಯಾರು ದೈಹಿಕ ಬಲ, ಮಾನಸಿಕ ಬಲ ಮತ್ತು ಆತ್ಮಬಲ ಗಟ್ಟಿಯಾಗಿ ಇಟ್ಟುಕೊಳ್ಳುವುರೋ ಅವರನ್ನು ತರುಣರು ಎನ್ನಬಹುದು.
ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಭಾರತವನ್ನು ಜಗದ್ಗುರುವನ್ನಾಗಿ ಮಾಡಲು ನನಗೆ ಯುವಕರ ಅವಶ್ಯಕತೆ ಇದೆ, ಯುವಕ ರೆಂದರೆ ‘ನನಗೆ ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು ಮತ್ತು ಮಿಂಚಿನಂತಹ
ಬುದ್ಧಿಶಕ್ತಿ ಇರುವ ಹಾಗೂ ಅವುಗಳ ಅಂತರಾಳದಲ್ಲಿ ಸಿಡಿಲಿನಂತಿರುವ ಸಾಮಗ್ರಿಗಳಿಂದ ಮಾಡಿದ ಮಾನಸಿಕ ಶಕ್ತಿ ನೆಲೆಸಿರ ಬೇಕು. ಈ ರೀತಿಯಾಗಿ ಯುವಕರು ಚೈತನ್ಯದ ಚಿಲುಮೆಗಳಂತಾಗಬೇಕು.

ಜಗತ್ತು ಪೂಜಿಸುವುದು ಶಕ್ತಿಯನ್ನು; ದುರ್ಬಲತೆಯನ್ನಲ್ಲ ಎಂಬುದು ಈಗಿನ ಯುವಕರು ಅರ್ಥ ಮಾಡಿಕೊಳ್ಳಬೇಕು. ಚಾರ್ಲ್ಸ್ ಡಾರ್ವಿನ್‌ರ ಸಿದ್ಧಾಂತದಂತೆ ಶಕ್ತಿ ಇರುವವನು ಉಳಿಯುತ್ತಾನೆ, ದುರ್ಬಲನು ಅಳಿಯುತ್ತಾನೆ ಎನ್ನುವುದನ್ನು ಸದಾ
ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವುದೋ ಸಿನಿಮಾದಲ್ಲಿ ನಾಯಕ ನಾಲ್ಕು ದಾಂಡಿಗರನ್ನು ಹೊಡೆದುರುಳಿಸಿದರೆ ಸಹಸ್ರಾರು ಯುವಕರು ಚಪ್ಪಾಳೆ ತಟ್ಟಿ, ಹುಚ್ಚೆದ್ದು ಕುಣಿದು ಅವನನ್ನು ಹೆಗಲಮೇಲೇರಿಸಿಕೊಂಡು ರಥೋತ್ಸವ ಮಾಡುವುದಿಲ್ಲವೇ? ಅದು ಅವನ ಶಕ್ತಿ ಸಾಮಾರ್ಥ್ಯ ದಕ್ಷತೆಗಳಿಗೆ ಸಲ್ಲಿಸಿದ ಗೌರವವಲ್ಲವೇ? ಶಕ್ತಿಯನ್ನು ಎಲ್ಲರೂ ಭಕ್ತಿ ಗೌರವಗಳಿಂದ ನೋಡುತ್ತಾರೆ.

ಕ್ತನಾದರೆ ನೆಂಟರೆಲ್ಲ ತರು, ಅಶಕ್ತನಾದರೆ ಆಪ್ತ ಜನರೇ ವೈರಿಗಳು ಎಂದು ಪುರಂದರದಾಸರು ಹೇಳಿದ ಮಾತು ಎಷ್ಟು ಸತ್ಯ.
ತಂದೆ ತಾಯಂದಿರು ಪ್ರೀತಿಯಿಂದ ಸಾಕಿ ಸಲಹಿದ ಮಗುವು ದುರ್ಬಲನೂ, ರೋಗಿಷ್ಠನೂ, ದಡ್ಡನೂ, ಮೂರ್ಖನೂ ಆದರೆ ಏನೆನ್ನುವರು ಬಲ್ಲಿರಾ? ಯಾಕಾಗಿ ಹುಟ್ಟದನಿವನು, ಕುಲಕ್ಕೆ ಕಳಂಕ ಎನ್ನುವರಲ್ಲವೇ? ಹೌದು ಶಕ್ತನಿಗೆ ಎಲ್ಲರೂ ಆಪ್ತರು.
ಅಶಕ್ತರನ್ನು ಎಲ್ಲರೂ ತಿರಸ್ಕರಿಸುವರು, ಮೂಲೆಗೆ ತಳ್ಳುವರು. ಕುದರೆಯನ್ನು ಬಲಿ ಕೊಡುವುದಿಲ್ಲ, ಆನೆಯನ್ನು ಬಲಿಕೊಡುವುದಿಲ್ಲ, ಹುಲಿಯನ್ನಂತೂ ಇಲ್ಲವೇ ಇಲ್ಲ.

ಆದರೆ ಮೇಕೆಯನ್ನು ಹಿಡಿದು ಬಲಿ ಕೊಡುತ್ತಾರೆ. ಏಕೆಂದರೆ ಪ್ರಕೃತಿಯು ದುರ್ಬಲರನ್ನು ನಾಶಗೊಳಿಸುತ್ತದೆ. ಸಬಲರನ್ನು ಬೆಳೆಸಿ
ಪೋಷಿಸುತ್ತದೆ. ತರುಣರನ್ನು ದುರ್ಬಲಗೊಳಿಸುವ ನೂರಾರು ಕತೆಗಳು, ಘಟನೆಗಳು, ಚಿತ್ರಗಳು, ಧಾರ್ಮಿಕ ಮತ್ತು ರಾಜಕೀಯದ ರಾಗದ್ವೇಷಗಳು ನಿತ್ಯವು ಪ್ರಸಾರ ವಾಗುತ್ತಿರಬಹುದು. ಅವು ಯುವಕರ ಮನಸ್ಸನ್ನು ತಲ್ಲಣಗೊಳಿಸಬಹುದು. ಆದರೆ ಬದುಕು ಎಷ್ಟೇ ನಿರಾಶದಾಯಕವಾದರೂ ಅದನ್ನು ದಾಟಿ ಮೇಲೆರಲು ಬೇಕಾದ ಶಕ್ತಿ, ಚೈತನ್ಯ ನಮ್ಮಲ್ಲಿ ಇದೆ. ನಮ್ಮ ಸಮೀಪದಲ್ಲೆ ಇದೆ. ನಮ್ಮ ಆಂತರ್ಯದ ಆಳದಲ್ಲೆ ಇದೆ.

ಒಟ್ಟಿನಲ್ಲಿ ನಮಗೆ ಬೇಕಾದ ಮಾರ್ಗದರ್ಶನ , ಶಿಸ್ತು, ಸಹಾಯ , ಸ್ಫೂರ್ತಿ, ಶಾಂತಿ ಇವೇ ಮೊದಲಾದ ಬದುಕನ್ನು ಬೆಳಗುವ
ಅಂಶಗಳು. ಇಂಥ ಅಪಾರ ಶಕ್ತಿಯನ್ನು ಒಳಗಡೆ ಇರಿಸಿಕೊಂಡು ಗುಲಾಮರಂತೆ ವರ್ತಿಸಲು ಕಾರಣವಾದರೂ ಏನು? ಒಂದು ಅಜ್ಞಾನ, ಇನ್ನೊಂದು ಬಾಲ್ಯದಿಂದ ಬೆಳೆಸಿಕೊಂಡು ಬಂದಂಥ ನಿಷೇದಾತ್ಮಕ ಭಾವನೆಗಳು ಅಥವಾ ಯೋಚನೆಗಳು.
ನಾವು ಸದ್ಯ ಏನಾಗಿರುವೆವೋ ಅದು ನಮ್ಮ ಯೋಚನೆಗಳ ಫಲವೇ.

ಯೋಚನೆಗಳೆ ಸದ್ಯದ ಸ್ಥಿತಿಗೆ ತಳಹದಿ. ನಮ್ಮ ಯೋಚನೆಗಳಿಂದಲೇ ನಮ್ಮ ವ್ಯಕ್ತಿತ್ವ ನಿರ್ಧರಿತವಾಗುತ್ತದೆ. ಇಲ್ಲಿಯವರೆಗೆ ಅಸಂಖ್ಯ ದೀನ, ಹೀನ ಯೋಚನೆಗಳಿಂದ ನಾವು ಮುಳಗಿರಬಹುದು. ಆದರೆ ವಿಕಾಸದ ಪಥದಲ್ಲಿ ನಡೆಯಬೇಕೆಂದರೆ ಇಂದಿನಿಂದಲೇ ಒಂದೊಂದೆ ಒಳ್ಳೆಯ ಯೋಚನೆಗಳನ್ನು ನಮ್ಮದಾಗಿಸಿಕೊಂಡು ನಮ್ಮ ಬದುಕನ್ನು ಖಂಡಿತವಾಗಿಯೂ ತಿದ್ದಿಕೊಳ್ಳಬಹುದು.

ಕೊಳೆಯನ್ನು ಕೊಳೆಯಿಂದ ತೆಗೆದೆಸೆಯಲು ಸಾಧ್ಯವಿಲ್ಲ ಶುದ್ಧ ನೀರಿನಿಂದ ತೊಳೆಯಬೇಕು ಅಂತೆಯೇ ಒಳ್ಳೆಯ  ಯೋಚನೆ ಗಳನ್ನು ಬೆಳೆಸಿಕೊಳ್ಳಬೇಕು. ತಾರುಣ್ಯದಲ್ಲಿ ಹದಗೆಟ್ಟ ಜೀವನವನ್ನು ವೃದ್ಧಾಪ್ಯದಲ್ಲಿ ಸರಿಮಾಡಿಕೊಳ್ಳಲು ಸಾಧ್ಯವೇ? ಈಗಿನ ಯುವಕರು ತಮ್ಮ ಬದುಕಿಗೆ ತೀವ್ರ ಬದಲಾವಣೆಯನ್ನು ತಂದುಕೊಳ್ಳುವ ಅವಶ್ಯಕತೆಯಿದೆ. ಅದು ಕ್ರಮಬದ್ಧತೆಯ ನಿಯಮ ವನ್ನು ಅನ್ವಹಿಸುವುದರಿಂದ ಮಾತ್ರ ಸಾಧ್ಯ. ನಿತ್ಯ ಜೀವನದ ಎಲ್ಲ ಭಾಗಕ್ಕೂ ಕ್ರಮಬದ್ಧತೆಯ ನಿಯಮವನ್ನು ಅನ್ವಹಿಸ ಬೇಕು.

ಗೊತ್ತು ಪಡಿಸಿಕೊಂಡ ಕಾಲದಲ್ಲಿ ನಿರ್ದಿಷ್ಟ ಕೆಲಸ ಮಾಡುವ ಕಲೆ ಅದು. ಯಾವುದೇ ನಿರ್ಧಾರವನ್ನು ಆಲೋಚಿಸಿ ತೆಗೆದು ಕೊಳ್ಳಬೇಕು. ಪ್ರತಿಯೊಂದು ಯೋಚನೆ ಮತ್ತು ಆತ್ಮವಿಶ್ವಾಸ ಆಶಾ ಭಾವನೆಯಿಂದೊಡಗೂಡಿ ಹೊರ ಮುಖವಾಗಿ ಹರಿದು ಕಾರ್ಯರೂಪಕ್ಕೆ ಬಂದಾಗ ಅದು ರಚನಾತ್ಮಕವಾಗಿ ಪರ್ಯಾವಸನವಾಗುವುದು.

ತರುಣರೇ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವವರು ನೀವೆ ಎನ್ನುವುದನ್ನು ಮರೆಯಬೇಡಿ. ನಿಮ್ಮ ಆಂತರ್ಯದಲ್ಲಿ ಅಡಗಿದ ಚೈತನ್ಯವನ್ನು ಬಡಿದೆಬ್ಬಿಸಿ. ಆಲಸಿಗಳಾಗದೆ ಆಳುಗಳಾಗಿ ದುಡಿದು ಅರಸನಾಗುವ ಕನಸು ಕಾಣಬೇಕು. ಗೆಲುವಿಗೆ ಯಾವುದೇ ಶ್ರಮರಹಿತ ದಾರಿಗಳಿಲ್ಲ. ಸತತ ಪರಿಶ್ರಮವೇ ಗುರಿಯನ್ನು ಸಾಧಿಸಲಿಕ್ಕಿರುವ ರಾಮಬಾಣ. ಎಲ್ಲ ಹೊಣೆಯನ್ನು ಹೊರಲು
ಸಿದ್ಧರಾಗಿ. ಮಿಂಚಿ ಹೋದ ಕಾರ್ಯವನ್ನು ಕುರಿತು ಚಿಂತಿಸುತ್ತ ವ್ಯರ್ಥ ಕಾಲಹರಣ ಮಾಡಬೇಡಿ.

ಅನಂತ ಭವಿಷ್ಯ ನಿಮ್ಮ ಮುಂದೆ ಇದೆ. ನೀವು ಈ ಸಂಗತಿಯನ್ನು ಸದಾ ನೆನಪಿನಲ್ಲಿಡಬೇಕು. ನಿಮ್ಮ ಪ್ರತಿಯೊಂದು ಯೋಚನೆ, ಮಾತು ಮತ್ತು ಕೆಲಸ ಇವೇ ನಿಮ್ಮ ಭವಿಷ್ಯತ್ತನ್ನು ಬೆಳಗಿಸುವ ಬುತ್ತಿಯಾಗಿ ಪರಿಣಮಿಸುವುವು. ಕೆಟ್ಟ ಯೋಚನೆ, ಕೆಟ್ಟ ಕೆಲಸಗಳು ಕ್ರೂರ ಹುಲಿಯಂತೆ ನಿಮ್ಮ ಮೇಲೆ ನೆಗೆಯಲು ಸಿದ್ಧವಾಗಿದ್ದರೆ, ಒಳ್ಳೆಯ ಯೋಚನೆ ಮತ್ತು ಒಳ್ಳೆಯ ಕಾರ್ಯಗಳು ನೂರಾರು ಸಾವಿರಾರು ದೇವತೆಗಳ ಸಾತ್ವಿಕ ಶಕ್ತಿಯಿಂದ ನಿಮ್ಮನ್ನು ಸದಾ ರಕ್ಷಿಸಲು ಸಿದ್ಧವಾಗಿರುತ್ತವೆ ಎಂಬ ದೃಢ ವಿಶ್ವಾಸವು ನಿಮ್ಮ ಪಾಲಿಗೆ ಸತ್ಕಾರ್ಯದ ಮಹಾ ಪ್ರೇರಕ ಶಕ್ತಿಯಾಗುತ್ತದೆ.

ಕೊನೆಯ ಮಾತು: ಇಂದಿನ ತಾರುಣ್ಯ ಕೆಟ್ಟ ಆಲೋಚನೆ, ಕೆಟ್ಟ ಕೆಲಸಗಳಿಗೆ ಅಣಿಯಾಗದೆ, ದುಶ್ಚಟಗಳಿಗೆ ದಾಸನಾಗದೆ, ಸದಾ ಒಳ್ಳೆಯ ಆಲೋಚನೆಗಳಿಂದ, ಸತ್ಕಾರ್ಯಗಳಿಂದ ಭವ್ಯ ಭಾರತವನ್ನು ಕಟ್ಟುವ ಪ್ರೇರಕ ಶಕ್ತಿಯಾಗಲಿ.