Thursday, 12th December 2024

ರಸ್ತೆ ಅಪಘಾತಗಳಿಗೆ ಹೊಣೆಯಾರು ?

ಅಭಿವ್ಯಕ್ತಿ

ಎಲ್‌.ಪಿ.ಕುಲಕರ್ಣಿ

೨೦೨೦ರ ಡಿಸೆಂಬರ್ – . ನಾನು ಎಂದೂ ಮರೆಯದ ದಿನ. ಏಕೆಂದರೆ ಅಂದು ರಸ್ತೆ ಅಪಘಾತದಲ್ಲಿ ಜೀವ ಹೋಗಿ ಜೀವ ಮತ್ತೆ
ಬಂದಂತಾಗಿತ್ತು. ನಡೆದದ್ದು ಇಷ್ಟೆ – ಅಂದು ಮುಂಜಾನೆ ಸರಿಯಾದ ಸಮಯಕ್ಕೆ ಶಾಲಾ ಕರ್ತವ್ಯಕ್ಕೆ ಬೈಕ್ ಮೇಲೆ ತೆರಳಿದ್ದೆ. ಇದೇನು ವಿಶೇಷವಲ್ಲ ಬಿಡಿ.

ನಾನಿರುವ ಸ್ಥಳದಿಂದ ೧೬ ಕಿ.ಮೀ ದೂರದಲ್ಲಿರುವ ಹಳ್ಳಿಗೆ ಪ್ರತಿ ದಿನವೂ ಕರ್ತವ್ಯಕ್ಕೆ ಬೈಕ್ ಮೆಲೆಯೇ ಹೋಗಿ ಬರುತ್ತೇನೆ. ಎಂದಿನಂತೆ ಅಂದು ಸಾಯಂಕಾಲ ಶಾಲೆ ಬಿಟ್ಟ ನಂತರ ಬೈಕ್ ಹತ್ತಿ ಮನೆಕಡೆಗೆ ಪ್ರಯಾಣ ಬೆಳೆಸಿದೆ. ಇನ್ನೇನು ಊರು
ಸಮೀಪಿಸಲು ಕೇವಲ ಕಿ.ಮೀ ಇದೆ ಎನ್ನುವುದರೊಳಗೆ ನಾನು ಬೈಕ್ ಮೇಲಿಂದ ಕೆಳಗೆ ಬಿದ್ದು ಬಿಟ್ಟಿದ್ದೆ. ಊರ ಹೊರಗೆ ರಸ್ತೆಯ ಪಕ್ಕ ಘನತ್ಯಾಜ್ಯ ವಿಲೇವಾರಿ ಘಟಕವಿದೆ.

ಮುನ್ಸಿಪಾಲಿಟಿಯವರು ಊರಿನ ಸಮಸ್ತ ಕಸವನ್ನೆ ಅಲ್ಲಿಯೇ ತಂದು ಸುರಿದಿರುತ್ತಾರೆ. ಹೀಗಾಗಿ ಅಲ್ಲಿ ನಾಯಿ – ಹಂದಿಗಳ ಕಾಟ ಸ್ವಲ್ಪ ಜಾಸ್ತಿಯೇ ಇರುತ್ತದೆ. ಕಸದ ರೂಪದಲ್ಲಿ ಬೀಸಾಕಿದ ಕೆಲವೊಂದಿಷ್ಟು ಆಹಾರ ತುಣುಕುಗಳನ್ನು ಆಯ್ದು ತಿನ್ನಲು ಅವು ಸಜ್ಜಾಗಿ ನಿಂತಿರುತ್ತವೆ. ಭಣಗುಡುತ್ತಿರುವ ಈ ಬಿಸಿಲಿಗೆ ನಾವೇ ಸುಟ್ಟು ಹೋಗುತ್ತಿರುವಾಗ ಚಿಕ್ಕಪುಟ್ಟ ಕಸದ ಗಿಡಗಳ ಪಾಡೇನು. ಆ ತ್ಯಾಜ್ಯ ವಿಲೇವಾರಿ ಘಟಕದ ಮುಂದಿರುವ ರಸ್ತೆಯ ಪಕ್ಕದಲ್ಲಿ ಸೊಂಟದ ಎತ್ತರ ಬೆಳೆದು ನಿಂತ ಗಿಡಗಳು ಒಣಗಿ ಕೆಂದು ಬಣ್ಣಕ್ಕೆ
ತಿರುಗಿಬಿಟ್ಟಿದ್ದವು. ಅದೇ ಸಮಯಕ್ಕೆ ಅಲ್ಲಿ ನಾಲ್ಕೆ ದು ಕೆಂದು ಬಣ್ಣದ ನಾಯಿಗಳು ಓಡಾಡುತ್ತಿದ್ದವು.

ಗಂಟೆಗೆ ೫೦ ರಿಂದ ೬೦ ಕಿ.ಮೀ ವೇಗದಲ್ಲಿ ಬೈಕ್ ಚಲಿಸುತ್ತ ಬರುತ್ತಲಿದ್ದ ನನಗೆ, ಒಮ್ಮಿಂದೊಮ್ಮೆ ಒಂದು ನಾಯಿ ಬಲಗಡೆ ಯಿಂದ ಓಡುತ್ತ ಬೈಕ್‌ನ ಮುಂದಿನ ಚಕ್ರದ ಎದುರು ಬಂದುಬಿಟ್ಟಿತು. ಪಾಪ, ಆ ನಾಯಿಗೆ ಎಲ್ಲಿ ಹಾಯಿಸುತ್ತೇನೆಂದು ತಿಳಿದು,
ಅವಸರದಲ್ಲಿ ಬೈಕ್‌ನ ಹ್ಯಾಂಡಲನ್ನು ಬಿಟ್ಟುಬಿಟ್ಟೆ. ಹಾಗೆ ಬಿಟ್ಟಿದ್ದೇ ತಡ, ರಸ್ತೆಯ ಮೇಲೆ ದೊಪ್ಪೆಂದು ಬಿದ್ದು ನಾಲ್ಕೆ ದು ಪಲ್ಟಿ ಹೊಡೆದುಬಿಟ್ಟೆ. ನೋಡನೋಡುತ್ತಿದ್ದಂತೆ, ಕ್ಷಣ ಮಾತ್ರದಲ್ಲಿ ಮೊಣಕಾಲು ರಸ್ತೆಯ ಮೇಲೆ ಗೀಚಿ ಹೋಯಿತು.

ಕೈಗಳ ಸಂದುಗಳು, ಹಸ್ತಗಳೆಲ್ಲವೂ ರಕ್ತವಾಗಿಬಿಟ್ಟವು. ಎಡ ಭುಜದ ಎಲುಬು ಸ್ವಲ್ಪ ಮೇಲೆ ಸರಿದು ಹ್ಯಾಟ್ಸಪ್ ಮಾಡುವ ಹಾಗೆ ನೋಯುತ್ತ ನಿಂತುಬಿಟ್ಟಿತ್ತು. ನಾಲ್ಕುಸಾರಿ ತಲೆ ನೆಲಕ್ಕೆ ಬಡಿಯಿತು. ಹೆಲ್ಮೆಟ್ ಇದ್ದಿದ್ದರಿಂದ ಅದೃಷ್ಟವಷಾತ್ ಪ್ರಾಣ ಉಳಿದಿತ್ತು. ಇದನ್ನೆ ನೋಡುತ್ತ ನನ್ನ ಹಿಂದೆ ಬರುತ್ತಿದ್ದ ಬೈಕ್ ಸವಾರರು ತಮ್ಮ ಬೈಕ್ ನಿಲ್ಲಿಸಿ ಓಡಿ ಬಂದು ನೀರು ಕೊಟ್ಟು ಉಪಚರಿಸಿ, ಅಲ್ಲಿಯೇ ಬರುತ್ತಲಿದ್ದ ಊರಿನ ಒಂದು ಕಾರ್ ಡ್ರೈವಿಂಗ್ ಸ್ಕೂಲಿನ ಕಾರಿನಲ್ಲಿ  ನ್ನ ಕೂಡಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದರು.
ಎಕ್ಸ್‌ರೇ ತೆಗೆದು ನೋಡಿದಾಗ, ಎಲುಬುಗಳಿಗೇನು ಹಾನಿ ಆಗಿದ್ದಿಲ್ಲ.

ಆದರೆ ಗಾಯಗಳು ಮಾತ್ರ ಬಹಳ ಡೀಪ್ ಆಗಿದ್ದವು. ನಂತರ ಒಂದು ತಿಂಗಳಲ್ಲಿ ಗಾಯಗಳು ಗುಣಮುಖವಾದವು. ಅಪಘಾತವಾಗಿ
ಈಗ ಎರಡು ತಿಂಗಳಾದರೂ ಮೊಳಕೈಗೆ ಆದ ಓಳಪೆಟ್ಟು ಇನ್ನೂ ಹಾಗೇ ಇದೆ. ಭಾರವಾದ ವಸ್ತುಗಳನ್ನು ಬೇಗನೆ ಮೇಲಕ್ಕೆತ್ತಲು ಬರುವುದಿಲ್ಲ. ನನಗೆ ಅಪಘಾತವಾದ ಜಾಗದ ಎರಡು ವಾರದ ನಂತರ ಮತ್ತೊಬ್ಬರಿಗೆ ಇದೇ ರೀತಿ ಅವಘಡ ಸಂಭವಿಸಿ
ಬಲಗಾಲನ್ನೆ ಕಳೆದುಕೊಂಡಿದ್ದರಂತೆ, ಇನ್ನೊಬ್ಬರು ಆನ್ ದಿ ಸ್ಪಾಟ್ ಡೆತ್ ಆಗಿದ್ದಾರಂತೆ ಎಂಬ ಸುದ್ದಿ ತಿಳಿದು ಭಯವಾಯಿತು. ಇದನ್ನೆ ಏಕೆ ಹೇಳುತ್ತಿದ್ದೇನೆಂದರೆ ಈಗ ಇಂತಹ ರಸ್ತೆ ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ.

ಇದು ಬಿಡಿ, ನನಗೆ ವಾಹನಾ ಚಾಲನಾ ಪರವಾನಗಿ ಆದರೂ ಇದೆ. ಮೇಲಾಗಿ ಬೈಕ್ ಕೂಡ ಸ್ವಂತದ್ದೇ, ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ, ಇನ್ಶೂರನ್ಸ್ ಕ್ಲೇಮ್ ಮಾಡಿದರೆ ನಾನಿಲ್ಲದಿದ್ದರೂ ಮನೆಯ ಸದಸ್ಯರಿಗಾದರೂ ಸಹಾಯಾರ್ಥ ಹಣ ಸಿಗುತ್ತದೆ. ಆದರೆ ಬಹಳಷ್ಟು ಜನ ಡ್ರೈವಿಂಗ್ ಲೈಸನ್ಸ್ ಇಲ್ಲದೇ, ವಾಹನದ ಆರ್.ಸಿ, ಎಮೀಶನ್ ಟೆಸ್ಟ್ ಮುಂತಾದ ದಾಖಲೆ ಪತ್ರಗಳಿಲ್ಲದೆ ರಸ್ತೆಯ ಮೇಲೆ ಬೈಕ್ ರೈಡ್ ಮಾಡುತ್ತಾರೆ. ಅದೂ ಹೆಲ್ಮೇಟ್ ಇಲ್ಲದೆ. ಇಂಥವರ ಪಾಡೇನಾಗಬೇಡಾ!.

ಇದು ಒಂದುಕಡೆಯಾದರೆ, ಮತ್ತೊಂದು ಕಡೆ ಲೈಸನ್ಸ್ ಇಲ್ಲದೆ ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್ ಇಲ್ಲವೆ ಷಡ್ಚಕ್ರ ವಾಹನ ಗಳನ್ನು ಡ್ರೈವ್ ಮಾಡುವುದು. ಇದಂತೂ ಬಹಳ ಅನಾಹುತ. ಹದಿನೆಂಟು ವರ್ಷ ತುಂಬುವವರೆಗೆ ಮಕ್ಕಳಿಗೆ ವಾಹನ ಚಾಲನಾ ಪರವಾನಗಿ ಕೊಡುವುದಿಲ್ಲ. ಆದರೆ ಪಾಲಕರು ತಮ್ಮ ಅಗತ್ಯ ಕೆಲಸಗಳಿಗಾಗಿ ಮಕ್ಕಳ ಕೈಗೆ ಬೈಕ್ ಚಾವಿ ಕೊಟ್ಟು ಕಳಿಸುತ್ತಾರೆ. ಮೊದಲೇ ಹದಿಹರೆಯದ ಜೋಶ್‌ನಲ್ಲಿರುವ ಅವರು ಭರ್, ಭರ್, ಭರ್,… ಅಂತಾ ಅತೀ ಸ್ಪೀಡಲ್ಲಿ ಬೈಕ್ ರೈಡ್ ಮಾಡುತ್ತಾ ಸಾಗುತ್ತಾರೆ. ಹೀಗೆ ಹೋದ ಮಕ್ಕಳಿಗೆ ಏನಾದರೂ ಅಪಘಾತ ಸಂಭವಿಸಿದರೆ ಅಲ್ಲಿಗೆ ಕತೆ ಮುಗಿದು ಹೋಯಿತು.

ಇತ್ತೀಚೆಗೆ ಇಂತಹುದೂ ಒಂದು ಘಟನೆ ನಡೆದುಹೋಯಿತು. ಅದು ತುಂಬು ಕುಟುಂಬ. ಆ ದಂಪತಿಗಳಿಗೆ ನಾಲ್ಕು ಜನ ಹೆಣ್ಣು
ಮಕ್ಕಳು. ಒಬ್ಬನೇ ಒಬ್ಬ ಕುಲಪುತ್ರ. ಹೀಗಾಗಿ ಆತನನ್ನು ಬಹಳ ಮುದ್ದಿನಿಂದ ಸಾಕಿದ್ದರು. ಆತ ಇನ್ನೂ ಎಂಟನೇ ತರಗತಿ ಓದುತ್ತಿದ್ದ. ಬೈಕ್ ಸವಾರಿ ಮಾಡುವುದೆಂದರೆ ಆತನಿಗೆ ಅಚ್ಚುಮೆಚ್ಚು. ಹೀಗೆ ಒಂದು ದಿನ ನಸುಕಿನಲ್ಲಿ ಅಪ್ಪನಿಗೆ ಗೊತ್ತಾಗದೆ, ಅವರ ಪ್ಯಾಂಟ್ ಜೇಬಿನಿಂದ ಬೈಕ್ ಕೀಯನ್ನು ತೆಗೆದುಕೊಂಡು ಹೊರಗೆ ಹೋಗಿಯೇ ಬಿಟ್ಟ. ಅತೀ ವೇಗದಿಂದ ಚಲಾಯಿಸುತ್ತಿದ್ದ ಈತ ಎದುರಿಗೆ ಬರುತ್ತಿದ್ದ ಲಾರಿಗೆ ಗುದ್ದಿ ರಸ್ತೆಯ ಮೇಲೆ ಹೆಣವಾಗಿಹೋದ. ಆ ಹೆತ್ತರಕರುಳಿನ ರೋದನ ಮುಗಿಲು ಮುಟ್ಟಿತ್ತು. ಪುತ್ರ ಶೋಕಂ ನಿರಂತರಂ ಎನ್ನುವಂತಾಗಿದೆ ಈಗ ಅವರ ಪರಿಸ್ಥಿತಿ.

ಮಗನ ನೆನಪ ಮಾರನೇ ವರ್ಷ ತಂದೆ ತೀರಿಕೊಂಡರು. ಈಗ ತಾಯಿ ಜತೆಗೆ ನಾಲ್ಕು ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ. ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ರಸ್ತೆ ಅಪಘಾತಗಳಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದ ನಿದರ್ಶನಗಳು ನಮ್ಮ ಮುಂದೆಯೇ ಇವೆ. ಇತ್ತೀಚೆಗೆ ಧಾರವಾಡದ ಬಳಿ ಆದ ರಸ್ತೆ ಅಪಘಾತದಲ್ಲಿ ೧೧ ಜನ ಸ್ಥಳದ ಮೃತರಾದ ವರದಿಯಾಗಿತ್ತು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಇದೇ –.೧೬, ಮಂಗಳವಾರ ಮುಂಜಾನೆ ಮಧ್ಯ ಪ್ರದೇಶದ ಸಿ ಜಿಯ ಪಟ್ನಾ ಬಳಿ ಬಸ್ ಚಾಲಕನಿಗೆ ಕಂಟ್ರೋಲ್ ತಪ್ಪಿ ನಾಲೆಗೆ ಉರುಳಿಬಿದ್ದು ಸ್ಥಳದ ೪೫ ಜನ ಸಾವನ್ನಪ್ಪಿರುವ ಘಟನೆ ಹೃದವಿದ್ರಾವಕವಾದ ವಿಷಯ ಕೇಳಿ ಬಹಳ ದುಃಖವಾಯಿತು.

ಹೇಳುತ್ತಾ ಹೊರಟರೆ ಈ ವಾಹನ ಅಪಘಾತಗಳಿಗೆ ಕೊನೆಯೇ ಇಲ್ಲವೆಂದೆನಿಸುತ್ತದೆ. ಸಾರಿಗೆ ಇಲಾಖೆಯ ವರದಿಯ ಪ್ರಕಾರ, ರಾಜ್ಯದಲ್ಲಿ ಅಪಘಾತಕ್ಕೆ ತುತ್ತಾದ ವಾಹನಗಳಲ್ಲಿ ಈ ದ್ವಿಚಕ್ರ ವಾಹನಗಳ ಪಾಲು ಶೇ.೩೭ ಇದೆ ಎಂದರೆ ಭಯವಾಗುತ್ತದೆ. ರಾಜಧಾನಿ ಬೆಂಗಳೂರು ಒಂದರ ಕಳೆದ ಮೂರು ವರ್ಷಗಳಿಂದ ಪ್ರತಿ ದಿನ ಸರಾಸರಿ ಮೂರರಿಂದ ನಾಲ್ಕು ವಾಹನಗಳ ಅಪಘಾತಗಳು ಸಂಭವಿಸುತ್ತಿವೆ. ಅವುಗಳಲ್ಲಿ ಇಬ್ಬರಿಂದ ಮೂವರು ಜನ ಸತ್ತೇ ಹೋಗುತ್ತಿದ್ದಾರಂತೆ!

ಅದರಲ್ಲೂ ಈ ಬೈಕ್ ಅಪಘಾತಗಳಲ್ಲಿ ೧೮ ರಿಂದ ೩೦ ವರ್ಷದೊಳಗಿನವರೇ ಜಾಸ್ತಿ ಬಲಿಯಾಗುತ್ತಿದ್ದಾರೆ ಎಂದು ಕೆಲವು ಅಧಿಕೃತ ಅಂಕಿ – ಅಂಶಗಳು ಹೇಳುತ್ತಿವೆ. ವಿಶ್ವದ ವಾಹನ ಪ್ರಮಾಣದಲ್ಲಿ ಶೇ.ರಷ್ಟನ್ನು ಮಾತ್ರ ಹೊಂದಿರುವ ಭಾರತದಲ್ಲಿ ಮೃತಪಡುವವರ ಸಂಖ್ಯೆ ಜಾಗತಿಕವಾಗಿ ಶೇ ೧೧ರಷ್ಟಿದೆ. ದೇಶದಲ್ಲಿ ವರ್ಷಕ್ಕೆ ಸುಮಾರು ೪.೫ ಲಕ್ಷ ಅಪಘಾತಗಳು ಸಂಭವಿಸು ತ್ತಿದ್ದು, ೧.೫ ಲಕ್ಷ ಜನ ಸಾವಿಗೀಡಾಗುತ್ತಿದ್ದಾರೆ. ಇಲ್ಲಿ ಪ್ರತಿ ಗಂಟೆಗೆ ೫೩ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.

ಪ್ರತಿ ನಿಮಿಷಕ್ಕೆ ಒಂದು ಸಾವು ಸಂಭವಿಸುತ್ತಿದೆ. ಅಲ್ಲದೆ ಸಚಿವಾಲಯ ವರದಿಯ ಪ್ರಕಾರ, ರಸ್ತೆ ಅಪಘಾತಗಳಲ್ಲಿ
ಮೃತಪಡುತ್ತಿರುವವರ ಪೈಕಿ ಶೇ ೭೬.೨ ಜನರು ೧೮ ರಿಂದ ೪೫ ವರ್ಷ ವಯೋಮಾನದವರು. ರಸ್ತೆ ಸಂಚಾರಿ ನಿಯಮ ಪಾಲಿಸಿ ಅಪಘಾತಗಳು ತಪ್ಪುತ್ತವೆ ಎಂದು ಹೇಳಿದರೆ ಕೆಲವರಂತೂ ಕಿವಿಗೆ ಹಾಕಿಕೊಳ್ಳುವುದೇ ಇಲ್ಲ. ಅದೇನ್ ಬಿಡಿ ಸರ್, ಸಾವು
ಬರಬೇಕಂತಾ ಹಣೆಯಲ್ಲಿ ಬರೆದಿದ್ದರೆ, ನಾವು ನಿಂತ ಬಂದು ವಾಹನ ಗುದ್ದಿ ನಮ್ಮನ್ನು ಸಾವಿನ ದವಡೆಗೆ ತಳ್ಳಬಹುದು. ಎಂಬ ಹಗುರ ಮಾತುಗಳು ಈಗ ಜನಸಾಮಾನ್ಯರಲ್ಲಿ ಸಾಮಾನ್ಯವಾಗಿಬಿಟ್ಟಿವೆ.

ಹಾಗಂತ ಈ ಕುರಿತು ಅಸಡ್ಡೆ ಸರಿ ಅಲ್ಲ. ಒಂದು ವೇಳೆ ಸಾರ್ವಜನಿಕರು ಮತ್ತು ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಶೇ ೮೦ – ೮೫ ಅಪಘಾತಗಳು ನಡೆಯುವುದೇ ಇಲ್ಲ. ರಸ್ತೆ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವಾಗ ಹದಿಹರೆಯದ ಬಿಸಿರಕ್ತದ ಯುವಕರು ನಮಗೇನೂ ಸಂಬಂಧವೇ ಇಲ್ಲವೆಂಬಂತೆ ಮೈಮರೆಯುತ್ತಾ ಮೆರೆದಾಡುತ್ತಿರುವುದು ಮಾತ್ರ ವಿಪರ್ಯಾಸ. ಅಪಘಾತಗಳು ಸಂಭವಿಸಲು ನಾವೇ ಕಾರಣವಾಗಬೇಕೆಂದಿಲ್ಲ. ನಮ್ಮ ವಿರುದ್ಧ ದಿಕ್ಕಿನಿಂದ ಬರುವವರು ಒಂದು ಕ್ಷಣ ಅಜಾಗರೂಕತೆ ವಹಿಸಿದರೂ ಸಾಕಾಗುತ್ತದೆ.

ಪ್ರತಿಯೊಬ್ಬನೂ ಮನೆಯಿಂದ ಹೊರಬರುವಾಗ ನಿಮಗಾಗಿ ಮನೆಯಲ್ಲಿ ಕಾಯುತ್ತಾ ಇರುವಂಥ ಹೆತ್ತವರು ಇದ್ದಾರೆ ಅನ್ನುವ ನೆನಪು ಸದಾ ಇರಲಿ. ರಸ್ತೆ ಬದಿ ಹಾಕಿದಂಥ ಒಂದು ಫಲಕದಲ್ಲಿ ಈ ರೀತಿ ಬರೆದಿತ್ತು. ಹೆಲ್ಮೆಟ್ ಖರೀದಿಸಲು ಬೇಕಾದಷ್ಟು ಅಂಗಡಿ ಗಳು ಸಿಗಬಹುದು. ಆದರೆ ನಿಮ್ಮ ಜೀವವನ್ನು ಮರಳಿ ಪಡೆಯುವ ಅಂಗಡಿಗಳು ಸಿಗಲಾರವು. ನಿಮ್ಮ ವಾಹನ ಸಂಚರಿಸುತ್ತಿರು ವುದು ರಸ್ತೆಗಳಗಿದೆ, ಗಾಳಿಯಲ್ಲಲ್ಲ ನೆನಪಿರಲಿ. ಅತಿವೇಗ ತಿಥಿ ಬೇಗ.