Tuesday, 12th November 2024

ಹಾಗಾದರೆ ಇದಕ್ಕೆ ಯಾರು ಕಾರಣ ? ಚೀನಾ ? ನೀನಾ ? ನಾನಾ ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

ಒಂದು ವರ್ಷದ ಹಿಂದೆ ಕರೋನಾ ವೈರಸ್ ಮೊದಲನೇ ಅಲೆ ಬೀಸಿದಾಗ ಎಲ್ಲರೂ ಚೀನಾವನ್ನೇ ದೂಷಿಸಿದರು. ಒಂದು ವರ್ಷದ ನಂತರ, ಈಗ ಎರಡನೇ ಅಲೆ ದೇಶಾದ್ಯಂತ ಬೀಸುತ್ತಿದೆ. ಇದಕ್ಕೆ ಯಾರನ್ನು ದೂಷಿಸೋದು? ಇದಕ್ಕೂ ಚೀನಾವೇ ಕಾರಣವಾ? ಉತ್ತರ ಗೋಡೆಯ ಮೇಲೆ ಬರೆದಷ್ಟು ಸ್ಪಷ್ಟವಾಗಿದೆ.

ಈ ವರ್ಷದ ಫೆಬ್ರವರಿ ಒಂದರಂದು, ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 8500 ಇತ್ತು. 2020ರ ಜೂನ್ 8ರಿಂದ ಈ
ತನಕ ಇದು ಅತ್ಯಂತ ಕನಿಷ್ಠ ಸಂಖ್ಯೆ. ಮೊನ್ನೆ ಏಪ್ರಿಲ್ 13ರಂದು ಈ ಸಂಖ್ಯೆ 180000ಕ್ಕೇರಿದೆ. ನಿನ್ನೆ ಈ ಸಂಖ್ಯೆ  256000ಕ್ಕೇರಿದೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಕ್ಷಿಪ್ರಗತಿಯಲ್ಲಿ ಜಾಸ್ತಿಯಾಗುತ್ತಿದೆ. ಅಮೆರಿಕದಲ್ಲಿ ಮೂವತ್ತೊಂದು ದಶಲಕ್ಷ ಮಂದಿ ಕೋವಿಡ್ ಸೋಂಕಿತರಿದ್ದರೆ, ಭಾರತ ಹದಿನಾಲ್ಕು ದಶಲಕ್ಷ ಸೋಂಕಿತರೊಂದಿಗೆ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ.

ಮೊನ್ನೆ ಮೊನ್ನೆಯವರೆಗೂ ಭಾರತದಿಂದ ಕರೋನಾ ಓಡಿ ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರು. ಮನೆಯಲ್ಲಿದ್ದ
ಹಳೆ ಮಾಗಳಿಂದ ಜನ ಕಿಟಕಿ, ಬಾಗಿಲುಗಳನ್ನು ಒರೆಸಲಾರಂಭಿಸಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಿದ
ವರ್ತುಲ ಎಂದೋ ಅಳಿಸಿ ಹೋಗಿತ್ತು. ಜನ ಎಂದರಲ್ಲಿ ಇರುವೆಗಳಂತೆ ಮುತ್ತಿಕೊಳ್ಳಲಾರಂಭಿಸಿದ್ದರು. ಸಾರ್ವಜನಿಕವಾಗಿ
ಯಾವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದನ್ನು ತಮ್ಮಷ್ಟಕ್ಕೆ ಬಿಟ್ಟಿದ್ದರು. ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಮ ಗಳಲ್ಲಿ ಜನ ಲಕ್ಷೋಪಾದಿಯಲ್ಲಿ ಜಮಾಯಿಸಲಾರಂಭಿಸಿದ್ದರು.

ಕೋವಿಡ್ ಪ್ರೊಟೋಕಾಲ್ ಅನ್ನು ಉಲ್ಲಂಘನೆಯಲ್ಲಿಯೇ ಆಚರಿಸಲಾರಂಭಿಸಿದ್ದರು. ‘ಅದ್ಯಾವ ಸೀಮೆ ಕರೋನಾ? ಅದು
ಯಾವತ್ತೋ ಹೋಯ್ತು’ ಎಂದು ಜನ ತಮ್ಮಷ್ಟಕ್ಕೆ ಅಪಹಾಸ್ಯ ಮಾಡಲಾರಂಭಿಸಿದ್ದರು. ಜನಜೀವನ ಎಂದಿನ ಮಾಮೂಲು
ಸ್ಥಿತಿಗೆ ಮರಳಿತ್ತು. ಜನ ತುಂಡುಗುಪ್ಪು ಹೊಡೆದು ಮೈಮರೆತರು. ಕರೋನಾ ಅ ಹೊಂಚು ಹಾಕಿ ಸುಮ್ಮನೆ ಅಡಗಿತ್ತು. ನಮ್ಮ
ಜನರ ಹೊಣೆಗೇಡಿ ವರ್ತನೆಯ ಸಂಪೂರ್ಣ ಲಾಭ ಪಡೆದು ಮತ್ತೊಮ್ಮೆ ಅಪ್ಪಳಿಸಲು ಕಾದು ಕುಳಿತಿತ್ತು. ಈಗ ಮೊದಲ
ಸಲಕ್ಕಿಂತ ಹೆಚ್ಚು ರಭಸದಿಂದ, ರೊಚ್ಚಿನಿಂದ ಮುರುಕೊಂಡು ಬಿದ್ದಿದೆ. ಮೊದಲ ಅಲೆಯೆದ್ದಾಗ, ಭೀತಿಯಿತ್ತು, ಆದರೆ ಸೋಂಕಿತರ ಸಂಖ್ಯೆ ಜಾಸ್ತಿ ಇರಲಿಲ್ಲ.

ಅದರಲ್ಲೂ ಭಾರತ ಅಮೆರಿಕದಂಥ ಮುಂದುವರಿದ ದೇಶಕ್ಕೆ ಹೋಲಿಸಿದರೆ, ಮೊದಲ ಅಲೆಯನ್ನು ಸಮರ್ಥವಾಗಿ ಎದುರಿಸಿತ್ತು. ಆದರೆ ಈಗ ಬೀಸುತ್ತಿರುವ ಎರಡನೇ ಅಲೆಯಿಂದಾಗಿ, ಜನರಲ್ಲಿ ಭೀತಿ ಇಲ್ಲದಾಗಿದೆ, ಆದರೆ ಸೋಂಕಿತರ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಮೊದಲ ಅಲೆಯಲ್ಲಿ 65 ವರ್ಷ ಮೇಲ್ಪಟ್ಟವರಿಗೆ ಸೋಂಕು ತಗುಲಿತ್ತು. ಆದರೆ ಎರಡನೇ ಅಲೆಯಲ್ಲಿ 15 ರಿಂದ 45 ವರ್ಷದವರು ಬಾಧಿತರಾಗುತ್ತಿದ್ದಾರೆ.

ಮೊದಲ ಅಲೆಯೆದ್ದಾಗ, ನಾವು ಯಾವ ಪಾಠವನ್ನೂ ಕಲಿಯಲಿಲ್ಲ. ಕರೋನಾ ನಮ್ಮ ಮನೆ ಬಾಗಿಲು ಬಡಿದು ಹೋದರೂ
ಉಪೇಕ್ಷೆ ಮಾಡಿದೆವು. ನಮ್ಮ ಕಣ್ಣ ಮುಂದೆಯೇ, ಬಂಧು-ಬಾಂಧವರನ್ನು ಕಳೆದು ಕೊಂಡಾಗಲೂ, ಬೇರೆಯವರ ಬಂಧುಗಳು ದಾರುಣವಾಗಿ ಸತ್ತಿದ್ದನ್ನು ಟಿವಿಯಲ್ಲಿ ನೋಡಿದಾಗಲೂ, ಪತ್ರಿಕೆಗಳಲ್ಲಿ ಓದಿದಾಗಲೂ, ನಾವು ಎಚ್ಚೆತ್ತುಕೊಳ್ಳಲಿಲ್ಲ. ಅದೇ ಉದಾಸೀನ, ಅದೇ ಉಪೇಕ್ಷೆ.

ಈಗ ಎರಡನೇ ಅಲೆ ಹೊಡೆತ ನಮ್ಮ ಜಂಘಾಬಲವನ್ನೇ ಉಡುಗುವಂತೆ ಮಾಡಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ,
ದಿಲ್ಲಿ, ಮಧ್ಯ ಪ್ರದೇಶ, ಸೇರಿದಂತೆ ಎಂಟು ರಾಜ್ಯಗಳಲ್ಲಿ ಕರೋನಾ ಹೊಡೆತ ಭೀಕರವಾಗಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು
ಸಿಗದಂತಾಗಿವೆ. ಸೋಂಕಿತರನ್ನು ಮತ್ತು ಸಾವಿಗೀಡಾದವರನ್ನು ಸಾಗಿಸಲು ಅಂಬ್ಯುಲ ಇಲ್ಲವಾಗಿವೆ. ಭಾರತ ಈ ಅಲೆಯ
ಹೊಡೆತವನ್ನು ತಡೆದುಕೊಳ್ಳುವುದು ಕಷ್ಟ ಎಂದೇ ತಜ್ಞರು ಹೇಳುತ್ತಿದ್ದಾರೆ. ಕೋವಿಡ್ ಲಸಿಕೆ ಎಡೆ ಲಭ್ಯವಿದ್ದರೂ ಜನ
ಅದನ್ನು ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ. ಇನ್ನೂ ಮೀನ-ಮೇಷ ಎಣಿಸುತ್ತಿದ್ದಾರೆ.

ವೈರಸ್ ಸೋಂಕಿನ ತೀವ್ರತೆಯನ್ನು ತಕ್ಷಣ ನಿಯಂತ್ರಣಕ್ಕೆ ತರಲು ಲಸಿಕೆ ಪ್ರಬಲ ಅಸ್ತ್ರಗಳಂದು. ಭಾರತ ತಕ್ಷಣ ಶೇ.75
ರಷ್ಟು ಜನಸಂಖ್ಯೆಗೆ ಅಂದರೆ 990 ದಶಲಕ್ಷ ಜನರಿಗೆ ಲಸಿಕೆ ಕೊಡಬೇಕಿದೆ. ಆದರೆ ಈ ತನಕ ದಿನಕ್ಕೆ ಕೇವಲ 4 ದಶಲಕ್ಷ ಜನ
ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ದಿನ ಇಪ್ಪತ್ತು ದಶಲಕ್ಷ ಜನ ಲಸಿಕೆ ಪಡೆದರೆ, ತಿಂಗಳಿಗೆ ಆರು ನೂರು ದಶಲಕ್ಷ ಜನ
‘ಲಸಿಕೆವೀರ’ರಾಗಬಹುದು. ಆದರೆ ಈಗ ತಿಂಗಳಿಗೆ ಎಂಬತ್ತರಿಂದ ನೂರು ದಶಲಕ್ಷ ಜನ ಮಾತ್ರ ಲಸಿಕೆ ತೆಗೆದುಕೊಳ್ಳುವುದನ್ನು
ನೋಡಿದರೆ, ಕರೋನಾ ಮಾರಿಯನ್ನು ತಕ್ಷಣ ನಿಯಂತ್ರಣಕ್ಕೆ ತರುವುದು ಕಷ್ಟ.

ಅಲ್ಲದೇ ತಿಂಗಳಿಗೆ ಆರು ನೂರು ದಶಲಕ್ಷ ಜನರಿಗೆ ಲಸಿಕೆ ನೀಡುವಷ್ಟು ತಯಾರಿಕೆ ಮತ್ತು ಪೂರೈಕೆ ಸಾಧ್ಯವಿಲ್ಲದ ಮಾತು. ಹಿಂದಿನ ತಿಂಗಳಷ್ಟೇ ಕೇಂದ್ರ ಸರಕಾರ ನೂರಿಪ್ಪತ್ತು ದಶಲಕ್ಷ ಡೋಸ್ ಲಸಿಕೆ ತಯಾರಿಸುವಂತೆ ತಯಾರಿಕಾ ಸಂಸ್ಥೆಗಳಿಗೆ ಹೇಳಿದೆ. ಅಷ್ಟಾದರೂ ನಮ್ಮ ಅಗತ್ಯದ ಕಾಲು ಭಾಗವಷ್ಟೇ ಪೂರೈಸಿದಂತಾಗುತ್ತದೆ. ಇನ್ನು ಲಾಕ್‌ಡೌನ್ ಮಾಡಬೇಕೇ, ಬೇಡವೇ ಎಂಬ ಬಗ್ಗೆ ಸರಕಾರಕ್ಕೆ ಸ್ಪಷ್ಟತೆಯಿಲ್ಲ. ಲಾಕ್‌ಡೌನ್‌ನಿಂದ ತಕ್ಕಮಟ್ಟಿಗೆ ಕರೋನಾ ನಿಯಂತ್ರಣಕ್ಕೆ ಬರಬಹುದು.

ಆದರೆ ಅದು ನಮ್ಮ ಆರ್ಥಿಕತೆ ಮೇಲೆ ನೀಡುವ ಹೊಡೆತವನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ. ಅಲ್ಲದೇ ಅದು ಹೊತ್ತು ತರುವ ನೂರಾರು ಉಳಿದ ಸಮಸ್ಯೆಗಳನ್ನು ಊಹಿಸಲೂ ಸಾಧ್ಯವಿಲ್ಲ. ಇವೆಲ್ಲವನ್ನೂ ಗಮನಿಸಿದರೆ, ಎಲ್ಲ ಗೊತ್ತಿದ್ದು, ಗೊತ್ತಿದ್ದೂ ನಮ್ಮ ಕಾಲ ಮೇಲೆ ನಾವೇ ಕಲ್ಲನ್ನು ಎತ್ತಿ ಹಾಕಿಕೊಂಡೆವು ಎಂದೆನಿಸುತ್ತದೆ. ಈ ಅಲೆಯಲ್ಲಿ ಬಚಾವಾದವನೇ ಭಗೀರಥ!
ಸಾಕು, ಇನ್ನಾದರೂ ಜವಾಬ್ದಾರಿಯಿಂದ ನಡೆದುಕೊಳ್ಳೋಣ.

‘ಬುದ್ಧಿವಂತ’ರ ದಡ್ಡ ಪ್ರಶ್ನೆಗಳು!
ಕೆಲವು ದಿನಗಳ ಹಿಂದೆ, ಆಸ್ಟ್ರೇಲಿಯಾದ ಟಿಕ್‌ಟಾಕ್ ಕಲಾವಿದನೊಬ್ಬ, ’ಅಮೆರಿಕದ ಪ್ರಜೆಗಳು ತಾವೇ ಮಹಾ ಬುದ್ಧಿವಂತರು ಎಂದು ಭಾವಿಸಿzರೆ. ಆದರೆ ಅವರಲ್ಲೂ ಮಹಾ ಹುಚ್ಚ ಪ್ಯಾಲಿಗಳು (ದಡ್ಡರು) ಇದ್ದಾರೆ. ಅಮೆರಿಕನ್ ಪ್ರಜೆಯೊಬ್ಬ ನಿಮಗೆ ಕೇಳಿದ ಮೂರ್ಖ ಪ್ರಶ್ನೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಕ್ಕೆ, ಅನೇಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅವುಗಳ ಪೈಕಿ ಕೆಲವು ಇಲ್ಲಿವೆ.

ನನ್ನ ಅಜ್ಜಿ ಇಂಗ್ಲೆಂಡ್, – ಮತ್ತು ಜರ್ಮನಿಗೆ ಹೋಗಿದ್ದಳು. ‘ಹೇಗಿತ್ತು ನಿಮ್ಮ ಯುರೋಪ್ ಪ್ರವಾಸ?’ ಎಂದು ಕೇಳಿದ್ದಕ್ಕೆ ಆಕೆ, ’ನಾನು ಯೂರೋಪಿಗೆ ಹೋಗಿಲ್ಲ, ನಾನು ಹೋಗಿದ್ದು ಇಂಗ್ಲೆಂಡ್, – ಮತ್ತು ಜರ್ಮನಿಗೆ’ ಎಂದು ಹೇಳಿದಳು. ನನ್ನ ಚಿಕ್ಕಪ್ಪ ಈಜಿಪ್ತಿಗೆ ಹೋಗಿದ್ದರು. ಅಲ್ಲಿ ಅವರು ಅನೇಕರನ್ನು, ‘ನೀವು ಪಿರಮಿಡ್ಡಿನಲ್ಲಿ ಹೇಗೆ ವಾಸಿಸುತ್ತೀರಿ?’ ಎಂದು ಕೇಳಿದರಂತೆ.

ಯಾವೊಬ್ಬನೂ ತಾನು ಅಲ್ಲಿ ವಾಸಿಸುತ್ತೇನೆ ಎಂದು ಹೇಳಲಿಲ್ಲವಂತೆ. ವಾಪಸ್ ಬಂದವರು, ’ಈಜಿಪ್ತಿನಲ್ಲಿ ಯಾರೂ ಪಿರಮಿಡ್ಡಿ ನಲ್ಲಿ ವಾಸಿಸುವುದಿಲ್ಲ, ನಾನು ಏನೋ ತಿಳಿದುಕೊಂಡಿದ್ದೆ’ ಎಂದರಂತೆ. ನನ್ನ ಅಮ್ಮ ಸ್ವಿಜರಲ್ಯಾಂಡಿಗೆ ಹೋಗಿದ್ದಳು. ಇಡೀ ದಿನ
ಮೋಡ ಕವಿದ ವಾತಾವರಣವಿತ್ತು. ಅದನ್ನು ನೋಡಿದ ಆಕೆ, ಗೈಡ್‌ಗೆ ಹೇಳಿದಳಂತೆ – ಸ್ವಿಜರಲ್ಯಾಂಡಿಗಿಂತ ಅಮೆರಿಕದಲ್ಲಿಯೇ ಸೂರ್ಯ ಪ್ರಖರವಾಗಿ ಬೆಳಗುವುದು.’

ನನ್ನ ತಂದೆ ಮತ್ತು ಸ್ಪೇನ್ ಪ್ರಜೆ ಸಂಭಾಷಣೆ : 
ಸ್ಪ್ಯಾನಿಷ್ : ನಾನು ಸ್ಪೇನ್ ದೇಶದವ
ಅಮೆರಿಕನ್ : ಹೌದಾ? ಹಾಗಾದ್ರೆ ದಕ್ಷಿಣ ಅಮೆರಿಕದಲ್ಲಿ ಸ್ಪೇನ್ ಎಲ್ಲಿದೆ?
ಸ್ಪ್ಯಾನಿಷ್ : ಇಲ್ಲ.. ಇಲ್ಲ.. ನಾನು ಯುರೋಪಿಯನ್
ಅಮೆರಿಕನ್ : ಮತ್ತೆ ನೀವು ಸ್ಪ್ಯಾನಿಷ್ ಅಂತ ಯಾಕೆ ಹೇಳಿದ್ರಿ?
ಸ್ಪ್ಯಾನಿಷ್ : ಸ್ಪೇನ್ ಯುರೋಪಿನಲ್ಲಿದೆಯಲ್ಲ ?!
ಅಮೆರಿಕನ್ : ಹಾಗಾದ್ರೆ ಯೂರೋಪ್ ಎಲ್ಲಿದೆ ?
ಸ್ಪ್ಯಾನಿಷ್ : ಅದೊಂದು ಖಂಡ!
ಅಮೆರಿಕನ್ : ಹಾಗಾದ್ರೆ ಸ್ಪೇನ್ ಮತ್ತು ಯುರೋಪ್ ಎರಡೂ ದೇಶಗಳಾ?
ಅಮೆರಿಕನ್ : ನೀವು ಯಾವ ದೇಶದವರು ?
ನಾರ್ವೆ ಪ್ರಜೆ : ನಾನು ನಾರ್ವೆಯವನು
ಅಮೆರಿಕನ್ : ನಾರ್ವೆ ಯೂರೋಪಿನ ರಾಜಧಾನಿಯಾ?
ಅಮೆರಿಕನ್ ಪ್ರಜೆ : ನೆದರ್‌ಲ್ಯಾಂಡಿನಲ್ಲೂ ಅಧ್ಯಕ್ಷರಿದ್ದಾರಾ ?
ಗೈಡ್ : ಇದ್ದಾರೆ
ಅಮೆರಿಕನ್ ಪ್ರಜೆ : ಅಮೆರಿಕದಲ್ಲಿ ಮಾತ್ರ ಅಧ್ಯಕ್ಷರಿದ್ದಾರೆ
ಎಂದು ನಾನು ಇಲ್ಲಿ ತನಕ ಭಾವಿಸಿದ್ದೆ!
ಅಮೆರಿಕನ್ : ನೀವು ಏಶಿಯನ್ ಅಲ್ಲವೇ?
ಏಶಿಯನ್ : ಹೌದು
ಅಮೆರಿಕನ್ : ಹಾಗಾದ್ರೆ ನೀವು ಮಾತಾಡೋದು ಏಶಿಯನ್ ಭಾಷೇನಾ?
ಅಮೆರಿಕನ್ : ನೀವು ಯಾವ ಭಾಷೆ ಮಾತಾಡುತ್ತೀರಿ?
ಇಟಲಿ ಪ್ರಜೆ : ಇಟಾಲಿಯನ್
ಅಮೆರಿಕನ್ : ನೀವು ಇಟಾಲಿಯನ್ ಭಾಷೆಯಲ್ಲಿ
ಮಾತಾಡುವಾಗ, ಇಂಗ್ಲೀಷಿನಲ್ಲಿ ಯೋಚಿಸಿ ನಂತರ
ಇಟಾಲಿಯನ್ ಭಾಷೆಗೆ ಅನುವಾದ ಮಾಡುತ್ತೀರಂತೆ,
ನಿಜವಾ?
ಫ್ರೆಂಚ್ ಪ್ರಜೆ : ನಿಮ್ಮ ದೇಶದಲ್ಲಿ ಜನವರಿ ಬಂದರೆ ವಿಪರೀತ ಚಳಿ ಅಲ್ಲವಾ?

ಅಮೆರಿಕನ್ : ಹಾಗಾದ್ರೆ ನಿಮ್ಮ ದೇಶದಲ್ಲಿ ಜನವರಿ ಯಾವಾಗ ಬರುತ್ತೆ?
ಅಮೆರಿಕನ್ : ಇದ್ಯಾವ ನೋಟು ?
ಬ್ರಿಟಿಷ್ : ಇದು ಪೌಂಡ್
ಅಮೆರಿಕನ್ : ನಿಮ್ಮ ದೇಶದಲ್ಲಿ ಡಾಲರ್ ಇಲ್ಲವಾ ?
ಗೈಡ್ : ನಾನು ಲಿಬಿಯಾದವನು
ಅಮೆರಿಕನ್ : ಸರಿ, ನಿಮ್ಮ ದೇಶದಲ್ಲಿ ಸೂರ್ಯ ಇದ್ದಾನಾ?

ಮೊದಲ ಹೆಸರು ಬಲ್ಲಿರೇನು?
ಸಂಪೂರಣ್ ಸಿಂಗ್ ಕಾಲ್ರಾ, ಕಮರುದ್ದೀನ್ ಖಾನ್, ರಾಮತಾನು ಪಾಂಡೆ, ಗದಾಧರ ಚಟ್ಟೋಪಾಧ್ಯಾಯ, ಸತ್ಯನಾರಾಯಣ ರಾಜು, ರಬಿಂದರೋ ಶಂಕರ ಚೌಧರಿ, ಆಗ್ನೆಸ್ ಗೋಂಸ್ಹ ಬೋಜಸ್ಹಿಯೂ, ರಾಮಕೃಷ್ಣ ಯಾದವ, ಅಜಯ್ ಸಿಂಗ್ ಬಿ ಅಂದರೆ ನಿಮ್ಮಲ್ಲಿ ಏನಾದರೂ ಸಂವೇದನೆಗಳು ಅರಳುತ್ತವಾ? ಸಾಧ್ಯವೇ ಇಲ್ಲ. ನಮಗೆ ಗೊತ್ತು-ಪರಿಚಯವಿಲ್ಲದ ಯಾರದೋ ಹೆಸರು ಗಳಿವು ಎಂದು ನೀವು ಅಸಡ್ಡೆ ತೋರಬಹುದು. ಆದರೆ ಈ ವ್ಯಕ್ತಿಗಳು ಒಂದಿಂದು ರೀತಿಯಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಿದವರು ಅಂದರೆ ಆಶ್ಚರ್ಯವಾಗಬಹುದು.

ಗುಲ್ಜಾರ್ ಅವರ ಮೊದಲಿನ ಹೆಸರು ಸಂಪೂರಣ್ ಸಿಂಗ್ ಕಾಲ್ರಾ ಅಂತ. ಅವರ ಮೊದಲ ಅಥವಾ ಅಸಲಿ ಹೆಸರಿನಿಂದ ಕರೆ
ದರೆ ಪ್ರಾಯಶಃ ಅವರೇ ’ಓ’ ಎನ್ನಲಿಕ್ಕಿಲ್ಲ. ಅದೇ ರೀತಿ ಸತ್ಯನಾ ರಾಯಣ ರಾಜು (ಸತ್ಯಸಾಯಿ ಬಾಬಾ), ಆಗ್ನೆಸ್ ಗೋಂಸ್ಹ
ಬೋಜಸ್ಹಿಯೂ (ಮದರ್ ಥೆರೆಸಾ), ಅಜಯ್ ಸಿಂಗ್ ಬಿ (ಯೋಗಿ ಆದಿತ್ಯನಾಥ), ಗದಾಧರ ಚಟ್ಟೋಪಾಧ್ಯಾಯ (ರಾಮಕೃಷ್ಣ ಪರಮಹಂಸ), ರಾಮಕೃಷ್ಣ ಯಾದವ (ಬಾಬಾ ರಾಮದೇವ), ಧನಪತ್ ರಾಯ್ (ಮುನ್ಷಿ ಪ್ರೇಮಚಂದ), ಕಮರುದ್ದೀನ್ ಖಾನ್ (ಬಿಸ್ಮಿ ಖಾನ್)… ಹೀಗೆ ಇನ್ನೂ ಅನೇಕ.

ಇವರಿಗೆ ತಮ್ಮ ಅಸಲಿ ಹೆಸರೇ ಮರೆತು ಹೋಗಿತ್ತು. ರಾಮಚಂದ್ರ ಪಾಂಡುರಂಗ ಟೋಪೆ ಅವರಿಗೆ ’ತಾತ್ಯಾ ಟೋಪೆ’ ಎಂದು ಯಾರು ನಾಮಕರಣ ಮಾಡಿದರೋ ಗೊತ್ತಿಲ್ಲ. ಅವರು ’ತಾತ್ಯಾ’ ಎಂದೇ ಪ್ರಸಿದ್ಧರಾದರು. ಅವರ ಮೂಲ ಹೆಸರು ಮರೆತು ಹೋಯಿತು. ಇವರಿಗೆ ಹುಟ್ಟಿದಾಗ ಇಟ್ಟ ಹೆಸರನ್ನು ನಂತರ ಯಾರೂ ಕರೆಯಲೇ ಇಲ್ಲ.

ಇದು ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲ, ಕೆಲವು ಸಂಸ್ಥೆ ಅಥವಾ ಕಂಪನಿಗಳಿಗೂ ಅನ್ವಯ. ನೈಕಿ ಕಂಪನಿಯ ಮೂಲ ಹೆಸರು
Blue Ribbon Sports ಎಂದಿತ್ತು. ಪೆಪ್ಸಿ ತಂಪು ಪಾನೀಯ ಕಂಪನಿ ಹೆಸರು Brad’s Drink ಎಂದಿತ್ತು. BackRub ಅಂದರೆ ಯಾರಿಗೆ ಗೊತ್ತು? ಅದು ಗೂಗಲ್‌ನ ಮೊದಲ ಹೆಸರು. ಹಾಗೆ ಯಾಹೂ ಮೂಲ ನಾಮಧೇಯ Jerry and David’s Guide to the World
Wide Web. ವ್ಯಕ್ತಿ ಮತ್ತು ಸಂಸ್ಥೆ ಬೆಳೆದಂತೆ, ಅವುಗಳ ಹೆಸರೂ ಬದಲಾಗುತ್ತವೆ.

ಡಿಗ್ರಿ ಇಲ್ಲದಿದ್ದರೆ ಏನಂತೆ?
ಕೆಲವು ದಿನಗಳ ಹಿಂದೆ, ನಾನು ಜೆ.ಸ್ಕಾಟ್ ನಿಕ್ಸನ್ ಪಾಡ್‌ಕಾ ಕೇಳುತ್ತಿದ್ದೆ. ನಿಕ್ಸನ್ ಒಬ್ಬ ಮಾರುಕಟ್ಟೆ ಪರಿಣತ. ಸ್ವಯಂ ಶಕ್ತಿ ಯಿಂದ ತನ್ನನ್ನು ರೂಪಿಸಿಕೊಂಡವ. ಹೆಚ್ಚು ಕಲಿತವನಲ್ಲ. ಕಾಲೇಜಿಗೆ ಹೋದವನಲ್ಲ. ಆದರೂ ನೂರಾರು ಕೋಟಿ ರುಪಾಯಿ ಸಂಪಾದಿಸಿದವ. ಕಲಿಕೆಗೂ, ಹಣ ಸಂಪಾದನೆಗೂ, ನೆಮ್ಮದಿಯ ಜೀವನಕ್ಕೂ ಸಂಬಂಧವೇ ಇಲ್ಲ ಎಂದು ಪ್ರತಿ ಪಾದಿಸಿದವ.

ನಿಕ್ಸನ್‌ಗೆ ಜಾಹೀರಾತು, ಮಾರುಕಟ್ಟೆ ಬಗ್ಗೆ ಕಿಂಚಿತ್ತೂ ಜ್ಞಾನವಿರಲಿಲ್ಲ. ಆದರೆ ಅವನಿಗೆ ಎಕ್ಸೆಲ್ ಗೊತ್ತಿತ್ತು. ಆತ ಮ್ಯಾನೇಜ್ಮೆಂಟ್
ಬಗ್ಗೆ ಏನೂ ಅರಿಯದವ. ಆದರೆ ಆತನಿಗೆ ತನ್ನನ್ನು ಪ್ರೊಮೋಟ್ ಮಾಡಿಕೊಳ್ಳುವುದು ಹೇಗೆ ಎಂದು ಗೊತ್ತಿತ್ತು. ಫೇಸ್ ಬುಕ್
ಮತ್ತು ಯೂಟ್ಯೂಬ್ ಮೂಲಕ ತಿಂಗಳಿಗೆ ಹತ್ತು ಲಕ್ಷ ರುಪಾಯಿ ಗಳಿಸುವುದು ಹೇಗೆ ಎಂಬುದು ಗೊತ್ತಿತ್ತು.

ಆತನಿಗೆ ಪ್ರಾಡಕ್ಟ್ ಪ್ರೊಮೋಷನ್ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಆದರೆ ಎಚ್‌ಟಿಎಂಎಲ ಬಗ್ಗೆ ಗೊತ್ತಿತ್ತು. ಆತನಿಗೆ ಇಂಗ್ಲಿಷ್
ಸಾಹಿತ್ಯ ಗೊತ್ತಿರಲಿಲ್ಲ. ಆದರೆ ಆತನಿಗೆ ಚೆನ್ನಾಗಿ ಇಂಗ್ಲಿಷ್ ಮಾತಾಡುವುದು ಗೊತ್ತಿತ್ತು. ಹೀಗಾಗಿ ಹಲವು ಬಹುರಾಷ್ಟ್ರೀಯ
ಕಂಪನಿಗಳ ಉದ್ಯೋಗಿಗಳಿಗೆ ಕ್ಲಾಸ್ ತೆಗೆದುಕೊಳ್ಳಲಾರಂಭಿಸಿದ. ತಿಂಗಳಿಗೆ ಹತ್ತಾರು ಲಕ್ಷ ರುಪಾಯಿ ಗಳಿಸುವುದು ಗೊತ್ತಿತ್ತು.
ಜೀವನದಲ್ಲಿ ಡಿಗ್ರಿ ಮುಖ್ಯವಲ್ಲವೇ ಅಲ್ಲ. ಒಂದು ವೇಳೆ ತನಗೆ ಡಿಗ್ರಿ ಇದ್ದಿದ್ದರೆ ಇಷ್ಟೆ ಸಂಪಾದಿಸಲು ಆಗುತ್ತಿರಲಿಲ್ಲ ಎಂಬುದು ಅವನ ಖಚಿತ ನಿಲುವು.

‘ಬಹಳ ಜನ ತಮ್ಮ ಜೀವನದ ಮೊದಲ 25-30 ವರ್ಷಗಳನ್ನು ಕಲಿಕೆಗಾಗಿ ಹಾಳು ಮಾಡುತ್ತಾರೆ. ಅದು ಜೀವನದ ಅತ್ಯಂತ ಉಲ್ಲಾಸದಾಯಕ, ಚೇತೋಹಾರಿ ಸಮಯ. ಅದನ್ನೇ ಹಾಳು ಮಾಡುತ್ತೇವೆ. ಅದರ ಬದಲು ಆ ಸಮಯವನ್ನು ಸಂಪಾದನೆಗೆ ಬಳಸಿದರೆ, ಅರವತ್ತು ವರ್ಷಗಳವರೆಗೆ ದುಡಿಯುವ ಅಗತ್ಯವಿಲ್ಲ.’ ಎಂಬುದು ನಿಕ್ಸನ್ ದೃಢ ನಿಲುವು. ನಿಕ್ಸನ್ ಮಾತುಗಳು ಡಿಗ್ರಿ ಮುಗಿಸದವರಿಗೆ, ಫೇಲಾದವರಿಗೆ, ಕಾಲೇಜು ಡ್ರಾಪ್ ಔಟ್ ಗಳಿಗೆ ಅಮೃತವಾಣಿಯಂತೆ ಕೇಳಿಸಬಹುದು.

ಆವಿಷ್ಕಾರ ಮತ್ತು ತಲ್ಲಣ


ನೀವು ಏನನ್ನಾದರೂ ಹೊಸತನ್ನು ಮಾಡಿದಾಗ, ಅದನ್ನು ಎಲ್ಲರೂ ಇಷ್ಟಪಡು ತ್ತಾರೆ ಎಂದೇನೂ ಇಲ್ಲ. ಕೆಲವು ಸಲ ನೀವು ಹೊಸತಾಗಿ ಶೋಧಿಸಿದ್ದು ಗೊತ್ತಾಗದೆಯೂ ಹೋಗಬಹುದು. ಹಾಗೆಂದು ಕೆಲವು ಆವಿಷ್ಕಾರಗಳು ರಾತ್ರಿ ಬೆಳಗಾಗು ವುದರೊಳಗೆ, ಜಗತ್ತಿನೆಡೆ ಜನಪ್ರಿಯವಾಗಬಹುದು ಎಂಬುದನ್ನೂ ಮರೆಯು ವಂತಿಲ್ಲ. ಇದಕ್ಕೆ ಕಾರಣಗಳೇನು ಎಂಬುದನ್ನು ಹುಡುಕುವುದು ಬಹಳ ಕಷ್ಟ ಅಥವಾ ಸುಲಭ.

ಉದಾಹರಣೆಗೆ, ಎಲ್ಲಾ ನಗರಗಳಲ್ಲೂ ಅವೆಷ್ಟೋ ವರ್ಷಗಳಿಂದ ಟ್ಯಾಕ್ಸಿಗಳಿವೆ. ಆದರೆ ಆ ಯಾವ ಟ್ಯಾಕ್ಸಿಗಳೂ ಉಬರ್ ಮತ್ತು ಓಲಾದಷ್ಟು ಜನಪ್ರಿಯವಾಗ ಲಿಲ್ಲ. ಜಗತ್ತಿನ ಎಲ್ಲ ನಗರ, ಪಟ್ಟಣಗಳಲ್ಲಿ ಹೊಟೇಲುಗಳಿವೆ. ಆದರೆ ಅವ್ಯಾವವೂ ಏರ್ ಬಿ.ಎನ್.ಬಿ.ಯಷ್ಟು ದಿಢೀರ್ ಯಶಸ್ಸನ್ನು ಪಡೆಯಲಿಲ್ಲ. ಪುಸ್ತಕದ ಅಂಗಡಿಗಳು ಇಲ್ಲದ ನಗರಗಳಿವೆಯಾ? ಉಹುಂ ಇಲ್ಲವೇ ಇಲ್ಲ. ಆದರೆ ಅದ್ಯಾವ ಪುಸ್ತಕ ದಂಗಡಿಗಳೂ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಷ್ಟು ಭಾರಿ ಯಶಸ್ಸನ್ನು ಕಾಣಲಿಲ್ಲ.

ಅದೇ ರೀತಿ ಅಮೆಜಾನ್ ಪ್ರೈಮ್ ಮತ್ತು ನೆಟ್ ಫ್ಲಿಕ್ಸ್‌ನಷ್ಟು ವೇಗವಾಗಿ ಬೆಳೆದಂತೆ, ಯಾವ ಸಿನಿಮಾ ಥಿಯೇಟರು ಸಹ ಬೆಳೆಯ ಲಿಲ್ಲ. ಜಗತ್ತಿನ ಎಲ್ಲಾ ಮಾಹಿತಿಯ ಕಣಜ ಅಂದ್ರೆ ಬ್ರಿಟಾನಿಕಾ ಪ್ರಕಾಶನ ಸಂಸ್ಥೆ ಹೊರ ತಂಡ ಎನ್‌ಸ್ಕೈಕ್ಲೋಪೀಡಿಯಾ
ಎಂಬುದು ಎಲ್ಲರ ನಂಬಿಕೆಯಾಗಿತ್ತು. ಅದು ನಿಜವೂ ಆಗಿತ್ತು. ಮನೆಯಲ್ಲಿ ಈ ಪುಸ್ತಕಗಳಿದ್ದರೆ eನ ಶೋಧಕ್ಕೆ ಬೇರೇನೂ ಬೇಡ
ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಗೂಗಲ್ ಬಂತು.

ಪರಿಣಾಮ, ಎನ್‌ಸ್ಕೈಕ್ಲೋಪೀಡಿಯಾ ಪ್ರಕಟಣೆಯೇ ನಿಂತು ಹೋಯಿತು. ಅದೇ ರೀತಿ, ಕ್ಯಾಮೆರಾ ಅಂದರೆ ಯಾಶಿಕಾ, ಕೊಡಕ್,
ಆಲಾ, ಸಿಗ್ಮಾ ಎನ್ನುತ್ತಿದ್ದರು. ಈಗ ಎಲ್ಲರ ಕೈಗೆ ಸ್ಮಾರ್ಟ್ ಫೋನ್ ಬಂದು, ಸಾಂಪ್ರದಾಯಿಕ ಕ್ಯಾಮೆರಾಗಳು ಅಳಿವಿನ ಅಂಚಿ ನಲ್ಲಿವೆ. ಬಿಟ್ ಕಾಯಿನ್ಳು ಬ್ಯಾಂಕುಗಳ ಅಸ್ತಿತ್ವವನ್ನು ಅಲುಗಾಡಿಸುತ್ತಿವೆ. ಯಾವುದೇ ಹೊಸ ಆವಿಷ್ಕಾರವಾದಾಗ, ಈ ಎಲ್ಲಾ ಭಾನಗಡಿಗಳಾಗುತ್ತವೆ.