ಶಶಾಂಕಣ
ಶಶಿಧರ ಹಾಲಾಡಿ
shashidhara.halady@gmail.com
ಈ ಹೋರಾಟಗಾರ ಬದುಕಿದ್ದು ಕೇವಲ 25 ವರ್ಷ. ಆದಿವಾಸಿ ಜನರ ಹಕ್ಕುಗಳನ್ನು ರಕ್ಷಿಸಲು ಸರಕಾರದ ವಿರುದ್ಧ ಹೋರಾಟ ನಡೆಸಿ, ತನ್ನ ಹಳ್ಳಿಯ ಜನರನ್ನು ಸಂಘಟಿಸಿದ ಧೀಮಂತ ವ್ಯಕ್ತಿ ಇವನು. ಕಾಡಿನ ಅಂಚಿನಲ್ಲಿ ವಾಸಿಸಿದ್ದ ಜನರಿಗೆ ತಮ್ಮ ಪಾರಂಪರಿಕ ಹಕ್ಕುಗಳನ್ನು ಕಾಯ್ದುಕೊಳ್ಳುವ ಅಧಿಕಾರವಿದೆ ಎಂದು ಜನರನ್ನು ಹುರಿದುಂಬಿಸಿ, ಬಲಿಷ್ಠ ಬ್ರಿಟಿಷ್ ಸರಕಾರದ ವಿರುದ್ಧವೇ ಹೋರಾಟ ನಡೆಸಿದ ಧೀರ ಇವನು. ಪ್ರತಿಯಾಗಿ ಬ್ರಿಟಿಷ್ ಸರಕಾರ ಈತನನ್ನು ತಣ್ಣಗೆ ಬಂಧಿಸಿ, ಕೈಕೋಳ ಹಾಕಿ, ಮೆರವಣಿಗೆ ಮಾಡಿ, ಜೈಲಿಗೆ ಹಾಕಿತು. ದುರಂತವೆಂದರೆ ಈತ ಜೈಲಿನಲ್ಲೇ ಸತ್ತು ಹೋಗುತ್ತಾನೆ!
ಅದುವರೆಗೆ ಕಾಡು ಮೇಡುಗಳಲ್ಲಿ ಅಲೆದಾಡಿಕೊಂಡು, ಎರಡು ವರ್ಷ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಅವರಿಂದ ತಪ್ಪಿಸಿಕೊಂಡು, ಸ್ಥಳೀಯ ಜನರನ್ನು ಸಂಘ ಟಿಸಿ, ಹೋರಾಟದ ನಾಯಕತ್ವ ವಹಿಸುವಷ್ಟು ಶಕ್ತಿ ಹೊಂದಿದ್ದ ಈ ೨೫ರ ಯುವಕ, ಬ್ರಿಟಿಷ್ ಪೋಲೀಸರ ವಶದಲ್ಲಿದ್ದಾಗಲೇ ಕೆಲವೇ ವಾರಗಳಲ್ಲಿ ಕೊನೆಯುಸಿ ರೆಳೆಯುತ್ತಾನೆ. ಇವನು ಸತ್ತಿದ್ದು ಕಾಲರಾ ರೋಗದಿಂದ ಎಂದು ಬ್ರಿಟಿಷರು ಅಧಿಕೃತ ಹೇಳಿಕೆ ನೀಡಿ, ಕೈತೊಳೆದು ಕೊಂಡರು.
ಅವರದ್ದೇ ಸರಕಾರ, ಅವರದ್ದೇ ಕಾನೂನು, ಅವರದ್ದೇ ನ್ಯಾಯವ್ಯವಸ್ಥೆ- ಪೊಲೀಸರ ವಶದಲ್ಲಿದ್ದಾಗ ನಡೆದ ಈ ಸಾವು ಕಸ್ಟೋಡಿಯಲ್ ಡೆತ್ ಅಲ್ಲವೆ, ಬ್ರಿಟಿಷರು ಅದೇಕೆ ಇವನನ್ನು ಪೊಲೀಸ್ ವಶದಲ್ಲಿದ್ದಾಗ ಸಾಯಿಸಿರ ಬಾರದು ಮುಂತಾದ ಪ್ರಶ್ನೆಗಳನ್ನು ಆಗ ಯಾರೂ ಕೇಳಲಿಲ್ಲ. ಆ ಧೀರ ಯುವಕನ ಹೋರಾಟವು ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟವೇ ಆಗಿದ್ದರೂ, ದೇಶಕ್ಕೆ ಸ್ವಾತಂತ್ರ್ಯ ದೊರೆತು ಬಹುಕಾಲದ ತನಕವೂ ಈತನ ತ್ಯಾಗವು ಹೆಚ್ಚು ಪ್ರಚಾರಕ್ಕೆ ಬಂದಿರಲಿಲ್ಲ.
ಈಚಿನ ಎರಡು ಮೂರು ದಶಕಗಳಲ್ಲಿ ಈ ಅಪ್ರತಿಮ ಹೋರಾಟಗಾರನನ್ನು ನಮ್ಮ ದೇಶ ನೆನಪಿಸಿಕೊಳ್ಳುತ್ತಿದೆ. ಆತನ ತ್ಯಾಗವನ್ನು ನೆನಪಿಸಿಕೊಂಡು, ಜಾರ್ಖಂಡ್ ರಾಜ್ಯದಲ್ಲಿ ಸಾಕಷ್ಟು ಗೌರವವನ್ನೂ ನೀಡಲಾಗಿದೆ. ಈತನೇ ಬಿರ್ಸಾ ಮುಂಡಾ. ಆದಿವಾಸಿ ಜನಾಂಗ ವಾದ ಮುಂಡಾ ಪಂಗಡದಲ್ಲಿ ಈತ ಜನಿಸಿದ್ದು 15 ನವೆಂಬರ್ 1875ರಂದು. ಅಂದರೆ ಮಹಾತ್ಮ ಗಾಂಧೀಜಿ ಯವರು ಜನಿಸಿದ ಆರು ವರ್ಷಗಳ ನಂತರ. ಬ್ರಿಟಿಷರ ಪೊಲೀಸರ ವಶದಲ್ಲಿದ್ದಾಗಲೇ ಈತ ಸತ್ತದ್ದು 9 ಜೂನ್ 1900ರಂದು – ಅಂದರೆ, ಮಹಾತ್ಮಾ ಗಾಂಧೀಜಿ ಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 1915ರಲ್ಲಿ ವಾಪಸ್ಸಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವ 15 ವರ್ಷ ಮುಂಚೆಯೇ.
ಬಿರ್ಸಾ ಮುಂಡಾ ಜನಿಸಿದ್ದು ದಟ್ಟ ಕಾಡಿನ ಪ್ರದೇಶ ಎನಿಸಿದ ಇಂದಿನ ಜಾರ್ಖಂಡ್‌ನಲ್ಲಿ. ಆತನ ಹಳ್ಳಿ, ಕಾರ್ಯಕ್ಷೇತ್ರ, ಹೋರಾಟ ನಡೆಸಿದ ಪ್ರದೇಶ ಎಲ್ಲವೂ ಇದ್ದದ್ದು ಅಂದಿನ ಬಂಗಾಳ ಪ್ರೆಸಿಡೆನ್ಸಿಯಲ್ಲಿ. ಅಂದು ಅದು ಬ್ರಿಟಿಷರ ಅತಿ ಪ್ರಮುಖ ಮತ್ತು ಬಲಶಾಲಿ ಪ್ರೆಸಿಡೆನ್ಸಿಯಾಗಿತ್ತು. ಆಗ ಭಾರತದ ರಾಜಧಾನಿಯಾಗಿದ್ದ ಕೊಲ್ಕೊತ್ತಾವನ್ನು ಕೇಂದ್ರವಾಗಿರಿಸಿಕೊಂಡು, ವಸಾಹತುಶಾಹಿ ದಬ್ಬಾಳಿಕೆಯ ಆಡಳಿತ ನಡೆಸುತ್ತಿದ್ದ ಬ್ರಿಟಿಷರ ವಿರುದ್ಧ, ಅವರ ಅಧಿಕಾರ ಕೇಂದ್ರಕ್ಕೆ ಸನಿಹದಲ್ಲೇ ಈತ ಜನರನ್ನು ಸಂಘಟಿಸಿ ಹೋರಾಟ ಕೈಗೊಂಡಿದ್ದ. ಬಂದೂಕುಗಳನ್ನು ಹೊಂದಿದ್ದ ಬ್ರಿಟಿಷ್ ಪೊಲೀಸರ ವಿರುದ್ಧ, ಕೇವಲ ಬಿಲ್ಲು ಬಾಣಗಳಂತಹ ಆಯುಧ ಹೊಂದಿದ್ದ ಆದಿವಾಸಿ ಜನರನ್ನು ಸಂಘಟಿಸಿ, ಹೋರಾಟ ನಡೆಸಿದ ಬಿರ್ಸಾ ಮುಂಡಾನ ಧೈರ್ಯವನ್ನು ಇಂದಿನ ಮಾನದಂಡಗಳಲ್ಲಿ ಅಳೆಯುವುದು ತುಸು ಕಷ್ಟವೇ ಸರಿ.
ಈತ ಹುಟ್ಟಿದ್ದು ಗುರುವಾರ. ಆದ್ದರಿಂದ ಅವನ ಜನಾಂಗದ ನಂಬಿಕೆಯಂತೆ ಬಿರ್ಸಾ ಎಂಬ ಹೆಸರನ್ನು ಇಡಲಾಯಿತು. ಇಂದಿನ ಜಾರ್ಖಂಡ್‌ನ ಕುಂತಿ ಜಿಲ್ಲೆ ಉಲಿಹಾಟು ಎಂಬ ಕುಗ್ರಾಮ ಈತನ ಜನ್ಮಸ್ಥಳ. ತಂದೆ ಸುಗುಣ ಮುಂಡ. ಕೂಲಿ ಕೆಲಸ ಅರಸುತ್ತಾ ಸುಗುಣ ಮುಂಡನ ಕುಟುಂಬವು ಚಾಲ್ಕಾಡ್ ಎಂಬ ಸ್ಥಳಕ್ಕೆ
ಹೋಗುತ್ತದೆ. ಕೊಳಲು ನುಡಿಸುತ್ತಾ ಕುರಿ ಮೇಯಿಸುವ ಕೆಲಸ ಮಾಡುತ್ತಿದ್ದ ಬಿರ್ಸಾನನ್ನು, ಮುಂದೆ ಸಾಲ್ಗಾ ಎಂಬಲ್ಲಿದ್ದ ಶಾಲೆಗೆ ಸೇರಿಸಲಾಯಿತು. ಈತ ಓದಿನಲ್ಲಿ ಚುರುಕಾಗಿದ್ದುದನ್ನು ಕಂಡು, ಆ ಶಾಲೆ ಯನ್ನು ನಡೆಸುತ್ತಿದ್ದ ಜೈಪಾಲ್ ನಾಗ್ ಎಂಬಾತನು ಈತನನ್ನು ಕ್ರಿಶ್ಚಿಯನ್ ಶಾಲೆಗೆ ಸೇರಿಸಲು ಯೋಚಿಸಿದ. ಆ ಮೂಲಕ ಬಿರ್ಸಾ ಮುಂಡಾನು ಇಂಗ್ಲಿಷ್ ಕಲಿತು ಮುಂದುವರಿಯಲಿ ಎಂಬ ಇಂಗಿತ ಇರಬೇಕು.
ಬಿರ್ಸಾ ಮುಂಡಾ ಸೇರಿದ್ದು ಜರ್ಮನ್ ಮಿಶನ್ ಶಾಲೆಯನ್ನು. ಆ ಶಾಲೆಯಲ್ಲಿ ಒಂದು ನಿಯಮವಿತ್ತು. ಶಾಲೆಗೆ ಸೇರುವವರೆಲ್ಲರೂ ಕ್ರೈಸ್ತ ಧರ್ಮವನ್ನು ಪಾಲಿಸ ಬೇಕು. ಬಿರ್ಸಾ ಮುಂಡಾನು ಕ್ರೈಸ್ತನಾಗಿ ಪರಿವರ್ತನೆ ಹೊಂದಿ ಬಿರ್ಸಾ ಡೇವಿಡ್ ಎಂಬ ಹೆಸರನ್ನು ಪಡೆಯುತ್ತಾನೆ. ಕೆಲವು ವರ್ಷ ಅಲ್ಲಿ ಓದಿದ ನಂತರ, ಆತ ಜರ್ಮನ್ ಮಿಷನ್ ಶಾಲೆಯನ್ನು ತೊರೆಯಬೇಕಾಯಿತು. ಅದಕ್ಕೆ ಕಾರಣಗಳೂ ಇದ್ದವು. ಆ ಹಿಂದುಳಿದ ಪ್ರದೇಶದಲ್ಲಿ ಜರ್ಮನ್ ಮತ್ತು ರೋಮನ್ ಕೆಥೊಲಿಕರು ಚುರುಕಾಗಿ ತಮ್ಮ ಮತ ಪ್ರಚಾರವನ್ನು ಮಾಡುತ್ತಿದ್ದರು. ಇದನ್ನು ಒಪ್ಪದ ಬಿರ್ಸಾಮುಂಡಾನ ತಂದೆಯು ಆ ಊರನ್ನೇ ತೊರೆಯುತ್ತಾರೆ.
ಜತೆಗೆ, ಕ್ರೈಸ್ತ ಧರ್ಮಕ್ಕೆ ಪರಿವರ್ತನೆ ಗೊಂಡಿದ್ದ ಆ ಕುಟುಂಬವು, ಅದನ್ನು ತ್ಯಜಿಸಿ, ತಮ್ಮ ಆದಿವಾಸಿ ಜೀವನಪದ್ಧತಿಯನ್ನು ಅನುಸರಿಸಲು ಆರಂಭಿಸುತ್ತಾರೆ.
ಈ ನಡುವೆ ಬ್ರಿಟಿಷ್ ಸರಕಾರವು ಆದಿವಾಸಿ ಜನರ ಹಕ್ಕುಗಳನ್ನು ಮೊಟಕುಗೊಳಿಸಿ, ಕಾಡಿನ ಅಂಚಿನ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆಯಲು ಕಾನೂನು ರಚಿಸಿತು. ಇಂಡಿಯನ್ ಫಾರೆಸ್ಟ್ ಆಕ್ಟ್ ಪ್ರಕಾರ, ಕಾಡಿನ ಸರಹದ್ದಿನಲ್ಲಿದ್ದ ಬಯಲು ಭೂಮಿಗಳನ್ನು ಸುರಕ್ಷಿತ ಕಾಡು ಎಂದು 1893-94ರಲ್ಲಿ ಘೋಷಿಸಲಾಯಿತು. ಆ ಹೊಸ ಕಾನೂನಿನ ಪ್ರಕಾರ ಆದಿವಾಸಿಗಳೆಲ್ಲರೂ ಕಾಡಿನ ಮೇಲಿದ್ದ ತಮ್ಮ ಹಕ್ಕನ್ನು ಕಳೆದುಕೊಂಡು, ಕೂಲಿಕಾರರಾದರು.
ತನ್ನ ಕುಲಕ್ಕೆ ಆದ ಅನ್ಯಾಯವನ್ನು ಗಮನಿಸಿದ ಯುವಕ ಬಿರ್ಸಾ ಮುಂಡಾ, ಭೂಮಿಯ ಮೇಲೆ ತಮಗೆ ಇದ್ದ ಹಕ್ಕನ್ನು ಮರುಪಡೆಯಲು ಹೋರಾಟ ನಡೆಸ ಬೇಕಾದ ಅವಶ್ಯಕತೆಯನ್ನು ಮನಗಾಣುತ್ತಾನೆ. ‘ಧರ್‌ತಿ ಅಬ್ಬ’ (ಭೂ ತಂದೆ) ಎಂಬ ಪರಿಕಲ್ಪನೆಯಲ್ಲಿ, ಈ ಕುರಿತು ಬ್ರಿಟಿಷರನ್ನು ವಿರೋಧಿಸುವ ಅನಿವಾರ್ಯತೆ ಅವನಿಗೆ ಎದುರಾಗುತ್ತದೆ. ಈ ನಡುವೆ, ಬಿರ್ಸಾ ಮುಂಡಾನಿಗೆ ಓರ್ವ ವೈಷ್ಣವ ಸನ್ಯಾಸಿಯ ಸಂಪರ್ಕ ದೊರಕಿತು. ಅವರ ಮೂಲಕ ಭಜನೆಗಳ ಪರಿಚಯ, ರಾಮಾಯಣ, ಮಹಾ ಭಾರತಗಳ ಪರಿಚಯವಾಯಿತು. ಆತ ತುಳಸಿ ಗಿಡವನ್ನು ಪೂಜಿಸಲು ಆರಂಭಿ ಸಿದ.
ತನ್ನ ಹಳ್ಳಿಯ ಸುತ್ತಮುತ್ತಲಿರುವ ಆದಿವಾಸಿ ಜನಾಂಗವನ್ನು ಕ್ರೈಸ್ತ ಮಿಷನರಿಗಳು ಪರಿವರ್ತನೆ ಮಾಡುತ್ತಿರುವುದನ್ನು ಬಿರ್ಸಾ ಇಷ್ಟಪಡಲಿಲ್ಲ. ಆ ರೀತಿ ಮತ ಪರಿವರ್ತನೆಗೊಂಡವರು ಎಲ್ಲರೂ ಪುನಃ ತಮ್ಮ ಮಾತೃಧರ್ಮಕ್ಕೆ ವಾಪಸಾಗಲಿ ಎಂದು ಬಿರ್ಸಾ ಹೇಳತೊಡಗಿದ. ಕ್ರೈಸ್ತ ಮತಪ್ರಚಾರಕರು ನಡೆಸುವ ಬೋಧನೆ ಗಳನ್ನು ಗಮನಿಸಿದ ಈತ, ತಾನೂ ಅದಕ್ಕೆ ಪ್ರತಿಯಾಗಿ ತಮ್ಮ ಕುಲದ ಪರವಾಗಿ ಬೋಧನೆಗಳನ್ನು ಅಲ್ಲಲ್ಲಿ ಹೇಳತೊಡಗುತ್ತಾನೆ. ತನ್ನ ಕುಲದವರನ್ನು ಕೂರಿಸಿ ಕೊಂಡು, ಭಾಷಣಗಳ ಮೂಲಕ ತಮ್ಮಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು ಎಂದು ಬಿರ್ಸಾ ಮುಂಡಾ ಹೇಳಲು ಆರಂಭಿಸಿದ್ದ ಒಂದು ಹೊಸ ಅಭಿಯಾನ.
ಒಂದು ದೃಷ್ಟಿಯಲ್ಲಿ ನೋಡಿದರೆ, ಆತ ಒಬ್ಬ ಪ್ರವಚನಕಾರನ ರೂಪ ಪಡೆಯುತ್ತಾನೆ. ‘ಧರ್‌ತಿ ಅಬ್ಬಾ’ ಅಂದರೆ ಭೂತಂದೆ’ಯನ್ನು ತಾವು ಕಾಪಾಡಬೇಕು ಎಂದು ಆತ ಎಲ್ಲೆಡೆ ಪ್ರಚಾರ ಆರಂಭಿಸುತ್ತಾನೆ. ತಮ್ಮ ಕುಲದ ಒಬ್ಬ ಯುವಕ ಈ ರೀತಿ ಭಾಷಣ ಮಾಡುವುದನ್ನು ಕಂಡು ಆ ಆದಿವಾಸಿ ಜನರು ವಿಸ್ಮಯಗೊಳ್ಳುತ್ತಾನೆ. ಕಾಡಿನ ನಡುವಿನ ಆ ಜನರು ಆತನಿಗೆ ಓರ್ವ ಗುರುವಿನ ಸ್ಥಾನ ನೀಡುತ್ತಾರೆ ಮಾತ್ರವಲ್ಲ ಆತನ ಆಶೀರ್ವಾದವನ್ನು ಪಡೆಯಲು ಆರಂಭಿಸುತ್ತಾರೆ. ಈ ನಡುವೆ ಬ್ರಿಟಿಷರು ತಂದ ಹಲವು ಕಾನೂನುಗಳಿಂದಾಗಿ, ಆದಿವಾಸಿಗಳು ತಮ್ಮ ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಇದನ್ನು ಕಂಡು ರೋಷಗೊಂಡ ಬಿರ್ಸಾ ಮುಂಡಾನು, ತನ್ನ ಜನಾಂಗದ ಉಳಿವಿಗಾಗಿ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಎಂದು ಮನಗಾಣು ತ್ತಾನೆ.
ತನ್ನನ್ನು ಓರ್ವ ಸಂತ ಎಂದು ಘೋಷಿಸಿ ಕೊಂಡು, ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಎಲ್ಲರಿಗೂ ಕರೆಕೊಡುತ್ತಾನೆ. ತಮ್ಮ ಕುಲವನ್ನು ರಕ್ಷಿಸುವುದೇ ತನ್ನ
ಜೀವನದ ಗುರಿ ಎಂದು ಬಹಿರಂಗ ಹೇಳಿಕೆ ನೀಡುತ್ತಾನೆ. ‘ಬ್ರಿಟಿಷ್ ರಾಣಿಯ ಅಧಿಕಾರ ತುಂಡಾಗಲಿ, ನಮ್ಮ ರಾಜ್ಯ ಬೆಳಗಲಿ’ (ಅಬುವಾ ರಾಜ್ ಎತೆ ಜಾನಾ,
ಮಹಾರಾಣಿ ರಾಜ್ ತುಂಡು ಜಾನಾ) ಎಂಬ ಘೋಷವಾಕ್ಯವು ಎಲ್ಲೆಡೆ ಜನಪ್ರಿಯ ಗೊಳ್ಳುತ್ತದೆ. ಆ ಪ್ರದೇಶದ ಮುಂಡಾ ಜನಾಂಗ ಮತ್ತು ಇತರ ಹಲವು ಮೂಲ ನಿವಾಸಿಗಳು ಬಿರ್ಸಾ ಮುಂಡಾನ ಬೆಂಬಲಕ್ಕೆ ನಿಲ್ಲುತ್ತಾರೆ. ಎಲ್ಲರೂ ತಮ್ಮ ಬಿಲ್ಲು ಬಾಣಗಳೊಡನೆ ಸಿದ್ಧರಾಗಿ, ಬಿರ್ಸಾನ ಅಭಿಯಾನಕ್ಕೆ ಕೈಜೋಡಿಸುತ್ತಾರೆ.
ಇದು ಸಹಜವಾಗಿ ಬ್ರಿಟಿಷರನ್ನು ಕೆರಳಿಸುತ್ತದೆ. ಬ್ರಿಟಿಷ್ ಸರಕಾರವು ಬಿರ್ಸಾ ಮುಂಡಾನನ್ನು 24 ಆಗಸ್ಟ್ 1895ರಂದು ಬಂಧಿಸಿ, ಎರಡು ವರ್ಷ ಜೈಲು
ಶಿಕ್ಷೆಯನ್ನು ವಿಧಿಸುತ್ತದೆ. ಜೈಲಿನಿಂದ ಹೊರಬಂದ ಬಿರ್ಸಾ ಮುಂಡಾ, ಪುನಃ ತನ್ನ ಹೋರಾಟವನ್ನು ಮುಂದುವರಿಸಲು ಜನರನ್ನು ಸಂಘಟಿಸುತ್ತಾನೆ. ಈ
ನಡುವೆ ಅಲ್ಲಿನ ಕೋಲ್ ಜನಾಂಗದ ಒಂದು ದೇಗುಲವು ಅವರ ಕೈತಪ್ಪಿ ಹೋಗಿತ್ತು. ಆ ದೇಗುಲದ ದಾಖಲೆಗಳನ್ನು ಸಂಗ್ರಹಿಸಿ, ಪುನಃ ಅದನ್ನು ಅವರಿಗೆ
ವಾಪಸು ಕೊಡಿಸಲು ಪ್ರಯತ್ನಿಸುತ್ತಾನೆ. ಈತನನ್ನು ಪುನಃ ಬಂಧಿಸಬೇಕೆಂದು ಮತಪ್ರಚಾರಕರು ಸಹ ಬ್ರಿಟಿಷ್ ಸರಕಾರದ ಮೇಲೆ ಒತ್ತಡ ತರುತ್ತಾರೆ. ಆಗ ಬಿರ್ಸಾ ಮುಂಡಾನು ಭೂಗತನಾಗಿ, ಎರಡು ವರ್ಷಗಳ ಕಾಲ ಕಾಡಿನಲ್ಲಿ ಅಲೆಯುತ್ತಾನೆ.
ಹಳ್ಳಿ ಹಳ್ಳಿಗೆ ಹೋಗಿ, ಆದಿವಾಸಿಗಳ ಹಕ್ಕುಗಳ ಕುರಿತು ಪ್ರತಿಪಾದಿಸಿ, ಅದನ್ನು ಪುನಃ ಪಡೆಯಲು ಜನರನ್ನು ಸಂಘಟಿಸುತ್ತಾನೆ. ಬ್ರಿಟಿಷರ ವಿರುದ್ಧ ಆಂದೋಲನ ನಡೆಸಿದಾಗ ಮಾತ್ರ ತಮಗೆ ಜಯ ಎಂದು ಆತ ಭಾಷಣ ಮಾಡುತ್ತಾನೆ. 1899ರ ಕ್ರಿಸ್‌ಮಸ್ ದಿನವು ಬಿರ್ಸಾ ಮುಂಡಾನ ಹೋರಾಟದಲ್ಲಿ ಅತಿ ಪ್ರಮುಖದಿನ. ಆತನ ನೇತೃತ್ವದಲ್ಲಿ ಸುಮಾರು 7000 ಜನ ಆದಿವಾಸಿಗಳು ಸಶಸ್ತ್ರ ದಾಳಿ ನಡೆಸಲು ಸಿದ್ಧರಾಗುತ್ತಾರೆ. ಅವರ ಬಳಿ ಇದ್ದದ್ದು ಕೇವಲ ಬಿಲ್ಲು ಮತ್ತು ಬಾಣಗಳು. ಆದರೆ ಉದ್ದೇಶವೆಂದರೆ, ತಮ್ಮ ಹಕ್ಕುಗಳನ್ನು ಕಾಪಾಡುವುದು ಮತ್ತು ತಮ್ಮ ಪರಂಪರೆಗೆ ತೊಡಕಾಗಿರುವ ಮತಪ್ರಚಾರಕ ರನ್ನು ದೂರಮಾಡುವುದು.
ಮುರ್ಹು ಎಂಬಲ್ಲಿನ ಆಂಗ್ಲಿಕನ್ ಮಿಷನ್ ಮತ್ತು ಸರ್‌ವಾಡಾ ಎಂಬಲ್ಲಿದ್ದ ರೋಮನ್ ಕ್ಯಾಥೊಲಿಕ್ ಮಿಷನ್ ಇವರ ಮುಖ್ಯ ಗುರಿ. ಇವರ ಅಭಿಯಾನವು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವೇ ಆಗಿದ್ದು, ಸರಕಾರದ ಅಂಗಸಂಸ್ಥೆಗಳ ಮೇಲೆ ದಾಳಿ ಮಾಡಲು ಆರಂಭಿಸುತ್ತಾರೆ. 5 ಜನವರಿ 1900ರಂದು ಬಿರ್ಸಾ ಮುಂಡಾನ
ಬೆಂಬಲಿಗರು ಇಬ್ಬರು ಪೊಲೀಸರನ್ನು ಸಾಯಿಸುತ್ತಾರೆ. ಎರಡು ದಿನಗಳ ನಂತರ, 7 ಜನವರಿ 1900 ರಂದು ಕುಂತಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ,
ಮತ್ತೊಬ್ಬ ಪೊಲೀಸ್‌ನನ್ನು ಸಾಯಿಸುತ್ತಾರೆ. ತಕ್ಷಣ ಕಾರ್ಯಪ್ರವರ್ತರಾದ ಬ್ರಿಟಿಷ್ ಅಽಕಾರಿ ಎಚ್.ಸಿ.ಸ್ಟ್ರೀಟ್‌ಪೀಲ್ಡ್ ಎಂಬಾತ 150 ಪೊಲೀಸರ ಜತೆ ಧಾವಿಸಿ
ಬಂದು, ಕಂಡ ಕಂಡಲ್ಲಿ ಹೋರಾಟಗಾರರನ್ನು ಗುಂಡಿಟ್ಟು ಸಾಯಿಸುತ್ತಾರೆ.
ದುಂಬಾರಿ ಬೆಟ್ಟ ಎಂಬಲ್ಲಿ ಅಡಗಿದ್ದ ಹೋರಾಟಗಾರರನ್ನು ಪತ್ತೆ ಹಚ್ಚಿದ ಬ್ರಿಟಿಷರು, ಅಲ್ಲಿ ರಕ್ತದ ಹೊಳೆಯನ್ನೇ ಹರಿಸುತ್ತಾರೆ. ಬಿಲ್ಲು ಬಾಣ ಹಿಡಿದ ಎಷ್ಟು ಮಂದಿ ಮುಂಡಾ ಹೋರಾಟಗಾರರು ಸತ್ತರು ಎಂಬ ಲೆಕ್ಕವೇ ಇಲ್ಲ. ನೂರಾರು ಎಂಬುದು ಕೇವಲ ಒಂದು ಅಂದಾಜು. ಅಂದು ಬ್ರಿಟಿಷರ ಕಣ್ತಪ್ಪಿಸಿ ಬಿರ್ಸಾ ಮುಂಡಾನು,
ಸಿಂಗ್‌ಬುಂ ಬೆಟ್ಟಗಳಲ್ಲಿ ತಲೆಮರೆಸಿಕೊಂಡಿರುತ್ತಾನೆ. ಆದರೆ, 3 ಫೆಬ್ರವರಿ 1900ರಂದು ಬ್ರಿಟಿಷರು ಆತನ್ನು ಪತ್ತೆ ಹಚ್ಚಿ ಕೈಕೋಳ ಹಾಕಿ ಬಂಽಸುತ್ತಾರೆ. ಅವನ
ಜತೆಯಲ್ಲೇ 400ಕ್ಕೂ ಹೆಚ್ಚು ಆದಿವಾಸಿ ಹೋರಾಟ ಗಾರರನ್ನು ಬಂಧಿಸುತ್ತಾರೆ. ಜೈಲಿನಲ್ಲಿ ಆರು ಮಂದಿ ಸಾಯುತ್ತಾರೆ. ಅವರಲ್ಲಿ ಬಿರ್ಸಾ ಮುಂಡಾನೂ ಒಬ್ಬ. ಪೊಲೀಸರ ವಶದಲ್ಲಿದ್ದ ಈ ಧೀರ ಹೋರಾಟಗಾರ, ಇದ್ದಕ್ಕಿದ್ದಂತೆ ಹೇಗೆ ಸತ್ತ? ಇದಕ್ಕೆ ಬ್ರಿಟಿಷ್ ಪೊಲೀಸರೇ ಕಾರಣವೇಕಿರಬಾರದು ಎಂದು ಅಂದು ಯಾರೂ ಪ್ರಶ್ನಿಸಲಿಲ್ಲ!
ಜಾರ್ಖಂಡ್‌ನಲ್ಲಿ ಇಂದು ಬಿರ್ಸಾ ಮುಂಡಾ ಒಬ್ಬ ಹೀರೋ. ಆತನ ಹೆಸರಿನಲ್ಲಿ ಕೃಷಿ ವಿಶ್ವವಿದ್ಯಾಲಯ, ತಾಂತ್ರಿಕ ಕಾಲೇಜು, ವಿಮಾನ ನಿಲ್ದಾಣ, ಆದಿವಾಸಿ
ವಿಶ್ವವಿದ್ಯಾಲಯ ಮತ್ತು ಹಲವು ಹತ್ತು ಸಂಸ್ಥೆಗಳಿವೆ. 1988ರಂದು ಈ ಹೋರಾಟಗಾರನ ನೆನಪಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆಮಾಡಲಾಗಿದೆ. ನಮ್ಮ ದೇಶದ ಪಾರ್ಲಿಮೆಂಟ್ ಮ್ಯೂಸಿಯಂನಲ್ಲಿ ಈತನ ಭಾವಚಿತ್ರವಿದೆ. ವಿಶೇಷವೆಂದರೆ, 2000ನೆಯ ಇಸವಿಯ ನಂತರ, ಈತನ ಹೆಸರಿನಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಿವೆ, ಕಾದಂಬರಿಗಳು ರಚನೆಗೊಂ ಡಿವೆ, ಪುಸ್ತಕಗಳು ಹೊರಬಂದಿವೆ.
2020ರಲ್ಲಿ ‘ಭಗವಾನ್ ಬಿರ್ಸಾ ಮುಂಡಾ’ ಎಂಬ ಚಲನಚಿತ್ರವೂ ಬಿಡುಗಡೆಯಾಗಿದ್ದು, ಈತನನ್ನು ದೈವತ್ವಕ್ಕೆ ಏರಿಸುವ ಪ್ರಯತ್ನ ನಡೆದಿದೆ! ಇಂದಿಗೂ ಜಾರ್ಖಂಡ್‌ನ ಮುಂಡಾ ಜನಾಂಗಕ್ಕೆ ಈತನೊಬ್ಬ ಸಂತ, ಗುರು. ಈತನ ಹೆಸರಿನಲ್ಲಿರುವ ಜನಪದ ಕಾವ್ಯವನ್ನು ಅಲ್ಲಿನ ಜನ ಹಾಡುತ್ತಾರೆ. ಇನ್ನೇನು ಮತ್ತೊಂದು ಸ್ವಾತಂತ್ರ್ಯ ದಿನ ಹತ್ತಿರ ಬರುತ್ತಿದೆ. ಈ ಸಮಯದಲ್ಲಿ ನಾವು ಒಂದು ಪ್ರಶ್ನೆ ಕೇಳಬಹುದು. ಪೊಲೀಸ್ ವಶದಲ್ಲಿದ್ದ ಬಿರ್ಸಾ ಮುಂಡಾನನ್ನು, ಬ್ರಿಟಿಷರೇ ಸಾಯಿಸಿ ದರಾ?