Sunday, 15th December 2024

ಕುಳ್ಳನನ್ನು ಕಾಪಾಡೋರ್‌ ಯಾರೂ ಇಲ್ಲಾ ..!

Dwarakish

ಹಂಪಿ ಎಕ್ಸ್‌’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗದ ಅನೇಕ ಹಿರಿಯ ಕಿರಿಯ ಕಲಾವಿದರು ಅಗಲಿದ್ದಾರೆ. ಅಪ್ಪು ಅಂಥ ಆನೆಯನ್ನೇ ಕಳೆದುಕೊಂಡಿದ್ದೇವೆ. ಸತ್ತ ಮೇಲೆ ಹಾಡಿ ಹೊಗಳಿ ತುಂಬಲಾರದ ನಷ್ಟ ಎನ್ನುವ ಬದಲು ಬದುಕಿದ್ದಾಗಲೇ ದ್ವಾರಕೀಶ್ ಅವರ ನಷ್ಟವನ್ನು ತುಂಬಿಸಿಕೊಂಡು ಇನ್ನಷ್ಟು ಕಾಲ ಉಳಿಸಿಕೊಳ್ಳ ಬಹುದಾಗಿದೆ!

ಹೆಸರಾಂತ ವೈದ್ಯಕೀಯ ಸಂಸ್ಥೆಯ ಎಂ.ಎಸ್.ರಾಮಯ್ಯ ಅವರದು ಕಾಲೇಜು, ಆಸ್ಪತ್ರೆಗಳೊಂದಿಗೆ ಒಂದಷ್ಟು ಧಾರ್ಮಿಕ, ಸಾಮಾಜಿಕ ಸೇವೆಗಳಲ್ಲಿ
ತೊಡಗಿಸಿ ಕೊಂಡಿರುವ ಸುಸಂಸ್ಕೃತ ಕುಟುಂಬ. ಶಾಸಕರಾಗಿದ್ದ ಎಂ.ಆರ್.ಸೀತಾರಾಮ್ ಅವರನ್ನು ಹೊರತುಪಡಿಸಿ ಉಳಿದ ಅವರ ಸೋದರರೆಲ್ಲರೂ
ಅವರಾಯ್ತು ಅವರ ಸಂಸ್ಥೆಯಾಯ್ತು ಎಂಬಂತೆ ಇದ್ದವರು. ಆದರೆ ರಾಮಯ್ಯನವರ ಕಿರಿಯಪುತ್ರ ಎಂ.ಆರ್.ಪಟ್ಟಾಭಿರಾಮ್ ಅವರಿಗೆ ಕನ್ನಡದಲ್ಲಿ ಅತ್ಯುತ್ತಮ ಚಿತ್ರವೊಂದನ್ನು ನಿರ್ಮಿಸುವ ಮಹದಾಸೆ.

ಹೀಗಾಗಿ ಆಯ್ಕೆ ಮಾಡಿಕೊಂಡದ್ದು ‘ಗಂಡುಗಲಿ ಕುಮಾರರಾಮ’ ಚಿತ್ರ, ಮತ್ತು ಅದಕ್ಕೆ ನಾಯಕನಟನಾಗಿ ಶಿವಣ್ಣ ಅವರನ್ನು. ಅಣ್ಣಾವ್ರಿಗಾಗಿ ತಯಾರಾಗಿದ್ದ ಚಿತ್ರಕಥೆಯನ್ನು ಪುತ್ರ ಶಿವಣ್ಣನವರೇ ಮಾಡುವುದೂ ಸೂಕ್ತ ವಾಗಿತ್ತು. ದುರದೃಷ್ಟವಶಾತ್ ಈ ಚಿತ್ರದ ದೊಡ್ಡ ಸೋಲಿನಿಂದ ಪಟ್ಟಾಭಿರಾಮ್ ಅವರು ಎಷ್ಟು ಜಾಗೃತರಾದರೆಂದರೆ ಅದೇ ಮೊದಲು, ಅದೇ ಕೊನೆ. ಮತ್ತೆಂದೂ ಚಿತ್ರರಂಗದ ಸಹವಾಸವೇ ಬೇಡವೆಂದು ಹೊರಟುಹೋದರು.

ಕಾರಣ ಸ್ಪಷ್ಟ ! ಶಿವಣ್ಣ ಹೇಗೋ ತಮ್ಮ ಕೈಮೀರಿ ಅಭಿನಯಿಸಿದ್ದರು. ಆದರೆ ಅಂಥ ಐತಿಹಾಸಿಕ ಚಿತ್ರಕ್ಕೆ ನಿರ್ದೇಶಕರ ಆಯ್ಕೆಯ ದೊಡ್ಡ ಪ್ರಮಾದವಾಗಿ ಹೋಗಿತ್ತು. ‘ಮಯೂರ’, ‘ಭಕ್ತಪ್ರಹ್ಲಾದ’ ಚಿತ್ರಗಳನ್ನು ನಿರ್ದೇ ಶಿಸಿದ್ದ ವಿಜಯ, ‘ಕವಿರತ್ನ ಕಾಳಿದಾಸ’, ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಚಿತ್ರ ನಿರ್ದೇಶಿಸಿದ್ದ ರೇಣುಕಾ ಶರ್ಮ ಅವರತ್ತ ನೋಡದೇ, ದಶಕಗಳ ಹಿಂದೆ ಗುರುಶಿಷ್ಯರು ಎಂಬ ಒಂದೇ ಒಂದು ಪೌರಾಣಿಕ ಶೈಲಿಯ ರೀಮೇಕ್ ಚಿತ್ರ ನಿರ್ದೇಶಿಸಿದ್ದ ಭಾರ್ಗವ ಅವರಿಗೆ ಈ ಚಿತ್ರ ಕೊಟ್ಟು ಆಧುನಿಕ ಕಾಲದಲ್ಲೂ ‘ಡ್ರಾಮಾ’ ವರ್ಷನ್ ಸಿನಿಮಾ ಮಾಡಿ ಕೈಸುಟ್ಟುಕೊಂಡರು.

ಪಟ್ಟಾಭಿರಾಮ ಅವರ ಕ್ಷೇತ್ರ ಇದಲ್ಲ. ಹೀಗಾಗಿ ಅವರು ಮತ್ತೊಂದು ಚಿತ್ರ ನಿರ್ಮಿಸುವ ದುಃಸಾಹಸಕ್ಕೆ ಕೈಹಾಕದೆ ಬಚಾವಾಗಿಬಿಟ್ಟರು. ಆದರೆ ನಮ್ಮ ‘ಪುರಾತನ ಕುಳ್ಳ’ ದ್ವಾರಕೀಶ್ ಅವರು ಹಾಗಲ್ಲ. ಗಳಿಸಿಕೊಂಡರೂ ಕಳೆದುಕೊಂಡರೂ ಮಣ್ಣಿನ ಎಂಬ ರೈತನ ಧೋರಣೆಯಂತೆ ಏನೇ ಆದರೂ ಅವರು ತಮ್ಮ ‘ಕುಲಕಸುಬು’ ಸಿನಿಮಾ ಬಿಟ್ಟವರಲ್ಲ. ಈಗ ವಿವಾದವಾಗಿರುವ ವಿಚಾರದಲ್ಲಿ ಭಾಗಿಯಾದ ಹಿರಿಯ ನಿರ್ಮಾಪಕ ಕೊನೇನಹಳ್ಳಿ ಚೌಡಯ್ಯ ನಂಜುಂಡೇಗೌಡರ (ಕೆ.ಸಿ.ಎನ್ ಗೌಡ) ಪುತ್ರ ಚಂದ್ರಶೇಖರ್ ಸಹ ಚಿತ್ರರಂಗದಲ್ಲಿ ಉತ್ತಿಬಿತ್ತಿದವರೇ. ದ್ವಾರಕೀಶ್ ಅವರಂತೆಯೇ ಕನ್ನಡ ಚಿತ್ರರಂಗಕ್ಕೆ ‘ಕಸ್ತೂರಿನಿವಾಸ’, ‘ದೂರದಬೆಟ್ಟ’, ‘ಬಂಗಾರದ ಮನುಷ್ಯ’, ‘ಬಬ್ರುವಾಹನ’, ‘ಹುಲಿಯ ಹಾಲಿನ ಮೇವು’ ಗಳಂತ ಅದ್ದೂರಿ ಅದ್ಭುತ ಚಿತ್ರಗಳನ್ನು ಕೊಟ್ಟವರು.

ಪದೇಪದೆ ಸೋತರೂ ಕಳೆದುಕೊಂಡಿದ್ದನ್ನು ಇಲ್ಲೇ ಪಡೆಯಬೇಕೆಂಬ ಛಲದಲ್ಲಿ ದ್ವಾರಕೀಶ್ ‘ಚಾರುಲತ’ ಚಿತ್ರ ನಿರ್ಮಿಸುತ್ತಾರೆ. ಅದಕ್ಕಾಗಿ ಚಂದ್ರು ಅವರ ಬಳಿ ಸಾಲಪಡೆಯುತ್ತಾರೆ. ಚಿತ್ರ ಮಕಾಡೆ ಮಲಗಿ ಕೊಟ್ಟ ಹಣ ವಾಪಸು ನೀಡಲಾಗದೇ ಸ್ಥಿತಿಗೆಟ್ಟ ದ್ವಾರಕೀಶ್ ಇಂದು ವಂಚನೆಯ ಆರೋಪಕ್ಕೆ ಗುರಿಯಾಗಿ ನಿಂತಿzರೆ.
‘ಭಕ್ತಕುಂಬಾರ’ ಚಿತ್ರದಲ್ಲಿ ಬಾಲಕೃಷ್ಣ ಅವರೊಂದಿಗೆ ಬಾಳೆಎಲೆ ಊಟ ಕದ್ದು ತಿನ್ನುವ ಹಾಸ್ಯ ದೃಶ್ಯವನ್ನು ಕನ್ನಡಿಗರು ಎಂದೂ ಮರೆಯಲು ಸಾಧ್ಯವಿಲ್ಲ. ಹಾಗಂತ ದ್ವಾರಕೀಶ್ ಕನ್ನಡ ಚಿತ್ರರಂಗದಲ್ಲಿ ಬರಿಯ ಒಬ್ಬ ಹಾಸ್ಯನಟನಾಗಿ ಬೆಳೆಯಲಿಲ್ಲ. ಅವರೊಬ್ಬ ಪ್ಯಾಷನೇಟ್ ನಿರ್ಮಾಪಕ ಮತ್ತು ತನ್ನನ್ನು ತಾನು ಕುಳ್ಳ ಎಂದು ಕರೆದುಕೊಂಡೇ ದೊಡ್ಡದೊಡ್ಡ ಸವಾಲನ್ನು ಎದುರಿಸಿದ ಪರಮ ಧೈರ್ಯವಂತ.

ಮಹಾನ್ ಸಾಹಿತಿ ಮತ್ತು ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಗಳ ಹತ್ತಿರದ ಸಂಬಂಧಿಯಾಗಿ ಅವರ ‘ವೀರಸಂಕಲ್ಪ’ ಚಿತ್ರದ ಮೂಲಕ 22ನೇ ವಯಸ್ಸಿನ ಚಿತ್ರರಂಗ ಪ್ರವೇಶಿದ ದ್ವಾರಕೀಶ್, ಎಷ್ಟು ಸ್ಥಿತಿವಂತರಾಗಿದ್ದರೆಂದರೆ ಆ ಕಾಲದ ರಾಜಣ್ಣನವರ ಕಾಲ್‌ಶೀಟ್ ಪಡೆದು ‘ಮೇಯರ್ ಮುತ್ತಣ್ಣ’ ನಂಥ (1969) ಮೈಲುಗಲ್ಲಿನ ಚಿತ್ರ ನಿರ್ಮಿಸಿದವರು. ತಮ್ಮ ಸಂಬಂಧಿ ಭಾರ್ಗವ ಅವರನ್ನು ಪರಿಚಯಿಸಿ ಅವರ ಕೈಗೆ ಅಣ್ಣಾವ್ರ ‘ಭಾಗ್ಯವಂತರು’ ಚಿತ್ರವನ್ನು ನೀಡಿದವರು. ದ್ವಾರಕೀಶ್ ಎಷ್ಟು ಬಿಗುಮಾನದ ವ್ಯಕ್ತಿಯೆಂದರೆ ರಾಜ್ ಅವರು ಅಂದು ಬಾಂಡ್ ಚಿತ್ರಗಳಲ್ಲಿ ಜನಪ್ರಿಯರಾಗುತ್ತಿದ್ದರೆ ಇತ್ತ ತಾನೇನು ಕಮ್ಮಿ ಎಂದು ಬಾಂಡ್ ಶೈಲಿಯ ‘ಕುಳ್ಳಾ ಎಜೆಂಟ್ 000’, ‘ಕೋಬಾಯ್ ಕುಳ್ಳ’ದಂಥ ಚಿತ್ರಗಳನ್ನು ನಿರ್ಮಿಸಿದವರು.

ತಮ್ಮ ನಿರ್ಮಾಣದ ಚಿತ್ರದ ಆರಂಭದ ದೃಶ್ಯದಲ್ಲಿ ಇಡೀ ಕರ್ನಾಟಕ ಭೂಪಟದೊಳಗೆ ತಮ್ಮ ಮುಖವನ್ನು ತೋರಿಸಿ ತಾವು ಅಸಾಮಾನ್ಯನೆಂದು ಬಿಂಬಿಸಿ ಕೊಳ್ಳುವವರು. ತಾವೂ ಪೂರ್ಣಪ್ರಮಾಣದ ನಾಯಕನೆಂದು ‘ಪೆದ್ದಗೆದ್ದ’, ‘ಅದೃಷ್ಟವಂತ’, ‘ಪ್ರಚಂಡಕುಳ್ಳ’, ‘ಮಂಕುತಿಮ್ಮ’ ಸೇರಿ ಅನೇಕ ಚಿತ್ರಗಳನ್ನು ಮಾಡಿ ಇತರೆ ನಾಯಕರೊಂದಿಗೆ ಪೈಪೋಟಿಗಿಳಿದಿದ್ದರು. ಒಂದೆಡೆ ಡಾ.ರಾಜ್ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದರೆ, ರಾಜ್ ಕುಮಾರ್ ಕ್ಯಾಂಪನ್ನು ತೊರೆದು, ಇತ್ತ ಕೆಲವರ ದುರದ್ದೇಶಕ್ಕೆ ಬಲಿಯಾದ ವಿಷ್ಣುವರ್ಧನ್ ಅವರನ್ನು ರಾಜ್ ಅವರಿಗೆ ಸರಿಸಮನಾಗಿ ನಿಲ್ಲಿಸಬೇಕೆಂಬ ದೂರದೃಷ್ಟಿಯಿಂದ ತಮ್ಮ ಹಾಗೂ ವಿಷ್ಣು ಕಾಂಬಿನೇಷನ್‌ನ ‘ಕಳ್ಳಕುಳ್ಳ’ ಸರಣಿಯ ಅನೇಕ ಚಿತ್ರಗಳನ್ನು ನಿರ್ಮಿಸಿದ್ದರು.

1985ರಲ್ಲಿ ವಿಷ್ಣುಗಾಗಿ ‘ನೀ ಬರೆದ ಕಾದಂಬರಿ’ ಚಿತ್ರದ ಮೂಲಕ ಸ್ವತಃ ನಿರ್ದೇಶನಕ್ಕೂ ಇಳಿದುಬಿಟ್ಟರು. ಮುಂದೆ ‘ಕಳ್ಳ-ಕುಳ್ಳ’ ಎಂದೇ ಖ್ಯಾತಿ ಮತ್ತು
ಹಣ ಗಳಿಸಿದ ದ್ವಾರಕೀಶ್‌ರನ್ನು ಅದ್ಯಾವ ಕಾರಣಕ್ಕೋ ಏನೋ ವಿಷ್ಣು ದೂರವಿಟ್ಟುಬಿಟ್ಟರು. ಇದರಿಂದ ಮತ್ತಷ್ಟು ಕೆರಳಿದ ದ್ವಾರಕೀಶ್ ಕನ್ನಡದ ಎಲ್ಲ ನಿರ್ಮಾಪಕ, ನಟರಿಗೂ ಸೆಡ್ಡು ಹೊಡೆದು ಚರಣ್ ರಾಜ್‌ರೊಂದಿಗೆ ‘ಆಫ್ರಿಕಾದಲ್ಲಿ ಶೀಲಾ’ ಎಂಬ ಚಿತ್ರವನ್ನು ಆಗಿನ ಕಾಲದ ಹಾಲಿವುಡ್, ಬಾಲಿವುಡ್, ತಮಿಳು ಮತ್ತು
ಕನ್ನಡ ದಲ್ಲಿ ಏಕಕಾಲದಲ್ಲಿ ನಿರ್ಮಿಸಿ ನಿರ್ದೇಶನಮಾಡಿದ್ದಂಥ ಸಾಹಸಿ.

ಆಫ್ರಿಕಾದ ಕಾಡಿನಲ್ಲಿ ಚಿತ್ರೀಕರಣಗೊಂಡ ಮೊಟ್ಟ ಮೊದಲ ಭಾರತೀಯ ಚಿತ್ರ ಎಂಬ ದಾಖಲೆ ಬರೆದದ್ದು ಇತಿಹಾಸ. ಆದರೆ, ದ್ವಾರಕೀಶ್ ಇದರಿಂದಲೂ
ಕೈಸುಟ್ಟುಕೊಂಡರು. ಈ ಮಧ್ಯೆ ವಿನೋದ್ ರಾಜ್ ಅವರನ್ನು ತಂದರು. ನಟಿ ಶ್ರುತಿಗೆ ದೊಡ್ಡ ಬ್ರೇಕ್ ಕೊಟ್ಟರು. ಅಂಬರೀಷ್ ಜತೆ ಜೈ ಕರ್ನಾಟಕ ಮಾಡಿದರು. ವಿಷ್ಣುಗೆ ಪರ್ಯಾಯವಾಗಿ ಹೊಸ ಕಳ್ಳನಾಗಿ (ಹೊಸಾ ಕಳ್ಳ ಹಳೇ ಕುಳ್ಳ 1992) ಶಶಿಕುಮಾರ್ ಅವರನ್ನು ಬಿಂಬಿಸಲು ಯತ್ನಿಸಿ ಸೋತರು. ಅದೇ ಕಾಲಕ್ಕೆ ಇನ್ನೊಂದೆಡೆ ವಿಷ್ಣು ಅವರು ಭಾರ್ಗವರಂಥ ನಿರ್ದೇಶಕರ ಮುಲಾಜಿಗೆ ಒಳಗಾಗಿ ಒಂದೇ ಸಮನೆ ಸೋಲನ್ನು ಕಂಡಿದ್ದರು. ಕೊನೆಗೆ ಇಬ್ಬರೂ ವೈಮನಸ್ಸು ಬದಿಗೊತ್ತಿ ಒಂದಾಗಿ ಮಲಯಾಳಂನಿಂದ ‘ಚಿತ್ರಂ’ ತಂದು ‘ರಾಯರು ಬಂದರು ಮಾವನ ಮನೆಗೆ’ ಹೆಸರಲ್ಲಿ ರೀಮೇಕ್ ಮಾಡಿ ಇಬ್ಬರೂ ಮತ್ತೆ ಪುಟಿದೆದ್ದರು. ಮತ್ತೊಮ್ಮೆ ‘ಕಿಲಾಡಿಗಳು’ ಮಾಡಿ ಗೆದ್ದರು.

ಇದೇ ಮುಂದುವರಿದಿದ್ದರೆ ಒಳಿತಿತ್ತು. ಆದರೆ ಈ ಮಧ್ಯೆ ಪುತ್ರವ್ಯಾಮೋಹಕ್ಕೆ ಬಿದ್ದ ಕುಳ್ಳ ‘ಹೃದಯಕಳ್ಳರು’, ‘ಮಜ್ನು’ ಎಂಬ ಚಿತ್ರಗಳನ್ನು ಮಾಡಿ ಪ್ರಪಾತ
ಸೇರಿದರು. ನಂತರದಲ್ಲಿ ದ್ವಾರಕೀಶ್ ಎಂಥಾ ದಯನೀಯ ಸ್ಥಿತಿ ತಲುಪಿದರೆಂದರೆ ಸಾಯಿಪ್ರಕಾಶ್ ರೀಮೇಕಿಸಿದ ‘ಮುದ್ದಿನ ಮಾವ’ ಚಿತ್ರದಲ್ಲಿ ದೊಡ್ಡಣ್ಣನವ ರೊಂದಿಗೆ ಮಾಡಿದ ಅತ್ಯಂತ ಕೆಳಮಟ್ಟದ ಅಪಹಾಸ್ಯದ ಪಾತ್ರವನ್ನು ನೋಡಿ ‘ದ್ವಾರಕೀಶ್‌ಗೆ ಇಂಥ ಸ್ಥಿತಿಬಂತಾ?!’ ಎಂದು ಜನ ಆಶ್ಚರ್ಯಪಟ್ಟಿದ್ದು ಸುಳ್ಳಲ್ಲ.
ಆದರೆ ದ್ವಾರಕೀಶರ ಕೈಹಿಡಿದಿದ್ದು ಮಾತ್ರ ಅದೇ ಹಳೇಕಳ್ಳ.

ವಿಷ್ಣು ‘ಆಪ್ತಮಿತ್ರ’ ಚಿತ್ರವನ್ನು ಕುಳ್ಳನಿಗಾಗಿ ಮಾಡಿ ಮೇಲೇಳಲು ನೆರವಾದರು. ನಿರೀಕ್ಷೆಯಂತೆ ಪುಟಿದೆದ್ದ ದ್ವಾರಕೀಶ್ ಅವರ ‘ಚೌಕ’ ಒಂದನ್ನು ಹೊರತುಪಡಿಸಿ ಆನಂತರದ ಉಳಿದೆಲ್ಲ ಚಿತ್ರಗಳೂ ಬಾರೀ ನಷ್ಟಕ್ಕೆ ಕಾರಣವಾದವು. ಆಗಲೂ ಛಲಬಿಡದ ಕುಳ್ಳ ಶಿವಣ್ಣ ಜತೆಗೆ ‘ಆಯುಷ್ಮಾನ್‌ಭವ’ ಮಾಡಿದರೂ ಸಾಲ ಮಾತ್ರ ತೀರಿಸಲಿಕ್ಕಾಗಲೇ ಇಲ್ಲ. ಈ ಮಧ್ಯೆ ದ್ವಾರಕೀಶ್ ಮಕ್ಕಳು ತಮಿಳು ಧಾರವಾಹಿ ಸೇರಿದರು. ಕಳೆದ ಏಪ್ರಿಲ್‌ನಲ್ಲಿ ಪತ್ನಿ ಅಂಬುಜಾ ಸಹ ತೀರಿಕೊಂಡರು. ವಾಸದ ಮನೆಯನ್ನು ರಿಷಬ್ ಶೆಟ್ಟಿಗೆ ಮಾರಿಕೊಂಡರು. ಮತ್ತೆ ಮೇಲೇಳುವುದಕ್ಕೆ ವಿಷ್ಣುವರ್ಧನ್‌ರಂಥ ಗೆಳೆಯರಿಲ್ಲ, ಸಹಾಯಮಾಡಿ ಸೈಲೆಂಟಾಗಿರುವ ಅಪ್ಪೂ ಕೂಡ ಬದುಕಿಲ್ಲ. ಮಾಡಿದ ಸಾಲ ಕುತ್ತಿಗೆಗೆ ಬಂದಿದೆ.

ಸಾಲಕೊಟ್ಟ ಕೆಸಿಎನ್ ಚಂದ್ರು ಅವರೂ ಬದುಕಿಲ್ಲ. ಇವೆಲ್ಲ ಬೆಳವಣಿಗೆಗಳು ಕನ್ನಡದ ದೈತ್ಯ ಕುಳ್ಳನನ್ನು ಬದುಕಿನ ಸಂಧ್ಯಾಸಮಯದಲ್ಲಿ ರೋದಿಸುವಂತೆ ಮಾಡಿದೆ. ದ್ವಾರಕೀಶ್ ಅವರ ಸಾಧನೆಯನ್ನು ಚಿತ್ರರಂಗ ಮರೆಯಲಸಾಧ್ಯ. ೩೫ ಎಂಎಂಗೆ ಸೀಮಿತವಾಗಿದ್ದ ಕನ್ನಡಚಿತ್ರಕ್ಕೆ ಸಾಲುಸಾಲು ಸಿನಿಮಾಸ್ಕೋಪ್
ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಅವರದ್ದು. ವಿದೇಶದಲ್ಲಿ ಮೊದಲಬಾರಿಗೆ ಚಿತ್ರೀಕರಣ ಮಾಡಿದ ಕೀರ್ತಿ ಅವರಿಗೇ ಸೇರಬೇಕು. ಕಿಶೋರ್ ಕುಮಾರ್, ಕುಮಾರ ಸಾನು ಅಂಥ ಗಾಯಕರನ್ನು ಕನ್ನಡಕ್ಕೆ ಪರಿಚಯಿಸಿದ್ದೂ ಈ ಕುಳ್ಳನೇ.

ಬಪ್ಪಿಲಹಿರಿ, ವಿಜಯಾನಂದ್ ರಂಥ ಅಂದಿನ ಪಾಶ್ಚಿಮಾತ್ಯ ಶೈಲಿಯ ಸಂಗೀತ ನಿರ್ದೇಶಕರು ಕನ್ನಡಕ್ಕೆ ಬರಲು ಇವರೇ ಕಾರಣ. ಆಗಿನ ಕಾಲದ ಅತಿಹೆಚ್ಚು ಗ್ರಾಫಿಕ್ಸ್ ಬಳಸಲಾದ ಚಿತ್ರ ‘ಪ್ರಂಚಂಡಕುಳ್ಳ’ ಚಿತ್ರ ಮಾಡಿ ಗೆದ್ದಿದ್ದರು. ಆದರೆ ಒಬ್ಬ ನಿರ್ಮಾಪಕನಾಗಿ ಪಟ್ಟಾಭಿರಾಮರಂತೆ ಹುಷಾರಾಗಿ ಹಿಂದೆ ಸರಿದವರಲ್ಲ. ಕೇವಲ ಲಾಭಕ್ಕಾಗಿ ಚಿತ್ರಮಾಡಿದವರಲ್ಲ. ಲಾಭಮಾಡಿ ಅನ್ಯ ಉದ್ದಿಮೆಗಳಲ್ಲಿ ತೊಡಗಿಸಿದವರಲ್ಲ. ರಾಜಕೀಯದ ಲಾಭಕ್ಕಾಗಿ, ಅಕ್ರಮ ಆಸ್ತಿ ಬಳಸಿ ನಷ್ಟ ತೋರಲಿಕ್ಕೆ, ಕಪ್ಪುಹಣ ಬಿಳಿ ಮಾಡಿ ಕೊಳ್ಳುವುದಕ್ಕಾಗಿ, ಎಲ್ಲಕ್ಕಿಂತ ಮಿಗಿಲಾಗಿ ಶೋಕಿಗಾಗಿ, ತಿಕ್ಕಲು- ತೆವಲು- ಹುಚ್ಚಾಟಕ್ಕಾಗಿ ಚಿತ್ರಗಳನ್ನು ಮಾಡಿದವ ರಲ್ಲವೇ ಅಲ್ಲ ದ್ವಾರಕೀಶ್.

ಕನ್ನಡ ಚಿತ್ರರಂಗದ ಅಪ್ಪಟ ಕರ್ಮಜೀವಿಯಾದ ಕನ್ನಡಿಗರ ಪ್ರೀತಿಯ ಕುಳ್ಳನಿಗೆ ಇಂದು ಇಂಥ ದುಸ್ಥಿತಿ ಬಂದಿರುವುದು ಚಿತ್ರರಂಗದ ದುರಂತ. ಚಿತ್ರರಂಗದಲ್ಲಿ ಇಂಥವರ ಸ್ಥಿತಿ ನೋಡುತ್ತಿದ್ದರೆ ಪಾರ್ವತಮ್ಮ ನೆನಪಾಗುತ್ತಾರೆ. ಅಮ್ಮನವರು ಆರಂಭದ ರಾಜಣ್ಣನವರ ಆರ್ಥಿಕ ವ್ಯವಹಾರ ಗಳನ್ನು ಕೈಗೆತ್ತಿಕೊಂಡು ನಿಭಾ ಯಿಸಿದ್ದರಿಂದಲೇ ದೊಡ್ಡಮನೆ ಇಂದಿಗೂ ಲಾಭ- ನಷ್ಟದಲ್ಲಿ ಸಮತೋಲ ಕಾಪಾಡಿಕೊಂಡು ಬಂದಿದೆ. ಆದರೆ ಅನೇಕ ನಟರು, ನಿರ್ಮಾಪಕರು ತಮ್ಮ ಕಡೇಗಾಲ ದಲ್ಲಿ ಹೀನಾಯ ಸ್ಥಿತಿ ತಲುಪಿ ಬೀದಿಗೆ ಬಂದಿದ್ದನ್ನು ನಾವು ನೋಡಿದ್ದೇವೆ. ಅಂಥ ದುರ್ಗತಿ ದ್ವಾರಕೀಶ್ ಗೆ ಬಾರದಿರಲಿ. ಕಳೆದ ಎರಡು ವರ್ಷಗಳಿಂದ ಅನೇಕ ಹಿರಿ-ಕಿರಿಯ ಕಲಾವಿದರನ್ನು ಚಿತ್ರರಂಗ ಕಳೆದುಕೊಂಡಿದೆ. ಆಗೆಲ್ಲ ಮಾಧ್ಯಮಗಳಲ್ಲಿ ‘….ಕಳೆದು ಕೊಂಡಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟ’ ಎಂದು ಕಂಬನಿ ಹಾಕುವ ಬದಲು ಬದುಕಿರುವಾಗಲೇ ದ್ವಾರಕೀಶ್ ಏನಾದರೂ ಮಾಡಬೇಕು.

ಅವರ ನಷ್ಟ ತುಂಬಲು ಚಿತ್ರರಂಗದ ಒಂದಿಬ್ಬರು ಸೇರಿದರೂ ಸಾಕು, ದ್ವಾರಕೀಶ್ ಬದುಕಲ್ಲಿ ನಗು ಅರಳುತ್ತದೆ. ಸಮಾಜಕ್ಕೆ ಅವರು ಏನೂ ಮಾಡದಿದ್ದರೂ ಆರು ದಶಕಗಳಕಾಲ ತೆರೆಯ ಮೇಲೆ ಕನ್ನಡಿಗರನ್ನು ನಕ್ಕುನಲಿಸಿದ ನಟನಿಗೆ ಇದಕ್ಕಿಂತ ದೊಡ್ಡ ಸಹಾಯ ಬೇಕಿಲ್ಲ. ಹಾಗೊಮ್ಮೆ ದ್ವಾರಕೀಶ್ ಮತ್ತೇ ಸ್ಥಿತಿವಂತರಾದರೆ ಅವರು ಮಾಡುವ ಕೆಲಸ ಮತ್ತದೇ ‘ಸಿನಿಮಾ’! ಬನ್ನಿ ದ್ವಾರಕೀಶ್ ಇನ್ನೂ ಬದುಕಿದ್ದಾರೆ !