Saturday, 14th December 2024

ಶಸ್ತ್ರಚಿಕಿತ್ಸೆ ಯಾರು ಮಾಡಬೇಕು ?

ವೈದ್ಯಕೀಯ

ಡಾ.ಕಿರಣ್ ವಿ.ಎಸ್

ಕೆಲ ದಶಕಗಳ ಹಿಂದೆ ಸಂಸ್ಕೃತ ಕಲಿಯುವವರು ಕಡಿಮೆಯಾಗಿದ್ದಾರೆ ಎನ್ನುವ ಕಾರಣಕ್ಕೆ ಅಂದಿನ ಸರಕಾರ ಒಂದು ಭಯಂಕರ
ಆಲೋಚನೆ ಮಾಡಿತು. ಪ್ರೌಢಶಾಲೆಯ ಮಟ್ಟದಲ್ಲಿ ಸಂಸ್ಕೃತ ತೆಗೆದುಕೊಂಡವರಿಗೆ ಧಾರಾಳವಾಗಿ ಅಂಕ ಕೊಡುವುದು!

ಮೂರು ವರ್ಷಗಳ ಅವಧಿಯಲ್ಲಿ ಸಣ್ಣವಯಸ್ಸಿನ ಮಕ್ಕಳು ಸಂಸ್ಕೃತ ಕಲಿಯುವುದು ಹೇಗೆ? ಚಿಂತೆಯಿಲ್ಲ; ಶೇಕಡಾ 15 ಅಂಕಗಳ
ಪ್ರಶ್ನೆಗಳನ್ನು ಸಂಸ್ಕೃತದಲ್ಲಿ ಉತ್ತರಿಸಿದರೆ ಸಾಕು. ಉಳಿದ 85 ಅಂಕಗಳ ಪ್ರಶ್ನೆಗಳನ್ನು ಕನ್ನಡ, ಇಂಗ್ಲಿಷ್, ಇಲ್ಲವೇ ಮರಾಠಿ ಭಾಷೆ ಗಳಲ್ಲಿ ಉತ್ತರಿಸಬಹುದು ಎಂಬ ಏರ್ಪಾಡು. ಮಕ್ಕಳಿಗೆ ಸಂಸ್ಕೃತ ಭಾಷಾಭಿಮಾನ ಹೆಚ್ಚಾಗಿ, ಇನ್ನೆರಡು ದಶಕಗಳಲ್ಲಿ ದೇಶದ ತುಂಬಾ ಕಾಳಿದಾಸ, ಭಾರವಿ, ದಂಡಿ, ಮಾಘರಂಥ ಕವಿಗಳು ಅಲೆದಾಡುತ್ತಾರೆ ಎಂಬ ಭ್ರಮೆ.

ಯಾವುದೇ ಪರಿಣಾಮಗಳ ಬಗ್ಗೆ ಹಿಂದೆ – ಮುಂದೆ ಆಲೋಚಿಸದೇ ಈ ನಿರ್ಧಾರವನ್ನು ಸರಕಾರ ಜಾರಿಗೊಳಿಸಿತ್ತು. ಆದದ್ದೇ ಬೇರೆ! ಅಂಕಗಳ ಆಸೆಗೆ ಪ್ರೌಢಶಾಲೆಯಲ್ಲಿ ಸಂಸ್ಕೃತ ತೆಗೆದುಕೊಂಡವರಿಗೆ ಪದವಿಪೂರ್ವ ಓದಿನಲ್ಲಿ ತಮಗೆ ಬೇಕಾದ ವಿಷಯ ಪಡೆಯ ಲಷ್ಟೇ ಇದು ನೆರವಾಯಿತು! ಕನ್ನಡ ಪ್ರಥಮ ಭಾಷೆ ಪರೀಕ್ಷೆಯಲ್ಲಿ 60 ಮುಟ್ಟುವುದು ತ್ರಾಸವಾಗಿದ್ದಾಗ, ಸಂಸ್ಕೃತ ಪರೀಕ್ಷೆ ಯನ್ನು ಕನ್ನಡದಲ್ಲಿ ಬರೆದವರು ಆರಾಮವಾಗಿ 90 ಅಂಕ ಪಡೆಯುತ್ತಿದ್ದರು!

ಈ 30 ಅಂಕಗಳ ಅಂತರ ಎಷ್ಟೋ ಸಮರ್ಥ ವಿದ್ಯಾರ್ಥಿಗಳ ಪಾಲಿಗೆ ದುಬಾರಿಯಾಗುತ್ತಿತ್ತು. ಒಂದೆರಡು ವರ್ಷಗಳಲ್ಲಿ ಪದವಿ ಪೂರ್ವ ಕಾಲೇಜುಗಳು ಈ ಸಮಸ್ಯೆಯನ್ನು ಗ್ರಹಿಸಿದವು. ತಮ್ಮ ಕಾಲೇಜಿನ ಪ್ರವೇಶಕ್ಕೆ ಭಾಷೆಗಳಲ್ಲಿನ ಅಂಕಗಳನ್ನು ಹೊರತು ಪಡಿಸಿ, ಕೇವಲ ಗಣಿತ, ವಿಜ್ಞಾನ, ಸಮಾಜ ವಿಷಯಗಳಲ್ಲಿ ಬಂದ ಅಂಕಗಳನ್ನು ಮಾತ್ರ ಪರಿಗಣಿಸಿದವು.  ಮೊದಮೊದಲು ಇದನ್ನು ವಿರೋಧಿಸಿದ ಸರಕಾರ, ನಂತರ ತಾನೂ ಇದನ್ನೇ ಅನುಸರಿಸಿತು!

ಮೊದಲೇ ಅಂಕಗಳ ಬೆನ್ನು ಬಿದ್ದಿದ್ದ ವಿದ್ಯಾರ್ಥಿಗಳು ಭಾಷೆಗಳನ್ನು ನಿರ್ಲಕ್ಷ್ಯ ಮಾಡಿದರು. ಭಾಷೆಗಳಲ್ಲಿ ಜಸ್ಟ್ ‌-ಪಾಸ್ ಆದರೆ
ಸಾಕು ಎನ್ನುವ ಮನೋಭಾವ ಬೆಳೆಯಿತು. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬಂದ ಮೇಲಂತೂ ಪದವಿ ಪೂರ್ವ ವಿಜ್ಞಾನದಲ್ಲಿ ಭಾಷೆಗಳ ಕ್ಲಾಸು ಖಾಲಿ-ಖಾಲಿ! ಸಂಸ್ಕೃತ ಭಾಷೆ ಇದರಿಂದ ಎಷ್ಟು ಬೆಳೆಯಿತೋ ತಿಳಿಯದು. ಆದರೆ, ಅನೇಕ ತಲೆಮಾರುಗಳು ಭಾಷೆಯ ಕಲಿಕೆಯನ್ನು ಅವಗಣನೆ ಮಾಡಿ, ಅದು ನೀಡಬಹುದಾಗಿದ್ದ ಅತ್ಯುನ್ನತ ಅನುಭವಗಳಿಂದ ವಂಚಿತವಾದವು.

ಇದು ನಮ್ಮ ಸರಕಾರಗಳ ಮಾದರಿ. ವ್ಯವಸ್ಥೆಗೆ ಪ್ರತಿಯೊಂದಕ್ಕೂ ಶಾರ್ಟ್ ಕಟ್ ಬೇಕು. ಆದರೆ, ಅದು ಪರಿಣಾಮಕಾರಿಯೇ? ಅದರಿಂದ ಅಪೇಕ್ಷಿತ ಫಲ ದಕ್ಕಿದೆಯೇ? ಎಲ್ಲಿ ಸೋತಿದ್ದೇವೆ? – ಇಂತಹ ಆತ್ಮಾವಲೋಕನಗಳು ನಿಷಿದ್ಧ! ತಳಪಾಯ ಭದ್ರ
ವಾಗಿರುವ ಭವ್ಯಮಹಲ್ ಯಾರದೋ ನಿರ್ಲಕ್ಷ್ಯದಿಂದ ಹಾಳಾಗಿದೆ ಎಂದರೆ, ಅದನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡುವು ದಿಲ್ಲ. ಬದಲಿಗೆ, ಏಕಾಏಕಿ ಇದು ವಾಸಕ್ಕೆ ಯೋಗ್ಯ ಎಂದು ಘೋಷಿಸಿಬಿಡುತ್ತದೆ!

ಕಟ್ಟಡದ ಒಳಗೆ ಬಂದವರು ಅದರ ಹೀನಾಯ ಸ್ಥಿತಿಯನ್ನು ಪ್ರಶ್ನಿಸಿದರೆ, ಪಕ್ಕದ ಕಟ್ಟಡ ಗಟ್ಟಿಮುಟ್ಟಾಗಿದೆ. ಅಲ್ಲಿ ಉಳಿದುಕೊಳ್ಳಿ ಎಂದು ಜಾರಿಕೊಳ್ಳುತ್ತದೆ! ಆಯುರ್ವೇದ ನಮ್ಮ ದೇಶದ ಪ್ರಾಚೀನ ವೈದ್ಯ ಪದ್ಧತಿ. ಎಷ್ಟೋ ಶತಮಾನಗಳು ರಾರಾಜಿಸಿದ ಚಿಕಿತ್ಸಾ ವಿಧಾನ. ನಾನಾ ಕಾರಣಗಳಿಂದ ಅವಗಣನೆಗೆ ಒಳಗಾಗಿದ್ದ ಇದರ ಪುನರುತ್ಥಾನ ಆಲೋಚನಾರ್ಹ. ಅದಕ್ಕೊಂದು ಸಮಗ್ರ ಕಾರ್ಯತಂತ್ರವೇ ಬೇಕು.

ಸಂಸ್ಕೃತ ತಜ್ಞರು, ಆಯುರ್ವೇದ ಪಂಡಿತರು, ದೇಶೀ ಔಷಧ ತಜ್ಞರು, ಸಸ್ಯಶಾಸ್ತ್ರಜ್ಞರು, ಪ್ರಾಣಿತಜ್ಞರು, ವಂಶಪಾರಂಪರ್ಯವಾಗಿ ನಾಟಿವೈದ್ಯಚಿಕಿತ್ಸೆ ನೀಡುತ್ತಿರುವವರು – ಹೀಗೆ ಹಲವಾರು ವಿಜ್ಞಾನಿಗಳಿರುವ ಸಮಿತಿಯಿಂದ ಕಾರ್ಯಸೂಚಿ ತಯಾರಾಗ
ಬೇಕು. ಪುರಾತನ ಆಯುರ್ವೇದ ಗ್ರಂಥಗಳನ್ನು ಸಂಪಾದಿಸಿ, ಪರಿಷ್ಕರಿಸಬೇಕು.

ಸಾವಿರಾರು ವರ್ಷಗಳ ಹಿಂದೆ ಇದ್ದ ಪದಗಳ ಅರ್ಥ; ಸಸ್ಯ/ಪ್ರಾಣಿಗಳ ಹೆಸರು; ವಿವರಣೆಯನ್ನು ಆಧರಿಸಿದ ಚಿಕಿತ್ಸೆಯ ಕ್ರಮ ವಿಧಾನ – ಮುಂತಾದ ಮೂಲಭೂತ ಅಂಶಗಳನ್ನು ನಿರ್ಧರಿಸಬೇಕು. ಪುರಾತನ ಪಠ್ಯಗಳನ್ನು ಪ್ರಸ್ತುತ ಕಾಲಘಟ್ಟದಲ್ಲಿ ಅನು ಸರಿಸಲು ಯೋಗ್ಯವಾಗುವಂತೆ ನಿರ್ವಹಿಸಬೇಕು.

ದೇಶದ ತುಂಬಾ ಹಬ್ಬಿರುವ ಆಯುರ್ವೇದ ಕಾಲೇಜುಗಳ ಮೌಲ್ಯಮಾಪನ ಮಾಡಿ, ಕಟ್ಟುನಿಟ್ಟಾದ ಗುಣಮಟ್ಟ ನಿಷ್ಕರ್ಷೆ ಮಾಡ ಬೇಕು. ಆಯುರ್ವೇದ ವಿದ್ಯಾರ್ಥಿಗಳಿಗೆ ತಜ್ಞ ಸಮಿತಿ ನಿರ್ಧರಿಸಿರುವ ವೈಜ್ಞಾನಿಕ ಪಠ್ಯಕ್ರಮದಲ್ಲಿ ಕಿಂಚಿತ್ ದೋಷವೂ ಬಾರ ದಂತೆ ಅತ್ಯುನ್ನತ ಮಟ್ಟದ ಶಿಕ್ಷಣ ನೀಡಬೇಕು. ಆಯುರ್ವೇದ ವೈದ್ಯರು ಕೇವಲ ಆಯುರ್ವೇದದ ಚಿಕಿತ್ಸೆಯನ್ನಷ್ಟೇ ನೀಡುವಂತೆ ಕಾನೂನು ಮಾಡಬೇಕು.

ಇದಕ್ಕೆ ಪೂರಕವಾಗಿ ಸರಕಾರವೇ ಆಯುರ್ವೇದ ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ನಿರ್ಮಿಸಿ ಪ್ರೋತ್ಸಾಹಿಸಬೇಕು. ಆಯುರ್ವೇದ ಶಿಕ್ಷಣ ಎನ್ನುವುದು ಆಧುನಿಕ ವೈದ್ಯ ಪದ್ಧತಿಗೆ ನುಗ್ಗುವ ಕಳ್ಳಮಾರ್ಗ ಎನ್ನುವ ಜನರ ಭಾವನೆಯನ್ನು ಬದಲಾಯಿಸಬೇಕು. ಆಯುರ್ವೇದ ನಮ್ಮ ದೇಶದ ಸ್ವತ್ತು; ಅದನ್ನು ನಾವೇ ಕಾಪಾಡಿಕೊಳ್ಳಬೇಕು. ಆಯುರ್ವೇದದ ಉಳಿವಿಗೆ ಸರಕಾರದ ನೆರವನ್ನು ವಿರೋಧಿಸುವಂಥ ಮಾತುಗಳನ್ನು ಉಪೇಕ್ಷಿಸುವುದೇ ಸೂಕ್ತ!

ಆಯುರ್ವೇದದ ಕುರಿತಾಗಿ ಹೆಚ್ಚಿನ ವ್ಯಾಸಂಗ, ಸಂಶೋಧನೆ ಮಾಡುವವರಿಗೆ ತಜ್ಞರ ಸಮಿತಿಯ ಮೇಲುಸ್ತುವಾರಿಯಲ್ಲಿ ಸರಕಾರ ನೆರವು ನೀಡಬೇಕು. ಉದ್ಯಮಿಗಳನ್ನು ಇದಕ್ಕೆ ಪ್ರೇರೇಪಿಸಿ, ಉದ್ಯೋಗ ಸೃಷ್ಟಿ ಮಾಡಬಹುದು. ಕೇಂದ್ರೀಯ ಮಟ್ಟದಲ್ಲಿ ಆಯು ರ್ವೇದ ನಿಗಮ ಸ್ಥಾಪನೆಯಾದರೆ ಮತ್ತಷ್ಟು ಒಳ್ಳೆಯದು. ಆಯುರ್ವೇದವೆಂದರೆ ಇಷ್ಟ ಬಂದುದ್ದನ್ನೆಲ್ಲಾ ಯದ್ವಾತದ್ವಾ ಮಾಡ ಬಹುದು ಎಂಬ ನಿಕೃಷ್ಟ ಭಾವನೆ ಇರಬಾರದು. ವೈಜ್ಞಾನಿಕತೆಗೆ ಇಂಬು ನೀಡುವಂತೆ, ಆಧುನಿಕ ಸಂಶೋಧನೆಯ ನಿಯಮಗಳು ಒಪ್ಪುವಂತೆ ಗುಣಮಟ್ಟದ ಸಾಧನೆ ಆಗಬೇಕು. ಇಲ್ಲವಾದರೆ ಪ್ರಪಂಚದ ಲೇವಡಿ ಶತಸಿದ್ಧ!

ಅದಕ್ಕೆ ಆಸ್ಪದ ಇರಬಾರದು. ಆಯುರ್ವೇದವನ್ನು ಪ್ರೋತ್ಸಾಹಿಸುವುದು ಹೀಗೆ. ಮೂರು ತಿಂಗಳ ಬ್ರಿಜ್ – ಕೋರ್ಸ್ ಮಾಡುವಂಥ ಸಲಹೆಗಳನ್ನು ಸರಕಾರಕ್ಕೆ ಯಾರು ನೀಡುತ್ತಾರೋ ತಿಳಿಯದು! ಶಸ್ತ್ರಚಿಕಿತ್ಸೆಯ ವಿಷಯದಲ್ಲಿ ಆಯುರ್ವೇದ ಬಹಳ ಪ್ರಾಚೀನ ಸ್ಥಿತಿಯಲ್ಲಿಯೇ ಇದೆ. ಅಂದಿನ ಕಾಲದ ಶಸ್ತ್ರಚಿಕಿತ್ಸೆಯ ವಿಧಾನಗಳು ಇಂದಿಗೆ ಹೊಂದುವುದಿಲ್ಲ. ಶಸ್ತ್ರಚಿಕಿತ್ಸೆ ಎಂದರೆ ಕತ್ತರಿಸು ವುದು, ಹೊಲಿಯುವುದು ಅಲ್ಲ!

ಅದೊಂದು ಅತ್ಯಂತ ಸೂಕ್ಷ್ಮ ವಿಜ್ಞಾನ. ಕೆಲವೊಮ್ಮೆ ಮಿಲಿಮೀಟರ್ ವ್ಯತ್ಯಾಸ ಕೂಡ ಆಗುವಂತಿಲ್ಲ. ಈ ಮಟ್ಟದ ಪರಿಣತಿ
ಯನ್ನು ಸಾಧಿಸುವುದಕ್ಕೆ ಎಷ್ಟೋ ವರ್ಷಗಳ ಅನುಭವ ಬೇಕು. ನೈಜಾರ್ಥದಲ್ಲಿ, ಶಸ್ತ್ರಚಿಕಿತ್ಸೆ ಎನ್ನುವುದು ಒಬ್ಬರ ಸಾಧನೆಯಲ್ಲ; ಒಂದು ತಂಡದ ಪ್ರಯತ್ನ. ಶಸ್ತ್ರಚಿಕಿತ್ಸೆಗೆ ಮುನ್ನ ಕಾಯಿಲೆ ಪತ್ತೆಗೆ ಅನುಸರಿಸುವ ನಿಖರವಾದ ವಿಧಾನ; ಎಂತಹ ಶಸ್ತ್ರಚಿಕಿತ್ಸೆ
ಮಾಡಬೇಕೆನ್ನುವ ನಿರ್ಧಾರ; ಕಾಯಿಲೆಯ ಹಂತವನ್ನು ಅನುಸರಿಸಿ ಆರೈಕೆಯ ಮಟ್ಟದ ಚಿಂತನೆ; ಅರಿವಳಿಕೆಯ ಹಂತ ಮತ್ತು ಕಾರ್ಯಸೂಚಿ; ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಆಗಬಹುದಾದ ಅನಾಹುತಗಳಿಗೆ ಪೂರ್ವಸಿದ್ಧತೆ; ಶಸ್ತ್ರಚಿಕಿತ್ಸೆ ನಂತರದ
ಅವಧಿಯ ನಿಗಾ; ಲಭ್ಯವಿರುವ ನೂರಾರು ಔಷಧಗಳ ಪೈಕಿ ಆಯಾ ರೋಗಿಗೆ ನೀಡಬಹುದಾದ ಔಷಧಗಳ ನಿಷ್ಕೃಷ್ಟ ಲೆಕ್ಕಾಚಾರ; ಸೋಂಕು ಆಗದಂತೆ ನೋಡಿಕೊಳ್ಳಬೇಕಾದ ವಿಧಾನ; ರೋಗಿ ಗುಣ ಹೊಂದುವಾಗ ಗಮನಿಸಬೇಕಾದ ಪದ್ಧತಿ – ಹೀಗೆ ಇದೊಂದು ಸಂಕೀರ್ಣ ಸರಣಿ!

ಆಧುನಿಕ ವೈದ್ಯ ಪದ್ಧತಿ ಈ ಮಟ್ಟ ತಲುಪುವುದಕ್ಕೆ ನೂರಾರು ವರ್ಷಗಳು ಹಿಡಿದಿವೆ. ಇಷ್ಟಾಗಿಯೂ ಅವಘಡಗಳು ಸಂಭವಿಸು ತ್ತವೆ. ಪ್ರಪಂಚದಲ್ಲಿ ದಿನವೂ ಲಕ್ಷಾಂತರ ಶಸ್ತ್ರಚಿಕಿತ್ಸೆಗಳು ಆಧುನಿಕ ವೈದ್ಯಪದ್ಧತಿಯ ನಿಯಮಗಳ ಅನುಸಾರ ನಡೆಯುತ್ತವೆ. ಪ್ರತಿಯೊಂದು ಅವಘಡವನ್ನೂ ದಾಖಲಿಸಿ, ಚರ್ಚಿಸಿ, ಆ ತಪ್ಪು ಮತ್ತೊಮ್ಮೆ ಮರುಕಳಿಸದಂತೆ ಪಾಠ ಕಲಿಯಲಾಗುತ್ತದೆ. ಮೂವತ್ತು ವರ್ಷಗಳ, ಸಾವಿರಾರು ಶಸ್ತ್ರಚಿಕಿತ್ಸೆಗಳ ಅನುಭವ ಇರುವ ಶಸ್ತ್ರಚಿಕಿತ್ಸಾ ತಜ್ಞರು ಕೂಡ ತಾವು ಪರಿಪೂರ್ಣ ಎಂದು ಭಾವಿಸುವುದಿಲ್ಲ. ಈ ಕ್ಷೇತ್ರದ ಸಂಕೀರ್ಣತೆ ಇಂತಹದ್ದು. ಒಂದು ವಾರ ಕಲಿಯದಿದ್ದರೆ ಹಿಂದೆ ಬಿದ್ದಂತೆ!

ಹೀಗಿರುವಾಗ ಸರಕಾರ ಏಕಾಏಕಿ ಆಯುರ್ವೇದದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನೀಡಲು ಅನುಮತಿ ನೀಡುವುದು ಎಷ್ಟು ಸರಿ ಎನ್ನುವ ಜಿಜ್ಞಾಸೆ. ಅದಕ್ಕೆ ಸಂಬಂಧಿಸಿದ ಪುಸ್ತಕಗಳು ಯಾವುವು? ಅವರು ಏನನ್ನು ಓದಬೇಕು? ಎರಡೂವರೆ ಸಾವಿರ ವರ್ಷಗಳ ಹಿಂದಿನ ಪಠ್ಯ ಓದಿ ಇಂದು ಶಸ್ತ್ರಚಿಕಿತ್ಸೆ ಮಾಡಲಾದೀತೇ? ಅರಿವಳಿಕೆಗೆ ಯಾವ ಆಯುರ್ವೇದ ಔಷಧ ನೀಡುತ್ತಾರೆ? ರೋಗಿಗೆ ಏನಾದರೂ
ಅವಗಢಗಳಾದರೆ ಯಾರು ಹೊಣೆ? ಶಸ್ತ್ರಚಿಕಿತ್ಸೆಯ ನಂತರದ ನಿಗಾ ಸಮಯದಲ್ಲಿ ಯಾವ ಆಯುರ್ವೇದ ಔಷಧ ಬಳಸಬೇಕು? ಸರ್ವೋಚ್ಚ ನ್ಯಾಯಾಲಯ ಎರಡು ವಿಭಿನ್ನ ಚಿಕಿತ್ಸಾ ಪದ್ಧತಿಗಳನ್ನು ಒಗ್ಗೂಡಿಸಬಾರದು ಎಂದು ತೀರ್ಪು ನೀಡಿದೆ.

ಹೀಗಿರುವಾಗ, ಶಸ್ತ್ರಚಿಕಿತ್ಸೆ ಮಾತ್ರ ಆಯುರ್ವೇದದ ವೈದ್ಯರು ಮಾಡಿ, ಉಳಿದದ್ದನ್ನು ಆಧುನಿಕ ವೈದ್ಯ ಪದ್ಧತಿ ಮಾಡಲಾಗದು, ಅದು ನ್ಯಾಯಾಲಯದ ಅಧಿಸೂಚನೆಗೆ ವಿರುದ್ಧ! ಇದರ ನಿರ್ವಹಣೆ ಹೇಗೆ? ಕಟ್ಟಕಡೆಗೆ, ತಾನು ಯಾರಿಂದ ಚಿಕಿತ್ಸೆ ಪಡೆಯಬೇಕು ಎಂಬುದರ ಅಂತಿಮ ನಿರ್ಧಾರ ರೋಗಿಯದ್ದೇ. ಶಸ್ತ್ರಚಿಕಿತ್ಸೆ ಯಾರು ಮಾಡಬೇಕು ಎಂಬುದರ ಬಗ್ಗೆ ಪ್ರತಿಯೊಬ್ಬರಿಗೂ ಸ್ಪಷ್ಟತೆ ಇರಬೇಕು.

ಪ್ರತಿಕ್ಷಣವೂ ಅಮೂಲ್ಯವಾಗುವ ತುರ್ತುಚಿಕಿತ್ಸೆಯ ಕಾಲದಲ್ಲಿ ಅತ್ಯುತ್ತಮ ಚಿಕಿತ್ಸೆಯೇ ಎಲ್ಲರಿಗೂ ಲಭಿಸಬೇಕು. ಅಂತಹ ಸಂದರ್ಭಗಳಲ್ಲಿ ನಮ್ಮ ಜೀವ ಉಳಿಸಲು ಯಾರು ಹಿತವರು ಎಂಬುದು ಅಂತಿಮ ಕ್ಷಣದ ನಿರ್ಧಾರ ಆಗಬಾರದು. ನಮ್ಮ
ಜೀವನ್ಮರಣದ ಪ್ರಶ್ನೆ ಬಂದಾಗ ನಮ್ಮನ್ನು ಉಳಿಸಬೇಕಾದ್ದು ಸರಕಾರದ ನಿರ್ಧಾರಗಳಲ್ಲ; ನಮ್ಮದೇ ಬುದ್ಧಿಪೂರ್ವಕ ಆಲೋ ಚನೆ!

ಇಲ್ಲವಾದರೆ, ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದವನ ಕತೆಯಾದೀತು!