ಮೂರ್ತಿ ಪೂಜೆ
ಆರ್.ಟಿ.ವಿಠ್ಠಲಮೂರ್ತಿ
ಹದಿನೇಳು ವರ್ಷಗಳ ನಂತರ ಲಿಂಗಾಯತ ನಾಯಕತ್ವದ ಕಿರೀಟ ಯಡಿಯೂರಪ್ಪ ಅವರ ನೆತ್ತಿಯಿಂದ ಜಾರತೊಡಗಿದೆ. ಹೀಗೆ ಜಾರುತ್ತಿರುವ ಕಿರೀಟ ಸಿಎಂ ಗದ್ದುಗೆಯ ಮೇಲೆ ಕುಳಿತ ತಮ್ಮ ನೆತ್ತಿಯ ಮೇಲೆ ಸೆಟ್ಲಾಗುತ್ತದೆ ಅಂತ ಬಸವರಾಜ ಬೊಮ್ಮಾಯಿ ನಂಬಿದ್ದಾರಾದರೂ, ಅದು ನಿಂತಿರುವ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲರ ನೆತ್ತಿಯ ಮೇಲೆ ಕೂರುವ ಲಕ್ಷಣಗಳು ಜಾಸ್ತಿಯಾಗಿವೆ.
ಅಂದ ಹಾಗೆ ಈ ಕಿರೀಟ ಹದಿನೇಳು ವರ್ಷಗಳ ಹಿಂದೆ ರಾಮಕೃಷ್ಣ ಹೆಗಡೆ ನೆತ್ತಿಯಿಂದ ಉರುಳಿದಾಗ ಎರಡೂ ಕೈ ಚಾಚಿ ತಮ್ಮ ಸುಪರ್ದಿಗೆ ತೆಗೆದುಕೊಂಡವರು ಯಡಿಯೂರಪ್ಪ. ಅಲ್ಲಿಂದ ಇಲ್ಲಿಯವರೆಗೆ ಸುಭದ್ರವಾಗಿ ಅದು ಯಡಿಯೂರಪ್ಪ ಅವರ ನೆತ್ತಿಯ ಮೇಲಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅದನ್ನು ಕಸಿದುಕೊಳ್ಳಲು ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಯತ್ನಿಸಿದ್ದರಾದರೂ, ಅದು ಸಫಲವಾಗಿರಲಿಲ್ಲ.
2018ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ನೂರಾ ನಾಲ್ಕು ಸೀಟುಗಳನ್ನು ಗೆದ್ದಿದ್ದು ಇದಕ್ಕೆ ಸಾಕ್ಷಿ. ಹೀಗಾಗಿಯೇ ಶ್ರಮ ವಹಿಸಿ 2019 ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಿದ ಯಡಿಯೂರಪ್ಪ, ಕರ್ನಾಟಕದ ಮುಖ್ಯಮಂತ್ರಿಯಾದರು. ಅದೇ ರೀತಿ ಲಿಂಗಾ ಯತ ಮತಬ್ಯಾಂಕನ್ನು ಭದ್ರಪಡಿಸಲು ತಮ್ಮದೇ ಸೂತ್ರ ಅನುಸರಿಸಿದರು. ಆದರೆ ಅವರಿಡುತ್ತಿದ್ದ ಹೆಜ್ಜೆ ಬಿಜೆಪಿಯ ನಾಯಕತ್ವವನ್ನು ವಿಜಯೇಂದ್ರ ಅವರಿಗೆ ದಕ್ಕಿಸಿಕೊಡುವ ಯತ್ನ ಅಂತ ವರಿಷ್ಠರು ಭಾವಿಸಿದರು.
ಈ ಹಿನ್ನೆಲೆಯಲ್ಲಿ ರೂಪುಗೊಂಡಿದ್ದೇ ಆಪರೇಷನ್ ಯಡಿಯೂರಪ್ಪ ಕಾರ್ಯಾಚರಣೆ. ಇದರ ಫಲವಾಗಿ ಸಿಎಂ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿದರು. ಅವರ ಜಾಗಕ್ಕೆ ಬಸವರಾಜ ಬೊಮ್ಮಾಯಿ ಬಂದು ಕುಳಿತರು. ಯಾವಾಗ ಈ ಬೆಳವಣಿಗೆ ನಡೆಯಿತೋ? ಇದಾದ ನಂತರ ಯಡಿಯೂರಪ್ಪ ನೆತ್ತಿಯ ಮೇಲಿದ್ದ ಲಿಂಗಾ ಯತ ನಾಯಕತ್ವ ಎಂಬ ಕಿರೀಟದ ಒಳಭಾಗದಲ್ಲಿ ಸವರಿದ್ದ ಫೆವಿಕಾಲ್ ಬಿಗಿ ಕಳೆದುಕೊಂಡು ಅಲುಗಾಡತೊಡಗಿತು. ಪರಿಸ್ಥಿತಿ ಹೀಗಿದ್ದಾಗಲೇ ಕಳೆದ ವಾರ ಕರ್ನಾಟಕಕ್ಕೆ ಬಂದ ಬಿಜೆಪಿಯ ಐರನ್ ಮ್ಯಾನ್ ಅಮಿತ್ ಶಾ ಆ ಕಿರೀಟವೇ ನೆಲೆ ಕಳೆದುಕೊಳ್ಳುವಂತೆ ಮಾಡಿದರು.
ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಎದುರಿಸುತ್ತೇವೆ ಎಂಬ ಅವರ ಘೋಷಣೆಯೇ ಆ ಕೆಲಸವನ್ನು ಸಾಂಗೋಪಾಂಗ ವಾಗಿ ಮಾಡಿತು. ಅಂದ ಹಾಗೆ ಯಡಿಯೂರಪ್ಪ ಅವರ ಜಾಗಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ತಂದು ಕೂರಿಸಲಾಗಿದೆ ಎಂದ ಮಾತ್ರಕ್ಕೆ, ಲಿಂಗಾಯತ ನಾಯಕತ್ವವೂ ವರ್ಗಾವಣೆಯಾಯಿತು ಎಂದರ್ಥವಲ್ಲ. ಹಾಗೆ ವರ್ಗಾವಣೆಯಾಗುತ್ತದೆ ಎಂದಿದ್ದರೆ,ಹಿಂದೆ ಸಿಎಂ ಆದ ಜಗದೀಶ್ ಶೆಟ್ಟರ್ ಕೂಡಾ ಲಿಂಗಾಯತ ನಾಯಕರಾಗಿ ಹೊರಹೊಮ್ಮಬೇಕಿತ್ತು. ಯಾಕೆಂದರೆ ಅವರನ್ನು ಸಿಎಂ ಹುದ್ದೆಯ ಮೇಲೆ ತಂದು ಕೂರಿಸಿದವರೂ ಇದೇ ಯಡಿಯೂರಪ್ಪ. ಆದರೆ 2013 ರ ಚುನಾವಣೆಯ ವೇಳೆಗೆ ಪರಿಸ್ಥಿತಿ ಬೇರೆಯಾಗಿತ್ತು.
ಯಡಿಯೂರಪ್ಪ ಅವರು ಕಮಲ ಪಾಳೆಯ ತೊರೆದು ಕೆಜೆಪಿ ಕೈ ಹಿಡಿದ ಪರಿಣಾಮವಾಗಿ ಬಿಜೆಪಿ ಹೀನಾಯ ಸೋಲು ಕಂಡಿತು. ಎಲ್ಲಿಯವರೆಗೆ ಯಡಿಯೂರಪ್ಪ ಬಿಜೆಪಿಗೆ ಮರಳಲಿಲ್ಲವೋ? ಅಲ್ಲಿಯ ತನಕ ಬಿಜೆಪಿಯ ಗ್ರಾಫ್ ಮೇಲೇಳಲೇ ಇಲ್ಲ. ಇವತ್ತು ಯಡಿಯೂರಪ್ಪ ಹೊರಗೆ ಹೋಗುವ ಸ್ಥಿತಿ ಸೃಷ್ಟಿಯಾಗಿಲ್ಲವಾದರೂ ಅಮಿತ್ ಶಾ ಹೇಳಿಕೆ ಯಡಿಯೂರಪ್ಪ ಅವರನ್ನು ಸೈಡ್ ಲೈನಿಗೆ ಸರಿಸುವ ಮುನ್ಸೂಚನೆ ಎಂಬುದಂತೂ ನಿಜ. ಹಾಗೊಂದು ವೇಳೆ ಪಕ್ಷ ಸಾಮೂಹಿಕ ನಾಯಕತ್ವ ದಲ್ಲಿ ಮುಂದುವರೆಯುತ್ತದೆ ಅಂತ ಅಮಿತ್ ಶಾ ಹೇಳಿದ್ದರೂ ಆಟಕ್ಕೆ ಈಗಿನ ವೇಗ ಸಿಗುತ್ತಿರಲಿಲ್ಲ. ಅರ್ಥಾತ್, ಅಮಿತ್ ಶಾ ಅವರ ಹೇಳಿಕೆ ಯಡಿಯೂರಪ್ಪ ಬಿಜೆಪಿಯ ಮಾರ್ಗದರ್ಶಕ್ ಸ್ಥಾನಕ್ಕೆ ಸೂಟಬಲ್ಲು ಎಂಬ ಸಂದೇಶವನ್ನು ರವಾನಿಸಿದೆ.
ಇಂತಹ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಪಕ್ಷದ ನಾಯಕರ ವಿರುದ್ಧ ತಿರುಗಿ ಬೀಳುತ್ತಾರೆ ಅಂತಲೂ ಅಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ನೂರೈವತ್ತು ಸ್ಥಾನ
ಗಳಿಸಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ, 2024 ರ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತೈದು ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವ ಅವರ ಉತ್ಸಾಹ ವನ್ನು ಕುಗ್ಗಿಸಿದೆ ಎಂಬುದು ಮಾತ್ರ ನಿಜ. ಅಮಿತ್ ಶಾ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಡಿದ ಮಾತು ಇದಕ್ಕೆ ಪುಷ್ಟಿ ನೀಡುವಂತಿದೆ.
ಅಂದ ಹಾಗೆ ಜಗದೀಶ್ ಶೆಟ್ಟರ್ ಹೇಳಿದ್ದೇನು? ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದಾಗಿ ಶಾ ಹೇಳಿದ ಮಾತಿಗೆ ಅಡ್ಡೇಟು ಹೊಡೆದ ಶೆಟ್ಟರ್: ಚುನಾವಣೆಗಿನ್ನೂ ತುಂಬ ಕಾಲವಿದೆ.ಅಲ್ಲಿಯ ತನಕ ಏನಾಗುತ್ತದೋ ನೋಡೋಣ ಎಂದರು. ವಾಸ್ತವವಾಗಿ ಅವರು ಕೂಡಾ ಇಂತಹದೇ ಪರಿಸ್ಥಿತಿಯನ್ನು ಎದುರಿಸಿ ದವರು. ಹೀಗಾಗಿ ಮುಂದಿನ ದಿನಗಳಲ್ಲಿ ಏನಾಗಬಹುದು? ಎಂಬ ಬಗ್ಗೆ ಅವರಿಗೂ ಒಂದು ಲೆಕ್ಕಾಚಾರವಿದೆ. ಡಿಯೂರಪ್ಪ ಅವರನ್ನು ಹೊರತುಪಡಿಸಿ ಬಿಜೆಪಿಯ ಬೇರೆ ಯಾರೂ ಲಿಂಗಾಯತ ನಾಯಕತ್ವದ ಕಿರೀಟವನ್ನು ದಕ್ಕಿಸಿಕೊಳ್ಳಲಾರರು ಎಂಬುದು ಅವರ ಈ ಲೆಕ್ಕಾಚಾರ.
ಇದನ್ನು ಗಮನದಲ್ಲಿಟ್ಟುಕೊಂಡರೆ ಯಡಿಯೂರಪ್ಪ ಅವರ ನೆತ್ತಿಯಿಂದ ಜಾರಿ ಬೀಳುತ್ತಿರುವ ಕಿರೀಟ ಬೊಮ್ಮಾಯಿ ನೆತ್ತಿಯ ಮೇಲೆ ಕೂರುವುದು ಎಷ್ಟು ಕಷ್ಟ
ಎಂಬುದು ಮನವರಿಕೆಯಾಗುತ್ತದೆ. ಅಂದ ಹಾಗೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಇದೆ. ಅದೆಂದರೆ, ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಬಿಜೆಪಿ ಯಲ್ಲಿ ಉನ್ನತ ಸ್ಥಾನಮಾನ ದೊರಕದಿದ್ದರೆ, ಆ ಪಕ್ಷದ ಸಂಘಟನೆಯ ವಿಷಯದಲ್ಲಿ ಆಸಕ್ತಿ ತೋರಿಸುವುದಿಲ್ಲ.
ಅವರೇನಾದರೂ ನಿರಾಸಕ್ತರಾದರು ಎಂದುಕೊಳ್ಳಿ. ಲಿಂಗಾಯತ ನಾಯಕತ್ವವನ್ನು ಉಳಿಸಿಕೊಳ್ಳಲು ತಾವೇನು ಪ್ರಯತ್ನ ಮಾಡುತ್ತಾ ಬಂದರೋ? ಅಂತಹ ಪ್ರಯತ್ನವನ್ನು ಅವರು ದೊಡ್ಡ ಮಟ್ಟದಲ್ಲಿ ಮುಂದುವರಿಸಲಾರರು. ಅವರು ಸುಮ್ಮನಾದರೆ ಬಸವರಾಜ ಬೊಮ್ಮಾಯಿ ಮುಂದೆ ನುಗ್ಗಿ ಆ ಕೆಲಸ ಮಾಡುವುದಿಲ್ಲ, ಅದವರ ಜಾಯಮಾನವೂ ಅಲ್ಲ. ಹಾಗಾದಾಗ ಸಹಜ ವಾಗಿಯೇ ಉರುಳುತ್ತಿರುವ ಲಿಂಗಾಯತ ನಾಯಕತ್ವದ ಕಿರೀಟ, ತನಗೆ ಒಗ್ಗಬಲ್ಲ ನೆತ್ತಿಯೊಂದನ್ನು ಬಯಸುತ್ತದೆ.
ಸದ್ಯದ ಸ್ಥಿತಿಯಲ್ಲಿ ಅದರ ಮುಂದಿರುವ ಆಕರ್ಷಣೀಯ ನೆತ್ತಿ ಎಂದರೆ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲರದು. ಈ ಹಿಂದೆ ಪ್ರತ್ಯೇಕ ಧರ್ಮದ ಅಸ್ತ್ರವನ್ನಿಟ್ಟು ಕೊಂಡು ಹೋರಾಡಿದ್ದ ಎಂ.ಬಿ.ಪಾಟೀಲರಿಗೆ ಯಶಸ್ಸು ಸಿಗಲಿಲ್ಲ ಅನ್ನುವುದು ನಿಜ. ಆದರೆ ಯಡಿಯೂರಪ್ಪ ಅವರು ಕಣ್ಣ ಮುಂದಿದ್ದಾಗ, ಆ ಜಾಗದಲ್ಲಿ ಎಂ.ಬಿ.ಪಾಟೀಲರನ್ನು ನೋಡಲು ಸಮುದಾಯ ಬಯಸಲಿಲ್ಲ. ಈಗ ಆ ಸ್ಥಿತಿ ಇಲ್ಲ. ಲಿಂಗಾಯತ ಸಮುದಾಯ ಯಡಿಯೂರಪ್ಪ ಅವರನ್ನು ನೆಚ್ಚಿಕೊಳ್ಳುವಂತಿಲ್ಲ. ಖುದ್ದು ಬಿಜೆಪಿ ವರಿಷ್ಠರಾದ ಅಮಿತ್ ಶಾ ಅವರೇ, ಮುಂದಿನ ಚುನಾವಣೆಯಲ್ಲಿ ಬೊಮ್ಮಾಯಿ ಅವರದೇ ನಾಯಕತ್ವ ಎಂದಿರು ವಾಗ, ಯಡಿಯೂರಪ್ಪ ಅವರಿಗೇನು ಉಳಿಯಿತು