Sunday, 15th December 2024

ಮತದಾರ ಮಣೆ ಹಾಕುವುದು ಯಾರ ತಂತ್ರಕ್ಕೆ ?

ಅಶ್ವತ್ಥ ಕಟ್ಟೆ

ranjith.hoskere@gmail.com

ಕಾಂಗೆಸ್‌ಗೆ ‘ಅತ್ಯುತ್ತಮ’ ಎನ್ನುವಂಥ ಸಂಘಟನಾ ಶಕ್ತಿ ಉಳಿದಿರುವುದು ಕೆಲವೇ ರಾಜ್ಯಗಳಲ್ಲಿ. ಅತಿಹೆಚ್ಚು ಲೋಕಸಭಾ ಸೀಟುಗಳಿರುವ ರಾಜ್ಯಗಳ
ಪೈಕಿ ಕರ್ನಾಟಕವೂ ಒಂದು. ಆದ್ದರಿಂದಲೇ ರಾಜ್ಯದಿಂದ ಹೆಚ್ಚು ಸಂಸದರನ್ನು ಆಯ್ಕೆ ಮಾಡಿ, ಶಕ್ತಿ ವೃದ್ಧಿಸಿಕೊಳ್ಳುವ ಲೆಕ್ಕಾಚಾರ ಕಾಂಗ್ರೆಸ್‌ನದ್ದು.

ಸತತ ಸೋಲುಗಳಿಂದ ನೆಲಕಚ್ಚಿರುವ ಕಾಂಗ್ರೆಸ್‌ಗೆ ಕರ್ನಾಟಕ ವಿಧಾನಸಭಾ ಚುನಾವಣೆ ‘ಮರು ಹುಟ್ಟು’ ನೀಡಿದೆ. ಕರ್ನಾಟಕದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಇದೀಗ ರಾಷ್ಟ್ರ ರಾಜಕಾರಣದಲ್ಲಿಯೂ ಕರ್ನಾಟಕದ ಥಿಯರಿಯನ್ನೇ ಅಳವಡಿಸಿಕೊಂಡು, ಸಾಲು ಸಾಲು ಸೋಲಿನ ಸರಪಳಿ ಯಿಂದ ಹೊರಬರುವ ಲೆಕ್ಕಾಚಾರದಲ್ಲಿದೆ. ರಾಜ್ಯದ ಥಿಯರಿ ದೇಶಕ್ಕೆ ಅನ್ವಯವಾಗುವುದೋ ಇಲ್ಲವೋ ಎನ್ನುವುದಕ್ಕಿಂತ ಹೆಚ್ಚಾಗಿ, ಲೋಕಸಭಾ ಚುನಾವಣೆಗೆ ಸಂಘಟನೆ ಯನ್ನು ಮೈ ಕೊಡವಿ ಏಳಿಸುವ ರೀತಿ ಯಲ್ಲಿಯಂತೂ ಕೆಲಸ ಆರಂಭವಾಗಿರುವುದು ಸತ್ಯ.

ಕರ್ನಾಟಕದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್, ಕರ್ನಾಟಕ ಕೇಂದ್ರಿತವಾಗಿ ಲೋಕಸಭಾ ಚುನಾವಣೆಯ ತಯಾರಿಯನ್ನು ಆರಂಭಿಸಿದೆ. ಕರ್ನಾಟಕದ ‘ಗ್ಯಾರಂಟಿ’ ಘೋಷಣೆ, ಚುನಾವಣಾ ತಂತ್ರಗಾರಿಕೆ, ಟಿಕೆಟ್ ಹಂಚಿಕೆಯ ಮಾದರಿಯನ್ನು ಲೋಕಸಭೆ ಚುನಾವಣೆಯಲ್ಲಿಯೂ ಅಳವಡಿಸಿ ಕೊಳ್ಳುವಲ್ಲಿನ ಸಾಧಕ- ಬಾಧಕಗಳ ಚರ್ಚೆ ಆರಂಭವಾಗಿರುವುದಂತೂ ಸತ್ಯ. ಈ ಹಿಂದೆ ಕರ್ನಾಟಕದ ವಿಧಾನಸಭಾ ಚುನಾವಣೆಯ ವೇಳೆ ಇತರೆ ಪಕ್ಷಗಳು ಸಿದ್ಧತೆ ಆರಂಭಿಸುವ ಮೊದಲೇ, ಕಾಂಗ್ರೆಸ್ ಪ್ರಚಾರಕ್ಕೆ ವೇಗ ಕೊಟ್ಟ ಮಾದರಿಯನ್ನೇ ದೆಹಲಿ ನಾಯಕರು ಅಳವಡಿಸಿಕೊಳ್ಳಲು ಸಿದ್ಧತೆ ನಡೆಸಿಕೊಂಡಿದ್ದಾರೆ ಎನ್ನುವುದು ಇತ್ತೀಚಿನ ಕೆಲ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ.

ಮೈತ್ರಿಕೂಟದ ವಿಷಯದಲ್ಲಿ ಕಾಂಗ್ರೆಸ್ ‘ಇಂಡಿಯ’ದ ಹೆಸರಲ್ಲಿ ಬಿಜೆಪಿ ವಿರೋಧಿ ಪಕ್ಷಗಳನ್ನೆಲ್ಲ ಒಗ್ಗೂಡಿಸಿಕೊಂಡು ಸಾಲು ಸಾಲು ಸಭೆಗೆ ಸಿದ್ಧತೆ ಮಾಡಿ ಕೊಂಡಿದೆ. ಈ ಮೈತ್ರಿ ಕೂಟದಲ್ಲಿರುವ ಪಕ್ಷಗಳ ‘ಹೊಂದಾಣಿಕೆ’ ಚುನಾವಣೆ ಮುಗಿಯುವ ತನಕ ಇದೇ ರೀತಿಯಲ್ಲಿ ಮುಂದುವರಿಯುವುದೇ, ಇಲ್ಲವೇ ಎನ್ನುವುದು ಬೇರೆ ಮಾತು. ಆದರೆ ‘ಇಂಡಿಯ’ ಹೆಸರಲ್ಲಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಮತಗಳನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಕೈಹಾಕಿರುವು ದಂತೂ ಸತ್ಯ. ಇದರ ಭಾಗವಾಗಿಯೇ, ಕಳೆದ ೨-೩ ವಾರಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರು ನಿರಂತರವಾಗಿ ರಾಜ್ಯವಾರು ‘ಕ್ಲಾಸ್’ ತೆಗೆದುಕೊಳ್ಳುತ್ತಿ ದ್ದಾರೆ.

ಕಳೆದ ವಾರ ದೆಹಲಿಯಲ್ಲಿ ರಾಜ್ಯದ ಸಚಿವರನ್ನು ಕರೆಸಿಕೊಂಡು ‘ಪಾಠ’ ಮಾಡಿದ್ದರ ಪ್ರಮುಖ ಉದ್ದೇಶವೂ ಲೋಕಸಭಾ ಚುನಾವಣೆಯೇ ಆಗಿತ್ತು. ಅದರೊಂದಿಗೆ ಕರ್ನಾಟಕ ದಲ್ಲಿ ಹೊಮ್ಮಿರುವ ಒಂದಷ್ಟು ಅಸಮಾಧಾನವನ್ನು ತಣಿಸಿ, ಚುನಾವಣೆಗೆ ಸಜ್ಜಾಗಬೇಕು ಎನ್ನುವ ಕಾರಣಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ, ಕಾಂಗ್ರೆಸ್‌ಗೆ ‘ಅತ್ಯುತ್ತಮ’ ಎನ್ನುವ ರೀತಿಯಲ್ಲಿ ಸಂಘಟನಾ ಶಕ್ತಿ ಉಳಿದಿರುವುದು ಕೆಲವೇ ಕೆಲವು ರಾಜ್ಯಗಳಲ್ಲಿ. ಅದರಲ್ಲಿಯೂ ಅತಿದೊಡ್ಡ ಹಾಗೂ ಅತಿಹೆಚ್ಚು ಲೋಕಸಭಾ ಸೀಟುಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಆದ್ದರಿಂದಲೇ ಕರ್ನಾಟಕದಿಂದ ಅತಿ ಹೆಚ್ಚು ಸಂಸದರನ್ನು ಆಯ್ಕೆ ಮಾಡಿಕೊಂಡು ಶಕ್ತಿ ವೃದ್ಧಿಸಿಕೊಳ್ಳುವ ಲೆಕ್ಕಾಚಾರ ಕಾಂಗ್ರೆಸ್ ವರಿಷ್ಠರದ್ದಾಗಿದೆ.

ಇದರೊಂದಿಗೆ ಕರ್ನಾಟಕವನ್ನು ಬೇಸ್ ಆಗಿಟ್ಟುಕೊಂಡು ದಕ್ಷಿಣ ಭಾರತದಲ್ಲಿ ಕೆಲ ಸೀಟುಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳುವುದೇ ಕಾಂಗ್ರೆಸ್‌ನ ಪ್ರಮುಖ ಉದ್ದೇಶವಾಗಿದೆ. ಸದ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಚುನಾವಣಾ ತಯಾರಿ ನಡೆಯುತ್ತಿದ್ದರೂ, ‘ಕೀ ರೋಲ್’ ಅನ್ನು ರಾಹುಲ್ ಗಾಂಧಿ ಆಂಡ್ ಟೀಂ ವಹಿಸಿ ಕೊಂಡಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದ ೨೦೧೩, ೨೦೧೯ರ ಲೋಕಸಭಾ ಚುನಾವಣೆಯ ಹೀನಾಯ ಸೋಲಿನಿಂದ ಪಾಠ ಕಲಿತಿರುವ ಕಾಂಗ್ರೆಸ್ ನಾಯಕರು, ಇದೀಗ ಆರೇಳು ತಿಂಗಳ ಮೊದಲೇ ರಾಜ್ಯ ಗಳಲ್ಲಿ ಸಂಘಟನೆಯನ್ನು ಗಟ್ಟಿಗೊಳಿಸಿಕೊಳ್ಳುವ ತೀರ್ಮಾನ ದೊಂದಿಗೆ ಸಿದ್ಧತೆ ಆರಂಭಿಸಿದ್ದಾರೆ.

ಮೊನ್ನೆ ನಡೆದ ಸಭೆಯಲ್ಲಿಯೂ ರಾಜ್ಯ ಕಾಂಗ್ರೆಸ್ ನಾಯಕರಿಗೆ ೨೦ ಸೀಟುಗಳನ್ನು ಗೆದ್ದುಕೊಂಡು ಬರಬೇಕು ಎನ್ನುವ ಟಾರ್ಗೆಟ್ ಅನ್ನು ಪಕ್ಷದ ವರಿಷ್ಠರು ನೀಡಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಜವಾಬ್ದಾರಿಯೊಂದಿಗೆ ತಮ್ಮ ಪ್ರಾಬಲ್ಯವಿರುವ ನೆರೆ ರಾಜ್ಯಗಳಲ್ಲಿಯೂ ಕೆಲ ಸೀಟುಗಳನ್ನು ಗೆಲ್ಲಿಸಿಕೊಡಲು ಎಲ್ಲ ರೀತಿಯ ‘ಶಕ್ತಿ’ ಯನ್ನು ಪಕ್ಷಕ್ಕೆ ತುಂಬಬೇಕು ಎಂದಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವರವರ ಜಿಲ್ಲೆಗಳ ಲೋಕಸಭೆ ಚುನಾವಣೆಯ ಉಸ್ತುವಾರಿಯನ್ನು ನೀಡುವುದಷ್ಟೆ ಅಲ್ಲದೇ ತನು-ಮನ- ಧನದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿದ್ದಾರೆ.

ಬಹುತೇಕ ನಾಯಕರ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣವಿರುವುದು ನಿಜ. ಆದರೆ ಪಕ್ಷದ ವರಿಷ್ಠರು ನೀಡಿರುವ ‘ಟಾರ್ಗೆಟ್-೨೦’ ಮುಟ್ಟುವುದು ಕಷ್ಟ. ಗರಿಷ್ಠ ೧೫ ಸೀಟುಗಳನ್ನು ಗೆದ್ದುಕೊಂಡರೂ ಉತ್ತಮ ಸಾಧನೆ ಎನ್ನುವ ವಸ್ತುನಿಷ್ಠ ಮಾತುಗಳನ್ನು ಹೇಳಿದ್ದಾರೆ. ಕಾಂಗ್ರೆಸ್ ಇಷ್ಟೆಲ್ಲ ತಯಾರಿ ಆರಂಭಿಸಿದ್ದರೂ, ಬಿಜೆಪಿ ಮಟ್ಟದಲ್ಲಿ ಲೋಕಸಭಾ ಚುನಾವಣೆ ಸಿದ್ಧತೆಯ ವಿಷಯದಲ್ಲಿ ಜೋರಾದ ಅಲೆ ಬೀಸಿಲ್ಲ. ಎನ್‌ಡಿಎ ಸಭೆಯನ್ನು ನಡೆಸಿ, ತಮ್ಮ ಮಿತ್ರಬಲವನ್ನು ಸಾಬೀತುಪಡಿಸಿರುವ ನಾಯಕರು, ಇದಾದ ಬಳಿಕ ದೊಡ್ಡ ಪ್ರಮಾಣದಲ್ಲಿ ಸಭೆಗಳನ್ನು ನಡೆಸುವ ಉತ್ಸಾಹ ತೋರುತ್ತಿಲ್ಲ. ಕರ್ನಾಟಕದ ವಿಷಯದಲ್ಲಂತೂ, ವಿಧಾನಸಭೆ, ವಿಧಾನಪರಿಷತ್ ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷರ ಆಯ್ಕೆಯಲ್ಲೂ ಆಸಕ್ತಿವಹಿಸಿಲ್ಲ ಎನ್ನುವುದು ಸ್ಪಷ್ಟ.

ಈ ರೀತಿಯ ವಿಳಂಬ ಧೋರಣೆ ಹಿಂದೆಯೂ ಬಿಜೆಪಿ ರಾಷ್ಟ್ರೀಯ ನಾಯಕರ ಗೇಮ್ ಪ್ಲಾನ್ ಇದೆ ಎನ್ನುವ ಮಾತು ಕೇಳಿಬರುತ್ತಿದೆ. ಬಿಜೆಪಿ ದೆಹಲಿ ನಾಯಕರ ಈ ಜಾಣಮೌನದ ಹಿಂದೆಯೂ ಒಂದು ತಂತ್ರಗಾರಿಕೆಯಿದೆ. ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಲೋಕಸಭಾ ಚುನಾವಣೆ ನಡೆಯುವ ರೀತಿ, ಮತದಾನಕ್ಕೆ ಕಾರಣವಾಗುವ ಅಂಶಗಳು, ಪ್ರಚಾರದ ರೀತಿಯೇ ವಿಭಿನ್ನವಾಗಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ಜನರನ್ನು ವಿಶ್ವಾಸಕ್ಕೆ ಪಡೆದ ರೀತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ‘ಉಚಿತ ಯೋಜನೆಗಳಿಂದ’ ಮನಗೆಲ್ಲುವುದು ಕಷ್ಟಸಾಧ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ಅಂಶ.

ಹಾಗೆ ನೋಡಿದರೆ, ಲೋಕಸಭಾ ಚುನಾವಣೆಯಲ್ಲಿ ಚರ್ಚೆಯಾಗುವ ವಿಷಯಗಳೇ ಬೇರೆ. ರಾಷ್ಟ್ರೀಯ ಭದ್ರತೆ, ಹಿಂದುತ್ವ, ಪಿಒಕೆ, ವಿದೇಶಾಂಗ ನೀತಿ ಸೇರಿದಂತೆ ಹಲವು ಫ್ಯಾಕ್ಟರ್‌ಗಳು ವರ್ಕ್ ಔಟ್ ಆಗುತ್ತವೆ. ಈ ಹಿಂದಿನ ೨ ಲೋಕಸಭಾ ಚುನಾವಣೆ ಯಲ್ಲಿಯೂ ಇದೇ ವಿಷಯಗಳ ಮೇಲೆ ಬಿಜೆಪಿ ಚುನಾವಣೆ ನಡೆಸಿದ್ದ ರಿಂದ, ಇವುಗಳನ್ನು ಯಾವ ರೀತಿ ಹ್ಯಾಂಡಲ್ ಮಾಡಬೇಕು ಎನ್ನುವುದು ಅಮಿತ್ ಶಾ ಹಾಗೂ ಮೋದಿ ಜೋಡಿಗೆ ಸ್ಪಷ್ಟವಾಗಿದೆ. ಇದರೊಂದಿಗೆ ಉತ್ತರ ಭಾರತದ ಚುನಾವಣೆಗಳು ಹಾಗೂ ದಕ್ಷಿಣ ಭಾರತದ ಚುನಾವಣೆಗಳು ವಿಭಿನ್ನವಾಗಿರುತ್ತವೆ. ಉತ್ತರ ಭಾರತದಲ್ಲಿ ಭದ್ರತಾ ವಿಷಯ, ಹಿಂದುತ್ವದ ಅಜೆಂಡಾ ಚುನಾವಣೆಯ ಪ್ರಮುಖ ಅಸವಾಗಿದ್ದರೆ, ಕರ್ನಾಟಕ ಅಥವಾ ದಕ್ಷಿಣ ಭಾರತದ ಮತದಾರರಿಗೆ ಗಡಿ ಸಮಸ್ಯೆಯ ವಿಷಯ ಎಂದಿಗೂ ದೊಡ್ಡ ವಿಷಯವಾಗಿ
ಕಾಣುವುದೇ ಇಲ್ಲ. ಏಕೆಂದರೆ, ಗಡಿಯಲ್ಲಿನ ಸಮಸ್ಯೆಗಳು ದಕ್ಷಿಣ ಭಾರತದ ರಾಜ್ಯಗಳಿಗಿಂತ ಉತ್ತರ ಭಾರತದವರು ಅತಿಹೆಚ್ಚು ಅನುಭವಿಸುತ್ತಾರೆ.

ಆದ್ದರಿಂದ ಚುನಾವಣೆಯ ಪೂರ್ವದಲ್ಲಿ ಒಂದು ‘ಪಿಒಕೆ’ ವಿಷಯ ಉತ್ತರ ಭಾರತದ ಇಡೀ ಚುನಾವಣಾ ಅಂಕಿ-ಅಂಶವನ್ನೇ ತಲೆಕೆಳಗೆ ಮಾಡುವ ಸಾಧ್ಯತೆಯಿದೆ. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣದ ಹೆಸರಲ್ಲಿಯೇ ಅಧಿಕಾರಕ್ಕೆ ಬಂದ ಬಿಜೆಪಿ ನಾಯಕರು, ಚುನಾವಣೆಗೂ ಮೊದಲು ಅದನ್ನು ಲೋಕಾರ್ಪಣೆ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಈ ಒಂದು ನಡೆಯಿಂದ ಉತ್ತರ ಪ್ರದೇಶದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಗೆಲ್ಲುವ ಸಾಧ್ಯತೆಯಿದೆ. ಉತ್ತರ ಭಾರತದಲ್ಲಿ ಬಿಜೆಪಿಯತ್ತ ಮತಗಳು ವಾಲಿದರೆ, ಬಹುಮತ ಪಡೆಯುವುದು ಎನ್‌ಡಿಎಗೆ ಬಹುದೊಡ್ಡ ಸಮಸ್ಯೆಯೇನಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಬಿಜೆಪಿಗೆ ಲೋಕಸಭಾ ಚುನಾವಣೆಯ ಸಮಯದಲ್ಲಿ ಏನು ಮಾಡಬೇಕು ಎನ್ನುವ ಸ್ಪಷ್ಟತೆಯಿದೆ. ಆದ್ದರಿಂದಲೇ ಸಾಲು ಸಾಲು ಬಹಿರಂಗ ಸಭೆಗಳಿಗಿಂತ ಹೆಚ್ಚಾಗಿ ‘ಸರ್ಜಿಕಲ್ ಸ್ಟ್ರೈಕ್’ ಯಾವ ರೀತಿ ಮಾಡಬೇಕು ಎನ್ನುವ ಆಲೋಚನೆ ಯಲ್ಲಿ ತೊಡಗಿದೆ. ಕಳೆದ ೯ ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿ, ಸಹಜವಾಗಿಯೇ ಎದುರಾಗಬಹುದಾದ ಆಡಳಿತ ವಿರೋಧಿ ಅಲೆಯನ್ನು ಮೀರಿಸುವ ಯಾವೆಲ್ಲ ‘ವಿಷಯ’ ಗಳನ್ನು ಜನರ ಮುಂದಿಡಬಹುದು ಎನ್ನುವ ಲೆಕ್ಕಾಚಾರ ದಲ್ಲಿದೆ ಎಂದರೆ ತಪ್ಪಾಗುವುದಿಲ್ಲ.

ಇದರೊಂದಿಗೆ ಎನ್‌ಡಿಎಗಿರುವ ಬಹುದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅದರ ನಾಯಕತ್ವ. ಆದರೆ ಕಾಂಗ್ರೆಸ್ ನೇತೃತ್ವದಲ್ಲಿ ಸಿದ್ಧಗೊಂಡಿರುವ ‘ಇಂಡಿಯ’ದ ಸಹಭಾಗಿ ಗಳಿಂದ ಈ ವಿಷಯದಲ್ಲಿ ಈ ಹಂತದವರೆಗೆ ಸ್ಪಷ್ಟನೆ ಸಿಕ್ಕಿಲ್ಲ. ಇದೀಗ ಸುಪ್ರೀಂ ಕೋರ್ಟ್ ತಡೆಯಾಜ್ಞೆಯಿಂದ ರಾಹುಲ್ ಗಾಂಧಿ ಅವರು ಸಂಸತ್‌ಗೆ ವಾಪಾಸಾಗಿದ್ದು, ಚುನಾವಣೆಗೆ ಸ್ಪರ್ಧಿಸಲು ಇದ್ದ ದೊಡ್ಡ ಸಮಸ್ಯೆಯೂ ಬಗೆಹರಿದಿದೆ. ಆದರೆ ಈಗಾಗಲೇ ೨ ಬಾರಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೋತಿರುವುದರಿಂದ, ಮೂರನೇ ಬಾರಿಯೂ ಅವರದ್ದೇ ನೇತೃತ್ವವನ್ನು ಮಿತ್ರಪಕ್ಷಗಳು ಒಪ್ಪುವ ಸಾಧ್ಯತೆ ಭಾರಿ ಕಡಿಮೆ ಎನ್ನಲಾಗುತ್ತಿದೆ.

ಉತ್ತರ ಭಾರತವನ್ನು ಬಿಜೆಪಿ ಟಾರ್ಗೆಟ್ ಮಾಡಿಕೊಂಡು ರಣತಂತ್ರ ರೂಪಿಸುತ್ತಿದ್ದು, ನಾಲ್ಕೈದು ರಾಜ್ಯಗಳಲ್ಲಿ ಉತ್ತಮ ಸಾಧನೆಯ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ಅದಕ್ಕೆ ಕಾಂಗ್ರೆಸ್ ಬಳಿ ಕರ್ನಾಟಕ, ರಾಜಸ್ಥಾನ ಹೊರತಾಗಿ ಹುದೊಡ್ಡ ರಾಜ್ಯಗಳು ಯಾವುದೂ ಇಲ್ಲವಾಗಿದೆ. ಈ ಕಾರಣಕ್ಕಾಗಿಯೇ ಕರ್ನಾಟಕವನ್ನು ಕಾಂಗ್ರೆಸ್ ಅತಿಹೆಚ್ಚು ಅವಲಂಭಿಸಿದೆ. ಆದರೆ ವಿಧಾನಸಭೆಯ ರೀತಿಯಲ್ಲಿ ಲೋಕ ಸಭೆಯಲ್ಲಿಯೂ ಬಿಜೆಪಿ ಸ್ಥಿತಿ ಹೀನಾಯವಾಗುತ್ತದೆ ಎನ್ನುವ
ಆತಂಕ ಸದ್ಯಕ್ಕೆ ಬಿಜೆಪಿ ನಾಯಕರಿಗೆ ಇಲ್ಲ. ನರೇಂದ್ರ ಮೋದಿ ಹೆಸರಲ್ಲಿ ಈ ಬಾರಿಯೂ ಉತ್ತಮ ‘ಸಂಖ್ಯೆ’ಯನ್ನು ಕರ್ನಾಟಕದಿಂದ ಪಡೆಯಬಹುದು ಎನ್ನುವ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. ಆ ಕಾರಣಕ್ಕಾಗಿಯೇ ಕರ್ನಾಟಕದ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕನ ಆಯ್ಕೆ ವಿಷಯ ದಲ್ಲಿಯೂ ‘ನಾಳೆ ಬಾ’ ಎನ್ನುವ ನಡೆಯನ್ನು ಅನುಸರಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ.

ದಕ್ಷಿಣ ಭಾರತದಿಂದ ಲೋಕಸಭೆಯಲ್ಲಿ ಬಿಜೆಪಿಗೆ ಬಹುದೊಡ್ಡ ಕೊಡುಗೆ ನೀಡಬಹುದಾದ ರಾಜ್ಯವೆಂದರೆ ಕರ್ನಾಟಕವಾಗಿದೆ. ಅದೇ ರೀತಿ ಇಡೀ ದೇಶದಲ್ಲಿ ದೊಡ್ಡ
ಸಂಖ್ಯೆಯಲ್ಲಿ ಕಾಂಗ್ರೆಸ್ ಸಂಸದರನ್ನು ಆಯ್ಕೆ ಮಾಡುವ ಬಲವನ್ನು ಕರ್ನಾಟಕವೇ ಹೊಂದಿದೆ. ಆದ್ದರಿಂದ ಇದೀಗ ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಕರ್ನಾಟಕ ಬಹುಮುಖ್ಯ ಎನಿಸಿದೆ. ಬಿಜೆಪಿಯಲ್ಲಿ ಕರ್ನಾಟಕದ ನಾಯಕರನ್ನು ನೆಚ್ಚಿ ಕೊಳ್ಳದೇ, ಮೋದಿ ಜಪದೊಂದಿಗೆ ಗೆಲುವಿನ ಲೆಕ್ಕಾಚಾರದಲ್ಲಿ ದ್ದರೆ, ಕಾಂಗ್ರೆಸಿಗರು ಸ್ಥಳೀಯ ನಾಯಕತ್ವವನ್ನು ನೆಚ್ಚಿಕೊಂಡು ಹೆಚ್ಚು ಸಂಸದರನ್ನು ಗೆಲ್ಲಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ತದ್ವಿರುದ್ಧ ತಂತ್ರಗಾರಿಕೆಯಲ್ಲಿ ಯಾವ ತಂತ್ರಕ್ಕೆ ಮತದಾರ
ಮಣೆ ಹಾಕುತ್ತಾನೆ ಎನ್ನುವುದೇ ಈಗಿರುವ ಕುತೂಹಲ.