Tuesday, 22nd October 2024

Ranjith H Ashwath Column: ನೀ ಕೊಡೆ, ನಾ ಬಿಡೆ ಹೋರಾಟದಲ್ಲಿ ಗೆಲ್ಲುವುದ್ಯಾರು ?

ಅಶ್ವತ್ಥಕಟ್ಟೆ

ರಂಜಿತ್‌ ಎಚ್.ಅಶ್ವತ್ಥ

ಯೋಗೇಶ್ವರ್‌ರ ಮುಂದಿನ ನಡೆಯಿನ್ನೂ ಸ್ಪಷ್ಟವಾಗಿಲ್ಲ. ಅವರು ಸ್ವತಂತ್ರವಾಗಿ ಸ್ಪರ್ಧಿಸಬಹುದು ಅಥವಾ ಕಾಂಗ್ರೆಸ್‌ಗೆ ಸೇರಬಹುದು. ಈ ಎರಡು ಆಯ್ಕೆ ಮೀರಿ ಬಿಎಸ್‌ಪಿಯೊಂದಿಗೂ ಚರ್ಚೆಗಳು ಆರಂಭವಾಗಿವೆ ಎನ್ನುವ ಮಾತುಗಳಿವೆ. ಈ ಮೂರರಲ್ಲಿ ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಯೋಗೇಶ್ವರ ಅವರೇ ಉತ್ತರಿಸಬೇಕಿದೆ.

ಕರ್ನಾಟಕದಲ್ಲಿ ಇದೀಗ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಕೆಲವೇ ದಿನ ಬಾಕಿಯಿರುವ ಈ ಹಂತದಲ್ಲಿ, ಸದ್ದು ಮಾಡುತ್ತಿರುವುದು ಮಾತ್ರ ಚನ್ನಪಟ್ಟಣದ ವಿಷಯ. ಟಿಕೆಟ್ ಹಂಚಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ವಿಕೆಟ್ (ಸಿ.ಪಿ. ಯೋಗೇಶ್ವರ) ಬಿದ್ದಿರುವುದರಿಂದ ಅದು ಇನ್ನಷ್ಟು ಕಾವು ಪಡೆದುಕೊಂಡಿದೆ.

ಈ ಬಾರಿ ಉಪಚುನಾವಣೆಗೂ ಮೊದಲೇ ಚನ್ನಪಟ್ಟಣ ಭಾರಿ ಸದ್ದು ಮಾಡಿತ್ತು. ಮೂರೂ ಪಕ್ಷಗಳು, ಇನ್ನುಳಿದ
ಎರಡು ಕ್ಷೇತ್ರಕ್ಕಿಂತ ಚನ್ನಪಟ್ಟಣವನ್ನೇ ಹೆಚ್ಚು ಕೇಂದ್ರೀಕರಿಸಿ ಚುನಾವಣಾ ಸಿದ್ಧತೆ ಆರಂಭಿಸಿದ್ದು ಸುಳ್ಳಲ್ಲ. ಈ ಬಾರಿ ಚನ್ನಪಟ್ಟಣ ಸದ್ದು ಮಾಡಿರುವುದು ಪ್ರತಿಪಕ್ಷಗಳ ನಡುವಿನ ಕಾಳಗಕ್ಕಿಂತ, ಮೈತ್ರಿಪಕ್ಷದಲ್ಲಿಯೇ ಇರುವ ಕಾಳಗಕ್ಕೆ ಎನ್ನುವುದು ವಿಚಿತ್ರ.

ಹಾಗೆ ನೋಡಿದರೆ, ಮೊದಲಿನಿಂದಲೂ ಚನ್ನಪಟ್ಟಣದಲ್ಲಿ ನೇರಾನೇರ ಹೋರಾಟವಿದ್ದಿದ್ದು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ ಅವರ ನಡುವೆಯೇ ಹೊರತು, ಕಾಂಗ್ರೆಸ್ ನಡುವೆಯಲ್ಲ. ಆದರೆ ಜೆಡಿಎಸ್ -ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ, ಚನ್ನಪಟ್ಟಣದಲ್ಲಿ ಎದುರಾಗ ಬಹುದಾದ ಬಿಕ್ಕಟ್ಟಿನ ಕುರಿತಾದ ಚರ್ಚೆ ಆರಂಭವಾಗಿತ್ತು. ಆದರೆ ಎಲ್ಲವನ್ನೂ ಬಿಜೆಪಿ ವರಿಷ್ಠರು ನಿಭಾಯಿಸುತ್ತಾರೆ ಎನ್ನುವ ಹಾರಿಕೆ ಉತ್ತರದೊಂದಿಗೆ ಎರಡೂ ಪಕ್ಷದವರು ಓಡಾಡಿಕೊಂಡಿದ್ದರು.

ಇದೀಗ ನಾಮಪತ್ರ ಸಲ್ಲಿಕೆಗೆ ಕೆಲವೇ ದಿನ ಬಾಕಿಯಿರುವಾಗ ಭಿನ್ನಮತ ಸೋಟಗೊಂಡಿದ್ದು, ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ ಎರಡು ವರ್ಷದ ವಿಧಾನಪರಿಷತ್ ಸದಸ್ಯ ಸ್ಥಾನವನ್ನು ತ್ಯಜಿಸಿ, ಉಪಚುನಾ ವಣೆಗೆ ಯೋಗೇಶ್ವರ ಧುಮುಕಿದ್ದಾರೆ. ಈ ‘ಸೈನಿಕ’ನ ಮುಂದಿನ ನಡೆಯೇನು ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ. ಸ್ವತಂತ್ರ ವಾಗಿ ಸ್ಪರ್ಧಿಸಬಹುದು ಅಥವಾ ಕಾಂಗ್ರೆಸ್‌ಗೆ ಸೇರಬಹುದು. ಈ ಎರಡು ಆಯ್ಕೆ ಮೀರಿ ಬಿಎಸ್‌ಪಿ ಯೊಂದಿಗೂ ಚರ್ಚೆಗಳು ಆರಂಭವಾಗಿವೆ ಎನ್ನುವ ಮಾತುಗಳಿವೆ. ಈ ಮೂರರಲ್ಲಿ ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳು ತ್ತಾರೆ ಎನ್ನುವುದಕ್ಕೆ ಯೋಗೇಶ್ವರ ಅವರೇ ಉತ್ತರಿಸಬೇಕಿದೆ.

ಆದರೆ ಈ ಮೂರರಲ್ಲಿ ಯಾವ ದಾರಿಯನ್ನು ಆಯ್ಕೆ ಮಾಡಿಕೊಂಡರೂ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗೆ ನೇರ ಹೊಡೆತ ಬೀಳುವುದು ಖಚಿತ. ಒಂದು ವೇಳೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ, ಕಾಂಗ್ರೆಸ್‌ಗೆ ನೇರ ಲಾಭವಾಗುತ್ತದೆ. ಆದರೆ, ಅದರ ಬದಲು ಸ್ವತಂತ್ರವಾಗಿ ಅಥವಾ ಬಿಎಸ್‌ಪಿಯಿಂದ ಚುನಾವಣೆಗೆ ನಿಂತರೆ, ‘ಮೂವರ ಜಗಳದಲ್ಲಿ ಲಾಭ ಯಾರಿಗೆ’ ಎನ್ನುವುದನ್ನು ಮತದಾರನೇ ತೀರ್ಮಾನಿಸಬೇಕಾಗುತ್ತಿದೆ. ಹಾಗೆ ನೋಡಿದರೆ, ಮೂರು ಕ್ಷೇತ್ರಗಳ ಪೈಕಿ ಸಂಡೂರು, ಶಿಗ್ಗಾಂವಿಯನ್ನು ಮರುಮಾತಾಡದೇ ಜೆಡಿಎಸ್ ಬಿಟ್ಟುಕೊಟ್ಟಿದೆ, ಅಲ್ಲಿ ಬಿಜೆಪಿಗೆ ಬೆಂಬಲಿಸುವು ದಾಗಿ ಪ್ರಕಟಿಸಿದೆ. ಆದರೆ ಚನ್ನಪಟ್ಣಣದ ವಿಷಯದಲ್ಲಿ ಪಟ್ಟು ಹಿಡಿಯುವುದಕ್ಕೆ ಮೂರು ಕಾರಣಗಳಿವೆ. ಮೊದಲನೆ ಯದಾಗಿ ಶಿಗ್ಗಾಂವಿ ಹಾಗೂ ಸಂಡೂರಿನಲ್ಲಿ ಜೆಡಿಎಸ್‌ಗೆ ಸಾಂಪ್ರದಾಯಿಕ ಮತಗಳು 10 ಸಾವಿರ ದಾಟಲ್ಲ ಮತ್ತು ಸ್ಪರ್ಧಿಸಲು ಅಭ್ಯರ್ಥಿಗಳ ಕೊರತೆಯಿದೆ.

ಇದರೊಂದಿಗೆ ಈ ಎರಡು ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ಪಕ್ಷದ ಸಂಘಟನೆಗೆ ಗುಲಗಂಜಿಯಷ್ಟೂ ಸಮಸ್ಯೆಯಾಗಲ್ಲ. ಆದರೆ ಚನ್ನಪಟ್ಟಣದ ವಿಷಯದಲ್ಲಿ ಹಾಗಿಲ್ಲ. ಕುಮಾರಸ್ವಾಮಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ ಹಾಗೂ ಕಳೆದೊಂದು ದಶಕದಿಂದ ಈ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯನ್ನು ಗಟ್ಟಿಯಾಗಿಸಿಕೊಂಡಿದ್ದಾರೆ. ಎರಡನೆಯ ದಾಗಿ, ಒಂದು ವೇಳೆ ಟಿಕೆಟ್ ಬಿಟ್ಟುಕೊಟ್ಟಿದ್ದರೆ ಬಿಜೆಪಿಯಿಂದ ಸ್ಪರ್ಧಿಸು ತ್ತಿದ್ದುದು ಸಿ.ಪಿ.ಯೋಗೇಶ್ವರ.

ಈಗಾಗಲೇ ಕುಮಾರಸ್ವಾಮಿ ಅವರಿಗೆ ಮಗ್ಗಲ ಮುಳ್ಳಾಗಿರುವ ಯೋಗೇಶ್ವರ ಸ್ಪರ್ಧಿಸಿ, ಗೆಲುವು ಸಾಧಿಸಿದರೆ ನಿಶ್ಚಿತ ವಾಗಿ ಭವಿಷ್ಯದಲ್ಲಿ ತಮಗೆ ಹಾಗೂ ತಮ್ಮ ಪಕ್ಷದ ಸಂಘಟನೆಗೆ ಸಮಸ್ಯೆಯಾಗುವುದು ನಿಶ್ಚಿತವೆನ್ನುವುದು ಎಚ್‌ಡಿಕೆಗೆ ಮನವರಿಕೆಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಬಿಜೆಪಿಗೆ ಸೀಟು ಬಿಟ್ಟುಕೊಡುವುದು ಬೇಡ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಯೋಗೇಶ್ವರ ಅಲ್ಲದೇ ಬೇರೆ ಯಾರೇ ಸ್ಪರ್ಧಿಸಿದರೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರನ್ನು ನಿಲ್ಲಿಸಿ, ಕ್ಷೇತ್ರವನ್ನು ಕಬ್ಜ ಮಾಡುವ ಸಾಧ್ಯತೆ ದಟ್ಟವಾಗಿತ್ತು.

ಉಪಚುನಾವಣೆಯಾಗಿರುವುದರಿಂದ ಸಹಜವಾಗಿಯೇ ಆಡಳಿತ ಪಕ್ಷಕ್ಕೆ ಗೆಲುವು ಸಾಧಿಸುವುದು ಬಹುದೊಡ್ಡ ಸಮಸ್ಯೆಯೇನಲ್ಲ ಎನ್ನುವುದು ಎಚ್‌ಡಿಕೆ ಗಮನದಲ್ಲಿದೆ. ಒಂದೊಮ್ಮೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡೆದರೂ ಸಮಸ್ಯೆಯಿಲ್ಲ, ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ‘ಕಮಲ’ ಚಿಹ್ನೆಯಲ್ಲಿ ಯೋಗೇಶ್ವರ ಸ್ಪರ್ಧಿಸಬಾರದು ಎನ್ನುವ ಜೆಡಿಎಸ್ ಲೆಕ್ಕಾಚಾರವಾಗಿದೆ. ಒಂದು ವೇಳೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಆಗಬಹುದಾದ ರಾಜಕೀಯ ಸ್ಥಿತ್ಯಂತರದಿಂದ ರಾಜ್ಯ ರಾಜಕೀಯಕ್ಕೆ ಕುಮಾರಸ್ವಾಮಿ ವಾಪಸಾದರೂ, ಕ್ಷೇತ್ರವನ್ನು ‘ರಿಸರ್ವ್’ ಮಾಡಿಕೊಂಡಿರಬೇಕು ಎನ್ನುವ ಕಾರಣಕ್ಕೆ ಈ ಪಟ್ಟನ್ನು ಹಿಡಿದಿದ್ದಾರೆ ಎನ್ನುವುದು ಸ್ಪಷ್ಟ.

ಆದರೆ ಬಿಜೆಪಿ-ಜೆಡಿಎಸ್‌ನಲ್ಲಿನ ಈ ಮೇಲಾಟದಲ್ಲಿ ಕಾಂಗ್ರೆಸ್ ತನ್ನ ಲಾಭವನ್ನು ಹುಡುಕುತ್ತಿದೆ. ಯೋಗೇಶ್ವರ
ಅವರಿಗೆ ಟಿಕೆಟ್ ನೀಡುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆ ಅವರನ್ನೇ ಪಕ್ಷದತ್ತ ಸೆಳೆಯುವ ಲೆಕ್ಕಾಚಾರ ವನ್ನು ಅದು ಆರಂಭದಲ್ಲಿ ಹಾಕಿತ್ತು. ಬಳಿಕ ಅದು ಸಾಧ್ಯವಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ, ಪಕ್ಷೇತರ ಅಥವಾ ಬಂಡಾಯವಾಗಿ ಯೋಗೇಶ್ವರ ಸ್ಪರ್ಧಿಸಿದರೆ, ಅದನ್ನು ಬಳಸಿಕೊಂಡು ಮೈತ್ರಿ ಪಕ್ಷದ ಮತಗಳನ್ನು ವಿಭಜನೆ ಮಾಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಚನ್ನಪಟ್ಟಣದಲ್ಲಿ ಪಕ್ಷಕ್ಕೆ ಸೂಕ್ತ ಸಂಘಟನೆಯಿಲ್ಲದಿರುವ ಕಾರಣಕ್ಕೆ, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರಣಿ ಸಭೆಗಳ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡಿದ್ದಾರೆ. ಈ ಸಂಘಟನೆ, ಆಡಳಿತ ಪಕ್ಷದಲ್ಲಿರುವ ‘ಪ್ಲಸ್ ಪಾಯಿಂಟ್’ ಹಾಗೂ ಯೋಗೇಶ್ವರ ಬಂಡಾಯದ ಕಾವನ್ನು ಬಳಸಿಕೊಂಡು ಕುಮಾರಸ್ವಾಮಿಯ ಭದ್ರಕೋಟೆ ಎನಿಸಿದ್ದ ಚನ್ನಪಟ್ಟಣದಲ್ಲಿ
ಬಿರುಕು ಮೂಡಿಸುವ ಲೆಕ್ಕಾಚಾರದಲ್ಲಿ ಡಿಕೆಶಿ ಆಂಡ್ ಟೀಮ್ ಇದೆ.

ಒಂದು ವೇಳೆ, ಇಂದಿನ ಪರಿಸ್ಥಿತಿ ಏನಾದರೂ 2014ರಲ್ಲಿ ಅಥವಾ 2019ರಲ್ಲಿ ಬಂದಿದ್ದರೆ ದೆಹಲಿ ಬಿಜೆಪಿ ನಾಯಕರ
ಪ್ರತಿಕ್ರಿಯೆ ಬೇರೆ ರೀತಿಯಲ್ಲಿಯೇ ಇರುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ವರಿಷ್ಠರು ಜೆಡಿಎಸ್ ಅನ್ನು
ಕಳೆದುಕೊಳ್ಳದ, ಯೋಗೇಶ್ವರ ಅವರನ್ನು ಮೆತ್ತಗಾಗಿಸದ ಪರಿಸ್ಥಿತಿಯಲ್ಲಿದ್ದಾರೆ. ಒಂದೊಮ್ಮೆ ಜೆಡಿಎಸ್‌ಗೆ ‘ಹೊಂದಾ
ಣಿಕೆ’ ಮಾಡಿಕೊಳ್ಳಿ ಎನ್ನುವ ಮಾತನ್ನು ಹೇಳಿದರೆ, ರಾಷ್ಟ್ರ ಮಟ್ಟದಲ್ಲಿ ಎನ್‌ಡಿಎ ಒಕ್ಕೂಟದ ಇತರೆ ಮೈತ್ರಿಪಕ್ಷಗಳಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಹಾಗೆಂದ ಮಾತ್ರಕ್ಕೆ, ಯೋಗೇಶ್ವರ ಅವರನ್ನು ಕೈಬಿಟ್ಟರೆ, ಆ ಭಾಗದಲ್ಲಿ
ಬಂಡಾಯದ ಬಿರುಗಾಳಿ ಬೀಸಿ, ಕ್ಷೇತ್ರವನ್ನು ‘ಸುಲಭ’ಕ್ಕೆ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟ ಹಾಗಾಗುತ್ತದೆ.

ಜೆಡಿಎಸ್‌ಗೆ ಈಗಾಗಲೇ ಟಿಕೆಟ್ ನಿಶ್ಚಿತ ಎನ್ನುವ ಮಾತುಗಳೊಂದಿಗೆ, ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ
ಅವರನ್ನೇ ನಿಲ್ಲಿಸಲಾಗುತ್ತದೆ ಎನ್ನುವ ‘ಸಂದೇಶ’ವನ್ನು ಕಾರ್ಯಕರ್ತರ ಮೂಲಕ ಸಾರ್ವಜನಿಕ ವಲಯಕ್ಕೆ
ಈಗಾಗಲೇ ಕುಮಾರಸ್ವಾಮಿ ಕುಟುಂಬ ರವಾನಿಸಿದೆ. ಆದರೆ 2019ರ ಲೋಕಸಭೆ, 2023ರ ವಿಧಾನಸಭೆ ಚುನಾವಣೆ ಯಲ್ಲಿ ಸ್ಪರ್ಧಿಸಿ ಮುಖಭಂಗ ಅನುಭವಿಸಿರುವ ನಿಖಿಲ್ ಮತ್ತೆ ಈ ರಿಸ್ಕ್ ತೆಗೆದುಕೊಂಡು ಸ್ಪರ್ಧಿಸಿ ಸೋತರೆ? ಎನ್ನುವ ಪ್ರಶ್ನೆ ರಾಜ್ಯ ಬಿಜೆಪಿಗರಿಂದ ರಾಷ್ಟ್ರೀಯ ನಾಯಕರಿಗೆ ರವಾನೆಯಾಗುತ್ತಿದೆ.

ಯೋಗೇಶ್ವರ ನಿಂತರೆ ಸುಲಭ ಗೆಲುವು ಸಾಧಿಸಬಹುದು. ಬಹುತೇಕ ಸಮೀಕ್ಷೆಗಳು ಇದನ್ನೇ ಹೇಳುತ್ತಿವೆ. ಆದ್ದರಿಂದ
ಯೋಗೇಶ್ವರ ಅವರಿಗೆ ಟಿಕೆಟ್ ನೀಡುವುದು ಸೂಕ್ತ. ಮುಂಬರುವ ದಿನದಲ್ಲಿ ಬೇಕಿದ್ದರೆ, ಜೆಡಿಎಸ್‌ಗೆ ಇತರೆ
ಚುನಾವಣೆಯಲ್ಲಿ ಹೆಚ್ಚುವರಿ ಸ್ಥಾನ ನೀಡಬಹುದು. ಒಂದು ವೇಳೆ ಜೆಡಿಎಸ್‌ಗೆ ಸೀಟು ನೀಡಬೇಕು ಎನ್ನುವುದಿದ್ದರೆ,
ಯೋಗೇಶ್ವರ ಅವರನ್ನೇ ಜೆಡಿಎಸ್ ಚಿಹ್ನೆಯಲ್ಲಿ ನಿಲ್ಲಿಸಿ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ದೇವೇಗೌಡರ
ಅಳಿಯ ಡಾ. ಮಂಜುನಾಥ್ ಅವರನ್ನು ನಿಲ್ಲಿಸಿದ ರೀತಿ, ಈಗ ಚನ್ನಪಟ್ಟಣದಿಂದ ಯೋಗೇಶ್ವರ ಅವರನ್ನು ಜೆಡಿಎಸ್‌ನಿಂದ ನಿಲ್ಲಿಸೋಣ ಎನ್ನುವ ಸಲಹೆಗಳು ಕೇಳಿಬಂದಿವೆ. ಆದರೆ ಈ ಸಲಹೆಯನ್ನು ಯೋಗೇಶ್ವರ ಕಿವಿ ಮೇಲೆ ಹಾಕಿಕೊಂಡಿಲ್ಲ; ಕುಮಾರಸ್ವಾಮಿ ಅವರು ಕೇಳಿಯೂ ಕೇಳಿಸಿಕೊಂಡಂತೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಸ್ಪಷ್ಟ. ಆದರೀಗ ಒಂದು ಹಂತಕ್ಕೆ ಕುಮಾರಸ್ವಾಮಿ ಒಪ್ಪಿದರೂ, ಜೆಡಿಎಸ್‌ನಿಂದ ಸ್ಪರ್ಧಿಸಲು ಯೋಗೇಶ್ವರ ಒಪ್ಪುತ್ತಿಲ್ಲವಂತೆ. ‘ಬಿಎಸ್ ಪಿಯಿಂದಾದರೂ ಸ್ಪರ್ಧಿಸುವೆ ಆದರೆ ಜೆಡಿಎಸ್‌ನಿಂದ ಸ್ಪರ್ಧಿಸಲ್ಲ’ ಎನ್ನುವ ಮಾತನ್ನು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಆದರೆ ಅಂತಿಮವಾಗಿ ‘ವಿಧಿ’ಯನ್ನು ಬಲ್ಲವರು ಯಾರು ಎನ್ನುವುದು ಅನೇಕರ ಪ್ರಶ್ನೆಯಾಗಿದೆ.

ಸಾಮಾನ್ಯವಾಗಿ ಯಾವುದೇ ಚುನಾವಣೆ ನಡೆದರೂ, ಪ್ರತಿಪಕ್ಷಗಳ ನಡುವೆ ಪೈಪೋಟಿ ಇರುತ್ತದೆ. ಉಪಚು
ನಾವಣೆಗಳ ವೇಳೆ ಆಡಳಿತ ಪಕ್ಷಕ್ಕೆ ಒಂದು ಕೈಮೇಲಿರುತ್ತದೆ ಎನ್ನುವುದು ಸ್ಪಷ್ಟ. ಆದರೆ ಚನ್ನಪಟ್ಟಣದಲ್ಲಿ ಮಾತ್ರ, ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ. ಮಂಡ್ಯ, ರಾಮನಗರದಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಹೆಚ್ಚಿನ ಬೆಂಬಲವಿದ್ದರೂ,
ಚನ್ನಪಟ್ಟಣದಲ್ಲಿ ಮಾತ್ರ ವಿಭಿನ್ನ ಸನ್ನಿವೇಶವಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ ಅವರು ಮಾಡಿದ್ದ ‘ಕೆರೆ
ಕ್ರಾಂತಿ’ಯಿಂದಾಗಿ ಯಾವುದೇ ಪಕ್ಷದಿಂದ ಅವರು ಸ್ಪರ್ಧಿಸಿದರೂ, ಒಂದಿಷ್ಟು ಮತಗಳು ಸಾಲಿಡ್ ಆಗಿ ಅವರಿಗೆ
ಬೀಳುವುದು ಖಚಿತ. ಅಲ್ಲಿ ಬಿಜೆಪಿಯಿಂದ ಯೋಗೇಶ್ವರ ಎನ್ನುವುದಕ್ಕಿಂತ ಯೋಗೇಶ್ವರ್ ಇಂದ ಬಿಜೆಪಿ ಎನ್ನುವ
ಪರಿಸ್ಥಿತಿಯಿದೆ. ಆದ್ದರಿಂದ ಉಪಚುನಾವಣೆಯಲ್ಲಿ ಈ ಕ್ಷೇತ್ರದ ಟಿಕೆಟ್ ಅನ್ನು ಯೋಗೇಶ್ವರರ ವಿರೋಧ ಕಟ್ಟಿಕೊಂಡು ಬಿಟ್ಟುಕೊಡುವುದಕ್ಕೂ ಬಿಜೆಪಿಯ ವರಿಷ್ಠರಿಗೆ ಇಚ್ಛೆಯಿಲ್ಲ.

ಹಾಗೆಂದು ಬಿಟ್ಟುಕೊಡದಿದ್ದರೆ ‘ಮೈತ್ರಿಧರ್ಮ’ ಪಾಲಿಸುವಲ್ಲಿ ಬಿಜೆಪಿ ಎಡವಿದೆ ಎನ್ನುವ ‘ಹಣೆಪಟ್ಟಿ’ ಸಿಗಲಿದೆ. ಆ
ಸಮಯದಲ್ಲಿ ಜೆಡಿಎಸ್ ಎನ್‌ಡಿಎದಿಂದ ಹೊರಬಾರದಿದ್ದರೂ, ಒಳಗಿದ್ದುಕೊಂಡೇ ‘ಮಗ್ಗಲ ಮುಳ್ಳಾಗುವುದರಲ್ಲಿ’
ಅನುಮಾನವಿಲ್ಲ. ಆದ್ದರಿಂದ ಚನ್ನಪಟ್ಟಣ ವಿಷಯದಲ್ಲಿ ‘ಎಚ್ಚರಿಕೆ’ಯ ಮೌನ ಹೆಜ್ಜೆಯನ್ನು ಬಿಜೆಪಿ ವರಿಷ್ಠರು
ಇಡುತ್ತಿದ್ದಾರೆ. ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನವಷ್ಟೇ ಬಾಕಿಯಿರುವುದರಿಂದ ಬಿಜೆಪಿ ನಾಯಕರು
ಮೈತ್ರಿಧರ್ಮ ಪಾಲಿಸುವರೋ, ಕಳೆದ ಅವಧಿಯ ‘ಆಪರೇಷನ್’ನ ಸೇನಾನಿಯನ್ನು ಉಳಿಸಿಕೊಳ್ಳುವರೋ ಅಥವಾ ಸೇನಾನಿಗೆ ಇನ್ನಿತರೆ ಒತ್ತಡದ ಮೂಲಕ ತೆನೆ ಹೋರುವಂತೆ ಮಾಡುವರೋ ಎನ್ನುವುದಕ್ಕೆ ಉತ್ತರ ಸಿಗಲಿದೆ.

ಇದನ್ನೂ ಓದಿ: Ranjith H Ashwath Column: ಅತಿಯಾದ ಆತ್ಮವಿಶ್ವಾಸ ಕಂಟಕವಾದೀತು !