Tuesday, 22nd October 2024

ಬಿಎಸ್’ವೈ ಕಡೆ ವರಿಷ್ಠರ ಮೃದುಧೋರಣೆಗೆ ಕಾರಣವೇನು ?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ್

ಜೆಡಿಎಸ್-ಕಾಂಗ್ರೆಸ್ ಸರಕಾರ ಪತನದ ಬಳಿಕ ಅಧಿಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಯಡಿಯೂರಪ್ಪನವರು, ಅಂದಿನಿಂದ ಹಗ್ಗದ ಮೇಲೆಯೇ ನಡೆದುಕೊಂಡು ಬಂದಿದ್ದರು. ಒಂದೆಡೆ ಸರಕಾರ ನಡೆಸುವ ಭಾರವಾದರೆ, ಇನ್ನೊಂದೆಡೆ ವರಿಷ್ಠರಿಂದ ಸಿಗದ ಪೂರ್ಣ ಪ್ರಮಾಣದ ಸಹಕಾರ. ಈ ಎರಡನ್ನೂ ನಿಭಾಯಿಸಿಕೊಂಡು, ಗಜಪ್ರಸವದಂತಾಗಿದ್ದ ಸಂಪುಟ ವಿಸ್ತರಣೆ ಪೂರ್ಣಗೊಂಡ
ನಿರಾಳತೆಯಿದೆ.

ಇದೇ ಸಮಯದಲ್ಲಿ ನಾಯಕತ್ವ ಬದಲಾವಣೆ ವಿರುದ್ಧ ಮಾತನಾಡುತ್ತಿದ್ದವರಿಗೆ ಸುಮ್ಮನಿರುವಂತೆ ವರಿಷ್ಠರು ಪರೋಕ್ಷ ಸಂದೇಶ ರವಾನಿಸಿರುವುದು ಮತ್ತಷ್ಟು ಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ, ಯಡಿಯೂರಪ್ಪನವರಿಗೆ ರಾಜಕೀಯವಾಗಿ ಕಾಡುತ್ತಿದ್ದ (ಕಾಡುತ್ತಿರುವ) ಬಹುದೊಡ್ಡ ಸಮಸ್ಯೆಯೆಂದರೆ, ದೆಹಲಿ ನಾಯಕರು ತಾವು ಅಂದುಕೊಂಡ ಹಾಗೆ ನಡೆದುಕೊಳ್ಳುವಿಲ್ಲ ಎನ್ನುವುದು.

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದರಿಂದಲೋ ಅಥವಾ ಈ ಹಿಂದೆ ಆಯಕಟ್ಟಿನ ಸ್ಥಾನದಲ್ಲಿದ್ದ ದೆಹಲಿ ನಾಯಕರು ಯಡಿಯೂರಪ್ಪ ಅವರ ಆಪ್ತರಾಗಿದ್ದರು ಎನ್ನುವ ಕಾರಣಕ್ಕೋ, ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ, ಸದ್ಯದ ಪರಿಸ್ಥಿತಿಯಂತೆ ಕಾಡಿ-ಬೇಡಿ ಒಪ್ಪಿಗೆ ಪಡೆಯಬೇಕಾದ ಸ್ಥಿತಿ ಯಡಿಯೂರಪ್ಪ ಅವರಿಗೆ ಇರಲಿಲ್ಲ. ಒಂದು ಹಂತದಲ್ಲಿ, ಮುಖ್ಯಮಂತ್ರಿಯಾಗಿ ಯಾರನ್ನು ಯಾವ ಸ್ಥಾನದಲ್ಲಿ ಕೂರಿಸಬೇಕು ಎನ್ನುವುದನ್ನು ನಿರ್ಧರಿಸಿ, ಮುಕ್ಕಾಲು ಕೆಲಸ
ಮುಗಿದ ಬಳಿಕ ಪಕ್ಷದ ರಾಷ್ಟ್ರಾಧ್ಯಕ್ಷರಿಗೆ ಅಥವಾ ಇತರ ಹಿರಿಯ ನಾಯಕರಿಗೆ ‘ಮಾಹಿತಿ’ ನೀಡಿ ಒಪ್ಪಿಗೆ ಪಡೆಯುತ್ತಿದ್ದರು.

ಆ ಸ್ವಾತಂತ್ರ್ಯ ಯಡಿಯೂರಪ್ಪ ಅವರಿಗೆ ಸಿಗಲು ಹಲವು ಕಾರಣಗಳಿರಬಹುದು. ಆದರೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಟೀಂ ಕುಳಿತುಕೊಳ್ಳುತ್ತಿದ್ದಂತೆ, ಯಡಿಯೂರಪ್ಪ ಮಾತ್ರವಲ್ಲದೇ, ಎಲ್ಲ ನಾಯಕರು ಒಂದು ಹಂತಕ್ಕೆ ಈ ‘ಸ್ವಾತಂತ್ರ್ಯ’ ಕಳೆದುಕೊಂಡು ಪ್ರತಿಯೊಂದಕ್ಕೂ ಹೈಕಮಾಂಡ್ ಸಹಿ ಅತ್ಯಗತ್ಯ ಎನ್ನುವ ಸ್ಥಿತಿ ಬಂದು ತಲುಪಿದೆ.

ಈ ರೀತಿಯ ವಾತಾವರಣ ನಿರ್ಮಾಣವಾಗಿದ್ದರಿಂದಲೇ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಸಂಪುಟ ರಚಿಸುವಾಗ ಹಾಗೂ ಎರಡು ಬಾರಿ ಸಂಪುಟ ವಿಸ್ತರಣೆ ವೇಳೆ ಭಾರಿ ತಡವಾಗಿದ್ದು ಎನ್ನುವುದು ಎಲ್ಲರಿಗೂ ತಿಳಿದಿರುವ ಓಪನ್ ಸಿಕ್ರೇಟ್ ಆಗಿದೆ.
ಈ ರೀತಿ ವರಿಷ್ಠರು ಯಡಿಯೂರಪ್ಪ ಅವರನ್ನು ಕಾಯಿಸುವುದಕ್ಕೆ ಒಂದೊಂದು ಸಮಯದಲ್ಲಿ ಒಂದೊಂದು ಅರ್ಥ ಕೇಳಿ ಬರುತ್ತಿದೆ. ಕೆಲವೊಮ್ಮೆ ಸಂಪುಟ ವಿಸ್ತರಣೆ ವೇಳೆ ಗೊಂದಲವಿಲ್ಲದೇ ಸುಸೂತ್ರವಾಗಿ ಮುಗಿಸಲು ಯಡಿಯೂರಪ್ಪ ಹಾಗೂ ಪಕ್ಷದ ವರಿಷ್ಠರು ಒಬ್ಬರ ಮೇಲೊಬ್ಬರು ಹಾಕಿಕೊಂಡು ಎಲ್ಲವೂ ಸರಿ ಹೋದ ಬಳಿಕ ನಿರ್ಣಯ ಕೈಗೊಳ್ಳುವುದು ಎನ್ನುವುದು ಒಂದು
ವಾದವಾದರೆ, ಇನ್ನೊಂದೆಡೆ ಸತಾಯಿಸಿ ಸತಾಯಿಸಿ, ಯಡಿಯೂರಪ್ಪನವರಿಗೆ ಸಾಕೆನಿಸಿ ಸ್ಥಾನದಿಂದ ಕೆಳಕ್ಕೆ ಇಳಿಯಬೇಕು.

ಈ ರೀತಿಯ ವಾತಾವರಣೆ ಸೃಷ್ಟಿಸುವುದರಿಂದ, ನಾಯಕತ್ವ ಬದಲಾವಣೆ ಸದ್ದು-ಗದ್ದಲವಿಲ್ಲದೇ ಆಗಬೇಕು ಎನ್ನುವುದು
ಕೆಲವರದ್ದಾಗಿದೆ. ಆದರೆ ಎರಡನೇ ವಾದವನ್ನು ಅನೇಕರು ಒಪ್ಪುವುದಿಲ್ಲ. ಕಾರಣವೆಂದರೆ, ‘ಯಡಿಯೂರಪ್ಪ ನಂತರ ಯಾರು?’ ಎನ್ನುವ ಅಥವಾ ‘ಎರಡನೇ ಹಂತದ ಸಮರ್ಥ ನಾಯಕ’ ಯಾರು ಎನ್ನುವ ಪ್ರಶ್ನೆಗೆ ಈಗಲೂ ಪಕ್ಷದ ವರಿಷ್ಠರ ಬಳಿಕ ಸ್ಪಷ್ಟ ಉತ್ತರವಿಲ್ಲ.

ಈಗಾಗಲೇ ಸಂಘಟನೆ ವಿಷಯದಲ್ಲಿ, ಅರವಿಂದ ಲಿಂಬಾವಳಿ ಸೇರಿದಂತೆ ಅನೇಕರು ವರಿಷ್ಠರ ಕೈಯಲ್ಲಿ ಶಹಬಾಸ್ ಎನಿಸಿ ಕೊಂಡಿದ್ದಾರೆ. ಆದರೆ ಅವರನ್ನು ಯಡಿಯೂರಪ್ಪ ನಂತರದ ನಾಯಕನೆಂದು ಕೊಳ್ಳುವುದಾದರೇ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಇದೇ ರೀತಿ ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ, ಜಗದೀಶ್ ಶೆಟ್ಟರ್, ಆರ್. ಅಶೋಕ್ ಸದಾನಂದಗೌಡ ಸೇರಿದಂತೆ
ಅನೇಕರು ‘ನಾಯಕರು’ ಎನಿಸಿಕೊಂಡವರಿದ್ದಾರೆ. ಆದರೆ ಈ ಎಲ್ಲರೂ ತಮ್ಮದೇ ಜಾತಿಯ ಮತದಾರರನ್ನು ತಮ್ಮೊಂದಿಗೆ
ತಗೆದುಕೊಂಡು ಹೋಗಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಅನೇಕರು ಇಲ್ಲ ಎನ್ನುವ ಉತ್ತರವನ್ನು ನೀಡುತ್ತಿದ್ದಾರೆ.

ಇನ್ನು ಸಂಪುಟದಲ್ಲಿ ಸಚಿವರಾಗಿದ್ದ ಸಿ.ಟಿ ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿ, ‘ತರಬೇತಿ’
ನಡೆಯುತ್ತಿದೆ. ಆದರೆ ಅವರನ್ನು ಈಗಲೇ ಯಡಿಯೂರಪ್ಪ ನಂತರ ಎನ್ನುವ ಮಾತನ್ನು ಗಟ್ಟಿಯಾಗಿ ಹೇಳಲು ಯಾರೂ
ಸಿದ್ಧರಿಲ್ಲ. ಆದ್ದರಿಂದ ಪಕ್ಷದ ವರಿಷ್ಠರಿಗೆ ಹಾಗೂ ಪಕ್ಷದ ನಿಯಮಾವಳಿಯ ಪ್ರಕಾರ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗಿ ಮುಂದುವರಿಯಬಾರದು ಎನ್ನುವುದಾಗಿದ್ದರೂ, ಸೂಕ್ಷ್ಮವಾಗಿ ಗಮನಿಸಿದಾಗ, ಅವರ ನಂತರ ಯಾರನ್ನು ನಾಯಕನೆಂದು ತೋರಿಸಲು ಸದ್ಯದ ಮಟ್ಟಿಗೆ ಆಯ್ಕೆಗಳಿಲ್ಲ.

ಆದ್ದರಿಂದ ಪಕ್ಷದ ವರಿಷ್ಠರು ಯಡಿಯೂರಪ್ಪ ಅವರನ್ನೇ ಸದ್ಯಕ್ಕೆ ಪಕ್ಷದ ಮಾಸ್ ಲೀಡರ್ ಎಂದು ಬಿಂಬಿಸಲು ತೀರ್ಮಾನಿಸಿ ದಂತಿದೆ. ಅಳೆದು ತೂಗಿ ಈ ತೀರ್ಮಾನ ತಗೆದುಕೊಂಡ ಬಳಿಕವೇ, ಸಂಪುಟ ವಿಸ್ತರಣೆಗೆ ಅವಕಾಶ ನೀಡಿರುವುದು. ಈ ರೀತಿ ಅಳೆದು -ತೂಗಿ, ಕಾಡಿ ಪಡೆದ ಸಂಪುಟ ವಿಸ್ತರಣೆ ಸಮಯದಲ್ಲಿ, ಎಲ್ಲ ಸರಕಾರಗಳ ರೀತಿಯಲ್ಲಿ ಈ ಬಾರಿಯೂ ಬಂಡಾಯ, ಅಸಮಾ ಧಾನ, ವರಿಷ್ಠರಿಗೆ ದೂರು ಇತ್ಯಾದಿ..ಇತ್ಯಾದಿ ಬೆಳವಣಿಗೆಗಳು ಕಳೆದ ವಾರ ಸಂಪುಟ ವಿಸ್ತರಣೆ ಬಳಿಕ ನಡೆಯಿತು.

ಇರುವ ಏಳು ಸ್ಥಾನದಲ್ಲಿ ಎರಡು ಸ್ಥಾನವನ್ನು ವಲಸಿಗರಿಗೆ ಹಾಗೂ ಇನ್ನೊಂದು ಸ್ಥಾನವನ್ನು ಅವರನ್ನು ಕರೆತಂದವರಿಗೆ ನೀಡಿದ್ದರಿಂದ ಸಹಜವಾಗಿಯೇ, ಮೂಲ ಬಿಜೆಪಿಗರು ಎದ್ದು ಕೂತಿದ್ದರು. ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ
ಅವರಂತೂ, ಸರಕಾರದ ವಿರುದ್ಧ ಸಿಡಿ ಬಾಂಬ್ ಸಿಡಿಸಲು ಸಜ್ಜಾಗಿದ್ದರು. ಸ್ವಪಕ್ಷದವರ ವಿರುದ್ಧವೇ ಭ್ರಷ್ಟಾಚಾರದ ಆರೋಪ ವನ್ನು ಮಾಡಿಕೊಂಡು ಓಡಾಡಿದರು. ರೇಣುಕಾಚಾರ್ಯ ಒಂದು ಹೆಜ್ಜೆ ಮುಂದೆ ಹೋಗಿ, ‘ವರಿಷ್ಠರಿಗೆ ದೂರು ನೀಡುವುದಾಗಿ’ ದೆಹಲಿ ವಿಮಾನವನ್ನೇ ಏರಿದರು.

ಇನ್ನು ಯತ್ನಾಳ್ ಅವರು ಪ್ರತಿಪಕ್ಷಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಯಡಿಯೂರಪ್ಪ ಹಾಗೂ ಪಕ್ಷದ ನಿರ್ಣಯದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಇವರಿಗೆ ಹಿಮ್ಮೇಳದಂತ ಅರವಿಂದ ಬೆಲ್ಲದ್, ಸುನೀಲ್ ಕುಮಾರ್ ಸೇರಿ ಇನ್ನು ಕೆಲವರು ಜೋರಾಗಿ ಹೇಳದೇ, ಒಳಗೊಳಗೆ ತಮ್ಮ ಅಸಮಾಧಾನವನ್ನು ಪಕ್ಕದವರಿಗೂ ಕೇಳದಂತೆ ಹೇಳಿಕೊಂಡು ತಾವು ರೇಸ್‌ನಲ್ಲಿ ಇದ್ದೆವು ಎನ್ನುವು ದನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದರು.

ಈ ರೀತಿ ಬಂಡಾಯವೆದ್ದಾಗ ಸಹಜವಾಗಿ ಮುಖ್ಯಮಂತ್ರಿಯಾದವರು ಅಸಮಾಧಾನಿತ ಶಾಸಕರನ್ನು ಕರೆದು, ಸಂತೈಸುವ ಅಥವಾ ದೆಹಲಿಗೆ ಹೋಗಿ ವರಿಷ್ಠರ ಬಳಿಕ ದೂರು ಇಡುವುದು ಬೇಡ ಎನ್ನುವ ಸಂಧಾನವನ್ನು ಮಾಡುತ್ತಾರೆ. ಈ ಶಾಸಕರು ದೆಹಲಿಗೆ ಹೋಗಿ ದೂರು ನೀಡಿದ ಕೂಡಲೇ ತಮ್ಮ ಸ್ಥಾನ ಹೋಗುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ, ಮಾಧ್ಯಮಗಳಲ್ಲಿ ಗಂಟೆ ಗೊಮ್ಮೆ ಬರುವ ಸುದ್ದಿಗಳಿಂದ ಆಗುವ ‘ಮುಜುಗರ’ದಿಂದ ತಪ್ಪಿಸಿಕೊಳ್ಳುವುದಕ್ಕಾದರೂ, ಶಾಸಕರನ್ನು ಸಂತೈಸುವ ಪ್ರಯತ್ನ ವನ್ನು ಮಾಡುತ್ತಾರೆ.

ಯಡಿಯೂರಪ್ಪನವರಿಂದಲೂ ಇದೇ ರೀತಿಯ ನಡೆಯನ್ನು ಅನೇಕರು ನಿರೀಕ್ಷೆ ಮಾಡಿದ್ದರು. ಆದರೆ ಅಚ್ಚರಿಯ ರೀತಿಯಲ್ಲಿ ಯಡಿಯೂರಪ್ಪ ಈ ಬಾರಿ ಪರಿಸ್ಥಿತಿಯನ್ನು ‘ನಿಭಾಯಿಸಿದ್ದಾರೆ’. ಈ ಬಾರಿ ಎಂದಿನಂತೆ ತಮ್ಮ ಆಪ್ತರನ್ನು ಕರೆದು ಮಾತನಾಡಿ ಸುವ ಅಥವಾ ಮುಂದಿನ ದಿನದಲ್ಲಿ ಎಲ್ಲವನ್ನು ಬಗೆಹರಿಸುವ ಭರವಸೆಯನ್ನು ನೀಡಲಿಲ್ಲ. ಅದರಲ್ಲಿಯೂ ರೇಣುಕಾಚಾರ್ಯ ಅವರು ದೆಹಲಿಗೆ ತೆರಳಿ, ವರಿಷ್ಠರ ವಿರುದ್ಧ ದೂರು ನೀಡುತ್ತಾರೆ ಎನ್ನುವುದು ಖಾತ್ರಿಯಾದ ಬಳಿಕವೂ ಅದನ್ನು ತಡೆಯುವ ಯಾವ ಪ್ರಯತ್ನವನ್ನು ಮಾಡಲಿಲ್ಲ.

ಅಚ್ಚರಿ ಎನ್ನುವ ರೀತಿಯಲ್ಲಿ ಈ ಬಾರಿ ವರಿಷ್ಠರಿಗೆ ದೂರು ನೀಡುವುದಾದರೆ ನೀಡಿ. ನನ್ನದೇನೂ ಅಭ್ಯಂತರವಿಲ್ಲ’ ಎನ್ನುವ ಮಾತನ್ನು ನಯವಾಗಿ ಆದರೆ, ಅತೃಪ್ತರಿಗೆ ಕಠಿಣ ಸಂದೇಶವನ್ನು ರವಾನಿಸುವ ಕಾರ್ಯ ಮಾಡಿದರು. ಇದು ಒಂದೆಡೆ ಉತ್ತಮ ನಡೆ ಎನಿಸಿಕೊಂಡರೂ, ಈ ಹೇಳಿಕೆ ನೀಡುವಾದ ಯಡಿಯೂರಪ್ಪ ಅವರು ‘ರಿಸ್ಕ್’ ತಗೆದುಕೊಳ್ಳುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ.

ಇತಿಮಿತಿಯಲ್ಲಿ ಸಂಪುಟ ವಿಸ್ತರಣೆ ಮಾಡಿದ್ಧೇನೆ. ಎಲ್ಲವೂ ವರಿಷ್ಠರ ಗಮನಕ್ಕೆ ತಂದೇ ಮಾಡಿದ್ದೇನೆ. ಅದರ ಮೇಲೂ
ವರಿಷ್ಠರಿಗೆ ದೂರು ನೀಡಬೇಕು ಎನಿಸಿದರೆ ನೀಡಿ ಎನ್ನುವ ಮೂಲಕ ಬಂಡಾಯಕ್ಕೆ ಪ್ರತಿಬಂಡಾಯ ಸೃಷ್ಟಿಸಿದರು. ಹಾಗೆ ನೋಡಿದರೆ ಯಡಿಯೂರಪ್ಪ ವಿರುದ್ಧ ವರಿಷ್ಠರಿಗೆ ದೂರು ನೀಡಿ, ಅವರನ್ನು ಕೆಳಕ್ಕೆ ಇಳಿಸುವ ಅಥವಾ ವರಿಷ್ಠರಿಂದ ಸಿಎಂ ಛೀಮಾರಿ ಹಾಕಿಸುವ ತಾಕತ್ತು ಬಂಡಾಯವೆದ್ದಿರುವ ಬಹುತೇಕರಲ್ಲಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಇದರೊಂದಿಗೆ ಯಾರಿಗೆ ದೂರು ನೀಡಬೇಕು ಎಂದು ತೋಚದೇ, ಕೊನೆಗೆ ಅರುಣ್ ಸಿಂಗ್ ಅವರಿಗೆ ದೂರು ಸಲ್ಲಿಸಿದ ರೇಣುಕಾ ಚಾರ್ಯ ಅವರು ಯಡಿಯೂರಪ್ಪ ಬೆಳೆಸಿದ ನಾಯಕರಲ್ಲಿ ಒಬ್ಬರು ಎನ್ನುವುದನ್ನು ಮರೆಯುವಂತಿಲ್ಲ. ಆದ್ದರಿಂದ ಈ ದೂರು ಪ್ರಹಸನ ಕೆಲ ದಿನದಲ್ಲಿ ತಣ್ಣಗೆಯಾಗಲಿದೆ ಎನ್ನುವ ವಿಶ್ವಾಸದಲ್ಲಿಯೇ ಯಡಿಯೂರಪ್ಪ ಅವರು ಈ ಮಾತನ್ನು ಆಡಿರಬಹುದು.
ಅದನ್ನು ಮೀರಿ ಈ ರೀತಿ ಹೇಳಿಕೆ ಹಿಂದಿನ ಕಾರಣಗಳನ್ನು ನೋಡಿದರೆ, ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅರುಣ್ ಸಿಂಗ್ ನೇಮಕವಾದ ದಿನದಿಂದ ಯಡಿಯೂರಪ್ಪ ಅವರು, ಸಿಂಗ್ ಅವರನ್ನು ಹೊಂದಾಣಿಕೆ ಮಾಡಿಕೊಂಡಿದ್ದಾರೆ.

ಆದ್ದರಿಂದಲೇ ಬಿಎಸ್‌ವೈ ವಿರುದ್ಧ ಯಾರೇ ಮಾತನಾಡಿದರೂ ಅದನ್ನು ನಿಯಂತ್ರಿಸುವ ಅಥವಾ ವರಿಷ್ಠರ ಮಟ್ಟದಲ್ಲಿ
ಹ್ಯಾಂಡಲ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನೂ ನೀಡದೇ, ವರಿಷ್ಠರ ಬಳಿ ರಾಜ್ಯದಲ್ಲಿ ಆಗಾಗ್ಗೆ ಕೇಳಿಬರುವ ನಾಯಕತ್ವದ ವಿರುದ್ಧ ಅಪಸ್ವರವನ್ನು ಕೇಳದ ರೀತಿಯಲ್ಲಿ ನಿಭಾಯಿಸುವಲ್ಲಿ ಒಂದು ಹಂತಕ್ಕೆ ಯಶಸ್ವಿ ಯಾಗಿದ್ದಾರೆ. ಇದಕ್ಕೆ ಪೂರಕವಾಗಿಯೇ ಅರುಣ್ ಸಿಂಗ್ ಅವರು ಯಡಿಯೂರಪ್ಪನವರೇ ಮುಂದಿನ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಎನ್ನುವ ಸಂದೇಶವನ್ನು ಆಗಾಗ್ಗೆ ರವಾನಿಸುತ್ತಿದ್ದಾರೆ.

ಆದರೆ ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೊಂದಿದೆ. ಅದೇನೆಂದರೆ, ಯಡಿಯೂರಪ್ಪ ಅವರಿಗೆ ಅರುಣ್ ಸಿಂಗ್ ಆಪ್ತರಾಗಿ ದ್ದರೂ, ’ಕುರ್ಚಿ ಭದ್ರ’ ಎನ್ನುವ ಸಂದೇಶವನ್ನು ರವಾನಿಸುವ ಮೊದಲು ಪಕ್ಷದ ವರಿಷ್ಠರ ಸೂಚನೆ ಇಂದಿನ ಬಿಜೆಪಿಯಲ್ಲಿ
ಅತ್ಯಗತ್ಯ. ಅದರಲ್ಲಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆ ಇಲ್ಲದೇ, ಈ ರೀತಿಯ ಘೋಷಣೆಗಳನ್ನು ಅರುಣ್ ಸಿಂಗ್ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದು ಸ್ಪಷ್ಟ.

ಇದಕ್ಕೆ ಪೂರಕ ಎನ್ನುವ ರೀತಿಯಲ್ಲಿ ಕಳೆದ ವಾರದ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಅವರು, ಹೋಗಿ ಬಂದಲ್ಲಿ ಎಲ್ಲ ಯಡಿ ಯೂರಪ್ಪ ಹಾಗೂ ಅವರ ಸರಕಾರವನ್ನು ಹಾಡಿ ಹೊಗಳಿ ಏರಿಸಿದ್ದಾರೆ. ಯಡಿಯೂರಪ್ಪ ಅವರನ್ನು ಅಭಿವೃದ್ಧಿಯ ಹರಿಕಾರ ಎನ್ನುವ ರೀತಿಯಲ್ಲಿ ಬಹಿರಂಗವಾಗಿ ಯೇ ಹೇಳುವ ಮೂಲಕ ಸಿಎಂ ಪರ ಪರೋಕ್ಷ ಬ್ಯಾಟಿಂಗ್ ನಡೆಸಿದ್ದರು. ಬಹಿರಂಗ ಕಾರ್ಯ ಕ್ರಮದಲ್ಲಿ ಈ ರೀತಿ ಹೇಳಿ, ಪಕ್ಷದ ಆಂತರಿಕ ಸಭೆಯಲ್ಲಿ ಯಡಿಯೂರಪ್ಪ ಅವರಿಗೆ ಬುದ್ಧಿ ಹೇಳುವ ಅಥವಾ ನಾಯಕತ್ವ ಬದಲಾವಣೆ ವಿಷಯವನ್ನು ಶಾ ಎತ್ತಲಿದ್ದಾರೆ ಎಂದು ಅನೇಕರು ಭಾವಿಸಿದ್ದರು.

ಆದರೆ ಆಂತರಿಕ ಸಭೆಯಲ್ಲಿಯೂ ಯಡಿಯೂರಪ್ಪ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ ಎನ್ನುವ ಸುದ್ದಿಯಿದೆ. ಇದನ್ನು ಗಮನಿಸಿದರೆ, ಯಡಿಯೂರಪ್ಪ ಅವರ ಭುಜಗಳಿಗೆ ವರಿಷ್ಠರು ಬಲ ತುಂಬಿದ್ದಾರೆ ಎನ್ನುವುದರದಲ್ಲಿ ಯಾವುದೇ ಅನುಮಾನ
ಬೇಡ. ಯಡಿಯೂರಪ್ಪ ವಿರುದ್ಧ ಗುರು-ಗುರು ಎನ್ನುತ್ತಿದ್ದ ವರಿಷ್ಠರು ಇದೀಗ ಏಕಾಏಕಿ ಅವರ ಪರವಾಗಿ ನಿಲ್ಲುವುದಕ್ಕೆ ಕಾರಣ ವಿಲ್ಲ ಎಂದಲ್ಲ. ಮೇಲೆ ಹೇಳಿದಂತೆ ‘ಕರ್ನಾಟಕ ಬಿಜೆಪಿಗೆ ಮುಂದ್ಯಾರು?’ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವಲ್ಲಿಯೇ ದಿನ ಕಳೆಯುತ್ತಿದ್ದಾರೆ ಹೊರತು, ಅದಕ್ಕೆ ಸಮಪರ್ಕ ಉತ್ತರ ಮಾತ್ರ ಸಿಕ್ಕಿಲ್ಲ.

ಒಂದು ವೇಳೆ ಯಡಿಯೂರಪ್ಪ ಅವರನ್ನು ಸರಿಯಾದ ರೀತಿ ನಡೆಸಿಕೊಳ್ಳದಿದ್ದರೆ, ಪಕ್ಷದಲ್ಲಿ ಪುನಃ ಯಾದವೀ ಕಲಹ ಆರಂಭ ವಾಗುವುದರಲ್ಲಿ ಅನುಮಾನವಿಲ್ಲ. ಎಲ್ಲರನ್ನು, ಎಲ್ಲವನ್ನು ಒಂದಾಗಿ ತಗೆದುಕೊಂಡು ಹೋಗುತ್ತಿರುವ ಯಡಿಯೂರಪ್ಪ ಅವರನ್ನು ಈಗ ಕೈಬಿಟ್ಟರೆ ಅದರ ನೇರ ಪರಿಣಾಮ 2023ರಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಣಿಸಲಿದೆ. ದಕ್ಷಿಣ ಭಾರತದಲ್ಲಿ ಈಗ ತಾನೇ ಕಣ್ಣು ಬಿಟ್ಟು, ನೆಲೆ ಕಂಡುಕೊಳ್ಳುತ್ತಿರುವ ಬಿಜೆಪಿಗೆ ಕರ್ನಾಟಕ ಬಹುಮುಖ್ಯ ರಾಜ್ಯವಾಗಿದ್ದು, ಒಂದು ವೇಳೆ ಇದನ್ನು ಕಳೆದುಕೊಳ್ಳುವ ಹಂತಕ್ಕೆ ಬಂದರೆ ಬಹುಕಷ್ಟ ಎನ್ನುವ ಅರಿವು ಪಕ್ಷದ ವರಿಷ್ಠರಿಗೆ ಇದೆ.

ಆದ್ದರಿಂದ ಅಮಿತ್ ಶಾ, ಅರುಣ್ ಸಿಂಗ್ ಆದಿಯಾಗಿ ದೆಹಲಿ ನಾಯಕರು ಯಡಿಯೂರಪ್ಪ ಪರ ನಿಂತಿದ್ದಾರೆ. ಸಂಪುಟ ವಿಸ್ತರಣೆ ವೇಳೆ ಎದುರಾದ ಭಿನ್ನಮತವನ್ನು ಯಡಿಯೂರಪ್ಪ ಅವರು ತಾನೇ ಬಗೆಹರಿಸಬಹುದಾಗಿದ್ದರೂ, ಅದನ್ನು ವರಿಷ್ಠರ ಮೇಲೆತ್ತಿ
ಹಾಕಿದರು. ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ತಾನು ಎಲ್ಲರನ್ನು ಸಂತೈಸಲು ಹೋದರೆ, ಅದು ಮತ್ತೊಂದು ಸುತ್ತಿನ ಸಮಸ್ಯೆ ಯಾಗುತ್ತದೆ. ಆದ್ದರಿಂದ ವರಿಷ್ಠರ ಮೇಲೆ ಹ್ತಾಕಿದರೆ, ಬಹುತೇಕರು ದೆಹಲಿವರೆಗೆ ಹೋಗುವುದಿಲ್ಲ ಎನ್ನುವ ಯೋಚನೆ ಯಡಿಯೂರಪ್ಪ ಅವರದ್ದಾಗಿತ್ತು.

ಇದರೊಂದಿಗೆ ನೂತನವಾಗಿ ಸೇರಿಕೊಂಡಿರುವ ಏಳು ಸಚಿವರ ಪೈಕಿ ಯಾರನ್ನೂ ತಗೆದುಹಾಕುವಂತಿಲ್ಲ. ವಲಸಿಗ ಕೋಟದಲ್ಲಿ ಎಂಟಿಬಿ ಹಾಗೂ ಶಂಕರ್ ಹೊರತುಪಡಿಸಿದರೆ, ಇನ್ನುಳಿದಂತೆ ಅರವಿಂದ ಲಿಂಬಾವಳಿ, ಅಂಗಾರ, ಮುರುಗೇಶ್ ನಿರಾಣಿ ಅವರಿಗೆ ಪಕ್ಷದಲ್ಲಿ ಅವರದ್ದೇ ಆದ ಹಿರಿತನವಿದ್ದು, ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಆದ್ದರಿಂದ ವರಿಷ್ಠರ ಬಳಿಗೆ ಹೋದರೂ, ಅಲ್ಲಿರುವ ನಾಯಕರು, ಇಂತಹ ವ್ಯಕ್ತಿಯನ್ನು ತಗೆದು, ಇವರಿಗೆ ಸಚಿವ ಸ್ಥಾನ ನೀಡಿ ಎನ್ನುವ ಪರಿಸ್ಥಿತಿಯಲ್ಲಿಲ್ಲ.

ಇದರೊಂದಿಗೆ ಈ ಸಪ್ತ ಸಚಿವರ ಹೆಸರನ್ನು ಅಂತಿಮಗೊಳಿಸಿದ್ದು ಸಹ ವರಿಷ್ಠರು. ಆದ್ದರಿಂದ ಇದೀಗ ಎದ್ದಿರುವ ಅಸಮಾ ಧಾನವನ್ನು ಅವರೇ ನಿಭಾಯಿಸಲಿ ಎನ್ನುವ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ಅವರಿದ್ದರು. ಈ ಎಲ್ಲ ವಿಷಯವನ್ನು ಗಮನ ದಲ್ಲಿರಿಸಿಕೊಂಡೇ ಯಡಿಯೂರಪ್ಪ ಅವರನ್ನು ಬಿಂಬಿಸುವುದಕ್ಕೆ ಹಾಗೂ ರಾಜ್ಯದಲ್ಲಿ polarise ಆಗಿರುವ ಮತಗಳು ಒಡೆದು ಛಿದ್ರವಾಗದಂತೆ ನೋಡಿಕೊಳ್ಳುವುದಕ್ಕಾಗಿಯೇ,  ಯಡಿಯೂರಪ್ಪ ಅವರ ಪರ ಬ್ಯಾಟಿಂಗ್ ಮಾಡುವ ರೀತಿ ವರಿಷ್ಠರು ಬಿಂಬಿಸು ತ್ತಿರಬಹುದು.

ಆದರೆ ಪಕ್ಷ ಹಾಗೂ ಸರಕಾರದ ಸಂಪೂರ್ಣ ಜುಟ್ಟನ್ನು ಯಡಿಯೂರಪ್ಪ ಅವರಿಗೆ ನೀಡುವ ಲೆಕ್ಕಾಚಾರದಲ್ಲಿ ವರಿಷ್ಠರಿಲ್ಲ. ರಾಜಕೀಯ ಆಟದ ಭಾಗವಾಗಿ ದಾರವನ್ನು ವರಿಷ್ಠರು ಕೊಂಚ ಸಡಿಲಬಿಟ್ಟರೂ, ದಾರದ ಅಂಚನ್ನು ಮಾತ್ರ ತಾನೇ ಹಿಡಿದು ಆಡಿಸಬೇಕು ಎನ್ನುವ ಮನಸ್ಥಿತಿಯಲ್ಲಿ ದೆಹಲಿ ನಾಯಕರಿದ್ದಾರೆ.