ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಅಮೆರಿಕವು ಜಪಾನಿನ ಹಿರೋಷಿಮಾ ಮತ್ತು ನಾಗಾಸಾಕಿ ಮೇಲೆ ಪರಮಾಣು ಬಾಂಬ್ ಸಿಡಿಸಿತ್ತು. ಹೈಡ್ರೋಜನ್ ಬಾಂಬ್ ಇದ್ದಿದ್ದರೆ ಅದನ್ನೂ ಸಿಡಿಸುತ್ತಿತ್ತೋ ಏನೋ. ಹಾಗೇನಾದರೂ ಆಗಿದ್ದರೆ ಪರಿಣಾಮ ಇನ್ನೂ ಭೀಕರವಾಗಿರುತ್ತಿತ್ತು.
ವಿಜ್ಞಾನಿಗಳು ಸೋಲಲಿಲ್ಲ ಎನ್ನುವುದರಲ್ಲಿ ಎರಡನೆಯ ಸೊಲ್ಲಿಲ್ಲ. ಗೇಲಿ ಮಾಡಿದವರು ಸೋತಿದ್ದಾರೆ, ಪ್ರಾರ್ಥನೆ ಮಾಡಿದವರು ಗೆದ್ದಿದ್ದಾರೆ. ‘ಚಂದಿರನೇತಕೆ ಓಡುವನಮ್ಮಾ…’ ಪದ್ಯ ಕೇಳದವರು ಇರಲಿಕ್ಕಿಲ್ಲ. ‘ಚಂದಿರನೇತಕೆ ಓಡುವನಮ್ಮಾ, ಮೋಡಕೆ ಹೆದರಿಹನೆ? ಬೆಳ್ಳಿಯ ಮೋಡದ ಅಲೆಗಳ ಕಂಡು ಚಂದಿರ ಬೆದರಿಹನೆ?’ ಕವಿ ನೀ.ರೇ. ಹಿರೇಮಠ ಅವರ ಶಿಶುಗೀತೆಯಲ್ಲಿ ಬರುವ ಸಾಲು ಇದು. ಗೀತೆಯ ಕೊನೆಯಲ್ಲಿ
ಬರುವ ಸಾಲು ಹೀಗಿದೆ: ‘ಬಾಬಾ ಚಂದಿರ ಬೆಳ್ಳಿಯ ಚಂದಿರ ನಮ್ಮಯ ಮನೆಗೀಗ, ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ ಮನವನು ಬೆಳಗೀಗ’. ಅದನ್ನು ಈಗ ಸ್ವಲ್ಪ ಬದಲಾಯಿಸಿ, ‘ನೀನು ಬರದಿರೆ ನಾವೇ ಬರುವೆವು ನಿನ್ನಯ ಬಳಿಗೀಗ’ ಎಂದು ಹೇಳಬಹು ದೇನೋ! ಅದೇ ಗೀತೆಯಲ್ಲಿ ಇನ್ನೊಂದು ಸಾಲು, ‘ಚಂದಿರನೆನ್ನಯ ಗೆಳೆಯನು ಅಮ್ಮಾ ನನ್ನೊಡ ನಾಡುವನು’. ಅಲ್ಲವೇ? ಆದರೆ, ಅಂಥ ನಿರುಪ ದ್ರವಿ ಗೆಳೆಯನನ್ನೂ ಒಂದು ಕಾಲದಲ್ಲಿ ತಮ್ಮ ಅಹಂಕಾರಕ್ಕೆ, ಪ್ರತಿಷ್ಠೆಗೆ ಬಳಸಿಕೊಳ್ಳಲು ಕೆಲವರು ಮಸಲತ್ತು ನದೆಸಿದ್ದರು ಎಂದರೆ ನಂಬುತ್ತೀರಾ? ೧೯೫೨ರಲ್ಲಿ ಅಮೆರಿಕ ಮೊದಲ ಬಾರಿ ಜಲಜನಕದ (ಹೈಡ್ರೋಜನ್) ಬಾಂಬ್ ತಯಾರಿಸಿತು.
ಒಂದು ವರ್ಷದ ಅವಧಿಯ ಒಳಗೆ ರಷ್ಯಾ ಕೂಡ ಜಲಜನಕದ ಬಾಂಬ್ ಸಿಡಿಸಿತ್ತು. ಅಲ್ಲಿಂದ ಸುಮಾರು ೧೫ ವರ್ಷದ ಅವಧಿಯ ಒಳಗೆ ಬ್ರಿಟನ್, ಚೀನಾ ಮತ್ತು ಫ್ರಾನ್ಸ್ ಕೂಡ ಈ ಬಾಂಬ್ ಪರೀಕ್ಷೆ ನಡೆಸಿದವು.
ನಂತರದ ದಿನಗಳಲ್ಲಿ ಉತ್ತರ ಕೊರಿಯಾ ಕೂಡ ವಿಶ್ವಸಂಸ್ಥೆಯ ನಿರ್ಬಂಧವನ್ನೂ ಮೀರಿ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿತು. ಅದೃಷ್ಟ ಎಂದರೆ ಈ ಬಾಂಬ್‌ನ ಪ್ರಯೋಗ ಇದುವರೆಗೆ ಯಾವುದೇ ಯುದ್ಧದಲ್ಲಿ ಅಥವಾ ಯಾವುದೇ ದೇಶದ ಮೇಲೆ ಆಗಲಿಲ್ಲ. ೨ನೇ ವಿಶ್ವಯುದ್ಧದ ಸಂದರ್ಭದಲ್ಲಿ ಅಮೆರಿಕ ಜಪಾನಿನ ಹಿರೋಷಿಮಾ-ನಾಗಾಸಾಕಿ ಮೇಲೆ ಪರಮಾಣು ಬಾಂಬ್ ಸಿಡಿಸಿತ್ತು. ಹೈಡ್ರೋಜನ್ ಬಾಂಬ್ ಇದ್ದಿದ್ದರೆ ಅದನ್ನೂ ಸಿಡಿಸುತ್ತಿತ್ತೋ ಏನೋ, ಹಾಗೇನಾದರೂ ಆಗಿದ್ದರೆ ಪರಿಣಾಮ ಇನ್ನೂ ಭೀಕರವಾಗಿರುತ್ತಿತ್ತು. ಜಲಜನಕದ ಬಾಂಬ್ ಪರಮಾಣು ಬಾಂಬ್‌ಗಿಂತಲೂ ಹೆಚ್ಚು ಶಕ್ತಿಶಾಲಿ. ಅಷ್ಟೇ ಅಲ್ಲದೆ ಚಿಕ್ಕ ಗಾತ್ರದಲ್ಲೂ ತಯಾರಿಸಿ ಕ್ಷಿಪಣಿ ಗಳಲ್ಲಿ ಸುಲಭವಾಗಿ ಅಳವಡಿಸಬಹುದಾದ್ದರಿಂದ ಹೆಚ್ಚು ಅಪಾಯಕಾರಿಯೂ ಹೌದು. ಒಂದು ನಗರವನ್ನೇ ಸುಟ್ಟು ಬೂದಿ ಮಾಡುವಷ್ಟು ಬೆಂಕಿ ಉಗುಳಲು ಒಂದು ಬಾಂಬ್ ಸಾಕು. ಈ ವಿಷಯ ಒಂದೆಡೆ ಇರಲಿ. ೧೯೫೦-೬೦ರ ದಶಕ. ಅಮೆರಿಕ ಮತ್ತು ಸೋವಿ ಯತ್ ರಷ್ಯಾ ಒಕ್ಕೂಟದ ನಡುವೆ ಶೀತಲ ಸಮರ ನಡೆಯುತ್ತಿತ್ತು. ಪ್ರತಿ ವಿಷಯದಲ್ಲೂ ನಾ ಮುಂದು, ತಾ ಮುಂದು ಎಂದು ಎರಡೂ ರಾಷ್ಟ್ರಗಳು ಹುಚ್ಚರಂತೆ ಪೈಪೋಟಿಗೆ ಇಳಿದಿದ್ದವು.
ಯಾವುದೇ ಕ್ಷೇತ್ರವಾದರೂ ಅದರಲ್ಲಿ ತನ್ನದೇ ಪಾರುಪತ್ಯ ಸಾಧಿಸಬೇಕು ಎಂದು ಎರಡೂ ರಾಷ್ಟ್ರಗಳು ಪಣತೊಟ್ಟಿದ್ದವು. ಅದಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಹೋಗಲೂ ಸಿದ್ಧವಾಗಿದ್ದವು. ‘ಸ್ಪುಟ್ನಿಕ್’ ಹೆಸರು ಕೇಳದವರು ಕಡಿಮೆ. ೧೯೫೭ರ ಅಕ್ಟೋಬರ್‌ನಲ್ಲಿ ರಷ್ಯಾ ಮೊತ್ತಮೊದಲ ಬಾರಿಗೆ ಮಾನವ ನಿರ್ಮಿತ ಉಪಗ್ರಹದ ಉಡಾವಣೆ ಮಾಡಿತು. ಈ ವಿಷಯ ತಿಳಿದ ಅಮೆರಿಕ ಗರಬಡಿದು ನಿಂತಿತ್ತು. ಅಮೆರಿಕಕ್ಕೆ ಇದು ಸುಲಭವಾಗಿ ಜೀರ್ಣಿಸಿಕೊಳ್ಳುವ ವಿಷಯವಾಗಿರಲಿಲ್ಲ. ಆಗಸದ ಓಟದಲ್ಲಿ ಹಿಂದೆ ಬೀಳುವುದು ಎಂದರೇನು? ಅದರಲ್ಲೂ ರಷ್ಯಾಕ್ಕಿಂತ ಹಿಂದೆ ಬೀಳುವುದು ಎಂದರೆ? ೫೦ ದಿನದ ಒಳಗೆ ಅಮೆರಿಕ ‘ವೆಂಗಾರ್ಡ್’ ಹೆಸರಿನ ಉಪಗ್ರಹ ಹಾರಿಸುವುದಾಗಿ ಘೋಷಿಸಿತು. ಆದರೆ ಅದು ಆಕಾಶ ಬಿಡಿ, ೬ ಅಡಿ ಎತ್ತರಕ್ಕೂ ಹಾರಲಿಲ್ಲ.
ಹಾರುವುದಕ್ಕೆ ಮೊದಲೇ ಬೆಂಕಿ ಹೊತ್ತಿ ರಾಕೆಟ್ ಹೊಗೆಯಾಗಿಹೋಯಿತು. ಅಷ್ಟೇ ಆದರೆ ಅಡ್ಡಿಯಿಲ್ಲವಾಗಿತ್ತು, ಪ್ರತಿಯೊಂದು ಪತ್ರಿಕೆಯಲ್ಲೂ ಇದು ಪ್ರಮುಖ ಸುದ್ದಿಯಾಗಿ, ವಿಶ್ವದಾದ್ಯಂತ ಇದು ಅಮೆರಿಕದ ವೈಫಲ್ಯ ಎಂಬ ಭಾವನೆ ಮೂಡಿತು. ಅಮೆರಿಕದ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಅರಗಿಸಿಕೊಳ್ಳಲಾಗದ ಅವಮಾನದಿಂದ ಹೊರಗೆ ಬರಲು ಅಮೆರಿಕ ಖತರ್‌ನಾಕ್ ಉಪಾಯ ಹುಡುಕಿತ್ತು. ಅಮೆರಿಕ ಇಡೀ ವಿಶ್ವಕ್ಕೇ ಉತ್ತರ ಕೊಡಬೇಕಾಗಿತ್ತು. ಉತ್ತರ ಹೇಗಿರಬೇಕಿತ್ತು ಎಂದರೆ, ರಷ್ಯಾವನ್ನೂ ಮೀರಿಸುವಂತಿರಬೇಕಿತ್ತು. ವಿಶ್ವವೇ ನಿಬ್ಬೆರಗಾಗಿ ನೋಡುವಂತಿರಬೇಕಿತ್ತು. ಅದಕ್ಕಾಗಿ ನಾಸಾ ಮತ್ತು ಅಮೆರಿಕದ ವಾಯುಪಡೆ ಸೇರಿ ಒಂದು ಯೋಜನೆ ರೂಪಿಸಿದವು. ಅದಕ್ಕಾಗಿ, ಆ ಕಾಲದಲ್ಲಿ ದೇಶದ ಶ್ರೇಷ್ಠ ಭೌತಶಾಸಜ್ಞರಲ್ಲೊಬ್ಬರಾದ ಲೆನಾರ್ಡ್ ರೈಫಲ್ ಅವರನ್ನು ಆರಿಸಿಕೊಂಡಿತ್ತು ಅಮೆರಿಕ. ಆಗ ಲೆನಾರ್ಡ್ ‘ಅಪೊಲೋ’ ಉಪಗ್ರಹದ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸು ತ್ತಿದ್ದರು. ಶಿಕಾಗೋದ ಆರ್ಮರ್ ರಿಸರ್ಚ್ ಫೌಂಡೇಷನ್‌ನಲ್ಲಿ ಲೆನಾರ್ಡ್ ಹೊಸ ಯೋಜನೆಯ ಕಾರ್ಯ ಆರಂಭಿಸಿದರು. ಆಧುನಿಕ ಗ್ರಹವಿಜ್ಞಾನದ ಪಿತಾಮಹ ಎನಿಸಿಕೊಂಡ ಗೆರಾರ್ಡ್ ಕೈಪರ್ (ಈಗ ನಾವೆಲ್ಲ ತಿಳಿದಿರುವ ಕೈಪರ್ ಬೆಲ್ಟ್ ಇವರ ನೆನಪಿಗಾಗಿಯೇ ಇಟ್ಟಿದ್ದು) ಪ್ರಸಿದ್ಧ ಖಗೋಳಶಾಸಜ್ಞ ಕಾರ್ಲ್ ಸೆಗನ್ ಸೇರಿದಂತೆ ಇನ್ನೂ ೭ ಜನ ಘಟಾನುಘಟಿಗಳನ್ನು ಸೇರಿಸಿಕೊಂಡ ೧೦ ಜನರ ತಂಡವಾಗಿ ಕೆಲಸ ಆರಂಭವಾಯಿತು.
ಅಷ್ಟಕ್ಕೂ ಅವರು ಮಾಡಬೇಕೆಂದಿದ್ದುದು ಏನೆಂದರೆ ಚಂದ್ರನ ಮೇಲೆ ಬಾಂಬ್ ಸಿಡಿಸುವುದು! ೧೯೫೮ರ ಮೇ ತಿಂಗಳಿನಲ್ಲಿ ಈ ತಂಡ ಕೆಲಸ ಆರಂಭಿಸಿತು. ಜನವರಿ ೧೯೫೯ರವರೆಗೂ ಈ ತಂಡ ಚಂದ್ರನ ಮೇಲೆ ಬಾಂಬ್ ಹಾಕುವುದರ ಕುರಿತು ವಿವರಗಳನ್ನು ತಯಾರಿಸಿತು. ಪರಮಾಣು ಬಾಂಬ್ ಗಿಂತಲೂ ಶಕ್ತಿಶಾಲಿಯಾದ ಜಲಜನಕದ ಬಾಂಬ್ ಸಿಡಿಸುವುದು ಉದ್ದೇಶವಾಗಿತ್ತು. ನಾನು ಈ ಮೊದಲು ಜಲಜನಕದ ಬಾಂಬ್ ವಿಷಯ ಹೇಳಿದ್ದು ಈ ಕಾರಣಕ್ಕೆ. ಜಲಜನಕದ ಬಾಂಬ್ ಯಾಕೆ? ಚಂದ್ರನ ಮೇಲೆ ಸಿಡಿಸಿದ ಬಾಂಬ್ ಭೂಮಿಯಲ್ಲಿರುವವರಿಗೂ ಕಾಣಬೇಕು ಎನ್ನುವ ಕಾರಣ. ಅದಕ್ಕಾಗಿ ಅವರು ಚಂದ್ರನ ಮೇಲೆ ಕತ್ತಲೆ ಮತ್ತು ಬೆಳಕನ್ನು ಬೇರ್ಪಡಿಸುವ ಕಾಲ್ಪನಿಕ ರೇಖೆಯನ್ನು ಆಯ್ದುಕೊಂಡರು. ಆ ಸ್ಥಳದಲ್ಲಿ ಬೆಂಕಿ ಬಿದ್ದರೆ ಹೆಚ್ಚು ಪ್ರಕಾಶಮಾನವಾಗಿರುತ್ತದೆ ಎಂಬ ತರ್ಕ ಅವರದ್ದಾಗಿತ್ತು. ಅಷ್ಟಕ್ಕೂ, ತಾವು ಮಾಡಿದ ಕೆಲಸವನ್ನು ವಿಶ್ವವೇ ನೋಡಬೇಕು ಎನ್ನುವುದೇ ಉದ್ದೇಶವಾಗಿತ್ತು ತಾನೆ? ೧೯೫೯ರ ಜೂನ್‌ನಲ್ಲಿ ಈ ತಂಡ A Study of Lunar Research Flights ಹೆಸರಿನಲ್ಲಿ ಅಮೆರಿಕದ ವಾಯುಪಡೆಗೆ ತನ್ನ ವರದಿಯನ್ನೂ ಒಪ್ಪಿಸಿತು. ನಂತರ ಇದಕ್ಕೆ Project A119 ೧೧೯ ಎಂದು ಹೆಸರಿಸಲಾಯಿತು. ಕೆಲವು ತಿಂಗಳಿನ ಅಧ್ಯಯನದ ನಂತರ ಲೆನಾರ್ಡ್ ನೇತೃತ್ವದ ತಂಡ ಈ ಕೆಲಸ ತಾಂತ್ರಿಕವಾಗಿ ಸಾಧ್ಯ ಎಂಬ ವರದಿ ನೀಡಿತ್ತು. ಅದಕ್ಕಾಗಿ ನಾಸಾ ಚಂದ್ರನ ಮೇಲಿನ ತಾಪಮಾನ, ಇನ್ನಿತರ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿತ್ತು.
ಭೂಮಿಯಿಂದ ಸುಮಾರು ೪ ಲಕ್ಷ ಕಿ.ಮೀ. ದೂರ ಇರುವ ಚಂದ್ರನ ಮೇಲೆ ಬಾಂಬ್ ಸಿಡಿಸುವುದು ಎಂದರೆ ಸುಲಭದ ಮಾತಲ್ಲ. ಎಲ್ಲಕ್ಕಿಂತ, ಆದನ್ನು ಅಲ್ಲಿಯವರೆಗೆ ಕೊಂಡುಹೊಗುವುದು ಹೇಗೆ ಎಂಬ ಪ್ರಶ್ನೆ ಮೂಡಿತ್ತು. ಅದಕ್ಕಾಗಿ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ ಬಳಸಬಹುದು ಎಂದು ತಜ್ಞರು ಸಲಹೆ ನೀಡಿದರು. ಹಾಗೆ ಹೇಳಲೂ ಕಾರಣವಿತ್ತು. ಅದೇ ವರ್ಷ, ಫೆಬ್ರವರಿಯಲ್ಲಿ ಅಮೆರಿಕ ‘ಟೈಟನ್’ ಬ್ಯಾಲಿಸ್ಟಿಕ್ ಮಿಸೈಲ್ ಪರೀಕ್ಷೆ ಮಾಡಿತ್ತು. ಅಬ್ಬಬ್ಬಾ ಎಂದರೆ ೨ ಮೈಲು ಆಚೀಚೆ ಆಗಬಹುದು, ಚಂದ್ರನ ಮೇಲೆ ಅದರಿಂದ ಹೆಚ್ಚಿನ ಫರಕ್ ಬೀಳುವುದಿಲ್ಲ ಎಂದಿದ್ದರು ಲೆನಾರ್ಡ್ ರೈಫಲ್. ಇನ್ನು ಇದಕ್ಕೆ ಅಮೆರಿಕದ ವಿಜ್ಞಾನಿಗಳು ಹೇಗೆ ಒಪ್ಪಿದರು ಎಂಬ ಪ್ರಶ್ನೆ, ಆ ಕಾಲದಲ್ಲಿ ಅವರ ಬಳಿ ಬೇರೆ ಯಾವುದೇ ಮಾರ್ಗ ಇರಲಿಲ್ಲ. ಆಗ ಅಮೆರಿಕದ ವಾಯುಸೇನೆ ಮನಸ್ಸು ಮಾಡಿದ್ದರೆ ಈ ವಿಚಾರವಾಗಿ ಮುಂದುವರಿಯಬಹುದಾಗಿತ್ತು. ಆದರೆ, ಯಾವ ಕಾರಣಕ್ಕೋ ಏನೋ, ಈ ಯೋಜನೆಯನ್ನು ಕೈಬಿಡಲಾಯಿತು. ಒಂದು ವೇಳೆ ಬಾಂಬ್ ಹೊತ್ತ ರಾಕೆಟ್ ಅಂತರಿಕ್ಷ ತಲುಪುವುದಕ್ಕೆ ಮೊದಲೇ ಸೋಟಗೊಂಡರೆ (ಮೊದಲಾದಂತೆ) ಎಷ್ಟು ದೊಡ್ಡ ಅನಾಹುತ ಆಗುತ್ತಿತ್ತು?
ಒಂದು ವೇಳೆ ಚಂದ್ರನನ್ನು ತಲುಪಿ ಬಾಂಬ್ ಸಿಡಿಸಿದರೂ, ಅಲ್ಲಿಯ ವಾತಾವರಣದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇತ್ತು. ಅದರಿಂದ ಭೂಮಿಗೆ ಏನೂ ಫರಕ್ ಬೀಳುವುದಿಲ್ಲ ಬಿಡಿ. ಎಲ್ಲಕ್ಕಿಂತ ಮಿಗಿಲಾಗಿ, ಚಂದ್ರನ ಮೇಲೆ ಧೂಳು, ಮೋಡ, ಬೆಂಕಿಯನ್ನು ಕಾಣುವ ವಾತಾವರಣವೇ ಇಲ್ಲ. ಬಹುಶಃ ಇದನ್ನೆಲ್ಲ ಪರಿಗಣಿಸಿಯೇ ಅಮೆರಿಕ ಸುಮ್ಮನೆ ಕುಳಿತಿದ್ದಿರಬೇಕು. ಇನ್ನೊಂದು ಕಡೆ, ಅಮೆರಿಕ ಚಂದ್ರನ ಮೇಲೆ ಬಾಂಬ್ ಹಾಕುವ ಪ್ರಯತ್ನದಲ್ಲಿದೆ ಎಂದು ತಿಳಿದ ಮರುಗಳಿಗೆಯಲ್ಲೇ ರಷ್ಯಾ ಕೂಡ ಚಂದ್ರನ ಮೇಲೆ ಹೈಡ್ರೋಜನ್ ಬಾಂಬ್ ಹಾಕುವ (Project E4) ಯೋಜನೆಗೆ ಮುಂದಾಯಿತು. ಚಂದ್ರನ ಅದೃಷ್ಟ ಚೆನ್ನಾಗಿದ್ದ ಕಾರಣ
೧೯೬೭ರಲ್ಲಿ ಅಮೆರಿಕ ಮತ್ತು ರಷ್ಯಾ ಒಂದು ಒಪ್ಪಂದಕ್ಕೆ ಸಹಿ ಹಾಕಿದವು. ಬಾಹ್ಯಾಕಾಶವನ್ನು ಪರಮಾಣು ಪ್ರಯೋಗಕ್ಕೆ ಬಳಸಿಕೊಳ್ಳಬಾರದು, ಚಂದ್ರನನ್ನು ಸಂಶೋಧನೆಗೆ, ಹೊಸ ಅನ್ವೇಷಣೆಗೆ ಮಾತ್ರ ಬಳಸಿಕೊಳ್ಳಬೇಕು ಎಂದು ಎರಡೂ ರಾಷ್ಟ್ರಗಳು ಒಪ್ಪಿದವು.
ಇಲ್ಲವಾದರೆ ರಷ್ಯಾ ಮತ್ತು ಅಮೆರಿಕದ ದೊಡ್ಡಣ್ಣನಾಗುವ ಆಟದಲ್ಲಿ ಚಂದಮಾಮ ಬಲಿಯಾಗುತ್ತಿದ್ದ. ಅಂದ ಹಾಗೆ, ಈ ಯೋಜನೆಯ ವಿವರವನ್ನು ಅಮೆರಿಕ ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ. ಅದು ಕೂಡ ಅಚಾನಕ್ಕಾಗಿಯೇ ಹೊರಬಂದದ್ದು. ಲೆನಾರ್ಡ್ ತಂಡದ ಜತೆಗಿದ್ದ ಕಾರ್ಲ್ ಸೆಗನ್ ನಿಂದಾಗಿ ಇದರ ಕೆಲವು ಮಾಹಿತಿಗಳು ಸೋರಿದವು. ಅದೂ ಒಂದು ಪುಸ್ತಕ ಬರೆಯುವ ಸಂದರ್ಭದಲ್ಲಿ. ಮೊನ್ನೆ ಭಾರತದ ಚಂದ್ರಯಾನ-೩ ಯಶಸ್ವಿಯಾದಾಗ ಇಡೀ ವಿಶ್ವವೇ ಕೊಂಡಾಡಿದ್ದು ಕೂಡ ಈ ಕಾರಣಕ್ಕಾಗಿಯೇ. ಅದರಲ್ಲಿ ಯಾವುದೇ ದುರುದ್ದೇಶವಿರಲಿಲ್ಲ. ಯಾರ ಮೇಲೆಯೂ ಹಗೆ ಸಾಧಿಸಬೇಕಾಗಿರಲಿಲ್ಲ. ಧನಾತ್ಮಕವಾದ ಅನ್ವೇಷಣೆ, ಸಂಶೋಧನೆಗೆ ಭಾರತ ಮುಂದಾಗಿದೆ ಎಂಬ ವಿಶ್ವಾಸ ವಿಶ್ವಕ್ಕೇ ಇದೆ. ಆದ್ದರಿಂದಲೇ ಇಡೀ ವಿಶ್ವವೇ ಇಂದು ‘ಜೈ ಹೋ’ ಎನ್ನುತ್ತಿದೆ. ಇರಲಿ, ಈಗ ಮತ್ತೊಮ್ಮೆ ಹಿರೇಮಠರ ಗೀತೆ ನೆನಪಿಸಿಕೊಳ್ಳಿ.
ನಿಜವಾಗಿಯೂ ಚಂದಿರ ಹೆದರ ಬೇಕಾದದ್ದು ಗಾಳಿಗೆ ಹಾರಿದ ಹಿಂಜಿದ ಅರಳೆಗೂ ಅಲ್ಲ, ಮಂಜಿನಗಡ್ಡೆಯ ಸೆರೆಗೂ ಅಲ್ಲ. ಆತ ಇನ್ನು ಮುಂದೆಯೂ ಇದ್ಯಾವುದಕ್ಕೂ ಹೆದರಬೇಕಾಗಿಲ್ಲ, ಚಂದಿರನೇನಾದರೂ ಹೆದರಬೇಕಿದ್ದರೆ ಮೂಢರಿಗೆ ಮಾತ್ರ! ಓಡುವ ಚಂದಿರನನ್ನೇ ಮನುಷ್ಯ ಬಿಡಲಿಲ್ಲ ಎಂದರೆ, ಏನನ್ನು ಬಿಟ್ಟಾನು? ಚಂದ್ರನ ಮೇಲೆ ಅಣುಬಾಂಬ್ ಹಾಕುವ ಪ್ರಯತ್ನ ನಡೆಸಿದ ಅಮೆರಿಕದ ವಿಷಯ ತಿಳಿದರೆ, ಜಗಕ್ಕೇ ತಂಪನೀಯುವ ತನ್ನ ಮೈಮೇಲೆ ಬೆಂಕಿಯ ಉಂಡೆ ಉರುಳಿಸುವ ಜನರಿದ್ದಾರೆ ಎಂದು ಗೊತ್ತಾದರೆ, ಖಂಡಿತವಾಗಿಯೂ ‘ಚಂದಿರ ಮೂಢ ಮನುಜಗೆ ಹೆದರುವನು’!