Sunday, 15th December 2024

ಮೋದಿ ಯಾಕ್ರೀ ಪ್ರಧಾನಿ ಆಗಲ್ಲ ?

ಮೂರ್ತಿಪೂಜೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕ್ಯಾಂಪಿನಿಂದ ಹೊಸ ಸುದ್ದಿ ಹೊರಬಿದ್ದಿದೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಟ ಹದಿನಾರು ಸೀಟುಗಳನ್ನು ಗೆಲ್ಲಿಸಿಕೊಂಡು ಬರಲು ಬಿಜೆಪಿ ವರಿಷ್ಠರು ಟಾರ್ಗೆಟ್ ನೀಡಿದ್ದರು ಎಂಬುದು ಈ ಸುದ್ದಿ. ಅಂದ ಹಾಗೆ ಚುನಾವಣೆಗಳು ಘೋಷಣೆಯಾದ ಕಾಲದಲ್ಲಿ ರಣೋತ್ಸಾಹ ತೋರಿಸುವುದು, ಮಿನಿಮಮ್ ಇಪ್ಪತ್ತೈದು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎನ್ನುವುದು ಸಹಜ. ಆದರೆ ವಸ್ತು
ಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದ ಮೋದಿ-ಅಮಿತ್ ಶಾ ಜೋಡಿ ಅದರ ಆಧಾರದ ಮೇಲೆ ಟಾರ್ಗೆಟ್ ಫಿಕ್ಸು ಮಾಡಿತ್ತು ಎಂಬುದು ವಿಜಯೇಂದ್ರ ಕ್ಯಾಂಪಿನ ಲೇಟೆಸ್ಟು ಹೇಳಿಕೆ.

ಅದರ ಪ್ರಕಾರ, ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಟ ಹದಿನಾರು ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸುವಂತೆ ನೋಡಿಕೊಳ್ಳಿ, ಅದೇ ರೀತಿ ಗರಿಷ್ಟ ಇಪ್ಪತ್ತೆರಡು ಕ್ಷೇತ್ರಗಳಲ್ಲಿ ಗೆಲ್ಲಲು ಪ್ರಯತ್ನಿಸಿ ಅಂತ ಮೋದಿ-ಅಮಿತ್ ಷಾ ಟಾರ್ಗೆಟ್ ಫಿಕ್ಸು ಮಾಡಿದ್ದರು. ಅವರ ಸೂಚನೆಯನ್ನು
ಪಾಲಿಸಿರುವ ವಿಜಯೇಂದ್ರ ಅವರು ತಮ್ಮ ತಂದೆ ಯಡಿಯೂರಪ್ಪ ಅವರ ಜತೆ ಸೇರಿ ಇಡೀ ರಾಜ್ಯ ಸುತ್ತಿದ್ದಾರೆ. ವರಿಷ್ಠರು ಕನಿಷ್ಟ ಹದಿನಾರು ಸೀಟುಗಳ ಗುರಿ ನಿಗದಿ ಮಾಡಿದ್ದರೂ ೧೮ ರಿಂದ ೨೦ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೀಗೆ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನೀಡಿದ್ದ ಟಾರ್ಗೆಟ್ಟಿನ ಬಗ್ಗೆ ವಿಜಯೇಂದ್ರ ಅವರ ಕ್ಯಾಂಪು ಮಾತನಾಡುತ್ತಿದ್ದರೆ ಯಡಿಯೂರಪ್ಪ ಆಪ್ತರು ಮಾತ್ರ, ಈ ಸಲ ಇಪ್ಪತ್ತೆರಡು ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಅಂತ ಸಾಹೇಬ್ರು ಖಡಕ್ ಆಗಿ ನಂಬಿzರೆ ಎನ್ನುತ್ತಾರೆ. ಅವರ ಪ್ರಕಾರ, ಲೋಕಸಭಾ ಚುನಾವಣೆಯಲ್ಲಿ ಮತ ಚಲಾವಣೆಯ ಪ್ಯಾಟರ್ನು ನೋಡಿದರೆ ಯಡಿಯೂರಪ್ಪ ಅವರ ಲೆಕ್ಕಾಚಾರವೇ ಸರಿ ಆಗಬಹುದು. ಯಾಕೆಂದರೆ ಚುನಾವಣೆ ಯಲ್ಲಿ ಶೇ.೭೦ರಷ್ಟು ಮುಸ್ಲಿಮರು ಮತ ಚಲಾಯಿಸಿದ್ದಾರೆ.

ಅವರ ವೋಟುಗಳು ಸಾಲಿಡ್ಡಾಗಿ ಕಾಂಗ್ರೆಸ್ಸಿಗೆ ಹೋಗುತ್ತವೆ. ಅಲ್ಲಿಗೆ ಒಟ್ಟು ಮತದಾರರ ಪೈಕಿ ೧೩ ಪರ್ಸೆಂಟ್ ಮತಗಳು ಕಾಂಗ್ರೆಸ್ಸಿಗೆ ಹೋಗಿವೆ. ಇನ್ನು ಎಂಟು ಪರ್ಸೆಂಟಿನಷ್ಟಿರುವ ಕುರುಬ ಮತಗಳು ಈ ಸಲ ವಿಭಜನೆಯಾಗಿವೆ. ಕುರುಬರು ಸಿದ್ದರಾಮಯ್ಯ ಅವರ ಜತೆ ಇರುವುದು ನಿಜವಾದರೂ, ಲೋಕಸಭಾ ಚುನಾವಣೆಯ ಫಲಿತಾಂಶ ಸಿದ್ದರಾಮಯ್ಯ ಅವರ ಮೇಲೆ ಯಾವ ಪರಿಣಾಮ ಬೀರುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ
ಬಾಗಲಕೋಟೆ, ವಿಜಯಪುರ, ಗುಲ್ಬರ್ಗ, ದಾವಣಗೆರೆ ಸೇರಿ ದಂತೆ ಉತ್ತರ ಕರ್ನಾಟಕ ಭಾಗದ ಬಹುತೇಕ ಕ್ಷೇತ್ರಗಳಲ್ಲಿ ಕುರುಬರ ಗಣನೀಯ ಪ್ರಮಾಣದ ಮತಗಳು ಬಿಜೆಪಿಗೆ ಬಂದಿವೆ. ಅರ್ಥಾತ್ ಎಂಟು ಪರ್ಸೆಂಟಿನಷ್ಟಿರುವ ಕುರುಬ ಮತಗಳ ಪೈಕಿ ಅರ್ಧದಷ್ಟು ನಮಗೆ ಬಂದಿವೆ.

ಇದೇ ರೀತಿ ಯಾವತ್ತೂ ಮತದಾನ ಮಾಡಲು ಆಸಕ್ತಿ ತೋರದ ಸುಶಿಕ್ಷಿತ ವರ್ಗ ಈ ಸಲ ಕೇಂದ್ರದಲ್ಲಿ ಮೋದಿಯೇ ಇರಬೇಕು ಅಂತ ಮತಗಟ್ಟೆಗೆ ಬಂದಿದೆ. ಒಟ್ಟಾರೆ ಮತಗಳ ಪೈಕಿ ಇವರದು ಹದಿನೈದು ಪರ್ಸೆಂಟು. ಅಂದರೆ? ಒಟ್ಟಾರೆ ಮೂವತ್ತೆರಡು ಪರ್ಸೆಂಟು ಮತಗಳು ಬಿಜೆಪಿಗೆ ಬಂದಂತಾಯಿತು. ಈ ಮಧ್ಯೆ ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಅದಕ್ಕೆ ಒಂದಷ್ಟು ಪ್ಲಸ್ ಆಗುವುದು ನಿಜವಾದರೂ, ಆಳದಲ್ಲಿ ಮತ್ತೊಂದು ಅಂಶ ಕೆಲಸ ಮಾಡಿದೆ. ಅದೆಂದರೆ ಗ್ಯಾರಂಟಿ ಯೋಜನೆಗಳು ಹಳ್ಳಿಗಾಡಿನ ಜನರಿಗೆ ಸಮರ್ಪಕವಾಗಿ ತಲುಪಿಲ್ಲ. ಪರಿಣಾಮವಾಗಿ ಗ್ಯಾರಂಟಿಗಳ ಲಾಭ ಪಡೆದವರು ಒಂದು ಕಡೆ ಇದ್ದರೆ, ಲಾಭ ಸಿಗದೆ ಇದ್ದವರು ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಬಿಜೆಪಿ ಜತೆ ನಿಂತಿದ್ದಾರೆ.

ಇನ್ನು ಹಿಂದುಳಿದ ವರ್ಗದ ಪಟ್ಟಿಯಲ್ಲಿರುವ ಬಹುತೇಕ ಜಾತಿಗಳು ಸಾಂಪ್ರದಾಯಿಕವಾಗಿ ಬಿಜೆಪಿ ಜತೆಗಿವೆ. ಇದೇ ರೀತಿ ದಲಿತ ಮತ ಬ್ಯಾಂಕಿನಲ್ಲೂ ನಮಗೆ ಷೇರು ಸಿಕ್ಕಿದೆ. ಉಳಿದಂತೆ ಲಿಂಗಾಯತ ಮತ ಬ್ಯಾಂಕಿನ ಒಂದಷ್ಟು ಷೇರು ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದಕ್ಕಿದೆಯಾದರೂ ಗಣನೀಯ
ಪ್ರಮಾಣದ ಮತಗಳು ಯಡಿಯೂರಪ್ಪ ಅವರ ಹಿಂದಿವೆ. ಪರಿಣಾಮ? ಈ ಸಲ ಏನೇ ಮಾಡಿದರೂ ಬಿಜೆಪಿ ಮೈತ್ರಿಕೂಟಕ್ಕೆ ಕನಿಷ್ಟ ಇಪ್ಪತ್ತೆರಡು ಸೀಟುಗಳು ಸಿಕ್ಕೇ ಸಿಗುತ್ತವೆ ಎಂಬುದು ಯಡಿಯೂರಪ್ಪ ಆಪ್ತರ ಮಾತು.

ಸಿದ್ದು-ಡಿಕೆಶಿ ಡೆಡ್ಲಿ ಕಾಂಬಿನೇಶನ್

ಅಂದ ಹಾಗೆ ಈ ಸಲ ಮೈತ್ರಿಕೂಟ ಇಪ್ಪತ್ತೆರಡು ಸೀಟು ಗೆಲ್ಲುತ್ತದೆ, ಕಾಂಗ್ರೆಸ್ ಆರು ಸೀಟು ಗೆಲ್ಲುತ್ತದೆ ಅಂತ ಯಡಿಯೂರಪ್ಪ ಆಪ್ತರು ಲೆಕ್ಕ ಹಾಕಿದರೂ ಸಿದ್ದರಾಮಯ್ಯ-ಡಿಕೆಶಿ ಕಾಂಬಿನೇಶನ್ನು ತಮಗೆ ಪ್ಲಸ್ ಆಗಿದೆ ಎಂಬುದು ಕಾಂಗ್ರೆಸ್ ಪಾಳಯದ ನಂಬಿಕೆ. ಅದರ ಪ್ರಕಾರ, ಕಳೆದ ಲೋಕಸಭಾ ಚುನಾವಣೆ ಗೂ ಈ ಲೋಕಸಭಾ ಚುನಾವಣೆಗೂ ತುಂಬ ವ್ಯತ್ಯಾಸವಿದೆ. ಯಾಕೆಂದರೆ ೨೦೦೯ ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ರಾಜ್ಯದ ಅತ್ಯಂತ ದೊಡ್ಡ ಶಕ್ತಿಯಾಗಿ ನೆಲೆಯೂರಿತ್ತು. ಅರ್ಥಾತ್ ೨೦೦೮ ರ ವಿಧಾನಸಭಾ ಚುನಾವಣೆಯಲ್ಲಿ ಅದು ೧೦೪ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಅವತ್ತು ಕಾಂಗ್ರೆಸ್-ಜೆಡಿಎಸ್ ಒಗ್ಗೂಡಿ ಸರಕಾರ ರಚಿಸದೆ ಹೋಗಿದ್ದರೆ ನಿಶ್ಚಿತವಾಗಿಯೂ ಬಿಜೆಪಿ ಅಧಿಕಾರದಲ್ಲಿರುತ್ತಿತ್ತು. ೨೦೦೯ ರ ಲೋಕಸಭಾ
ಚುನಾವಣೆಯಲ್ಲಿ ಈ ಶಕ್ತಿಯನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಎದುರಿಸಿದರೂ ಈ ಮೈತ್ರಿಕೂಟ ಎಣ್ಣೆ-ಸೀಗೆಕಾಯಿಯಂತಿತ್ತು. ಪರಿಣಾಮ? ಕಾಂಗ್ರೆಸ್ -ಜೆಡಿಎಸ್ ನ ಒಡಕು ಬಿಜೆಪಿಗೆ ಲಾಭವಾಗಿ ಅದು ಇಪ್ಪತ್ತೈದು ಸೀಟು ಗೆಲ್ಲಲು ದಾರಿ ಮಾಡಿಕೊಟ್ಟಿತು. ಆದರೆ ಈ ಸಲ ಹಾಗಿಲ್ಲ.

ಮೊದಲನೆಯದಾಗಿ ರಾಜ್ಯ ಬಿಜೆಪಿ ಈಗ ದೊಡ್ಡ ಶಕ್ತಿಯಾಗಿ ಉಳಿದಿಲ್ಲ. ಸಾಲದು ಎಂದರೆ ಯಡಿಯೂರಪ್ಪ ಮತ್ತು ಸಂತೋಷ್ ಬಣದ ನಡುವಣ
ಕಚ್ಚಾಟ ಅದಕ್ಕೆ ದೊಡ್ಡ ಮಟ್ಟದ ಹೊಡೆತ ಕೊಟ್ಟಿದೆ. ಈ ಮಧ್ಯೆ ಯಾರೇನೇ ಹೇಳಿದರೂ ಸರಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ಸಿಗೆ ನೆರವಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಎಲ್ಲ ಅಂಶಗಳನ್ನು ಸಿದ್ಧು-ಡಿಕೆಶಿ ಜೋಡಿ ಸಾಲಿಡ್ಡಾಗಿ ಬಳಸಿಕೊಂಡಿದೆ. ಹೀಗಾಗಿ ಕರ್ನಾಟಕದ ನೆಲೆಯಲ್ಲಿ ಈ ಸಲ
ಇಪ್ಪತ್ತು ಪ್ಲಸ್ ಸೀಟುಗಳನ್ನು ಗೆಲ್ಲುವ ಬಿಜೆಪಿ ಕನಸು ಭಗ್ನವಾಗಲಿದೆ ಎಂಬುದು ಕಾಂಗ್ರೆಸ್ ಪಾಳಯದ ಲೆಕ್ಕಾಚಾರ.

ಕೋರ್ ಕಮಿಟಿಗೆ ಮೇಜರ್ ಸರ್ಜರಿ

ಈ ಮಧ್ಯೆ ರಾಜ್ಯ ಬಿಜೆಪಿಯ ಕೋರ್ ಕಮಿಟಿಗೆ ಮೇಜರ್ ಸರ್ಜರಿ ಮಾಡುವ ಲೆಕ್ಕಾಚಾರ ಶುರುವಾಗಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆದ ಅನುಭವವೇ ಇದಕ್ಕೆ ಕಾರಣ. ಈಗ ರಾಜ್ಯ ಬಿಜೆಪಿಯ ಕೋರ್ ಕಮಿಟಿಯಲ್ಲಿ ಅತಿರಥ-ಮಹಾರಥರ ದಂಡೇನೋ ಇವೆ. ಆದರೆ ಒಂದೇ ಜಾತಿಯ ಹಲವು ನಾಯಕರಿರುವುದಕ್ಕಿಂತ ಬೇರೆ ಬೇರೆ ಜಾತಿ, ಸಮುದಾಯದ ನಾಯಕರಿದ್ದರೆ ಇನ್ನಷ್ಟು ಅನುಕೂಲವಾಗುತ್ತದೆ ಎಂಬುದು ಸಧ್ಯದ ಲೆಕ್ಕಾಚಾರ.

ಅದರ ಪ್ರಕಾರ ಗಂಗಾ ಮತಸ್ಥ, ನೇಕಾರ, ಕಾಡುಗೊಲ್ಲ, ಕಮ್ಮ ಸೇರಿದಂತೆ ಹಲವು ಜಾತಿಗಳಿಗೆ ಕೋರ್ ಕಮಿಟಿಯಲ್ಲಿ ಪ್ರಾತಿನಿಧ್ಯ ಸಿಕ್ಕರೆ ಹಲವು ಜಿಗಳಲ್ಲಿ ಪಕ್ಷಕ್ಕೆ ಶಕ್ತಿ ಬರುತ್ತದೆ ಎಂಬುದು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಲೆಕ್ಕಾಚಾರ. ಸಧ್ಯದ ಈ ಲೆಕ್ಕಾಚಾರ ವರ್ಕ್ ಔಟ್ ಆಗಲಿದೆ ಎಂಬುದು ಬಿಜೆಪಿ ಕ್ಯಾಂಪಿನ ಸುದ್ದಿ.

ಮೋದಿ ಯಾಕ್ರೀ ಪ್ರಧಾನಿ ಆಗಲ್ಲ?

ಅಂದ ಹಾಗೆ ಮೊನ್ನೆ ಕರ್ನಾಟಕಕ್ಕೆ ಬಂದ ದಿಲ್ಲಿಯ ಬಿಜೆಪಿ ನಾಯಕರೊಬ್ಬರು ಸ್ಥಳೀಯ ನಾಯಕರೊಬ್ಬರ ಆತಿಥ್ಯದಲ್ಲಿದ್ದರಂತೆ. ಈ ಸಂದರ್ಭದಲ್ಲಿ ಆ ಸ್ಥಳೀಯ ನಾಯಕರು ದಿಲ್ಲಿ ನಾಯಕರ ಬಳಿ ತಮ್ಮ ಸಂಶಯ ತೋಡಿಕೊಂಡಿದ್ದಾರೆ. ಸಾರ್, ಲೋಕಸಭಾ ಚುನಾವಣೆಯಲ್ಲಿ ಈ ಸಲ ಬಿಜೆಪಿ ಗರಿಷ್ಟ ೨೨೦ ಸೀಟುಗಳನ್ನು ಗೆಲ್ಲಬಹುದು. ಹೀಗಾಗಿ ಮೈತ್ರಿ ಪಕ್ಷಗಳ ಜತೆ ಸೇರಿ ಅದು ಸರಕಾರ ರಚಿಸಬಹುದು. ಅಥವಾ ಸಾಧ್ಯವಾಗದೆ ಹೋಗಬಹುದು.
ಮೋದಿಯವರು ಪ್ರಧಾನಿ ಆಗಬಹುದು, ಆಗದೆ ಇರಲೂಬಹುದು ಅನ್ನುತ್ತಾರಲ್ಲ ಹೇಗೆ ಸಾರ್? ಅಂತ ಕೇಳಿದ್ದಾರೆ.

ಯಾವಾಗ ಅವರು ಈ ಮಾತು ಹೇಳಿದರೋ ಆಗ ದಿಲ್ಲಿಯ ಅ ಬಿಜೆಪಿ ನಾಯಕರು, ಯಾಕ್ರೀ ಮೋದಿಯವರು ಪ್ರಧಾನಿ ಆಗಲ್ಲ?ಬೇಸಿಕಲಿ ನೀವು ಒಂದು ಅಂಶವನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಇಂಡಿಯಾ ಒಕ್ಕೂಟದ ಲೀಡರ್ ಯಾರು? ಕಾಂಗ್ರೆಸ್ ತಾನೇ? ಅದು ಸ್ವಯಂ ಆಗಿ ನೂರು ಸೀಟು ಗೆಲ್ಲುವುದಿಲ್ಲ. ಆದರೆ ಎನ್.ಡಿ.ಎ ಮೈತ್ರಿಕೂಟದ ಲೀಡರ್ ಅನ್ನಿಸಿಕೊಂಡ ಬಿಜೆಪಿ ಮಿನಿಮಮ್ ೨೮೦ ಸೀಟು ಗೆಲ್ಲುತ್ತದೆ. ಹೋಗಲಿ, ಪರಿಸ್ಥಿತಿ ಅವರು ಹೇಳಿದಂತೆ ಕೆಟ್ಟು
ಬಿಜೆಪಿ ೨೨೦ ಸೀಟುಗಳನ್ನಷ್ಟೇ ಪಡೆಯಬಹುದು ಎಂದುಕೊಳ್ಳೋಣ. ಅಷ್ಟಾದ ಮೇಲೂ ಕೇಂದ್ರದಲ್ಲಿ ಸ್ಥಿರ ಸರಕಾರ ರಚಿಸುವ ಶಕ್ತಿ ಯಾರಿಗಿರುತ್ತದೆ? ಕಾಂಗ್ರೆಸ್ಸಿಗಾ? ಬಿಜೆಪಿಗಾ? ನೆನಪಿಡಿ, ಈ ಪ್ರಶ್ನೆ ಬಂದಾಗ ಬರೀ ಎನ್.ಡಿ.ಎ ಮೈತ್ರಿಕೂಟದ ನಾಯಕರಷ್ಟೇ ಅಲ್ಲ, ಇಂಡಿಯಾ ಒಕ್ಕೂಟದ ನಾಯಕರೂ ಯೋಚಿಸುತ್ತಾರೆ.

ತೀರಾ ದೂರ ಹೋಗುವುದೇನೂ ಬೇಡ. ಇವತ್ತು ಬಿಜೆಪಿ ವಿರುದ್ದ ಸೆಣಸಾಡುತ್ತಿರುವ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಇರಬಹುದು, ಮಹಾ ರಾಷ್ಟ್ರದ ಶರದ್ ಪವಾರ್ ಇರಬಹುದು. ಇವರಿಗೆಲ್ಲ, ಇಂಡಿಯಾ ಒಕ್ಕೂಟ ಸರಕಾರ ರಚಿಸಿದರೆ ಅದು ಒಂದು ವರ್ಷವೂ ಬಾಳುವುದಿಲ್ಲ ಅಂತ ಗೊತ್ತಿದೆ. ಇವರಷ್ಟೇ ಅಲ್ಲ, ಇವತ್ತು ಬಿಜೆಪಿಯ ವಿರುದ್ಧ ಖಾಡಾಖಾಡಿ ಹೋರಾಟ ನಡೆಸುತ್ತಿರುವ ಉದ್ದವ್ ಠಾಕ್ರೆ ಕೂಡಾ ಸ್ಥಿರ ಸರಕಾರ ರಚಿಸುವ ವಿಷಯ ಬಂದಾಗ ಬಿಜೆಪಿ ಕಡೆ ಹೊರಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಬಾರಿ ಪಕ್ಷಕ್ಕೆ ಯಾವ ರಾಜ್ಯಗಳಲ್ಲಿ ಕೊರತೆ ಆಗುತ್ತದೆ? ಯಾವ ರಾಜ್ಯಗಳಲ್ಲಿ ಅದನ್ನು ಸರಿಪಡಿಸಬೇಕು ಅಂತ ಮೋದಿ-ಅಮಿತ್ ಷಾ ಜೋಡಿ ಯಾವತ್ತೋ ಲೆಕ್ಕ ಹಾಕಿದೆ.

ಇವತ್ತು ಬರೆದಿಟ್ಟುಕೊಳ್ಳಿ. ದಿಲ್ಲಿ ಗದ್ದುಗೆಯ ಮೇಲೆ ನಾವು ಕೂರುವುದು ಗ್ಯಾರಂಟಿ. ಇದಾದ ಎರಡು ತಿಂಗಳಿಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಉರುಳಿ ಬಿಜೆಪಿ ಸರಕಾರ ಬರುತ್ತದೆ. ಈ ಸರಕಾರಕ್ಕೆ ಹಾಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿಯೇ ನಾಯಕರಾಗುತ್ತಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದಲ್ಲಿ ಮೂರು ಹೋಳಾಗುತ್ತದೆ. ಮುಂದೇನೇನು ಆಗುತ್ತದೆ ಕಾದು ನೋಡಿ ಅಂದಿzರೆ. ಅವರು ಹೇಳಿದ್ದನ್ನು ಕೇಳಿದ ಸ್ಥಳೀಯ ಬಿಜೆಪಿಯ ಈ ನಾಯಕರು ಮೂಕರಾದರಂತೆ.

ನಡ್ಡಾ ಅವರ ಲೇಟೆಸ್ಟು ಚಿಂತೆ
ಈ ಮಧ್ಯೆ ಕರ್ನಾಟಕದ ಎರಡು ಲೋಕಸಭಾ ಕ್ಷೇತ್ರಗಳ ಫಲಿತಾಂಶದ ಬಗ್ಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಚಿಂತಿತರಾಗಿದ್ದಾರೆ. ಈ ಪೈಕಿ ಒಂದು ಬೆಳಗಾವಿ ಕ್ಷೇತ್ರವಾದರೆ ಮತ್ತೊಂದು ಹಾವೇರಿ. ಈ ಪೈಕಿ ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪರ್ಧಿಸಿದ್ದರೆ, ಹಾವೇರಿಯಲ್ಲಿ ಮತ್ತೊಬ್ಬ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿದ್ದಾರೆ. ಶೆಟ್ಟರ್ ಅವರ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್
ಸ್ಪಽಸಿದ್ದರೆ, ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ಸಿನ ಗಡ್ಡದೇವರಮಠ ಸ್ಪರ್ಧಿಸಿದ್ದಾರೆ.

ಗಡ್ಡದೇವರ ಮಠ ಅವರು ಕುರುಬ, ದಲಿತ, ಮುಸ್ಲಿಂ ಮತಗಳ ಜತೆ ಲಿಂಗಾಯತ ಮತ ಬುಟ್ಟಿಯಲ್ಲೂ ಪಾಲು ಪಡೆಯುವುದರಿಂದ ಬೊಮ್ಮಾಯಿ ಗೆಲುವು ಸರಳವಲ್ಲ ಎಂಬುದು ವರಿಷ್ಠರಿಗಿರುವ ಮೆಸೇಜು. ಇದೇ ರೀತಿ ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರು ಪಕ್ಷ ಹೇಳಿದಷ್ಟು ಶಸ್ತ್ರಾಸ್ತ್ರಗಳನ್ನಷ್ಟೇ ಕಾರ್ಯ ಕರ್ತರಿಗೆ ಪೂರೈಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ವಿಸತ ನೆಲೆಯಲ್ಲಿ ಹೋರಾಡಿದ್ದಾರೆ. ಹೀಗಾಗಿ ಶೆಟ್ಟರ್ ಪರಿಸ್ಥಿತಿಯೂ ಕಷ್ಟದಲ್ಲಿದೆ ಎಂಬುದು ವರಿಷ್ಠರಿಗಿರುವ ಮಾಹಿತಿ.

ಅಂದ ಹಾಗೆ ಶೆಟ್ಟರ್ ಮತ್ತು ಬೊಮ್ಮಾಯಿ ಇಬ್ಬರಿಗೂ ತಮ್ಮ ಗೆಲುವಿನ ಬಗ್ಗೆ ವಿಶ್ವಾಸವಿದೆಯಾದರೂ ನಡ್ಡಾ ಅವರಿಗೆ ನಂಬಿಕೆ ಬಂದಿಲ್ಲ. ಹೀಗಾಗಿ ಮೇಲಿಂದ ಮೇಲೆ ರಾಜ್ಯದ ನಾಯಕರನ್ನು ಸಂಪರ್ಕಿಸುತ್ತಿರುವ ನಡ್ಡಾ, ಬೆಳಗಾವಿ ಮತ್ತು ಹಾವೇರಿಯ ರಿಸಲ್ಟು ಏನಾಗಬಹುದು? ಅಂತ ಮಾಹಿತಿ ಪಡೆಯುತ್ತಿದ್ದಾರೆ.