Wednesday, 11th December 2024

ರಾಮ ಮಂತ್ರಕ್ಕೆ ಅಪಸ್ವರವೇಕೆ ?

ಅಶ್ವತ್ಥಕಟ್ಟೆ

ranjith.hoskere@gmail.com

ದೇಶದ ಬಹುತೇಕರು ರಾಮನ ಪ್ರಾಣಪ್ರತಿಷ್ಠಾಪನೆಯ ಸಾರ್ಥಕ ಕ್ಷಣವನ್ನು ಧನ್ಯತೆಯಿಂದ ಅನುಭವಿಸುತ್ತಿದ್ದರೆ, ಇನ್ನೊಂದೆಡೆ ಕೆಲವರು ಈ ಐತಿಹಾಸಿಕ ಕ್ಷಣದಲ್ಲೂ ಹುಳುಕು ಹುಡುಕಲು ಯತ್ನಿಸುತ್ತಿದ್ದಾರೆ. ಪ್ರತಿಪಕ್ಷಗಳು ಇಡೀ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮದ ರೀತಿ ನೋಡುವ ಮೂಲಕ ‘ಬಾಯ್ಕಟ್’ ಮಾಡಿದ್ದು ಅಗತ್ಯವಾಗಿತ್ತೇ?

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಸೂಜಿ ತಯಾರಿಸುವುದರಿಂದ ಹಿಡಿದು, ಭವ್ಯ ಮಂದಿರದ ನಿರ್ಮಾಣದವರೆಗೂ ‘ರಾಜಕೀಯ’ ಬಂದು ಹೋಗದಿದ್ದರೆ ಆ ಕಾರ್ಯ ಸಂಪನ್ನಗೊಳ್ಳುವುದಿಲ್ಲ. ಶತಮಾನದಿಂದ ಕಾತರತೆಯಿಂದ ಕಾಯುತ್ತಿದ್ದ ಕ್ಷಣಕ್ಕೆ ಸಾಕ್ಷಿಯಾಗಬೇಕಾದ ಸಮಯದಲ್ಲಿಯೂ ಮತ್ತೆ ರಾಜಕೀಯ ಮುನ್ನೆಲೆಗೆ ಬಂದಿದೆ. ಕಳೆದೊಂದು ತಿಂಗಳಿನಿಂದ ಅಯೋಧ್ಯೆ ರಾಮಮಂದಿರದ ಸುತ್ತಮುತ್ತಲೇ ರಾಜಕೀಯ ಗದ್ದಲದ ನಡೆಯುತ್ತಿರುವುದು ಎಲ್ಲರೂ ಗಮನಿಸಿರುವ ವಿಷಯ.

ಮಂದಿರ ಉದ್ಘಾಟನೆಯ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎನ್ನುವ ಮೊದಲು, ಅಯೋಧ್ಯೆ ರಾಮಮಂದಿರ ನಿರ್ಮಾಣವೇ ರಾಷ್ಟ್ರ ರಾಜಕಾರಣದಲ್ಲಿ ಬಹುದೊಡ್ಡ ಸ್ಥಿತ್ಯಂತರಕ್ಕೆ ಕಾರಣವಾಗಿತ್ತು ಎನ್ನುವುದು ಬಹುತೇಕರು ಒಪ್ಪುವ ಮಾತು. ಬಲಪಂಥೀಯ ಚಿಂತನೆಗಳನ್ನು ಒಳಗೊಂಡಿರುವ ರಾಜಕೀಯ ಪಕ್ಷವೇ ಇಲ್ಲ ಎನ್ನುವ ಹೊತ್ತಿನಲ್ಲಿ ರಾಮಜನ್ಮಭೂಮಿ ವಿಷಯವನ್ನು ಕೈಗೆತ್ತಿಕೊಳ್ಳುವ ಮೂಲಕ  ರಾಜಕೀಯದಲ್ಲಿದ್ದ ಎಡಪಂಥೀಯ ಏಕತಾನತೆಗೆ ಬ್ರೇಕ್ ಹಾಕಿದ್ದು
ಬಿಜೆಪಿ. ೮೦ರ ದಶಕದಲ್ಲಿ ಆರಂಭಗೊಂಡು ರಾಜಕೀಯ-ಕಾನೂನಾತ್ಮಕ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಪ್ರಗತಿಯಲ್ಲಿದ್ದು, ಬಾಲರಾಮರ ಪ್ರಾಣಪ್ರತಿಷ್ಠಾಪನೆಯಾಗಿದೆ.

ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಅದರ್ಶ ಪುರುಷ, ಸೀತಾ ಪತಿ ಶ್ರೀರಾಮನ ಪುನರ್‌ಪ್ರತಿಷ್ಠಾಪನಾ ಕಾರ್ಯವು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ಯಶಸ್ವಿ ಯಾಗಿ ಪೂರ್ಣಗೊಂಡಿದೆ. ಐದು ಶತಮಾನಗಳಿಂದ ಎದುರು ನೋಡುತ್ತಿದ್ದ ಕೋಟ್ಯಂತರ ಭಕ್ತರ ಹಾಗೂ ನಮ್ಮ ಜನ್ಮದಲ್ಲಿ ಈ ಕ್ಷಣಕ್ಕೆ ಸಾಕ್ಷಿಯಾಗುವುದೇ ಇಲ್ಲ ಎನ್ನುವ ನಿರಾಸೆಯಲ್ಲಿದ್ದವರ ಅಭಿಲಾಷೆ ಈಡೇರಿದ್ದು, ದಶಕಗಳ ಕಾಲದ ಟೆಂಟಿನ ವಾಸ ಮುಗಿಸಿ, ಮತ್ತೆ ತನ್ನ
ಸ್ವಸ್ಥಾನದಲ್ಲಿ ವಿರಾಜಮಾನನಾಗಿ ಶ್ರೀರಾಮ ಕಂಗೊಳಿಸುತ್ತಿದ್ದಾನೆ.

ದೇಶದ ಬಹುತೇಕರು ಈ ಸಾರ್ಥಕ ಕ್ಷಣವನ್ನು ಧನ್ಯತೆಯಿಂದ ಅನುಭವಿಸುತ್ತಿದ್ದರೆ, ಇನ್ನೊಂದೆಡೆ ಕೆಲವರು ಈ ಐತಿಹಾಸಿಕ ಕ್ಷಣದಲ್ಲಿಯೂ ಹುಳುಕನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಇಡೀ ಕಾರ್ಯಕ್ರಮವನ್ನು ಧಾರ್ಮಿಕ ಕಾರ್ಯಕ್ರಮವನ್ನಾಗಿ ನೋಡದೇ, ಪ್ರತಿಪಕ್ಷಗಳು ರಾಜಕೀಯ ಕಾರ್ಯಕ್ರಮದ ರೀತಿ ನೋಡುವ ಮೂಲಕ ‘ಬಾಯ್ಕಟ್’ ಮಾಡಿವೆ. ಅದರಲ್ಲಿಯೂ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಿಕ್ಕ ಆಹ್ವಾನವನ್ನು ತಿರಸ್ಕಿರಿಸಿ, ‘ರಾಜಕೀಯಕ್ಕಾಗಿ ಉದ್ಘಾಟನೆ ಯಾಗುತ್ತಿರುವ ಅಪೂರ್ಣ ದೇವಾಲಯಕ್ಕೆ ಹೋಗುವುದಿಲ್ಲ’ ಎನ್ನುವ ಮೂಲಕ ವಿವಾದ ಸೃಷ್ಟಿಸಿ ಇಡೀ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಇನ್ನು ‘ಇಂಡಿಯ’ ಮೈತ್ರಿಕೂಟದ ಪ್ರಮುಖ ಪಕ್ಷವಾಗಿರುವ ಡಿಎಂಕೆ ಆಡಳಿತ ನಡೆಸುತ್ತಿರುವ ತಮಿಳುನಾಡಿನಲ್ಲಿ ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ತಡೆ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದೆ.

ರಾಮಜನ್ಮಭೂಮಿ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಹೀಗೆ ನಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ರೀತಿ ವಿರೋಧಿಸುವುದಕ್ಕೆ ಅಲ್ಪಸಂಖ್ಯಾತರ ಓಲೈಕೆಯ ರಾಜಕೀಯ ಮೂಲಕಾರಣ. ಇದನ್ನು ಸರಿಪಡಿಸುವ ಕೆಲಸವನ್ನು ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಪ್ರಯತ್ನಿಸಿದರೂ, ಅದಕ್ಕೆ ಪೂರ್ಣಫಲ ಸಿಕ್ಕಿರಲಿಲ್ಲ. ಆದರೆ ಇದೇ ದ್ವಂದ್ವದಿಂದಾಗಿ ಐತಿಹಾಸಿಕ, ಸ್ವಾತಂತ್ರ್ಯ ಪೂರ್ವ ಪಕ್ಷದ ಹಿನ್ನಡೆ ಆರಂಭವಾಗಿತ್ತು. ಈ ಹಿನ್ನಡೆ ರಾಮಮಂದಿರ
ನಿರ್ಮಾಣದ ವಿಷಯಕ್ಕೆ ಎನ್ನುವುದನ್ನು ಮರೆಯುವಂತಿಲ್ಲ. ಹಾಗೆ ನೋಡಿದರೆ, ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ವಿವಾದಿತ ಕಟ್ಟಡ ಐದು ಶತಮಾನಗಳ ಹಿಂದೆ ನಿರ್ಮಾಣವಾಗಿದ್ದರೂ, ವಿವಾದದ ಸ್ವರೂಪ ಪಡೆದಿದ್ದು ೧೯೪೯ರ ಬಳಿಕವೇ.

೧೯೪೯ರಲ್ಲಿ ನಾನಾಜಿ ದೇಶಮುಖ್ ಅವರ ನೇತೃತ್ವದಲ್ಲಿ ಸ್ಥಳೀಯ ಮುಖಂಡರು ಸೇರಿಕೊಂಡು ಡಿ.೨೨ರಂದು ರಾತ್ರಿ ಮಸೀದಿಯೊಳಗೆ ಬಾಲರಾಮನ
ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಆ ಕ್ಷಣದಲ್ಲಿ ಅದು ಬಹುದೊಡ್ಡ ವಿವಾದವಾಗಿ, ವಿಷಯವು ಪ್ರಧಾನಿ ಜವಾಹರಲಾಲ್ ನೆಹರು ತನಕ ಹೋಗಿ, ಮೂರ್ತಿ ತೆಗೆಯಬೇಕು ಎನ್ನುವ ಒತ್ತಡ ಸ್ಥಳೀಯ ಆಡಳಿತಕ್ಕೆ ಬಂದರೂ, ಮೂರ್ತಿ ತೆಗೆಯುವುದಕ್ಕಿಂತ ಬಾಲರಾಮನ ಮೂರ್ತಿಯಿರುವ ಜಾಗಕ್ಕೆ ಬೀಗ ಹಾಕಿಸಿ, ಹೊರಗಿನಿಂದಲೇ ಪೂಜೆ ಸಲ್ಲಿಸಲು ಅನುಮತಿ ನೀಡುತ್ತಾರೆ. ಅದಾದ ಬಳಿಕ ಇಡೀ ರಾಮ ಜನ್ಮಭೂಮಿ ವಿವಾದ ಬಹುದೊಡ್ಡ ಪ್ರಮಾಣದಲ್ಲಿ ಮುನ್ನಲೆಗೆ ಬಂದಿದ್ದು ೧೯೮೦ರಲ್ಲಿ.

ಕಬ್ಬಿಣದ ಸಲಾಕೆಯೊಳಗಿದ್ದ ರಾಮನ ಮೂರ್ತಿಯನ್ನು ಹೊರತಂದು, ವಿವಾದಿತ ಸ್ಥಳದಲ್ಲಿಯೇ ಬೃಹತ್ ರಾಮಮಂದಿರ ನಿರ್ಮಿಸಬೇಕು ಎನ್ನುವ ಆಲೋಚನೆ ಯನ್ನು ಬಿತ್ತಿದ್ದು ವಿಎಚ್‌ಪಿ. ಇದರ ಮುಖಂಡ ಅಶೋಕ್ ಸಿಂಘಲ್ ಅವರು ಆರಂಭಿಸಿದ ರಾಮಜನ್ಮಭೂಮಿ ಅಭಿಯಾನ ಇಡೀ ದೇಶದಲ್ಲಿ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಯಿತು. ಆರಂಭದಲ್ಲಿ ಈ ಅಭಿಯಾನ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯವೆನಿಸಿಕೊಂಡರೂ, ಬಳಿಕ ಈ ಹೋರಾಟಕ್ಕೆ ಆರ್‌ಎಸ್‌ಎಸ್ ಹಾಗೂ ರಾಜಕೀಯ ಧ್ವನಿಯಾಗಿ ಬಿಜೆಪಿಯೂ ಸೇರಿಕೊಂಡವು.

ಆದರೆ ಈ ಅಭಿಯಾನ ಆರಂಭಗೊಂಡ ಸಮಯದಲ್ಲಿ ಕಾಂಗ್ರೆಸ್ ತನ್ನದೇ ಆದ ದ್ವಂದ್ವಗಳಿಂದ ದೇಶದಲ್ಲಿರುವ ಬಹುಸಂಖ್ಯಾತ ಹಿಂದೂಗಳ ಕೆಂಗಣ್ಣಿಗೆ ಗುರಿಯಾಯಿತು. ಅಯೋಧ್ಯೆ ವಿಷಯದಲ್ಲಿ ರಾಮನ ಪರವಾಗಿ ಧ್ವನಿ ಎತ್ತಿದರೆ, ಅಲ್ಪಸಂಖ್ಯಾತರ ಮತಗಳು ಎಲ್ಲಿ ಕೈಬಿಟ್ಟು ಹೋಗುವುದೋ ಎನ್ನುವ ಆತಂಕದಿಂದ ತಟಸ್ಥ ನಿಲುವನ್ನು ಅದು ತೆಗೆದುಕೊಂಡಿತ್ತು. ಆದರೆ ಈ ಸಮಯದಲ್ಲಿ ರಾಮಮಂದಿರ ವಿಷಯವನ್ನು ಮುಂದಿಟ್ಟುಕೊಂಡೇ ರಾಜಕೀಯಕ್ಕೆ ಧುಮುಕಿದ್ದ ಬಿಜೆಪಿಗರು, ಇದನ್ನೇ ತಮ್ಮ ಅಸವನ್ನಾಗಿಸಿಕೊಂಡು ಹಿಂದೂ ಸಂಸ್ಕೃತಿಯನ್ನು ಉಳಿಸುವುದಕ್ಕೆ ಬಿಜೆಪಿ ಅನಿವಾರ್ಯ ಎನ್ನುವ ರೀತಿಯಲ್ಲಿ ತಮ್ಮ ಇಡೀ ಪ್ರಚಾರವನ್ನು ಆರಂಭಿಸಿದ್ದರು. ಬಿಜೆಪಿಯನ್ನು ವಿರೋಽಸುವ ಭರದಲ್ಲಿ ಕಾಂಗ್ರೆಸಿಗರು, ರಾಮ ಮತ್ತು ರಾಮಜನ್ಮ ಭೂಮಿಯನ್ನು ವಿರೋಧಿಸಿದ್ದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದರೆ, ಬಿಜೆಪಿ ತನ್ನ ಸಂಖ್ಯೆಯನ್ನು ಎರಡರಿಂದ ೮೮ಕ್ಕೆ ಏರಿಸಿಕೊಂಡಿತ್ತು.

೧೯೯೦ರಲ್ಲಿ ವಿಎಚ್‌ಪಿಯ ರಾಮಮಂದಿರ ಅಭಿಯಾನವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ವಿಎಚ್‌ಪಿಯ ಅಶೋಕ್ ಸಿಂಘಲ್, ಆರ್ ಎಸ್‌ಎಸ್‌ನ ಮರೋಪಂತ ಪಿಂಗಳೆ, ಬಿಜೆಪಿಯ ಲಾಲ್‌ಕೃಷ್ಣ ಆಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾಭಾರತಿ ಸೇರಿದಂತೆ ಅನೇಕರ ನೇತೃತ್ವದ ರಾಮಮಂದಿರ ರಥರಾತ್ರೆ ಹಾಗೂ ವಿವಾದಿತ ಬಾಬರಿ ಮಸೀದಿ ಧ್ವಂಸಗೊಳಿಸುವ ಸಮಯದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ ಸಿಂಗ್ ಅವರ ‘ಜಾಣ ಮೌನ’ ಇಂದು ರಾಮಮಂದಿರ ನಿರ್ಮಾಣಕ್ಕೆ ಪ್ರಮುಖ ಕಾರಣ ಎನ್ನುವುದು ಸ್ಪಷ್ಟ.

ಮೊದಲ ಪ್ರಯತ್ನದಲ್ಲಿ ಕಾಂಗ್ರೆಸ್ ಕರಸೇವಕರ ಮೇಲೆ ನಡೆಸಿದ ಹ, ಸರಯೂ ನದಿಯಲ್ಲಿ ಕರಸೇವಕರನ್ನು ಎಳೆದು ಹಾಕಿದ್ದು ಸೇರಿದಂತೆ ಹಲವು ನಡೆಗಳು ದೇಶದ ಹಿಂದೂಗಳಲ್ಲಿನ ‘ಹಿಂದುತ್ವ’ ಅಸ್ಮಿತೆ ಹಾಗೂ ರಾಮನ ಮೇಲಿನ ಭಕ್ತಿಯನ್ನು ಜಾಗೃತಗೊಳಿಸಿದ್ದವು. ಇದರ ಫಲವಾಗಿಯೇ ಕಾಂಗ್ರೆಸ್ ಕನಸಿನಲ್ಲಿಯೂ ಎಣಿಸದಂತೆ ಮತಗಳ ಕ್ರೋಡೀಕರಣಗೊಂಡು, ಬಿಜೆಪಿ ಪರ ಅಲೆ ಹೆಚ್ಚಾಗತೊಡಗಿತ್ತು. ಈ ಜಾಗೃತಿ ೨೦೧೩ರ ವೇಳೆಗೆ ಸುನಾಮಿಯ ರೀತಿಯಲ್ಲಿ ಇಡೀ ದೇಶದಲ್ಲಿ ಬಿಜೆಪಿಯ ಬಹುದೊಡ್ಡ ಮುನ್ನಡೆಗೆ ಕಾರಣವಾಗಿತ್ತು.

ಯಾವುದೇ ವ್ಯಕ್ತಿ ಅಥವಾ ಸಂಘಟನೆಯಲ್ಲಿ ತಪ್ಪಾಗುವುದು ಸಹಜ. ಆದರೆ ಯಾವುದೇ ಒಂದು ತಪ್ಪು ಮಾಡಿದ ಬಳಿಕ ಅದನ್ನೇ ಪುನಃ ಮಾಡಲು ಬಹುತೇಕರು ಹೋಗುವುದಿಲ್ಲ. ಒಂದು ವೇಳೆ ಮಾಡಿದ ತಪ್ಪನ್ನೇ ಮತ್ತೆ ಮಾಡಿದರೆ ಅದರಿಂದ ಬೀಳುವ ಹೊಡೆತ ಊಹಿಸಿಕೊಳ್ಳುವುದಕ್ಕೂ ಕಷ್ಟ ಎನ್ನುವುದು ಸ್ಪಷ್ಟ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಪದೇಪದೆ ಅದೇ ತಪ್ಪಿನ ಮೂಲಕ ಹಿಂದೂಗಳ ಮತಗಳು ಬಿಜೆಪಿಯೊಂದಿಗೇ ಭದ್ರವಾಗುವುದಕ್ಕೆ ಪರೋಕ್ಷ ಸಹಾಯ ಮಾಡುತ್ತಿದ್ದೆಯೇ ಎನ್ನುವ ಅನುಮಾನ ಬರುವಂತಿದೆ.

ಏಕೆಂದರೆ ನೂರು ಕೋಟಿಗೂ ಹೆಚ್ಚು ಜನರು ಕಣ್ತುಂಬಿಕೊಳ್ಳಲು ಕಾಯುತ್ತಿರುವ ಕ್ಷಣ ಆರಂಭಗೊಂಡಾಗಿನಿಂದಲೂ, ಅಯೋಧ್ಯೆ ರಾಮಮಂದಿರದ ಬಗ್ಗೆ ಮಾತನಾಡಿದ್ದಕ್ಕಿಂತ ಹೆಚ್ಚಾಗಿ, ಇಡೀ ವಿಷಯವನ್ನು ರಾಜಕೀಯಗೊಳಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಹಿರಿಯ ನಾಯಕರೇ, ರಾಮನ ನೆಲೆಯಲ್ಲಿ ಮಂದಿರ ಉದ್ಘಾಟನೆಯ ವಿಷಯದಲ್ಲಿ ರಾಜಕೀಯ ಸೇರಿಸುತ್ತಿದ್ದಾರೆ. ಆದರೆ
ಇದಕ್ಕೆ ತದ್ವಿರುದ್ಧ ಎನ್ನುವಂತೆ ಬಿಜೆಪಿಯ ಮೇಲ್ಪಂಕ್ತಿ ನಾಯಕರು, ಇಡೀ ಪ್ರಕರಣವನ್ನು ಹಿಂದೂ ಅಸ್ಮಿತೆಯ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ.

ಹಾಗೆ ನೋಡಿದರೆ ಈ ಐತಿಹಾಸಿಕ ಕ್ಷಣ ಕೇವಲ ಒಂದು ಪಕ್ಷ, ಧರ್ಮ, ಪಂಥಕ್ಕೆ ಸೀಮಿತವಾಗದೇ ಎಲ್ಲವನ್ನು ಮೀರಿ ದೇಶದ ಸಂಭ್ರಮವಾಗಬೇಕಿತ್ತು. ಆದರೆ ಕಾಂಗ್ರೆಸ್ ಸೇರಿದಂತೆ ‘ಇಂಡಿಯ’ ಮೈತ್ರಿಕೂಟದ ಬಹುತೇಕ ಪಕ್ಷಗಳು, ರಾಮ ಮಂದಿರಕ್ಕೆ ಬೆಂಬಲಿಸಿದರೆ ಎಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್ ಕೈಬಿಟ್ಟು ಹೋಗುವುದೋ ಎನ್ನುವ ಆತಂಕದಲ್ಲಿ ‘ರಾಮಮಂದಿರದ ಪುನರ್ ಪ್ರತಿಷ್ಠಾಪನೆಗೆ ನಾವ್ಯಾರೂ ಹೋಗಲ್ಲ’ ಎನ್ನುವ ಘೋಷಣೆ ಮಾಡಿದ್ದರು. ಇಂಥ ಮಾತುಗಳಿಂದ ಅವರು ನಂಬಿರುವ ಅಲ್ಪಸಂಖ್ಯಾತ ಮತದಾರರು ಎಷ್ಟರ ಮಟ್ಟಿಗೆ ಸಂತುಷ್ಟರಾಗುತ್ತಾರೆ ಎನ್ನುವುದಕ್ಕಿಂತ ಬಹುಸಂಖ್ಯಾತ ಮತದಾರರು
ಮುಂದಿನ ಲೋಕಸಭೆಯಲ್ಲಿ ಯಾವ ತೀರ್ಮಾನ ಮಾಡಲಿದ್ದಾರೆ ಎನ್ನುವುದು ಈಗಿರುವ ಪ್ರಶ್ನೆ.

ಐದು ಶತಮಾನದ ನಿರಂತರ ಹೋರಾಟ, ಸಾವಿರಾರು ಜನರ ತ್ಯಾಗ-ಬಲಿದಾನ, ಕಾನೂನಾತ್ಮಕ ಹಾಗೂ ರಾಜಕೀಯ ಹೋರಾಟದ ಬಳಿಕ ಇಡೀ ವಿಶ್ವವೇ ತಿರುಗಿ ನೋಡುವಂಥ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಈ ಸಮಾರಂಭದಲ್ಲಿ ಪಕ್ಷ, ಧರ್ಮ, ಅಂತಸ್ತು, ಪಂಥ ಮೀರಿ ಎಲ್ಲರನ್ನು ಆಹ್ವಾನಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ರಾಜಕೀಯ ಕಾರಣಕ್ಕೆ, ಆಹ್ವಾನಿತರ ಪಟ್ಟಿಯಲ್ಲಿಯೂ ತಪ್ಪು ಹುಡುಕುವ ಕೆಲಸವನ್ನು ಮಾಡಿರುವ ಕಾಂಗ್ರೆಸಿಗರು, ಗೈರಾಗಿದ್ದಾರೆ. ಆದರೆ ಸೋಮವಾರ ಇಡೀ ದಿನದ ಬೆಳವಣಿಗೆಯನ್ನು ಗಮನಿಸಿದರೆ, ಕಾಂಗ್ರೆಸಿಗರು ಮಾತ್ರವಲ್ಲ ಯಾವುದೇ ವ್ಯಕ್ತಿ ಬರಲಿ ಬಾರದಿರಲಿ ರಾಮನ ಭಕ್ತರಿಂದಲೇ ಈ ಕಾರ್ಯ ಪೂರ್ಣಗೊಂಡಿದೆ.

ಅಯೋಧ್ಯೆಯಲ್ಲಿನ ಈ ನಿರ್ಮಾಣಕಾರ್ಯದಿಂದಾಗಿ ಕೇವಲ ಒಂದು ದೇವಾಲಯ ನಿರ್ಮಾಣವಾಗಿಲ್ಲ. ಬದಲಿಗೆ ಐದು ಶತಮಾನದ ಹಿಂದೆ ನಡೆದಿದ್ದ ತಪ್ಪನ್ನು ಸರಿಪಡಿಸುವ ಪ್ರಯತ್ನ ನಡೆದಿದೆ. ಈ ಕ್ಷಣಕ್ಕೆ ಕಾಂಗ್ರೆಸಿಗರು ಏನೇ ಹೇಳಿದರೂ, ದೇಶದ ಬಹುಪಾಲು ಜನರ ನಂಬಿಕೆಗಳನ್ನು ಬದಲಾಯಿಸುವುದಕ್ಕೆ
ಸಾಧ್ಯವಾಗಿಲ್ಲ. ಇನ್ನು ಮೂರ‍್ನಾಲ್ಕು ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದಲೇ ಇಷ್ಟು ಅವಸರದಲ್ಲಿ ಬಿಜೆಪಿ ಈ ಅಪೂರ್ಣ ಗೊಂಡಿರುವ ದೇವಾಲಯದ ಉದ್ಘಾಟನೆ ಮಾಡುತ್ತಿದೆ ಎನ್ನುವ ಆರೋಪಗಳನ್ನು ಮಾಡಿದರೂ, ಭವ್ಯ ಮಂದಿರ ನಿರ್ಮಾಣದ ಬದಲು, ಬಾಲರಾಮನ ಮೂರ್ತಿ ಮೊದಲು ಮಂದಿರ ಸೇರಲಿ. ಟೆಂಟ್‌ನಲ್ಲಿ, ಸಲಾಕೆಗಳ ಹಿಂದೆ ಪೂಜಿಸುವ ಬದಲು ಮಂದಿರದೊಳಗೆ ಪೂಜಿಸುವಂತಾಗಿದೆ ಎನ್ನುವ ನಿಟ್ಟುಸಿರನ್ನು ರಾಮನ ಭಕ್ತರು ಬಿಟ್ಟಿದ್ದಾರೆ. ಇನ್ನು ರಾಜಕೀಯಕ್ಕೆ ರಾಮನನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎನ್ನುವುದು ಹೊಸವಿಷಯವಲ್ಲ.

ರಾಮಜನ್ಮಭೂಮಿ ಹೋರಾಟದ ಮೂಲಕವೇ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ, ಇದೀಗ ಈ ಬಹುದೊಡ್ಡ ಯಶಸ್ಸನ್ನು ಕ್ಲೇಮ್ ಮಾಡಿಕೊಳ್ಳಬಾರದು ಎಂದರೆ ಒಪ್ಪಿತವೇ? ಕೊನೆಯದಾಗಿ, ಕಾಂಗ್ರೆಸ್ ನಾಯಕರಿಗೆ ಬಂದಿದ್ದ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದರೂ, ಕಾಂಗ್ರೆಸಿಗಾಗುತ್ತಿರುವ ಡ್ಯಾಮೇಜ್ ಕಡಿಮೆ ಯಾಗುತ್ತಿತ್ತು. ಹೋಗಲು ಇಷ್ಟವಿಲ್ಲದಿದ್ದರೆ, ಗೈರಾದರೆ ಆಗುತ್ತಿತ್ತು. ಆದರೆ ಅದನ್ನು ಬಹಿರಂಗವಾಗಿ ಹೇಳಿ ಬಹುಸಂಖ್ಯಾತರ ಮನಸ್ಸಿಗೆ ಇನ್ನಷ್ಟು ಘಾಸಿಗೊಳಿಸುವ ಅಗತ್ಯವಿರಲಿಲ್ಲ ಎನಿಸುವುದು ಸತ್ಯ. ಏನೇ ಆಗಲಿ ಲಕ್ಷಾಂತರ ಕರಸೇವಕರ ತ್ಯಾಗ ಬಲಿದಾನ, ಹೋರಾಟದ ಫಲವಾಗಿ ಕೊನೆಗೂ ಪ್ರಭು ಶ್ರೀರಾಮ ತನ್ನ ಸ್ಥಾನಕ್ಕೆ ತಾನು ಹೋಗಿದ್ದಾನೆ. ಆ ಕ್ಷಣವನ್ನು ಸಂಭ್ರಮಿಸೋಣ.