Saturday, 12th October 2024

ಆವಿಷ್ಕರದಲ್ಲಿ ಆತ್ಮಹತ್ಯೆ ಮಾಡಿಕೊಂಡ !

ಹಿಂದಿರುಗಿ ನೋಡಿದಾಗ

ಕ್ಲೋರೋಫಾರಂ ಚಟಕ್ಕೆ ತುತ್ತಾದ ದಂತವೈದ್ಯ ಹೋರೇಸ್ ಒಂದು ರಾತ್ರಿ ಮಿತಿಮೀರಿ ಕ್ಲೋರೋ-ರಂ ಸೇವಿಸಿ, ಅದರ ಮತ್ತಿನಲ್ಲಿ ತೊಡೆಯ ಧಮನಿಯನ್ನು ಛೇದಿಸಿಕೊಂಡ. ವಿಪರೀತ ರಕ್ತಸ್ರಾವವಾಗಿ ಅಸುನೀಗಿದ. ಓರ್ವ ಪ್ರತಿಭಾವಂತ ವೈದ್ಯವಿಜ್ಞಾನಿಯ ಅವಸಾನವಾಗಿದ್ದು ಹೀಗೆ. 

ನೋವು ಎನ್ನುವುದು ಪ್ರಕೃತಿಯು ನಮಗೆ ಕೊಟ್ಟಿರುವ ಒಂದು ವರ ಹಾಗೂ ಶಾಪ. ಕಾಲಿಗೆ ಮುಳ್ಳು ಚುಚ್ಚಿದೆ, ಕಾಫಿ ಲೋಟವು ಬಿಸಿಯಾಗಿದೆ, ಗಂಟಲಲ್ಲಿ ಸೋಂಕಾಗಿ ನೋಯುತ್ತಿದೆ ಇತ್ಯಾದಿ ಅನುಭವಗಳೆಲ್ಲ ನೋವೇ ಆದರೂ, ಅವು ನಮಗೆ ಅಪಾಯ ದಿಂದ ಪಾರಾಗುವಂತೆ ಎಚ್ಚರಿಕೆ ನೀಡುವಂಥ ವರವಾಗಿವೆ. ಮಂಡಿ ಸವೆತದ ನೋವು, ಅರೆತಲೆನೋವು, ಕ್ಯಾನ್ಸರ್ ಕಾರಣದಿಂದ ತಲೆ ದೋರುವ ಉಗ್ರನೋವು ಇವು ನಮಗೆ ಶಾಪದ ರೂಪದಲ್ಲಿ ಕಾಡುತ್ತಿವೆ. ಹಾಗಾಗಿ ಈ ನೋವನ್ನು ನಿಗ್ರಹಿಸಬಲ್ಲ ಸುರಕ್ಷಿತ ಔಷಧವನ್ನು ಕಂಡು ಹಿಡಿಯಲು ಅನಾದಿಕಾಲದಿಂದಲೂ ಪ್ರಯತ್ನಗಳಾಗುತ್ತಿವೆ.

ನಮ್ಮ ಪೂರ್ವಜರು ಪ್ರಾಣಿಗಳ ಜತೆ, ಶತ್ರುಗಳ ಜತೆ ಹೊಡೆದಾಡುತ್ತಿದ್ದರು. ಮರದಿಂದ ಕಾಲುಜಾರಿ ಬಿದ್ದು ಅವರಿಗೆ ಅಪಘಾತ ವಾಗಿ ಗಾಯಗಳಾಗುತ್ತಿದ್ದವು, ಮೂಳೆ ಗಳು ಮುರಿಯುತ್ತಿದ್ದವು. ಆಗ ಅವರು ತಮಗೆ ತಿಳಿದಿದ್ದ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ನೀಡುವಾಗ ನೋವಿ ನಿಂದ ಗಾಯಾಳು ಮಾಡುತ್ತಿದ್ದ ಆರ್ತನಾದ ಎಲ್ಲರನ್ನೂ ಕಂಗೆಡಿಸುತ್ತಿತ್ತು. ಇದರಿಂದ ಸಮರ್ಪಕ ಚಿಕಿತ್ಸೆ ನೀಡಲು ಕಷ್ಟವಾಗುತ್ತಿತ್ತು. ಸುಮಾರು ಕ್ರಿ.ಪೂ. ೧೩,೦೦೦ ವರ್ಷಗಳಷ್ಟು ಹಿಂದೆ ನಮ್ಮ ಪೂರ್ವಜರು ಮದ್ಯವನ್ನು ತಯಾರಿಸಿ ದರು.

ಮದ್ಯಪಾನ ಮಾಡಿದವನಿಗೆ ನೋವು ಅಷ್ಟಾಗಿ ತಿಳಿಯುತ್ತಿರಲಿಲ್ಲ. ಇದನ್ನು ಗಮನಿಸಿದ ಪೂರ್ವಜರು ಗಾಯಾಳುವಿಗೆ ಚೆನ್ನಾಗಿ ಮದ್ಯಪಾನ ಮಾಡಿಸಿ, ಅಗತ್ಯ ಚಿಕಿತ್ಸೆ ನೀಡುತ್ತಿದ್ದರು. ಕಾಲಕ್ರಮೇಣ ಗಾಂಜಾ ಮತ್ತು ಅಫೀಮು ಗಿಡಗಳ ಪರಿಚಯವಾದವು. ಇವುಗಳ ಮತ್ತಿನ ಗುಣವು ಅವರನ್ನು ವಿಶೇಷವಾಗಿ ಆಕರ್ಷಿಸಿದವು. ಹಾಗಾಗಿ ಗಾಯಾಳುಗಳಿಗೆ ಮತ್ತು ಬರಿಸಿ, ಅವರು ಮೈಮರೆತಿ ದ್ದಾಗ ಅಗತ್ಯ ಚಿಕಿತ್ಸೆ ನೀಡುತ್ತಿದ್ದರು. ಆದರೆ ಈ ವಿಧಾನಗಳು ಯಾವಾಗಲೂ ಯಶಸ್ವಿಯಾಗುತ್ತಿರಲಿಲ್ಲ. ನೈಜನೋವನ್ನು ಸಂಪೂರ್ಣ ನಿಗ್ರಹಿಸುವ ಅರಿವಳಿಕೆಯನ್ನು ಕಂಡುಕೊಳ್ಳಲು ೧೮ನೇ ಶತಮಾನದವರೆಗೆ ಕಾಯಬೇಕಾಯಿತು.

ಜೋಸೆ- ಪ್ರೀಸ್ಟ್ಲೆ ಇಂಗ್ಲೆಂಡಿನ ಖ್ಯಾತ ರಸಾಯನ ವಿಜ್ಞಾನಿ. ‘ಆಕ್ಸಿಜನ್ ಕಂಡುಹಿಡಿದವನು’ ಎನ್ನುವ ವಿಚಾರ ವನ್ನು ಶಾಲಾ ದಿನಗಳಲ್ಲಿ ಓದಿರುವುದು ನೆನಪಿಗೆ ಬರುತ್ತದೆ. ಪ್ರೀಸ್ಟ್ಲೆ, ೧೭೭೨ರ ಹೊತ್ತಿಗೆ ಕಬ್ಬಿಣದ ಪುಡಿಯ ಮೇಲೆನೈಟ್ರಿಕ್ ಆಮ್ಲವನ್ನು ಸುರಿದಾಗ ಒಂದು ವಿಶಿಷ್ಟ ಅನಿಲಹೊಮ್ಮುವುದನ್ನು ಕಂಡಿದ್ದ. ನೈಟ್ರಿಕ್ ಆಮ್ಲದಲ್ಲಿ ಪ್ರಧಾನವಾಗಿ ಇರುವುದು ನೈಟ್ರೋಜನ್. ಹಾಗಾಗಿ ಈ ಅನಿಲಕ್ಕೆ ‘ನೈಟ್ರಸ್ ಏರ್’ ಎಂದು ಹೆಸರಿಟ್ಟ. ಈಗ ಇದು ನೈಟ್ರಸ್ ಆಕ್ಸೈಡ್ ಎಂದು ಪ್ರಸಿದ್ಧವಾಗಿದೆ.

೧೯೭೭ರಲ್ಲಿ ‘ಎಕ್ಸ್‌ಪರಿಮೆಂಟ್ಸ್ ಆಂಡ್ ಅಬ್ಸರ್ವೇಶನ್ಸ್ ಆನ್ ಡಿಫರೆಂಟ್ ಕೈಂಡ್ಸ್ ಆಫ್ ಏರ್’ ಎಂಬ ಪುಸ್ತಕ ಪ್ರಕಟಿಸಿದ.
ಥಾಮಸ್ ಬೆಡ್ಡೋಸ್ ಎಂಬ ಇಂಗ್ಲಿಷ್ ವೈದ್ಯನಿಗೆ ಈ ನೈಟ್ರಸ್ ಏರ್ ಬಗ್ಗೆ ಆಸಕ್ತಿ ಬೆಳೆದು ಇದನ್ನು ‘-ಕ್ಷೀಯಸ್ ಏರ್’ ಎಂದು ಕರೆದ. ಅಂದರೆ ‘ಅಸ್ವಾಭಾವಿಕ ಗಾಳಿ ಅಥವಾ ಯೋಜಿತ ವಿಧಾನದಲ್ಲಿ ಉತ್ಪಾದಿಸಬೇಕಾದ ಗಾಳಿ’ ಎಂದರ್ಥ. ಜೇಮ್ಸ್ ವ್ಯಾಟ್ ಎಂಬ ಸ್ಕಾಟಿಶ್ ಎಂಜಿನಿಯರ್ ನನ್ನು ನೇಮಿಸಿಕೊಂಡ ಬೆಡ್ಡೋಸ್, ಈ ಫೆಕ್ಷೀಯಸ್ ಏರ್ ಅನ್ನು ಸುರಕ್ಷಿತವಾಗಿ ಉತ್ಪಾದಿಸಬಲ್ಲ ಒಂದು ಯಂತ್ರವನ್ನು ನಿರ್ಮಿಸಿಕೊಡಬೇಕೆಂದ.

ಇಬ್ಬರೂ ಸೇರಿ ಈ ಅಸ್ವಾಭಾವಿಕ ಅನಿಲವನ್ನು ಅಧ್ಯಯನ ಮಾಡಿ, ೧೭೯೪ರಲ್ಲಿ ‘ಕನ್ಸಿಡರೇಶನ್ ಆನ್ ದಿ ಮೆಡಿಕಲ್ ಯೂಸ್ ಆನ್ ದಿ ಪ್ರೊಡಕ್ಷನ್ ಆಫ್ ಫೆಕ್ಷೀಶಿಯಸ್ ಏರ‍್ಸ್’ ಎಂಬ ಪುಸ್ತಕ ಬರೆದರು. ಏಕೆಂದರೆ ಬೆಡ್ಡೋಸ್, ‘ಕ್ಷಯವೇ ಮುಂತಾದ ಶ್ವಾಸ ಕೋಶ ರೋಗ ಗಳನ್ನು ಈ ಅಸ್ವಾಭಾವಿಕ ಗಾಳಿಯಿಂದ ಗುಣಪಡಿಸಬಹುದು’ ಎಂದು ಭಾವಿಸಿದ್ದ. ವಾಯುಚಾಲಿತ ಯಂತ್ರಗಳ ವೈದ್ಯಕೀಯ ಗಾಳಿಯಿಂದ ರೋಗ ನಿವಾರಿಸುವ ‘ನ್ಯೂಮಾಟಿಕ್ ಇನ್‌ಸ್ಟಿಟ್ಯೂಶನ್ ಫಾರ್ ರಿಲೀವಿಂಗ್ ಡಿಸೀಸಸ್ ಬೈ ಮೆಡಿಕಲ್ ಏರ‍್ಸ್’ ಎಂಬ ಸಂಸ್ಥೆಯನ್ನು ಇಂಗ್ಲೆಂಡಿನ ಬ್ರಿಸ್ಟಲ್ ನಗರದಲ್ಲಿ ಆತ ಸ್ಥಾಪಿಸಿದ, ಹಂಫ್ರೀ ಡೇವಿ ಎಂಬ ಯುವಕ ನನ್ನು ನೇಮಿಸಿಕೊಂಡ (ಹಂಫ್ರೀ ಡೇವಿ ಮುಂದೆ ಖ್ಯಾತ ವಿಜ್ಞಾನಿಯಾದ). ಡೇವಿಗೆ, ಈ ಅಸ್ವಾಭಾವಿಕ ಗಾಳಿಯ ವೈದ್ಯಕೀಯ ಉಪಯೋಗಗಳ ಬಗ್ಗೆ ಪ್ರಯೋಗ ನಡೆಸುವಂತೆ ಹೇಳಿದ.

ಹಂಫ್ರಿ ಡೇವಿ ಈ ಅನಿಲವನ್ನು ಮೊದಲು ತಾನೇ ಸೇವಿಸಿದ, ಗೆಳೆಯರನ್ನು ಕರೆದು ಸೇವಿಸಲು ಹೇಳಿದ. ವಿಜ್ಞಾನಿಗಳು, ಸಾಹಿತಿ-ಕಲಾವಿದರು ಮತ್ತು ದಾರ್ಶನಿಕರನ್ನು ಕರೆದ. ಎಲ್ಲರೂ ಸೇವಿಸಿದರು. ಡೇವಿ, ಅವರ ಅನುಭವವನ್ನು ಹಾಗೂ ಅವರು ಅನುಭವಿಸಿದ್ದನ್ನು ಕಣ್ಣಾರೆ ಕಂಡು ಎಲ್ಲವನ್ನೂ ದಾಖಲಿಸಿದ. ನೈಟ್ರಸ್ ಆಕ್ಸೈಡನ್ನು ಸೇವಿಸಿದವರೆಲ್ಲರಿಗೂ ಗಾಳಿಯಲ್ಲಿ ತೇಲುತ್ತಿರುವ ಅನುಭವವಾಯಿತು. ಆನಂದದ ಅಲೆಗಳು ಮೈತುಂಬಾ ಹರಿಯುತ್ತಿದ್ದವು. ಖುಷಿಯಿಂದ ನಗಬೇಕು, ಕುಣಿಯಬೇಕು ಎನಿಸುತ್ತಿತ್ತು. ಅನೇಕರು ಹಾಡಿ-ಕುಣಿದರು, ಮನಬಿಚ್ಚಿ ಮಾತಾಡಿದರು.

ಗಣ್ಯಾತಿ ಗಣ್ಯರೆಲ್ಲ ಹುಸಿಗಾಂಭೀರ್ಯ ಮರೆತು, ಮಿತಿಯಿಲ್ಲದಂತೆ ನಿರಂತರ ನಗಲಾ ರಂಭಿಸಿದರು. ಜನರು ಇದನ್ನು ‘ನಗೆಯ
ಅನಿಲ’ (ಲಾಫಿಂಗ್ ಗ್ಯಾಸ್) ಎಂದರು. ಸಮಾಜದಲ್ಲಿ ನಗೆಯ ಅನಿಲ ಜನಪ್ರಿಯ ವಾಗಿ, ಅಲ್ಲಲ್ಲಿ ‘ನಗೆಯ ಅನಿಲಗಳ ಪಾರ್ಟಿ’ ನಡೆಯತೊಡದಿತು. ಡೇವಿ ಇವರನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಈ ಜನ ನಕ್ಕು ನಲಿಯುವಾಗ ಆಯತಪ್ಪಿ ಬೀಳುತ್ತಿದ್ದರು, ಸಾಕಷ್ಟು ಮೂಗೇಟುಗಳಾಗುತ್ತಿದ್ದವು. ಆದರೆ ಅವರಿಗೆ ಅದರ ಪರಿವೆಯೇ ಇರಲಿಲ್ಲ. ಯಾವ ನೋವನ್ನೂ ತೋರದೆ ನಗೆಯ ಅಲೆಯಲ್ಲಿ ತೇಲುತ್ತಿದ್ದರು. ಇದನ್ನು ನೋಡಿದ ಡೇವಿ, ‘ನೈಟ್ರಸ್ ಆಕ್ಸೈಡಿಗೆ ನೋವು-ನಿವಾರಕ ಗುಣವಿದೆ.

ಹೆಚ್ಚು ರಕ್ತವು ಹರಿಯದಂಥ ಸಣ್ಣ ಪುಟ್ಟ ಶಸ್ತ್ರಚಿಕಿತ್ಸೆಯಲ್ಲಿ ಇದನ್ನು ನೋವು ನಿವಾರಕವಾಗಿ ಬಳಸಬಹುದು’ ಎಂಬ ಅನಿಸಿಕೆಯನ್ನು ಪ್ರಬಂಧದ ರೂಪದಲ್ಲಿ ಮಂಡಿಸಿದ. ಆದರೆ ಈ ಮಹತ್ವದ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸ ಲಿಲ್ಲ, ನೈಟ್ರಸ್ ಆಕ್ಸೈಡನ್ನು ನಗೆಯ ಅನಿಲವಾಗಿ ಬಳಸುವಲ್ಲೇ ಆಸಕ್ತಿ ತೋರಿದರು.  ಸ್ಯಾಮ್ಯುಯಲ್ ಕೋಲ್ಟ್ ರಿವಾಲ್ವರುಗಳ ತಯಾರಿಯಲ್ಲಿ ಜಗತ್ಪ್ರಸಿದ್ಧಿ ಪಡೆದ ಉದ್ಯಮಿ.

ನೈಟ್ರಸ್ ಆಕ್ಸೈಡನ್ನು ತಯಾರಿಸುವ ಒಂದು ಸಂಚಾರಿ ಪ್ರಯೋಗಾಲಯವನ್ನು ಸಿದ್ಧಪಡಿಸಿಕೊಂಡ ಈತ ‘ನ್ಯೂಯಾರ್ಕ್,  ಲಂಡನ್, ಕಲಕತ್ತ ನಗರಗಳ ಪ್ರಖ್ಯಾತ ಡಾ. ಕೋಲ್ಟ್’ ಅವರ ಸಾರ್ವಜನಿಕ ಪ್ರದರ್ಶನಗಳನ್ನು ನೀಡಲಾರಂಭಿಸಿದ. ಹೋದಕಡೆ ಯಲ್ಲೆಲ್ಲಇದು ಯಶಸ್ವಿಯಾಗಿ ಅಪಾರ ಹಣ ಗಳಿಸಿದ. ಅದನ್ನೇ ಮೂಲ ಬಂಡವಾಳವಾಗಿಸಿಕೊಂಡು ರಿವಾಲ್ವರ್ ತಯಾರಿಕಾ
ಕಾರ್ಖಾನೆಯನ್ನು ಆರಂಭಿಸಿದ. ಅಮೆರಿಕದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಗಾರ್ಡ್ನರ್ ಕ್ವಿನ್ಸಿ ಕೋಲ್ಟನ್, ನೈಟ್ರಸ್
ಆಕ್ಸೈಡ್ ಪ್ರದರ್ಶನದಲ್ಲಿ ಪರಿಣತಿ ಗಳಿಸಿ ಕೊನೆಗೆ ವೈದ್ಯಕೀಯವನ್ನೇ ಕೈಬಿಟ್ಟ. ಸಾರ್ವಜನಿಕ ಪ್ರದರ್ಶನದಿಂದ ಅಪಾರ ಹಣ ಗಳಿಸಲಾರಂಭಿಸಿದ. ೧೮೪೪ರ ಡಿಸೆಂಬರ್ ೧೦.

ಅಮೆರಿಕದ ಕನೆಕ್ಟಿಕಟ್ ಪ್ರದೇಶದ ಹಾರ್ಟ್‌ಫೀಲ್ಡ್ ಎಂಬ ಸ್ಥಳ. ಕೋಲ್ಟನ್‌ನ ಪ್ರದರ್ಶನದಲ್ಲಿ ಭಾಗವಹಿಸಿದ್ದ ಓರ್ವ ವೈದ್ಯಕೀಯ ವಿದ್ಯಾರ್ಥಿ ಬಿದ್ದು ಕಾಲಿಗೆ ಪೆಟ್ಟನ್ನು ಮಾಡಿ ಕೊಂಡ. ಆದರೆ ಅವನಿಗೆ ನೋವಿನ ಅನುಭವವೇ ಆಗಲಿಲ್ಲ. ಕಾರಣ ಅವನು ನೈಟ್ರಸ್ ಆಕ್ಸೈಡನ್ನು ಪೂರ್ಣ ಪ್ರಮಾಣ ದಲ್ಲಿ ಸೇವಿಸಿದ್ದ. ಪ್ರೇಕ್ಷಕರ ನಡುವೆ ಕುಳಿತು ಈ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಡಾ.ಹೋರೇಸ್ ವೆಲ್ ಎಂಬ ದಂತವೈದ್ಯ, ಮರುದಿನ ಕೋಲ್ಟನ್‌ನನ್ನು ಆಸ್ಪತ್ರೆಗೆ ಕರೆಸಿಕೊಂಡು, ತನಗೆ ನೈಟ್ರಸ್ ಆಕ್ಸೈಡ್ ನೀಡುವಂತೆ ಕೇಳಿದ. ತನ್ನ ಸಹ ದಂತವೈದ್ಯ ಡಾ.ಮ್ಯಾಂಕಿ ರಿಗ್ಸ್‌ನನ್ನು ಕರೆದು, ಹುಳುಕು ಹಿಡಿದ ತನ್ನ ದವಡೆ ಹಲ್ಲನ್ನು ತೆಗೆಯುವಂತೆ ಹೇಳಿದ. ಸಹೋದ್ಯೋಗಿ ಹಲ್ಲನ್ನು ಕಿತ್ತ! ಹೋರೇಸನಿಗೆ ನೋವಿನ ಅನುಭವವೇ ಆಗಲಿಲ್ಲ! ಆಗ ಅವನು ‘ನೈಟ್ರಸ್ ಆಕ್ಸೈಡನ್ನು ದಂತವೈದ್ಯಕೀಯದಲ್ಲಿ ನೋವು ನಿವಾರಕವಾಗಿ ಬಳಸಬಹುದು’ ಎಂಬ ಸತ್ಯವನ್ನು ಮನಗಂಡ.

೧೨ ರೋಗಿಗಳಿಗೆ ನೈಟ್ರಸ್ ಆಕ್ಸೈಡ್ ನೀಡಿ ನೋವಿಲ್ಲದೆ ಹಲ್ಲುಗಳನ್ನು ತೆಗೆದ! ೧೮೪೫ರಲ್ಲಿ ಮೆಸಾಚುಸೆಟ್ಸ್‌ನಲ್ಲಿರುವ ಜನರಲ್ ಆಸ್ಪತ್ರೆಗೆ ಬಂದ ವೆಲ್, ಅಲ್ಲಿ ವೈದ್ಯರ ಎದುರಿನಲ್ಲಿ ನೈಟ್ರಸ್ ಆಕ್ಸೈಡನ್ನು ನೀಡಿ ಹಲ್ಲನ್ನು ನೋವಿಲ್ಲದೆ ಕೀಳುವ ಪ್ರಯೋಗ
ನಡೆಸಿದ. ರೋಗಿಯು ಕೂಡಲೇ ಸೂರು ಕಿತ್ತುಹೋಗುವಂತೆ ಕಿರುಚಿದ. ಬಹುಶಃ ಆತನಿಗೆ ನೈಟ್ರಸ್ ಆಕ್ಸೈಡನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಿರಲಿಲ್ಲ ಎನಿಸುತ್ತದೆ. ವೈದ್ಯರು ಹೋರೇಸನನ್ನು ಮೋಸಗಾರ ಎಂದು ಜರೆದರು. ಖ್ಯಾತಿಗೆ ಮಸಿ ಮೆತ್ತಿಕೊಂಡ ಹೋರೇಸ್ ದಂತವೈದ್ಯಕೀಯವನ್ನೇ ಕೈಬಿಟ್ಟು ಊರಿಂದೂರಿಗೆ ತಿರುಗುವ ಸಾಮಾನ್ಯ ಮಾರಾಟ ಗಾರನಾದ. ಆದರೆ ನೋವುರಹಿತ ‘ಔಷಧ’ ಕಂಡು ಹಿಡಿಯುವ ಯತ್ನವನ್ನು ಮುಂದುವರಿಸಿದ. ಈಥರ್ ಮತ್ತುಕ್ಲೋರೋ-ರಂಗಳನ್ನು ತನ್ನ ಮೇಲೆಯೇ
ಪ್ರಯೋಗಿಸಿಕೊಂಡ. ಕೊನೆಗೆ ಕ್ಲೋರೋ-ರಂ ಚಟಕ್ಕೆ ತುತ್ತಾದ.

೧೮೪೮ ರಲ್ಲಿ ಹೀಗೆಯೇ ಕ್ಲೋರೋಫಾರಂ ಮತ್ತಿನಲ್ಲಿ ಇಬ್ಬರು ಮಹಿಳೆಯರ ಮೇಲೆ ಗಂಧಕಾಮ್ಲ ಎರಚಿದ್ದಕ್ಕೆ ಪೊಲೀಸರು
ಬಂಧಿಸಿ ಸೆರೆಯಿಟ್ಟರು. ಪ್ರಜ್ಞೆ ಬಂದ ಮೇಲೆ ಹೋರೇಸ್ ತನ್ನ ತಪ್ಪನ್ನು ಒಪ್ಪಿಕೊಂಡ. ಆ ರಾತ್ರಿ ಮಿತಿಮೀರಿ ಕ್ಲೋರೋಫಾರಂ ಸೇವಿಸಿ, ಅದರ ಮತ್ತಿನಲ್ಲಿ ತೊಡೆಯ ಧಮನಿಯನ್ನು ಛೇದಿಸಿಕೊಂಡ. ವಿಪರೀತ ರಕ್ತಸ್ರಾವವಾಗಿ ಜೀವವು ಹೋಯಿತು. ಹೀಗೆ ಓರ್ವ ಪ್ರತಿಭಾವಂತ ವೈದ್ಯವಿಜ್ಞಾನಿಯ ಅವಸಾನವಾಯಿತು.

ಈಥರ್ ಮತ್ತು ಕ್ಲೋರೋ-ರಂಗಳನ್ನು ಅರಿವಳಿಕೆಯಾಗಿ ಬಳಸಿದಾಗ ಕೆಲ ತೊಡಕುಗಳು ಕಂಡುಬರುತ್ತಿದ್ದ ಕಾರಣ ಅವೆರಡನ್ನೂ ಜನ ಇಷ್ಟಪಡಲಿಲ್ಲ. ಹಾಗಾಗಿ ವೈದ್ಯರು ಮತ್ತೆ ನೈಟ್ರಸ್ ಆಕ್ಸೈಡನ್ನು ಅರಿವಳಿಕೆಯಾಗಿ ಬಳಸಲಾರಂಬಿಸಿದರು. ನೈಟ್ರಸ್ ಆಕ್ಸೈಡ್‌ಗೆ ಖ್ಯಾತಿ ಮರಳಿತು. ದಂತ ವೈದ್ಯರ ಜತೆಗೂಡಿ ‘ಕೋಲ್ಟನ್ ಡೆಂಟಲ್ ಆಸೋಸಿಯೇ ಶನ್’ ಸ್ಥಾಪಿಸಿದ ಕೋಲ್ಟನ್, ನೈಟ್ರಸ್ ಆಕ್ಸೈಡನ್ನು ಅರಿವಳಿಕೆಯಾಗಿ ನೀಡುತ್ತಿದ್ದ. ದಂತವೈದ್ಯರು ಹಲ್ಲನ್ನು ಕೀಳುತ್ತಿದ್ದರು. ನ್ಯೂಹೆವೆನ್, ಕನೆಕ್ಟಿಕಟ್ ಮತ್ತು ನ್ಯೂಯಾರ್ಕ್ ನಗರಗಳಲ್ಲಿ ಶಾಖೆಗಳನ್ನು ತೆರೆದು, ಮುಂದಿನ ೩ ವರ್ಷಗಳಲ್ಲಿ ಸುಮಾರು ೨೫,೦೦೦ ರೋಗಿಗಳ ಹುಳುಕು ಹಲ್ಲನ್ನು ನೋವಿಲ್ಲದೆ ತೆಗೆಯಲು ನೆರವಾದ. ಡಾ.ಹೋರೇಸ್ ವಿಫಲವಾದ ಕಡೆಯಲ್ಲಿ ಕೋಲ್ಟನ್ ಯಶಸ್ವಿಯಾಗಿದ್ದ.

ಕೊನೆಗೆ ೧೮೬೪ರಲ್ಲಿ ‘ಅಮೆರಿಕನ್ ಡೆಂಟಲ್ ಅಸೋಸಿಯೇಶನ್’ನವರು ‘ನೈಟ್ರಸ್ ಆಕ್ಸೈಡನ್ನು ಅರಿವಳಿಕೆಯಾಗಿ ಮೊದಲ ಬಾರಿಗೆ ಬಳಸಿದ ಕೀರ್ತಿ ಡಾ.ಹೋರೇಸ್ ವೆಲ್ ಅವರಿಗೆ ದೊರೆತಿದೆ’ ಎಂದು ಅಽಕೃತವಾಗಿ ಘೋಷಿಸಿದರು. ೧೮೭೦ರಲ್ಲಿ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್‌ನ ಹೋರೇಸನ ಸಾಧನೆಯನ್ನು ಮಾನ್ಯಮಾಡಿದರು. ಈಗ ಅಮೆರಿಕದಲ್ಲಿ ದಂತ ವೈದ್ಯರಿಗೆ ನೈಟ್ರಸ್ ಆಕ್ಸೈಡನ್ನು ದಂತ ಅರಿವಳಿಕೆಯಾಗಿ ಬಳಸುವ ಬಗ್ಗೆ ತರಬೇತಿ ನೀಡುವ ವ್ಯವಸ್ಥೆ ಲಭ್ಯವಿದೆ.