Wednesday, 9th October 2024

ಅಧಿವೇಶನ; ಕಟಕಟೆ ದೇವರಿಗೆ ಮರದ ಜಾಗಟೆ !

ಅಶ್ವತ್ಥಕಟ್ಟೆ

ranjith.hoskere@gmail.com

ನಾಲ್ಕೈದು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಗೆ ಮೂರೂ ರಾಜಕೀಯ ಪಕ್ಷಗಳು ಈಗಾಗಲೇ ‘ರಣ ಕಣ’ವನ್ನು ಭರ್ಜರಿಯಾಗಿಯೇ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ಬಂದಿರುವ ಈ ವಿಧಾನಸಭಾ ಟರ್ಮ್‌ನ ಚಳಿಗಾಲದ ಅಧಿವೇಶನವನ್ನು ಬಹುತೇಕರು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ
ಅಸಮಾಧಾನ ಶುರುವಾಗಿದೆ.

ಹೌದು, ಮುಂದಿನ ಚುನಾವಣೆಗೆ ಭರದ ಸಿದ್ಧತೆ ನಡೆಸಿಕೊಳ್ಳುತ್ತಿರುವ ಮೂರೂ ಪಕ್ಷಗಳು ಈ ಬಾರಿ ಬೆಳಗಾವಿಯಲ್ಲಿ ನಡೆಯು ತ್ತಿರುವ ಚಳಿಗಾಲದ ಅಧಿ ವೇಶನದ ಬಗ್ಗೆ ಹೆಚ್ಚು ಆಸಕ್ತಿ ಕಾಣುತ್ತಿಲ್ಲ. ಆಡಳಿತ ಪಕ್ಷ ಬಿಜೆಪಿ ತನ್ನ ಸರಕಾರದ ಕೆಲವು ಬಿಲ್‌ಗಳನ್ನು ಪಾಸ್ ಮಾಡಿಕೊಂಡರೆ ಸಾಕು ಎನ್ನುವ ಮನಃಸ್ಥಿತಿಯಲ್ಲಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಅಧಿವೇಶನ ಮುಗಿದಷ್ಟು ಬೇಗ ‘ಬಸ್ ಯಾತ್ರೆ’ಯನ್ನು ಚಾಲು ಮಾಡಬೇಕು ಎನ್ನುವ ಸ್ಥಿತಿಯಲ್ಲಿದ್ದಾರೆ. ಇನ್ನು ಈ ವಿಷಯದಲ್ಲಿ ಜೆಡಿಎಸ್‌ನವರಂತೂ ಅಽವೇಶನ ಆರಂಭಕ್ಕೂ ಮೊದಲೇ, ‘ಪಂಚಯಾತ್ರೆಯ ಕಾರಣಕ್ಕೆ ಅಧಿವೇಶನದಲ್ಲೇ ಭಾಗವಹಿಸಿಲ್ಲ’ ಎನ್ನುವ ಸ್ಪಷ್ಟ ಮಾತನ್ನು ಜೆಡಿಎಸ್‌ನ ಸಭಾ ನಾಯಕರೂ ಆಗಿರುವ ಎರಡು ಬಾರಿ ಸಿಎಂ ಆಗಿ ಕಾರ್ಯನಿರ್ವಹಿಸಿರುವ ಕುಮಾರಸ್ವಾಮಿ ಹೇಳಿದ್ದರು.

ಸರಕಾರ ಮುಗಿಯುವ ಸಮಯದಲ್ಲಿ ನಡೆಯುವ ಅಧಿವೇಶನಗಳ ಸಾಮಾನ್ಯ ಪರಿಸ್ಥಿತಿ ಇದೇ ಆಗಿರುತ್ತದೆ ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಷಯ. ಆದರೆ ಒಂದು ವೇಳೆ ಈ ‘ಮನಃಸ್ಥಿತಿ’ಯಲ್ಲಿದ್ದರೆ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಮಾಡುವ ಅಗತ್ಯವೇನಿತ್ತು ಎನ್ನುವುದು ಬಹುತೇಕರ ಪ್ರಶ್ನೆಯಾಗಿದೆ.

ಏಕೆಂದರೆ, ಬೆಳಗಾವಿಯಲ್ಲಿ ವರ್ಷದಲ್ಲಿ ಒಮ್ಮೆ ಅಧಿವೇಶನ ಮಾಡಬೇಕು ಎನ್ನುವ ಯೋಚನೆ ಮಾಡಿದ್ದೇ, ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ವಿಷಯಗಳ ಬಗ್ಗೆ ಚರ್ಚಿಸಿ, ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಸಲುವಾಗಿಯೇ ಅಧಿವೇಶನ ನಡೆಸಿ, ಜೆಡಿಎಸ್ -ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ
‘ಸುವರ್ಣವಿಧಾನಸೌಧ’ವನ್ನು ನಿರ್ಮಿಸಿದ್ದು. ಯಾವ ಕಾರಣಕ್ಕಾಗಿ ನೂರಾರು ಕೋಟಿ ವೆಚ್ಚದಲ್ಲಿ ಸುವರ್ಣಸೌಧ ನಿರ್ಮಾಣ ವಾಯಿತೋ, ಆ ಕಾರಣವೇ ಈಡೇರದಿದ್ದರೆ, ಉಳಿದ ಮೂರು ಅಽವೇಶನದ ರೀತಿಯಲ್ಲಿಯೇ ಈ ಅಧಿವೇಶನವನ್ನು ಬೆಂಗಳೂ ರಿನಲ್ಲಿಯೇ ಮಾಡಬಹುದಲ್ಲವೇ ಎನ್ನುವ ಪ್ರಶ್ನೆಗೆ ಸರಕಾರದ ಬಳಿಯಾಗಲಿ, ಅಧಿಕಾರಿಗಳ ಬಳಿಯಾಗಲಿ ಉತ್ತರವಿಲ್ಲ.

ಹಾಗೇ ನೋಡಿದರೆ, ಬೆಂಗಳೂರಿನಲ್ಲಿ ನಡೆಯುವ ಅಽವೇಶನಕ್ಕೂ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ಆಯೋಜನೆಗೆ ಅಜಗಜಾಂತರವಿದೆ. ಏಕೆಂದರೆ ಒಮ್ಮೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕು ಎಂದರೆ, ೧೫ ದಿನಗಳ ಮಟ್ಟಿಗೆ ಇಡೀ ಬೆಂಗಳೂರಿನ ವಿಧಾನಸೌಧದ ಆಡಳಿತ ಯಂತ್ರ ಬೆಳಗಾವಿಗೆ ಶಿಫ್ಟ್ ಆಗಬೇಕು. ಅಲ್ಲಿಂದ ಇಲ್ಲಿಗೆ ಎಲ್ಲವನ್ನೂ ಜೋಡಿಸಿದ ಬಳಿಕ ಪುನಃ ಬೆಂಗಳೂರಿಗೆ ಹೋಗಿ ಆಡಳಿತ ಯಂತ್ರವನ್ನು ಸಿದ್ಧಪಡಿಸಿಕೊಳ್ಳಬೇಕು. ಇದರೊಂದಿಗೆ ಬರುವ ಶಾಸಕರಿಗೆ, ಸಚಿವರಿಗೆ, ಸಾವಿರಾರು ಸಂಖ್ಯೆಯ ಪೊಲೀಸರಿಗೆ, ಮಾಧ್ಯಮದವರಿಗೆ, ಅಧಿಕಾರಿ ವರ್ಗಕ್ಕೆ ಊಟ, ವಸತಿ ವ್ಯವಸ್ಥೆಯನ್ನು ಮಾಡಲೇಬೇಕು.

ಇದಿಷ್ಟೇ ಅಲ್ಲದೇ, ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಬರುವವರಿಗೂ ಸರಕಾರದ ವತಿಯಿಂದಲೇ ‘ಪೆಂಡಲ್’
ವ್ಯವಸ್ಥೆಯಷ್ಟೇ ಅಲ್ಲದೇ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಒಂದು ವೇಳೆ ಬೆಂಗಳೂರಿನಲ್ಲಿ ನಡೆದರೆ ಈ ಯಾವ ಹೆಚ್ಚುವರಿ ಕೆಲಸಗಳು ಸರಕಾರದ ಅಥವಾ ಸಚಿವಾಲಯದ ಮೇಲೆ ಬೀಳುವುದಿಲ್ಲ. ಆದ್ದರಿಂದಲೇ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನವನ್ನು ಹೋಲಿಸಿದರೆ ಬೆಳಗಾವಿ ಅಽವೇಶನಕ್ಕೆ ದುಪ್ಪಟ್ಟು ಖರ್ಚು ಆಗುತ್ತದೆ.

ಇಷ್ಟೆಲ್ಲ ಮಾಡುವುದು ಏಕೆಂದರೆ, ‘ಉತ್ತರ ಕರ್ನಾಟಕ’ದ ಜನರ ಆಶೋತ್ತರಿಗೆ ಉತ್ತರವಾಗಿ ನಿಲ್ಲಬೇಕು ಎನ್ನುವ ಉದ್ದೇಶ ದಿಂದ. ಅದಕ್ಕಾಗಿ ಈ ಹೊಸ ಕಲ್ಪನೆಯಲ್ಲಿ ರಾಜ್ಯದಲ್ಲಿ ಆರಂಭದಲ್ಲಿ ಸ್ವಾಗತಿಸಲಾಗಿತ್ತು. ಆದರೆ ಇತ್ತೀಚಿನ ದಿನದಲ್ಲಿ ನಡೆಯು ತ್ತಿರುವ ಅಧಿವೇಶನವನ್ನು ನೋಡಿದರೆ ‘ಬೆಳಗಾವಿಗೆ ಟ್ರಿಪ್’ ಬಂದಂತೆ ಇರುತ್ತದೆ. ಅದರಲ್ಲಿಯೂ ಈ ಬಾರಿಯ ಅಧಿವೇಶನ ದಲ್ಲಿ ಅಂತೂ ಕಳೆದ ಒಂದು ವಾರ ಯಾವುದೇಮಹತ್ವದ ವಿಷಯಗಳನ್ನು ಕೈಗೆತ್ತಿಕೊಂಡಿಲ್ಲ. ಗಡಿ ವಿಷಯದಲ್ಲಿ ತೆಗೆದು ಕೊಂಡಿರುವ ಖಂಡನಾ ನಿರ್ಣಯವನ್ನು ಹೊರತುಪಡಿಸಿದರೆ, ಯಾವುದೇ ‘ಗಂಭೀರ’ ಎನಿಸುವ ಚರ್ಚೆಗಳೇ ನಡೆದಿಲ್ಲ. ಮೊದಲ ವಾರ ಹಾಗೂ ಹೀಗೂ ದಬ್ಬಿರುವ ಮೂರು ಪಕ್ಷಗಳು ಎರಡನೇ ವಾರದಲ್ಲಿ ಉತ್ತರ ಕರ್ನಾಟಕದ ಧ್ವನಿಯಾಗುತ್ತೇವೆ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ.

ಆದರೆ ಸೂಕ್ಷ್ಮವಾಗಿ ಗಮನಿಸಿದರೆ, 26ರಿಂದ ಶುರುವಾಗುವ ಎರಡನೇ ಅವಧಿಯಲ್ಲಿ ಎರಡರಿಂದ ಮೂರು ದಿನ ಅಧಿವೇಶನ
ನಡೆದರೆ ಹೆಚ್ಚು ಎನ್ನುವ ಸ್ಥಿತಿಯಿದೆ. ಏಕೆಂದರೆ ಈಗಾಗಲೇ 30ರಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ
ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬಸ್ ಯಾತ್ರೆ ಆರಂಭಿಸಿದರೆ, ಅದೇ ದಿನ ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ಅಲ್ಲಿಗೆ ಗುರುವಾರವೇ ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ಬೆಳಗಾವಿಯನ್ನು ಬಿಡಲಿದ್ದಾರೆ.

ಹೀಗಿದ್ದಾಗ ಸಿಗುವ ಮೂರು ದಿನದಲ್ಲಿ ಉತ್ತರ ಕರ್ನಾಟಕದ ಯಾವ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಈಗಾಗಲೇ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಇನ್ನುಳಿದಂತೆ ನೀರಾವರಿ, ಶಿಕ್ಷಣ, ಕೈಗಾರಿಕೆ, ಮೂಲಸೌಕರ್ಯ ಹೀಗೆ ಸಾಲು ಸಾಲು ವಿಷಯಗಳು ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ್ದು ಇವೆ. ಅವುಗಳನ್ನು ಎಷ್ಟು ಚರ್ಚೆನಡೆಸಲಾಗುತ್ತದೆ? ಎನ್ನುವುದು ಈ ಭಾಗದ ಜನರ ಪ್ರಶ್ನೆಯಾಗಿದೆ.

ಚುನಾವಣಾ ತಯಾರಿಯಲ್ಲಿರುವ ಪಕ್ಷಗಳಿಗೆ ಕಲಾಪದಲ್ಲಾಗುವ ಸದ್ದಿಗಿಂತ, ಜನರ ನಡುವೆ ಇರಬೇಕು ಎನ್ನುವ ಮನಸ್ಥಿತಿ ಸಹಜವಾಗಿರುತ್ತದೆ. ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ. ಹಾಗಿದ್ದಾಗ, ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸುವ ಬದಲು ಬೆಂಗಳೂರಿನಲ್ಲಿಯೇ ‘ಕಲಾಪದ ಸಂಪ್ರದಾಯ’ ಮುಗಿಸಬಹುದಾಗಿತ್ತು. ಈ ರೀತಿ ಕಾಟಾಚಾರಕ್ಕೆ ಅಧಿವೇಶನ ನಡೆಸುವ ಬದಲು ಬೆಂಗಳೂರಲ್ಲೇ ನಡೆದಿದ್ದರೆ ಸುಮಾರು ೨೦ಕೋಟಿಯಾದರೂ ಉಳಿಯುತ್ತಿತ್ತು. ಆ ಹಣವನ್ನು ಬೆಳಗಾವಿಯ ಅಭಿವೃದ್ಧಿ
ಬಳಸಿದ್ದರೆ ಕೆಲವು ಅಭಿವೃದ್ಧಿ ಕಾರ್ಯವಾದರೂ ಮುಗಿಯುತ್ತಿತ್ತು.

ಇನ್ನು ಇದು ದಿನದ ವೆಚ್ಚದ ಬಗ್ಗೆಯಾದರೆ, ಇನ್ನೊಂದು ವಿಷಯವನ್ನು ಹಲವು ಬಾರಿ ಚರ್ಚಿಸಲಾಗಿದೆ. ನಾನು ಈ ಹಿಂದಿನ ಅಂಕಣದಲ್ಲಿ ಒಮ್ಮೆ ಪ್ರಸ್ತಾಪಿಸಿದ್ದೆ. ಏನೆಂದರೆ, ಚಳಿಗಾಲದ ಅಧಿವೇಶನದ ಅವಧಿಯಲ್ಲಿ ‘ಜಗಮಗಿಸುವ’ ಸುವರ್ಣಸೌಧ, ಈ 15 ದಿನ ಕಳೆಯುತ್ತಿದ್ದಂತೆ ಖಾಲಿ ಬಂಗಲೆಯಾಗಿ ಬಿಕೋ ಎನ್ನುತ್ತಿರುತ್ತದೆ. ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಕಟ್ಟಡದಲ್ಲಿ ಅಧಿವೇಶನ ಇಲ್ಲದೇ ಇರುವಾಗ ಇಷ್ಟು ದೊಡ್ಡ ಕಟ್ಟಡದಲ್ಲಿ ೧೨ರಿಂದ ೧೫ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

ಅದೂ ಸಹ, ಬೆಳಗಾವಿ ಜಿಲ್ಲಾ ಮಟ್ಟದ ಕಚೇರಿಗಳೇ ಹೊರತು, ಕೇಂದ್ರ ಕಚೇರಿಗಳಲ್ಲ. ಆದ್ದರಿಂದ ಯಾವುದೇ ರೀತಿಯ
ಚಟುವಟಿಕೆಗಳೂ ಇರುವುದಿಲ್ಲ. ಹಾಗೇ ನೋಡಿದರೆ, ಎರಡನೇ ಬಾರಿಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ, ಉತ್ತರ ಕರ್ನಾಟಕದಲ್ಲಿ ಅಗತ್ಯವಿರುವ (ಉದಾ : ಕೃಷ್ಣ ಯೋಜನಾ ಕಚೇರಿ, ಸಕ್ಕರೆ ಕಾರ್ಖಾನೆ, ಕೈಮಗ್ಗ) ಇಲಾಖೆಯ ಕೇಂದ್ರ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದರಿಂದಾಗಿ ಕನಿಷ್ಠ ಈ ಇಲಾಖೆಗಳ ಕೆಲಸಕ್ಕಾಗಿ ಉತ್ತರ ಕರ್ನಾಟಕದ ಮಂದಿ ಬೆಂಗಳೂರಿಗೆ ಬರಬೇಕಾದ ಸಮಸ್ಯೆಯನ್ನಾದರೂ ತಪ್ಪಿಸಬಹು ದಾಗಿತ್ತು.

ಆದರೆ ಸಚಿವ ಸಂಪುಟದ ಈ ತೀರ್ಮಾನ ಈಡೇರುವುದಕ್ಕೆ ‘ಐಎಎಸ್ ಲಾಭಿ’ ಬಿಟ್ಟುಕೊಡಲಿಲ್ಲ. ಆಯುಕ್ತಾಲಯಗಳು
ಬೆಳಗಾವಿಗೆ ಸ್ಥಳಾಂತರವಾದರೆ ಐಎಎಸ್ ಅಧಿಕಾರಿಗಳು ಬೆಳಗಾವಿಗೆ ಬರಬೇಕಾಗುತ್ತದೆ. ಆದರೆ ಬಹುತೇಕ ಅಧಿಕಾರಿಗಳಿಗೆ ಬೆಂಗಳೂರು ಬಿಟ್ಟು ಈಚೆ ಬರಲು ಇಷ್ಟವಿಲ್ಲ. ಆದ್ದರಿಂದ ‘ವ್ಯವಸ್ಥಿತ’ವಾಗಿ ಈ ನಿರ್ಣಯ ಈಡೇರದಂತೆ ಅಧಿಕಾರಿಗಳು ಎಚ್ಚರ ವಹಿಸಿದ್ದರು. ಇದರಿಂದಾಗಿ ವರ್ಷಕ್ಕೆ ೧೫ ದಿನ ನಡೆಯುವ ಅಧಿವೇಶನ, ಒಂದೆರೆಡು ತಿಂಗಳಿಗೊಮ್ಮೆ ನಡೆಯುವ ‘ಸೋ ಕಾಲ್ಡ್ ಸಭೆ’ಗಾಗಿ ವಾರ್ಷಿಕವಾಗಿ ನಿರ್ವಹಣೆಗಾಗಿಯೇ ಕೋಟಿ ಕೋಟಿ ಖರ್ಚು ಮಾಡುವ ಸ್ಥಿತಿ ಸರಕಾರಕ್ಕಿದೆ.

ಈಗಲಾದರೂ, ಸರಕಾರ ಎಚ್ಚೆತ್ತುಕೊಂಡು, ಕನಿಷ್ಠ ಇಲ್ಲಿಗೆ ಅನುಕೂಲವಾಗುವ ಕೆಲವು ಇಲಾಖೆಗಳನ್ನಾದರೂ ಇಲ್ಲಿಗೇ ವರ್ಗಾವಣೆ ಮಾಡುವ ಪ್ರಯತ್ನ ಮಾಡಬೇಕು. ನೆರೆ ರಾಷ್ಟ್ರ ಮಹರಾಷ್ಟ್ರಕ್ಕೆ ಖಡಕ್ ಸಂದೇಶ ರವಾನಿಸಬೇಕು ಎನ್ನುವ ಕಾರಣಕ್ಕೆ ಕರ್ನಾಟಕ ಬೆಂಗಳೂರಿನಿಂದ ಬರುವವರಿಗೆ ಸ್ವಾಗತ ಕೋರುವ ರೀತಿಯಲ್ಲಿ ನೂರಾರು ಕೋಟಿ ರು. ಖರ್ಚು ಮಾಡಿ ಸುವರ್ಣಸೌಧವನ್ನು ಕಟ್ಟಿರುವುದರಿಂದ, ‘ಕನ್ನಡ, ಕರ್ನಾಟಕದ ಅಸ್ಮಿತೆ’ಯಿದೆ ಎನ್ನುವುದನ್ನು ಒಪ್ಪಲೇಬೇಕು. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣವನ್ನು ವ್ಯಯಿಸಿ ನಿರ್ಮಿಸಿರುವ ಈ ಸುವರ್ಣಸೌಧವನ್ನು ವರ್ಷದ 15 ದಿನಗಳಿಗಷ್ಟೇ ಬಳಸಿಕೊಂಡು, ಬಾಕಿ ದಿನದಲ್ಲಿ ‘ಪಾಳುಬಿದ್ದ ಬಂಗಲೆ’ಯಂತಾಗುವ ಬದಲು, ಕೆಲವು ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಸರಕಾರ ಗಂಭೀರ ಚಿಂತನೆ ನಡೆಸಬೇಕಿದೆ.

‘ಐಎಎಸ್ ಲಾಭಿ’ ಸೇರಿದಂತೆ ಹಲವು ಲಾಭಿಗಳು ಇದನ್ನು ಆಗದಂತೆ ತಡೆಯುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಆ ಎಲ್ಲ ಲಾಭಿಗಳನ್ನು ಮೀರಿ ತೀರ್ಮಾನ ಕೈಗೊಳ್ಳದಿದ್ದರೆ, ಪ್ರತಿವರ್ಷ ‘ಬಂದಾ ಪುಟ್ಟ ಹೋದ ಪುಟ್ಟ’ ಆಗುತ್ತದೆ ಹೊರತೆ
ಯಾವುದೇ ಕಾರ್ಯ ಸಾಧಿಸಿದಂತಾಗುವುದಿಲ್ಲ.