Thursday, 12th December 2024

’ಮಹಾ ಅಪಾಯಕಾರಿ ಮನುಷ್ಯ’ನ ಕುರಿತು ಮತ್ತಷ್ಟು..

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಮೊನ್ನೆ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿ ಅರ್ಥಾತ್ ಯು.ಜಿ. ಕೃಷ್ಣಮೂರ್ತಿ (ಜಿಡ್ಡು ಕೃಷ್ಣಮೂರ್ತಿ ಅಲ್ಲ) ಅರ್ಥಾತ್ ಯೂಜಿ ಬಗ್ಗೆ ಬರೆದಾಗ ಓದುಗರು ಅಷ್ಟೊಂದು ಭಾರಿ ಸಂಖ್ಯೆಯಲ್ಲಿ ಪ್ರತಿಕ್ರಿಯಿಸುತ್ತಾರೆಂದು ಅಂದುಕೊಂಡಿರಲಿಲ್ಲ.

ಅನೇಕರು ನಾವು ಅವರ ಬಗ್ಗೆ ಕೇಳಿದ್ದೆವು, ಆದರೆ ನಮಗೆ ಅವರ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ನೀವು ಚೂರು – ಪಾರು ತಿಳಿಸಿ ನಮ್ಮ ಕುತೂಹಲವನ್ನು ಮತ್ತಷ್ಟು ಕೆರಳಿಸಿದಿರಿ. ಅವರ ಬಗ್ಗೆ, ಅವರ ವಿಚಾರಗಳ ಬಗ್ಗೆ ಇನ್ನಷ್ಟು ತಿಳಿಸಿಕೊಡಬಾರದೇ ಎಂದು ಕೇಳಿದ್ದಾರೆ. ನಾನು ಯೂಜಿ ಅವರನ್ನು ಐದಾರು ಸಲ ಭೇಟಿ ಮಾಡಿದ್ದೇನೆ. ನನಗೆ ಅವರನ್ನು ಪರಿಚಯಿಸಿದವರು ವೈಎನ್ಕೆ.ಯೂಜಿ ಬೆಂಗಳೂರಿಗೆ ಬಂದಾಗಲೆ, ಅವರು ಎಲ್ಲಿ ಉಳಿದು ಕೊಳ್ಳುತ್ತಿದ್ದರೋ, ಅವರು ವೈಎನ್ಕೆಗೆ ವಿಷಯ ಳಿಸುತ್ತಿದ್ದರು. ಸ್ವತಃ ಯೂಜಿ ಅವರೂ ವೈಎನ್ಕೆ ಬಗ್ಗೆ ಕೇಳಿ ವಿಚಾರಿಸುತ್ತಿದ್ದರು.

ವೈಎನ್ಕೆ ನಿಧನದ ನಂತರ ನಾನು ಅವರನ್ನು ಎರಡು ಸಲ ಭೇಟಿಯಾಗಿದ್ದೆ. ಆಗ ಅವರು ಬೆಂಗಳೂರಿನ ಬನಶಂಕರಿ ವಾಟರ್ ಟ್ಯಾಂಕ್ ಬಳಿಯಿರುವ ಕೆ.ಚಂದ್ರಶೇಖರ ಬಾಬು ಮನೆಯಲ್ಲಿ ಉಳಿದುಕೊಂಡಿದ್ದರು. ಒಮ್ಮೆ ಅವರನ್ನು ಆಗ ನಾನು ಸಂಪಾದಕನಾಗಿದ್ದ ‘ವಿಜಯ ಕರ್ನಾಟಕ’ಕ್ಕೆ ಸಂದರ್ಶಿಸಿದ್ದೆ. ಸಾಮಾನ್ಯವಾಗಿ ಯೂಜಿ ಯಾರಿಗೂ ಸಂದರ್ಶನ ನೀಡುವುದಿಲ್ಲ. ಆದರೆ ನಾನು ಕೇಳಿದಾಗ ಅದೇನು ಅಚ್ಚರಿಯೋ, ಒಪ್ಪಿಕೊಂಡು ಬಿಟ್ಟರು.

ಸಂದರ್ಶನದಂಥ ಬೋಗಸ್ ಮಾತುಕತೆ ಇನ್ನೊಂದಿಲ್ಲ ಎಂಬುದು ಅವರ ನಿಲುವಾಗಿತ್ತು. ‘ನೀವು ನಿಮಗೆ ತಿಳಿದ ಪ್ರಶ್ನೆ ಕೇಳುತ್ತೀರಿ. ನಾನು ನನಗೆ
ತಿಳಿದ ಉತ್ತರ ಹೇಳುತ್ತೇನೆ. ಇವೆರಡೂ ಸಂಬಂಧವಿರದ ಓದುಗರು ಇದನ್ನು ಓದಬೇಕು ಎಂದು ಅಪೇಕ್ಷಿಸುತ್ತೀರಿ. ನಮ್ಮಿಬ್ಬರ ಮಾತುಕತೆಯನ್ನು ಓದುಗರ ಮೇಲೇಕೆ ಹೇರುತ್ತೀರಿ? ಅವರಿಗೆ ನನ್ನ ವಿಚಾರ ತಿಳಿದುಕೊಂಡು ಏನಾಗಬೇಕು? ಇದು ಒಂಥರಾ ಓದುಗರನ್ನು ಕತ್ತಲೆಯಲ್ಲಿಟ್ಟು, ನಾವಿಬ್ಬರೂ ನಡೆಸುವ ಮಾತುಕತೆ. ಅದಕ್ಕೇ ಇದು ಅರ್ಥಹೀನ. ನನಗೆ ಪ್ರಚಾರ ಬೇಡ.

ರಾಜಕಾರಣಿಗಳಿಗೆ, ಸಿನಿಮಾದವರಿಗೆ ಪ್ರಚಾರ ಬೇಕು. ಹೀಗಾಗಿ ಅವರು ಸಂದರ್ಶನಕ್ಕೆ ಒಪ್ಪುತ್ತಾರೆ. ಏನೇ ಅನ್ನಿ, ಸಂದರ್ಶನ ಒಂದು ಬೋಗಸ್ ಕ್ರಿಯೆ.’ ಎನ್ನುತ್ತಲೇ ಅವರು ಮಾತುಕತೆ ಆರಂಭಿಸಿದ್ದರು. ಯೂಜಿ ಜತೆ ಮಾತಾಡುವಾಗ ಅವರು ನಮ್ಮ ವಾದ, ನಂಬಿಕೆಗಳನ್ನು ನೆಲಸಮ ಮಾಡುತ್ತಲೇ
ಹೋಗುತ್ತಾರೆ ಎಂದು ಆಗಾಗ ವೈಎನ್ಕೆ ಹೇಳುತಿದ್ದ ಮಾತು ಆಗ ನೆನಪಾಗಿತ್ತು.

ಯೂಜಿ ಜತೆ ಕಳೆದ ನೆನಪುಗಳನ್ನು ನಾನು ಹಂಚಿಕೊಂಡಿದ್ದು ತೀರಾ ಕಡಿಮೆ. 2007ರಲ್ಲಿ ಅವರು ನಿಧನರಾದ ಬಳಿಕ, ಅವರ ಬಗ್ಗೆ ಒಂದೆರಡು ಸಲ ಮಾತ್ರ ಬರೆದಿರಬಹುದು. ಅದಕ್ಕೆ ಕಾರಣವಿಷ್ಟೇ. ತಮ್ಮ ನಿಧನದ ನಂತರ ಅಂತ್ಯ ಸಂಸ್ಕಾರವನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಅವರು ಯಾರಿಗೂ ಹೇಳಿರಲಿಲ್ಲ. ಎಲ್ಲೂ ಬರೆದಿಟ್ಟಿರಲಿಲ್ಲ. ಆದರೆ ತಮ್ಮ ನಿಧನದ ನಂತರ ಯಾರೂ ತಮ್ಮನ್ನು ನೆನಪಿಸಿಕೊಳ್ಳಬಾರದು, ಪುಣ್ಯತಿಥಿ ಮತ್ತು ಜಯಂತಿ ಗಳನ್ನು ಆಚರಿಸಬಾರದು, ಯೂಜಿ ಎಂಬ ವ್ಯಕ್ತಿ ಇದ್ದ ಎಂಬುದನ್ನು ಹೇಳುತ್ತಾ ಇರಬೇಡಿ, ವ್ಯಕ್ತಿ ಜೀವಿಸಿದ್ದ ಎಂಬುದೇ ಮಿಥ್ಯೆ, ಹೀಗಿರುವಾಗ ಸತ್ತ ನಂತರ ನೆನಪಿಸಿಕೊಳ್ಳುವುದು ದೊಡ್ಡ ಮಿಥ್ಯೆ, ಸತ್ತವರನ್ನು ನೆನಪಿಸಿಕೊಳ್ಳುವುದು ನಿರರ್ಥಕ ಕ್ರಿಯೆ ಎಂದು ಅವರು ಆಗಾಗ ಹೇಳುತ್ತಿದ್ದರು.

ಯೂಜಿಯ ಕಟ್ಟರ್ ವಾದಿಗಳೂ ಈ ಸಂಗತಿಯನ್ನು ಪ್ರಸ್ತಾಪಿಸಿಯೇ ಅವರನ್ನು ನೆನಪಿಸಿ ಕೊಳ್ಳುತ್ತಾರೆ. ಯೂಜಿಗೆ ಪರಮಾಪ್ತರಾಗಿದ್ದ ಹಿಂದಿ ಸಿನಿಮಾ ನಿರ್ದೇಶಕ ಮಹೇಶ ಭಟ್ ಕೂಡ ಅವರ (ಯೂಜಿ) ನಿಧನದ ಬಳಿಕ ಮಾತಾಡಿದ್ದು ತೀರಾ ಕಡಿಮೆ. ಇಟಲಿಯ ವೆಲ್ಲಿಕ್ರೋಸಿಯಾದಲ್ಲಿ ಯೂಜಿ ನಿಧನರಾದಾಗ, ಅವರ ಜತೆಯಲ್ಲಿದ್ದವರು ಮಹೇಶ ಭಟ್. ಅವರೇ ಯೂಜಿಯವರ ಪಾರ್ಥಿವ ಶರೀರವನ್ನು ಮಣ್ಣಿನಲ್ಲಿ ಸಮಾಧಿ ಮಾಡಿದರು.

ಹೀಗಾಗಿ ನಾನು ಅವರ ಬಗ್ಗೆ ಬರೆಯಬೇಕು ಎಂದೆನಿಸಿದಾಗ ಲೆ, ಯೂಜಿ ಮಾತುಗಳಿಗೆ ಕಟ್ಟುಬಿದ್ದು ಬರೆಯದೇ ಬಿಟ್ಟಿದ್ದೆ. ಆದರೆ ಮೊನ್ನೆ ಅವರ ಬಗ್ಗೆ ಅಚಾನಕ್ ಆಗಿ ಬರೆಯಬೇಕಾಯಿತು. ಆನಂತರ ಓದುಗರ ಒತ್ತಾಯ ಮತ್ತು ಒತ್ತಡಕ್ಕೆ ಶರಣಾಗಿ ಕೆಲವು ನೆನಪುಗಳನ್ನು ದಾಖಲಿಸುತ್ತಿದ್ದೇನೆ. ವೈಎನ್ಕೆ ಮಾತ್ರ ಆಗಾಗ ಯೂಜಿ ಬಗ್ಗೆ ಸ್ವಾರಸ್ಯವಾಗಿ ಬಣ್ಣಿಸುತ್ತಿದ್ದರು. ಅವರು ಹೇಳುವುದು ಅರ್ಥವಾಗುತ್ತಿರಲಿಲ್ಲ.

ಅರ್ಥವಾಗಲಿಲ್ಲವೆಂದು ಕೇಳಿದರೆ ರೇಗುತ್ತಿದ್ದರು. ‘ಏನ್ರೀ ಘಾ ಥರ ವರ್ತಿಸುತ್ತೀರಾ? ಇವನ್ನೆಲ್ಲ ತಿಳಿದುಕೊಳ್ಳಬೇಕ್ರಿ’ ಎಂದು ಮೊಟಕುತ್ತಿದ್ದರು. ಅವರು ಒಮ್ಮೆ ಹೇಳಿದ್ದನ್ನು ನಾನು ನೋಟ್ಸ್ ಮಾಡಿ ಇಟ್ಟಿದ್ದೆ. 1967ರಲ್ಲಿ ತಮ್ಮ 49 ನೇ ವಯಸ್ಸಿನಲ್ಲಿ ಸ್ವಿಟ್ಜರ್‌ಲ್ಯಾಂಡಿನ ಸಾನೆನ್ ಕಣಿವೆಯಲ್ಲಿ ‘ಷಟ್ ಚಕ್ರ ಭೇದನ’ ಎಂದು ಯೋಗದ ವಿಚಾರ ಬಲ್ಲವರು ಹೇಳುವಂಥ ಕ್ರಿಯೆ ಯೂಜಿ ಶರೀರದಲ್ಲಿ ಆಯಿತಂತೆ. ಮೂಲಾಧಾರದಿಂದ ಹಿಡಿದು ಸಹಸ್ರಾರದ
ವರೆಗಿನ ಆರು ಚಕ್ರಗಳಲ್ಲಿ ಅದು ಸೋಟ ವಾಯಿತಂತೆ.

ಆದರೆ ಯೂಜಿ ಪ್ರಕಾರ, ಶರೀರದ ವಹಿವಾಟನ್ನು ನಿಯಂತ್ರಿಸುವ ಥೈಮಸ್, ಪಿಟ್ಯೂಟರಿ, ಪಿನಿಯಲ್ ಗ್ರಂಥಿಗಳ ಕಾರ್ಯವಿದು. ಕಂಬಳಿ ಹುಳ ಚಿಟ್ಟೆ ಯಾಯಿತು. ಆದರೆ ಕಾವ್ಯದ ಪ್ರತಿಮಾ ವಿಧಾನದಂತಲ್ಲ. ಆಗಿದ್ದು ಶಾರೀರಿಕ ರೂಪಾಂತರ, ಅಧ್ಯಾತ್ಮಿಕ ಬದಲಾವಣೆ ಅಲ್ಲ. ವೈಎನ್ಕೆ ಹೀಗೆ ತಮ್ಮದೇ ವೇಗೋತ್ಕರ್ಷದ ಧಾಟಿಯಲ್ಲಿ ಹೇಳುತ್ತಿದ್ದರೆ ನನಗೆ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಪೂರ್ತಿ ನಂಬಿಕೆ ಬರುತ್ತಿರಲಿಲ್ಲ. ಆ ಸಂದರ್ಭದಲ್ಲಿ ವೈಎನ್ಕೆ ನನಗೆ ತಾವು ಯೂಜಿ ಬಗ್ಗೆ ಬರೆದ ‘ಯೂಜಿ ಅಲ್ಲ, ಗುರೂಜಿ’ ಪುಸ್ತಕ ಕೊಟ್ಟು ಇದನ್ನು ಓದಿ ಎಂದು ಹೇಳಿದರು.

ನಾನು ಎರಡು ಸಲ ನೂರಿಪ್ಪತ್ತು ಪುಟಗಳ ಈ ಕೃತಿಯನ್ನು ಓದಿದೆ. ಯೂಜಿ ಬಗ್ಗೆ ಮತ್ತಷ್ಟು ಗೊಂದಲವಾಯಿತು. ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲ ಕಾಡಿನಲ್ಲಿ ಬಿಟ್ಟ ಅನುಭವ. ವೈಎನ್ಕೆ ಮುಂದೆ ನನ್ನ ಗೊಂದಲವನ್ನು ತೋಡಿಕೊಂಡೆ. ಆಗ ಅವರು, ‘ನನಗೂ ಹೀಗೆ ಆಗಿತ್ತು. ಅಂದರೆ ನಿಮಗೆ ಯೂಜಿ ಅರ್ಥವಾಗಿzರೆ, ಗುಡ್.. ಗುಡ್’ ಎಂದು ಬಿಟ್ಟರು. ಅದೇ ಯೂಜಿಯನ್ನು ಅರ್ಥ ಮಾಡಿಕೊಳ್ಳುವ ಬಗೆ ಎಂದರು. ಆದರೆ ನಾನು ಮೊದಲ
ಬಾರಿಗೆ ಯೂಜಿಯವರನ್ನು ಭೇಟಿಯಾದಾಗ, ‘ನಿಮ್ಮ ವಿಚಾರಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಬಗೆ ಎಂತು’ ಎಂದು ಕೇಳಿದಾಗ, ‘ನನ್ನದೆನ್ನುವ ಯಾವ ವಿಚಾರಗಳೂ ಇಲ್ಲ.

ಹೀಗಾಗಿ ಅರ್ಥ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನನ್ನನ್ನು ಮಿಸ್ಟಿಕ್ ಅಂತ ಕರೆಯುತ್ತಾರೆ. ಅವರಿಗೆ ಬುದ್ಧಿಯಿಲ್ಲ. ನಾನು ಮಿಸ್ಟೇಕ್.
ನನ್ನದೆನ್ನುವ ವಿಚಾರ, ಉಪದೇಶಗಳಿಲ್ಲ. ಹೀಗಾಗಿ ಅವನ್ನೆಲ್ಲ ಕಾಪಿಡುವ ಪ್ರಶ್ನೆಯೇ ಇಲ್ಲ. ಉಪದೇಶಗಳಿಂದ ಏನಾದರೂ ಬದಲಾವಣೆ ಯಾಗಬೇಕು. ಆದರೆ ನನ್ನ ಮಾತುಗಳನ್ನು ಕೇಳಿದರೆ ನಿಮಗೆ ಭ್ರಮನಿರಸನವಾಗುತ್ತದೆ. Sorry, there is no teaching here, just disjointed, disconnected sentences. What is there is only your interpretation, nothing else. For this reason there is not now nor will there
ever be any kind of copyright for whatever I am saying’  ಎಂದಾಗ ನಾನು ಪೂರ್ತಿ ಗೊಂದಲಕ್ಕೀಡಾಗಿದ್ದೆ.

ವೈಎನ್ಕೆ ಬಳಿ ಯೂಜಿ ವಿಚಾರಗಳ ಬಗ್ಗೆ ಹೇಳಿ ಎಂದಾಗ, ‘ಅರೀ ಅವರೇ ಹೇಳಿದ್ದಾರಲ್ಲ, ತಮ್ಮದೆನ್ನುವ ವಿಚಾರಗಳೇ ಇಲ್ಲ. ಯೂಜಿ ಪ್ರಕಾರ, ಮನಸ್ಸು ಎಂಬುದೇ ಇಲ್ಲ. ‘ನೀವು’ ಎನ್ನುವುದು ಹುಟ್ಟಿದಂದಿನಿಂದ ನೀವು ಸಂಗ್ರಹಿಸಿರುವ ಅನುಭವ, ಜ್ಞಾನ, ಭಾವನೆಗಳ ಮೊತ್ತ ಮಾತ್ರ. ಆತ್ಮ
ಎಂಬುದೂ ಇಲ್ಲ. ಅಧ್ಯಾತ್ಮ ಎಂಬುದೂ ಇಲ್ಲ. ಪುನರ್ ಜನ್ಮವೂ ಇಲ್ಲ. ಸಾವಿನಾಚೆ ಏನೂ ಇಲ್ಲ. ಹೇಗೆ ನಮಗೆ ಜನಿಸಿದ ನೆನಪು, ಅನುಭವ ಇರುವುದಿಲ್ಲವೋ, ಹಾಗೆ ನಮಗೆ ಸಾವಿನ ಅನುಭವ ಕೂಡ ಅಸಾಧ್ಯ. ‘ನಾನು’ ಎಂಬುದು ಎಲ್ಲಾ ಅನುಭವಗಳ ಮೊತ್ತದಿಂದಾದ ‘ಭ್ರಮೆ’ ಆಗಿರುವಾಗ,
ಸತ್ತಾಗ ದೇಹದ ಅಂಶಗಳು ಪಂಚಭೂತಗಳಿಗೆ ಹಿಂದಿರುಗುತ್ತವೆ. ಈ ‘ಭ್ರಮೆ’ ಕರಗುತ್ತದೆ.

ಇಲ್ಲದ ‘ನಾನು’ವಿಗೆ ಪುನರ್ ಜನ್ಮ ಎಲ್ಲಿ?’ ಎಂದು ಹೇಳಿ ನನ್ನ ತಲೆಚಿಟ್ಟು ಹಿಡಿಸಿದ್ದರು. ನನಗೆ ಅರ್ಥವಾಗಲಿಲ್ಲ, ಇನ್ನೂ ಸ್ವಲ್ಪ ವಿವರಿಸಿ ಹೇಳಿ ಎನ್ನಲು ಭಯ. ‘ಏನ್ರೀ ಘಾ ಥರ ವರ್ತಿಸುತ್ತೀರಾ?’ ಎಂದು ಬೈದುಬಿಡಬಹುದು ಎಂಬ ಅಂಜಿಕೆ. ಆದರೂ ಮುಖಭಾವದ ಪ್ರಶ್ನಾರ್ಥಕ ಚಿಹ್ನೆಯನ್ನಿ ಟ್ಟಾಗ, ‘ಯೂಜಿ ಪ್ರಕಾರ, ಜೀವನದಲ್ಲಿ ಏನನ್ನೂ ಅರ್ಥ ಮಾಡಿಕೊಳ್ಳಬೇಕಿಲ್ಲ. ಅರ್ಥ ಮಾಡಿಕೊಳ್ಳಲು ಇರುವುದಾದರೂ ಏನು? ಅಷ್ಟಕ್ಕೂ ಮನಸ್ಸು ಎಂಬುದೇ ಇಲ್ಲ. ನಮ್ಮ ವಿಚಾರಗಳು ನಮ್ಮ ತಲೆಯಿಂದ ಬಂದವಲ್ಲ.

ಹೊರಗಿನ ಪ್ರಚೋದನೆಗೆ ಮಿದುಳಿನ ಸ್ಪಂದನ ಅಥವಾ ಪ್ರತಿಕ್ರಿಯೆ ಮಾತ್ರ. ಮಿದುಳು ಒಂದು ಆಂಟೆನಾ ಇದ್ದಂತೆ. ಹೊರಗಿನ ವಿಚಾರ ವಲಯದಿಂದ ಆಲೋಚನೆಗಳನ್ನು ಗ್ರಹಿಸುತ್ತದೆ. ನಮ್ಮ ಮಿದುಳು ವಿಚಾರಗಳನ್ನು ತಯಾರಿಸುವುದಿಲ್ಲ. ಜೀವನದ ಅರ್ಥ ಅರಸಿ ಹೊರಡುವುದಕ್ಕೆ ಅರ್ಥವಿಲ್ಲ . ಕಾರಣ ಮನಸ್ಸೂ ಇಲ್ಲ, ಅರ್ಥವೂ ಇಲ್ಲ’ ಎಂದು ಹೇಳಿ ಗಲಿಬಿಲಿಯುಂಟು ಮಾಡಿದ್ದರು. ವೈಎನ್ಕೆಯೇ ಒಂದು ನಿಗೂಢ (enigma). ಇನ್ನು
ಅವರು ಯೂಜಿ ಬಗ್ಗೆ ಹೇಳಿದರೆ ಅದು ಇನ್ನೂ ದೊಡ್ಡ ನಿಗೂಢ. ಈ ನಿಗೂಢತೆಯೇ ಯೂಜಿಯನ್ನು ಪದೇ ಪದೆ ಭೇಟಿ ಮಾಡುವಂತೆ, ಅವರ ಬಗ್ಗೆ ಓದುವಂತೆ ಪ್ರೇರೇಪಿಸುತ್ತಿತ್ತು. ಯೂಜಿ ಸೋಗು ಹಾಕುತ್ತಿರಲಿಲ್ಲ.

ಅವರಿಗೆ ಪ್ರಚಾರ ಬೇಕಿರಲಿಲ್ಲ. ಧರ್ಮ, ದೇವರು ಎಂದು ವಿಸ್ಮಯವುಂಟು ಮಾಡುವ ಪೋಸು ಕೊಡುತ್ತಿರಲಿಲ್ಲ. ಅವರ ಬಳಿ ಯಾವ ಪ್ರಶ್ನೆಗಳೂ ಇರಲಿಲ್ಲ. ಉತ್ತರಗಳೂ ಇರಲಿಲ್ಲ. ಪ್ರಕೃತಿಯಲ್ಲಿ, ಬದುಕಿನಲ್ಲಿ ಯಾವುದನ್ನೂ ಅರ್ಥ ಮಾಡಿಕೊಳ್ಳಬೇಡಿ. ಅದರ ಅವಶ್ಯಕತೆ ಇಲ್ಲ. ದೇವರು
ಇzನಾ, ಇಲ್ಲವಾ, ಸೂರ್ಯನೇಕೆ ಮುಳುಗುತ್ತಾನೆ, ಏಳುತ್ತಾನೆ ಇಂಥ ಬೋಗಸ್ ಪ್ರಶ್ನೆಗಳನ್ನು ಹಾಕಿಕೊಂಡು ಸಮಯ ಹಾಳು ಮಾಡಬೇಡಿ. ಅದರ ಬದಲು ಪ್ರಕೃತಿಯನ್ನು ನೋಡಿ. ಅಷ್ಟೇ ಸಾಕು. ಅದರ ಮೂಲಕ್ಕಿಳಿಯುವ ಪ್ರಯತ್ನ ಮಾಡಬೇಡಿ. ನಾನು ಮನುಕುಲದ ಉದ್ಧಾರಕ ಅಲ್ಲ, ಜನ ನನ್ನನ್ನು ನೋಡಲು ಯಾಕೆ ಬರುತ್ತಾರೋ ಅದರ ಉಸಾಬರಿ ನನಗೆ ಬೇಕಿಲ್ಲ.

ನಾನು ಉಳಿದವರಿಗಿಂತ ವಿಚಿತ್ರ ಪ್ರಾಣಿ ಎಂದುಕೊಳ್ಳಬಹುದು. ನನ್ನನ್ನು ನೋಡಲು ಬಂದವರಿಗೆ ನಾನು ಏನನ್ನೂ ಮಾಡಲಾರೆ. ಕೆಲವರು ನನ್ನ
ಮಾತುಗಳ ಟಿಪ್ಪಣಿ ಮಾಡಿಕೊಳ್ಳುತ್ತಾರೆ. ಟೇಪ್ ಮಾಡಿಕೊಳ್ಳುತ್ತಾರೆ. ಅದು ಅವರಿಗೆ ಸಂಬಂಧಿಸಿದ್ದು. ಅದು ಅವರ ಸ್ವತ್ತು, ನನ್ನದಲ್ಲ. ನಿಮ್ಮ ಪ್ರಶ್ನೆಗಳನ್ನು ಉತ್ತರಿಸುವುದರಲ್ಲಿ ನನಗೆ ಆಸಕ್ತಿ ಇಲ್ಲ. ನನ್ನ ಮುಂದೆ ಯಾವ ಪ್ರಶ್ನೆಗಳೂ ಇಲ್ಲ. ಇರುವುದೆಲ್ಲ ನಿತ್ಯ ಜೀವನಕ್ಕೆ ಬೇಕಾದ ಪ್ರಶ್ನೆಗಳು. ಈಗ ಟೈಮ್ ಎಷ್ಟು, ಊಟ ರೆಡಿ ಇದೆಯಾ, ಬಸ್ ಸ್ಟಾಪ್ ಎಲ್ಲಿದೆ ಎಂಬ ಪ್ರಶ್ನೆಗಳಷ್ಟೇ. ಇವನ್ನು ಬಿಟ್ಟರೆ ನನ್ನ ಮುಂದೆ ಪ್ರಶ್ನೆಗಳೇ ಇಲ್ಲ’ ಎಂದು ಅವರು ಹೇಳುತ್ತಿದ್ದರು.

ಯೂಜಿ ಜತೆ ಮಾತಾಡಿ ಬಂದಾಗಲೆಲ್ಲ ನಾನು ಬಹಳ ಡಿಸ್ಟರ್ಬ್ ಆಗಿರುತ್ತಿದ್ದೆ. ವೈಎನ್ಕೆ ಕೇಳಿದರೆ, ಅದೇ ಸರಿ, ಡಿಸ್ಟರ್ಬ್ ಆಗಬೇಕು. ಯಾಕೆ ಡಿಸ್ಟರ್ಬ್ ಆದಿರಿ ಎಂದು ಕೇಳಬೇಡಿ. ಅದಕ್ಕೆ ಉತ್ತರವಿಲ್ಲ’ ಎಂದು ಹೇಳುತ್ತಿದ್ದರು. ಆಗ ಮತ್ತಷ್ಟು ಡಿಸ್ಟರ್ಬ್ ಆಗುತ್ತಿದ್ದೆ. ಇದು ಒಳ್ಳೆ ಸಹವಾಸ ಆಯಿತಲ್ಲ ಎಂದು ಒಳಗೊಳಗೇ ಅಂದುಕೊಳ್ಳುತ್ತಿದ್ದೆ. ಕ್ರಮೇಣ ಯೂಜಿ ಯಾಕೆ ಹೇಳುತ್ತಿದ್ದಾರೆ, ಏನು ಹೇಳುತ್ತಿದ್ದಿರಬಹುದು, ವೈಎನ್ಕೆ ಏನು ಹೇಳಲು
ಪ್ರಯತ್ನಿಸುತ್ತಿದ್ದಾರೆ. ಈ ಸಂಗತಿಗಳೆ ನಿಧಾನವಾಗಿ ತಿಳಿಯಲಾರಂಭಿಸಿತು ಅಥವಾ ಹಾಗೆ ನನ್ನನ್ನು ನಾನು ನಂಬಿಸಿಕೊಳ್ಳಲಾರಂಭಿಸಿದೆ.

ಆದರೆ ಪ್ರತಿ ಸಲ ಯೂಜಿ ಭೇಟಿಯ ನಂತರ ಹೆಚ್ಚುತ್ತಿದ್ದುದು ಗೊಂದಲಗಳೇ. ನಾನು ಒಂದು ಸಲ, ಯೂಜಿಯನ್ನು ಭೇಟಿ ಮಾಡಿ, ಮೂರು ತಾಸು ಅವರ ಜತೆ ಇದ್ದು, ಒಂದೂ ಮಾತಾಡದೇ ಸುಮ್ಮನೆ ಎದ್ದು ಬಂದಿದ್ದೆ. ಅದೇ ಹಿತ ಎಂದು ಅನಿಸಿತ್ತು. ಏನೇ ಕೇಳಿದರೂ ಅವರು ನನ್ನ ನಂಬಿಕೆಯನ್ನೇ ಬುಡಮೇಲು ಮಾಡುತ್ತಿದ್ದರು. ನನ್ನೊಳಗೆ ಸ್ಥಾಪಿತವಾದ ವಿಚಾರಗಳೆಲ್ಲ shake ಆದಂತೆನಿಸುತ್ತಿತ್ತು.

ಯೂಜಿಯವರನ್ನು ನೋಡಲು ಬಂದ ಮಹಿಳೆಯೊಬ್ಬಳು, ಧ್ಯಾನ, ಯೋಗದಿಂದ ನಮ್ಮ ಬದುಕನ್ನು ಸುಧಾರಿಸಿಕೊಳ್ಳಬಹುದೇ?’ ಎಂದು ಕೇಳಿದಾಗ,
‘ಅವುಗಳಿಂದ ಬದುಕು ಸುಧಾರಿಸುವಂತಿದ್ದರೆ ನೀವು ನನ್ನ ನೋಡಲು ಬರುತ್ತಿರಲಿಲ್ಲ. ಅವುಗಳೆ ಬೋಗಸ್. ಆದರೆ ಅವು ಹೇಗೆ ಬೋಗಸ್ ಎಂದು ಸಾಬೀತು ಮಾಡಬೇಕು ಎಂಬ ತಂತ್ರಗಾರಿಕೆ ನನಗೆ ಗೊತ್ತಿಲ್ಲ. ಕೆಲವು ಸಂಗತಿಗಳು ನನಗೆ ಗೊತ್ತಿಲ್ಲ ಮತ್ತು ನಾನು ಅವನ್ನು ತಿಳಿದುಕೊಳ್ಳುವುದಿಲ್ಲ.
ಕಾರಣ ಅಲ್ಲಿ ಏನೂ ಇರುವುದಿಲ್ಲ’ ಎಂದಿದ್ದನ್ನು ಕೇಳಿ ನಾನು ಮಾತು ಮರೆತಿದ್ದೆ.

ಒಮ್ಮೆ ಯೂಜಿ ಭೇಟಿಯಾದಾಗ, ‘ಯೂಜಿ, ನೀವು ಆನಂದ ಮತ್ತು ನೋವು ಎರಡೂ ಒಂದೇ ಎಂದು ಹೇಳಿದ್ದನ್ನು ಕೇಳಿದ್ದೇನೆ. ಅದು ಹೇಗೆ ಸಾಧ್ಯ?’ ಎಂದು ಯಾರೋ ಅವರನ್ನು ಕೇಳಿದರು. ಅದಕ್ಕೆ ಯೂಜಿ, ಏನು ಉತ್ತರ ಕೊಡಬಹುದು ಎಂದು ನಾನು ಕತ್ತು ಮುಂದೆ ಮಾಡಿ, ಕಿವಿಗಳನ್ನರಳಿಸಿ ಕೊಂಡೆ. ‘ನಾನು ಉತ್ತರ ಕೊಟ್ಟರೆ ನಿಮಗೆ ಆನಂದ, ಕೊಡದಿದ್ದರೆ ನೋವು. ಇಷ್ಟೇ. ಯಾವುದರ ಬಗ್ಗೆಯೂ ಬಹಳ ಯೋಚಿಸಬೇಡಿ. ಅದು ನಿಮಗೇ
ಗೊತ್ತಾಗುತ್ತದೆ. ಅಲ್ಲಿ ತನಕ ಸುಮ್ಮನಿರಿ. ಬದುಕನ್ನು ಒಳಗಿಂದ ಅನುಭವಿಸಿ. ಪ್ರಶ್ನೆಗಳಿಲ್ಲದೇ ಬದುಕುವುದನ್ನು ರೂಢಿಸಿಕೊಳ್ಳಿ. ಪ್ರಶ್ನೆಗಳೇ ನಿಮ್ಮ ಶತ್ರು’ ಎಂದರು ಯೂಜಿ.

ನನಗೆ ಬೌನ್ಸರ್ ಎಸೆದಂತಾಗಿತ್ತು. ಆಕೆ ಅಷ್ಟಕ್ಕೇ ಸುಮ್ಮನಾಗದೇ, ಯೂಜಿ, ನಾವು ದೇವಸ್ಥಾನಗಳಿಗೆ ಹೋಗುವುದು ಏಕೆ? ನಮ್ಮ ಸಮಸ್ಯೆಗಳಿಗೆ ಅಲ್ಲಿ ಪರಿಹಾರ ಸಿಗುವುದ?’ ಎಂದು ಕೇಳಿದಳು. ಅದಕ್ಕೆ ಯೂಜಿ ಹೇಳಿದರು – ‘ದೇವಸ್ಥಾನಕ್ಕೆ ಯಾಕೆ ಹೋಗಬೇಕು ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಬೇರೆಯವರು ಹೋಗುತ್ತಾರೆಂದು ತಾವೂ ಹೋಗುತ್ತಾರೆ. ಮಸೀದಿ, ಚರ್ಚು , ದೇವಸ್ಥಾನಕ್ಕೆ ಹೋಗುವುದರಿಂದ ಏನೂ ಸಿಗುವುದಿಲ್ಲ. ಅವೆಲ್ಲ ಭ್ರಮೆ.
ಅಲ್ಲಿ ಏನಾದರೂ ಇದ್ದರೆ ತಾನೇ ಸಿಗಲು? ಆದರೆ ಜನರಿಗೆ ಅಲ್ಲಿ ಹೋದ ಮಾತ್ರಕ್ಕೆ ಸಮಾಧಾನ ಸಿಕ್ಕಿತು ಎಂದು ಭಾವಿಸುತ್ತಾರೆ.

ಪಬ್‌ಗೆ ಹೋದರೂ ದಿಢೀರ್ ಪರಿಹಾರ ಸಿಗುತ್ತದೆ. ದೇವಸ್ಥಾನಕ್ಕೆ ಮತ್ತು ಪಬ್‌ಗೆ ಹೋಗುವುದರ ಉದ್ದೇಶ ಒಂದೇ, ತತ್ ಕ್ಷಣದ ಪರಿಹಾರ.’ ‘ಯೂಜಿ, ನೀವು ಏನನ್ನು ಹೇಳಲು ಪ್ರಯತ್ನಿಸುತ್ತೀರಿ ಎಂಬುದೇ ತಿಳಿಯುವುದಿಲ್ಲವಲ್ಲ?’ ಎಂದು ಯಾರೋ ಒಮ್ಮೆ ಅವರನ್ನು ಕೇಳಿದ್ದರು. ಅದಕ್ಕೆ ಅವರು, ‘ಅದು ನಿಮಗೆ ಬಿಟ್ಟ ವಿಚಾರ. ಅದು ನನಗೆ ಸಂಬಂಧಿಸಿದ್ದಲ್ಲ. ನೀವು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ನಿಮಗೆ ತಿಳಿಯುವುದಿಲ್ಲ.

You are the only medium through which I can express myself. ಅದರಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ. ಅಷ್ಟಕ್ಕೂ ನನ್ನ ಮಾತುಗಳನ್ನು
ಅರ್ಥ ಮಾಡಿಕೊಳ್ಳಬೇಡಿ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಯಾರೂ ಹೊಸ ವಿಷಯಗಳನ್ನು ಹೇಳುವುದಿಲ್ಲ. ಯಾರಲ್ಲೂ ಉತ್ತರಗಳಿಲ್ಲ. ತಾವು ಹೇಳಿದ್ದೇ ಉತ್ತರ ಎಂದು ಭಾವಿಸುವವರಂಥ ಮೂರ್ಖರು ಮತ್ಯಾರೂ ಇಲ್ಲ’ ಎಂದು ಹೇಳಿದ್ದರು.

ಯೂಜಿ ಬಗ್ಗೆ ಮಾತು ಬಂದಾಗಲೆ ‘ಅವರು ಎಲ್ಲಾ ತತ್ತ್ವ, ಸಿದ್ಧಾಂತಗಳ ಬುಲ್ಡೋಜರ್, ಮಹಾ ಅಪಾಯಕಾರಿ ವ್ಯಕ್ತಿ’ ಎಂದು ವೈಎನ್ಕೆ ಪ್ರೀತಿಯಿಂದ ಹೇಳುತ್ತಿದ್ದರು. ವೈಎನ್ಕೆ ಯಾಕೆ ಹಾಗೆ ಹೇಳುತ್ತಿದ್ದರು ಎಂದು ಆಗ ಸ್ವಲ್ಪ ಸ್ವಲ್ಪ ತಿಳಿಯುತ್ತಿತ್ತು. ಯೂಜಿ ಬಗ್ಗೆ ಮತ್ತಷ್ಟು ಓದಿಕೊಂಡ ನಂತರ
ಆ ಮಾತು ಎಷ್ಟು ಸೂಕ್ತ ಎಂದೆನಿಸುತ್ತಿದೆ.’