Friday, 22nd November 2024

ಜೀವನ ಪ್ರೀತಿ ಮರೆವ ಅಕ್ಷರಗಳ ಸಾನಿಧ್ಯದಲ್ಲಿ…

ನೂರೆಂಟು ವಿಶ್ವ

ಆಕೆಯ ಪತ್ರ ಓದಿ ಒಂದು ಕ್ಷಣ ಕಣ್ಮುಂದೆ ಕತ್ತಲೆಯ ಪರದೆ ಜಾರಿಬಿದ್ದಂತಾಯಿತು. ಮನಸ್ಸು ಏಟು ತಿಂದ ಹಾವಿನಂತೆ ತಿರುಚಿಕೊಂಡು, ಹೊರಳಿಕೊಂಡು ಬಿದ್ದಿತ್ತು. ಆಕೆ ಬರೆದಿದ್ದಳು- ‘ಸರ್, ನನ್ನ ಹೆಸರು ಭಾರತಿ ಹಿರೇಮಠ ಅಂತ. ವರ್ಷ ಇಪ್ಪತ್ತಾದರೂ ಹತ್ತನೇ ಕ್ಲಾಸಿನಲ್ಲಿ ಓದುತ್ತಿದ್ದೇನೆ. ಕಾರಣವಿಷ್ಟೇ, ನಾನು ಹುಟ್ಟು
ಕುರುಡಿ. ಹೀಗಾಗಿ ನನ್ನ ಅಪ್ಪ-ಅಮ್ಮ ನನ್ನನ್ನು ಶಾಲೆಗೆ ಕಳಿಸಲಿಲ್ಲ. ಒಂದು ದಿನ ಅಮ್ಮ-ಅನೊಂದಿಗೆ ಜಗಳವಾಡಿ ನನ್ನನ್ನು ಶಾಲೆಗೆ ಕಳಿಸಲೇಬೇಕೆಂದು ಹಠ ಹಿಡಿದೆ.

ಆಯಿತು, ಮುಂದಿನ ವರ್ಷದಿಂದ ಕಳಿಸಿದರಾಯಿತು ಎಂದು ಅ ಸಮಾಧಾನ ಹೇಳಿದರು. ಅದಾಗಿ ನಾಲ್ಕು ತಿಂಗಳಿಗೆ ನನ್ನ ಅಪ್ಪ ರಸ್ತೆ ಅಪಘಾತದಲ್ಲಿ ನಿಧನರಾದರು. ನಾನು, ನನ್ನ ಅಮ್ಮ ನಿರ್ಗತಿಕರಾಗುವುದೊಂದು ಬಾಕಿ. ಅಂದಿನಿಂದ ನನ್ನ ಅಮ್ಮ ಮೈಕೊಡವಿ ಎದ್ದು ನಿಂತಳು. ಕೆಲಸಕ್ಕೆ ಹೋಗಲಾರಂಭಿಸಿ ದಳು. ನನ್ನನ್ನು ನೋಡಿಕೊಳ್ಳಲು ಹೆಂಗಸೊಬ್ಬಳನ್ನು ನೇಮಿಸಿದಳು. ಆಕೆ ನನಗೆ ಎಲ್ಲವನ್ನೂ ಓದಿ ಹೇಳುತ್ತಿದ್ದಳು. ಅವಳೇ ನನ್ನ ಗುರು. ನಿಮ್ಮ ಪತ್ರಿಕೆಯನ್ನು ನಾನು ಕಳೆದ ಏಳು ವರ್ಷಗಳಿಂದ ಓದಿಸಿಕೊಳ್ಳುತ್ತಿದ್ದೇನೆ.

ಷಡಕ್ಷರಿಯವರು ಬರೆಯುತ್ತಿದ್ದ ‘ಕ್ಷಣಹೊತ್ತು ಆಣಿ ಮುತ್ತು’ ಅಂಕಣದಿಂದ ಹಿಡಿದು ಎಲ್ಲ ಅಂಕಣಗಳನ್ನೂ ಪ್ರತಿ ದಿನ ಹೀಗೆಯೇ ಓದಿಸಿಕೊಂಡಿದ್ದು. ನಾನು ನನ್ನ ಜೀವನದಲ್ಲಿ ಹುಟ್ಟಾ ಕುರುಡಿಯಾಗಿಯೂ ಬದುಕಬಹುದು ಹಾಗೂ ಹಾಗೆ ಬದುಕಿ ಸಾಧನೆ ಮಾಡಬಹುದು ಎಂಬ ಆತ್ಮವಿಶ್ವಾಸ ಕುದುರಿಸಿಕೊಂಡಿದ್ದೇ ನಿಮ್ಮ ಪತ್ರಿಕೆಯ ಬರಹಗಳಿಂದ. ನನಗೆ ನಿಮ್ಮ ಪತ್ರಿಕೆ ಕಣ್ಣು ಹಾಗೂ ದೃಷ್ಟಿ ಎರಡನ್ನೂ ನೀಡಿದೆ. ನನಗೆ ಜೀವನದಲ್ಲಿ ಮಹತ್ತರವಾದುದನ್ನು ಸಾಽಸುವ ಹಂಬಲವಿದೆ.
ಒಮ್ಮೆ ನಿಮ್ಮ ಅಂಕಣದಲ್ಲಿ ಬರೆದ ಕೆಲವು ಪುಟ್ಟ ಪುಟ್ಟ ಕತೆಗಳನ್ನು ಓದಿ ತುಂಬಾ ತುಂಬಾ ಖುಷಿಯಾಯಿತು.

ಸರ್, ನನಗಾಗಿ ಇನ್ನಷ್ಟು ಕತೆಗಳನ್ನು ಬರೆಯುತ್ತೀರಾ? ರಾಜಕಾರಣಿಗಳ ಕತೆಯಂತೂ ದಿನಾ ಇದ್ದೇ ಇರುತ್ತದೆ. ಪ್ಲೀಸ್ ಸರ್, ನನಗೆ ನಿರಾಸೆ ಮಾಡಬೇಡಿ’.
ಭಾರತಿಯ ಪತ್ರವನ್ನು ಮೂರ‍್ನಾಲ್ಕು ಬಾರಿ ಓದಿದೆ. ಮನಸ್ಸು ಒದ್ದೆಯಾಗಿತ್ತು. ನಾವು ಎಲ್ಲೋ ಕುಳಿತು ಬರೆಯುವ ನಾಲ್ಕಕ್ಷರ ಯಾರದೋ ಅಂತಃಕರಣ ತಟ್ಟಿ ಒಂದಷ್ಟು ನೆಮ್ಮದಿ, ಸಂತಸ, ಬೆಳಕು ನೀಡುತ್ತದೆ ಅಂದ್ರೆ ಅದಕ್ಕಿಂತ ಆನಂದ, ಧನ್ಯತೆಯೇನಿದೆ? ಕರ್ನಾಟಕದ ಪ್ರಸಕ್ತ ರಾಜಕಾರಣದ ಬಗ್ಗೆ ಬರೆಯಲಾ ರಂಭಿಸಿದವನಿಗೆ ಕೈಹಿಡಿದು ಎಳೆದಂತಾಯಿತು.

ಅದನ್ನು ಕಸದಬುಟ್ಟಿಗೆ ಎಸೆದೆ. ಭಾರತಿಯ ಕೋರಿಕೆ ಕರೆದಂತಾಯಿತು. ಈ ಬರಹ ಅವಳಿಗೇ ಅರ್ಪಣೆ! ಇಂಗ್ಲಿಷ್ ಲೇಖಕ ಸಾಮರ್‌ಸೆಟ್ ಮಾಮ್ ಬರೆದ ಕತೆ
ಯಿದು. ಲಂಡನ್‌ನ ಸೇಂಟ್‌ಪೀಟರ‍್ಸ್ ಚರ್ಚ್‌ನಲ್ಲಿ ಒಬ್ಬ ಕೆಲಸ ಗಾರನಿದ್ದ. ಚರ್ಚನ್ನು ಸ್ವಚ್ಛ ಹಾಗೂ ಅಂದಚೆಂದವಾಗಿ ಇಡುವುದು ಅವನ ಕೆಲಸ, ಜವಾಬ್ದಾರಿ. ಆತ ತನ್ನ ಹೊಣೆಗಾರಿಕೆ ಯನ್ನು ಅಚ್ಚುಕಟ್ಟಾಗಿಯೇ ನಿಭಾಯಿಸುತ್ತಿದ್ದ. ಅದೇ ಚರ್ಚ್ ನಲ್ಲಿ ತರಲೆ ಪಾದ್ರಿಯೊಬ್ಬನಿದ್ದ. ಅವನು ಎಲ್ಲದರಲ್ಲೂ ತಪ್ಪು ಹುಡುಕುವ ಕಿರು‘ಕುಳ’. ಒಂದು ದಿನ ಈ ಕೆಲಸಗಾರನನ್ನು ಕಿತ್ತುಹಾಕಿದ.

ಅದಕ್ಕೆ ಪಾದ್ರಿ ನೀಡಿದ ಕಾರಣ- ‘ಈ ಕೆಲಸಗಾರನಿಗೆ ಓದಲು, ಬರೆಯಲು ಬರೋಲ್ಲ’ ಅಂತ. ನಿರುದ್ಯೋಗಿ ಯಾದ ಆತ ತಾನು ಕೂಡಿಟ್ಟ ಹಣದಿಂದ ಚಹದ ಅಂಗಡಿ ತೆರೆದ. ಅವನ ಅಂಗಡಿಗೆ ಟೀ ಕುಡಿಯಲು ಬಹಳ ಮಂದಿ ಬರುತ್ತಿದ್ದರು. ಅದು ಬಹಳ ಬೇಗನೆ ಜನಪ್ರಿಯವಾಯಿತು. ಹಣವೂ ಬಂತು. ಆ ದುಡ್ಡಿನಿಂದ ಮತ್ತೊಂದು ಅಂಗಡಿ ತೆರೆದ. ಅದೂ ಯಶಸ್ಸಾಯಿತು. ಮೂರನೆ ಅಂಗಡಿಯೂ ಜನಪ್ರಿಯ ವಾಯಿತು. ಕ್ರಮೇಣ ಲಂಡನ್‌ನ ಎಲ್ಲೆಡೆ ಅವನ ಚಹದಂಗಡಿ
ತಲೆಯೆತ್ತಿತು. ಆತ ಶ್ರೀಮಂತನಾಗಿಬಿಟ್ಟ. ಒಂದು ದಿನ ಅವನಿಗೆ ಹಣ ಕೊಟ್ಟ ಬ್ಯಾಂಕರ್ ಕೇಳಿದ- ‘ಚಹದಂಗಡಿಗಳ ಮಾಲೀಕರಾಗಿ ನಿಮ್ಮ ಸಾಧನೆ ಅದ್ಭುತ. ಆದರೆ ನೀವು ಅನಕ್ಷರಸ್ಥರು. ಒಂದು ವೇಳೆ ಬರೆಯಲು, ಓದಲು ಕಲಿತು ವಿದ್ಯಾವಂತರಾಗಿದ್ದರೆ ನೀವು ಎಲ್ಲಿರುತ್ತಿದ್ದಿರೋ ಏನೋ?’.

ಅದಕ್ಕೆ ಚಹದಂಗಡಿ ಮಾಲೀಕ ಹೇಳಿದ- ‘ಸೇಂಟ್ ಪೀಟರ‍್ಸ್ ಚರ್ಚ್‌ನಲ್ಲಿ ಕಸ ಹೊಡೆಯುತ್ತಾ ಇರುತ್ತಿದ್ದೆ’.
? ? ?

ಅವರಿಬ್ಬರೂ ಮಾಜಿ ಸೈನಿಕರು. ವಯಸ್ಸಾದ ಕಾರಣದಿಂದ ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಬದುಕುತ್ತೇವೆ ಎಂಬ ಭರವಸೆ ಇಬ್ಬರಿಗೂ ಇರಲಿಲ್ಲ. ಆದರೂ ದೂರದ ಆಸೆ ಯೊಂದಿಗೆ ಆಸ್ಪತ್ರೆ ಸೇರಿದ್ದರು. ಈ ಪೈಕಿ ಒಬ್ಬನಿಗೆ ಎದ್ದೇಳುವ ತ್ರಾಣವೂ ಇರಲಿಲ್ಲ. ಆತ ಯಾವಾಗಲೂ ಅಂಗಾತ ಮಲಗಿಯೇ ಇರಬೇಕಿತ್ತು. ಇನ್ನೊಬ್ಬನ ಬೆಡ್ ಕಿಟಕಿಯ ಪಕ್ಕ ದಲ್ಲಿತ್ತು. ಈತ ದಿನವೂ ಸಂಜೆ ಒಂದು ಗಂಟೆಯ ಕಾಲ ಎದ್ದು ಕೂರುತ್ತಿದ್ದ. ಪರಿಚಯವಾದ ಒಂದೆರಡೇ ದಿನಗಳಲ್ಲಿ ಈ ಇಬ್ಬರೂ ಆಪ್ತರಾದರು. ಮೊದಲು ತಮ್ಮ ವೃತ್ತಿಯ ಬಗ್ಗೆ, ಆ ದಿನಗಳಲ್ಲಿ ಇದ್ದ ಉತ್ಸಾಹ, ಆವೇಶದ ಬಗ್ಗೆ ಮಾತಾಡಿದರು.

ನಂತರ ಹೆಂಡತಿ, ಮಕ್ಕಳು ಬಂಧು-ಬಳಗದ ಬಗ್ಗೆ ಮಾತಾಡಿಕೊಂಡರು. ಕುಟುಂಬದ ವಿಷಯವನ್ನೇ ಅದೆಷ್ಟು ಬಾರಿ ಹೇಳಿಕೊಳ್ಳಲು ಸಾಧ್ಯ? ಅದೊಂದು ದಿನ, ಆ ಕಿಟಕಿಯ ಪಕ್ಕದ ಬೆಡ್‌ನಲ್ಲಿದ್ದವನು ಇದೇ ವಿಷಯ ಪ್ರಸ್ತಾಪಿಸಿದ. ನಂತರ- ನಾಳೆ ಸಂಜೆಯಿಂದ ಒಂದು ಗಂಟೆಯ ಅವಧಿಯಲ್ಲಿ ಇಲ್ಲಿಂದ ನನಗೆ ಕಾಣುವ ಪ್ರತಿ ಸಂಗತಿಯನ್ನೂ ಕಾಮೆಂಟರಿ ಥರಾ ನಿನಗೆ ಹೇಳ್ತೇನೆ ಎಂದ. ಸರಿ, ಮರುದಿನದಿಂದಲೇ ಈ ಗೆಳೆಯರ ಕಾಮೆಂಟರಿ ಶುರುವಾಯ್ತು: ‘ಇಲ್ಲಿ ನೋಡು, ಈ ಕಿಟಕಿಯಿಂದಾಚೆಗೆ ಒಂದು ವಿಶಾಲ ಬಯಲಿದೆ. ಅದರ ಪಕ್ಕದಲ್ಲೇ ಒಂದು ಕೊಳವಿದೆ. ಅದರೊಳಗೆ ಎರಡು ಹಂಸಗಳಿವೆ. ಕೊಳದ ಮೇಲಿರುವ ಕಲ್ಲು ಬೆಂಚಿನ ಮೂಲೆಯಲ್ಲಿ ಪ್ರೇಮಿಗಳ ಹಿಂಡು ಕೂತಿದೆ. ಆ ಹುಡುಗಿ ಯಾವುದೋ ಕಾರಣಕ್ಕೆ ಸಿಟ್ಟಾಗಿದ್ದಾಳೆ.

ಹುಡುಗ ಅವಳಲ್ಲಿ ಕ್ಷಮೆ ಕೇಳುತ್ತಿದ್ದಾನೆ. ಈ ಕೊಳದ ನೀರು, ಸಂಜೆಯ ಸೂರ್ಯಕಿರಣದ ಬೆಳಕನ್ನು ಪ್ರತಿಫಲಿಸುತ್ತಿದೆ… ಉದ್ಯಾನದಲ್ಲಿ ತರಹೇವಾರಿ ಹೂಗಳು ಅರಳಿವೆ. ಆ ಹೂಗಳನ್ನು ನೋಡುತ್ತಾ ಚಿಕ್ಕ ಮಕ್ಕಳು ಮೈಮರೆತಿವೆ. ಬಯಲಿನ ಇನ್ನೊಂದು ಮೂಲೆಯಲ್ಲಿ ವಯಸ್ಸಾದ ದಂಪತಿ ಏನನ್ನೋ ನೆನಪು ಮಾಡಿಕೊಂಡು ಕಂಬನಿ ಸುರಿಸುತ್ತಿದ್ದಾರೆ. ಅಲ್ಲಿಂದ ಕೂಗಳತೆಯ ದೂರವಿರುವ ಮರದ ಕೆಳಗೆ ಪ್ರೇಮಿಗಳಿಬ್ಬರು ಮುದ್ದು ಮಾಡುತ್ತಿದ್ದಾರೆ…’ ದಿನವೂ ಹೀಗೇ ಸಾಗುತ್ತಿತ್ತು ರನ್ನಿಂಗ್ ಕಾಮೆಂಟರಿ.

ಅವನು ಕಿಟಕಿಯ ಪಕ್ಕ ಕೂತು ಆಗಿಂದಾಗ್ಗೆ ಮುಖ ಅರಳಿಸುತ್ತಾ, ಕೈಯಾಡಿಸುತ್ತಾ ಒಂದೊಂದೇ ವಿವರಣೆ ಹೇಳುತ್ತಿದ್ದರೆ, ಹಾಸಿಗೆಯಲ್ಲಿ ಅಂಗಾತ ಮಲಗಿದ್ದ ವ್ಯಕ್ತಿ,
ಅವನ್ನೆಲ್ಲ ಇದ್ದಲ್ಲೇ ಅಂದಾಜು ಮಾಡಿಕೊಂಡು ಖುಷಿಪಡುತ್ತಿದ್ದ. ಪ್ರೇಮಿಗಳಿಬ್ಬರೂ ಮುದ್ದಾಡುತ್ತಿದ್ದಾರೆ ಎಂದಾಗ, ತನ್ನ ಹರೆಯದ ಆಟಗಳ ನೆನಪಾಗಿ ನಸುನಗುತ್ತಿದ್ದ. ಮುಂದೊಂದು ದಿನ, ಕಾಮೆಂಟರಿ ಕೊಡುತ್ತಿದ್ದ ಗೆಳೆಯ- ‘ಈಗ ನೋಡು ಗುರೂ, ಮೈದಾನದಲ್ಲಿ ದೊಡ್ಡದೊಂದು ಮೆರವಣಿಗೆ ಹೋಗ್ತಾ ಇದೆ. ಮುಂದೆ ಆನೆಗಳಿವೆ. ಹಿಂದೆ ಕುದುರೆಗಳ ಹಿಂಡು. ಅದರ ಹಿಂದೆ ಒಂಟೆಗಳು’ ಎಂದ! ಅಷ್ಟು ದೊಡ್ಡ ಮೆರವಣಿಗೆ ಅಂದ ಮೇಲೆ ಭಾರಿ ಸದ್ದು-ಗದ್ದಲ ಕೇಳಿಸಬೇಕು
ತಾನೆ? ಹಾಗೇನೂ ಕೇಳಿಸಲಿಲ್ಲ. ಹಾಸಿಗೆಯಲ್ಲೇ ಮಲಗಿದ್ದ ವನು, ಕಾಮೆಂಟರಿ ಕೊಡುತ್ತಿದ್ದ ಗೆಳೆಯನಿಗೆ ಇದನ್ನೇ ಹೇಳಬೇಕು ಅಂದುಕೊಂಡ. ಆದರೆ ವಯಸ್ಸಿನ ಕಾರಣ, ಕಾಯಿಲೆಯ ಕಾರಣದಿಂದ ತನಗೇ ಕಿವುಡುತನ ಉಂಟಾಗಿರಬಹುದು ಎಂದುಕೊಂಡು ಸುಮ್ಮನಾಗಿಬಿಟ್ಟ.

ಹೀಗೆಯೇ ದಿನ, ವಾರ, ತಿಂಗಳುಗಳೂ ಕಳೆದವು. ಒಂದು ಬೆಳಗ್ಗೆ, ರೋಗಿಗಳ ಬೆಡ್‌ಶೀಟ್ ಬದಲಿಸಲೆಂದು ಬಂದ ನರ್ಸ್, ಮೊದಲಿಗೆ ಕಿಟಕಿಯ ಬಳಿ ಇದ್ದ ರೋಗಿಯ ಬಳಿ ಹೋದಳು. ಆತ ನಿದ್ರೆ ಮಾಡುತ್ತಿದ್ದ ವೇಳೆಯಲ್ಲೇ ಸತ್ತು ಹೋಗಿದ್ದ. ಅದುವರೆಗೂ ಕಾಮೆಂಟರಿ ಹೇಳುತ್ತಿದ್ದ ಗೆಳೆಯ ಜತೆಗಿಲ್ಲ ಎಂಬ ಕಾರಣದಿಂದ ಇನ್ನೊಬ್ಬನಿಗೆ ತುಂಬಾ ಸಂಕಟ ವಾಯಿತು. ಹೊರಗಿನ ದೃಶ್ಯ ನೋಡಿಕೊಂಡು ಎಲ್ಲ ಸಂಕಟ ಮರೆಯೋಣ ಎಂದು ಯೋಚಿಸಿದ ಆತ, ತನಗೆ ಕಿಟಕಿ ಪಕ್ಕದ ಬೆಡ್ ಕೊಡುವಂತೆ ನರ್ಸ್‌ಗೆ ಕೇಳಿದ. ಕೆಲವೇ ನಿಮಿಷಗಳಲ್ಲಿ ಆ ವ್ಯವಸ್ಥೆಯೂ ಆಯಿತು. ಅದುವರೆಗೂ ಕಾಮೆಂಟರಿಯಲ್ಲಿ ಕೇಳಿದ್ದ ದೃಶ್ಯಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಈತ ಸಡಗರದಿಂದಲೇ ಕಿಟಕಿಯಿಂದಾಚೆ ನೋಡಿ ಬೆಚ್ಚಿಬಿದ್ದ.

ಏಕೆಂದರೆ, ಅಲ್ಲಿ ಒಂದು ಗೋಡೆಯನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಈಗ ಗಾಬರಿಗೊಂಡು ನರ್ಸ್‌ಗಳನ್ನು ಕರೆದ. ಬಂದವರಿಗೆಲ್ಲ ತನ್ನ ಗೆಳೆಯ ಹೇಳುತ್ತಿದ್ದ ರನ್ನಿಂಗ್ ಕಾಮೆಂಟರಿ ನೆನಪಿಸಿ ‘ಪಾರ್ಕು, ಹೂಗಿಡ, ಈಜುಕೊಳ, ಮೆರವಣಿಗೆಯ ರಸ್ತೆ, ಪ್ರೇಮಿಗಳ ಪಿಸುಮಾತು… ಇದೆಲ್ಲ ಎಲ್ಲಿ ಮಾಯವಾಯ್ತು’ ಎಂದು ಬೆರಗಿನಿಂದ ಕೇಳಿದ. ಆಗ ಅವನನ್ನೇ ಅನುಕಂಪದಿಂದ ನೋಡುತ್ತಾ ನರ್ಸ್ ಒಬ್ಬಳು ಹೀಗೆಂದಳು: ‘ಈಗ ನೀವು ನೋಡ್ತಾ ಇದೀರಲ್ಲ, ಇದೇ ಸತ್ಯ. ಒಂದು
ವಿಷಯ ಗೊತ್ತಾ? ರನ್ನಿಂಗ್ ಕಾಮೆಂಟರಿ ಕೊಡುತ್ತಿದ್ದ ನಿಮ್ಮ ಗೆಳೆಯನಿಗೆ ಕಣ್ಣು ಕಾಣ್ತಾ ಇರಲಿಲ್ಲ. ಯುದ್ಧದಲ್ಲಿ ಅವರು ಕಣ್ಣುಗಳನ್ನು ಕಳಕೊಂಡಿದ್ರು. ನಿಮ್ಮಲ್ಲಿ ಜೀವನೋತ್ಸಾಹ ಹೆಚ್ಚಿಸಬೇಕೆಂಬ ಆಸೆಯಿಂದ ಅವರು ಹಾಗೆಲ್ಲ ಹೇಳ್ತಾ ಇದ್ರು. ನಾವೆಂಥ ಸ್ಥಿತಿಯಲ್ಲೇ ಇರಲಿ ಬೇರೆಯವರನ್ನು ಖುಷಿಪಡಿಸು ವುದರಲ್ಲೂ ನೆಮ್ಮದಿ, ಸಮಾಧಾನವಿದೆ’.
? ? ?

ಪ್ರಸಿದ್ಧ ನಟ, ನಿರ್ದೇಶಕ ಮೈಕೆಲ್ ಡಾಗ್ಲಸ್ ಹೆಸರನ್ನು ಕೇಳಿಯೇ ಕೇಳಿರುತ್ತೀರಿ. ಆತನ ಐದು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಹಣ ಸಂಗ್ರಹಿಸಿದವು. ಅವನಿಗೆ ವಿಶ್ವದೆಲ್ಲೆಡೆಯಿಂದ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಇವನ್ನೆಲ್ಲ ಕಂಡು ಆತನ ತಂದೆ ಹಾಗೂ ನಟ ಕಿರ್ಕ್ ಡಾಗ್ಲಸ್ ಒಂದು ಸಾಲಿನ ಪತ್ರ ಬರೆದ – Iಜ್ಚಿeZಛ್ಝಿ, ಐ Zಞ ಞಟ್ಟಛಿ mಟ್ಠb ಟ್ಛ eಟಡಿ qsಟ್ಠ eZbಛಿ oಛಿoo ಠಿeZ ಐ Zಞ ಟ್ಛ qsಟ್ಠ್ಟ oಛಿoo (ಮೈಕೆಲ್, ನಾನು ನಿನ್ನ ಯಶಸ್ಸನ್ನು ನಿಭಾಯಿಸಿದ್ದಕ್ಕಿಂತ ಚೆನ್ನಾಗಿ ನೀನು ನಿನ್ನ ಯಶಸ್ಸನ್ನು ನಿಭಾಯಿಸಿದ್ದನ್ನು ಕಂಡು ನನಗೆ ಹೆಮ್ಮೆಯೆನಿಸಿದೆ).
? ? ?

ಬಿರುಬಿಸಿಲಲ್ಲಿ ರಸ್ತೆಗಿಳಿದಿದ್ದ ಆ ಹುಡುಗನ ಬಗಲಲ್ಲಿ ತರಹೇವಾರಿ ಆಟಿಕೆಗಳು, ಅಲಂಕಾರಿಕ ಸಾಮಾನುಗಳು. ತನ್ನ ಬದುಕಿಗೆ ಒಂದು ರಂಗು ತಂದುಕೊಳ್ಳಬೇಕು ಅಂತಾದರೆ ಆ ಹುಡುಗನಿಗೆ ಆ ಬಣ್ಣ ಬಣ್ಣದ ಸರಂಜಾಮುಗಳನ್ನೆಲ್ಲ ಬಿಕರಿಯಾಗಿಸಲೇಬೇಕಾದ ಜರೂರತ್ತಿತ್ತು. ಶಾಲೆಯ ಫೀಸು ತುಂಬಲು ಬೇಕಾದ ಹಣ ಗಳಿಸಿಕೊಳ್ಳಲು ಆ ಹುಡುಗನ ಎದುರಿಗಿದ್ದ ಮಾರ್ಗವದು. ಆ ದಿನ ಆತ ತುಂಬ ಬಳಲಿಹೋಗಿದ್ದ. ಏನನ್ನಾದರೂ ಖರೀದಿಸಿ ತಿನ್ನೋಣ ಎಂದರೆ ಜೇಬಲ್ಲಿದ್ದ ಪುಡಿಗಾಸು ಏನಕ್ಕೂ ಸಾಕಾಗುವಂತಿರಲಿಲ್ಲ. ಬೇಡಿ ಪಡೆಯುವುದು ಆತನ ಜಾಯಮಾನವಲ್ಲ. ಅಷ್ಟಾಗಿಯೂ ಇನ್ನೇನು ತಲೆ ತಿರುಗಿ ಬಿದ್ದು ಬಿಡುತ್ತೀನೇನೊ ಎಂಬಂತಾದಾಗ ಮನೆಯೊಂದರ ಬಾಗಿಲು ಬಡಿದ. ಊಟ ಕೊಡುತ್ತೀರಾ ಎಂದು ಕೇಳಬೇಕೆಂದುಕೊಂಡ.

ಬಾಗಿಲು ತೆರೆದು ಪ್ರಸನ್ನ ವದನಳಾಗಿ ನಿಂತಿದ್ದ ಯುವತಿಯನ್ನು ನೋಡಿ ಅವನಿಗೇನೋ ಮುಜುಗರ ಕಾಡಿಬಿಟ್ಟಿತು. ‘ಒಂದು ಲೋಟ ನೀರು ಸಿಗಬಹುದಾ?’ ಎಂದು ಕೇಳಿದ. ಆತನ ಬಳಲಿಕೆಯ ಮುಖವನ್ನು ಓದಿಕೊಂಡು ಹೋದಳೇನೋ ಎಂಬಂತೆ ಆಕೆ ಮನೆಯೊಳಗೆ ಹೋಗಿ ನೀರಿನ ಬದಲು ಉದ್ದ ಲೋಟದಲ್ಲಿ ಹಾಲು ತಂದುಕೊಟ್ಟಳು. ತುಂಬು ಸಂತೃಪ್ತಿಯೊಂದಿಗೆ ಕೊನೆಯ ಬಿಂದುವನ್ನೂ ಕುಡಿದು ಮುಗಿಸಿದ ಆ ಹುಡುಗ. ‘ಇದಕ್ಕೆ ಪ್ರತಿಯಾಗಿ ನಾನೇನು ಕೊಡಲಿ?’ ಎಂದ.
‘ನೀನೇನೂ ಕೊಡಬೇಕಿಲ್ಲ. ನಮ್ಮ ಉದಾರತೆಗೂ ಒಂದು ಬೆಲೆ ಸಿಗಬೇಕು ಎಂದು ಅಪೇಕ್ಷಿಸಬಾರದು ಅಂತ ನಮ್ಮಮ್ಮ ನಂಗೆ ಯಾವಾಗ್ಲೂ ಹೇಳ್ತಿರ್ತಾಳೆ’ ಎಂದವಳು ಮೆಲುವಾಗಿ ನಕ್ಕು ಮನೆಯೊಳಗೆ ಹೋದಳು.

ಆ ಮನೆಯಿಂದ ಮುಂದೆ ಸಾಗುತ್ತಿದ್ದ ಆ ಹುಡುಗನ ಹೃದಯದಲ್ಲಿ ಒಂಥರದ ಸಂಭ್ರಮ. ವ್ಯಾಸಂಗಕ್ಕಾಗಿ ಕಷ್ಟಪಡಬೇಕಾದ ತನ್ನ ಸ್ಥಿತಿಯನ್ನು ಅವಲೋಕಿಸಿ ಕೊಳ್ಳುತ್ತ ಆತ ಹಲವು ಬಾರಿ ‘ಇದೇನಪ್ಪಾ ದೇವರೇ’ ಎಂದು ಹತಾಶ ಉಸಿರು ಹೊರ ಹಾಕಿದ್ದ. ಆದರೀಗ ಒಂದು ಲೋಟ ಹಾಲು ಕೇವಲ ಹೊಟ್ಟೆ
ತುಂಬಿಸಿರಲಿಲ್ಲ, ಬದಲಿಗೆ ದೇವರ ಮೇಲೆ ಹಾಗೂ ಜನರ ಮೇಲೆ ನಂಬಿಕೆ ಇಟ್ಟುಕೊಳ್ಳುವುದನ್ನು ಕಲಿಸಿತ್ತು. ಆ ಹುಡುಗನ ಮುಖದಲ್ಲಿ ಹೊಸತೊಂದು ಜೀವನ ಪ್ರೀತಿ. ಆತ ಮುಂದೆ ದೊಡ್ಡ ಪಟ್ಟಣ ಸೇರಿ ಪ್ರಖ್ಯಾತ ವೈದ್ಯನಾಗಿ ಉಲ್ಲಸಿತ ವೃತ್ತಿಜೀವನ ನಡೆಸುತ್ತಿದ್ದ. ಹಾಗೊಂದು ದಿನ ಆತನೆದುರು ಒಂದು ಪ್ರಕರಣ ಬಂತು. ಹೆಂಗಸೊಬ್ಬಳಿಗೆ ಯಾವುದೋ ವಿಚಿತ್ರ ರೋಗ. ಅವಳಿದ್ದ ಚಿಕ್ಕ ಪಟ್ಟಣದ ವೈದ್ಯರುಗಳಿಗೆಲ್ಲ ಅದೇನೆಂದು ಬಗೆಹರಿಯದೇ ಇಲ್ಲಿಗೆ ಕಳುಹಿಸಿದ್ದರು.

ಚಿಕಿತ್ಸೆಯ ವೆಚ್ಚವನ್ನೆಲ್ಲ ಭರಿಸುವ ಆರ್ಥಿಕ ಚೈತನ್ಯವೂ ಅವಳಿಗೆ ಇರಲಿಲ್ಲ. ಸಹಜ ವಿಚಾರಣೆಯ ಧಾಟಿಯಲ್ಲಿ ಆತ ಕೇಳಿದ, ‘ಆಕೆ ಎಲ್ಲಿಂದ ಬಂದವಳು?’. ಅದಕ್ಕೆ ಉತ್ತರ ಸಿಗುತ್ತಿದ್ದಂತೆ ಆತನ ಕಣ್ಣುಗಳು ಮಿನುಗಿದವು! ಆಕೆಯ ವೈದ್ಯಕೀಯ ವರದಿಗಳನ್ನು ಹುರುಪಿನಿಂದ ಪರಿಶೀಲಿಸುತ್ತಲೇ ಆಕೆಯ ವಾರ್ಡ್‌ಗೆ ಹೋದ. ಅವನಂದುಕೊಂಡಿದ್ದು ನಿಜವಾಗಿತ್ತು. ಅವಳಿಗೇನೂ ಈತನ ಮುಖ ನೆನಪಿರಲಿಲ್ಲ, ಆದರೆ ಇವನಿಗೆ ಆ ಮುಖ ಮರೆತೀತಾದರೂ ಹೇಗೆ? ಅವಳೇ… ಒಂದು ಲೋಟ ಹಾಲಿನ ದೇವತೆ! ಅವಳಿಗೆ ಬಂದಿರುವ ರೋಗ ಅದೇನೇ ಆಗಿರಲಿ, ಇದು ತನ್ನ ವೈದ್ಯಕೀಯ ಜೀವನದ ಸವಾಲು ಎಂದೇ ಆತ ಅಂದುಕೊಂಡ. ಪರೀಕ್ಷೆ, ಚಿಕಿತ್ಸೆ ಎಲ್ಲ ಶುರುವಾಯಿತು. ಕೊನೆಗೂ ಒಂದು ದಿನ ಗೆಲುವಿನ ನಗೆ ಅವನದಾಗಿತ್ತು. ಚಿಕಿತ್ಸೆ ಫಲಕಾರಿಯಾಗಿತ್ತು. ಆಕೆಯ ಚಿಕಿತ್ಸೆಯ ವೆಚ್ಚದ ಬಿಲ್ ಆತನ ಅಂಕಿತಕ್ಕಾಗಿ ಬಂತು. ಆ ಬಿಲ್ ಗೆ ಒಂದು ಸಾಲಿನ ಒಕ್ಕಣೆ ಬರೆದು ಆತ ಸಹಿ ಮಾಡಿದ. ಇತ್ತ ಬಿಲ್ಲು ತಲುಪುತ್ತಲೇ ಆ ಹೆಂಗಸು ತುಂಬ ದುಗುಡದಿಂದ ಅದನ್ನು ತೆರೆದು ನೋಡಲು ಎತ್ತಿಕೊಂಡಳು. ಕಾಯಿಲೆ ವಾಸಿಯಾಗಿದ್ದ ಖುಷಿ ಅವಳದಾಗಿದ್ದರೂ ಆಸ್ಪತ್ರೆಯ ಬಿಲ್ ಪಾವತಿಸಲು ಮತ್ತೆ ಜೀವವನ್ನೇ ತೇಯಬೇಕಾಗುತ್ತದೆ ಎಂಬ ವಾಸ್ತವದ ಅರಿವು ಅವಳಿಗಿತ್ತು.

ಹಾಗಂದುಕೊಂಡೇ ಪಾವತಿಯ ಪದರ ತೆಗೆದರೆ ಬಿಲ್‌ನ ಮೊತ್ತಕ್ಕಿಂತ ಮೊದಲು ಆ ಒಕ್ಕಣೆ ಕಣ್ಣಿಗೆ ರಾಚಿತು- ‘ಒಂದು ಲೋಟ ಹಾಲಿನೊಂದಿಗೆ ಎಲ್ಲವೂ ಸಂದಾಯವಾಗಿದೆ’. ಮುಂದೇನೂ ಗಮನಿಸಲಾಗ ದಂತೆ ಆಕೆಯ ಕಣ್ಣುಗಳು ಮಂಜಾಗಿದ್ದವು. ಜೀವನದಲ್ಲಿ ತುಂಬ ಹಿತ ನೀಡುವ ನಂಬಿಕೆ ಅಂದರೆ- ನಾವು ಮಾಡುವ ಒಳ್ಳೆಯ ಕೆಲಸ ನಮ್ಮನ್ನು ಕಾಯುತ್ತೆ ಅನ್ನೋದು. ಈ ಮೇಲಿನ ಕತೆಯಂತೆ ಒಬ್ಬರಿಂದ ಪ್ರೀತಿ ಪಡೆದುಕೊಂಡವರೇ ಮತ್ತೊಂದು ಸಂದರ್ಭದಲ್ಲಿ ಆ ಕಾಳಜಿಯನ್ನು ಮೆರೆಯುತ್ತಾರೆ ಅಂತೇನಲ್ಲ. ಆದರೆ ತುಂಬ ದುರ್ಭರ ಕ್ಷಣದಲ್ಲಿ ಎಲ್ಲಿಂದಲೋ ಅಂಥದೊಂದು ಸಹಾಯ ಒಲಿದು ಬರುತ್ತದೆ. ಒಳ್ಳೆಯತನಕ್ಕೆ ಪ್ರತಿ-ಲ ಸಿಗುತ್ತದೆ ಎಂಬ ನಂಬಿಕೆ ಸುಳ್ಳು ಎಂದೇ ಇಟ್ಟುಕೊಂಡರೂ ಅದರಿಂದ ನೀವು ಕಳೆದು ಕೊಳ್ಳುವುದೇನಿಲ್ಲ. ಏಕೆಂದರೆ ಆ ಕ್ಷಣದ ನಿಮ್ಮ ಪ್ರೀತಿ- ಕಾಳಜಿಗಳಿಂದ ಜಗತ್ತನ್ನು ಸುಂದರವಾಗಿಸಿದ ಶ್ರೇಯಸ್ಸು ನಿಮ್ಮ ಖುಷಿಯ ಆಯಸ್ಸನ್ನಂತೂ ಹೆಚ್ಚಿಸುತ್ತದೆ. ಅಂಥ ದಿವ್ಯ ಆನಂದಕ್ಕಿಂತ ಹೆಚ್ಚಿನದು ಏನಿದೆ?