Sunday, 15th December 2024

ಗ್ರಂಥಗಳಿಲ್ಲದಿದ್ದರೆ ದೇವರೂ ಮೂಕನಾಗುತ್ತಾನೆ

ವಿದೇಶವಾಸಿ

ಕಿರಣ್ ಉಪಾಧ್ಯಾಯ ಬಹ್ರೈನ್

‘ನನ್ನ ಪ್ರೀತಿಯ ಮಕ್ಕಳೇ, ನೀವು ಯಾವ ಧರ್ಮದವರೇ ಆಗಿರಿ, ನಿಮ್ಮ ಮನೆ ಎಲ್ಲಾ ಇರಲಿ, ಹೇಗೇ ಇರಲಿ, ಅದರಲ್ಲಿ ಪ್ರಾರ್ಥನೆಗೆ ಮತ್ತು ವಾಚನಾಲಯಕ್ಕೆ ಸ್ಥಳವಿರಲಿ.

ಇವೆರಡೂ ನಿಮ್ಮಲ್ಲಿ ಧನಾತ್ಮಕ ಅಂಶಗಳನ್ನು ತುಂಬುವ ಸ್ಥಳಗಳು. ಮನೆ ಎಷ್ಟೇ ಚಿಕ್ಕದಾದರೂ ಅದರಲ್ಲಿ ಈ ಎರಡು ಸ್ಥಳ ಹೊಂದಿಸಿಕೊಳ್ಳಲು ಪ್ರಯತ್ನಿಸಿ. ವಾಚನಾಲಯದಲ್ಲಿ ಹತ್ತು ಪುಸ್ತಕವೇ ಇದ್ದರೂ ಸರಿ, ಮನೆಯೆಂಬಲ್ಲಿ ಅದು ಕಡ್ಡಾಯವಾಗಿ ರಲಿ. ಹಾಗೆಯೇ ದಿನದ ನಿರ್ದಿಷ್ಟ ಅವಧಿಯನ್ನು ಈ ಸ್ಥಳದಲ್ಲಿ ವಿನಿಯೋಗಿಸಲು ನಿರ್ಣಯಿಸಿಕೊಳ್ಳಿ, ಅದನ್ನು ಪಾಲಿಸಿ. ಸಾಧ್ಯ ವಾದರೆ ಆಗಾಗ ನಿಮ್ಮ ವಾಚನಾಲಯಕ್ಕೆ ಇನ್ನಷ್ಟು ಪುಸ್ತಕಗಳನ್ನು ಸೇರಿಸಿಕೊಳ್ಳಿ.

ನಿಮ್ಮ ಇತರ ಬೇಡಿಕೆಗಳು ಈಡೇರದಿದ್ದರೂ, ಈ ಬೇಡಿಕೆಯನ್ನು ಈಡೇರಿಸುವಂತೆ ನಿಮ್ಮ ಪಾಲಕರನ್ನು ಒತ್ತಾಯಿಸಿ. ಪಾಲಕರೂ ಅಷ್ಟೇ, ನಿಮ್ಮ ಮಕ್ಕಳ ಇತರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದಿದ್ದರೂ, ಮಕ್ಕಳ ಈ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸಿ. ಅದರಿಂದ ಮಕ್ಕಳಿಗಷ್ಟೇ ಅಲ್ಲ, ನಿಮಗೂ ಪ್ರಯೋಜನವಿದೆ.’ ಭಾರತದ ಮಾಜಿ ರಾಷ್ಟ್ರಪತಿ ಡಾ.ಎ. ಪಿ. ಜೆ. ಅಬ್ದುಲ್ ಕಲಾಂ ಹೇಳಿದ ಮಾತಿದು. ನಮ್ಮನ್ನು ಅಗಲುವುದಕ್ಕಿಂತ ಆರು ತಿಂಗಳು ಮೊದಲು, ಅಂದರೆ 2005ರ ಆರಂಭದಲ್ಲಿ, ಭಾರತ ಕಂಡ ಅತ್ಯುತ್ತಮ ರಾಷ್ಟ್ರಪತಿಗಳಲ್ಲಿ ಒಬ್ಬರೂ, ವಿಜ್ಞಾನಿಯೂ, ವಿದ್ವಾಂಸರೂ ಆಗಿದ್ದ ದಿವಂಗತ ಡಾ. ಕಲಾಂ ಬಹ್ರೈನ್‌ಗೆ ಬಂದಿದ್ದರು.

ನೂರು ವರ್ಷದ ಇತಿಹಾಸವಿರುವ ‘ದಿ ಇಂಡಿಯನ್ ಕ್ಲಬ್‌’ನಲ್ಲಿ ಒಂದು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆ ಕಾರ್ಯ ಕ್ರಮದಲ್ಲಿ ಮಾತನಾಡಿದ ಕಲಾಂ ಪುಸ್ತಕದ ಮಹತ್ವವನ್ನು ಅಂದು ಅವರದ್ದೇ ಆದ ರೀತಿಯಲ್ಲಿ ವಿವರಿಸಿದ್ದರು. ನೀವು ‘ಲೋಗೋಸ್ ಹೋಪ್’ ಎಂಬ ಹಡಗಿನ ಬಗ್ಗೆ ಕೇಳಿರಬಹುದು. ವಿಶ್ವದ ಅತಿ ದೊಡ್ಡ ತೇಲುವ ಗ್ರಂಥಾಲಯವನ್ನು ಹೊತ್ತು ತಿರುಗುವ ಅಗ್ಗಳಿಕೆ ಇದರದ್ದು. ನಾಲ್ಕು ವರ್ಷಗಳ ಹಿಂದೆ ಈ ನೌಕೆ ಬಹ್ರೈನ್‌ಗೆ ಬಂದಾಗ ಭೇಟಿ ಕೊಟ್ಟಿದ್ದೆ. ಅದರಲ್ಲಿರುವ ಪುಸ್ತಕ ಪ್ರಪಂಚವನ್ನು ಕಂಡರೆ ಯಾರೂ ಬೆರಗಾಗಬೇಕಾದದ್ದೇ. 1973ರಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಹಡಗು 2004 ರಲ್ಲಿ ಚಾರಿಟಿ ಕಾರ್ಯಕ್ಕೆ ಪರಿವರ್ತೆನೆಗೊಂಡು ಪುಸ್ತಕ ಹೊತ್ತೊಯ್ಯುವ ಕಾರ್ಯಕ್ಕೆ ಮುಂದಾಯಿತು.

ಜರ್ಮನಿ ದೇಶದ ಈ ಹಡಗಿನ ಮೂಲ ಉದ್ದೇಶ ಶಿಕ್ಷಣ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಜನಪ್ರಿಯ ಗೊಳಿಸುವುದಾಗಿತ್ತಾದರೂ, ಕಾಲಕ್ರಮೇಣ ಉತ್ತಮ ವಿಚಾರಗಳುಳ್ಳ ಇತರ ಪುಸ್ತಕಗಳನ್ನೂ ತನ್ನೊಳಗೆ ಸೇರಿಸಿಕೊಂಡಿತು ಎನ್ನುವು ದಕ್ಕೆ ನಾನು ಕಂಡ ಗಾಂಧಿ ಪುಸ್ತಕವೇ ಸಾಕ್ಷಿ. ಈ ನೌಕೆಯಲ್ಲಿ ಕೆಲವು ಹಿಂದಿ ಮತ್ತು ಮಳಯಾಳಂ ಭಾಷೆಯ ಪುಸ್ತಕಗಳೂ ಇದ್ದವು.
ಬೇರೆ ಬೇರೆ ಭಾಷೆಯ ಏಳು ಸಾವಿರ ಶೀರ್ಷಿಕೆಯ ಐದು ಲಕ್ಷ ಪ್ರತಿಗಳನ್ನು ಹೊತ್ತು ದೇಶದಿಂದ ದೇಶಕ್ಕೆ ತಿರುಗುವ ಈ ನೌಕೆಯಲ್ಲಿ ರುವ ಗ್ರಂಥಾಲಯಕ್ಕೆ ಇದುವರೆಗೆ ನಾಲ್ಕು ಕೋಟಿಗೂ ಅಧಿಕ ಜನ ಭೇಟಿ ನೀಡಿದ್ದಾರೆ.

ಪ್ರತಿ ಬಂದರಿನಲ್ಲಿ ಒಂದು ಅಥವಾ ಎರಡು ವಾರ ಬೀಡು ಬಿಟ್ಟು, ಪುಸ್ತಕ ಪ್ರಿಯರನ್ನು ಆಕರ್ಷಿಸುವ ಈ ನೌಕೆ ಇದುವರೆಗೆ 160ಕ್ಕೂ ಹೆಚ್ಚು ದೇಶಗಳನ್ನು ಸ್ಪರ್ಶಿಸಿದೆ. 435 ಅಡಿ ಉದ್ದದ ಈ ಜಹಾಜಿನಲ್ಲಿ 40ಕ್ಕೂ ಹೆಚ್ಚು ದೇಶದ ನಾಲ್ಕು ನೂರು
ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಇವರಲ್ಲಿ ಕ್ಯಾಪ್ಟನ್‌ನಿಂದ ಹಿಡಿದು ಪುಸ್ತಕ ಮಾರುವವರೆಗೆ ಯಾರಿಗೂ ಸಂಬಳವಿಲ್ಲ. ಸ್ವಯಂಸೇವಕರಲ್ಲಿ ಹೆಚ್ಚಿನವರು 30 ರಿಂದ 50 ವರ್ಷದವರು. ಏಕ ಕಾಲದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಈ ಹಡಗಿ ನಲ್ಲಿರುವ ಪುಸ್ತಕ ಪ್ರಪಂಚಕ್ಕೆ ಭೇಟಿ ನೀಡಿ ಪುಸ್ತಕಗಳನ್ನು ಓದಬಹುದು, ಕೊಂಡುಕೊಳ್ಳಬಹುದು. ಈ ನೌಕೆಯ ಒಳಗೆ ಗ್ರಂಥಾ ಲಯದೊಂದಿಗೆ ಮಕ್ಕಳಿಗೆ ಆಟದ ಸ್ಥಳ, ಸಣ್ಣ ಹೋಟೆಲ್‌, ಕಾಫಿ ಶಾಪ್, ಅಡುಗೆ ಮನೆ ಮೊದಲಾದವುಗಳ ವ್ಯವಸ್ಥೆಯೂ ಇದೆ. ಆಗಾಗ ಕೆಲವು ವಿದ್ಯಾಸಂಸ್ಥೆಗಳಿಗೆ ಪುಸ್ತಕಗಳನ್ನು ದಾನ ಮಾಡುವ ಪರಿಪಾಠವನ್ನೂ ಲೋಗೋಸ್ ಬೆಳೆಸಿಕೊಂಡು ಬಂದಿದೆ.

ಗ್ರೀಕ್ ಭಾಷೆಯಲ್ಲಿ ಲೋಗೋ ಎಂದರೆ ತತ್ವ ಅಥವಾ ಚಿಂತನೆ ಎಂಬ ಅರ್ಥವಿದೆ ಎಂದು ಅಲ್ಲಿಯ ಸಿಬ್ಬಂದಿಯೊಬ್ಬರು ಹೇಳಿ ದ್ದರು. ಜನಸಾಮಾನ್ಯರನ್ನು ಪುಸ್ತಕ ಪ್ರಪಂಚದೆಡೆಗೆ ಸೆಳೆಯಲು, ಮನುಷ್ಯನನ್ನು ಓದಿಗೆ ಹಚ್ಚಲು ಪ್ರಯತ್ನಿಸುತ್ತಿರುವ ಈ ನೌಕೆಯ ನಡೆ ನಿಜಕ್ಕೂ ಶ್ಲಾಘನೀಯ. ನಾನು ಇತ್ತೀಚೆಗೆ ವಿಯಾಟ್ನಾಂಗೆ ಹೋದಾಗ ಹನಾಯ್ ಮತ್ತು ಹೊ ಚಿ ಮಿನ್ ಸಿಟಿಯಲ್ಲಿ ರುವ ಬುಕ್ ಸ್ಟ್ರೀಟ್‌ಗೆ ಹೋಗಿದ್ದೆ. ಅದೊಂದು ಬರೀ ಪುಸ್ತಕ ಮಳಿಗೆಗಳಿರುವ ರಸ್ತೆ. ಎರಡೂ ಕಡೆ ಸುಮಾರು 50ರಷ್ಟು
ಪುಸ್ತಕದ ಅಂಗಡಿ, ವಾಚನಾಲಯ ಬಿಟ್ಟರೆ, ದೃಷ್ಟಿ ಬೊಟ್ಟಿಗೆ ಅಂತಾದರೂ ಬೇರೆ ಒಂದೇ ಒಂದು ಅಂಗಡಿ ಕಾಣುವುದಿಲ್ಲ. ಆ ರಸ್ತೆಯಲ್ಲಿ ವಾಹನ ಸಂಚಾರ ನಿಷಿದ್ಧವಾದ್ದರಿಂದ ಆ ಪ್ರದೇಶ ಪ್ರದೂಷಣ ಮುಕ್ತ ವಾತಾವರಣ.

ಆದ್ದರಿಂದ ಸಾಕಷ್ಟು ಹೊರಾಂಗಣ ವಾಚನಾಲಯಗಳೂ ಇವೆ. ಮಳಿಗೆಗಳಲ್ಲಿ ಹಳೆಯ ಅಥವಾ ಹೊಸ ಪುಸ್ತಕಗಳನ್ನು ಕೊಂಡು ಕೊಳ್ಳಲು, ವಾಚನಾಲಯದಲ್ಲಿ ಅವರವರ ಇಷ್ಟದ ಪುಸ್ತಕ ಸಂಗಾತಿಯ ಜೊತೆಗೆ ಲಘು ಉಪಹಾರ ಸೇವಿಸಲು, ಚಹಾ, ಕಾಫಿ, ಹಣ್ಣಿನ ರಸ, ಸೋಮರಸ ಹೀರಲೂ ಅವಕಾಶವಿದೆ. ಈ ಕಾರಣಕ್ಕಾಗಿಯೋ ಏನೋ, ಇದು ಯಾತ್ರಿಗಳನ್ನಷ್ಟೇ ಅಲ್ಲದೆ, ಅಲ್ಲಿಯ ಪ್ರಜೆಗಳನ್ನೂ ಆಕರ್ಷಿಸುವ ತಾಣಗಳಲ್ಲಿ ಒಂದು. ಈ ಕಾರಣದಿಂದಾಗಿಯೇ ಪುಸ್ತಕ ಮಾರ್ಗ’ ನಮ್ಮ ದೇಶದಲ್ಲಿ ಮಾರ್ಗದ ಬದಿಯಲ್ಲಿರುವ ಪುಸ್ತಕದ ಮಳಿಗೆಗಳಿಗಿಂತ ಭಿನ್ನವಾಗಿ ಕಾಣುವುದು. ಈ ಮಾದರಿಯ ಪುಸ್ತಕ ಮಾರ್ಗಗಳು ಬೇರೆ ದೇಶಗಳಲ್ಲೂ ಇವೆ.

ಇತ್ತೀಚೆಗೆ ನನ್ನ ಹಳೆಯ ಮಿತ್ರರೊಬ್ಬರು ಸಿಕ್ಕಿದ್ದರು. ಅವರಿಗೆ ಲೋಗೋಸ್ ಹೋಪ್ ಹಡಗು ಮತ್ತು ಬುಕ್ ಸ್ಟ್ರೀಟ್‌ನ ವಿಷಯ ಹೇಳುತ್ತಿದ್ದೆ.  ‘ನಾನು ಶಾಲಾದಿನಗಳಲ್ಲಿ ಓದಿದ್ದೇ ಕೊನೆ, ಅದರ ನಂತರ ಪುಸ್ತಕ, ದಿನಪತ್ರಿಕೆ ಬಿಡಿ, ನನ್ನ ಆಧಾರ್ ಕಾರ್ಡನ್ನೂ
ಸರಿಯಾಗಿ ಓದಿಲ್ಲ’ಎಂದರು! ಅವರ ಬಗ್ಗೆ ಆಕ್ಷೇಪ ಎಂದಲ್ಲ, ಅಂಥವರು ನಮ್ಮಲ್ಲಿ ಅದೆಷ್ಟೋ ಜನ ಇzರೆ. ವಾರಕ್ಕೆ ಒಂದಾದರೂ ಪುಸ್ತಕ ಓದಲೇಬೇಕು ಎಂದು ಪಣತೊಟ್ಟವರೂ ಇದ್ಧಾರೆ. ಶಾಲಾ ಪಠ್ಯ ಪುಸ್ತಕದ ನಡುವೆ ಕಾದಂಬರಿ ಇಟ್ಟು ಓದಿದವರು, ಓದು ವವರು ಎಷ್ಟಿಲ್ಲ. ಸುಮ್ಮನೇ ಸಮಯ ಕಳೆಯಬೇಕೆಂದೆನಿಸಿದಾಗ ಇದಕ್ಕಿಂತ ಉತ್ತಮ ಸಾಧನ ಇನ್ನೊಂದಿಲ್ಲ. ಪ್ರಯಾಣದ ಸಂದರ್ಭದಲ್ಲಿ ಇದಕ್ಕಿಂತ ಉತ್ತಮ ಸಂಗಾತಿ ಮತ್ತೊಂದಿಲ್ಲ.

ಅದು ಪುಸ್ತಕದ ಘಮಲು, ಅಮಲು! ಒಮ್ಮೆ ಪುಸ್ತಕದ ಅಮಲು ಹತ್ತಿತೆಂದರೆ ಆಯಿತು, ಉಳಿದ ಎಲ್ಲಾ ಅಮಲು ಅದರ ಮುಂದೆ ಅನುಪಯುಕ್ತ, ಅಪ್ರಯೋಜಕ! ಪುಸ್ತಕ ಮತ್ತು ಓದು ಎಂದಾಗ ನನಗೆ ನೆನಪಾಗುವುದು ವಾರೆನ್ ಬಫೆಟ್. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಬ್ಬರಾದ ಅವರು ಈಗಲೂ ದಿನದ ಎಂಬತ್ತು ಪ್ರತಿಶತ ಸಮಯವನ್ನು ಪುಸ್ತಕದೊಂದಿಗೆ ಕಳೆಯುತ್ತಾರಂತೆ. ತನ್ನ ಉನ್ನತಿಗೆ ಪುಸ್ತಕಗಳೇ ಕಾರಣ ಎನ್ನುತ್ತಾರೆ ಬಫೆಟ್.

ಈ ಚರಾಚರ ಪ್ರಪಂಚದಲ್ಲಿ, ನಾಶವಾಗದೇ ಉಳಿಯುವ ವರ ಪಡೆದ ವಸ್ತುಗಳಲ್ಲಿ ಪುಸ್ತಕವೂ ಒಂದು ಎಂದರೆ ತಪ್ಪಾಗಲಾರದು. ಗ್ರಂಥಗಳಿಲ್ಲದಿದ್ದರೆ ದೇವರೂ ಮೂಕನಾಗುತ್ತಾನೆ, ವಿಜ್ಞಾನ ವಿಶ್ರಾಂತಿಗೆ ತೆರಳುತ್ತದೆ, ತಂತ್ರಜ್ಞಾನ ತಟಸ್ಥವಾಗುತ್ತದೆ, ಸಾಹಿತ್ಯ
ಸೊಣಕಲಾಗುತ್ತದೆ, ಕಲೆ ತನ್ನ ಕಳೆ ಕಳೆದುಕೊಳ್ಳುತ್ತದೆ, ಸಂಸ್ಕೃತಿ ಸೊರಗುತ್ತದೆ, ಕ್ರೀಡೆ ಬಡವಾಗುತ್ತದೆ, ಸಮಾಜ ಸಮತೋಲನ ಕಳೆದುಕೊಳ್ಳುತ್ತದೆ. ನಮ್ಮ ಕಾಲು ಅಡಿಸದೆ ನಮ್ಮನ್ನು ಲೋಕ ಸುತ್ತಿಸುವ ತ್ರಾಣವೇನಾದರೂ ಇದ್ದರೆ ಅದು ಪುಸ್ತಕಕ್ಕೆ ಮಾತ್ರ.
ಕೆಲವೇ ಗಂಟೆಗಳಲ್ಲಿ ಮನುಷ್ಯನ ಮನಸ್ಸಿನ ಮೇಲೆ ಪ್ರಭಾವ ಬೀರಿ ಬದುಕಿನ ದಿಕ್ಕು ಬದಲಾಯಿಸುವ ಶಕ್ತಿ ಪುಸ್ತಕಕ್ಕಿದೆ.

ಮನುಷ್ಯನನ್ನು ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಸಂಘಟಿಸುವ, ಒಗ್ಗೂಡಿಸುವ ಬಲ ಪುಸ್ತಕಕ್ಕಿದೆ. ಪುಸ್ತಕ ಯಾವುದೇ ವಿಷಯದ ಕುರಿತು ಕಳಕಳಿ ವ್ಯಕ್ತಪಡಿಸುವ ಪ್ರಬಲ ಮಾರ್ಗವೂ ಹೌದು. ಪುಸ್ತಕಗಳು ನಮ್ಮ ಜ್ಞಾನ ಭಂಡಾರ ತುಂಬಿಸಿಕೊಳ್ಳುವ ಕೀಲಿ ಕೈ. ಶತಮಾನಗಳಿಂದಲೂ ನಮಗೆ ನಾಗರಿಕತೆ, ಸಂಸ್ಕೃತಿಗಳನ್ನಷ್ಟೇ ಅಲ್ಲದೆ, ಹೆಜ್ಜೆ ಹೆಜ್ಜೆಗೂ ಜೀವನದ ಸಣ್ಣ ಸಣ್ಣ ಪಾಠಗಳನ್ನೂ ಹೇಳಿಕೊಡುವ ಗುರು. ಇದು ಬೇರೆ ಭಾಷೆ ಕಲಿಯಲು, ಹೊಸ ಭಾಷ್ಯ ಬರೆಯಲು ಕಲಿಸುತ್ತದೆ. ನಾವು ಯೋಚಿ ಸುವ, ವಿಶ್ಲೇಷಿಸುವ ಮತ್ತು ಮಾತನಾಡುವ ಪರಿಯನ್ನು ಬದಲಾಯಿಸುವ ಶಕ್ತಿ ಇದಕ್ಕಿದೆ.

ನಮ್ಮಲ್ಲಿ ಸೃಜನಶೀಲತೆ ಮತ್ತು ಕಲ್ಪನಾಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವೂ ಇದಕ್ಕಿದೆ. ಇದರ ಇನ್ನೊಂದು ವಿಶೇಷತೆ ಯೆಂದರೆ ಯಾವುದೇ ಜಾತಿ, ಧರ್ಮ, ಮತ, ಬಡವ, ಶ್ರೀಮಂತ, ಗಂಡು, ಹೆಣ್ಣು, ಬಾಲಕ, ವಯಸ್ಕ ಎಂಬ ಭೇದವಿಲ್ಲದೆ,  ಸಮಯದ ಪರಿಮಿತಿ ಇಲ್ಲದೇ ತನ್ನನ್ನು ಪ್ರೀತಿಸುವ ಯಾರ ಕೈಲಾದರೂ ಕುಳಿತಿರುತ್ತದೆ. ಮನುಷ್ಯನ ಮನದಲ್ಲಿ ಸುಪ್ತವಾಗಿ ಅಡಗಿರುವ ವಿಚಾರದ ಭ್ರೂಣವನ್ನು ಬೆಳೆಸುವ ಸಾಮರ್ಥ್ಯ ಪುಸ್ತಕಕ್ಕಿದೆ. ಹೊತ್ತು ಹೊತ್ತಿಗೆ ನಮ್ಮನ್ನು ತಿದ್ದಿ ತೀಡುವ ತಾಕತ್ತು ಹೊತ್ತಿಗೆಗೆ ಇದೆ. ಮನುಷ್ಯನನ್ನು ಹೆಚ್ಚು ಜಾಗರೂಕಗೊಳಿಸುವ, ಅವನಲ್ಲಿ ಅರಿವು ಮೂಡಿಸುವ ಆಳವು ಪುಸ್ತಕಕ್ಕಿದೆ.

ಪುಸ್ತಕಗಳು ಮನುಷ್ಯನಲ್ಲಿ ಜ್ಞಾನ ವರ್ಧನೆಯ ಜೊತೆಗೆ ಆತ್ಮ ಸ್ಥೆ ರ್ಯ ತುಂಬುತ್ತವೆ, ಶಬ್ದಕೋಶ ವೃದ್ಧಿಸಲು ಸಹಕರಿಸುತ್ತವೆ, ಮಾತಿನ ಓಘ ಹೆಚ್ಚಿಸಿಕೊಳ್ಳಲು ಸಹಾಯಮಾಡುತ್ತವೆ. ಅವು ನಮ್ಮನ್ನು ಪ್ರಪಂಚ ದೊಟ್ಟಿಗೆ ಸಂಪರ್ಕಿಸುವ ದ್ವಾರವಾಗಿಯೂ, ಜಗತ್ತನ್ನು ತೋರಿಸುವ ಕಿಟಕಿಗಳಾಗಿಯೂ, ಜನಸಾಮಾನ್ಯರ ನಡುವೆ ಸಂಪರ್ಕ ಸಾಧಿಸುವ ಸೇತುವಾಗಿಯೂ ಕಾರ್ಯನಿರ್ವ ಹಿಸುತ್ತವೆ. ಅವು ನಮ್ಮನ್ನು ನಾವಿರುವಲ್ಲಿಂದ ಒಂದು ಅಡಿ ಮುಂದಕ್ಕೆ ಕೊಂಡೊಯ್ಯುತ್ತವೆ, ಒಂದು ಸ್ಥಾಯಿ ಮೇಲಕ್ಕೆ ಏರಿಸು ತ್ತವೆ.

ವಿಶ್ವದಾದ್ಯಂತ ಇದುವರೆಗೆ 13 ಕೋಟಿಗಿಂತಲೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆಯಂತೆ. ಇತ್ತೀಚಿನ ವರ್ಷಗಳಲ್ಲಿ ಪ್ರತಿ ವರ್ಷ 22 ಲಕ್ಷ ಪುಸ್ತಕಗಳು ಪ್ರಪಂಚಕ್ಕೆ ಸೇರ್ಪಡೆಗೊಳ್ಳುತ್ತಿವೆ. ಒಬ್ಬ ಒಳ್ಳೆಯ ಓದುಗ ತನ್ನ ಪೂರ್ಣ ಜೀವಿತಾವಧಿಯಲ್ಲಿ ಹೆಚ್ಚೆಂದರೆ
ಆರು ಸಾವಿರ ಪುಸ್ತಕ ಓದುತ್ತಾನಂತೆ. ಒಬ್ಬ ಸಾಮಾನ್ಯ ಓದುಗ ಐದು ನೂರು ಪುಸ್ತಕಗಳನ್ನು ಓದುತ್ತಾನಂತೆ. ಹಾಗಂತ ನಾವು ಓದಿದ ಎಲ್ಲವನ್ನೂ ನೆನಪಿಡಲೂ ಸಾಧ್ಯವಿಲ್ಲ, ಎಲ್ಲ ಪುಸ್ತಕಗಳೂ ನಮ್ಮ ಮೇಲೆ ಪ್ರಭಾವ ಬೀರುವುದೂ ಇಲ್ಲ, ಆಪ್ತವೂ ಆಗುವುದಿಲ್ಲ.

ಪುಸ್ತಕಗಳು ಮನುಷ್ಯರಂತೆಯೇ; ನಾವು ಪ್ರತಿನಿತ್ಯ ಎಷ್ಟೋ ಜನರನ್ನು ಭೇಟಿಯಾಗುತ್ತೇವೆ, ಅವರಲ್ಲಿ ಕೆಲವರು ಮಾತ್ರ ನಮ್ಮ ಮೇಲೆ ಪ್ರಭಾವ ಬೀರುತ್ತಾರೆ, ಕೆಲವರೊಂದಿಗ ಮಾತ್ರ ಮಿತ್ರತ್ವ ಬೆಳೆಯುತ್ತದೆ, ಕೆಲವರು ಮಾತ್ರ ಹೃದಯಕ್ಕೆ ಹತ್ತಿರವಾಗುತ್ತಾರಲ್ಲ,
ಹಾಗೆ. ಆದರೆ ಒಳ್ಳೆಯ ಪುಸ್ತಕದ ವಿಚಾರಗಳು ನಮ್ಮ ಜೀವನದ ಕೊನೆಯ ಕ್ಷಣದವರೆಗೂ ನಮ್ಮ ಜೊತೆಗಿರುತ್ತವೆ.

ನಮ್ಮ ದೇಶದಲ್ಲಿ ಸುಮಾರು 55 ಸಾವಿರ ವಾಚನಾಲಯಗಳಿವೆ ಎಂದು ಅಂಕಿ ಅಂಶ ಹೇಳುತ್ತದೆ. ಕೊಲ್ಕತ್ತಾದಲ್ಲಿರುವ 185 ವರ್ಷ ಹಳೆಯ ನ್ಯಾಷನಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ 22 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿವೆ ಎಂದರೆ ಆಶ್ಚರ್ಯಪಡಬೇಕಿಲ್ಲ. ಒಬ್ಬ ವ್ಯಕ್ತಿ ಲೋಕದ ಆಗುಹೋಗುಗಳನ್ನು ತಿಳಿದು ಕೊಳ್ಳಲು, ತಾನು ಬದುಕುತ್ತಿರುವ ಪ್ರಪಂಚದೊಳಗೆ ಒಬ್ಬನಾಗಿ ಹೊಂದಿಕೊಂಡಿ ರಲು ವರ್ಷಕ್ಕೆ ಎರಡು ಸಾವಿರ ಪುಟಗಳನ್ನಾದರೂ ಓದಬೇಕು ಎನ್ನುವುದು ತಜ್ಞರ ಅಭಿಪ್ರಾಯ.

ಭಾರತದಂಥ ದೇಶದಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ ಸರಾಸರಿ 30 ಪುಟಗಳಷ್ಟು ಮಾತ್ರ ಓದುತ್ತಾನಂತೆ. ಶಾಲೆ ಕಾಲೇಜಿನ ದಿನಗಳಲ್ಲಿ ಅನಿವಾರ್ಯವಾಗಿ ಓದಿ, ನಂತರದ ದಿನಗಳಲ್ಲಿ ಒಂದೇ ಒಂದು ಪುಸ್ತಕ ಓದದೇ ಜೀವನ ಪೂರ್ತಿ ಕಳೆಯುವ ಜನ ಎಷ್ಟಿಲ್ಲ?
ಜ್ಞಾನಾರ್ಜನೆಗಾಗಿ, ಹವ್ಯಾಸಕ್ಕಾಗಿ ಓದುವವರ ಸಂಖ್ಯೆ ಕಮ್ಮಿ ಎಂದರೆ ತಪ್ಪಾಗಲಿಕ್ಕಿಲ್ಲ. ನಮ್ಮ ದೇಶದಲ್ಲಿ 16 ಸಾವಿರಕ್ಕೂ ಹೆಚ್ಚು ಪ್ರಕಾಶಕರಿದ್ದಾರೆ. ಪ್ರತಿ ವರ್ಷ ಸುಮಾರು 75 ಸಾವಿರಕ್ಕೂ ಹೆಚ್ಚು ಶೀರ್ಷಿಕೆಯ ಪುಸ್ತಕಗಳು ಪ್ರಕಟಗೊಳ್ಳುತ್ತವೆ. ವಿಶ್ವದ ಪ್ರಮುಖ  ರಾಷ್ಟ್ರಗಳಿಗೆ ಪುಸ್ತಕ ರಫ್ತು ಮಾಡುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಕಳೆದ ಹತ್ತು ವರ್ಷಗಳಿಂದ ನಮ್ಮ ದೇಶ ಪುಸ್ತಕ ಪ್ರಕಟಣೆಯಲ್ಲಿ ವಿಶ್ವದಲ್ಲಿ ಆರನೆಯ ಸ್ಥಾನದಲ್ಲಿದೆ.

ಆದರೆ ಕೊರತೆಯಿರುವುದು ಭಾರತದ ಓದುಗರ ಸಂಖ್ಯೆಯಲ್ಲಿ. ಜನ ಸಾಮಾನ್ಯರಲ್ಲಿ ಓದಿನ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ 54 ವರ್ಷಗಳ ಇತಿಹಾಸವಿರುವ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಕಳೆದ 32 ವರ್ಷಗಳಿಂದ ನವೆಂಬರ್ 14 ರಿಂದ 20 ರವರೆಗೆ ಪುಸ್ತಕ ಸಪ್ತಾಹ ಏರ್ಪಡಿಸುತ್ತಿದೆ ಎಂಬ ವಿಷಯ ಎಷ್ಟು ಜನರಿಗೆ ತಿಳಿದಿದೆ, ಹೇಳಿ!

ಈ ವರ್ಷವೆಂತೂ ಕಳೆಯಿತು, ಮುಂದಿನ ವರ್ಷದಿಂದಾದರೂ ಪುಸ್ತಕ ಸಪ್ತಾಹದಲ್ಲಿ ಒಂದಾದರೂ ಪುಸ್ತಕಕೊಳ್ಳುವ ಪಣ
ತೊಡೋಣ ಅಲ್ಲವೇ?