ನೂರೆಂಟು ವಿಶ್ವ
ಕೆಲವು ತಿಂಗಳ ಹಿಂದೆ, ವಿಜಯಪುರದಿಂದ ಓದುಗ ಮಿತ್ರರಾದ ರೇವಣ್ಣಸಿದ್ದ ಪೂಜಾರಿ ಫೇಸ್ಬುಕ್ ಮೆಸೆಂಜರ್‌ನಲ್ಲಿ ಒಂದು ಸಂದೇಶ ಕಳಿಸಿದ್ದರು- ‘ನನಗೆ ರಿಚರ್ಡ್ ಬ್ರಾನ್‌ಸನ್‌ನ ಹುಚ್ಚು ಹಿಡಿಸಿದವರು ನೀವು. ನಮಗೆ ಆತನ ಪರಿಚಯವೇ ಇರಲಿಲ್ಲ. ಹೆಸರೂ ಕೇಳಿರಲಿಲ್ಲ. ‘ವಿಜಯ ಕರ್ನಾಟಕ’ ಹಾಗೂ ‘ಕನ್ನಡಪ್ರಭ’ದಲ್ಲಿ ಅವನ ಬಗ್ಗೆ ನಿರಂತರವಾಗಿ ಬರೆದಿರಿ. ಆನಂತರ ಅವನ್ನೆಲ್ಲ ಸೇರಿಸಿ ಪುಸ್ತಕ ಸಂಗ್ರಹಿಸಿ ಕೊಟ್ಟಿರಿ. ನಾನು ಬ್ರಾನ್‌ಸನ್‌ನ ಬದುಕು, ವಿಚಾರ ಹಾಗೂ ಸಾಧನೆಗಳಿಂದ
ಅತೀವ ಪ್ರಭಾವಿತನಾದವನು. ಒಬ್ಬ ವ್ಯಕ್ತಿ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾ ಎಂದು ಬೆರಗಾಗಿದ್ದೇನೆ.
ವಿಷಯ ಇಷ್ಟೇ. ನಾನು ನಮ್ಮೂರಿನಲ್ಲಿ ಪಿಯುಸಿ ವಿಜ್ಞಾನ ಕಾಲೇಜನ್ನು ಆರಂಭಿಸಬೇಕು ಎಂದಿದ್ದೇನೆ. ಈ ಕಾಲೇಜಿಗೆ ‘ರಿಚರ್ಡ್ ಬ್ರಾನ್‌ಸನ್ ಪಿಯು ಸೈನ್ಸ್ ಕಾಲೇಜ್’ ಎಂಬ ಹೆಸರಿಡಬೇಕು ಅಂತ ನಿರ್ಧರಿಸಿದ್ದೇನೆ. ಇದಕ್ಕೆ ಬ್ರಾನ್‌ಸನ್ ಅವರ ಅನುಮತಿ ಪಡೆಯಬೇಕಾ? ಒಪ್ಪಿಗೆ ಪಡೆಯುವುದು ಅಗತ್ಯವಾದರೆ
ನನಗೆ ನೀವು ಹೇಗೆ ಸಹಾಯ ಮಾಡುತ್ತೀರಿ?’ ನಾನು ಪೂಜಾರಿ ಅವರಿಗೆ ‘ಬ್ರಾನ್‌ಸನ್ ಹೆಸರಿಡಲು ಅವರ ಅನುಮತಿಯೇನೂ ಅಗತ್ಯವಿಲ್ಲ.
ಗಾಂಧಿ, ಪಟೇಲ್, ಕೆಂಪೇಗೌಡ, ವಿಶ್ವೇಶ್ವರಯ್ಯನವರನ್ನು ಕೇಳಿ ಸಂಸ್ಥೆಗೆ, ರಸ್ತೆಗೆ ಹೆಸರಿಟ್ಟಿದ್ದಾರಾ? ಚಿಕ್ಕಪೇಟೆಯಲ್ಲಿ ಹೇಮಾಮಾಲಿನಿ ಹೇರ್ ಕಟಿಂಗ್ ಸಲೂನ್ ಅಂತಿದೆ. ಆ ನಟಿಯ ಪರ್ಮಿಶನ್ ತೆಗೆದುಕೊಂಡು ಆ ಹೆಸರು ಇಟ್ಟಿರಲಾರರು. ನಿಮ್ಮ ಕಾಲೇಜಿಗೆ ಬ್ರಾನ್‌ಸನ್ ಹೆಸರಿಡಿ, ಪರವಾಗಿಲ್ಲ’ ಎಂದು ಉತ್ತರ ಬರೆದೆ.
ಪೂಜಾರಿಯವರು ಈಗ ತಮ್ಮ ಕನಸಿನ ಕಾಲೇಜಿಗೆ ಬ್ರಾನ್‌ಸನ್ ಹೆಸರಿಡಲು ನಿರ್ಧರಿಸಿದ್ದಾರೆ. ಮೂರು ತಿಂಗಳ ಹಿಂದೆ ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿ ಹೋಗುವಾಗ, ನನ್ನ ಕಾರಿನ ಮುಂದಿನ ಕಾರಿನ ಹಿಂಬದಿಯ ಗ್ಲಾಸಿನ ಮೇಲೆ ’ಐ ಔಟqಛಿ ಜ್ಚಿeZb ಆZoಟ್ಞ’ ಎಂದು ಬರೆದಿತ್ತು. ಕುತೂಹಲದಿಂದ, ಆ ಕಾರಿ ನೊಳಗಿದ್ದವರನ್ನು ಮಾತಾಡಿಸಲು ಇಳಿದು ಹೋದೆ.
ಟ್ರಾಫಿಕ್ ಜಾಮ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ‘ನಿಮ್ಮ ಕಾರಿನ ಹಿಂದೆ ಹಾಗೇಕೆ ಬರೆಯಿಸಿಕೊಂಡಿದ್ದೀರಿ?’ ಎಂದು ಕೇಳಿದೆ. ‘ಸರ್, ನನಗೆ ಗೊತ್ತಿಲ್ಲ, ನಮ್ಮ ಯಜಮಾನರನ್ನು ಕೇಳಿ’ ಎಂದ ಡ್ರೈವರ್. ‘ನಿಮ್ಮ ಯಜಮಾನರ ಹೆಸರೇನು? ಅವರ ನಂಬರ್ ಏನು? ಪ್ಲೀಸ್ ಹೇಳಿ’ ಎಂದೆ. ಆತ ಕೊಟ್ಟ. ಆ ಆಡಿ ಕಾರಿನ ಯಜಮಾನನ ಹೆಸರು ನಂದಕುಮಾರ್ ಅಂತ. ಅವರಿಗೆ ಫೋನ್ ಮಾಡಿ, ನನ್ನ ಹೆಸರು ಹೇಳಿ ಪರಿಚಯಿಸಿಕೊಂಡೆ. ಮುಂದೆ ಅವರು ನನಗೆ ಮಾತಾಡಲು ಅವಕಾಶವನ್ನೇ ಕೊಡಲಿಲ್ಲ.
‘ನೀವೇಕೆ ಕಾರಿನ ಹಿಂದೆ ಹಾಗೆ ಬರೆಯಿಸಿಕೊಂಡಿದ್ದೀರಿ?’ ಎಂದು ಕೇಳಬೇಕೆಂದಿದ್ದೆ. ಆ ಪ್ರಶ್ನೆ ಕೇಳುವ ಮೊದಲೇ ನಂದಕುಮಾರ್ ಅವರು, ಎಲ್ಲವನ್ನೂ
ಪಟಪಟನೆ ಹೇಳಿ ಬಿಟ್ಟರು. ‘ನೀವು ಬ್ರಾನ್‌ಸನ್ ಬಗ್ಗೆ ಬರೆದ ಪುಸ್ತಕವನ್ನು ಯಾರೋ ಕೊಟ್ಟರು. ಬಹಳ ಇಂಪ್ರೆಸ್ ಆದೆ. ಆ ನಂತರ ಅವನ ಕುರಿತಾದ ಎಲ್ಲ ಪುಸ್ತಕಗಳನ್ನು ಓದಿದೆ. ನಾನೂ ಬ್ರಾನ್‌ಸನ್‌ನಂತೆ ಬದುಕಬೇಕೆಂದು ನಿರ್ಧರಿಸಿದೆ. ನನ್ನಲ್ಲಿರುವಂಥ ತಿಕ್ಕಲತನವನ್ನು ಬ್ರಾನ್‌ಸನ್‌ನಲ್ಲೂ ಕಂಡೆ. ಸಮಾನಮನಸ್ಕ ಸ್ನೇಹಿತರನ್ನೆಲ್ಲ ಸೇರಿಸಿ ‘ಬ್ರಾನ್‌ಸನ್ ಕ್ಲಬ್’ ಹುಟ್ಟುಹಾಕಿದೆ. ತಿಂಗಳಿಗೊಮ್ಮೆ ನಾವು ೨೧ ಮಂದಿ ಗೆಳೆಯರು ಸೇರುತ್ತೇವೆ. ನಮ್ಮದೊಂದು ವಾಟ್ಸ್ಯಾಪ್ ಗ್ರೂಪ್ ಇದೆ. ದೊಡ್ಡಾಲದ ಮರದ ಹತ್ತಿರ ನನ್ನದೊಂದು ಫಾರಂ ಹೌಸ್ ಇದೆ. ಇದಕ್ಕೆ ‘ಬ್ರಾನ್‌ಸನ್ ಬ್ಯಾನಿಯನ್ ಫಾರ್ಮ್’ ಎಂದು ಹೆಸರಿಟ್ಟಿದ್ದೇನೆ. ಅಷ್ಟೇ ಅಲ್ಲ, ಮೂರಡಿ ಎತ್ತರದ ಬ್ರಾನ್‌ಸನ್ ಪುತ್ಥಳಿಯನ್ನೂ ನಿಲ್ಲಿಸಿದ್ದೇನೆ.
ನೀವು ಅವಶ್ಯ ಬರಬೇಕು’ ಎಂದು ನಂದಕುಮಾರ್ ಒಂದೇ ಉಸಿರಿಗೆ ಎಲ್ಲ ವಿವರಗಳನ್ನೂ ಸಮರ್ಪಿಸಿದರು. ಒಂದೇ ಸಮನೆ ಅವರು ತಮ್ಮ ಫಾರ್ಮ್‌ಗೆ
ಕರೆಯುತ್ತಿದ್ದಾರೆ, ಹೋಗಿ ಬರಬೇಕು. ಇದು ಬ್ರಾನ್‌ಸನ್ ಹತ್ತಿಸಿದ ಹುಚ್ಚು. ನಾನು ಬರೆದ ‘ರಿಚರ್ಡ್ ಬ್ರಾನ್‌ಸನ್ ವರ್ಜಿನಲ್ ವಿಚಾರಗಳು’ ಪುಸ್ತಕದ ಎಂಟು ಸಾವಿರಕ್ಕಿಂತ ಹೆಚ್ಚು ಪ್ರತಿಗಳು ಖರ್ಚಾಗಿವೆ. ಈಗಲೂ ಪ್ರತಿದಿನ ಒಂದಿಬ್ಬರಾದರೂ ‘ಸರ್, ನೀವು ಬ್ರಾನ್‌ಸನ್ ಬಗ್ಗೆ ಏಕೆ ಬರೆಯುತ್ತಿಲ್ಲ? ಬರೆಯದೇ ಬಹಳ ದಿನಗಳಾದವು. ಆಗಾಗ ಬರೆಯುತ್ತಿರಿ’ ಎಂದು ವರಾತ ಹಚ್ಚಿಕೊಳ್ಳುತ್ತಾರೆ. ಕೆಲವರು ತಮ್ಮ ಹೆಸರಿನೊಂದಿಗೆ ಆತನ ಹೆಸರನ್ನೂ ಸೇರಿಸಿಕೊಂಡಿದ್ದಾರೆ.
ನ್ಯೂ ಹಾಲಂಡ್ ಇಂಡಿಯಾದಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಭೂಷಣ್ ಎನ್ನುವವರು ಭೂಷಣ್ ಬ್ರಾನ್‌ಸನ್ (ಟ್ವಿಟರ್ ಹ್ಯಾಂಡಲ್ ಃಞ್ಛ೫೨೪೫mb) ಎಂದೇ ಹೆಸರು ಇಟ್ಟುಕೊಂಡಿದ್ದಾರೆ. ಮಂಡ್ಯದ ರವಿಪ್ರಸಾದ್ ಸಹ ರವಿ ಬ್ರಾನ್‌ಸನ್ ಗೌಡ ಎಂದು ಹೆಸರನ್ನು ಅಧಿಕೃತವಾಗಿ ಬದಲಿಸಿ ಕೊಂಡಿದ್ದಾರೆ. ನಾವು ಬರೆಯುವ ಕೆಲವು ಲೇಖನಗಳು ಯಾರದೋ ಜೀವನದ ಪುಟಗಳನ್ನು ಬದಲಿಸುತ್ತಿರುತ್ತದೆಂಬುದೇ ಸಮಾಧಾನ. ಯಾವುದೇ ಕಾಲಘಟ್ಟ ದಲ್ಲಿ ಸಾಧನೆಗೈದು ತೀರಿಹೋದ, ಗತಿಸಿಹೋದ ಸಾಧಕರ ಬಗ್ಗೆ ಬರೆಯುವುದಕ್ಕಿಂತ ನಮ್ಮ ಮುಂದೆಯೇ ಸಾಧನೆಯ ಶಿಖರವೇರಿದವರ ಕುರಿತು ಬರೆಯುವುದು, ಓದುಗರಿಗೆ ತಿಳಿಸುವುದು ಹೆಚ್ಚು ಸಾರ್ಥಕವಾದುದು.
ಇದೊಂಥರಾ ಆಟೋಬಯಾಗ್ರಫಿಕಲ್ ಲೈವ್ ಕಾಮೆಂಟರಿ ಹೇಳಿದಂತೆ. ಬ್ರಾನ್‌ಸನ್ ನಂತರ ಅಂಥದೇ ಪರಮಸಾಹಸಿಯ ಬಗ್ಗೆ ಮನಸ್ಸು ಹುಡುಕಾಟ ನಡೆಸಿತ್ತು. ಸಮಸ್ಯೆಯೇನೆಂದರೆ, ಬ್ರಾನ್‌ಸನ್‌ಗೆ ಅವನೇ ಹೋಲಿಕೆ, ಸಾಟಿ. ಹಣ ಗಳಿಸಿದವರು, ಶ್ರೀಮಂತರಾದವರು ತಮ್ಮ ಸುತ್ತ ಕೋಟೆ ಕಟ್ಟಿಕೊಳ್ಳುತ್ತಾರೆ. ಅವರಿಗೆ ಅಭದ್ರತೆ, ಅನಿಶ್ಚಿತತೆ ಕಾಡಲಾರಂಭಿಸುತ್ತದೆ. ಹೀಗಾಗಿ ಅವರು ಅತೀವ ಜಾಗರೂಕರಾಗುತ್ತಾರೆ. ಅಂಥವರ‍್ಯಾರೂ ವಿಮಾನದಿಂದಾಗಲಿ, ಪ್ಯಾರಾಶೂಟ್ ನಿಂದಾಗಲಿ ಜಿಗಿಯುವುದಿಲ್ಲ. ಹಾಟ್ ಏರ್ ಬಲೂನ್‌ನಲ್ಲಿ ಜಗತ್ತು ಸಂಚಾರ ಮಾಡುವುದಿಲ್ಲ. ಶಾರ್ಕ್ ಜತೆ ಈಜಲು ಮುಂದಾಗುವುದಿಲ್ಲ. ಬ್ರಾನ್‌ಸನ್ ಗ್ರೇಟ್ ಅಂತ ಅನಿಸಿಕೊಳ್ಳುವುದೇ ಅದಕ್ಕೆ. ಇಂಥ ಮತ್ತೊಬ್ಬ ಪರಮಸಾಹಸಿ, ತಿಕ್ಕಲ ಹುಡುಕಿದರೂ ಸಿಗಲಾರ.
ಇರಲಿ. ಕಳೆದ ಕೆಲವು ದಿನಗಳಿಂದ ನಾನು ಜಾಕ್ ಮಾ ಅವರಿಗೆ ಸಂಬಂಧಿಸಿದ ಕೆಲವು ಕೃತಿಗಳನ್ನು ಓದುತ್ತಿದ್ದೆ. ಅಮೆಜಾನ್‌ನಲ್ಲಿ ಕೆಲಸ ಮಾಡುವ ಸ್ವಾತಿ ರಾವ್ ಅವರು ನನಗೆ ಮಾ ಕುರಿತ ಕೃತಿಗಳನ್ನು ಓದಿಸಿದರು. ಅವರ ಕುರಿತ ಸ್ವಾರಸ್ಯಕರ ಲೇಖನಗಳ ಲಿಂಕ್‌ಗಳನ್ನು ಕಳುಹಿಸುತ್ತಾ, ಅವರಲ್ಲಿ ನನಗೆ ಆಸಕ್ತಿ ಮೂಡುವಂತೆ ಮಾಡಿದರು. ಅಲಿಬಾಬಾ ಎಂಬ ಇ-ಕಾಮರ್ಸ್ ಅಥವಾ ಆನ್‌ಲೈನ್ ಉದ್ದಿಮೆಯ ಸಂಸ್ಥಾಪಕ, ‘ಫೋರ್ಬ್ಸ್’ ಶ್ರೀಮಂತರ ಪಟ್ಟಿಯಲ್ಲಿ ಜಾಗ ಗಿಟ್ಟಿಸಿದವ,ನೂರಾರು ಶತಕೋಟಿ ಡಾಲರ್ ಸಾಮ್ರಾಜ್ಯದ ಧಣಿ… ಇವಿಷ್ಟೇ ಆಗಿದ್ದಿದ್ದರೆ ಜಾಕ್ ಮಾ ಬಗ್ಗೆ ಖಂಡಿತವಾಗಿಯೂ ಬರೆಯುತ್ತಿರಲಿಲ್ಲ. ಶ್ರೀಮಂತರ ಅದ್ಭುತ ಲೋಕವನರಿತು ನಾವೇನು ಮಾಡುವುದು? ಅವರ ಸಂಪತ್ತಿನ ಗುಣಗಾನ ಮಾಡುವುದರಿಂದ ನಮಗೇನು ಪ್ರಯೋಜನ? ನಾವು ಅವರನ್ನು ದೊಡ್ಡವರನ್ನಾಗಿ ಮಾಡುತ್ತೇವೆಯೇ ಶಿವಾಯ್, ಅದರಿಂದ ನಮಗೆ ದಮಡಿ ಉಪಯೋಗವೂ ಇಲ್ಲ.
ಆದರೆ ಜಾಕ್ ಮಾ ಹಾಗಲ್ಲ. ಆತ ನಮ್ಮ-ನಿಮ್ಮ ಹಾಗೆ ಸಾಮಾನ್ಯರಲ್ಲಿ ಸಾಮಾನ್ಯ. ಚೀನಾದ ಕೆಳಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದವ. ತುತ್ತಿಗೆ ತತ್ವಾರವಿಲ್ಲದ, ತಲುಬಿಗೆ ತಾರಾಮಾರಾ ತ್ರಾಸು ಪಡಬೇಕಾದ ಕುಟುಂಬದಲ್ಲಿ ಬೆಳೆದವ. ಯಾವುದೂ ಸುಲಭಕ್ಕೆ ಸಿಗುತ್ತಿರಲಿಲ್ಲ. ಎಲ್ಲವನ್ನೂ ಶ್ರಮಪಟ್ಟು ಗಿಟ್ಟಿಸಿಕೊಳ್ಳಬೇಕಾಗಿತ್ತು. ಮೂಲತಃ ಜಾಕ್ ಮಾ ತುಸು ಪೆದ್ದ ವಿದ್ಯಾರ್ಥಿ. ಒಂದು ಸಲ ಓದಿದರೆ ಯಾವುದೂ ತಲೆಗೆ ಹೋಗುತ್ತಿರಲಿಲ್ಲ. ಮಿಡ್ಲ್ ಸ್ಕೂಲ್ ಪ್ರವೇಶಕ್ಕೆ ಬರೆದ ಎರಡು ಪರೀಕ್ಷೆಗಳಲ್ಲೂ ಫೇಲ್.
ಪ್ರೈಮರಿ ಸ್ಕೂಲ್‌ನಲ್ಲೂ ಎರಡೆರಡು ಸಲ ಡುಮ್ಕಿ ಹೊಡೆದಿದ್ದ. ಕಾಲೇಜಿನ ಎಂಟ್ರನ್ಸ್ ಪರೀಕ್ಷೆಯಲ್ಲಿ ಎರಡೆರಡು ಸಲ ನಪಾಸು. ಪ್ರೈಮರಿ ಸ್ಕೂಲ್‌ನಲ್ಲಿ ಓದುವಾಗ ಎರಡು ತಿಂಗಳು ಶಾಲೆಗೆ ಹೋಗದೇ ಸ್ಕೂಲು ಬಿಡಲು ನಿರ್ಧರಿಸಿದ್ದ. ಕಾಲೇಜಿನಲ್ಲಿ ಓದುವಾಗಲೂ ಇದೇ ಮನಸ್ಥಿತಿಯಲ್ಲಿದ್ದ. ಆತ ಡಿಗ್ರಿ ಮುಗಿಸಿದ್ದು ಇಂದಿಗೂ ಅವನಿಗೇ ನಂಬಲು ಆಗದ ಸಂಗತಿ. ಜಾಕ್ ಮಾಗೆ ಇಂಗ್ಲಿಷ್ ಕಲಿಯಬೇಕು ಅನಿಸಿತು. ಆದರೆ ಆ ದಿನಗಳಲ್ಲಿ ಚೀನಾದಲ್ಲಿ ಇಂಗ್ಲಿಷ್‌ನ್ನು ಶಾಲೆಯಲ್ಲಿ ಕಲಿಸು ತ್ತಿರಲಿಲ್ಲ. ಪ್ರತ್ಯೇಕವಾಗಿ ಕೋಚಿಂಗ್ ಕ್ಲಾಸ್‌ನಲ್ಲಿ ಕಲಿಯಬೇಕಾಗುತ್ತಿತ್ತು. ಅದಕ್ಕೆ ಸಾಕಷ್ಟು ಫೀಜು ಪೀಕಬೇಕಾಗುತ್ತಿತ್ತು.
ಜಾಕ್ ಮಾ ಬೆಳಗ್ಗೆ ಐದು ಗಂಟೆಗೆ ಎದ್ದು ಊರಿನ ಪ್ರೇಕ್ಷಣೀಯ ಸ್ಥಳಗಳ ಹತ್ತಿರ ಹೋಗಿ ಸೈಕಲ್ ತುಳಿದುಕೊಂಡು ಬಂದು ನಿಲ್ಲುತ್ತಿದ್ದ. ಅಲ್ಲಿಗೆ ವಿದೇಶಿ ಪ್ರವಾಸಿಗರು ಬರುತ್ತಿದ್ದರು. ‘ನಿಮಗೆ ನಾನು ಊರು ತೋರಿಸುತ್ತೇನೆ, ನೀವು ನನಗೆ ಇಂಗ್ಲಿಷ್ ಕಲಿಸಿ’ ಎಂದು ದುಂಬಾಲು ಬೀಳುತ್ತಿದ್ದ. ಮೂರ್ನಾಲ್ಕು ವರ್ಷಗಳಲ್ಲಿ ಮಾತಾಡುವಷ್ಟು ಇಂಗ್ಲಿಷನ್ನು ಕಲಿತುಕೊಂಡ. ಇದೇ ಅವನ ಜೀವನದ ಪಥ ಬದಲಿಸಿತು. ಮುಂದೆ ಆತ ಇಂಗ್ಲಿಷ್ ಮೇಷ್ಟ್ರಾಗಲು ಸಹ ಇದು ಸಹಾಯಕವಾಯಿತು.
ಜಾಕ್ ಮಾಗೆ ಓದಿದ್ದು ತಲೆಗೆ ಹತ್ತುತ್ತಿರಲಿಲ್ಲ. ಗಣಿತದಲ್ಲಿ ಆತ ಒಂದನೇ ಪ್ರಯತ್ನದಲ್ಲಿ ಎಂದೂ ಪಾಸಾಗಿದ್ದೇ ಇಲ್ಲ.
ಒಮ್ಮೆಯಂತೂ ಗಣಿತದಲ್ಲಿ ೧೫೦ಕ್ಕೆ ಒಂದು ಅಂಕ ಬಂದಿತ್ತು. ಇನ್ನೊಮ್ಮೆ ಗಣಿತದಲ್ಲಿ ನಾಲ್ಕು ಸಲ ಫೇಲಾಗಿದ್ದ. ಇನ್ನೊಂದು ಸಲ ಫೇಲಾಗಿದ್ದರೆ ಶಾಲೆ ಬಿಡಬೇಕೆಂದು ನಿರ್ಧರಿಸಿದ್ದ. ಕಾಲೇಜು ಮುಗಿದ ಬಳಿಕ ಹಾರ್ವರ್ಡ್‌ನಲ್ಲಿ ಓದಬೇಕೆಂಬುದು ಜಾಕ್ ಮಾ ಆಸೆಯಾಗಿತ್ತು. ಅದಕ್ಕಾಗಿ ಹತ್ತು ಸಲ ಪರೀಕ್ಷೆ ಬರೆದ. ಆದರೆ ತೇರ್ಗಡೆಯಾಗಲಿಲ್ಲ. ಅಮೆರಿಕದ ಉಳಿದ ಮೂರು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪರೀಕ್ಷೆಗೆ ಕುಳಿತ. ಆತನ ಅಂಕ ನೋಡಿ, ಯಾರೂ ಅವನಿಗೆ ಸೀಟು
ಕೊಡಲಿಲ್ಲ. ಬೇರೆ ದಾರಿ ಕಾಣದೇ, ಹೊಟ್ಟೆಪಾಡಿಗಾಗಿ ಇಂಗ್ಲಿಷ್ ಮೇಷ್ಟ್ರಾದ.
ಹಾಗೆಂದು ಅವನಿಗೆ ಮಾಸ್ತರಿಕೆಯಲ್ಲಿ ಆಸಕ್ತಿಯಿರಲಿಲ್ಲ. ಆದರೆ ಕೈಗೆ ಸಿಕ್ಕಿದ ಕೆಲಸವನ್ನು ಬಿಡುವ ಧೈರ್ಯವಿರಲಿಲ್ಲ. ಈ ಕೆಲಸದ ನಡುವೆಯೇ ಏನಿಲ್ಲವೆಂದರೂ ಸುಮಾರು ಮೂವತ್ತು ಕಂಪನಿಗಳಲ್ಲಿ ಉದ್ಯೋಗವನ್ನು ಅರಸಿ ಅರ್ಜಿ ಹಾಕಿದ. ಸಂದರ್ಶನ ಎದುರಿಸಿದ. ಆತನ ನಸೀಬು ಅದೆಷ್ಟು ಖರಾಬ್ ಆಗಿತ್ತೆಂದರೆ ಒಂದೇ ಒಂದು ಕಂಪನಿಯೂ ನೌಕರಿ ಕೊಡಲಿಲ್ಲ. ಕೆಂಟುಕಿ ಫುಡ್ ಚಿಕನ್(ಕೆಎಫ್ ಸಿ) ಮೊದಲ ಬಾರಿಗೆ ಜಾಕ್ ಮಾ ಊರಿನಲ್ಲಿ ಅಂಗಡಿ ತೆರೆದಾಗ ಅರ್ಹ ಅಭ್ಯರ್ಥಿಗಳಿಗೆ ನೌಕರಿ ಪ್ರಕಟಣೆ ನೀಡಿತ್ತು. ಅಂತಿಮವಾಗಿ ೨೪ ಮಂದಿಯನ್ನು ಆರಿಸಿತು. ಆ ಪೈಕಿ ಜಾಕ್ ಮಾ ಕೂಡ ಸೇರಿದ್ದ.
ಕಟ್ಟಕಡೆಗೆ ೨೩ ಮಂದಿಯನ್ನು ಆರಿಸಿ ನೌಕರಿ ಕೊಟ್ಟಿತು, ಜಾಕ್ ಮಾ ಹೊರತಾಗಿ! ಅದಕ್ಕೆ ಕಾರಣ ಮಾಗೆ ಲೆಕ್ಕ ಬರುವುದಿಲ್ಲ ಹಾಗೂ ನೋಡಲು ಚೆಂದವಿಲ್ಲ.
ಯಾವುದೇ ಉದ್ಯೋಗಕ್ಕೆ ಅರ್ಜಿ ಹಾಕಲಿ, ಯಾವುದೇ ಹೊಸ ಸಾಹಸಕ್ಕೆ ಕೈ ಹಾಕಲಿ, ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲು ನೀರು ಎಂಬಂತೆ ಅವನಿಗೆ ದೈಡಾಗುತ್ತಿರಲಿಲ್ಲ. ಎಲ್ಲೆಡೆಯೂ ಸೋಲು, ಅವಮಾನ. ಜಾಕ್ ಮಾ ಬಂದರೆ ಅನಿಷ್ಟ ಎಂದು ಎಲ್ಲರೂ ಆತನನ್ನು ನೋಡಿ ಗೊಣಗುತ್ತಿದ್ದರು. ಇಪ್ಪತ್ತೈದು ವರ್ಷ ತುಂಬುವ ಹೊತ್ತಿಗೆ ಆತ ಮಾಡಿದ್ದೆಲ್ಲ -ಲೇ! ಅಂಥ ಅದ್ಭುತ, ಅಪರೂಪದ ಜಾತಕ ಅವನದು.
ಜೀವನದಲ್ಲಿ ಮೊದಲ ಬಾರಿಗೆ ಹೊಸ ಕಾರು ಖರೀದಿಸಿ ಮನೆಗೆ ತಂದ. ಮರುದಿನ ಹೊರಡುವಾಗ ಕಾರ್ ಸ್ಟಾರ್ಟ್ ಆಗಲೇ ಇಲ್ಲ. ಬಾಡಿಗೆಗೆ ಮನೆ ತೆಗೆದುಕೊಂಡು ಒಳಹೊಕ್ಕರೆ ಚಾವಣಿಯೇ ಕುಸಿದುಬಿತ್ತು! ಯಾರೂ ಆತನ ಸಹವಾಸ ಮಾಡಲು ಮುಂದೆ ಬರುತ್ತಿರಲಿಲ್ಲ. ಆತನ ಪರಿಚಿತರೆಲ್ಲ ಅವನಿಂದ ದೂರವಿರುತ್ತಿದ್ದರು. ಒಮ್ಮೆ ಜಾಕ್ ಮಾ ಪಂಪ್ ಸೆಟ್ ಕಂಪನಿಯ ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಸೇರಿದ. ಅದ್ಯಾವ ಗಳಿಗೆಯಲ್ಲಿ ಆ ಕಂಪನಿಗೆ ಕಾಲಿಟ್ಟನೋ ಏನೋ ಕಂಪನಿಯೇ ಮುಚ್ಚಿ ಹೋಯಿತು.
ತನಗೆ ಯಾರೂ ಇನ್ನು ಕೆಲಸ ಕೊಡಲಾರರು, ಹೊಟ್ಟೆ ಪಾಡಿಗೆ ಎಲ್ಲರ ಮುಂದೆ ಕೈಚಾಚಿ ವಿಫಲನಾಗಿ, ಬೇರೆ ದಾರಿಯೇ ಇಲ್ಲದಾದಾಗ, ಹದಿನೆಂಟು ಮಂದಿ
ಗೆಳೆಯರಿಂದ ಚಂದಾ ಎತ್ತಿ ಕೊನೆಗೆ ‘ಅಲಿಬಾಬಾ’ ಎಂಬ ಸಂಸ್ಥೆಯನ್ನು ಆರಂಭಿಸಿದ. ಆ ಹೆಸರನ್ನು ಕೇಳಿಯೇ ಕಂಪನಿ ಉದ್ಧಾರವಾಗೊಲ್ಲ ಎಂದು ಉದ್ಗಾರ ತೆಗೆದರು. ಚೀನಿಯರಿಗೆ ಆ ಹೆಸರು ಕಿವಿಗೆ ಆಪ್ತವಾಗಿರಲಿಲ್ಲ. ಒತ್ತಕ್ಷರ ಇಲ್ಲದಿರುವುದು ಹಾಗೂ ಸುಲಭ ಅಕ್ಷರಗಳಿಂದ ‘ಅಲಿಬಾಬಾ’ ಎಂಬ ಹೆಸರನ್ನು ಆತ ಆಯ್ಕೆ
ಮಾಡಿಕೊಂಡಿದ್ದ. ಇಂಟರ್‌ನೆಟ್ ಕಂಪನಿಯನ್ನೇನೋ ಆತ ಆರಂಭಿಸಿದ. ಜನರು ವೆಬ್‌ಸೈಟ್‌ಗೆ ವಿಸಿಟ್ ಮಾಡುತ್ತಿದ್ದರು. ಆದರೆ ಅದರಿಂದ ಹಣ ಬರುತ್ತಿರಲಿಲ್ಲ.
ಹಣ ಮಾಡುವ, ಬಿಜಿನೆಸ್ ಆಗಿ ಪರಿವರ್ತಿಸುವ ಯಾವ ಮಾಡೆಲ್‌ಗಳೂ ಇರಲಿಲ್ಲ. ಜಾರಿ ಮಾಡಿದ ಮಾಡೆಲ್ ಗಳೆಲ್ಲ ನೆಲಕಚ್ಚಿದವು. ಈ ಮಧ್ಯೆ ಡಾಟ್ ಕಾಮ್ ಗುಳ್ಳೆ ಒಡೆದು ಇಂಟರ್‌ನೆಟ್‌ನಲ್ಲಿ, ಇ-ಕಾಮರ್ಸ್‌ನಲ್ಲಿ ಹಣ ಹೂಡಿದವರೆಲ್ಲ ದಿವಾಳಿ ಎದ್ದರು. ಅಲಿಬಾಬಾ ಕೂಡ ಇದಕ್ಕೆ ಹೊರತಾಗಿರಲಿಲ್ಲ.
ಜಾಕ್ ಮಾ ಹೇಳುವಂತೆ ಅಲಿಬಾಬಾ ೧೦೦೧ ಪ್ರಮಾದಗಳ ಕಂಪನಿ. ಪ್ರಮಾದಗಳಿಂದಲೇ ಬೆಳೆದ ಸಂಸ್ಥೆ. ಈಗ ಆ ಕಂಪನಿ ಯಾವುದೇ ಹೊಸ ತಪ್ಪುಗಳನ್ನು ಮಾಡಲಿಕ್ಕಿಲ್ಲ. ಅಷ್ಟೊಂದು ತಪ್ಪುಗಳನ್ನು ಮಾಡಿಬಿಟ್ಟಿದೆ. ಆದರೆ ಆ ಎಲ್ಲಾ ತಪ್ಪುಗಳಿಂದ ಪಾಠ ಕಲಿತಿದೆ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಚೀನಾದ ಸಣ್ಣ, ಮಧ್ಯಮ ಉದ್ದಿಮೆಗಳನ್ನು ಒಂದೇ ವೇದಿಕೆ ಮೇಲೆ ತಂದು ಅವೆಲ್ಲ ತಮ್ಮ ವಹಿವಾಟಿನಲ್ಲಿ ಅಗಾಧ ಬೆಳವಣಿಗೆ ಕಾಣುವಂತಾಗಲು ಅಲಿಬಾಬಾ ಕಾರಣವಾಯಿತು. ಇಂದು ಅಲಿಬಾಬಾ ಚೀನಾದ ಇ-ಕಾಮರ್ಸ್ ದೈತ್ಯ. ಅದು ಅಮೆರಿಕದಲ್ಲಿ ಚೀನಾದ ಮಾರುಕಟ್ಟೆ ಆಕ್ರಮಣಕ್ಕೆ ಸಹಕಾರಿಯಾಗಿದೆ. ಅಮೆಜಾನ್‌ನ (೭೦ ಶತಕೋಟಿ ಡಾಲರ್) ಮೂರನೇ ಒಂದರಷ್ಟು ಛಿಠಿಡಿಟ್ಟಠಿe ಹೊಂದಿರುವ ಅಲಿಬಾಬಾ ಜಗತ್ತಿನ ಎಲ್ಲ ದೇಶಗಳಲ್ಲಿ ಕ್ಷಿಪ್ರವಾಗಿ ತನ್ನ ಜಾಲವನ್ನು ವಿಸ್ತರಿಸುವ ಕಾಯಕದಲ್ಲಿ ಚುರುಕಾಗಿದೆ.
ಇದು ಒಬ್ಬ ಇಂಗ್ಲಿಷ್ ಮಾಸ್ತರನ, ಗಣಿತದಲ್ಲಿ ಫೇಲಾದ, ಕಂಪ್ಯೂಟರ್ ಅಂದ್ರೆ ಏನೆಂಬುದೂ ಗೊತ್ತಿಲ್ಲದ, ತಂತ್ರಜ್ಞಾನದ ಗಂಧ-ಗಾಳಿ ತಿಳಿಯದ, ದಡ್ಡ ವಿದ್ಯಾರ್ಥಿಯ ಸಾಹಸಗಾಥೆ. ಜಾಕ್ ಮಾ ಹೇಳುವಂತೆ ‘ಜಾಕ್ ಮಾ ಗೆಲ್ಲುತ್ತಾರೆಂದರೆ, ಜಗತ್ತಿನಲ್ಲಿ ಯಾರು ಬೇಕಾದರೂ ಗೆಲ್ಲಬಹುದು. ಆದರೆ ಅವರಿಗೆ ಗ್ರಾಹಕರ ಮನಸ್ಸು ಹೇಗೆ ವರ್ತಿಸುತ್ತದೆಂಬುದು ಗೊತ್ತಿರಬೇಕು’.