Sunday, 15th December 2024

ಕೆಂಪು ಸುಂದರಿ ಇಲ್ಲದೇ ಬದುಕೇ ನೀರಸ !

ಶಶಾಂಕಣ

shashidhara.halady@gmail.com

ಇದೊಂದು ವಿಚಾರ ಕೇಳಿದರೆ ನಿಮ್ಮಲ್ಲಿ ಕೆಲವರಿಗಾದರೂ ತುಸು ತಮಾಷೆ ಎನಿಸಬಹುದು- ಆದರೆ ಇದರ ಹಿಂದಿರುವ ಮಾಹಿತಿ ಮಾತ್ರ ತಮಾಷೆಯದೇನಲ್ಲ,
ಬದಲಿಗೆ ತುಸು ಗಂಭೀರವೇ. ಟೊಮ್ಯಾಟೋ ಹಣ್ಣು ಸೇವನೆಯಿಂದ ಮೂತ್ರಪಿಂಡದ (ಕಿಡ್ನಿ) ಆರೋಗ್ಯ ಕೆಡುವ ಸಾಧ್ಯತೆ ಇದೆಯಂತೆ! ಈಗಿನ ‘ದುಬಾರಿ
ಮ್ಯಾಟೋ ಯುಗ’ದಲ್ಲಿ, ಈ ವಿಚಾರವನ್ನು ನೆನಪಿಸಿಕೊಂಡು ಟೊಮ್ಯಾಟೋವನ್ನು ತಿನ್ನುವುದನ್ನೇ ನಿಲ್ಲಿಸಿ ಬಿಡಬಹುದು ಎನ್ನುತ್ತೀರಾ? ವಿಷಯ ಅದಲ್ಲ; ಟೊಮ್ಯಾಟೋ ಸೇವನೆಯಿಂದ ಮೂತ್ರ ಪಿಂಡಗಳಿಗೆ ನಿಜವಾ ಗಿಯೂ ಹಾನಿಯಾಗುತ್ತದಾ? ಹಾಗಿದ್ದರೆ ಇಷ್ಟು ವರ್ಷದಿಂದ ಅದನ್ನು ತಿನ್ನುತ್ತಲೇ ಬಂದಿದ್ದೇವಲ್ಲ – ಒಂದಲ್ಲ, ಎರಡಲ್ಲ ಹಲವು ರೂಪ ಗಳಲ್ಲಿ ಟೊಮ್ಯಾಟೋವನ್ನು ನಮ್ಮ ಹೊಟ್ಟೆಯೊಳಗೆ ಸೇರಿಸುತ್ತಲೇ ಇದ್ದೇವೆ; ಟೊಮ್ಯಾಟೋ ರುಚಿಯು ನಮ್ಮ ತಲೆಮಾರನ್ನು ಅದೆಷ್ಟು ಮೋಡಿ ಮಾಡಿದೆ ಎಂದರೆ, ಇಂದು ಅಡುಗೆ, ತಿಂಡಿ, ತಿನಿಸು ಎಂದರೆ, ಟೊಮ್ಯಾಟೋ ಇಲ್ಲದೇ ಆಗುವುದೇ ಇಲ್ಲ ಎಂಬಂತಹ ಸ್ಥಿತಿಯನ್ನು ಸಹ ತಲುಪಿ ದ್ದೇವೆ!

ಹಾಗಿದ್ದರೆ, ಇಷ್ಟು ವರ್ಷಗಳ ಕಾಲ ಪ್ರತಿದಿನ ಟೊಮ್ಯಾಟೋವನ್ನು ತಿಂದುಕೊಂಡೇ ಬಂದಿರುವ ನಮಗೆ, ಕಿಡ್ನಿಕಲ್ಲುಗಳು ಆಗುವ ಸಾಧ್ಯತೆ ಇದೆಯೆ? ಇದು ಊಹಾಪೋಹದಿಂದ ಪರಿಹಾರವಾಗುವ ಪ್ರಶ್ನೆಯಲ್ಲ; ವೈದ್ಯರು ಮಾತ್ರ ಈ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯ. ‘ಟೊಮ್ಯಾಟೊದಿಂದ ಆಕ್ಸಲೇಟ್ ಕಲ್ಲುಗಳು ಉತ್ಪತ್ತಿಯಾಗುತ್ತವೆ; ಈ ರೀತಿ ಆಗುವುದಕ್ಕೆ ಟೊಮ್ಯಾಟೋ ಸಹ ಒಂದು ಕಾರಣ. (ಬೇರೆ ಕಾರಣಗಳಿಂದಲೂ ಆಗಬಹುದು) ಆದರೆ ಇದು ಎಲ್ಲರ ಮೇಲೆ ಪರಿಣಾಮ ಬೀರುವುದಿಲ್ಲ.

ಟೊಮ್ಯಾಟೋವನ್ನು ಸರಿಯಾಗಿ ಬೇಯಿಸಿ ತಿಂದರೆ, ಅವು ಸುರಕ್ಷಿತ. ಹಸಿ ಟೊಮ್ಯಾಟೋ ತಿಂದರೆ, ಕಿಡ್ನಿಕಲ್ಲುಗಳು ಆಗುವ ಸಾಧ್ಯತೆ ಇದೆ. ಈಗಾಗಲೇ ಮೂತ್ರಕೋಶದ ಕಲ್ಲುಗಳ ಸಮಸ್ಯೆ ಇರುವವರು, ಹೆಚ್ಚು ಟೊಮ್ಯಾಟೋ ತಿನ್ನಬಾರದು. ಇದರಿಂದ ಆಕ್ಸಲೇಟ್ ಕಲ್ಲುಗಳು ಉಂಟಾಗುವ ರಿಸ್ಕ್ ಇದೆ’ ಎಂದು ಹೇಳಿದವರು ರೇಡಿಯೋಲಾಜಿಸ್ಟ್ ಆಗಿರುವ ಡಾ. ರಾಜೀವ್ ಸೂಡ್ ಎಂಬ ವೈದ್ಯರು. ಇದರಿಂದ ಒಂದಂತೂ ಸ್ಪಷ್ಟ; ಚೆನ್ನಾಗಿ ಬೇಯಿಸಿ ತಿಂದರೆ ಟೊಮ್ಯಾಟೋ ಸುರಕ್ಷಿತ; ಹೆಚ್ಚು ತಿಂದರೆ ರಿಸ್ಕ್ ಇದೆ!

ಇದನ್ನು ಹೊರತುಪಡಿಸಿದರೆ, ಟೊಮ್ಯಾಟೋದಲ್ಲಿ ವಿಟಮಿನ್ ಸಿ ಮೊದಲಾದ ಪೌಷ್ಟಿಕಾಂಶಗಳೂ ಇವೆ. ಆದರೆ ಟೊಮ್ಯಾಟೋಗೂ ಕಿಡ್ನಿಕಲ್ಲುಗಳಿಗೂ ಸಂಬಂಧ ಇದೆ ಎಂಬ ನಂಬಿಕೆ ಮೊದಲಿನಿಂದಲೂ ಇರುವುದಂತೂ ನಿಜ. ಈಚಿನ ದಶಕಗಳಲ್ಲಿ ಅಧಿಕ ಪ್ರಮಾಣದ ಕೀಟನಾಶಗಳನ್ನು ಬಳಸಿ ಬೆಳೆಯುತ್ತಿರುವ ಟೊಮ್ಯಾಟೋದಿಂದ, ವಿವಿಧ ರೀತಿಯ ವಿಷಗಳು ನಮ್ಮ ದೇಹವನ್ನು ಸಣ್ಣ ಪ್ರಮಾಣದಲ್ಲಿ ಸೇರುತ್ತಿರುವುದು ನಡೆಯುತ್ತಲೇ ಇದೆ; ಹೆಚ್ಚು ಹೊಳೆಯುವು, ಯಾವುದೇ ಕೀಟ ಭಾದೆ ಇಲ್ಲದೇ ಇರುವಂತಹ ಹಣ್ಣುಗಳನ್ನು ಪಡೆಯಲು, ವಿವಿಧ ರೀತಿಯ ಕೀಟ ನಾಶಕಗಳನ್ನು ಕಾಲದಿಂದ ಕಾಲಕ್ಕೆ ಟೊಮ್ಯಾಟೊ ಗಿಡಗಳ ಮೇಲೆ ಸಿಂಪಡಿಸಲೇಬೇಕು – ಇಂದು ಇಂದಿನ ರೈತರ ಅನಿವಾರ್ಯತೆ ಎನಿಸಿದೆ.

ಇವೆಲ್ಲವನ್ನೂ ಗಮನ ದಲ್ಲಿರಿಸಿಕೊಂಡು ನೋಡಿದರೆ, ಟೊಮ್ಯಾಟೋ ಬಳಕೆಯನ್ನು ಕಡಿಮೆಮಾಡುವುದು ನಮ್ಮ ನಮ್ಮ ಆರೋಗ್ಯದ ದೃಷ್ಟಿಯಿಂದ ವಿಹಿತ. ಓಹ್,
ಟೊಮ್ಯಾಟೋ ಇಲ್ಲದೇ ಜೀವನ ಸಾಧ್ಯವೆ ಎಂದು ನೀವು ಕೇಳಬಹುದು. ಟೊಮ್ಯಾಟೋ ಇಲ್ಲದೇ ಅಡುಗೆ ಮಾಡಲು ಆಗುವುದಿಲ್ಲ ಎಂದು ಕೆಲವು ಬಾಣಸಿಗ ರಾದರೂ ದೂರು ನೀಡಿಯಾರು! ಆದರೆ ಟೊಮ್ಯಾಟೊ ಇಲ್ಲದೆ ಅಡುಗೆ ಖಂಡಿತಾ ಸಾಧ್ಯ. ನಮ್ಮ ದಿನಚರಿಯಲ್ಲಿ ಬೆಸೆದುಹೋಗಿರುವ ಟೊಮ್ಯಾಟೋ, ಇಂದು ಸುದ್ಧಿಯಾಗುತ್ತಿರುವ ವೈವಿಧ್ಯತೆ ಮಾತ್ರ ಗಮನಾರ್ಹ.

ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಈಚಿನ ವಾರಗಳಲ್ಲಿ ಟೊಮ್ಯಾಟೋ ಸುದ್ದಿಗಳಿಗೆ ಅತಿಯಾದ ಪ್ರಚಾರ ನೀಡಲಾಗುತ್ತಿದೆ; ಅಥವಾ ಇದರ ಮಹಿಮೆಯೇ ಅಷ್ಟು ಎನ್ನಬಹುದು! ರೈತರೊಬ್ಬರು ಟೊಮ್ಯಾಟೋ ಬೆಳೆದು, ಮಾರಾಟ ಮಾಡಿ ಕೋಟಿ ಗಟ್ಟಲೆ ಸಂಪಾದಿಸಿದರಂತೆ! ಆದರೆ, ಕೆಲವೇ ತಿಂಗಳು ಗಳ ಹಿಂದೆ, ಟೊಮ್ಯಾಟೋ ಬೆಳೆದು, ಮಾರುಕಟ್ಟೆ ಯಲ್ಲಿ ಉತ್ತಮ ಬೆಲೆ ಸಿಗದೇ, ಲೋಡುಗಟ್ಟಲೆ ಟೊಮ್ಯಾಟೋವನ್ನು ಚರಂಡಿಗೆ ಎಸೆದು, ನಷ್ಟ ಮಾಡಿಕೊಂಡವರೂ ಇದೇ ರೈತರು! ಟೊಮ್ಯಾಟೋ ತುಂಬಿದ ಲಾರಿಯನ್ನು ಕದ್ದೊಯ್ದರು ಎಂಬುದು ಆಗಾಗ ಪ್ರಚುರಗೊಂಡ, ವಿವಿಧ ರಾಜ್ಯಗಳಿಂದ ಬರುತ್ತಿರುವ ಸುದ್ದಿ. ಟೊಮ್ಯಾಟೋ ಬೆಳೆಯುವ ಜಾಗಗಳಿಗೆ ಸಶಸ ಕಾವಲುಗಾರರನ್ನೂ ಇರಿಸಲಾಗಿದೆ! ಅಷ್ಟಿದೆ ಟೊಮ್ಯಾಟೋ ಮಹಿಮೆ.

‘ಟೊಮ್ಯಾಟೋ ಸಾರು ಇಲ್ಲದೇ ಅಡುಗೆ ಪೂರ್ತಿಯಾಗದು’ ಎಂದು ವಿಶೇಷದ ಅಡುಗೆಯ ಬಾಣಸಿಗರು ಹೇಳುತ್ತಾರೆ. ನಮ್ಮ ರಾಜ್ಯದ ಸಾಂಪ್ರದಾಯಿಕ ಭೋಜನದಲ್ಲಿ, ಅನ್ನ, ತಿಳಿಸಾರು, ಸಾಂಬಾರು ಪ್ರಮುಖ ಐಟಂಗಳು; ಸಾರು ಮತ್ತು ಸಾಂಬಾರುಗಳಿಗೆ ಟೊಮ್ಯಾಟೋವನ್ನು ಹೇರಳವಾಗಿ ಬಳಸುವುದು ಈಗಿನ ದಿನಗಳಲ್ಲಿ ತೀರಾ ಸಾಮಾನ್ಯ. ಟೊಮ್ಯಾಟೋ ಕಡಿಮೆ ಬಳಸಿದರೆ ಸಾರು ಸಾಂಬಾರು ಮಾಡಲು ಸಾಧ್ಯವೇ ಇಲ್ಲವೆ? ಖಂಡಿತಾ ಸಾಧ್ಯ; ಕೆಲವೇ ದಶಕಗಳ ಹಿಂದೆ ನಮ್ಮ ನಾಡಿನಲ್ಲಿ ಟೊಮ್ಯಾಟೋ ಬಳಕೆ ಅತಿ ಕಡಿಮೆ ಪ್ರಮಾಣ ದಲ್ಲಿತ್ತು, ಅಥವಾ ಕೆಲವು ಪ್ರದೇಶಗಳಲ್ಲಿ ಇಲ್ಲವೇ ಇಲ್ಲ ಎಂದರೂ ಹೇಳಬಹುದು. ಹಿಂದೆ ಎಳ್ಳು, ಜೀರಿಗೆ, ಮೆಣಸು ಮೊದಲಾದ ಸಂಬಾರ ಪದಾರ್ಥ ಗಳನ್ನು ಮಾತ್ರ ಬಳಸಿ ಸಾರಿನ ರುಚಿ ಹೆಚ್ಚಿಸುತ್ತಿದ್ದರು.

ಆದರೆ, ಟೊಮ್ಯಾಟೋ ಬಳಸಿದರೆ, ಇನ್ನಷ್ಟು ರುಚಿ ಬರುತ್ತದೆ ಎಂದು ಗೊತ್ತಾದ ನಂತರ, ಎಲ್ಲದಕ್ಕೂ ಟೊಮ್ಯಾಟೋ ಬಳಸುವಿಕೆ ಪ್ರಧಾನ ಎನಿಸಿತು. ನಮ್ಮ ನಾಡಿನ ಹಳ್ಳಿಗಳಲ್ಲೂ ಕೆಲವೇ ದಶಕಗಳ ಹಿಂದೆ ಟೊಮ್ಯಾಟೋ ಇರಲಿಲ್ಲ; ಆಗೆಲ್ಲಾ ಹುಣಸೇ ಹಣ್ಣು, ಲಿಂಬೆ ಹಣ್ಣು, ಬಿಂಬಿಲಿ, ಅಮಟೆಕಾಯಿ, ದಾರು ಹುಳಿ ಮೊದಲಾದವುಗಳೇ ಅಡುಗೆಗೆ ಹುಳಿ ರುಚಿ ನೀಡುವ ವಸ್ತುಗಳು. ಕ್ರಮೇಣ ತಿಳಿಸಾರಿಗೆ ಟೊಮ್ಯಾಟೋ ಬಳಸುವ ಪದ್ಧತಿ ಚಾಲ್ತಿಗೆ ಬಂತು. ಬರಬರುತ್ತಾ ಸಾಂಬಾರು, ಪಲ್ಯ, ಚಟ್ನಿ, ಗೊಜ್ಜು – ಯಾವುದನ್ನು ತಯಾರಿಸಿದರೂ ಅಲ್ಲಿ ಟೊಮ್ಯಾಟೋ ಇರಲೇಬೇಕು ಎಂಬ ಸ್ಥಿತಿ ಬಂತು.

ಅತ್ತ ಮಸಾಲೆ ಪೂರಿ, ಭೇಲ್, ಪಾವ್‌ಗಳಿಗೂ ಟೊಮ್ಯಾಟೋದಿಂದ ಮಾಡಿದ ವ್ಯಂಜನಗಳು ಅನಿವಾರ್ಯ ಎನಿಸಿದವು. ಹೊಳೆಗೆ, ಕೆಂಪು ಬಣ್ಣದ ಈ ಸುಂದರಿ ಇಲ್ಲದೇ ಅಡುಗೆ ಮನೆಗೆ ಕಳೆ ಇಲ್ಲ, ನಾಲಗೆಗೆ ರುಚಿ ಇಲ್ಲ, ಬದುಕೇ ನೀರಸ ಎನ್ನುತ್ತಿದ್ದಾರೆ ಆಶುಕವಿಗಳು! ಈಗ ಟೊಮ್ಯಾಟೋ ಇಲ್ಲದೇ ಅಡುಗೆ ಇಲ್ಲ ಎಂಬ ಸ್ಥಿತಿ ಹಲವು ಕಡೆಗಳಲ್ಲಿ ಬಂದಿರುವುದಂತೂ ನಿಜ. ಇದಕ್ಕೆ ಮುಖ್ಯ ಕಾರಣ ಟೊಮ್ಯಾಟೋದಲ್ಲಿರುವ ‘ಉಮಾಮಿ’ ರುಚಿ! ಟೊಮ್ಯಾಟೋದಲ್ಲಿರುವ ‘ಉಮಾಮಿ’
ರುಚಿಯು ಬಹು ಪ್ರಸಿದ್ಧ. ತಮಾಷೆಯಾಗಿ ಹೇಳಬೇಕೆಂದರೆ, ಈ ‘ಉಮಾಮಿ’ ರುಚಿಯು, ನಮ್ಮ ನಾಲಗೆಯನ್ನು ವಶಪಡಿಸಿಕೊಂಡಿದೆ; ಕಾಫಿಯ ಸುವಾಸನೆಗೆ ಮಾರುಹೋದಂತೆ, ಟೊಮ್ಯಾಟೋದ ಉಮಾಮಿ ರುಚಿಗೆ ನಾವೆಲ್ಲಾ ಮಾರುಹೋಗಿದ್ದೇವೆ.

ಜಪಾನಿನ ಮೂಲದ ಈ ಪದವು, ಐದು ಪ್ರಮುಖ ರುಚಿಗಳನ್ನು ವರ್ಣಿಸಲು ಉಪಯೋಗವಾಗುತ್ತದೆ. ಟೊಮ್ಯಾಟೋದಲ್ಲಿರುವ ಉಮಾಮಿ ರುಚಿಯೇ ಅದನ್ನು ಎಲ್ಲರ ಅಡುಗೆಮನೆಯ ಕೆಂಪುಸುಂದರಿ ಯನ್ನಾಗಿಸಿದೆ! ಉಮಾಮಿ ರುಚಿಯು ಮುಖ್ಯವಾಗಿ ಟೊಮ್ಯಾಟೋ, ಅಣಬೆ, ಸೋಯಾ ಸಾಸ್, ಶೆಲ್‌ಫಿಶ್, ಫಿಶ್, ಮೀಟ್‌ಗಳಲ್ಲಿ ಕಂಡುಬರುತ್ತದೆ! ಇದೇ ಉಮಾಮಿ ರುಚಿಯು ಮೋನೋಸೋಡಿಯಂ ಗ್ಲುಟಾಮೇಟ್‌ನಲ್ಲೂ (ಎಂಎಸ್‌ಜಿ, ಟೇಸ್ಟಿಂಗ್ ಪೌಡರ್) ಇದೆ!
ಅಷ್ಟರ ಮಟ್ಟಿಗೆ ಸೀಮಿತವಾಗಿದೆ ಎಂಎಸ್‌ಜಿ ಮತ್ತು ಟೊಮ್ಯಾಟೋ ಬಾಂಧವ್ಯ.

ಆದರೆ, ಟೊಮ್ಯಾಟೋ ಸಸ್ಯದ ಖಂಡಾಂತರ ಪಯಣ ಮಾತ್ರ ವಿಸ್ಮಯಹುಟ್ಟಿಸುವಂತಹದ್ದು. ದಕ್ಷಿಣ ಅಮೆರಿಕದ ಪೆರು, ಚಿಲಿ ಮೊದಲಾದ ಪ್ರದೇಶ ಗಳಲ್ಲಿ ಸಹಜವಾಗಿ ಬೆಳೆಯುವ ಸಸ್ಯ ಟೊಮ್ಯಾಟೋ. ಕ್ರಿ.ಪೂ.೫೦೦ರಲ್ಲೇ ಅಲ್ಲಿನ ಜನರಿಗೆ ಟೊಮ್ಯಾಟೋ ಪರಿಚಿತ. ಅಲ್ಲಿನ ಕಾಡು ಟೊಮ್ಯಾಟೋವು ಕಡಲೆಬೀಜದ ಗಾತ್ರದ ಹಣ್ಣು ಗಳನ್ನು ಬಿಡುತ್ತದೆ. ಪುರಾತನ ಕಾಲದಲ್ಲೇ ಟೊಮ್ಯಾಟೋ ರುಚಿಗೆ ಮಾರು ಹೋದ ಅಜ್‌ಟೆಕ್ ಜನರು, ಅದರ ಸುಧಾರಿತ ಮತ್ತು ದೊಡ್ಡ ಗಾತ್ರದ
ಹಣ್ಣುಗಳನ್ನು ಬಿಡುವ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದರು. ೧೫೨೧ರಲ್ಲಿ ಅಜ್‌ಟೆಕ್‌ರನ್ನು ಸೋಲಿಸಿದ ಸ್ಪಾನಿಷ್ ಜನರು, ಕೆಂಪುಬಣ್ಣದ ಟೊಮ್ಯಾಟೋ ರುಚಿಗೆ ಮಾರು ಹೋದರು. ಜಗತ್ತಿನ ವಿವಿಧ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಹೋದಲ್ಲೆಲ್ಲಾ, ಸ್ಪಾನಿಷರು ಅದನ್ನು ಕೊಂಡೊಯ್ದರು.

ಹದಿನಾರನೆಯ ಶತಮಾನದಲ್ಲೇ ಫೀಲಿಪೀನ್ಸ್‌ಗೆ ಈ ಹಣ್ಣನ್ನು ಕೊಂಡೊಯ್ದವರು ಸ್ಪಾನಿಷ್ ಜನರು. ಚೀನಾದಲ್ಲೂ ಹದಿನಾರನೆಯ ಶತಮಾನದಲ್ಲಿ
ಟೊಮ್ಯಾಟೋ ಇತ್ತು – ಫಿಲಿಪೀನ್ಸ್‌ನಿಂದ ಅಲ್ಲಿಗೆ ಬಂದಿರಬಹುದು ಎನ್ನಲಾಗಿದೆ. ಬ್ರಿಟನ್‌ನ ಜನರಿಗೆ ೧೫೯೦ರ ಸಮಯದಲ್ಲೇ ಟೊಮ್ಯಾಟೋ ಗಿಡದ ಪರಿಚಯವಾಗಿದ್ದರೂ, ಅದೊಂದು ವಿಷಕಾರಿ ಹಣ್ಣು ಎಂದೇ ವರ್ಣಿಸಿ, ಟೊಮ್ಯಾಟೋವನ್ನು ಅಡುಗೆ ಮನೆಯಿಂದ ಹಲವು ಕಾಲ ದೂರ ಇಟ್ಟಿದ್ದರು. ಬ್ರಿಟನ್‌ನ ತೋಟಗಳಲ್ಲಿ ಇದನ್ನು ಅಲಂಕಾರಿಕ ಸಸ್ಯವನ್ನಾಗಿ ಮಾತ್ರ ಬೆಳೆಸಲಾಗುತ್ತಿತ್ತು. ಅಮೆರಿಕದಲ್ಲಿ ೧೭೧೦ರ ಸಮಯದಲ್ಲಿ ಟೊಮ್ಯಾಟೋವನ್ನು ಬೆಳೆಯಲಾ ಗುತ್ತಿತ್ತು. ನಮ್ಮ ದೇಶಕ್ಕೆ ಟೊಮ್ಯಾಟೋವನ್ನು ಪರಿಚಯಿಸಿದವರು ಯುರೋಪಿಯನರು.

ಬೆಂಗಳೂರು ಮೊದಲಾದ ದೊಡ್ಡ ನಗರಗಳಲ್ಲಿದ್ದ ಯುರೋಪಿಯನರ ಅಭಿರುಚಿಗೆ ತಕ್ಕನಾಗಿ ಟೊಮ್ಯಾಟೋ ಬೆಳೆಯಲು ನಮ್ಮ ರೈತರು ಆರಂಭಿಸಿರಬೇಕು; ಕ್ರಮೇಣ ಟೊಮ್ಯಾಟೋ ನಮ್ಮ ಜನರ ಅಡುಗೆ ಮನೆ ಪ್ರವೇಶಿ ಸಿತು. ಟೊಮ್ಯಾಟೋ ರುಚಿಗೆ ಮಾರು ಹೋದ ಜನರು ಅದನ್ನು ಹಸಿ ಮತ್ತು ಬಿಸಿ ಎರಡೂ ರೂಪದಲ್ಲಿ ಸೇವಿಸತೊಡಗಿದರು! ಟೊಮ್ಯಾಟೋದಿಂದ ಕಿಡ್ನಿ ಕಲ್ಲುಗಳು ಉಂಟಾಗಬಹುದು ಎಂಬ ವಿಚಾರವು ಮೊದಲಿನಿಂದಲೂ ಗೊತ್ತಿದ್ದರೂ, ಟೊಮ್ಯಾಟೋದ ಜನಪ್ರಿಯತೆಗೆ ಅದರಿಂದ ಭಂಗ ಬರಲಿಲ್ಲ. ಸಲಾಡ್, ಸಾರು, ಸಾಂಬಾರ್, ಚಟ್ನಿ, ಜಾಮ್, ಸೂಪ್ – ಟೊಮ್ಯಾಟೊ ಪಡೆದಿರುವ ರೂಪಾಂತರಗಳು
ಒಂದೇ ಎರಡೆ? ಕೆಲವು ಪ್ರದೇಶಗಳಲ್ಲಿ ಟೊಮ್ಯಾಟೋ ಕಾಯಿಯನ್ನು ತರಕಾರಿಯ ರೂಪದಲ್ಲಿ ಬಳಸಿ, ತಯಾರಿಸಿದ ಸಾಂಬಾರು ಸಹ ಜನಪ್ರಿಯ!

ಸುಮಾರು ೧೭೧೦ರ ಸಮಯದಲ್ಲಿ ಉತ್ತರ ಅಮೆರಿಕ ಪ್ರವೇಶಿಸಿದ ಟೊಮ್ಯಾಟೋ, ಇಂದು ಅಲ್ಲಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಆಹಾರದ ರೂಪದಲ್ಲಿ ಅದರ ಸೇವನೆಯು ಸಾಮಾನ್ಯ ಎನಿಸಿದೆ; ಜತೆಗೆ, ಅಲ್ಲಿನ ಪ್ರಭುತ್ವವೂ ಟೊಮ್ಯಾಟೋಗೆ ಉನ್ನತ ಸ್ಥಾನವನ್ನು ನೀಡಿದೆ! ಅಮೆರಿಕದ ಹಲವು ರಾಜ್ಯಗಳಲ್ಲಿ ಟೊಮ್ಯಾಟೋವು ‘ಸ್ಟೇಟ್ -ಟ್’ ಎನಿಸಿದೆ. ಟೊಮ್ಯಾಟೋ ಜ್ಯೂಸ್ ನ್ನು ತಮ್ಮ ರಾಜ್ಯದ ಅಽಕೃತ ಬಿವರೇಜ್ ಎಂದು ಅಮೆರಿಕದ ಓಹಿಯೋ ರಾಜ್ಯ ಗುರುತಿಸಿದೆ!

ಜಗತ್ತಿನಲ್ಲಿ ಎರಡನೆಯ ಅತಿ ಹೆಚ್ಚು ಪ್ರಮಾಣದ ಟೊಮ್ಯಾಟೋ ಬೆಳೆಯುವ ದೇಶ ನಮ್ಮದು. ಮೊದಲ ಸ್ಥಾನ ಚೀನಾಕ್ಕೆ. (ಸುಮಾರು ೬೭ ಮಿಲಿಯ ಟನ್). ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು ೨೧ ಮಿಲಿಯ ಟನ್ ಟೊಮ್ಯಾಟೋ ಬೆಳೆಯುತ್ತಾರೆ. ಈ ಪಟ್ಟಿಯಲ್ಲಿ ಯುಎಸ್‌ಗೆ ಐದನೆಯ ಸ್ಥಾನ. ನಮ್ಮ ದೇಶದ ಜನರ ನಾಲಗೆಯನ್ನು ಸಂಮೋಹನಕ್ಕೆ ಒಳಪಡಿಸಿರುವ ಟೊಮ್ಯಾಟೋ, ಇಂದು ಕಿಲೊ ಒಂದರ ರು.೨೫೦/-ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ! ಮುಂದಿನ ವಾರಗಳಲ್ಲಿ ಟೊಮ್ಯಾಟೋ ಬೆಲೆ ಕಿಲೊಗೆ ರು.೩೦೦/- ತಲುಪ ಬಹುದು ಎಂದು ಮಾರುಕಟ್ಟೆ ಪಂಡಿತರು ಅದಾಗಲೇ ಭವಿಷ್ಯ ನುಡಿದಿದ್ದಾರೆ. ದೇಶದ
ರಾಜಧಾನಿ ದೆಹಲಿಯಲ್ಲಿ ಟೊಮ್ಯಾಟೋ ಕೊರತೆ ಎಂಬ ಕೂಗು ಎದ್ದಿದೆ.

ಕೆಲವು ರಾಜ್ಯಗಳು ಸಹಾಯಧನ ನೀಡಿ ಟೊಮ್ಯಾಟೋ ಮಾರಾಟಕ್ಕೆ ಅನುವು ಮಾಡಿಕೊಟ್ಟು, ರೇಷನ್ ವ್ಯವಸ್ಥೆಯನ್ನು ನೆನಪಿಸುತ್ತಿವೆ! ಬೆಲೆಯ ವಿಚಾರದಲ್ಲಿ ತಮಿಳು ನಾಡಿನಲ್ಲಿ ಸರಕಾರವು ಮಧ್ಯಪ್ರವೇಶಿಸಿ, ರು.೬೦/-ಕ್ಕೆ ಟೊಮ್ಯಾಟೋ ಮಾರಾಟ ಮಾಡಲಾಗುವುದು ಎಂದು ಘೋಷಿಸಿದ್ದರೂ, ವೆಲ್ಲೂರಿನ
ನ್ಯಾಯ ಬೆಲೆ ಅಂಗಡಿಗಳಲ್ಲಿ ರು.೧೩೦/- ಕ್ಕೆ ಟೊಮ್ಯಾಟೋವನ್ನು ಮಾರಾಟ ಮಾಡಲಾಗುತ್ತಿದೆ! ರಿಯಾಯತಿ ದರದಲ್ಲಿ ಜನಸಾಮಾನ್ಯರಿಗೆ ಟೊಮ್ಯಾಟೋ ಒದಗಿಸಲು ಕೆಲವು ರಾಜ್ಯಗಳ ಸರಕಾರಗಳು ಮುಂದಾಗಿದ್ದು, ಈ ರೀತಿ ಕಡಿಮೆ ದರದಲ್ಲಿ ಟೊಮ್ಯಾಟೋ ಸರಬರಾಜು ವ್ಯವಸ್ಥೆಯು ರಾಜಕೀಯ ಸ್ವರೂಪವನ್ನೂ ಪಡೆಯಬಹುದು!

ಟೊಮ್ಯಾಟೋ ಬೆಲೆಯು ಇಷ್ಟು ಎತ್ತರ ತಲುಪಲು ಕಾರಣವೇನು? ಉತ್ತರ ಭಾರತದಲ್ಲಿ, ಹಿಮಾಚಲ ಪ್ರದೇಶದಲ್ಲಿ ಸುರಿದ ವಿಪರೀತ ಮಳೆಯೇ ಇದಕ್ಕೆ ಕಾರಣ ಎಂದು ಉತ್ತರಭಾರತ ದವರು ಹೇಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮಳೆಯ ಅಭಾವದಿಂದ ಮತ್ತು ನಂತರದ ವಾರ ಗಳಲ್ಲಿ ಸುರಿದ ವಿಪರೀತ ಮಳೆಯಿಂದಾಗಿ,
ಟೊಮ್ಯಾಟೋ ಗಿಡಗಳು ನಾಶವಾಗಿ, ಬೆಳೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಈಗ ಏರಿರುವ ಬೆಲೆಯನ್ನು ಕಂಡು, ಕೆಲವು ರೈತರು ದೊಡ್ಡ ಮಟ್ಟದಲ್ಲಿ ಟೊಮ್ಯಾಟೋ ಕೃಷಿಗೆ ಕೈ ಹಾಕಿದ್ದಾರೆ, ಹಾಕುತ್ತಿದ್ದಾರೆ. ಆದರೆ ಟೊಮ್ಯಾಟೋ ರೀತಿಯ, ಬೇಗನೆ ಕೆಟ್ಟು ಹೋಗುವಂತಹ ವಸ್ತುವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು, ಕೈಸುಟ್ಟುಕೊಂಡ ಉದಾಹರಣೆಗಳು ಈ ಹಿಂದೆ ನಡೆದಿವೆ. ಈಗ ಉತ್ತಮ ಬೆಲೆ ಇದೆ ಎಂದು, ಒಮ್ಮೆಗೇ ಹೆಚ್ಚಿನ ಸಂಖ್ಯೆಯ ರೈತರು ಟೊಮ್ಯಾಟೋ
ಬೆಳೆಗೆ ಮುಂದಾದರೆ, ಇನ್ನು ಮೂರು ತಿಂಗಳುಗಳಲ್ಲಿ ಅಽಕ ಪೂರೈಕೆಯಾಗಿ, ಬೆಲೆ ಕುಸಿಯುವ ಸಾಧ್ಯತೆ ಇದ್ದೇ ಇದೆ. ಈ ಒಂದು ಸಾಧ್ಯತೆಯನ್ನು ಕೃಷಿಕರು
ಗಮನಿಸಲೇಬೇಕು.

ಅಂದ ಹಾಗೆ, ಕೊನೆಯದೊಂದು ಪ್ರಶ್ನೆ: ಟೊಮ್ಯಾಟೋ ಎಂಬುದು ಒಂದು ತರಕಾರಿಯಾ ಅಥವಾ ಒಂದು ಹಣ್ಣಾ? ನೀವೇ ಉತ್ತರ ಹೇಳಿ!