Thursday, 12th December 2024

ಸ್ತ್ರೀ ಅಂದರೆ ಅಷ್ಟೇ ಸಾಕೆ…!?

ವಿದೇಶವಾಸಿ

ಕಿರಣ್ ಉಪಾಧ್ಯಾಯ ಬಹ್ರೈನ್‌

ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ?
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಅತ್ಯದ್ಭುತ ಸಾಲುಗಳಲ್ಲಿ ಒಂದು. ಓರ್ವ ಮಹಿಳೆಯನ್ನು ವರ್ಣಿಸಲು, ಆಕೆಯನ್ನು ಗೌರವಿಸಲು ಇದಕ್ಕಿಂತ ಪವಿತ್ರ ಪದಗಳು ಸಿಗಲಿಕ್ಕಿಲ್ಲ.

ನನ್ನ ಪ್ರಕಾರ ಪ್ರತಿನಿತ್ಯ ಮುಂಜಾನೆಯ ಪ್ರಾರ್ಥನೆಯಲ್ಲಿ ಸೇರಿಸಿಕೊಳ್ಳ ಬೇಕಾದ ಪವಿತ್ರ ಪಂಕ್ತಿ ಇದು. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಇಂದಂತೂ ಈ ಅತ್ಯದ್ಭುತ ನುಡಿಯನ್ನು ಸ್ಮರಿಸಲೇಬೇಕು. ಜತೆಗೆ ಬದುಕಿ ಮಾದರಿಯಾದ ಕೆಲವು ಮಹಿಳೆ ಯರನ್ನೂ ನೆನಪಿಸಿ ಕೊಳ್ಳಬೇಕು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾದ ಇಂದು ಮಾದರಿಯಾಗಿ ಬದುಕುತ್ತಿರುವ ಇಬ್ಬರು ಮಹಿಳೆಯರ ವಿಷಯ ನಿಮ್ಮ ಮಡಿಲಿಗೆ.

ನೀವು ಮಾಳವಿಕಾ ಅಯ್ಯರ್ ಹೆಸರು ಕೇಳಿರಬಹುದು. ಮಹಿಳೆಯರಿಗೆ ನೀಡುವ ಉನ್ನತ ಗೌರವ ‘ನಾರಿ ಶಕ್ತಿ ಪುರಸ್ಕಾರ’ ಪಡೆದವಳು ಆಕೆ. ಟ್ವಿಟರ್ ಲೋಕದಲ್ಲಿದ್ದವರಿಗೆ ಚಿರಪರಿಚಿತ ಹೆಸರು ಅದು. ಕಳೆದ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದವರಲ್ಲಿ ಈಕೆಯೂ ಒಬ್ಬಳು. ಆಕೆಯ ಯಶೋಗಾಥೆ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ.

ಮಾಳವಿಕಾ ಜನಿಸಿದ್ದು 1989ರಲ್ಲಿ ತಮಿಳು ನಾಡಿನ ಕುಂಭ ಕೋಣಮ್‌ನಲ್ಲಿ. ತಂದೆ ಜಲಸಂಪನ್ಮೂಲ ಇಲಾಖೆ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವರ್ಗವಾಗಿ ರಾಜಸ್ಥಾನದ ಬಿಕಾನೇರ್‌ಗೆ ಬಂದಿದ್ದರು. ಅದೊಂದು ಕರಾಳ ದಿನ. ಆಕೆಯ ಮನೆಯಲ್ಲಿ ಒಂದು ಬಾಂಬ್ ಸಿಡಿದಿತ್ತು. ಸೋಟದಲ್ಲಿ ಆಕೆಯ ಎರಡೂ ಹಸ್ತಗಳು ಛಿದ್ರವಾಗಿದ್ದವು. ಬಲಗಾಲು ತೀವ್ರವಾಗಿ ಘಾಸಿಗೊಂಡಿದ್ದರೆ, ಎಡಗಾಲು ಸಂಪೂರ್ಣ ತಿರುಚಿಕೊಂಡು ನೇತಾಡುತ್ತಿತ್ತು.

ದೇಹದ ಎಂಬತ್ತು ಪ್ರತಿಶತ ರಕ್ತ ಸೋರಿಹೋಗಿತ್ತು. ರಕ್ತದ ಒತ್ತಡ ಶೂನ್ಯವಾಗಿತ್ತು. ಮೂರು ದಿನ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯ ಪ್ರಾಣ ಉಳಿಸಲು ವೈದ್ಯರು ಸಫಲರಾದರೂ ಕೈಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಕಾರಣ ಘಟನೆ ನಡೆದ ಸ್ಥಳದಲ್ಲಿ ಆಕೆಯ ಹಸ್ತದ ಕುರುಹುಗಳೇ ಸಿಗಲಿಲ್ಲ. ಅಸಲಿಗೆ ಹಸ್ತವನ್ನು ಕತ್ತರಿಸುವ ಪ್ರಮೇಯ ಬಿಡಿ, ಇದ್ದದ್ದನ್ನು ಸರಿಯಾಗಿ
ಉಳಿಸಿಕೊಂಡರೆ ಸಾಕಾಗಿತ್ತು. ಆಕೆಯ ಕಾಲಿನ ಎಲುಬಿನ ಬಹುಭಾಗ ಮುರಿತಕ್ಕೊಳಗಾಗಿತ್ತು. ನರಗಳು ನಿಷ್ಕ್ರಿಯ ಗೊಂಡಿದ್ದವು. ಆಕೆಗೆ ಎಚ್ಚರ ವಾದಾಗ ದೇಹ ನಿಶ್ಚೇಷ್ಟಿತ ವಾಗಿತ್ತು.

ಅಷ್ಟೇ ಅಲ್ಲ, ಅದಾಗಲೇ ಏಳು ವರ್ಷ ಕಥಕ್ ನಾಟ್ಯಾಭ್ಯಾಸ ಮಾಡಿದ ಆಕೆ ಇನ್ನೆಂದೂ ನಡೆಯಲಾರಳು ಎಂಬ ಅಭಿಪ್ರಾಯ ವನ್ನೂ ವ್ಯಕ್ತಪಡಿಸಿದ್ದರು. ಆಕೆಯ ಇಷ್ಟದ ಸ್ಕೇಟಿಂಗ್ ಕನಸಿನ ಮಾತಾಯಿತು. ಈ ಘಟನೆ ನಡೆಯುವಾಗ ಮಾಳವಿಕಾ ಎಂಬ ಕೋಮಲ ಬಾಲೆಗೆ ಕೇವಲ ಹದಿಮೂರು ವರ್ಷ! ಮುಂದಿನ ಮೂರು ತಿಂಗಳು ಪ್ರತಿನಿತ್ಯ ಆಕೆಯ ಕಾಲಿನ ಭಾಗವನ್ನು ತೆರೆದು ಶುಚಿಗೊಳಿಸಿ ಪುನಃ ಜೋಡಿಸಲಾಗುತ್ತಿತ್ತು. ಅದರಂಥ ನರಕ ಯಾತನೆ ಇನ್ನೊಂದಿರಲಿಲ್ಲ. ಸಾಲದು ಎಂಬಂತೆ ವೈದ್ಯರೂ ಒಂದು ತಪ್ಪು ಮಾಡಿದ್ದರು. ಕೈ ಮುಂಭಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡುವಾಗ ಮಾಂಸವೇ ಇರದಂತೆ ನೇರವಾಗಿ ಎಲುಬಿನ ಮೇಲೆ ಚರ್ಮವನ್ನು ಹೊಲಿದು ಜೋಡಿಸಿಬಿಟ್ಟಿದ್ದರು. ಅದರಿಂದ ಆ ಭಾಗ ಎಲ್ಲಿಯೇ ತಾಗಿದರೂ ಸಹಿಸಲಾರದ ವೇದನೆ ಉಂಟಾಗು ತ್ತಿತ್ತು. ದೇಹದ ಸುಶ್ರೂಶೆಯಂತೂ ನಡೆಯುತ್ತಿತ್ತು.

ಆದರೆ ಭವಿಷ್ಯದ ಸುಶ್ರೂಶೆಯ ಗತಿ ಏನು? ಕೈ ಇಲ್ಲ, ಕಾಲಿಲ್ಲ, ಹೆಣ್ಣು ಮಗಳು ಬೇರೆ. ತಾನಿರುವ ಸ್ಥಳದಿಂದ ಮುಂದೆ ಸಾಗುವ ಹಾದಿಯ ಕುರಿತು ಯೋಚಿಸತೊಡಗಿದಳು. ಅದೊಂದು ರಾತ್ರಿ ಆಸ್ಪತ್ರೆಯ ಹಾಸಿಗೆಯಲ್ಲಿ ಕುಳಿತು ಆಕೆ ಯೋಚಿಸಿದ್ದಳು, ಒಂದೋ ಹೋರಾಡಿ ಬದುಕಬೇಕು ಇಲ್ಲೇ ಶರಣಾಗಿ ಅಳಿದುಹೋಗಬೇಕು.  ಇವೆರಡರಲ್ಲಿ ಆಕೆ ಹೋರಾಟದ ಹಾದಿ ಆಯ್ದುಕೊಂಡಿದ್ದಳು.
ನಿಧಾನವಾಗಿ ನಡೆಯಲು ಆರಂಭಿಸಿದ್ದಳು ಮಾಳವಿಕಾ.

ನೋಡನೋಡುತ್ತಿದ್ದಂತೆಯೇ ಸಹಪಾಠಿ ಗಳು ಹತ್ತನೆಯ ವರ್ಗದ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ತಾನೂ ಪರೀಕ್ಷೆ
ಬರೆಯಬೇಕೆಂದು ನಿರ್ಧರಿಸುವಾಗ ಪರೀಕ್ಷೆಗೆ ಮೂರುತಿಂಗಳು ಮಾತ್ರ ಉಳಿದಿತ್ತು. ಪಣತೊಟ್ಟು ಗಣಿತ, ವಿಜ್ಞಾನ ಎಲ್ಲವನ್ನೂ ಕಲಿತು ಸಹಾಯಕರ ನೆರವಿನಿಂದ ಪರೀಕ್ಷೆ ಬರೆದಳು. ಫಲಿತಾಂಶ? ಗಣಿತ ಮತ್ತು ವಿಜ್ಞಾನದಲ್ಲಿ ನೂರಕ್ಕೆ ನೂರು, ಹಿಂದಿಯಲ್ಲಿ ನೂರಕ್ಕೆ ತೊಂಬತ್ತೇಳು. ಒಟ್ಟೂ 500ಕ್ಕೆ 483 ಅಂಕ ಪಡೆದ ಮಾಳವಿಕಾಳ ಹೆಸರು ರಾಜ್ಯದ ಅಗ್ರ ಶ್ರೇಯಾಂಕಿತರ ಪಟ್ಟಿಯಲ್ಲಿ ಶಾಮೀಲಾಗಿತ್ತು.

ಮಾರನೆಯ ದಿನ ವೃತ್ತ ಪತ್ರಿಕೆ ಯಲ್ಲಿ ಆಕೆಯ ಸಾಧನೆ ಗಮನಿಸಿದ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಆಕೆಯನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ ಅಭಿನಂದಿಸಿದರು. ಅಂದಿನ ಅವರ ಪ್ರೋತ್ಸಾಹದ ನುಡಿಗಳು ಆಕೆಯಲ್ಲಿ ಹುದುಗಿದ್ದ ಸಾಧನೆಯ ಬಯಕೆಗೆ ನೀರೆರೆದಿದ್ದವು. ವಿಸ್ಡಮ್ ಪತ್ರಿಕೆಯ ‘ಮಾದರಿ ವಿದ್ಯಾರ್ಥಿ’ ಪ್ರಶಸ್ತಿಗೆ ಆಕೆ ಭಾಜನಳಾದಳು. ಮುಂದೆ
ದೆಹಲಿಯಲ್ಲಿ ಅರ್ಥಶಾಸ ಅಭ್ಯಾಸ ಮಾಡಿ (ಗೌರವ)ಪದವಿ ಪಡೆದಳು. ಅಷ್ಟಕ್ಕೇ ನಿಲ್ಲದೆ, ಡೆಲ್ಲಿ ಸ್ಕೂಲ್ ಆಫ್ ಸೋಶಿಯಲ್ ‌ನಿಂದ ‘ಸಾಮಾಜಿಕ ಕಾರ್ಯಗಳು’ ಎಂಬ ವಿಷಯದ ಮೇಲೆ ಪ್ರಬಂಧ ಬರೆದು ಡಾಕ್ಟರೇಟ್ ಪಡೆದುಕೊಂಡಳು.

ಬಲಗೈನ ಮುಂದೆ ಉಳಿದ ಸಣ್ಣ ಎಲುಬನ್ನೇ ಬೆರಳನ್ನಾಗಿಸಿಕೊಂಡು ಅದರಿಂದಲೇ ಕಂಪ್ಯೂಟರ್‌ನ ಕೀಲಿಮಣೆ ಒತ್ತಿ 250 ಪುಟದ ಪ್ರಬಂಧವನ್ನು ಸಿದ್ಧಪಡಿಸಿದ್ದಳು ಡಾಕ್ಟರ್ ಮಾಳವಿಕಾ! ಬಾಂಬ್ ಸಿಡಿದ ದಿನ ಬದುಕಿ ಉಳಿಯುತ್ತೇನೋ ಇಲ್ಲವೋ ಎಂಬ ಅನುಮಾನದೊಂದಿಗೆ ಕೊನೆಯ ಬಾರಿ ಅಪ್ಪ, ಅಮ್ಮನಲ್ಲಿ ಕ್ಷಮೆ ಕೇಳಿದ್ದ, ಗೆಳತಿಯರನ್ನು ಭೇಟಿಯಾಗಲು ಬಯಸಿದ್ದ ಆಕೆ ಮುಂದೊಂದು ದಿನ ವಿಶ್ವದಾದ್ಯಂತ ಜನರನ್ನು ಪ್ರೇರೇಪಿಸುವ ಭಾಷಣಕಾರಳಾಗುತ್ತಾಳೆ, ಸಂಯುಕ್ತ ರಾಷ್ಟ್ರದ ಸಭೆಯಲ್ಲಿಯೂ ಭಾಷಣ ಮಾಡಿ ಪ್ರಶಂಸೆಗೆ ಪಾತ್ರಳಾಗುತ್ತಾಳೆಂದು ಯಾರೂ ಎಣಿಸಿರಲಿಕ್ಕಿಲ್ಲ.

ಅಂದು ಆಕೆ ಮಾಡಿದ ಐದು ನಿಮಿಷದ ಭಾಷಣದ ನಡುವೆ ಜನರು ಹತ್ತು ಬಾರಿ ಕರತಾಡನ ಗೈದದ್ದಲ್ಲದೆ, ಭಾಷಣದ ನಂತರ ಎದ್ದು ನಿಂತು ಗೌರವ ಸಲ್ಲಿಸಿದ್ದರು. ಇದಕ್ಕಿಂತ ದೊಡ್ಡ ಬಹುಮಾನ ಬೇಕೆ? ಶೈಕ್ಷಣಿಕವಾಗಿ ಸಾಧಿಸಿದ್ದಾಯಿತು, ದಿನನಿತ್ಯದ
ಬದುಕಿಗೇನು? ಎಷ್ಟು ದಿನವೆಂದು ಬೇರೆಯವರ ಸಹಾಯ ಬಯಸುವುದು? ಅಂಗ ಊನವಾದವರಿಗೆ ಕೂದಲು ಬಾಚುವುದರಿಂದ ಹಿಡಿದು ಊಟ ಮಾಡುವುದರವರೆಗೆ ಎಲ್ಲವೂ ಸವಾಲೇ ತಾನೆ? ಎಲ್ಲ ಸವಾಲನ್ನೂ ಎದುರಿಸಲು ಆಕೆ ಸಿದ್ಧಳಾದಳು. ಕೃತಕ ವಾಗಿ ಜೋಡಿಸಿದ ಕೈಗಳಿಂದಲೇ ಬಟ್ಟೆ ತೊಡುವುದು, ಅಡುಗೆಮಾಡುವುದು, ಎಲ್ಲವನ್ನೂ ರೂಢಿಸಿಕೊಂಡಳು. ಸಾಮಾನ್ಯ ಜಗತ್ತಿನಲ್ಲಿ ಬದುಕಲು ಬೇಕಾದ ಎಲ್ಲ ಕಾರ್ಯಗಳನ್ನೂ ಮಾಡಲು ಕಲಿತಳು.

ಎಷ್ಟೋ ಜನ ಆಕೆ ಇನ್ನೆಂದೂ ತನ್ನ ಕಾಲಮೇಲೆ ನಿಲ್ಲಲಾರಳು ಎಂದೇ ಭಾವಿಸಿದ್ದರು. ಅದನ್ನೂ ಮೀರಿಸುವಂತೆ ಚೆನ್ನೆ ನ
ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಲ್ಲಿ ರ‍್ಯಾಂಪ್ ವಾಕ್ ಮಾಡಿದಳು. ತನ್ನ ಪ್ರೀತಿಯ ನಾಟ್ಯ ವನ್ನೂ ಮಾಡತೊಡಗಿದಳು. ಇಷ್ಟೆಲ್ಲ ಮಾಡುತ್ತಿದ್ದಾಳೆ ಎಂದರೆ ಆಕೆ ಇಂದು ನೋವಿನಿಂದ ಸಂಪೂರ್ಣ ಮುಕ್ತಳಾಗಿzಳಾ? ಇಲ್ಲವೇ ಇಲ್ಲ. ವೇದನೆಯನ್ನೂ ಮೀರಿ ನಿಂತದ್ದು ಆಕೆಯ ಬಯಕೆ, ಆಕಾಂಕ್ಷೆ, ಅಭಿಲಾಷೆ. ಸಾಧಿಸಬೇಕೆಂಬ ಉತ್ಕಟ ಬಯಕೆ ಯೊಂದಿದ್ದರೆ ನೋವು ಏನು, ಉಳಿದ ಎಲ್ಲಾ ವಿಷಯ ಗಳೂ ಆಕೆಗೆ ನಗಣ್ಯವಾದವು.

ನಿಜವಾದ ವೈಕಲ್ಯ ಇರುವುದು ಮನೋಭಾವದಲ್ಲಿಯೇ ಶಿವಾಯ್ ದೇಹದಲ್ಲಿ ಅಲ್ಲ ಎಂದು ಆಕೆ ತೋರಿಸಿಕೊಟ್ಟಳು. ಇಂದು ಅಂಗ ಊನರು ತೊಡಬಹುದಾದ ಬಟ್ಟೆಯನ್ನು ವಿನ್ಯಾಸಗೊಳಿಸುವ ಒಂದು ಸಂಸ್ಥೆಗೆ ಆಕೆ ಮಾಡೆಲ್, ಅದಕ್ಕಿಂತಲೂ ಮಿಗಿಲಾಗಿ
ಅನೇಕರಿಗೆ ರೋಲ್ ಮಾಡೆಲ್! ನಾನು ಹೇಳಬೇಕೆಂದಿರುವ ಇನ್ನೊಂದು ಹೆಸರು ಮಾನಸಿ ಜೋಶಿ. ಆಕೆಯೂ 1989ರಲ್ಲಿ ಜನಿಸಿದವಳೇ.

ಗುಜರಾತ್‌ನಲ್ಲಿ ಜನಿಸಿದ ಈಕೆಯ ತಂದೆ ಬಾಬಾ ಅಟೊಮಿಕ್ ರಿಸರ್ಚ್ ಸೆಂಟರ್‌ನ ಉದ್ಯೋಗಿ. ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿಕೊಂಡಿದ್ದಳು ಮಾನಸಿ. ಆದಿನ ಯಾವ ಘಳಿಗೆಯಲ್ಲಿ ಮನೆ ಬಿಟ್ಟಿದ್ದಳೋ ಏನೋ, ದೊಡ್ಡ ಟ್ರಕ್ ಒಂದು ಆಕೆಯ ಸ್ಕೂಟಿಗೆ ಗುದ್ದಿತ್ತು. ಕೆಳಗೆ ಬಿದ್ದ ಆಕೆಯ ಎಡಗಾಲಿನ ಮೇಲೆ ಟ್ರಕ್‌ನ ಹಿಂದಿನ ಚಕ್ರ ಹತ್ತಿಹೋಗಿತ್ತು. ಆ ಸಂದಂರ್ಭದಲ್ಲಿ ಆತಂಕಗೊಂಡರೆ ಇನ್ನೂ ಹೆಚ್ಚಿನ ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತೇನೆಂದು ಅರಿತ ಆಕೆ ಶಾಂತವಾಗಿದ್ದು, ಅಕ್ಕ ಪಕ್ಕದವರ ಸಹಾಯ ಕೇಳಿದ್ದಳು.

ಆ ಸಂದರ್ಭದಲ್ಲಿ ಸಹಾಯಕ್ಕೆ ಬಂದದ್ದು ಆಕೆಯ ಹಿಂದೆ ಬರುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸ್ವರ್ಣಿಮಾ ಎಂಬ ಯುವತಿ. ತಾನು ಅಂದು ಬರೆಯ ಬೇಕಿದ್ದ ಪರೀಕ್ಷೆಯನ್ನು ಬಿಟ್ಟು ಸ್ವರ್ಣಿಮಾ ಮಾನಸಿ ಯನ್ನು ಆಸ್ಪತ್ರೆಗೆ ತಲುಪಿಸಿದ್ದಳು. ಆದರೆ ಆ
ಆಸ್ಪತ್ರೆಯಲ್ಲಿ ಸೌಕರ್ಯವಿಲ್ಲದ ಕಾರಣ ವೈದ್ಯರು ಆಕೆಯನ್ನು ಬೇರೆ ಆಸ್ಪತ್ರೆಗೆ ಕೊಂಡೊಯ್ಯಲು ಶಿಫಾರಸು ಮಾಡಿದ್ದರು. ಕೆಲವು ಗಂಟೆಗಳು ಕಾದ ನಂತರ ಆಕೆಯನ್ನು ಸಾಗಿಸಲು ಬಂದ ಆಂಬ್ಯುಲೆನ್ಸ್ – ಮಾರುತಿ ಓಮಿನಿ.

ಮಾನಸಿ ಎತ್ತರದ ಹುಡುಗಿ ಯಾದದ್ದರಿಂದ ತೆರೆದ ಬಾಗಿಲಿನ ಆಂಬ್ಯುಲೆನ್ಸ್ (ಮಾರುತಿ ಓಮಿನಿ) ನಲ್ಲಿ ಹೊಂಡ ಬಿದ್ದ ರಸ್ತೆ, ಟ್ರಾಫಿಕ್ ಜಾಮ್ ಎಲ್ಲವನ್ನೂ ದಾಟಿ ಆಕೆಯನ್ನು ಸರಿಯಾದ ಸ್ಥಳಕ್ಕೆ ಸೇರಿಸುವಾಗ ಸಾಯಂಕಾಲ ಆರು ಗಂಟೆ. ಅಂದಹಾಗೆ. ಅಪಘಾತವಾದದ್ದು ಮುಂಜಾನೆ ಎಂಟೂವರೆಗೆ! ಒಂದೆಡೆ ಅಪಘಾತದ ನೋವು, ಸಾಲದು ಎಂಬಂತೆ ರಸ್ತೆಯಲ್ಲಿರುವ ಹೊಂಡದ
ಹೊಡೆತ. ಆದರೂ ಎಲ್ಲವನ್ನೂ ಸಹಿಸಿಕೊಂಡಿದ್ದಳು ಮಾನಸಿ.

ನಂತರ ನಡೆದದ್ದು ಸತತ ಹನ್ನೆರಡು ಗಂಟೆ ಗಳ ವ್ಯರ್ಥ ಶಸ್ತ್ರಚಿಕಿತ್ಸೆ. ಇನ್ನು ಮುಂದೆ ಒಂದೇ ಕಾಲಿನಲ್ಲಿ ಬದುಕಬೇಕೆಂಬ ಸತ್ಯವನ್ನು ಆಕೆ ಒಪ್ಪಿ ಕೊಂಡಾಗಿತ್ತು. ಒಂದೆರಡು ತಿಂಗಳಿನಲ್ಲಿಯೇ ಕೃತಕ ಕಾಲನ್ನು ಜೋಡಿಸಿಯಾಗಿತ್ತು, ಐದು ತಿಂಗಳಿನೊಳಗೆ ಆಕೆ ಕೆಲಸಕ್ಕೂ ಹಾಜರಾದಳು. ಈ ನಡುವೆ ಆಕೆ ಮಿಸ್ ಮಾಡಿಕೊಳ್ಳುತ್ತಿದ್ದುದು ಆಕೆಯ ಬ್ಯಾಡ್ಮಿಂಟನ್ ಆಟವನ್ನು. ತನ್ನ ಹತ್ತನೆಯ ವರ್ಷದಿಂದಲೇ ರ‍್ಯಾಕೆಟ್ ಹಿಡಿದು ಕೋರ್ಟಿಗಿಳಿದು, ಜಿಲ್ಲಾಮಟ್ಟದ ಪಂದ್ಯಾಟಗಳಲ್ಲೂ ಆಡಿದ ಆಕೆಗೆ ಬ್ಯಾಡ್ಮಿಂಟನ್ ಇಲ್ಲದ ಜೀವನ ಅಸಹನೀಯವಾಗ ತೊಡಗಿತು. ಪುನಃ ತನ್ನ ರ‍್ಯಾಕೆಟ್ ಕೈಗೆತ್ತಿಕೊಂಡಳು. ಆಕೆ ಕೆಲಸಮಾಡುತ್ತಿದ್ದ ಸಂಸ್ಥೆಯಲ್ಲಿ ಪಂದ್ಯಾಟಗಳು ನಡೆಯುತ್ತಿದ್ದವು.

ಅಪಘಾತಕ್ಕಿಂತ ಮೊದಲು ನಡೆದ ಪಂದ್ಯಾಟದಲ್ಲಿ ಆಕೆ ಜಯಶಾಲಿಯಾಗಿದ್ದಳು. ವಿಶೇಷ ವೆಂದರೆ ಅಪಘಾತದ ನಂತರವೂ ಎರಡು ವರ್ಷ ಆಕೆಯೇ ಜಯಶಾಲಿಯಾದಳು. ಅದು ಆಕೆಗೆ ಪ್ಯಾರಾಒಲಂಪಿಕ್‌ನಲ್ಲಿ ಭಾಗವಹಿಸಲು ಪ್ರೇರಣೆ ನೀಡಿತು. ಅದು ಅವಳನ್ನು 2014ರ ಏಷ್ಯನ್ ಗೇಮ್ಸ್ ನ ಆಯ್ಕೆ ಪ್ರಕ್ರಿಯೆಗೆ ಬೆಂಗಳೂರಿಗೆ ಕರೆತಂದಿತ್ತು. ಅಂದು ಬೆಂಗಳೂರಿನಿಂದ ಖಾಲಿ ಕೈಯಲಿ ಹಿಂತಿರು ಗಿದ್ದರೂ ಪ್ರಯಾಣ ಮುಂದುವರಿಸುವ ಸಂಕಲ್ಪ ತೊಟ್ಟಿದ್ದಳು. ಅದೇ ವರ್ಷದ ಅಂತ್ಯದಲ್ಲಿ ನಡೆದ ಪಂದ್ಯಾಟ ವೊಂದರಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ್ತಿಯ ಎದುರು ಸೆಣಸಿ ಬೆಳ್ಳಿ ಪದಕ ಪಡೆದಳು. ಅದರ ಮುಂದಿನ ವರ್ಷ ಸ್ಪೇನ್‌ನಲ್ಲಿ ನಡೆಯಬೇಕಿದ್ದ ಪಂದ್ಯಾಟಕ್ಕೆ ನೇರವಾಗಿ ಆಯ್ಕೆಯಾದಳು.

ಅಲ್ಲಿ ಕಂಚಿನ ಪದಕಕ್ಕಾಗಿ ಹೋರಾಡಿ ಸೋತರೂ ಭಾರತಕ್ಕಾಗಿ. ಹೋರಾಡುವ ಅಭಿಲಾಷೆ ಅವಳಲ್ಲಿ ಇಮ್ಮಡಿಯಾಗಿತ್ತು. ನಂತರ ಲಂಡನ್ನಲ್ಲಿ ನಡೆದ ವಲ್ಡ ಚಾಂಪಿಯನ್ಶಿಪ್ನಲ್ಲಿ ಅತ್ಯಂತ ಕಮ್ಮಿ ಶ್ರೇಯಾಂಕದ ಆಟಗಾರ್ತಿಯಾಗಿ ಮಿಕ್ಸ್ ಡಬಲ್ಸ್‌ನಲ್ಲಿ ಪ್ರವೇಶ ದೊರಕಿತು. ಅಲ್ಲಿ ಮೊದಲ ಸುತ್ತಿನಲ್ಲಿ ಆಗಿನ ವಿಶ್ವ ವಿಜೇತ ರನ್ನು ಸೋಲಿಸಿ ಮುನ್ನಡೆದಿತ್ತು ಮಾನಸಿಯ ತಂಡ. ಆ
ಪಂದ್ಯಾಟದ ಅಂತಿಮ ಪಂದ್ಯದಲ್ಲಿ ಬೆಳ್ಳಿ ಪದಕ ಪಡೆಯುವಲ್ಲಿ ಈ ಜೋಡಿ ಯಶಸ್ವಿಯಾಯಿತು.

ನಂತರ 2017ರಲ್ಲಿ ಆಕೆಗೆ ಸಿಕ್ಕಿದ್ದು ಕಂಚಿನ ಪದಕ. ಅದನ್ನು ಆಕೆ ಚಿನ್ನವನ್ನಾಗಿ ಪರಿವರ್ತಿಸಿ ಕೊಂಡದ್ದು 2019ರಲ್ಲಿ. ಈ ನಡುವೆ ಅಂತಾರಾಷ್ಟ್ರೀಯ ಪಂದ್ಯಾಟ, ಏಷ್ಯನ್ ಗೇಮ್ಸ ಇತ್ಯಾದಿಗಳಲ್ಲಿ ಭಾಗವಹಿಸಿ ಮೂರು ಕಂಚಿನ ಪದಕ ಪಡೆದಿದ್ದಳು. ಭಾರತ ದಂಥ ದೇಶದಲ್ಲಿ ಪ್ಯಾರಾಒಲಂಪಿಕ್‌ಗೆ ಹೆಚ್ಚಿನ ಮಹತ್ವವೇನೂ ಇಲ್ಲವಾದ್ದರಿಂದ ಸರಕಾರ ದಿಂದ ಯಾವುದೇ ಸಹಾಯ ಆಕೆಗೆ ಸಿಗುತ್ತಿರಲಿಲ್ಲ. ತರಬೇತಿ, ಪ್ರಯಾಣ ಎಲ್ಲಾ ಖರ್ಚನ್ನೂ ಆಕೆಯೇ ನೋಡಿಕೊಳ್ಳಬೇಕಾದ್ದರಿಂದ ಪ್ರತಿ ನಿತ್ಯ ಒಂಬತ್ತರಿಂದ ಹತ್ತು ಗಂಟೆ ಆಫೀಸ್ ಕೆಲಸ ಮುಗಿಸಿ ಬ್ಯಾಡ್ಮಿಂಟನ್ ತರಬೇತಿ ಮತ್ತು ಅಭ್ಯಾಸಕ್ಕೆ ತೆರಳುತ್ತಿದ್ದಳು ಮಾನಸಿ.

ನಿತ್ಯ ಮುಂಜಾನೆ ಐದರಿಂದ ಎಂಟು ಗಂಟೆಯ ವರೆಗೆ, ಮೂರು ತಾಸು, ಮತ್ತು ಸಾಯಂಕಾಲ ಎರಡು ತಾಸು ಅಭ್ಯಾಸ
ಮಾಡುತ್ತಿದ್ದಳು. ಅದರ ಪ್ರತಿಫಲವೇ ಆಕೆಗೆ ಬಂಗಾರದ ಪದಕದ ರೂಪದಲ್ಲಿ ದೊರಕಿದ್ದು. ತಪ್ಪಿಸಿಕೊಳ್ಳಲು ನೂರಾರು ಸಬೂಬು ಸಿಗಬಹುದು, ಸಾಧಿಸಬೇಕೆಂಬ ಛಲವಿದ್ದರೆ ಗುರಿಯ ಗೂಡು ಸೇರಲು ಪರಿಶ್ರಮವೇ ದಾರಿ ಎಂಬುದಕ್ಕೆ ಮಾದರಿ ಮಾನಸಿ ಜೋಶಿ.
ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ನಮ್ಮ ದೇಶದ ಆದರ್ಶ ಮಹಿಳೆ ಅಥವಾ ನಾರಿ ಶಕ್ತಿ ಎಂದಾಕ್ಷಣ ನೆನಪಿಗೆ ಬರುವ ಹೆಸರುಗಳೆಂದರೆ ಮದರ್ ಥೆರೇಸಾ, ಇಂದಿರಾ ಗಾಂಧಿ, ಲತಾ ಮಂಗೇಶ್ಕರ್ ಇತ್ಯಾದಿ.

ಅದಕ್ಕೂ ಹಿಂದೆ ಹೋದರೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಕಿತ್ತೂರ ಚೆನ್ನಮ್ಮ ಇತ್ಯಾದಿ ಇತ್ಯಾದಿ. ಅವರವರ ಸಾಧನೆಗೆ
ಸಂದಾಯ ವಾಗಬೇಕಾದ ಗೌರವವನ್ನು ಸಲ್ಲಿಸಬೇಕಾದದ್ದೇ. ಅವರೊಂದಿಗೆ ಮಾಳವಿಕಾ ಅಯ್ಯರ್, ಮಾನಸಿ ಜೋಶಿ ಯಂಥವರೂ ಗೌರವಕ್ಕೆ ಅರ್ಹರೇ. ಇವರ ಜೀವನ ಸಾರ ಎಂಬುದು ಮನುಷ್ಯನ ಬದುಕಿಗೆ ಗಾಳಿ, ನೀರಿನಂತೆಯೇ ಅತ್ಯವಶ್ಯಕ ವಾಗಿ ಬೇಕಾದ ನಂಬಿಕೆ, ಭರವಸೆಯ ಕಣಜ. ಮೊಗೆದಷ್ಟೂ ಉಕ್ಕುವ ಜಲಧಿ, ಎಂದೂ ಬತ್ತದ ವಾರಿಧಿ.

ನಮ್ಮ ದೇಶದಲ್ಲಿ ಮಧ್ಯರಾತ್ರಿ ಒಬ್ಬ ಹೆಣ್ಣು ಮಗಳನ್ನು ರೈಲಿನಿಂದ ಹೊರಗೆ ಎಸೆಯುವ ಅಮಾನುಷ ವ್ಯಕಿಗಳು ಇನ್ನೂ ಇದ್ದಾರೆ ಎಂದು ಖೇದವಾಗುತ್ತದೆ. ಹಾಗೆಯೇ ಅಂಥವರಿಗೆ ಉತ್ತರ ನೀಡಲು ಎರಡೂ ಕಾಲುಗಳನ್ನು ಕಳೆದುಕೊಂಡರೂ, ಕೃತಕ ಕಾಲಿನೊಂದಿಗೇ ವಿಶ್ವದ ತುತ್ತತುದಿಗೆ ಏರಿದ ಅರುಣಿಮಾ ಸಿನ್ಹಾರಂಥವರೂ ಇದ್ದಾರೆ ಎಂದು ಹೆಮ್ಮೆಯೂ ಆಗುತ್ತದೆ.

ಏಳನೆಯ ತರಗತಿಯಲ್ಲಿ ಓದುತ್ತಿದ್ದ ಹೆಣ್ಣು ಮಗುವಿನ ಮುಖಕ್ಕೆ ಆಮ್ಲ ಎರಚುವ ಮೂವತ್ತೆರಡು ವರ್ಷದ ರಾಕ್ಷಸರೂ ಇದ್ದಾರೆ ಎಂಬುದನ್ನು ಕೇಳಿದರೆ ಅಸಹ್ಯವಾಗುತ್ತದೆ. ಅದನ್ನೂ ಮೀರಿ ಬದುಕನ್ನು ಕಟ್ಟಿಕೊಂಡ ಲಕ್ಷ್ಮಿ ಅಗರ್ವಾಲ್‌ರಂಥ ಸ್ತ್ರೀಯರೂ ಇದ್ದಾರೆ ಎಂದು ನೆನೆದಾಗ ಸಮಾಧಾನವಾಗುತ್ತದೆ. ಇಂತಹ ಸೀಯರನ್ನು ನೋಡಿದಾಗಲೇ ಅನಿಸುವುದು, ಮನಸ್ಸಿದ್ದರೆ
ಮಾರ್ಗ ಎಂದು. ಅಲ್ಲ, ಮನಸ್ಸೊಂದಿದ್ದರೆ ಅನೇಕ ಮಾರ್ಗ ಎಂದು. ಅಂತಾರಾಷ್ಟ್ರೀಯ ಮಹಿಳಾದಿನದಂದು ಸಹನೆ, ಸಾಧನೆಯ ಪ್ರತಿರೂಪಗಳಾದ ಸ್ತ್ರೀ ಸಂಕುಲಕ್ಕೆ ನಮನ, ನಮನ, ನಮನ.