Sunday, 15th December 2024

ಮಹಿಳಾ ಸಬಲೀಕರಣ ಇಂದಿನ ಅಗತ್ಯ

ಮಹಿಳೆ ಅಬಲೆಯಲ್ಲ, ಸಬಲೆ. ಅವಳು ಪುರುಷನಷ್ಟೇ ಸಮರ್ಥಳು, ಅವನಿಗೆ ಸಮಾನಳು. ‘ಮಹಿಳೆಯು ಎಲ್ಲಿ ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ವಾಸಿಸುತ್ತಾರೆ’, ‘ಪ್ರತಿ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇರುವಳು’, ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’, ‘ಹೆಣ್ಣು ಕುಟುಂಬದ ಕಣ್ಣು’- ಇಷ್ಟು ಮಾತು ಸಾಕಲ್ಲವೇ ಮಹಿಳೆಗೆ ನಮ್ಮ ಸಮಾಜದಲ್ಲಿ ಸೂಕ್ತ ಗೌರವ, ಸ್ಥಾನಮಾನ ನೀಡುತ್ತಿದ್ದೇವೆ ಎಂದು ಹೇಳಲು? ನಾವು ಮಹಿಳೆಯರಿಗೆ ಗೌರವವನ್ನು ಕೊಡುತ್ತಿದ್ದೇವೆ, ನಿಜ.

ಆದರೆ ಪುರುಷರಿಗೆ ಸಮಾನರಾಗಿ ಮಹಿಳೆಯರನ್ನು ಕಾಣುವ ವಾತಾವರಣ ಎಲ್ಲೆಡೆ ಇದೆಯೇ? ಅನೇಕ ಕಡೆಗಳಲ್ಲಿ ಈಗಲೂ ಪುರುಷರು, ಮಹಿಳೆಯರು ಎಂಬ ಭೇದಭಾವವಿಲ್ಲವೇ? ಸ್ತ್ರೀ ಸಮಾನತೆ ಎಂಬುದು ಕೇವಲ ಬಾಯಿಮಾತಿಗಷ್ಟೇ ಸೀಮಿತವಾಗಿದೆಯಲ್ಲವೇ? ಮಹಿಳೆಯರು ಮನೆಯ ನಾಲ್ಕು ಗೋಡೆ ಗಳಿಂದ ಹೊರಬಂದು ಸಮಾಜದ ಎಲ್ಲಾ ಕಾರ್ಯ ಕ್ಷೇತ್ರಗಳಲ್ಲೂ ಸುಸೂತ್ರವಾಗಿ ಕಾರ್ಯನಿರ್ವಹಿಸುವಷ್ಟರ ಮಟ್ಟಿಗಿನ ವಾತಾವರಣ ನಮ್ಮಲ್ಲಿದೆಯೇ? ಒಂದು ವೇಳೆ ಮಹಿಳೆಯರು ಹಾಗೆ ಕೆಲಸ ಮಾಡುತ್ತಿದ್ದರೆ ಅವರ ಪ್ರಮಾಣ ಎಷ್ಟು? ಈ ಎಲ್ಲಾ ಪ್ರಶ್ನೆಗಳನ್ನು ನಾಗರಿಕ ಸಮಾಜದ ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಿದೆ.

ಒಂದೊಮ್ಮೆ ಇವಕ್ಕೆ ಸಕಾರಾತ್ಮಕ ಉತ್ತರ ಬಂದರೆ ಸಂತೋಷ; ಇಲ್ಲವಾದಲ್ಲಿ ಅದು ಗಂಭೀರವಾಗಿ ಆಲೋಚಿಸಬೇಕಾದ ಬಾಬತ್ತು ಎನಿಸುತ್ತದೆ.
ಸಮಾನತೆ ಸಾಧಿಸುವ ನಿಟ್ಟಿನಲ್ಲಿ ನಾವು ಸಾಗುತ್ತಿದ್ದೇವೆ ಎಂದಾದಲ್ಲಿ, ಆ ಕೆಲಸಕ್ಕೆ ಮತ್ತಷ್ಟು ತೀವ್ರಗತಿ ಒದಗಬೇಕಿದೆ. ಮಹಿಳಾ ಸಬಲೀಕರಣ ಎಂಬುದು ಇಂದು ನಿನ್ನೆಯ ವಿಚಾರವಲ್ಲ; ಬಹಳ ವರ್ಷಗಳಿಂದ ಅದು ಚರ್ಚಿತ ವಿಷಯವೇ. ಈ ವಿಚಾರದ ಬಗ್ಗೆ ‘ಮಹಿಳಾ ದಿನಾಚರಣೆ’ಯಂದು ಮಾತನಾಡಿದರೆ ಸಾಲದು.

ಮಹಿಳೆಯರನ್ನು ಸಮಾನವಾಗಿ ಕಾಣುವುದು, ಅವರಿಗೆ ಗೌರವ ನೀಡುವುದು ಮನೆಯಿಂದಲೇ ಶುರುವಾಗಬೇಕು. ಇತ್ತೀಚೆಗಷ್ಟೇ ಬೆಳಕಿಗೆ ಬಂದ ಘಟನೆ ಯೊಂದು ನಾಡಿನ ಪ್ರಜ್ಞಾವಂತ ಜನರು ತಲೆ ತಗ್ಗಿಸುವಂತೆ ಮಾಡಿತು. ಅದೆಂದರೆ- ದುಡ್ಡು ಮಾಡುವಿಕೆ ಮತ್ತು ಸ್ವಹಿತಾಸಕ್ತಿಯನ್ನೇ ಉಸಿರಾಗಿಸಿಕೊಂಡ ಕೆಲವರು ಒಂದುಗೂಡಿ ಹೆಣ್ಣು ಭ್ರೂಣಹತ್ಯೆಯಂಥ ಕುಕೃತ್ಯದಲ್ಲಿ ತೊಡಗಿಸಿಕೊಂಡಿದ್ದು. ಭ್ರೂಣಪತ್ತೆಯ ಕೆಲಸವೇ ಕಾನೂನಿನ ಪ್ರಕಾರ ಅಪರಾಧ ವಾಗಿರುವಾಗ, ಆ ಭ್ರೂಣವು ಹೆಣ್ಣು ಎಂದು ತಿಳಿದು ಅದನ್ನು ಸಾಯಿಸಲು ಮುಂದಾಗುವುದು ಇದಕ್ಕಿಂತ ಘೋರ ಅಪರಾಧವಲ್ಲವೇ? ನಮ್ಮ ನಾಗರಿಕ
ಸಮಾಜದಲ್ಲಿ ಇಂಥ ಬೆಳವಣಿಗೆಯಾಗಿರುವುದು ಅತ್ಯಂತ ನೋವಿನ ಸಂಗತಿ.

‘ನಮ್ಮ ದೇಶದಲ್ಲಿ ಸ್ತ್ರೀಯರು ಮಧ್ಯರಾತ್ರಿಯಲ್ಲಿ ನಿರಾತಂಕವಾಗಿ ನಡೆದಾಡುವಂತಾದರೆ, ಆಗಲೇ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ’ ಎಂದಿದ್ದಾರೆ
ಗಾಂಽಜಿ. ಆದರೆ ಹೆಣ್ಣು ಹೀಗೆ ಮಧ್ಯರಾತ್ರಿಯಲ್ಲಿ ನಿರ್ಭಯವಾಗಿ ನಡೆದಾಡುವುದಕ್ಕೆ ಆಸ್ಪದ ಕೊಡುವುದಿರಲಿ, ಅವಳು ತಾಯ ಗರ್ಭದಲ್ಲಿರುವಾಗಲೇ ಕುತ್ತಿಗೆ ಹಿಸುಕುವವರಿಗೆ ಏನನ್ನುವುದು?! ಈ ಕರ್ಮಕಾಂಡದಲ್ಲಿ ತೊಡಗಿಸಿಕೊಂಡಿದ್ದವರು ಅದೆಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಘೋರಾತಿಘೋರ ಶಿಕ್ಷೆಯಾಗಬೇಕು ಎಂಬುದು ಎಲ್ಲರ ವಾದ.

ಅಷ್ಟಕ್ಕೂ, ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಅದೇಕೆ ಬೇಸರ ಪಟ್ಟುಕೊಳ್ಳಬೇಕು? ನಮ್ಮ ತಾಯಿ, ಸೋದರಿ ಹೆಣ್ಣಲ್ಲವೇ? ‘ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವಿರಿ ಕಣ್ಣು ಕಾಣದ ಗಾವಿಲರೇ? ಪೆಣ್ಣಲ್ಲವೇ ನಿಮ್ಮನೆಲ್ಲ ಪಡೆದ ತಾಯಿ?’ ಎಂಬ ಸಂಚಿ ಹೊನ್ನಮ್ಮನ ನುಡಿಯನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸಬೇಕು, ಆತ್ಮಾವಲೋಕನಕ್ಕೆ ಅದು ಕಾರಣವಾಗಬೇಕು. ಎಷ್ಟೋ ಕುಟುಂಬಗಳಲ್ಲಿ, ಹೆಣ್ಣು ಮಕ್ಕಳನ್ನು ಹೆಚ್ಚು ಓದಿಸುವುದಿಲ್ಲ; ಸಾಲದೆಂಬಂತೆ, ಅವರ ಅಪೇಕ್ಷೆ ಅರಿಯದೆಯೇ ಚಿಕ್ಕಪ್ರಾಯದಲ್ಲೇ ಅವರ ಮದುವೆ ಮಾಡಿಬಿಡುತ್ತಾರೆ. ಇಂಥ ಪರಿಪಾಠದಿಂದ ಹೆಣ್ಣು ಮಕ್ಕಳ ಹಕ್ಕುಗಳನ್ನು ಮೊಟಕು ಗೊಳಿಸಿದಂತಾಗುವುದಿಲ್ಲವೇ? ಗ್ರಾಮೀಣ ಪ್ರದೇಶಗಳಲ್ಲಿ ಒಂದೇ ತೆರನಾದ ಕೂಲಿ ಕೆಲಸದಲ್ಲಿ ಪುರುಷ ಮತ್ತು ಸ್ತ್ರೀ ತೊಡಗಿಸಿಕೊಂಡರೂ ಅವರಿಗೆ ಸಮಾನ ಕೂಲಿ ನೀಡಲಾಗುತ್ತಿದೆಯೇ? ಸಮಾಜದ ಮಿಕ್ಕ ಕಾರ್ಯಕ್ಷೇತ್ರಗಳಲ್ಲೂ ಒಂದೇ ತೆರನಾದ ಕಾರ್ಯನಿರ್ವಹಿಸುವ ಪುರುಷ-ಸ್ತ್ರೀಯರಿಗೆ ಸಮಾನ ವೇತನ ನೀಡುವ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನದಲ್ಲಿದೆಯೇ? ಇವೆಲ್ಲಾ ನಾವು ಗಂಭೀರವಾಗಿ ಆಲೋಚಿಸಬೇಕಾದ ವಿಷಯಗಳಾಗಿವೆ.

ಇಂಥ ಹಲವು ‘ಮಹಿಳಾ-ಕೇಂದ್ರಿತ’ ಸಮಸ್ಯೆಗಳಿಗೆ ಪರಿಹಾರವೆಂದರೆ- ಶಿಕ್ಷಣ. ಹೌದು, ಎಲ್ಲರಿಗೂ ಉಚಿತ ಶಿಕ್ಷಣವು ಕಡ್ಡಾಯವಾಗಿ ಸಿಗುವಂತಾಗಬೇಕು. ಸಾಕ್ಷರರಾದರೆ ಸಮಾಜದ ನೀತಿ-ನಿಯಮಗಳನ್ನು ತಿಳಿಯಲು ಪೂರಕ ವಾತಾವರಣ ಸಿಗುತ್ತದೆ. ಮಹಿಳೆಯು ದೈಹಿಕವಾಗಿ ಪುರುಷನಷ್ಟು ಬಲಶಾಲಿ ಯಲ್ಲ ಎಂಬುದನ್ನು ಬಿಟ್ಟರೆ, ಮಿಕ್ಕೆಲ್ಲಾ ರೀತಿಯಲ್ಲೂ ಅವಳು ಪುರುಷನಿಗೆ ಸಮಾನಳು. ಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿದಂತೆ ಇನ್ನಿತರ ಪರೀಕ್ಷೆಗಳಲ್ಲಿ
ಬಾಲಕರಿಗಿಂತ ಬಾಲಕಿಯರೇ ಬಹುತೇಕ ಸಂದರ್ಭಗಳಲ್ಲಿ ಮೇಲುಗೈ ಸಾಧಿಸುವುದನ್ನು ನಾವು ಪತ್ರಿಕೆಗಳಲ್ಲಿ ಓದುತ್ತೇವೆ. ಹಾಗಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಿರಂತರ ಪ್ರೋತ್ಸಾಹ ನೀಡಬೇಕಾದ್ದು ಈ ಕ್ಷಣದ ಅಗತ್ಯ.

ಮಹಿಳಾ ಸಮಾನತೆಯ ವಿಷಯದಲ್ಲಿ ಕಳೆದ ಕೆಲ ವರ್ಷಗಳಿಂದ ಒಂದಷ್ಟು ಹೊಸಹೊಳಹು ಕಾಣುತ್ತಿದ್ದು, ‘ಬೇಟಿ ಬಚಾವೊ, ಬೇಟಿ ಪಢಾವೊ’, ‘ಸುಕನ್ಯಾ ಸಮೃದ್ಧಿ’, ‘ಸಮಾನ ಕೆಲಸಕ್ಕೆ ಸಮಾನ ವೇತನ’ ಸೇರಿದಂತೆ ಅನೇಕ ಯೋಜನೆಗಳು ಸ್ತ್ರೀ-ಸಬಲೀಕರಣಕ್ಕೆ ಪುಷ್ಟಿ ನೀಡುತ್ತಿವೆ. ಜನಸಂಖ್ಯೆ ಯನ್ನು ಗಮನಿಸಿದಾಗ ಸ್ತ್ರೀ-ಪುರುಷರು ಹೆಚ್ಚುಕಡಿಮೆ ಸಮಾನರು. ಆದರೆ ಕಾರ್ಯಕ್ಷೇತ್ರ/ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವಿಕೆಯ ವಿಷಯ
ಬಂದಾಗ, ಈ ಸಮಾನತೆಯಿನ್ನೂ ಹೊಮ್ಮಬೇಕಿದೆ. ಅದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಬೇಕಾದ ಅಗತ್ಯವಿದೆ.

ಮಹಿಳಾ ಮೀಸಲು ವಿಧೇಯಕವನ್ನು ಮಂಡಿಸುವಂಥ ಹೆಜ್ಜೆಯಿಟ್ಟಿದ್ದು ಈ ನಿಟ್ಟಿನಲ್ಲಿ ಒಂದು ಆಶಾದಾಯಕ ಬೆಳವಣಿಗೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಸ್ಥಾನಗಳನ್ನು ಮೀಸಲಿಡುವ ಈ ಹೆಜ್ಜೆಯ ಕುರಿತು ಈ ಹಿಂದೆ ಅನೇಕ ಸಲ ಪರ-ವಿರೋಧದ ಚರ್ಚೆಗಳಾಗಿದ್ದರೂ ಈ ನಿಟ್ಟಿನ ಆಶಾದಾಯಕ ಬೆಳವಣಿಗೆಯಾಗಿರಲಿಲ್ಲ ಎನ್ನಬೇಕು. ‘ಮಗುವನ್ನು ತೂಗುವ ಹೆಣ್ಣು, ಜಗವನ್ನು ಆಳಲಾರಳೇ?’ ಎಂಬ ಮಾತಿದೆ. ಹೀಗಾಗಿ ರಾಜಕಾರಣದಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುವಂತಾಗಬೇಕು.

ಒಟ್ಟಾರೆ ಹೇಳುವುದಾದರೆ, ಮಹಿಳೆಯರನ್ನು ಗೌರವಿಸಿ ಆದರದಿಂದ ಕಾಣುವುದರ ಜತೆಜತೆಗೆ, ಮಹಿಳಾ ಸಬಲೀಕರಣಕ್ಕೆ ಪೂರಕವಾಗುವ ಹತ್ತು ಹಲವು ವಿನೂತನ ಯೋಜನೆಗಳು ಮತ್ತು ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತಾಗಬೇಕು. ಶಿಕ್ಷಣ, ಉದ್ಯಮ, ಆಡಳಿತ, ರಕ್ಷಣೆ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಮಹಿಳೆಯರು ಸ್ಪಷ್ಟವಾದ ಹೆಜ್ಜೆಗುರುತುಗಳನ್ನು ಮೂಡಿಸುವಂತಾಗಬೇಕು. ತನ್ಮೂಲಕ ‘ಹೆಣ್ಣು ಅಬಲೆಯಲ್ಲ, ಸಬಲೆ’ ಎಂಬ ಮಾತಿಗೆ ಮತ್ತಷ್ಟು ಪುಷ್ಟಿ ದೊರೆಯುವಂತಾಗಬೇಕು. ಪುರುಷ ಮತ್ತು ಸ್ತ್ರೀ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಒಂದೇ ಬಂಡಿಯ ಎರಡು ಚಕ್ರಗಳಿದ್ದಂತೆ. ಸಮಾಜದ ಸುಧಾರಣೆಗೆ ಇವರಿಬ್ಬರ ಸಮಾನತೆ ಅತ್ಯಗತ್ಯ.

(ಲೇಖಕರು ಶಿಕ್ಷಕರು)