Thursday, 12th December 2024

ಇದು ಪೋಸ್ಟ್ ಡೇಟೆಡ್ ಚೆಕ್’ನಂಥ ವಿಧೇಯಕ

ರಾಜರಥ

ರಾಜದೀಪ್ ಸರದೇಸಾಯಿ

ಯಾವುದಾದರೂ ಘನಕಾರ್ಯ ಮಾಡಿದಾಗ ಮುಗಿಬಿದ್ದು ಅದರ ಕ್ರೆಡಿಟ್ ತೆಗೆದುಕೊಳ್ಳಲು ಹಾತೊರೆಯುವುದು ರಾಜಕಾರಣ ದಲ್ಲಿ ಲಾಗಾಯ್ತಿನಿಂದ ಇರುವ ವ್ಯವಸ್ಥೆ. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಕಲ್ಪಿಸಲು ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿದ್ದ ಹಾಗೂ ದಶಕಗಳಿಂದ ಬಾಕಿಯುಳಿದಿದ್ದ ‘ಐತಿ ಹಾಸಿಕ’ ಮಹಿಳಾ ಮೀಸಲು ವಿಧೇಯಕ ಕೊನೆಗೂ ಸಂಸತ್ತಿನಲ್ಲಿ ಅಂಗೀಕಾರ ಪಡೆದಿದ್ದಕ್ಕೆ ಕಾರಣ ‘ಮೋದಿ ಹೈ ತೋ ಮುಮ್ಕಿನ್ ಹೈ’ (ಮೋದಿಯಿದ್ದರೆ ಎಲ್ಲವೂ ಸಾಧ್ಯ) ಎಂದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹೇಳಿಕೊಳ್ಳುತ್ತಿದೆ.

ಆದರೆ ಈ ವಿಧೇಯಕ ತಮ್ಮದು ಎಂದು ಸೋನಿಯಾ ಗಾಂಧಿ ಹೇಳಿಕೊಳ್ಳುತ್ತಿದ್ದಾರೆ. ಮಹಿಳೆಯರಿಗೆ ರಾಜಕಾರಣದಲ್ಲಿ ಮೀಸಲಾತಿ ನೀಡುವ ಮೂಲ ಪರಿಕಲ್ಪನೆ ರಾಜೀವ್ ಗಾಂಧಿಯದು ಎಂಬುದು ಅವರ ವಾದ. ಎರಡು ರಾಷ್ಟ್ರೀಯ ಪಕ್ಷಗಳ ಅತ್ಯುನ್ನತ ನಾಯಕರು ಈ ವಿಧೇಯಕಕ್ಕೆ ತಾವೇ ಕಾರಣ ಎಂದು ಹೇಳಿಕೊಳ್ಳುತ್ತಿದ್ದರೂ ಮಹಿಳಾ ಮೀಸಲು ವಿಧೇಯಕ ಕೊನೆಗೂ ಕಾಯ್ದೆಯಾಗುತ್ತಿರುವುದಕ್ಕೆ ನಿಜವಾದ ಕಾರಣ ಈ ದೇಶದ ಮಹಿಳೆಯರೇ. ಏಕೆಂದರೆ ಇಂದು ಮಹಿಳಾ ವೋಟ್ ಬ್ಯಾಂಕ್ ಬಹಳ ಪ್ರಬಲ ವಾಗಿದೆ. ಯಾವ ರಾಜಕೀಯ ಪಕ್ಷವೂ ಅದನ್ನು ಕಡೆಗಣಿಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳೂ ಮಹಿಳೆಯರ ಓಲೈಕೆಗೆ ಶತಾಯಗತಾಯ ಯತ್ನಿಸುತ್ತಿವೆ.

ಲೋಕಸಭೆಯಲ್ಲಿ ಮೋದಿ ಸರಕಾರಕ್ಕೆ ಕಳೆದ ೯ ವರ್ಷಗಳಿಂದ ಭರ್ಜರಿ ಬಹುಮತವಿದೆ. ಮನಸ್ಸು ಮಾಡಿದ್ದರೆ ಯಾವತ್ತೋ ಅದು ಈ ವಿಧೇಯಕವನ್ನು ಪಾಸು ಮಾಡಿಕೊಳ್ಳಬಹುದಿತ್ತು. ಆದರೆ ಮಹಿಳಾ ಮೀಸಲಿಗಿಂತ ಅದಕ್ಕೆ ತನ್ನ ಸೈದ್ಧಾಂತಿಕ ವಿಚಾರ ಗಳಿಗೆ ಸಂಬಂಧಿಸಿದ ರಾಮ ಮಂದಿರ ಅಥವಾ ಸಂವಿಧಾನದ ೩೭೦ನೇ ಪರಿಚ್ಛೇದದಂಥ ವಿಷಯಗಳು ಮುಖ್ಯವಾಗಿದ್ದವು. ಈಗ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗ ಪ್ರಧಾನ ಮಂತ್ರಿಗಳು ತಮ್ಮನ್ನು‘ನಾರಿಶಕ್ತಿ’ಯ ಹರಿಕಾರ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ.

ಹಾಗಿದ್ದರೆ ಅವರದೇ ಸರಕಾರ, ಒಲಿಂಪಿಕ್ ವಿಜೇತ ಮಹಿಳಾ ಕುಸ್ತಿಪಟುಗಳು ಬಿಜೆಪಿಯ ಉತ್ತರ ಪ್ರದೇಶದ ಪ್ರಬಲ ನಾಯಕ ಹಾಗೂ ಲೋಕಸಭೆ ಸದಸ್ಯ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯದ ಗಂಭೀರವಾದ ಆರೋಪ ವನ್ನು ಕಡೆಗಣಿಸುತ್ತಾ ಬಂದಿರುವುದೇಕೆ? ಅದು ನಾರಿಶಕ್ತಿಗೆ ಆದ ಅವಮಾನವಲ್ಲವೇ? ಮಹಿಳಾ ಮೀಸಲು ವಿಧೇಯಕದ ಉದ್ದೇಶ ವಿಷ್ಟೆ- ೨೦೨೪ರ ಜಿದ್ದಾಜಿದ್ದಿ ಲೋಕಸಭೆ ಚುನಾವಣೆಯಲ್ಲಿ ಮಹಿಳಾ ಮತದಾರರ ಮನಸ್ಸು ಗೆಲ್ಲುವುದು.

ಹಿಂದೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ದಶಕಗಳ ಕಾಲ ಅಧಿಕಾರದಲ್ಲಿತ್ತು. ಆದರೆ ಅದರದು ಮೈತ್ರಿ ಸರಕಾರವಾಗಿತ್ತು. ೨೦೧೦ರಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವೇ ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕವನ್ನು ಅಂಗೀಕಾರ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಲೋಕಸಭೆಯಲ್ಲಿ ವಿಧೇಯಕದ ಕುರಿತು ಒಮ್ಮತ ಮೂಡಿಸಲು ಅದರ ಕೈಲಿ ಸಾಧ್ಯವಾಗಲಿಲ್ಲ. ಮೈತ್ರಿಕೂಟದ ಅಂಗಪಕ್ಷಗಳು, ಮುಖ್ಯವಾಗಿ ಹಿಂದಿ ಭಾಷಿಕ ರಾಜ್ಯಗಳ ರಾಜಕೀಯ ಪಕ್ಷಗಳು, ಮಹಿಳಾ ಮೀಸಲಿನಲ್ಲಿ ಪ್ರತ್ಯೇಕ ಒಬಿಸಿ ಕೋಟಾ ಇರಬೇಕೆಂದು ಪಟ್ಟು ಹಿಡಿದಿದ್ದವು. ಅದಕ್ಕೆ ಕಾಂಗ್ರೆಸ್ ಪಕ್ಷ ಒಪ್ಪಿರಲಿಲ್ಲ.

ಆದರೆ ಈಗ ಅದೇ ಕಾಂಗ್ರೆಸ್ ಪಕ್ಷ ತನ್ನ ನಿಲುವಿನಿಂದ ಉಲ್ಟಾ ಹೊಡೆದು, ಒಬಿಸಿ ಕೋಟಾಕ್ಕೂ ಬೆಂಬಲ ನೀಡುತ್ತಿದೆ. ಮಹಿಳಾ ಮೀಸಲಿನ ವಿಷಯದಲ್ಲಿ ರಾಜಕೀಯ ಪಕ್ಷಗಳ ಆಷಾಢಭೂತಿತನಕ್ಕೆ ಮಿತಿಯೇ ಇಲ್ಲ. ಉದಾಹರಣೆಗೆ, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಸಂಸದೆ ಕೆ.ಕವಿತಾ ಅವರನ್ನೇ ನೋಡಿ. ಅವರು ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಮಗಳು. ಆಕೆ ಮಹಿಳಾ ಮೀಸಲಿಗಾಗಿ ಹಲವಾರು ವರ್ಷಗಳಿಂದ ಹೋರಾಡುತ್ತಿದ್ದಾರೆ.

ಆದರೆ ಇತ್ತೀಚೆಗೆ ತೆಲಂಗಾಣದ ವಿಧಾನಸಭೆ ಚುನಾವಣೆಗೆ ಅವರ ಬಿಆರ್‌ಎಸ್ ಪಕ್ಷ ಪ್ರಕಟಿಸಿರುವ ೧೧೫ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕೇವಲ ಏಳು ಮಂದಿ ಮಾತ್ರ ಮಹಿಳೆಯರಿದ್ದಾರೆ. ಕವಿತಾ ಮತ್ತು ಅವರ ಪಕ್ಷ ಮಹಿಳಾ ಮೀಸಲಿನ ಬಗ್ಗೆ ಅಷ್ಟೊಂದು ಬದ್ಧತೆ ಹೊಂದಿದ್ದರೆ ಅವರು ತಮ್ಮದೇ ಪಕ್ಷದಲ್ಲಿ ಹೆಚ್ಚು ಮಹಿಳೆಯರಿಗೆ ಟಿಕೆಟ್ ನೀಡುತ್ತಿಲ್ಲವೇಕೆ? ಹಾಗೆ ನೋಡಿದರೆ ಬಿಜು ಜನತಾ ದಳ (ಬಿಜೆಡಿ) ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಹೊರತುಪಡಿಸಿ ಇನ್ನಾವುದೇ ರಾಜಕೀಯ ಪಕ್ಷಗಳೂ ಮಹಿಳಾ ಮೀಸಲು ವಿಷಯದಲ್ಲಿ ತಾವು ಹೇಳಿದ್ದನ್ನು ಕೃತಿಯಲ್ಲಿ ಮಾಡಿ ತೋರಿಸುತ್ತಿಲ್ಲ.

೨೦೧೯ರ ಲೋಕಸಭೆ ಚುನಾವಣೆಯಲ್ಲಿ ಬಿಜೆಡಿ ಒಡಿಶಾದ ೨೧ ಕ್ಷೇತ್ರಗಳ ಪೈಕಿ ಮೂರನೇ ಒಂದರಷ್ಟು ಟಿಕೆಟ್ ಗಳನ್ನು ಮಹಿಳೆಯರಿಗೆ ನೀಡಿತ್ತು. ಹಾಗೆಯೇ ಟಿಎಂಸಿ ಕೂಡ ಪಶ್ಚಿಮ ಬಂಗಾಳದಲ್ಲಿರುವ ೪೨ ಲೋಕಸಭಾ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರ ಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಿತ್ತು. ೨೦೨೧ರ ವಿಧಾನಸಭೆ ಚುನಾವಣೆಯಲ್ಲೂ ಟಿಎಂಸಿ ೨೯೪ ಕ್ಷೇತ್ರಗಳ ಪೈಕಿ ಕನಿಷ್ಠ ೫೦ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಿತ್ತು. ಬಹುಶಃ ರಾಜಕಾರಣದಲ್ಲಿ ಮಹಿಳೆಯರು ಎಲ್ಲೆಡೆಯಿಂದ ಮುನ್ನುಗ್ಗಿ ಬರಲು ಅವಕಾಶ ನೀಡಿದ ನಮ್ಮ ದೇಶದ ಏಕೈಕ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ಇದನ್ನೇ ಬಿಜೆಪಿಯೊಂದಿಗೆ ಹೋಲಿಸಿ ನೋಡಿ. ಗುಜರಾತ್ ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅದು ಪ್ರಧಾನಿಯ ತವರುರಾಜ್ಯ. ಅಲ್ಲಿ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ೧೮೨ ಕ್ಷೇತ್ರಗಳ ಪೈಕಿ ಬಿಜೆಪಿ ಮಹಿಳೆಯರಿಗೆ ಟಿಕೆಟ್ ನೀಡಿದ್ದು ೧೮ ಕ್ಷೇತ್ರಗಳಲ್ಲಿ ಮಾತ್ರ. ಉತ್ತರ ಪ್ರದೇಶದಲ್ಲಿ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ‘ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ (ನಾನು ಮಹಿಳೆ, ಹೋರಾಡುವ ಶಕ್ತಿ ನನಗಿದೆ) ಎಂಬ ಘೋಷಣೆಯೊಂದಿಗೆ ಸೆಣಸಿದ ಕಾಂಗ್ರೆಸ್ ಪಕ್ಷ ಶೇ.೪೦ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡಿತ್ತು.

ಆದರೆ, ಈ ವರ್ಷ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅದೇ ಪಕ್ಷ ೨೨೪ ವಿಧಾನಸಭಾ ಕ್ಷೇತ್ರಗಳ ಪೈಕಿ ಮಹಿಳೆಯರಿಗೆ ಟಿಕೆಟ್ ನೀಡಿದ್ದು ಕೇವಲ ೧೧ ಕ್ಷೇತ್ರಗಳಲ್ಲಿ. ಬಿಜೆಪಿ ೧೨ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿತ್ತು. ಸ್ಪರ್ಧೆ ಜೋರಾಗಿದ್ದಾಗ ಚುನಾವಣೆಯಲ್ಲಿ ಲೆಕ್ಕಕ್ಕೆ ಬರುವುದು ಗೆಲ್ಲುವ ಶಕ್ತಿ ಮತ್ತು ಜಾತಿ ಎರಡೇ. ಅದರ ಮುಂದೆ ಲಿಂಗ ಸಮಾನತೆ ಯೆಲ್ಲ ನಗಣ್ಯ. ಆದ್ದರಿಂದ ರಾಜಕೀಯ ಪಕ್ಷಗಳು ‘ನಾರಿ ಶಕ್ತಿ’ ಎಂದು ಘೋಷಣೆ ಮೊಳಗಿಸುವುದು ಬರೀ ಆಡಂಬರಕ್ಕೆ ಅಥವಾ
ತೋರುಗಾಣಿಕೆಗಷ್ಟೇ. ಅದು ಮಹಿಳಾ ಮತದಾರರನ್ನು ಓಲೈಸಲು ಬಳಕೆಯಾಗುವ ಸಿನಿಕ ಪ್ರಯತ್ನ.

ನಮ್ಮ ದೇಶದಲ್ಲಿ ೧೯೫೨ರಲ್ಲಿ ಶೇ.೪೬ರಷ್ಟಿದ್ದ ಮಹಿಳೆಯರ ಮತದಾನದ ಪ್ರಮಾಣ ೨೦೧೯ರಲ್ಲಿ ಶೇ.೬೭ಕ್ಕೆ ಏರಿಕೆಯಾಗಿದೆ. ಇದು ಬಹಳ ದೊಡ್ಡ ಏರಿಕೆ. ಇದು ಭಾರತದ ಚುನಾವಣಾ ರಾಜಕಾರಣದಲ್ಲೂ ಬಹಳ ದೊಡ್ಡ ಡೆಮಾಗ್ರಫಿಕ್ ಬದಲಾವಣೆ. ಈಗ ರಾಜಕೀಯ ಪಕ್ಷಗಳಿಗೆ ಹೆಚ್ಚೆಚ್ಚು ಮಹಿಳಾ ಮತದಾರರು ಕಾಣಿಸುತ್ತಿದ್ದಾರೆ. ಅವರು ಸ್ವತಂತ್ರವಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ರಣತಂತ್ರಗಳನ್ನು ಮರುರೂಪಿಸಬೇಕಾದ
ಅನಿವಾರ್ಯತೆಗೆ ಸಿಲುಕಿವೆ. ಹಾಗಾಗಿ ಟಾಯ್ಲೆಟ್‌ಗಳಿಂದ ಹಿಡಿದು ಬ್ಯಾಂಕ್ ಖಾತೆಗಳವರೆಗೆ, ಗ್ಯಾಸ್ ಸಿಲಿಂಡರ್‌ಗಳಿಂದ ಹಿಡಿದು ಉಚಿತ ಬಸ್ ಟಿಕೆಟ್ ಹಾಗೂ ಮಾಸಾಶನಗಳವರೆಗೆ ರಾಜಕೀಯ ಪಕ್ಷಗಳು ಮಹಿಳೆಯರಿಗೆಂದೇ ಪ್ರತ್ಯೇಕ ಕೊಡುಗೆಗಳನ್ನು ನೀಡುತ್ತಿವೆ. ಈ ಎಲ್ಲ ಯೋಜನೆಗಳ ಪ್ರಮುಖ ಲಾಭಾರ್ಥಿಗಳು ಮಹಿಳೆಯರು. ಅಷ್ಟೇಕೆ, ಇಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬಹುತೇಕ ಸಾಮಾಜಿಕ ಕಲ್ಯಾಣಯೋಜನೆಗಳ ಲಾಭಾರ್ಥಿಗಳು ಮಹಿಳೆಯರೇ ಆಗಿದ್ದಾರೆ.

ಇಲ್ಲೊಂದು ಚೋದ್ಯವಿದೆ. ಮಹಿಳಾ ಮತದಾರರನ್ನು ರಾಜಕೀಯ ಪಕ್ಷಗಳು ಹಿಂದೆಂದಿಗಿಂತ ಹೆಚ್ಚು ಓಲೈಸಲು ಪ್ರಯತ್ನಿಸು ತ್ತಿರುವ ಹೊತ್ತಿನಲ್ಲೇ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಇಳಿಮುಖವಾಗುತ್ತಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ೨೦೨೩ರ ವರದಿಯ ಪ್ರಕಾರ ಭಾರತದಲ್ಲಿ ಉದ್ಯೋಗ ಸಂಬಂಧಿ ಲಿಂಗ ಅಸಮಾನತೆ ಶೇ.೫೦ಕ್ಕಿಂತ ಹೆಚ್ಚಿದೆ.

ದೇಶದ ಒಟ್ಟು ಕಾರ್ಮಿಕರಲ್ಲಿ ಪುರುಷರು ಶೇ.೭೦.೧ರಷ್ಟು ಇದ್ದರೆ, ಮಹಿಳಾ ಕಾರ್ಮಿಕರ ಪ್ರಮಾಣ ಶೇ.೧೯.೨ರಷ್ಟು ಮಾತ್ರ ಇದೆ. ಹೀಗಾಗಿ ಸಮಾಜದಲ್ಲಿ ನಿಜವಾದ ಲಿಂಗ ಸಮಾನತೆಯನ್ನು ತರಲು ಕಾರ್ಯಕ್ರಮಗಳನ್ನು ರೂಪಿಸಬೇಕಿದೆಯೇ ಹೊರತು
ಮಹಿಳೆಯರಿಗೆ ಹಣ ಕೊಟ್ಟರೆ ಅವರು ಸಬಲೀಕರಣಗೊಳ್ಳುತ್ತಾರೆ ಎಂಬ ಆಡಳಿತಾರೂಢ ರಾಜಕೀಯ ಪಕ್ಷಗಳ ಕಲ್ಪನೆ ಯಾವ
ಲೆಕ್ಕದಲ್ಲೂ ತಾರ್ಕಿಕವಾದುದಲ್ಲ. ಹಾಗಿದ್ದರೆ ರಾಜಕೀಯ ರಂಗದಲ್ಲಿ ಪರಂಪರಾಗತವಾಗಿ ಬೇರುಬಿಟ್ಟಿರುವ ವ್ಯವಸ್ಥೆಯನ್ನು ರೂಪಾಂತರಗೊಳಿಸಲು ಮಹಿಳಾ ಮೀಸಲು ಎಂಬ ಕ್ಯಾರೆಟ್‌ನಿಂದ ಸಾಧ್ಯವಾಗುವುದೇ? ಈಗಲೇ ಸಾಧ್ಯವಿಲ್ಲ.

ಹೊಸ  ಕಾಯ್ದೆಯನ್ನು ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆಯ ಕಸರತ್ತಿನೊಂದಿಗೆ ಜೋಡಿಸುವ ಮೂಲಕ ಕೇಂದ್ರ ಸರಕಾರ ಮಹಿಳಾ ಮೀಸಲು ಜಾರಿಯನ್ನು ೨೦೨೯ರ ನಂತರಕ್ಕೆ ಮುಂದೂಡಿದೆ. ಏಕೆಂದರೆ ಈಗಲೇ ಜಾರಿಗೊಳಿಸಲು ಹೊರಟರೆ ಅನೇಕ ಕ್ಷೇತ್ರಗಳಲ್ಲಿ ಪುರುಷ ಸಂಸದರು ಬಂಡೇಳುತ್ತಾರೆ. ಅದರ ಬಿಸಿಯನ್ನು ಬಿಜೆಪಿ ೨೦೨೪ರ ಚುನಾವಣೆಯಲ್ಲೇ ಅನುಭವಿಸಬೇಕಾಗುತ್ತದೆ.

ಸಾರ್ವಜನಿಕವಾಗಿ ಮಹಿಳಾ ಮೀಸಲು ಮಸೂದೆಯ ಪರವಾಗಿ ಮಾತನಾಡುವ ಎಷ್ಟೋ ಪುರುಷ ಸಂಸದರು ಮುಂದೆ ಚುನಾವಣೆಯಲ್ಲಿ ಅದು ತಮ್ಮ ಬುಡಕ್ಕೇ ಬಂದಾಗ ತಿರುಗಿ ನಿಲ್ಲುತ್ತಾರೆ ಅಥವಾ ತಮ್ಮ ಮನೆಯ ಮಹಿಳೆಯರಿಗೇ ಟಿಕೆಟ್ ಕೇಳುತ್ತಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಪಂಚಾಯತ್‌ಗಳಲ್ಲಿ ಈಗಾಗಲೇ ನಾವಿದನ್ನು ನೋಡಿದ್ದೇವೆ. ಅಲ್ಲಿ ‘ಸರಪಂಚ್ ಪತಿ’ಗಳದೇ ದರ್ಬಾರು ಅಥವಾ ಚುನಾಯಿತ ಮಹಿಳೆಯ ಮನೆಯ ಗಂಡಸರು ಆಕೆಯ ಪರವಾಗಿ ಆಫೀಸು ನಡೆಸುತ್ತಿದ್ದಾರೆ.

ಆದ್ದರಿಂದ ನಿಜವಾದ ರಾಜಕೀಯ ಸವಾಲು ಇನ್ನು ಮುಂದಿದೆ. ಈಗಿನ ಮಹಿಳಾ ಮೀಸಲು ಶಾಸನವನ್ನು ರೂಪಿಸಿರುವುದೇ ಹಾಗೆ. ಇದೊಂದು ರೀತಿಯಲ್ಲಿ ಪೋಸ್ಟ್ ಡೇಟೆಡ್ ಚೆಕ್ ಇದ್ದಂತೆ. ಮುಂದೆ ಸಮಯ ಬಂದಾಗ ಈ ಚೆಕ್ ಬೌನ್ಸ್ ಆದರೂ ಆಗಬಹುದು. ಅಥವಾ ಮತ್ತೆ ಮುಂದೂಡಿಕೆಯಾಗ ಬಹುದು. ಆದರೆ ಸದ್ಯಕ್ಕಂತೂ ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ಪ್ರಯತ್ನಿಸಲಿದೆ. ಐತಿಹಾಸಿಕ ಮಹಿಳಾ ಮೀಸಲು ವಿಧೇಯಕ ಜಾರಿಗೆ ತಂದಿದ್ದೇವೆ ಎಂದು ಹವಾ ಎಬ್ಬಿಸುವ ಮೂಲಕ ಮಹಿಳಾ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ಜೋರಾಗಿ ನಡೆಯಲಿದೆ.

ಮಹಿಳಾ ಮೀಸಲಿನ ವಿಷಯದಲ್ಲಿ ಬಿಜೆಪಿ ಹಾಗೂ ವಿರೋಧ ಪಕ್ಷಗಳು ನಿಜವಾಗಿಯೂ ಗಂಭೀರವಾಗಿರುವುದೇ ಹೌದಾದರೆ ಏಕೆ ಅವು ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲೇ ಕನಿಷ್ಠ ಪಕ್ಷ ಶೇ.೩೩ರಷ್ಟು ಟಿಕೆಟ್‌ಗಳನ್ನು ಮಹಿಳೆ ಯರಿಗೆ ನೀಡಬಾರದು? ಆಗ ಅವುಗಳ ಮಹಿಳಾ ಸಬಲೀಕರಣದ ಭಾಷಣ ನಿಜ ಎಂಬುದಕ್ಕೆ ಸಾಕ್ಷ್ಯ ಸಿಕ್ಕಂತಾಗುತ್ತದೆ.

ಕೊನೆಯ ಮಾತು: ಮಹಿಳಾ ಮೀಸಲು ಮಸೂದೆಗಾಗಿ ಹೋರಾಡುತ್ತಾ ಬಂದಿರುವ ದೊಡ್ಡ ದೊಡ್ಡ ನಾಯಕಿಯರ ನಡುವೆ ಎದ್ದು ಕಾಣಿಸುವವರು ಕಮ್ಯುನಿಸ್ಟ್ ಪಾರ್ಟಿಯ ೭ ಸಲದ ಸಂಸದೆ ದಿವಂಗತ ಗೀತಾ ಮುಖರ್ಜಿ. ಮಹಿಳೆಯರ ಹಕ್ಕುಗಳ ವಿಷಯದಲ್ಲಿ ಅವರೊಬ್ಬ ದಣಿವರಿಯದ ಹೋರಾಟ ಗಾರ್ತಿ. ಮಹಿಳಾ ಮೀಸಲು ಜಾರಿಗೆ ರಚಿಸಿದ್ದ ಸಂಸತ್ತಿನ ಆಯ್ಕೆ ಸಮಿತಿಗೆ ಅವರು ಚೇರ್ಮನ್ ಆಗಿ ಕೆಲಸ ಮಾಡಿದ್ದರು. ಈಗ ಮಹಿಳಾ ಮೀಸಲು ಮಸೂದೆ ಪಾಸಾಗಿರುವುದರ ಹಿಂದೆ ಗೀತಾ ಮುಖರ್ಜಿ ಯವರಂಥ ಎಡಪಕ್ಷದ ನಾಯಕಿಯ ಪರಿಶ್ರಮ ವಿರುವುದನ್ನು ನಾವು ಮರೆಯಬಾರದು. ಎಂಥಾ ವಿಚಿತ್ರ ನೋಡಿ, ಅದನ್ನು ಪಾಸು ಮಾಡಲು ಬಲಪಂಥೀಯ ಸರಕಾರ ಬರಬೇಕಾಯಿತು.

(ಲೇಖಕರು ಹಿರಿಯ ಪತ್ರಕರ್ತರು)