ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಸಾವು ಅಂದ್ರೆ ಅದು ಜೀವನದ ಅಂತ್ಯ ಮತ್ತು ತುಂಬಾ ಗಂಭೀರವಾದ ವಿಷಯ. ಆದರೆ ಕೆಲವರಿಗೆ ಮಾತ್ರ ಅದು, ‘ಇದು ನನಗೇ ಮೊದಲು ಗೊತ್ತಾಯಿತು’ ಅಂತ ಹೇಳಿಕೊಳ್ಳುವ ನ್ಯೂಸ್ ಐಟಂ. ಇದು ಸೆಲೆಬ್ರಿಟಿಗಳನ್ನಂತೂ ಇನ್ನಿಲ್ಲದಂತೆ ಕಾಡುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಹಲವಾರು ಸೆಲೆಬ್ರಿಟಿಗಳು ಅದರಲ್ಲೂ ಸಿನಿಮಾ ನಟ-ನಟಿಯರು, ಕ್ರೀಡಾಪಟುಗಳು ಸಾಯೋಕೆ ಮುಂಚೆಯೇ ಅದೆಷ್ಟು ಬಾರಿ ಸತ್ತಿರುತ್ತಾರೋ ಗೊತ್ತಿಲ್ಲ. ಕಳೆದ ವರ್ಷ ನಟ ಶರತ್ ಬಾಬು, ಜಿಂಬಾಬ್ವೆ ಕ್ರಿಕೆಟ್ ಆಟಗಾರ ಹೀತ್ ಸ್ಟ್ರೀಕ್ ಕೂಡಾ ಸಾಯುವ ೨ ವಾರ ಮುಂಚೆಯೇ ಸತ್ತು ಹೋಗಿದ್ದರು. ನಮ್ಮ ಕನ್ನಡದ ನಟ ಅಂಬರೀಷ್, ದೊಡ್ಡಣ್ಣ ಅವರನ್ನು ಈ ಸುಡುಗಾಡು ಟ್ರೆಂಡ್ ಹಲವಾರು ಬಾರಿ ಕಾಡಿದ್ದಿದೆ. ಹಾಗಂತ ಇದನ್ನು ನ್ಯೂಸ್ ಚಾನೆಲ್ಗಳು ಮಾಡುತ್ತಿವೆ ಎಂದುಕೊಳ್ಳಬೇಡಿ; ಇದು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವ ಕೆಲವರು ಮಾಡುವ ಕೆಲಸ ಮತ್ತು ಇದಕ್ಕೆ ಚಿತ್ರರಂಗದ ದೊಡ್ಡ ಸೆಲೆಬ್ರಿಟಿಗಳೂ ಹೊರತಾಗಿಲ್ಲ ಅನ್ನೋದು ವಿಷಾದ.
ಎಲ್ಲರಿಗೂ ನಾವೇ ಮೊದಲು ಸಾವಿನ ಸುದ್ದಿ ಕೊಟ್ಟೆವು ಎನ್ನುವ ಸಂಭ್ರಮದಲ್ಲಿ ‘ಆರ್ಐಪಿ’ ಅಂತ ಪೋ ಹಾಕಿ ನಿಟ್ಟುಸಿರುಬಿಡುವ ಈ
ಮಹಾನುಭಾವರು ಒಮ್ಮೆ, ‘ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಹೃದಯಾಘಾತದಿಂದ ನಿಧನ’ ಅಂತ ಪೋಸ್ಟ್ಗಳನ್ನು ಹಾಕಿಕೊಂಡಿದ್ದರು.
ಹೃದಯಾಘಾತ ಕಾಮನ್ ಆಗಿರುವ ಈ ಸಂದರ್ಭದಲ್ಲಿ ಎಷ್ಟೋ ಜನ ಅದನ್ನು ನಂಬಿಯೂಬಿಟ್ಟಿದ್ದರು. ಆದರೆ ಅಸಲಿಗೆ ಸತ್ತಿದ್ದು ಚಿಕ್ಕಪುಟ್ಟ ಪಾತ್ರ ಮಾಡುತ್ತಿದ್ದ ರಮ್ಯಾ ಎಂಬ ಇನ್ನೊಬ್ಬ ನಟಿ. ಇದು ಇನ್ನೊಂಥರ ಚೀಪ್ ಗಿಮಿಕ್. ಒಟ್ಟಿನಲ್ಲಿ, ಇನ್ನೊಬ್ಬರ ಸಾವು ಕೂಡಾ ನಮ್ಮ ಸಾವಿನಷ್ಟೇ ಗಂಭೀರ ವಿಷಯ ಅನ್ನೋದು ಅರಿವಾಗುವವರೆಗೂ ಇಂಥ ಅವಘಡಗಳು ನಡೆಯುತ್ತಲೇ ಇರುತ್ತವೆ ಅನ್ನೋದು ವಿಷಾದಕರ.
ಲೂಸ್ ಟಾಕ್ – ಮುನಿರತ್ನ
ಏನ್ರೀ, ನಿಮ್ ಆಡಿಯೋ ಕೇಳ್ದೆ, ಭಾರಿ ಒಳ್ಳೊಳ್ಳೆ ಮಾತಾಡಿದ್ದೀರ ಬಿಡ್ರೀ…
- ಮತ್ತೆ? ಯಾವಾಗ್ಲೂ ರಾಜರತ್ನಂ ಅವರ ‘ರತ್ನನ್ ಪದ’ಗಳನ್ನೇ ಕೇಳಿದ್ರೆ ಹೆಂಗೆ? ಆವಾಗಾವಾಗ ‘ಮುನಿರತ್ನನ್ ಪದ’ಗಳನ್ನೂ ಕೇಳ್ಬೇಕು.
ಹೌದೌದು, ಎರಡು ಕಿವಿ ಸಾಲ್ದು. ಸರಿ, ಪರಪ್ಪನ ಅಗ್ರಹಾರ ಹೆಂಗಿದೆ?- ವಿಲ್ಸನ್ ಗಾರ್ಡನ್ ನಾಗ ಕೇಳ್ದ, ‘ಅಣ್ಣಾ ಎರಡು ಚೇರು ಟೇಬಲ್ ಹಾಕ್ಸಿ ಕಾಫಿ, ಸಿಗರೇಟಿಗೆ ಅರೇಂಜ್ ಮಾಡಿಸ್ಲಾ’ ಅಂತ. ‘ಬ್ಯಾಡ ಬಳ್ಳಾರಿ ಜೈಲಿಗಿಂತ ಇದೇ ಚೆನ್ನಾಗಿದೆ’ ಅಂದೆ.
- ಒಳ್ಳೇದಾಯ್ತು, ಇಂದ್ರೆ ದರ್ಶನ್ ಜತೆ ಇರ್ಬೇಕಾಗಿತ್ತು ಅಲ್ವಾ?
- ನಿಜ ನಿಜ… ಮೊದ್ಲೇ ಇಬ್ರ ನಾಲಿಗೆನೂ ಸರಿ ಅಲ್ಲ. ಯಾಕ್ ಬೇಕು ದಾಸನ ಸಾವಾಸ..
- ಅದ್ಸರಿ, ಜಾಮೀನು ಸಿಕ್ಕು, ಹೊರಗೆ ಬಂದ ತಕ್ಷಣ ಮತ್ತೆ ಇನ್ನೊಂದು ಕೇಸಲ್ಲಿ ಪೊಲೀಸ್ನೋರು ಅರೆ ಮಾಡಿದ್ರಂತೆ?
- ಹೌದು, ಜೈಲಲ್ಲಿರೋ ಖೈದಿಗಳೆ, ‘ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿಲಿ’ ಅಂತ ಬೈತಾ ಇದ್ರು.
ನಿಮ್ಮ ಈ ಕರ್ಮಕಾಂಡ ನೋಡಿ ನಿಮ್ಮ ಪಕ್ಷದ ಹೈಕಮಾಂಡ್ ಏನು ಹೇಳ್ತು?- ಅಯ್ಯೋ, ಮೊದ್ಲು ಎಲೆಕ್ಷನ್ನಲ್ಲಿ ಟಿಕೆಟ್ ಕೊಟ್ಟಿದ್ರು, ಈಗ ಪಕ್ಷದಿಂದನೇ ಟಿಕೆಟ್ ಕೊಡ್ತೀವಿ ಅಂತ ಹೆದರಿಸ್ತಾ ಇದ್ದಾರೆ.
-
- ನೆಟ್ ಪಿಕ್ಸ್
ಬಲ್ವಿಂದರ್ ಸಿಂಗ್ ಖೇಮು ಯಾವತ್ತೂ ಫೈವ್ ಸ್ಟಾರ್ ಹೋಟೆಲ್ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಠಿತ ಫೈವ್ ಸ್ಟಾರ್ ಹೋಟೆಲ್ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು. ಫುಲ್ ಖುಷಿಯಾದ ಬಲ್ವಿಂದರ್ ಸಿಂಗ್ ಖೇಮು, ತನ್ನ ಹೆಂಡತಿ ಊರಿಗೆ ಹೋದ ದಿನ ಆ ಫೈವ್ ಸ್ಟಾರ್ ಹೋಟೆಲ್ನಲ್ಲಿ ಉಳಿದುಕೊಳ್ಳೋದು ಅಂತ ತೀರ್ಮಾನ ಮಾಡಿದ.
ಅವತ್ತು ಬೆಳಗ್ಗೆ ಹೋಟೆಲಿಗೆ ಹೋಗಿ ಚೆಕ್ ಇನ್ ಆಗಿ, ರೂಮ್ನಲ್ಲಿ ಸ್ನಾನ, ಊಟ ಮಾಡಿ ಕಿಟಕಿಯಿಂದ ಹೊರಗೆ ನೋಡಿದವನಿಗೆ ಸ್ವಿಮ್ಮಿಂಗ್ ಪೂಲ್ ಕಾಣಿಸಿತು. ಸರಿ ಅಂತ ಅಲ್ಲಿಂದ ಸೀದಾ ಪೂಲ್ ಬಳಿಗೆ ಬಂದು ಅಲ್ಲಿ ಪೂಲ್ ಪಕ್ಕದಲ್ಲಿ ಹಾಕಿದ್ದ ಉದ್ದನೆಯ ಬೆಂಚ್ ಮೇಲೆ ಮೇಲೆ ಮಲಗಿಕೊಂಡ. ಆಗ ಅಲ್ಲಿಗೆ ಬಂದ ಒಬ್ಬ ಫಾರಿನರ್ ಇವನನ್ನು ನೋಡಿ, ‘ಹಾಯ, ಆರ್ ಯೂ ರಿಲ್ಯಾಕ್ಸಿಂಗ್?’ ಅಂತ ಕೇಳಿದ.
ಇಂಗ್ಲಿಷ್ ಸರಿಯಾಗಿ ಬರದ ಬಲ್ವಿಂದರ್ ಸಿಂಗ್ ಖೇಮು, ‘ನೋ ಐ ಆಮ್ ಬಲ್ವಿಂದರ್ ಸಿಂಗ್’ ಅಂದ. ಅದಕ್ಕೆ ಆ ವಿದೇಶಿಗ ‘ಫನ್ನಿ ಗೈ’ ಅಂತ ನಕ್ಕು ಹೊರಟ. ಆದ್ರೆ ಬಲ್ವಿಂದರ್ ಸಿಂಗ್ ಖೇಮುಗೆ ಅವನು ಯಾಕೆ ನಕ್ಕ ಅನ್ನೋದು ಅರ್ಥ ಆಗಲಿಲ್ಲ. ಅದೇ ಗೊಂದಲದಲ್ಲಿ ಅಲ್ಲಿಂದ ಎದ್ದು
ಹೊರಟ. ಅಲ್ಲಿ ಸ್ವಲ್ಪ ಮುಂದೆ ಇನ್ನೊಬ್ಬ ಫಾರಿನರ್ ಅವನಂತೆಯೇ ಪೂಲ್ ಪಕ್ಕದ ಬೆಂಚ್ನಲ್ಲಿ ಮಲಗಿದ್ದ. ಅವನನ್ನು ನೋಡಿದ ಖೇಮು ‘ಆರ್ ಯೂ ರಿಲ್ಯಾಕ್ಸಿಂಗ್?’ ಅಂತ ಕೇಳಿದ. ಅದಕ್ಕೆ ಆತ ‘ಎಸ್’ ಅಂದ. ಇದ್ದಕ್ಕಿದ್ದಂತೆ ರಾಂಗ್ ಆದ ಖೇಮು ಹೇಳಿದ ‘ಅಯ್ಯೋ ಮಂಗ್ ನನ್ಮಗನೇ, ನೀನ್ ಇಲ್ ಮಲ್ಕೊಂಡಿದ್ದೀಯಾ, ಅಲ್ಲಿ ನಿನ್ ಹುಡುಕ್ಕೊಂಡ್ ಯಾರೋ ಬಂದಿದ್ರು’.
ಲೈನ್ ಮ್ಯಾನ್
ಸೋಡಾ ಕುಡಿಯೋಕೆ ಕಂಪನಿ ಕೊಡೋ ‘ಗೆಳೆಯ’
- ಸೋಡಾ ‘ಬಡ್ಡಿ’
- ಕೆಲವರು ಸ್ವಿಮ್ಮಿಂಗ್ ಪೂಲ್ನಲ್ಲಿ ರಬ್ಬರ್ ಟ್ಯೂಬ್ನಲ್ಲಿ ಕುಳಿತು ಕುಡಿಯೋದು ಯಾಕೆ?
- ತೇಲುತ್ತಾ ತೇಲೋಕೆ
- ಇಬ್ಬನಿ ಬಿದ್ದ ಕಾರಣಕ್ಕೆ ಕ್ರಿಕೆಟ್
ಮ್ಯಾಚ್ ಸೋತ ಕ್ಯಾಪ್ಟನ್ ಏನು
ಹೇಳ್ತಾನೆ? - We couldn’t win due to dew
- ಸಣ್ಣ ಮಕ್ಕಳೂ ಕೋಡಿಂಗ್ ಕಲಿಯುತ್ತಿರೋ ಈ ಸಮಯದಲ್ಲಿ ಅತಿಬುದ್ಧಿವಂತರಂತೆ ಮಾತಾಡೋರನ್ನ ಏನಂತ ಬಯ್ತಾರೆ?
- ನಿಂಗೇನ್ ಎರಡ್ ಕೋಡಿದೆಯಾ?
- ಭಾರತದ ನಾವೇ ತಯಾರಿಸಿದ ಆಪ್ಗಳನ್ನ ಏನೆನ್ನಬಹುದು?
- ಅಪ್ ನೇ ಆಪ್
- ಬಹಳ ವರ್ಷಗಳವರೆಗೆ ರಸ್ತೆಯಲ್ಲಿ ಓಡಾಡಿ ಸವೆದು ಹೋಗಿರುವ ಕಾರಿನ ಟೈರ್
- ಟೈರ್ಡ್
- ಖಾರ ಸಂಸಾರ
- ‘ರೀ, ಸೊಳ್ಳೆ ಕಚ್ತಾ ಇದೆ, ಆವಾಗಿಂದ ಇ ಹಾರಾಡ್ತಿದೆ, ಸ್ವಲ್ಪ ನೋಡ್ರಿ ಎದ್ದು’ ‘ಯಾಕೆ? ನಾನೇನ್ ಎಂದೂ ಸೊಳ್ಳೆ ನೋಡಿಲ್ವಾ?’
- ಹೆಂಗಸರು ವಟವಟ ಅಂತ ಮಾತಾಡೋ ಜಾಗ
- ವಠಾರ
ಹಾಕಿಕೊಳ್ಳಲು ಕಷ್ಟ ಆಗುವ ಟೈಟ್ ಫಿಟ್ಟಿಂಗ್ ಇರೋ ಬಟ್ಟೆ- ಹಾರ್ಡ್ವೇರ್
- ಒಬ್ಬ ಶಿಲ್ಪಿಗೆ ಚಾಲೆಂಜ್ ಮಾಡೋದ್ ಹೆಂಗೆ?
- ನಿನ್ ಕೈಲಿ ಏನ್ ‘ಕೆತ್ಕೊಳ್ಳೋಕಾಗುತ್ತೋ.. ಕೆತ್ಕೋ..!’
ಇದನ್ನೂ ಓದಿ: Hari Parak Column: ರಿಯಾನ್ ಪರಾಗ್ Pan India Star