Friday, 22nd November 2024

ದೆಗಡಿಯಿದ್ದ ಬದ್ದಾದ ಬೂಗು ಮತ್ತು ಅನುನಾಸಿಕ ಅಕ್ಷರಗಳು

ತಿಳಿರು ತೋರಣ

srivathsajoshi@yahoo.com

ನೀವು ಹಳೆಯ ಕಾಲದ ಗ್ರಂಥಗಳನ್ನು ತೆರೆದುನೋಡಿ. ಅಥವಾ ಕನ್ನಡದ ಹೆಮ್ಮೆಯೆನಿಸಿರುವ ಕಿಟ್ಟೆಲ್ ಕೋಶವನ್ನು ತೆರೆದುನೋಡಿ. ಅಲ್ಲೆಲ್ಲ ವರ್ಗೀಯ ವ್ಯಂಜನದ ಹಿಂದಿನ ಅನುಸ್ವಾರಕ್ಕೆ ಸೊನ್ನೆ ಬಳಕೆ ಇಲ್ಲವೇ ಇಲ್ಲ. ಅನುನಾಸಿಕದೊಡನೆ ಒತ್ತಕ್ಷರವಾಗಿಯೇ ಬರೆದದ್ದಿರುತ್ತದೆ. ಈಗ ನಾವು ಇದ್ದಬಿದ್ದಲ್ಲೆಲ್ಲ ಸೊನ್ನೆ ಸುತ್ತುತ್ತೇವಾದ್ದರಿಂದ ಅನುನಾಸಿಕಗಳು ನಮಗೆ ಅಪರಿಚಿತವಾಗುತ್ತಿವೆ. ನಮ್ಮ ಭಾಷಾ ಪ್ರಬುದ್ಧತೆ ಸೊನ್ನೆ ಯತ್ತ ಜಾರುತ್ತಿದೆ.

ಅನುನಾಸಿಕ ಅಕ್ಷರಗಳ ಶಕ್ತಿ ಮತ್ತು ಮಹತ್ತ್ವ ಗೊತ್ತಾಗುವುದು ನಮಗೆ ನೆಗಡಿಯಾದಾಗಲೇ. ಸದ್ಯ ನನಗೇನೂ ನೆಗಡಿಯಾಗಿಲ್ಲ ಹಾಗಾಗಿ ತಾಜಾ ಅನುಭವದಿಂದ ನಾನಿದನ್ನು ಹೇಳ್ತಿರೋದಲ್ಲ. ಆದರೆ ನೆಗಡಿಯ ಅನುಭವ ನಮಗೆಲ್ಲರಿಗೆ ಆಗೊಮ್ಮೆ ಈಗೊಮ್ಮೆ ಆಗುವಂಥದ್ದೇ. ಮತ್ತು ಹಾಗಾದಾಗ ಲೆಲ್ಲ ಅನುನಾಸಿಕ ಅಕ್ಷರಗಳ ಉಚ್ಚಾರದ ತೊಂದರೆ ಅರಿವಿಗೆ ಬರುವಂಥದ್ದೇ. ಬಹುಶಃ ಅದರಿಂದಲೇ ಇರಬಹುದು ‘ದೆಗಡಿ’ ಉಚ್ಚಾರದ ಬಗ್ಗೆಯೇ ಸಾಕಷ್ಟು ಜೋಕುಗಳೂ ಇವೆ.

ಉದಾಹರಣೆಗೆ- ಜಗಲಿಯ ಮೇಲೆ ಅಪ್ಪ, ಅಮ್ಮ, ಮಗ ಕುಳಿತಿದ್ದರು. ‘ಅಪ್ಪಾ ದೋಡು, ಎಷ್ಟು ದಕ್ಷತ್ರಗಳು!’ ಮಗ ಆಕಾಶದ ಕಡೆ ಕೈ ತೋರಿಸುತ್ತ ಹೇಳಿದನು. ‘ದೋಡಿದೆಯೇದೇ ದಿದ್ದ ಬಗದ ಉಚ್ಚಾರಡೆ ಹ್ಯಾಗಿದೆ?’ ಅಂತ ಅಪ್ಪ, ಅಮ್ಮನಿಗೆ ಹೇಳಿದರು. ‘ಸುಬ್ಬದೆ ಬಗೂದ ಯಾಕೆ ಹೀಗೆ ಹೀಯಾಳಿ ಸ್ತೀರಿ?!’ ಅಂತ ಕೋಪಿಸಿಕೊಂಡಳು ಅಮ್ಮ. ಆ ದಾರಿಯಲ್ಲಿ ಹೋಗುತ್ತಿದ್ದವನೊಬ್ಬ ಇವರ ಸಂಭಾಷಣೆಯನ್ನು ಕೇಳಿದನು.

‘ಬೂವರಿಗೂ ದೆಗಡಿ ಆದತ್ತೆ ಕಾಡುತ್ತೆ!’ ಅಂತ ತನಗೆ ತಾನೇ ಹೇಳಿಕೊಂಡನು. ಈಗ ಅಮೆರಿಕದಲ್ಲಿ ಸ್ಪ್ರಿಂಗ್ ಸೀಸನ್. ಗಿಡಮರಗಳ ಚಿಗುರು, ಹುಲ್ಲಿನ ಧೂಳು, ಹೂವುಗಳ ಪರಾಗ ಎಲ್ಲ ಸೇರಿ ಗಾಳಿಯ ತುಂಬ ಎಲರ್ಜಿ ಕಣಗಳು. ‘ಎಲ್ಲರಿಗೂ ದೆಗಡಿ ಆದತ್ತೆ ಕಾಡುತ್ತೆ!’ ಎನ್ನುವ ಪರಿಸ್ಥಿತಿ. ನೆಗಡಿಯಿಂದ ಬಂದ್ ಆದ ಮೂಗನ್ನು ಬಿಡಿಸಬೇಕಾದರೆ- ಅಂದರೆ ಡುಂಡಿರಾಜರು ಹೇಳುವಂತೆ ‘ಸಿಂಬಳ ಸುರಿಯುತ್ತಿರುವ ಮೂಗ; ನೋಡಿದರೆ ನೆನಪಾಗುವುದು ಜೋಗ!’ ಅಂತಾಗಬೇಕಾದರೆ- ಕೆಲವರು ನಸ್ಯ ಉಪಯೋಗಿಸುತ್ತಾರೆ.

ನಸ್ಯ ಹಾಕಿಕೊಂಡು ಬಲವಾಗಿ ಸೀನಿದರೆ ನೆಗಡಿ ಅರ್ಧ ವಾಸಿಯಾಗುತ್ತದೆಂದು ಅವರ ನಂಬಿಕೆ. ಅಂಥವರ ಬಗ್ಗೆ ಕೈಲಾಸಂ ಒಂದು ಜೋಕು ಸಿಡಿಸಿದ್ದಾರೆ.
ಇಬ್ಬರು ನೆಗಡಿ-ಮನುಷ್ಯ (ಮ-ನಸ್ಯ)ರ ಸಂಭಾಷಣೆ ಹೀಗಿರುತ್ತದಂತೆ.

ಒಬ್ಬ: ‘ದಗ್ಗೆ ದೆಗಡಿ ಆಗಿದೆ. ಸ್ವಲ್ಪ ದಸ್ಯ ಕೊಡೋ!’

ಇನ್ನೊಬ್ಬ: ‘ಏ! ದಗ್ಗೇ ಇಲ್ಲಾ, ದಿಗ್ಗೆಲ್ಲಿ ಕೊಡಲೋ?’

ಒಬ್ಬ: ‘ಜಿಪುಡ ದದ್ದ ಬಗದೇ, ಹಾಳಾಗಿ ಹೋಗು!’ ಈ ದಗೆಹದಿ, ಅಲ್ಲಲ್ಲ ನಗೆಹನಿ ನಾನೋದಿದ್ದು ಕೈಲಾಸಂ ಅವರ ‘ನಮ್ಕ್ಳ್‌ಬ್ಬು
ಮತ್ತು ಕೈಲಾಸಂ ನೂಕ್ಸ್‌ನ ಕೆಲವು ಕಲ್ಪನೆಗಳು’ ಪುಸ್ತಕದಲ್ಲಿ. ದೆಗಡಿ-ದಸ್ಯದ ಇನ್ನೊಂದು ಭಲೇ ಪ್ರಸಂಗ ಪ್ರೊಫೆಸರ್ ಟಿ. ಎಸ್.ವೆಂಕಣ್ಣಯ್ಯನವರದೆಂದು ಪ್ರಸಿದ್ಧ. ತಳುಕಿನ ವೆಂಕಣ್ಣಯ್ಯನವರು ಒಬ್ಬ ನಸ್ಯಪ್ರೇಮಿ. ನಸ್ಯವನ್ನು ಗೌರವದಿಂದ ‘ಜ್ಞಾನಚೂರ್ಣ’ ಎಂದು ಕರೆಯುತ್ತಿದ್ದರಂತೆ. ಅದಿಲ್ಲದಿದ್ದರೆ ಅವರಿಗೆ ಸಭೆ-ಸಮಾರಂಭಗಳಲ್ಲಿ ಮಾತೇ ಹೊರಡುತ್ತಿರಲಿಲ್ಲವಂತೆ.

ಮೂಗಿನ ಎರಡೂ ಹೊಳ್ಳೆಗಳೊಳಗೆ ಚಿಟಿಕೆ ನಸ್ಯ ಏರಿತೋ, ಎಲ್ಲಿಲ್ಲದ ಹಾಸ್ಯಪ್ರವೃತ್ತಿ ರಂಗೇರುತ್ತಿತ್ತು, ಸುತ್ತಮುತ್ತಲಿನವರಿಗೆ ಬೋಧಪ್ರದ ರಂಜನೆಯೂ ಸಿಗುತ್ತಿತ್ತು. ಒಮ್ಮೆ ಡಿವಿಜಿ ಮತ್ತು ವೆಂಕಣ್ಣಯ್ಯ ಒಂದೆಡೆ ಕಲೆತಿದ್ದರು. ಡಿವಿಜಿ ವೆಂಕಣ್ಣಯ್ಯರಿಗಿಂತ ಎರಡು ವರ್ಷ ಚಿಕ್ಕವರಾದರೂ ಅವರಿಬ್ಬರಲ್ಲಿ ಹೋಗೋ-ಬಾರೋ ಏಕವಚನದ ದೋಸ್ತಿ ಇತ್ತಂತೆ. ಹೀಗೇ ಹರಟೆ ಮಾತು ಆಗುತ್ತಿರಬೇಕಾದರೆ ವೆಂಕಣ್ಣಯ್ಯನವರ ಜೇಬಿನಿಂದ ನಸ್ಯದ ಡಬ್ಬಿ
ಹೊರಬಂತು. ನಸ್ಯದ ಚಟ ಬಿಡುವುದು ಕಷ್ಟಕರ ಎಂದು ಒಪ್ಪಿಕೊಂಡಿದ್ದೂ ಆಯ್ತು.

‘ಹೋಗಲಿಬಿಡು. ಅನುನಾಸಿಕ ಅಕ್ಷರ ಬಳಸದೆ ನಸ್ಯದ ಬಗ್ಗೆ ಒಂದು ಪದ್ಯ ಬರಿ ನೋಡುವಾ!’ ಎಂದರಂತೆ ಡಿವಿಜಿ. ವೆಂಕಣ್ಣಯ್ಯ ಇದ್ದವರು ಒಂದು ಚಿಟಿಕೆ ನಸ್ಯವನ್ನೇರಿಸಿ ಬೆರಳುಗಳನ್ನು ಕೊಡವಿಕೊಂಡು ತತ್‌ಕ್ಷಣವೇ ಕವನ ಕಟ್ಟಿದರಂತೆ: ‘ದೆಗಡಿಯು ಬಲವಾಗಿದ್ದರೆ| ಹೊಗೆಯೆಲೆ ಧೂಳದ್ದು|
ಬೂಗಿಗೇರಿಸು ಗೆಳೆಯಾ|’ ಎಂತಹ ಪ್ರತ್ಯುತ್ಪನ್ನಮತಿ ಮತ್ತು ಹಾಸ್ಯಪ್ರಜ್ಞೆ! ಅಂದಹಾಗೆ, ಅನುನಾಸಿಕ ಅಕ್ಷರ ಬಳಸದೆ ನಸ್ಯದ ಬಗ್ಗೆ ಪದ್ಯವೆಂದಾಗ ದಂಡಿಯ ದಶಕುಮಾರ ಚರಿತೆಯಲ್ಲಿ ಮಂತ್ರಗುಪ್ತನೆಂಬ ರಾಜಕುಮಾರನ ನೆನಪಾಗುತ್ತದೆ.

ಮಂತ್ರಗುಪ್ತನು ಹಿಂದಿನ ರಾತ್ರಿ ಪ್ರಿಯತಮೆಯೊಂದಿಗೆ ಸುರತಕೇಳಿಯಲ್ಲಿ ಮೈಮರೆತಿದ್ದಾಗ ಕಾಮೋದ್ರೇಕದಿಂದ ಆ ಪ್ರಿಯತಮೆಯು ಮಂತ್ರಗುಪ್ತನ ತುಟಿಗಳನ್ನು ತೀವ್ರವಾಗಿ ಕಚ್ಚಿರುತ್ತಾಳೆ. ಅವನ ತುಟಿಗಳು ಗಾಯಗೊಂಡು ಊದಿರುತ್ತವೆ. ಎರಡೂ ತುಟಿಗಳನ್ನು ಮುಚ್ಚಲಿಕ್ಕಾಗದಷ್ಟು ನೋವು. ಅಂತಹ ಸನ್ನಿವೇಶದಲ್ಲಿ ಅವನ ಸಾಹಸವರ್ಣನೆ ಪ, ಫ, ಬ, ಭ, ಮ ಅಕ್ಷರಗಳ ಬಳಕೆಯಿಲ್ಲದೆಯೇ, ಅಂದರೆ ತುಟಿಗಳ ನೆರವಿಲ್ಲದೆ ‘ನಿರೋಷ್ಠ್ಯ’ವಾಗಿ ನಡೆಯುತ್ತದೆ! ಇರಲಿ, ನಮ್ಮ ಇಂದಿನ ವಿಷಯ ಓಷ್ಠ್ಯ ಅಕ್ಷರಗಳದ್ದಲ್ಲ, ಅನುನಾಸಿಕ ಅಕ್ಷರಗಳನ್ನು ಕುರಿತಾದ್ದು. ಹಾಗಾಗಿ, ನೆಗಡಿ ಮತ್ತು ಅನುನಾಸಿಕಗಳ ಇನ್ನೂ ಒಂದು ಮೋಜಿನ ಪದ್ಯವನ್ನು ಇಲ್ಲಿ ದಾಖಲಿಸಲೇಬೇಕು.

ಇದು ನನಗೆ ಸಿಕ್ಕಿದ್ದು ಅಂತರಜಾಲದಲ್ಲಿ ಒಂದು ಬ್ಲಾಗ್‌ನಲ್ಲಿ. ಮೂಲ ಕೊಂಕಣಿ ರಚನೆ ಫಾ. ಪಾವ್ಲ್ ಲುವಿಸ್ ಬೊತೆಲ್ ಅವರದಂತೆ. ಕನ್ನಡಕ್ಕೆ ಅನುವಾದಿಸಿದವರು ಗುರು ಬಾಳಿಗ ಎಂಬುವವರು. ಬರೀ ಅನುವಾದ ಅಲ್ಲ, ಹೆಚ್ಚೂ ಕಡಿಮೆ ಛಂದಸ್ಸಿಗೆ ಹೊಂದಿಸಿ ಬರೆದಿದ್ದಾರೆ. ಇದನ್ನು ದೋಣಿ
ಸಾಗಲಿ ಮುಂದೆ ಹೋಗಲಿ… ಧಾಟಿಯಲ್ಲಿ ಮಿಶ್ರಛಾಪು ತಾಳ ಹಾಕುತ್ತ ಹಾಡಿಕೊಳ್ಳಲಿಕ್ಕೂ ಆಗುತ್ತದೆ. ನಿಮಗೀಗ ನೆಗಡಿ ಆಗಿರದಿದ್ದರೂ ಆಗಿದೆಯೆಂದುಕೊಂಡು ಇದನ್ನು ಒಮ್ಮೆ ದೊಡ್ಡ ಧ್ವನಿಯಲ್ಲಿ ಹಾಡಿ ಆನಂದಿಸಿ. ಮತ್ತು ನೆಗಡಿಯಾಗಿರದೆ ಹಾಡುವುದಾದರೆ ಈ ಪದಗಳೆಲ್ಲ ಏನಿರಬಹುದೆಂದು ಅಂದಾಜು ಮಾಡಿಕೊಳ್ಳಿ: ದೆಟ್ಟರೆದುರಿಗೆ ದಾಕು ಬಾತದು ಆಡದಿರುವುದು ಸಭ್ಯವೇ? ಆದರೆದ್ದಯ ಬೂಗು ಕಟ್ಟಿದೆ ಬಾತದಾಡಲು ಸಾಧ್ಯವೇ? ಎಟ್ಟು ದಿದಗಳು ಕಳೆದವಿದ್ದಿಗೆ ಬೂಗು ದದ್ದದು ಕಟ್ಟಿದೆ ಅವದು ಇವದೂ ಹೇಳಿದೆಲ್ಲವು ಬದ್ದು ಬಾಡಿಯು ಆಗಿದೆ ಅಬ್ರತಾಜ್ಜದ ತಿಕ್ಕಿ ದೋಡಿರಿ ಎದ್ದರೊಬ್ಬರು ಗೆಳೆಯರು ಸುಟ್ಟ ಅರಶಿಡ ಹೊಗೆಯ ಬೂಸಲು ಅಳಲೆಪಡ್ಡಿತ ಕರೆದರು ಅಬ್ರತಾಜ್ಜದ ತಿಕ್ಕಿ ತೀಡಲು ಬೂಗು ಸುಲಿದೇ ಹೋಯಿತು ಅರಶಿಡದ ಹೊಗೆ ಕಪ್ಪು ಕಾಡಿಗೆ ಬೂಗಿದೊಳಗಡೆ ಅಟ್ಟಿತು ಓಬ ಕಾಳಿದ ದೀರ ತದ್ದರು ಬೂಗಿದಿದ್ದಲಿ ಸೆಳೆಯಲು ಕೊಚ್ಚ ಸಬಯಕೆ ಬೂಗಲಿರಿಸಿದ ಬೇಲೆ ಬೂಗದು ತೊಳೆಯಲು ದೋಡಿ ಬಿಡುವಾ ಎದ್ದು ದಾದದ ಬೂಗಿದೊಳಗಡೆ ಸೆಳೆದೆದು ದೆತ್ತಿಗೇರಿತು ಎದ್ದ ಪ್ರಾಡವು ದೆಗಡಿ ಹಾಗೇ ಉಳಿಯಿತು ಅಕ್ಕ ಬದ್ದಳು ದಸ್ಯ ಕೊಟ್ಟಳು ಸೆಳೆದು ದೋಡಿದಳೆದ್ದಳು ದೆಗಡಿಯೊಬ್ಬೆಲೆ ಬುಗಿಯಲೆದ್ದುತ ದೊಡ್ಡ ಚಿಟಿಕೆಯ ಹಿರಿದೆದು ಕಡ್ಡು ಬೂಗಿಗೆ ಬೆಕ್ಕಿ ಹಿಡಿಯಿತು ಹೊತ್ತಿ ಉರಿಯಿತು ಲೋಕವು ಅಕ್ಕ ದೀಡಿದ ದಸ್ಯವೆದ್ದರೆ ಬೆಡಸು ಕಾಳಿದ ಪುಡಿಯದು ದಿಬಗೆ ತಿಳಿದಿಹ ಬದ್ದು ಇದ್ದರೆ ದದಗೆ ಬೇಗದೆ ತಿಳಿಸಿರಿ ಬೆಡಸು ಕಾಳಿದ ದಸ್ಯ ಅರಶಿಡ ಬಿಟ್ಟು ಬೇರೆಯೆ ಹೇಳಿರಿ||

ಈ ಪದ್ಯವನ್ನೋದಿದ ಮೇಲೆಯಾದರೂ ನೀವು ಒಪ್ಪಲೇಬೇಕು ಅನುನಾಸಿಕ ಅಕ್ಷರಗಳ ಮಹತ್ತ್ವವನ್ನು, ಮತ್ತು ನೆಗಡಿಯಾದಾಗ ಅವುಗಳನ್ನುಚ್ಚರಿ ಸಲಿಕ್ಕಾಗದೆ ಆಗುವ ಆಭಾಸವನ್ನು. ಆದ್ದರಿಂದ ಈಗಿನ್ನು ಲೇಖನದ ಉಳಿದ ಭಾಗದಲ್ಲಿ ಅನುನಾಸಿಕ ಅಕ್ಷರಗಳ ಕೆಲವು ವೈಶಿಷ್ಟ್ಯಗಳನ್ನು ಸೋದಾ ಹರಣವಾಗಿ ನೋಡೋಣ. ನಾವಾಡುವ ಮಾತಿನಲ್ಲಿ, ಬರವಣಿಗೆಯಲ್ಲಿ ಅನುನಾಸಿಕ ಅಕ್ಷರಗಳ ಅನನ್ಯ ಕೊಡುಗೆಯನ್ನು ಹೆಮ್ಮೆಯಿಂದ ಸ್ಮರಿಸೋಣ.

ತೀರ ಶುಷ್ಕವಾದ ವ್ಯಾಕರಣ ಪಾಂಡಿತ್ಯದ ಪ್ರಸ್ತುತಿಯಂತಲ್ಲದಿದ್ದರೂ, ವರ್ಣಮಾಲೆಯ ಬಗೆಗಿನ ಪ್ರಾಥಮಿಕ ಜ್ಞಾನದಿಂದ ನೆನಪಿಸಿಕೊಳ್ಳುವುದಾದರೆ- ವರ್ಗೀಯ ವ್ಯಂಜನಗಳ ಪೈಕಿ ಪ್ರತಿ ವರ್ಗದ ಕೊನೆಯ ಅಕ್ಷರವನ್ನು ಅನುನಾಸಿಕ ಎನ್ನುತ್ತೇವೆ. ಅದನ್ನು ಉಚ್ಚರಿಸುವುದಕ್ಕೆ ಮೂಗಿನ ಸಹಾಯ ಬೇಕು ಎಂಬ ಕಾರಣಕ್ಕೆ ಆ ಹೆಸರು. ಙ, ಞ, ಣ, ನ, ಮ – ಇವೇ ಆ ಐದು ಅನುನಾಸಿಕ ಅಕ್ಷರಗಳು. ಇವುಗಳ ಪೈಕಿ ನ ಮತ್ತು ಮ ನಮಗೆ ಅಂಥದೇನೂ
ವಿಶೇಷ ಅನಿಸುವುದಿಲ್ಲ. ಅಂತ್ಯಾಕ್ಷರಿ ಆಡುವಾಗ ಎದುರಾಳಿ ತಂಡದವರ ಹಾಡು ನ ಅಥವಾ ಮ ದಿಂದ ಕೊನೆಗೊಂಡರೆ ನ ಅಥವಾ ಮ ದಿಂದ ಆರಂಭಿಸಲಿಕ್ಕೆ ನಮಗೆ ಹಾಡುಗಳು ಯಥೇಷ್ಟ ಸಿಗುತ್ತವೆ. ಣ ದಿಂದ ಕೊನೆಯಾದರೆ ಮಾತ್ರ ಸ್ವಲ್ಪ ಪಜೀತಿ ಆಗುವುದು.

ಆದರೆ ಣ ದಿಂದ ಕೊನೆಗೊಂಡರೆ ನ ದಿಂದ ಆರಂಭಿಸಬಹುದು ಎಂದು ಅಂತ್ಯಾಕ್ಷರಿಯ ಯುನಿವರ್ಸಲ್ ರೂಲ್ ಇರುವುದರಿಂದ ಜಟಾಪಟಿ ಆಗುವುದಿಲ್ಲ- ಜೈನರ ‘ಣಮೋ ಅರಿಹಂತಾಣಂ… ಣಮೋ ಸಿದ್ದಾಣಂ… ಣಮೋ ಆಇರಿಯಾಣಂ…’ ಪ್ರಾರ್ಥನೆಯನ್ನು ಣ ದಿಂದ ಆರಂಭವಾಗುವ
ಪದ್ಯವೆಂದು ಬಳಸಿ ಒಂದು ಸುತ್ತನ್ನು ನಿಭಾಯಿಸಬಹುದಾದರೂ. ಇನ್ನು, ಞ ಮತ್ತು ಙ ಇವುಗಳಿಂದ ಪದಗಳು ಆರಂಭವಾಗುವುದಿರಲಿ ಕೊನೆಯಾಗುವಂಥವೂ ಸಿಗಲಿಕ್ಕಿಲ್ಲ, ಅಷ್ಟೇಕೆ ಪದಮಧ್ಯದಲ್ಲಿ ಈ ವ್ಯಂಜನ ಬಳಕೆಯಾಗಿರುವ ಪದಗಳನ್ನು ಹುಡುಕಲಿಕ್ಕೂ ನಿಘಂಟು ತೆರೆದು ಸೂಕ್ಷ್ಮದರ್ಶಕದ ಅಡಿಯಲ್ಲಿ ಹಿಡಿಯಬೇಕಾದೀತು.

ಗಡಿನಾಡ ಕವಿ, ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ… ಪದ್ಯವನ್ನು ನಮಗೆ ಕೊಟ್ಟಿರುವ, ಕಯ್ಯಾರ ಕಿಞ್ಞಣ್ಣ ರೈಯವರ ಹೆಸರನ್ನು ಬರೆಯಲಿಕ್ಕೆ ಉಚ್ಚರಿಸಲಿಕ್ಕೆ ಅನೇಕರಿಗೆ ಸಮಸ್ಯೆಯಾಗುವುದು ಇದೇ ಕಾರಣದಿಂದ ಎಂದು ನನಗನಿಸುತ್ತದೆ. ಆದರೆ ಸುಮಾರು ಒಂದೆರಡು ಶತಮಾನಗಳ ಹಿಂದಿನವರೆಗೆ ಙ ಞ ಗಳು ಇಷ್ಟೊಂದು ಎಂಡೇಂಜರ್ಡ್ ಸ್ಪೀಸೀಸ್ ಆಗಿರಲಿಲ್ಲ. ಏಕೆಂದರೆ ಆಗಿನ ಕಾಲದಲ್ಲಿ ಅನುಸ್ವಾರವನ್ನು ಬರೆಯುವಾಗ ಯದ್ವಾ ತದ್ವಾ ಸೊನ್ನೆಯನ್ನೇ ಬಳಸುತ್ತಿರಲಿಲ್ಲ. ಪದದ ಕೊನೆಗೆ ಅನುಸ್ವಾರ ಬಂದರೆ ಮಾತ್ರ ಸೊನ್ನೆ.

ಪದಮಧ್ಯದಲ್ಲಿ ಅನುಸ್ವಾರದ ಬಳಿಕ ಅವರ್ಗೀಯ ವ್ಯಂಜನವಿದ್ದರೆ ಮಾತ್ರ ಸೊನ್ನೆ. ಮಿಕ್ಕೆಲ್ಲ ಸಂದರ್ಭಗಳಲ್ಲಿ- ಅಂದರೆ ಪದಮಧ್ಯದಲ್ಲಿ ಅನುಸ್ವಾರದ ಬಳಿಕ ವರ್ಗೀಯ ವ್ಯಂಜನವಿದ್ದರೆ ಆಯಾ ವರ್ಗಗಳ ಅನುನಾಸಿಕ ಅಕ್ಷರವನ್ನೇ ಬಳಸುತ್ತಿದ್ದದ್ದು. ಉದಾಹರಣೆಗೆ ಈಗ ನಾವು ಅಂಕ, ಶಂಖ, ಗಂಗಾ, ಲಂಘನ ಎಂದು ಬರೆಯುತ್ತೇವಲ್ಲ, ಈ ಪದಗಳನ್ನು ಹಿಂದಿನ ಕಾಲದಲ್ಲಿ ಅನುಕ್ರಮವಾಗಿ ಅಙ್ಕ, ಶಙ್ಖ, ಗಙ್ಗಾ, ಲಙ್ಘನ ಎಂದೇ ಬರೆಯುತ್ತಿದ್ದದ್ದು. ಹಾಗೆ ಬರೆಯುವವರಿಗೆ ಮತ್ತು ಓದುವವರಿಗೆ ಙ ಅಕ್ಷರವು ಅಪರಿಚಿತವೆಂಬ ಭಾವನೆ ಬರುತ್ತಿರಲಿಲ್ಲ. ಙ ಮಾತ್ರವಲ್ಲ ಉಳಿದ ನಾಲ್ಕು ಅನುನಾಸಿಕಗಳ ಬಳಕೆಯೂ ಹೀಗೆಯೇ. ಈಗ ನಾವು ಇಂಚರ, ವಾಂಛೆ, ಸಂಜಯ ಎಂದು ಬರೆಯುತ್ತೇವಲ್ಲ, ಹಿಂದಿನ ಕಾಲದಲ್ಲಾದರೆ ಇವು ಅನುಕ್ರಮವಾಗಿ ಇಞ್ಚರ, ವಾಞ್ಛೆ, ಸಞ್ಜಯ ಎಂದೇ ಬರೆಯಲ್ಪಡುತ್ತಿದ್ದದ್ದು.

ಈಗಿನ ಮಂಟಪ, ಕಂಠ, ಗಂಡ, ಪಂಢರಾಪುರಗಳು ಹಿಂದಿನ ಕಾಲದಲ್ಲಿ ಅನುಕ್ರಮವಾಗಿ ಮಣ್ಟಪ, ಕಣ್ಠ, ಗಣ್ಡ, ಪಣ್ಢರಾಪುರ ಆಗಿರುತ್ತಿದ್ದುವು; ಈಗಿನ ಕುಂತಿ, ಮಂಥರಾ, ಸ್ಕಂದ, ಕಬಂಧ ಹಿಂದಿನ ಕಾಲದಲ್ಲಿ ಕುನ್ತಿ, ಮನ್ಥರಾ, ಸ್ಕನ್ದ, ಕಬನ್ಧ ಎಂದು ಇರುತ್ತಿದ್ದುವು. ಹಾಗೆಯೇ ಈಗಿನ ಕಂಪು, ಕಂಬನಿ,
ದಂಭಾಚಾರಗಳು ಹಿಂದಿನ ಕಾಲದಲ್ಲಿ ಅನುಕ್ರಮವಾಗಿ ಕಮ್ಪು, ಕಮ್ಬನಿ, ಮತ್ತು ದಮ್ಭಾಚಾರ ಆಗಿರುತ್ತಿದ್ದುವು. ಸೂಕ್ಷ್ಮವಾಗಿ ಗಮನಿಸಿದರೆ, ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ಆ ಕ್ರಮ ತುಂಬ ಸಿಸ್ಟಮೆಟಿಕ್ ಮತ್ತು ಸೈಂಟಿಫಿಕ್ ಕೂಡ.

‘ಉಚ್ಚರಿಸಿದಂತೆಯೇ ಬರೆಯುವುದು, ಬರೆದಂತೆಯೇ ಉಚ್ಚರಿಸುವುದು’ ಎಂಬುದನ್ನು ಶತಪ್ರತಿಶತ ಪಾಲಿಸುತ್ತಿದ್ದ ಕ್ರಮವದು. ಬೇಕಿದ್ದರೆ ನೀವು ಹಳೆಯ ಕಾಲದ ಗ್ರಂಥಗಳನ್ನು ತೆರೆದುನೋಡಿ. ಅಥವಾ ಕನ್ನಡದ ಹೆಮ್ಮೆಯೆನಿಸಿರುವ ಕಿಟ್ಟೆಲ್ ಕೋಶವನ್ನು ತೆರೆದುನೋಡಿ. ಅಲ್ಲೆಲ್ಲ ವರ್ಗೀಯ ವ್ಯಂಜನದ ಹಿಂದಿನ ಅನುಸ್ವಾರಕ್ಕೆ ಸೊನ್ನೆ ಬಳಕೆ ಇಲ್ಲವೇ ಇಲ್ಲ. ಅನುನಾಸಿಕದೊಡನೆ ಒತ್ತಕ್ಷರವಾಗಿಯೇ ಬರೆದದ್ದಿರುತ್ತದೆ. ಈಗ ನಾವು ಇದ್ದಬಿದ್ದಲ್ಲೆಲ್ಲ
ಸೊನ್ನೆ ಸುತ್ತುತ್ತೇವಾದ್ದರಿಂದ ಅನುನಾಸಿಕಗಳು ನಮಗೆ ಅಪರಿಚಿತವಾಗುತ್ತಿವೆ. ನಮ್ಮ ಭಾಷಾ ಪ್ರಬುದ್ಧತೆ ಸೊನ್ನೆಯತ್ತ ಜಾರುತ್ತಿದೆ. ಮೊನ್ನೆ ಬೆಂಗಳೂರಿ ನಿಂದ ವಿದ್ಯಾ ಕಾನಲೆ ಅವರು ಒಂದು ವಾಟ್ಸ್ಯಾಪ್ ಮೆಸೇಜು ಕಳುಹಿಸಿದ್ದರು: ‘ಇದು ನವಕರ್ನಾಟಕ ಪುಟಾಣಿ ಪುಸ್ತಕ ಸರಣಿಯ ಪುಸ್ತಕಗಳಲ್ಲೊಂದು.

ಈ ರೀತಿಯ ಪುಟ್ಟ ಪುಸ್ತಕಗಳು ಬರ್ತ್‌ಡೇ ರಿಟರ್ನ್ ಗಿಫ್ಟ್ ಆಗಿ ಕೊಡಲು ಚೆನ್ನಾಗಿರುತ್ತವೆ. ನಾನು ತುಂಬಾ ಜನರಿಗೆ ಕೊಟ್ಟಿದ್ದೇನೆ. ಆದರೆ ಈ ಪುಸ್ತಕದ ಅಕ್ಷರ ಮಾಲೆಯಲ್ಲಿ ಙ ಅಕ್ಷರವೇ ಇಲ್ಲ!’ ಎಂದು ಬರೆದಿದ್ದರು. ಜೊತೆಯಲ್ಲೇ ಅದೇ ಪುಸ್ತಕದಿಂದ ಒಂದು ಪುಟದ ಡಿಜಿಟಲ್ ಚಿತ್ರವನ್ನೂ ಕಳುಹಿಸಿದ್ದರು. ಅದರಲ್ಲಿ ಗ ಪಕ್ಕದಲ್ಲಿ ಗಡಿಯಾರದ ಚಿತ್ರ; ಘ ಪಕ್ಕದಲ್ಲಿ ಘಂಟೆಯ ಚಿತ್ರ; ಅದಾದಮೇಲೆ ಕೆಳಗೆ ಚಿಕ್ಕದಾಗಿ ಜ್ಞ ಎಂದು ಅಚ್ಚಾಗಿದೆ. ಇದು ಮುದ್ರಣ ದೋಷವಲ್ಲ. ಪುಸ್ತಕ ರಚಿಸಿದವರಿಗೆ ಙ ಅನುನಾಸಿಕದ ಪರಿಚಯವೇ ಇಲ್ಲ!

ವಿದ್ಯಾರೊಂದಿಗಿನ ವಿಚಾರ ವಿನಿಮಯದಲ್ಲಿ ತಿಳಿದುಬಂದ ಇನ್ನೊಂದು ಆತಂಕಕಾರಿ ಬೆಳವಣಿಗೆಯೆಂದರೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಬಹುತೇಕ ಕನ್ನಡ ಮಿಸ್ಸುಗಳು ಈಗೀಗ ಙ ಮತ್ತು ಞ ಇವೆರಡನ್ನೂ ಞ ಎಂದೇ ಉಚ್ಚರಿಸುತ್ತಾರೆ. ಅಷ್ಟೇಕೆ, ಜನಪ್ರಿಯ ಗಾಯಕಿ ಬಿ.ಆರ್.ಛಾಯಾ ಅವರು ಡಾ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ವಿರಚಿತ ಶಿಶುಗೀತೆ ‘ಕನ್ನಡ ಅಕ್ಷರ ಎಷ್ಟಿದೆ ಅಂತ ಎಲ್ಲ ಗೊತ್ತಮ್ಮ…’ ಹಾಡಿದ್ದರಲ್ಲಿ ಙ ವನ್ನೂ ಞ ಎಂದೇ ಉಚ್ಚರಿಸಿದ್ದಾರೆ. ಕನ್ನಡ ವಾಙ್ಮಯದಿಂದ ಹೀಗೆ ಙ ಮರೆಯಾದರೆ ದಿಙ್ಮೂಢರಾಗಬೇಕಾಗುತ್ತದೆ ನಾವು! ಙ ವನ್ನು ಅಙ ದ ಪರದೆಯ ನೇಪಥ್ಯಕ್ಕೆ ಸರಿಸಿದ ಪಾಪ ಗಙ್ಗೆಯಲ್ಲಿ ಮುಳುಗೆದ್ದರೂ ಪರಿಹಾರವಾಗದು.

ಅದಿರಲಿ, ಅಂತ್ಯಾಕ್ಷರಿಯಲ್ಲಿ ಣ ಬದಲಿಗೆ ನ ಎಂದು ಮೇಲೆ ಒಂದುಕಡೆ ಹೇಳಿದ್ದೆನಷ್ಟೆ? ಸಂಸ್ಕೃತದಲ್ಲಿ ಅದರ ಉಲ್ಟಾ ಎಂಬಂತೆ ಒಂದು ನಿಯಮವಿದೆ. ಏನೆಂದರೆ ನ ಇರುವ ಪದದಲ್ಲಿ ರ ಅಥವಾ ಷ ಅಕ್ಷರಗಳೂ ಇದ್ದರೆ ಆ ಪದದಲ್ಲಿನ ನ ಅಕ್ಷರವು ಣ ಆಗುತ್ತದೆ! (ಈ ನಿಯಮಕ್ಕೆ ಕೆಲವು ಸೂಕ್ಷ್ಮ ಅಪವಾದ ಗಳೂ ಇವೆಯಾದರೂ ಸ್ಥೂಲ ಮಟ್ಟದಲ್ಲಿ ಹಾಗೆ ಅರ್ಥಮಾಡಿಕೊಳ್ಳೋಣ). ಉದಾಹರಣೆಗೆ ‘ಅಯನ’ ಎಂಬ ಪದ. ಇದಕ್ಕೆ ಸಂಚಾರ, ಗತಿ, ಕಾಲಮಾನ ಮುಂತಾದ ಅರ್ಥಗಳು. ರಾಮನ ಕಾಲಮಾನ, ರಾಮನು ಸಂಚರಿಸಿದ ಅವಽ ‘ರಾಮ + ಅಯನ = ರಾಮಾಯನ’ ಆಗಬೇಕಿತ್ತು ಅಲ್ಲವೇ? ಆದರೆ ರ
ಅಕ್ಷರವಿರುವುದರಿಂದ ರಾಮಾಯಣ ಆಗಿದೆ! ದಕ್ಷಿಣ+ಅಯನ = ದಕ್ಷಿಣಾಯನ ಎಂದು ನ ಉಳಿದುಕೊಂಡರೆ ಉತ್ತರ + ಅಯನ = ಉತ್ತರಾಯಣ ಆಗುತ್ತದೆ ರ-ಕಾರ ಇರುವುದರಿಂದ.

ರಾಮಾಯಣದ ಬದಲಿಗೆ ಸೀತೆಯ ಕಥೆ ಎಂದು ಹೇಳಿದರೆ ಸೀತಾ+ಅಯನ = ಸೀತಾಯನ ಆಗುತ್ತದೆ, ಸೀತಾಯಣ ಆಗುವುದಿಲ್ಲ. ಭಗವದ್ಗೀತೆಯ ಹತ್ತನೆಯ ಅಧ್ಯಾಯದಲ್ಲಿ ನ-ಣ ವಿಚಾರ ನಮಗೆ ತುಂಬ ಸ್ಪಷ್ಟವಾಗಿ ಗೊತ್ತಾಗುತ್ತದೆ. ಶ್ಲೋಕಗಳಲ್ಲಿ ಆದಿತ್ಯಾನಾಂ, ವೇದಾನಾಂ, ದೇವಾನಾಂ, ಭೂತಾನಾಂ, ವಸೂನಾಂ, ಸೇನಾನೀನಾಂ, ಯeನಾಂ, ಸಿದ್ಧಾನಾಂ, ಅಶ್ವಾನಾಂ… ಅಂತ ಬರುವಲ್ಲೆಲ್ಲ ನ ಇದೆ; ಆದರೆ ನಕ್ಷತ್ರಾಣಾಂ, ಇನ್ದ್ರಿಯಾಣಾಂ, ರುದ್ರಾಣಾಂ, ಶಿಖರಿಣಾಂ, ಮಹರ್ಷೀಣಾಂ, ಸ್ಥಾವರಾಣಾಂ, ನರಾಣಾಂ, ಸರ್ಪಾಣಾಂ, ಝಷಾಣಾಂ… ಇವುಗಳಲ್ಲೆಲ್ಲ ಣ ಇದೆ! ಪದದಲ್ಲಿ ರ ಅಥವಾ ಷ ಇದ್ದರೆ ನ ಹೋಗಿ ಣ ಬಂದಿರುತ್ತದೆ. ನಮ್ಮ ರಾಜ್ಯದ ಹೆಸರನ್ನು ನಾವೀಗ ವ್ಯಾವಹಾರಿಕವಾಗಿ ಕರ್ನಾಟಕ ಎಂದು ಬರೆಯುತ್ತೇವಷ್ಟೆ? ಅದು ವ್ಯಾಕರಣಬದ್ಧವಾಗಿ ಕರ್ಣಾಟಕ ಎಂದು ಇರಬೇಕು (ನಿಜವಾಗಿ ಯಾದರೆ ಈ ಪ್ರದೇಶದ ಹೆಸರಿದ್ದದ್ದು ‘ಕರ್ಣಾಟ’ ಎಂದು).

ಬ್ರಿಟಿಷರು ಕೆ ಎ ಆರ್ ಎನ್ ಎ ಟಿ ಎ ಕೆ ಎ ಅಂತ ಬರೆದು ಕರ್ನಾಟಕ ಎಂದು ಓದಿದರು. ನಾವೂ ಅವರ ಗುಲಾಮರಾಗಿ ಕರ್ನಾಟಕ ಎಂದೇ ಹೇಳಿದೆವು, ಬರೆದೆವು, ಮುಂದುವರಿಸಿದೆವು. ಕೊನೆಯಲ್ಲಿ, ಅನುನಾಸಿಕಗಳಿಗೆ ಸಂಬಂಧಿಸಿದಂತೆಯೇ ಇನ್ನೂ ಒಂದು ಸ್ವಾರಸ್ಯಕರ ವಿಚಾರ. ‘ಬ್ರಹ್ಮ’ ಪದದಲ್ಲಿ ‘ಹ್ಮ’ವನ್ನು ಹೇಗೆ ಉಚ್ಚರಿಸಬೇಕು? ಇದಕ್ಕೆ ಎರಡು ಯೋಚನಾ-ಶಾಲೆ (ಸ್ಕೂಲ್ ಆಫ್ ಥಾಟ್) ಇವೆ. ಬರೆದಂತೆಯೇ ಉಚ್ಚರಿಸುವುದು ಸಂಸ್ಕೃತದ
ಮತ್ತು ಕನ್ನಡದ ಹಿರಿಮೆಗಳಲ್ಲೊಂದು. ಆ ಪ್ರಕಾರವಾದರೆ ‘ಹ್ಮ’ ಉಚ್ಚರಿಸುವಾಗ ಮೊದಲಿಗೆ ಹ್, ಆಮೇಲೆ ಮ. ಗೀತಾಪರಿವಾರದಲ್ಲಿ ಆನ್‌ಲೈನ್ ಭಗವದ್ಗೀತೆ ಕಲಿಕೆಯಲ್ಲಿ ನಾವು ಈ ಕ್ರಮವನ್ನೇ ಅನುಸರಿಸುತ್ತೇವೆ.

ಅದೇ ರೀತಿ ವಹ್ನಿ (ಅಗ್ನಿಯ ಇನ್ನೊಂದು ಹೆಸರು) ಪದದಲ್ಲಿ ಮೊದಲಿಗೆ ಹ್, ಆಮೇಲೆ ನಿ. ಆದರೆ, ಇನ್ನೊಂದು ಸ್ಕೂಲ್ ಆಫ್ ಥಾಟ್ ಪ್ರಕಾರ ‘ಹಿ
ನ-ಮ-ಪರೇ ತತ್ಪರಸ್ಯ ಚ’ ಎಂಬ ಸೂತ್ರವೊಂದನ್ನು ಉಲ್ಲೇಖಿಸಿ ‘ಹಕಾರಕ್ಕೆ ನಕಾರದ ಅಥವಾ ಮಕಾರದ ಒತ್ತು ಬಂದಾಗ ನಕಾರ ಅಥವಾ ಮಕಾರವನ್ನೇ ಮೊದಲು ಉಚ್ಚರಿಸಿ ಆಮೇಲೆ ಹಕಾರ ಉಚ್ಚರಿಸಬೇಕು’ ಎನ್ನುತ್ತಾರೆ. ಅದರಂತೆ ‘ಬ್ರಹ್ಮ’ ಮತ್ತು ‘ವಹ್ನಿ’ಗಳನ್ನು ಹಾಗೆ ಬರೆದರೂ, ಅನುಕ್ರಮವಾಗಿ ‘ಬ್ರಮ್ಹ’ ಮತ್ತು ‘ವನ್ಹಿ’ ಎಂದು ಉಚ್ಚರಿಸಬೇಕಂತೆ.

‘ಮಧ್ಯಾಹ್ನ’ ಎಂದು ಬರೆದು ‘ಮಧ್ಯಾನ್ಹ’ ಎಂದು ಉಚ್ಚರಿಸಬೇಕಂತೆ (ಈಗ ಕೆಲವರು ಆ ತಂಟೆಯೇ ಬೇಡವೆಂದು ಮಧ್ಯಾನ ಅಥವಾ ಮತ್ತೂ
ಮುಂದು ವರಿದು ಮದ್ಯಾನ ಎಂದು ಉಚ್ಚರಿಸುವವರೂ ಇದ್ದಾರೆ). ಗಮನಿಸಬೇಕಾದ್ದೆಂದರೆ ಇದು ಹ-ದೊಂದಿಗೆ ನ ಅಥವಾ ಮ ಅನುನಾಸಿಕ ಸೇರಿದಾಗ ಮಾತ್ರ. ಉಳಿದ ಮೂರು ಅನುನಾಸಿಕಗಳಾದ ಙ, ಞ, ಣ ಗಳಿಗೆ ಇದು ಅನ್ವಯವಾಗುವುದಿಲ್ಲ. ಅಪರಾಹ್ಣ ಎಂದು ಬರೆದು ಅಪರಾಣ್ಹ ಎಂದು ಉಚ್ಚರಿಸುವಂತಿಲ್ಲ. ದೆಗಡಿ ಆದಾಗ ಮಾತ್ರ ಅಪರಾಡ್ಡ ಎನ್ನಲಿಕ್ಕಡ್ಡಿಯಿಲ್ಲವೆನ್ನಿ.