ಪ್ರಸ್ತುತ
ಗ.ನಾ.ಭಟ್ಟ
ಭರತನಾಟ್ಯ ಒಂದು ದೇಶೀಯ ಸಾಂಪ್ರದಾಯಿಕ ಕಲೆ. ಅದು ತಮಿಳುನಾಡಿನ ತಂಜಾವೂರಿನದು. ಅದನ್ನು ‘ಸದಿರ್’ ಎಂದೂ, ‘ಚಿನ್ನಮೇಳಂ’ ಎಂದೂ ಕರೆಯುತ್ತಿದ್ದರು. ನಮ್ಮ ನಾಡಿನಲ್ಲಿ ಅದನ್ನು ‘ತಾಫಾ’ ಎಂದು ಕರೆಯುತ್ತಿದ್ದರು.
ಇದು ಮೂಲ ರಾಮಾಯಣದಲ್ಲಿ ಇಲ್ಲದ ಒಂದು ಹೃದ್ಯವಾದ ಕಥೆ. ಸ್ವಲ್ಪ ಕಥಾಂತರ ಗೊಂಡಿದ್ದು. ಸೀತೆ ಮಾರೀಚನ ಮಾಯಾ ಮೃಗಕ್ಕೆ ಮನಸೋತು ಅದರ ಮೈಬಣ್ಣ, ಕಾಂತಿ, ರೂಪ, ಸೌಂದರ್ಯ ಮೊದಲಾದವುಗಳಿಗೆ ಸಮ್ಮೋಹನಗೊಂಡು ಅದನ್ನು ಹಿಡಿದು ತರುವಂತೆ ರಾಮನಿಗೆ ಗಂಟು ಬಿದ್ದಿದ್ದಳಲ್ಲವೆ? ರಾಮ, ಲಕ್ಷ್ಮಣ ಇಬ್ಬರೂ ಅದು ನಿಜವಾದ ಜಿಂಕೆಯಲ್ಲ.
ಅದು ರಾಕ್ಷಸರ ಮಾಯೆ. ಯಾವನೋ ರಾಕ್ಷಸ ಇಂತಹ ಜಿಂಕೆಯ ವೇಷವನ್ನು ಹಾಕಿ ಕೊಂಡು ನಮ್ಮನ್ನು ಮರುಳು ಮಾಡಲು, ಮೋಸ ಮಾಡಲು ಬಂದಿದ್ದಾನೆ ಎಂದು ಎಷ್ಟು ಹೇಳಿದರೂ ಆಕೆ ಕೇಳಿರಲಿಲ್ಲ. ಅದರ ಫಲ ಏನಾಯಿತು ಅನ್ನುವುದು ಎಲ್ಲರಿಗೂ ಗೊತ್ತೇ ಇದೆ. ಯುದ್ಧವೆಲ್ಲ ಮುಗಿದು ರಾವಣನನ್ನು ಸಂಹರಿಸಿ ರಾಮ ಹಿಂತಿರುಗುತ್ತಿದ್ದಾಗ ರಾಮ ಮತ್ತೆ ಸ್ವಲ್ಪ ದಿನ ಅರಣ್ಯದಲ್ಲೇ ವಾಸಿಸುತ್ತಿದ್ದ. ಆಗ ಒಂದು ಜಿಂಕೆ ಅವನ ಮುಂದೆ ಸುಳಿದಾಡತೊಡಗಿತು.
ಆದರೆ ಅದು ಮಾಯಾ ಜಿಂಕೆಯಲ್ಲ. ನೈಜವಾದ ಜಿಂಕೆ. ಹಿಂದೆ ಸೀತೆ ಅಂತಹದ್ದೇ ಜಿಂಕೆಗೆ ಆಸೆ ಪಟ್ಟಿದ್ದನ್ನು ರಾಮ ನೆನಪಿಟ್ಟು ಕೊಂಡಿದ್ದ. ಕೂಡಲೆ ರಾಮ ಒಂದು ಬಾಣವನ್ನು ಹೂಡಿ ಆ ಜಿಂಕೆಯ ಮೇಲೆ ಪ್ರಯೋಗಿ ಸಿದ. ಅದು ಪ್ರಾಣದಾಸೆಯಿಂದ ಕೊರಳನ್ನು ನೀಳವಾಗಿಸಿಕೊಂಡು ಓಡತೊಡಗಿತು. ಅದನ್ನು ಕಂಡ ಸೀತೆ ಅದರ ಮೇಲೆ ಕನಿಕರಿಸಿ ಜಿಂಕೆಯನ್ನು ಹಿಂಸಿಸಬಾರ ದೆಂದೂ ಅದನ್ನು ಕೊಲ್ಲಬಾರದೆಂದೂ ರಾಮನಲ್ಲಿ ವಿನಂತಿಸಿಕೊಂಡಳು.
ಆದರೆ ರಾಮ ಅಷ್ಟರಲ್ಲೇ ಬಾಣ ಬಿಟ್ಟಾಗಿತ್ತು. ಅದು ಹುಸಿಯಾಗುವಂತಿರಲಿಲ್ಲ. ಇತ್ತ ಅದನ್ನು ಉಳಿಸಬೇಕೆಂದು ಸೀತೆಯ ಪ್ರಾರ್ಥನೆ. ಈಗ ಏನು ಮಾಡಬೇಕು ರಾಮ? ಕೂಡಲೆ ರಾಮ ಮತ್ತೊಂದು ಬಾಣವನ್ನು ಹೂಡಿ ಆ ಬಾಣದಿಂದ ಮೊದಲು ಬಿಟ್ಟ ಬಾಣವನ್ನು ಕತ್ತರಿಸಿ ಹಾಕಿದ. ಎಷ್ಟೆಂದರೂ ಆತ ಮಹಾಧನ್ವಿ ಅಲ್ಲವೆ? ಹಾಗೆ ಮಾಡಿದ್ದರಿಂದ ಆ ಜಿಂಕೆಯ ಜೀವ ಉಳಿಯಿತು. ಎಂತಹ ಮನೋಹರವಾದ, ಸುಂದರವಾದ ಕಲ್ಪನೆ ಇದು!
ಇದನ್ನು ಒಬ್ಬರು ಗೇಯವಾಗಿ ಹಾಡಬಹುದು. ಇನ್ನೊಬ್ಬರು ಇದಕ್ಕೆ ನಾಟಕ ರೂಪವನ್ನು ಕೊಟ್ಟು, ಅದಕ್ಕೆ ಸಂಭಾಷಣೆ
ರಚಿಸಿ ಇನ್ನೂ ಹೆಚ್ಚು ಮನೋರಂಜಕವಾಗಿಸಬಹುದು. ಮತ್ತೊಬ್ಬರು ಇದನ್ನು ನೃತ್ಯ ರೂಪಕವಾಗಿಸಿ ಜನಮನವನ್ನು ಸೆಳೆಯ ಬಹುದು. ಒಟ್ಟಿನಲ್ಲಿ ಇದೊಂದು ಹಾರ್ದಿಕ ದ್ರವ್ಯ ವುಳ್ಳ ಸುಂದರ ಕೃತಿ. ಇದರಲ್ಲಿ ರಾಮನ ಪತ್ನಿ ವಾತ್ಸಲ್ಯ, ಸೀತೆಯ ಹೃದಯ ಕೋಮಲತೆ, ರಾಮನ ಪರೇಂಗಿತಗ್ರಹಣ ಮತ್ತು ಅವನ ಶಸಚಾತುರ್ಯ ಎಲ್ಲವನ್ನೂ ಕಾಣಬಹುದು.
ಸಹೃದಯರಾದವರು ಇದರ ಕುರಿತಾದ ಹಾಡನ್ನು ಕೇಳಲಿ, ನಾಟಕವನ್ನು ನೋಡಲಿ, ನೃತ್ಯವನ್ನು ವೀಕ್ಷಿಸಲಿ ಅವರ ಮನಸ್ಸು ಇವನ್ನೆಲ್ಲ ಗ್ರಹಿಸುವಲ್ಲಿ ನಿಮಗ್ನವಾಗುತ್ತದೆ. ಇದನ್ನೇ ರಸ ಸಮೃದ್ಧಿ ಅಂತ ಕರೆಯವುದು. ಇಂತಹ ರಸ ಸಮೃದ್ಧಿ ನಮಗೆ ನಾಟಕ, ಯಕ್ಷಗಾನ, ಭರತನಾಟ್ಯ, ಸಂಗೀತ, ಕಥಕ್, ಕಥಕ್ಕಳಿ, ಕೂಚಿಪುಡಿ ಮೊದಲಾದ ಲಲಿತಕಲೆಗಳ ಮೂಲಕ ದೊರೆಯುತ್ತದೆ. ಯಾವುದೇ ಕಲೆ ನಮ್ಮ ಮನಸ್ಸಿಗೆ ಕಣ್ಣು, ಕಿವಿ ಮೊದಲಾದ ಇಂದ್ರಿಯಗಳ ಮೂಲಕ ಒಂದು ಸೌಂದರ್ಯವನ್ನೋ, ಒಂದು ಮಹತ್ವವನ್ನೋ, ಒಂದು ಗಂಭೀರ ವಿಚಾರವನ್ನೋ ಅನುಭವ ಮಾಡಿಸುತ್ತದೆ.
ಆ ಅನುಭವವೇ ನಮ್ಮ ಜೀವಿತಭಾಗ್ಯ. ಕಲೆ ನಮ್ಮ ಮನಸ್ಸಿನ ಮೃದು, ಕೋಮಲ ಭಾವಗಳನ್ನು ಮೇಲೆಕ್ಕೆಬ್ಬಿಸಿ ಒಂದು ರೂಪಕ್ಕೆ ತಂದು ನಮ್ಮ ನಡೆ ನುಡಿಗಳಲ್ಲಿ ಒಂದು ನಯ, ವಿನಯ, ನಾಜೂಕು, ನವುರನ್ನು ಅಭ್ಯಾಸ ಮಾಡಿಸುತ್ತದೆ. ಕಲೆಯಿಂದ ಸಿಗುವ ಪರಮಪ್ರಯೋಜನ ಇದು. ಇಂತಹ ಕಲೆಗಳಲ್ಲಿ ಭರತನಾಟ್ಯವೂ ಒಂದು. ಭರತನಾಟ್ಯ ಒಂದು ದೇಶೀಯ ಸಾಂಪ್ರದಾಯಿಕ ಕಲೆ.
ಅದು ತಮಿಳುನಾಡಿನ ತಂಜಾವೂರಿನದು. ಅದನ್ನು ‘ಸದಿರ್’ ಎಂದೂ, ‘ಚಿನ್ನಮೇಳಂ’ ಎಂದೂ ಕರೆಯುತ್ತಿದ್ದರು. ನಮ್ಮ
ನಾಡಿನಲ್ಲಿ ಅದನ್ನು ‘ತಾಫಾ’ ಎಂದು ಕರೆಯುತ್ತಿದ್ದರು.
ಇಂತಹ ಒಂದು ಪ್ರಾದೇಶಿಕ ಕಲಾ ಪ್ರಕಾರಕ್ಕೆ ರಾಷ್ಟ್ರೀಯ ವ್ಯಾಪ್ತಿಯನ್ನೂ ಅಂತಾರಾಷ್ಟ್ರೀಯ ಮನ್ನಣೆಯನ್ನೂ ದೊರಕಿಸಿ ಕೊಟ್ಟವರು ಖ್ಯಾತ ನೃತ್ಯ ಕಲಾವಿದೆ ರುಕ್ಮೀಣೀದೇವಿ ಅರುಂಡೇಲ್ ಆವರು. ಕಲಾಕ್ಷೇತ್ರಕ್ಕೆ ರುಕ್ಮಿಣೀದೇವಿಯವರ ಕೊಡುಗೆ ಅಪಾರವಾದುದು. ಅವರ ಇನ್ನೊಂದು ಮಹೋನ್ನತ ಸಾಧನೆಯೆಂದರೆ- ನೃತ್ಯರೂಪಕವನ್ನು ಆಯೋಜಿಸಿದ್ದು ಮತ್ತು ಅದಕ್ಕೊಂದು ವ್ಯವಸ್ಥಿತ ರೂಪ ಕೊಟ್ಟಿದ್ದು. ಅದರಲ್ಲಿ ಅವರು ಆಯೋಜಿಸಿದ್ದ ರಾಮಾಯಣದ ನೃತ್ಯರೂಪಕ ಜಗತ್ಪ್ರಸಿದ್ಧ ವಾದುದು.
ರುಕ್ಮಿಣೀದೇವಿಯವರ ನೃತ್ಯಪ್ರೇಮ ಅಸದೃಶವಾದುದು. ‘ಕಲೆಯ ಮೂಲಕ ದೈವಿಕ ಶಕ್ತಿಯನ್ನು ಅರಿತುಕೊಳ್ಳಲು ಕಲಾಕ್ಷೇತ್ರಕ್ಕೆ ಬನ್ನಿ. ನಮ್ಮ ತಾಯಿನಾಡಿನ ಪವಿತ್ರ ಪೀಠದಲ್ಲಿ ನಿಮ್ಮನ್ನು ನೀವು ಅರ್ಪಿಸಿಕೊಳ್ಳಲು ಕಲಾಕ್ಷೇತ್ರಕ್ಕೆ ಬನ್ನಿ. ಕುಣಿಯಿರಿ; ಹಾಡಿರಿ; ನಾಟಕದ ಚೆಲುವಿನಿಂದ ಕಾವ್ಯದ ವಿಲಾಸದಿಂದ ಭಾರತವನ್ನು ತುಂಬಿರಿ’ ಎಂದು ಕರೆ ನೀಡಿದ್ದರು.
ಇಂತಹ ದೈವಿಕ ಶಕ್ತಿಯ ನೃತ್ಯಪ್ರಕಾರವನ್ನು ಇಂದು ಅನೇಕ ಸಂಘಸಂಸ್ಥೆಗಳು ಬೆಳಸುತ್ತಾ, ಪ್ರಸರಣಗೈಯ್ಯುತ್ತಾ, ಪೋಷಿಸುತ್ತಾ ಇವೆ. ನೃತ್ಯಕಲಾವಿದರು ಸ್ವತಃ ನೃತ್ಯ ಸಂಸ್ಥೆ ಕಟ್ಟಿಕೊಂಡು ತಾವೇ ಸ್ವತಃ ನೃತ್ಯ ಮಾಡುತ್ತಾ, ನೃತ್ಯತಂಡವನ್ನು ಬೆಳಸುತ್ತಾ, ಶಿಷ್ಯರನ್ನು ತಯಾರಿಸುತ್ತಾ ಕಲಾಪ್ರಸರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹ ಸಂಸ್ಥೆಗಳನ್ನು ಹುಟ್ಟು ಹಾಕಿದವರಲ್ಲಿ ಖ್ಯಾತ ಭರತನಾಟ್ಯ ಕಲಾವಿದ ಮತ್ತು ಕಲಾ ಪ್ರಾಧ್ಯಾಪಕ ಡಾ. ಕೆ. ಕುಮಾರ್ ಒಬ್ಬರು. ಅವರು ಮೈಸೂರಿನ ವಿಜಯನಗರದಲ್ಲಿ, ತಮ್ಮ ಸ್ವಂತ ಮನೆಯಲ್ಲಿ ಒಂದು ಸಭಾಭವನವನ್ನು ನಿರ್ಮಿಸಿ ನೃತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ತಮ್ಮ ಮಕ್ಕಳಾದ ಕುಮಾರಿ ಕೆ.ಎಂ.ಲೇಖ ಮತ್ತು ಕೆ.ಎಂ. ನಿಧಿ ಅನ್ನುವವರಿಗೆ ಬಾಲ್ಯದಿಂದಲೇ ನೃತ್ಯ ಕಲಿಸಿ ಅವರನ್ನು ಒಳ್ಳೆಯ ನೃತ್ಯಪಟುಗಳನ್ನಾಗಿ ಸಜ್ಜುಗೊಳಿಸಿದ್ದಾರೆ. ಸುಮಾರು ಒಂದು ವರ್ಷದಿಂದ ನಿರಂತರ ನೃತ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ಡಾ. ಕುಮಾರ್ ಅವರು ಈ ಸಲ ಇದೇ ಬರುವ 29ರಂದು ತಮ್ಮ ಕಲೆಮನೆ ಸಭಾ ಭವನದಲ್ಲಿ ವಿಶ್ವ ನೃತ್ಯ ದಿನವನ್ನು ಆಚರಿಸುತ್ತಿದ್ದಾರೆ.
ಅಂದು ಸಂಜೆ ೪-೩೦ಕ್ಕೆ ಸಂಪನ್ನಗೊಳ್ಳಲಿರುವ ನೃತ್ಯಕಾರ್ಯಕ್ರಮದಲ್ಲಿ ಡಾ. ಕೆ.ಕುಮಾರ್ ಅವರು ತಮ್ಮ ಸಂಸ್ಥೆಯಿಂದ
ನೃತ್ಯ ಕಲಾವಿದರಾದ ಶ್ರೀಮತಿ ಕಮಲಾ ಭಟ್, ಶ್ರೀ ಚಂದ್ರಶೇಖರ ನಾವಡ, ಶ್ರೀ ಬದರಿದಿವ್ಯಭೂಷಣ ಮತ್ತು ಮೃದಂಗವಾದಕ ಶ್ರೀ ಹೆಚ್.ಎಲ್. ಶಿವಶಂಕರ ಸ್ವಾಮಿ ಅವರನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೋ|| ಎ.ಪಿ. ಜ್ಞಾನಪ್ರಕಾಶ್ ಮತ್ತು ವಿಮರ್ಶಕ, ಚಿಂತಕ, ವಿದ್ವಾನ್ ಗ.ನಾ. ಭಟ್ಟ ಭಾಗವಹಿಸಲಿದ್ದಾರೆ.
ವರ್ಷದ ಮುನ್ನೂರಾ ಅರುವತ್ತೈದು ದಿನಗಳೂ ಒಂದಲ್ಲಾ ಒಂದು ದಿನಕ್ಕೆ ಮೀಸಲಿರುವಂತೆ ನೃತ್ಯಕ್ಕೂ ಕೂಡಾ ಒಂದು ದಿನ ಮೀಸಲಿರಿಸಿದೆ. ಆ ದಿನವೇ ಏಪ್ರಿಲ್ 29. 1982ರಲ್ಲಿ ITI- International Theatre Institute ನವರು ಮಾಡರ್ನ್ ಬ್ಯಾಲೆಯ ಸೃಷ್ಟಿಕರ್ತ ಜೀನ್ ಜಾರ್ಜಸ್ ನವರೆ ಎಂಬವನ ಹುಟ್ಟುಹಬ್ಬದ ನೆನಪಿಗಾಗಿ( 1727-1810) ಏಪ್ರಿಲ್ 29ರಂದು ವಿಶ್ವ ನೃತ್ಯ ದಿನ ಎಂದು ಆಚರಿಸಲು ಆರಂಭಿಸಿದರು. ಡಾನ್ಸ್ ತರಗತಿ ನಡೆಸುವುದು, ಡಾನ್ಸ್ ನೋಡುವುದಕ್ಕೆ ಜನರನ್ನು ಆಹ್ವಾನಿಸುವುದು, ಪ್ರದರ್ಶನ ನೀಡುವುದು, ನೃತ್ಯ ಪ್ರಕಾರವನ್ನು ವಿಮರ್ಶಿಸುವುದು, ಸ್ಥಳೀಯ ಗ್ರಂಥಾಲಯಗಳಿಗೆ ನೃತ್ಯ ಪುಸ್ತಕಗಳನ್ನು ಒದಗಿಸು ವುದು. (ಇಂದಿನ ದಿನಮಾನಗಳಲ್ಲಿ ಸೀಡಿ ಮುಂತಾದುವುಗಳು) ನೃತ್ಯದ ಹಳೆಯ ವಸ್ತ್ರಾಭರಣಗಳನ್ನು ಧರಿಸುವುದು, ನೃತ್ಯ ವನ್ನು ಸಂಘಟಿಸುವುದು, ದೇಣಿಗೆ ಸಂಗ್ರಹಿಸುವುದು ಇವೇ ಮೊದಲಾದವು ಇದರ ಮುಖ್ಯ ಉದ್ದೇಶವಾಗಿದೆ.
ಅಂತಹ ನಿಟ್ಟಿನಲ್ಲಿ ‘ಕುಮಾರ್ ಕಲಾಪ್ರದರ್ಶನ ಕೇಂದ್ರ’ ವಿಶ್ವ ನೃತ್ಯ ದಿನವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ.