Friday, 13th December 2024

ಪುಸ್ತಕ ಜಗತ್ತಿನ ತಾತ್ಪರ್ಯ ಜ್ಞಾನದ ತೇಜಸ್ಸು

ಅಭಿವ್ಯಕ್ತಿ

ಸಿಂಚನ ಎಂ.ಕೆ.

ವಿಶ್ವದ ಹಲವಾರು ರಾಷ್ಟ್ರಗಳು ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸುತ್ತವೆ. ಯುನೆಸ್ಕೋ ಸಂಸ್ಥೆಯು 1995  ರಿಂದ ಮನುಕುಲವು ಕಲಿಕೆಗಾಗಿ ಕಂಡುಕೊಂಡಿರುವ ಶ್ರೇಷ್ಠ ವಿಧಾನವಾದ ಪುಸ್ತಕಗಳ ಅಧ್ಯಯನ ವಿಧಾನವನ್ನು ಪ್ರೋತ್ಸಾಹಿಸಿ, ಅದರ ಬಗ್ಗೆ ವಿಶೇಷ ಒಲವು ಮೂಡಿಸಿ, ಸಮಾಜದಲ್ಲಿ ಸಕಾರಾತ್ಮಕ ಚಿಂತನೆಯನ್ನು ಹರಡುವ ಸಲುವಾಗಿ ಆಚರಿಸುತ್ತಾ
ಬರಲಾಗುತ್ತಿದೆ.

ಪುಸ್ತಕಗಳನ್ನು ಮುದ್ರಣ ಮಾಡಿ ವಿತರಿಸುವ ಉನ್ನತ ಕಾರ್ಯವನ್ನು ಮಾಡುತ್ತಿರುವ ಎಲ್ಲಾ ಪ್ರಕಟಣಾ, ವಿತರಣಾ ಸಂಸ್ಥೆಗಳ
ಉದ್ಯೋಗಿಗಳಿಗೆ ಕೃತಜ್ಞತೆ ತಿಳಿಸುವ ಕಾರಣವಾಗಿ ಕೂಡ ಆಚರಿಸಲಾಗುತ್ತದೆ. ‘ನ ಹಿ ಜ್ಞಾನೇನ ಸದೃಶಂ ಪವಿತ್ರ ಮಿಹ ವಿದ್ಯತೇ’,
ಎಲ್ಲಕ್ಕಿಂತಲೂ ಶ್ರೇಷ್ಠವಾದುದು ಪವಿತ್ರವಾದುದು ಜ್ಞಾನ ಎಂದು ಸ್ವಯಂ ಶ್ರೀ ಕೃಷ್ಣ ಬೋಧಿಸಿದ್ದಾರೆ.

ಅಜ್ಞಾನದ ಅಂಧಕಾರದ ದುಃಖವನ್ನು ಜ್ಞಾನದ ಬೆಳಕಿನ ಪ್ರಜ್ವಲತೆಯಿಂದ ಮಾತ್ರ ನಿರ್ವಹಿಸಲು ಸಾಧ್ಯ ಎಂದು ನುಡಿದಿದ್ದಾರೆ. ಎಲ್ಲಕ್ಕಿಂತ ಶ್ರೇಷ್ಠವಾದ ಯಜ್ಞ ಜ್ಞಾನ ಯಜ್ಞ, ಎಲ್ಲಕ್ಕಿಂತ ಶ್ರೇಷ್ಠವಾದ ದಾನ ಜ್ಞಾನ ದಾನ ಎಂಬುದಾಗಿ ನಮ್ಮ ಸಂಸ್ಕೃತಿ ತಿಳಿಸಿದೆ. ವಿದ್ಯೆಯುಳ್ಳವನ ಮುಖವು ಮುದ್ದು ಬರುವಂತಿಕ್ಕು ವಿದ್ಯೆಯಿಲ್ಲದವನ ಬರಿಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ ಎಂಬ ವಚನವನ್ನು ನೀವೆಲ್ಲ ಕೇಳೇ ಇರ್ತಿರಾ. ಈ ಎರಡು ಸಾಲುಗಳ ವಿದ್ಯೆಯ ಮಹತ್ವವನ್ನು ಅರಿಯಬಹುದು.

ಜ್ಞಾನಿಯಾದ ಮಾನವನು ತೇಜಸ್ವಿಯಾಗಿರುತ್ತಾನೆ, ತನ್ನ ಮೇರು ವ್ಯಕ್ತಿತ್ವದಿಂದ ಲೋಕ ಕಲ್ಯಾಣವನ್ನು ಮಾಡುತ್ತಾನೆ. ಆದರೆ ಜ್ಞಾನವನ್ನು ಅರ್ಜಿಸದ ಅಜ್ಞಾನಿಯ ಬದುಕು ಅಂಧಕಾರದ ಶೋಕದಲ್ಲಿ ಮುಳುಗಿ ದುರಂತವಾಗುತ್ತದೆ ಎಂಬ ಸಂದೇಶವೂ ಇದರಲ್ಲಿ ಅಡಗಿದೆ. ನಾನಾ ತೆರನಾದ ಪುಸ್ತಕಗಳನ್ನು ನಾವು ಕಾಣುತ್ತೇವೆ. ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಅಧ್ಯಾತ್ಮಿಕ,
ದೇಶಭಕ್ತಿ ಚರಿತ್ರೆ ಪುಸ್ತಕಗಳು ಹೀಗೆ. ಕೆಲವು ಪುಸ್ತಕಗಳು ಉತ್ತಮ ಅಂಕ ಗಳಿಸಲು, ಮತ್ತೆ ಕೆಲವು ಪುಸ್ತಕಗಳು ಉತ್ತಮ ಉದ್ಯೋಗ ಗಳಿಸಲು ಸಹಾಯ ಮಾಡುತ್ತವೆ.

ಆದರೆ ದೇಶಭಕ್ತಿ ಹಾಗೂ ಅಧ್ಯಾತ್ಮಿಕ ಪುಸ್ತಕಗಳು ನಮ್ಮ ಸಂಸ್ಕೃತಿಯಲ್ಲಿ ಪೂಜ್ಯ ಸ್ಥಾನವನ್ನು ಪಡೆದುಕೊಂಡು ಆರಾಧಿಸ ಲ್ಪಡುತ್ತವೆ. ಆದರೆ ಪ್ರಸ್ತುತ ದಿನಗಳಲ್ಲಿ ಅಪರಿಮಿತ ಜ್ಞಾನವನ್ನು ಶೈಕ್ಷಣಿಕ ಔದ್ಯೋಗಿಕ ದೃಷ್ಟಿಯಲ್ಲಿ ತೂಗಿ, ಕೇವಲ ಆರ್ಥಿಕತೆಗೆ ಪರಿಮಿತಿಗೊಳಿಸಲಾಗುತ್ತದೆ. ಆರ್ಥಿಕತೆ ಅವಶ್ಯಕ. ಆದರೆ ಇತರೆ ಎ ಅವಶ್ಯಕತೆಗಳನ್ನು ಸಂಪೂರ್ಣ ಕಡೆಗಣಿಸಿ ಆರ್ಥಿಕತೆ ಯೊಂದೇ ಮುಖ್ಯವೆಂಬ ಅನರ್ಥ ವಿಚಾರದಿಂದ ಮಾನವ ಕಲ್ಯಾಣ ಸಾಧ್ಯವಾಗುವುದೇ? ಭಾರತೀಯ ಪರಂಪರೆಯಲ್ಲಿ ಪರಮ ಶಕ್ತಿಯ ನಿಸ್ವಾರ್ಥತದ ಪರಾಕಾಷ್ಠತೆಯನ್ನು ತಲುಪಿದ್ದ ಸಂತರು ಸಾವಿರಾರು ವರ್ಷಗಳ ತಪಸ್ಸಿನಿಂದ ಪಡೆದ ಅಮೋಘ ರತ್ನ ದಂತಹ ಜ್ಞಾನ ಭಂಡಾರದ ಪುಸ್ತಕಗಳನ್ನು ನಾಲ್ಕಕ್ಷರ ಕಲಿತು ಬುದ್ಧಿ ಜೀವಿಗಳು ಎನ್ನಿಕೊಳ್ಳುತ್ತಾ ಭ್ರಮೆಯ ಬದುಕು ನಡೆಸು ತ್ತಿರುವವರು ಅದೆಲ್ಲ ಸುಳ್ಳು, ಅದೆಲ್ಲ ವ್ಯರ್ಥ ಮೂಢನಂಬಿಕೆ ಎಂದು ಬಿಡುತ್ತಾರೆ.

ಯಾವ ಋಷಿಮುನಿಗಳು, ಋಷಿ ಸದೃಶ ಬರಹಗಾರರು ತಮ್ಮ ಜೀವನವನ್ನು ಮಾನವ ಕಲ್ಯಾಣಕ್ಕಾಗಿ ಅರ್ಪಿಸಿ ಬದುಕಿನ ಭವ – ಬಂಧನದ ಕಾಠಿಣ್ಯತೆಯ ಹಾದಿಯಲ್ಲಿನ ಅತೀವ ದುಃಖ ನಿವಾರಣೆಗೆ ಧರ್ಮ ಮಾರ್ಗದ ಬೆಳಕನ್ನು ತೋರಿದರೊ ಅಂತಹ ನಮ್ಮ
ಜ್ಞಾನ ಶಿರೋಮಣಿಗಳಾದ ಪೂರ್ವಜರಿಗೆ ಎಂತಹ ಗೌರವವನ್ನು ನಾವು ಕೊಡುತ್ತಿದ್ದೇವೆ? ಪುಸ್ತಕ ರೂಪದ ಜ್ಞಾನ ಸಂಗ್ರಹ ವ್ಯವಸ್ಥೆ ಇಲ್ಲದಿದ್ದಂತಹ ಪ್ರಾಚೀನ ಕಾಲದಿಂದ ಸತತ ಅನ್ಯ ಸಂಸ್ಕೃತಿಗರ ಆಕ್ರಮಣದ ಘೋರ ಪೆಟ್ಟನ್ನು ಎದುರಿಸಿಯೂ ರಕ್ಷಣೆ ಮಾಡಿ ಪವಿತ್ರ ಜ್ಞಾನ ಸಾಹಿತ್ಯವನ್ನು ನಮಗೆ ನೀಡಿದ್ದಾರೆಯೊ ಅದನ್ನು ನಾವು ಇಂದು ಓದುತ್ತಿಲ್ಲ, ಅದರ ಹಿರಿಮೆ ನಮಗೆ ತಿಳಿದಿಲ್ಲ ಎಂದರೆ ಏನರ್ಥ!

ಈ ನಮ್ಮ ಮಾತೃಭೂಮಿಯ ಧರ್ಮ – ಸಂಸ್ಕೃತಿಯ ಉಳಿವಿಗಾಗಿ ನಮ್ಮ ಪೂರ್ವಜರು ಜ್ಞಾನಯಜ್ಞದಲ್ಲಿ ತಮ್ಮನ್ನೇ ತಾವು ಸಮರ್ಪಿಸಿಕೊಂಡಿದ್ದು ನಾವು ಅವರ ತ್ಯಾಗ ಬಲಿದಾನಗಳಿಗೆ ಅವಮಾನ ಮಾಡಿ ಪಿಕ್ಚರ್ ಟಾಕೀಸ್‌ಗಳಲ್ಲಿ ಮಸಾಲಾ ಮೂವಿಗಳನ್ನು ನೋಡುತ್ತಾ ಪರಕೀಯ ಸಂಸ್ಕೃತಿಗರ ಬಲೆಯಲ್ಲಿ ಸಿಕ್ಕಿಕೊಳ್ಳಲಿ ಎಂದಲ್ಲ. ಇದರಲ್ಲಿ ನಮ್ಮದೇ ಎಲ್ಲಾ ತಪ್ಪು
ಎಂದಲ್ಲ. ನಮ್ಮ ದೇಶದ ಮೇಲೆ ನಡೆದಿರುವಷ್ಟು ಆಕ್ರಮಣ ಬೇರೆಲ್ಲೂ ನಡೆದಿಲ್ಲ.

ಸ್ವಾಮಿ ವಿವೇಕಾನಂದರೆ ಒಂದೆಡೆ ಹೇಳುತ್ತಾರೆ ಯಾವುದಾದರೂ ದೇಶ ಕೇವಲ ಹತ್ತೇ ಹತ್ತು ವರ್ಷ ಅನ್ಯ ಸಂಸ್ಕೃತಿಯ ನಾಡಿನವರಿಂದ ಆಳಲ್ಪಟ್ಟರೆ, ಆ ದೇಶದ ಸಂಸ್ಕೃತಿಯೇ ನಾಶವಾಗಿ ಹೋಗುತ್ತದೆ ಎಂದು. ಆದರೆ ಭಾರತ ಭೂಮಿ ಮಾತ್ರ ಇದಕ್ಕೆ
ಹೊರತಾಗಿ ಏಕೈಕ ರಾಷ್ಟ್ರವಾಗಿ ಎಲ್ಲಾ ರೀತಿಯ ಹೋರಾಟಗಳಲ್ಲೂ ಗೆದ್ದು ನಿಂತಿದೆ. ಮಕ್ಕಳನ್ನು ಕೇವಲ ಶೈಕ್ಷಣಿಕ ಓದಿನ
ಯಂತ್ರಗಳನ್ನಾಗಿ ಮಾಡದೆ, ಅವರು ಎಲ್ಲಾ ಭೌತಿಕ, ಮಾನಸಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ ಸ್ತರಗಳಲ್ಲೂ ಸಮರ್ಪಕವಾಗಿ ಬೆಳೆಯಲು ವಿಕಸಿತ ಜ್ಞಾನದ ಪುಸ್ತಕ ಆಗರಗಳನ್ನು ಒದಗಿಸಬೇಕು. ಈ ಜ್ಞಾನದ ಹಾದಿಯಲ್ಲಿ ಪ್ರಮುಖವಾಗಿ ತೊಡಕಾಗಿರುವ
ವಿಷಯವೇನೆಂದರೆ ಸ್ಮಾರ್ಟ್ ಫ್ಯಾನ್ಸ್ ಹಾಗೂ ಅದಕ್ಕಿಂತ ಹೆಚ್ಚಾಗಿ ಅದರಲ್ಲಿನ ಸೋಷಿಯಲ್ ಮೀಡಿಯಾಗಳು.

ಒಬ್ಬ ವ್ಯಕ್ತಿ ಎಷ್ಟು ಸಮಯ ಮೊಬೈಲ್ ಸ್ಕ್ರೀನ್ ಅನ್ನು ವೀಕ್ಷಿಸುತ್ತಾ ಸಮಯ ಕಳೆಯುತ್ತಾನೆ? ಎಷ್ಟು ಸಮಯ ಸೋಷಿಯಲ್
ಮೀಡಿಯಾಗಳನ್ನು ತೆರೆದು ನೋಡುತ್ತಾನೆ? ಇದೆಲ್ಲ ನಿಮ್ಮ ಕಹಿ ಅನುಭವಕ್ಕೆ ಬಂದಿರುತ್ತದೆ ಎಂದು ನಾನು ಭಾವಿಸುತ್ತೇನೆ. ತಂತ್ರಜ್ಞಾನದ ಆಕರ್ಷಣೆಗೆ ಒಳಗಾಗಿ ಕೆಲವರು ತಮ್ಮ ಶೈಕ್ಷಣಿಕ ಓದಿಗೂ ಸಂಕಟವನ್ನು ತಂದೊಡ್ಡಿಕೊಂಡಿರುವುದನ್ನು ನಾವು ನೋಡಿದ್ದೇವೆ. ತಂತ್ರಜ್ಞಾನವೆ ನಮಗೆ ಆಪತ್ತನ್ನು ತಂದೊಡ್ಡುತ್ತವೆ ಎಂಬುದು ಪೂರ್ಣತಃ ಅನುಚಿತ ವಿಚಾರ. ಈ ತಂತ್ರಜ್ಞಾನ ದಿಂದ ವರ್ಷಗಟ್ಟಲೇ, ತಿಂಗಳುಗಟ್ಟಲೇ ಕಾದು ಮಾಡಬೇಕಾಗಿದ್ದಂಥ ಕಾರ್ಯಗಳನ್ನು ಕೆಲವೇ ಗಂಟೆಗಳಲ್ಲಿ, ನಿಮಿಷಗಳಲ್ಲಿ ಮಾಡಲು ಸಾಧ್ಯ ವಾಗಿರುವಂತಹ ಸಕುಶಲ ಜೀವನ ನಮ್ಮದಾಗಿದೆ.

ಆದರೆ ತಂತ್ರಜ್ಞಾನವು ಹೆಚ್ಚಾದಂತೆಲ್ಲ ಅದರ ಒಳಿತು ಕೆಡುಕುಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ. ಆದರೆ ಒಂದಂತೂ ಸತ್ಯ. ಎಷ್ಟೇ ತಂತ್ರಜ್ಞಾನ ಮುಂದುವರೆದರೂ ಪುಸ್ತಕಗಳ ಶ್ರೇಷ್ಠತೆ ಎಂದೂ ಕುಸಿಯುವುದಿಲ್ಲ. ಈ
ವೇಗದ ಕಾಲದಲ್ಲಂತು ಜ್ಞಾನಾರ್ಜನೆಗೆ ಪುಸ್ತಕಗಳ ಅಧ್ಯಯನದ ಹೊರತಾಗಿಯೂ ಅನ್ಯ ಮಾರ್ಗಗಳಿವೆ ನಿಜ. ಆದರೆ ಅವೆಲ್ಲವೂ ತಾಂತ್ರಿಕವಾದುದ್ದರಿಂದ ಯಾವಾಗಲಾದರೂ ಕೆಟ್ಟು ಹೋಗುವ ಸಂಭವ ವಿರುತ್ತದೆ. ಆದರೆ ಪುಸ್ಕಕಗಳು ಹೆಚ್ಚು ಕಾಲ ಬಾಳಿಕೆ
ಬರುತ್ತವೆ. ಅದಕ್ಕೆ ತಿಳಿದವರು ಹೇಳೋದು ಪುಸ್ತಕಗಳಂಥ ಜತೆಗಾರರಿರಲು ನಾವು ಒಂಟಿಯಾಗಲು ಸಾಧ್ಯವಿಲ್ಲ. ನೀವು ಯಾವುದೇ ಯಶಸ್ವಿ ವ್ಯಕ್ತಿಗಳ ಹವ್ಯಾಸವನ್ನು ಗಮನಿಸಿದರೆ ನಿಮಗೆ ತಿಳಿಯುತ್ತದೆ.

ಅವರೆಲ್ಲರೂ ಓದುವ ಹವ್ಯಾಸವನ್ನು ಅವಶ್ಯವಾಗಿ ಹೊಂದಿರುತ್ತಾರೆ ಎಂಬುದು. ಸದಾ ನವ ನವೀನ ವಿಚಾರಗಳನ್ನು ತಿಳಿದುಕೊಳ್ಳುತ್ತಾ ಮನಸನ್ನು ಶುದ್ಧವಾಗಿಡುವ, ಏಕಾಗ್ರ ಮನದಿಂದ ಧ್ಯಾನಶೀಲರನ್ನಾಗಿಡುವ ಪುಸ್ತಕಗಳ ಕಾರ್ಯ ಅನ್ಯ
ಕಲಿಕಾ ವಿಧಾನಗಳಿಗಿಂತ ಸೌಮ್ಯ. ಅದರೆ ಶಕ್ತಿಯುತ. ವಾಸ್ತವದಲ್ಲಿ ಒಬ್ಬ ಮಾನವನ ಕಲಿಕೆ ಹುಟ್ಟಿನಿಂದ ಪ್ರಾರಂಭವಾಗಿ ಸಾವಿನವರೆಗೂ ಮುಂದುವರೆಯುತ್ತಲೇ ಇರುತ್ತದೆ. ನಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲೂ ನಾವು ಏನಾದರೂ ಕಲಿಯುತ್ತಲೇ ಇರುತ್ತೇವೆ.

ಕೆಲವೊಂದು ನನ್ನ ನೆಚ್ಚಿನ ಪುಸ್ತಕಗಳನ್ನು ನಿಮಗೆ ಪರಿಚಯ ಮಾಡಿಕೊಡಲಿಚ್ಛಿಸುತ್ತೇನೆ. ಪ್ರಥಮವಾಗಿ ಹಿಂದೂ ಧರ್ಮದ ಪವಿತ್ರ ಗ್ರಂಥಗಳಂದಾದ ಭಗವದ್ಗೀತೆ. ಸ್ವಾಮಿ ಪ್ರಭುಪಾದ ಅವರ ಭಗವದ್ಗೀತಾ ಯಥಾರೂಪ ಪುಸ್ತಕ ಹೆಚ್ಚೆಚ್ಚು ಭಕ್ತರ
ಮನವನ್ನು ತಲುಪಿದೆ. ಲೌಕಿಕ, ಅಲೌಕಿಕದ ಎಲ್ಲಾ ಸ್ತರಗಳಲ್ಲೂ ಔನ್ನತ್ಯವನ್ನು ತಲುಪುವ ಮಾರ್ಗವನ್ನು ಶ್ರೀಕೃಷ್ಣನ ಬೋಧನೆಯಲ್ಲಿ ಕಂಡುಕೊಳ್ಳಬಹುದು.

ಜೀವನದಲ್ಲಿ ಎಂದಿಗೂ ಜಿಗುಪ್ಸೆಯನ್ನು ಹೊಂದದೆ, ಖಿನ್ನತೆಗೆ ಒಳಗಾಗದೆ ಉತ್ಸಾಹಮಯವಾದ ಧರ್ಮದ ಜೀವನವನ್ನು ನಡೆಸಬೇಕೆಂದರೆ ಹಾಗೆಯೇ ಅಧ್ಯಾತ್ಮದ ಶಕ್ತಿಯುತ ಜೀವನವನ್ನು ನಡೆಸಬೇಕೆಂದರೆ ಭಗವದ್ಗೀತೆಯನ್ನು ಓದಿ. ಜೀವನದಲ್ಲಿ
ಸಂಶಯಾತೀತ ಪ್ರಶ್ನೆಗಳ ಆಕ್ರಮಣವನ್ನು ಎದುರಿಸಲಾಗದೆ ಕುಸಿದಾಗ ಭಗವದ್ಗೀತೆಯ ಓದಿನ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಆತ್ಮಹತ್ಯೆಯಂಥ ನಕಾರಾತ್ಮಕ ಚಿಂತನೆಯನ್ನುಳ್ಳವರು ಆತ್ಮದ ಉನ್ನತಿಗಾಗಿ ಸಕಾರಾತ್ಮಕ ಚಿಂತನೆಯನ್ನು ಪಡೆಯ
ಬೇಕೆಂದರೆ ಭಗವದ್ಗೀತೆಯ ಬೆಳಕಿನ ದಾರಿಯಲ್ಲಿ ಸಾಗಿ. ಹಾಗೆಯೇ ಭಾರತದ ಪ್ರತಿಯೊಂದು ಮನೆ – ಮನೆಗೂ ಶಕ್ತಿ ಸಂಜೀವಿನಿಯಾಗಿರುವ, ಸ್ಫೂರ್ತಿಯ ಚಿಲುಮೆಯಾಗಿರುವ ಬಿರುಗಾಳಿ ಸಂತ ಸ್ವಾಮಿ ವಿವೇಕಾನಂದರ ಬಗೆಗಿನ ಅಧ್ಯಯನವು ನಮಗೆ ಸಿಂಹ ಸಾಹಸಿಕತೆಯ ಧೈರ್ಯವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಸ್ವಾಮಿ ಪುರುಷೋತ್ತಮಾನಂದರ ವೀರ ಸನ್ಯಾಸಿ ಹಾಗೂ ಕುವೆಂಪು ಅವರ ಸ್ವಾಮಿ ವಿವೇಕಾನಂದ ಎಂಬ ಕೃತಿಗಳು ವಿವೇಕಾ
ನಂದರ ಬಗೆಗಿನ ಅಧ್ಯಯನಕ್ಕೆ ಪೂರಕವಾಗಿದೆ. ವಿವೇಕಾನಂದರ ಸಿಂಹವಾಣಿಯು ಅಶಕ್ತರ ನಡುವೆ ಪ್ರವಾಹದಂತೆ ಹರಿದು ಶಕ್ತಿಯ ಸಂಚಾರವನ್ನು ಮಾಡುತ್ತಿದೆ. ಹಾಗೆಯೇ ಹಿಂದುತ್ವ ರಾಷ್ಟ್ರೀಯತೆ ಯನ್ನೇ ತನ್ನ ಉಸಿರನ್ನಾಗಿಸಿಕೊಂಡು ಬದುಕಿದ,
ಭಾರತಮಾತೆಯ ಮುಕ್ತಿಗಾಗಿ ತನ್ನೆ ಕುಟುಂಬ ದವರ ಸಮೇತ ಸಮರ್ಪಣೆಗೊಂಡ ವೀರ ಸಾವರ್ಕರ್ ಅವರ ಉತ್ಕೃಷ್ಟ ಚಿಂತನೆಗಳನ್ನು ಅರಿಯಲೇಬೇಕು.

ಅವರ ಹಿಂದುತ್ವ ಕೃತಿಯು ಭಾರತೀಯರ ಕ್ಷಾತ್ರತೇಜದ ಇತಿಹಾಸವನ್ನು ಪರಿಚಯ ಮಾಡಿಕೊಡುತ್ತದೆ. ಅರೇಬಿಕ್,
ಯೂರೋಪಿಯನ್ ದೇಶಗಳ ಆಕ್ರಮಣಕ್ಕೆ ಹಲವಾರು ದೇಶಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ನಿರ್ನಾಮವಾಗಿದ್ದಾಗ್ಯು ನಮ್ಮ ದೇಶದ ಪೂರ್ವಜರು ಹೇಗೆ ಈ ಪವಿತ್ರ ನೆಲದ ಧರ್ಮ, ಸಂಸ್ಕೃತಿಯನ್ನು ರಕ್ಷಿಸಿದರು ಎಂಬುದನ್ನು ವಿವರಿಸಿದ್ದಾರೆ.

ಪಾಶ್ಚಿಮಾತ್ಯರ ಪ್ರಭಾವದ ಬಲೆಯಲ್ಲಿ ಸಿಕ್ಕಿಕೊಂಡಿರುವ ನಮ್ಮದೇ ರಾಷ್ಟ್ರದ ಕೆಲವು ಜನ ಬುದ್ಧಿ ಜೀವಿಗಳೆಂದು ಹಣೆಪಟ್ಟಿ ಹಾಕಿಕೊಂಡಿರುವವರು ನಮ್ಮ ಸಂಸ್ಕೃತಿಯ ಗರಿಮೆಯಾದ ರಾಮಾಯಣ, ಮಹಾಭಾರತಗಳು ಸತ್ಯವಾಗಿ ನಡೆದಿದೆಯೇ ಇಲ್ಲವೆ
ಎಂಬುದನ್ನು ಚರ್ಚೆ ಮಾಡಲು ಬರುತ್ತಾರೆ.

ಅಂತಹವರಿಗೆಲ್ಲ ಮೊದಲ ಉತ್ತರ ಒಂದೇ: ರಾಮಾಯಣ ಮತ್ತು ಮಹಾಭಾರತ ನಡೆದಿದೆಯೊ ಇಲ್ಲವೊ ಎಂಬುದರ ಬಗ್ಗೆ ಚರ್ಚೆಯನ್ನು ನಂತರ ಮಾಡಿ. ಮೊದಲು ಆ ಮಹಾನ್ ಕಾವ್ಯಗಳಲ್ಲಿ ತಿಳಿಸಿರುವ ಒಂದೇ ಒಂದು ಆದರ್ಶವನ್ನಾದರೂ ಸರಿ
ಪಾಲಿಸಲು ನೀವು ಶಕ್ತರೇ ತೋರಿಸಿ. ಅಶಕ್ತರ ಬೋಧನೆಯನ್ನು ಪ್ರಪಂಚದಲ್ಲಿ ಯಾರೂ ಕೇಳುವುದಿಲ್ಲ. ಈ ಪುಸ್ತಕ ದಿನದ ಸಂದರ್ಭದಲ್ಲಿ ಕೊನೆಯ ಸಂದೇಶವೆಂದರೆ ಈ ರೀತಿ ದೇಶದ ಕೀರ್ತಿಗೆ ಮಸಿ ಬಳಿಯಬೇಕೆಂದಿರುವವರಿಗೆ ಪ್ರಖರ ಪ್ರತ್ಯುತ್ತರವನ್ನು ನೀಡಲು, ರಾಷ್ಟ್ರದ ಸಾರ್ವಭೌಮತ್ವವನ್ನು ರಕ್ಷಿಸಲು ಬೌದ್ಧಿಕತೆಯಲ್ಲಿ ಸಮರ್ಥರಾಗಿರಬೇಕು. ಅದಕ್ಕಾಗಿ ನಿರಂತರತೆಯನ್ನು
ಕಾಯ್ದುಕೊಂಡು ಅಧ್ಯಯನಶೀಲರಾಗಬೇಕು.