Friday, 13th December 2024

ವಿಶ್ವ ಪರಿಸರ ದಿನಾಚರಣೆ ಅರ್ಥ ಕಳೆದುಕೊಳ್ಳುತ್ತಿದೆಯಾ ?

ತನ್ನಿಮಿತ್ತ

ಕಮಲಾಕರ ಕೆ.ಆರ್‌., ತಲವಾಟ

ಪ್ರತೀ ವರ್ಷ ಜೂನ್ ೫ರಂದು ‘ವಿಶ್ವ ಪರಿಸರ ದಿನ’ವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನಾವು ನೆಡುವ ಗಿಡಗಳ ಜೊತೆ ವಿವಿಧ ದೊಡ್ಡದೊಡ್ಡ ಯೋಜನೆಗಳಿಂದ ನಾಶವಾಗುವ ಕಾಡುಗಳ ತುಲನೆ ಮಾಡೋಣ. ಈಗೊಂದು ಎರಡು ವರ್ಷಗಳ ಹಿಂದಿನ ಅಂದರೆ ಜೂನ್ ೨೦೨೦ ಪೇಪರಿನಲ್ಲಿ ಹುಬ್ಬಳ್ಳಿ ಅಂಕೋಲ ರೈಲು ನಿರ್ಮಾಣಕ್ಕೆ ರಾಜ್ಯದ ಮಾಜಿ ಮಂತ್ರಿಗಳೊಬ್ಬರು ಕೇಂದ್ರವನ್ನು ಒತ್ತಾಯಿಸಿದುದರ ಬಗೆಗೆ ವರದಿ ಇತ್ತು.

ಇದಕ್ಕಾಗಿ ಬೇಕಾಗುವ, ಕಳೆದುಕೊಳ್ಳುವ ಅರಣ್ಯ ಭೂಮಿ ೫೯೫.೬೪ ಹೆಕ್ಟೇರ್ ಅಂತೆ(ಅಂದರೆ ಸುಮಾರು ೧೪೭೨ ಎಕರೆ). ನಂತರ ಅದೇ ಜೂನಿನ (೨೦೨೦) ಪೇಪರಿನಲ್ಲಿ ಶರಾವತಿ ಭೂಗರ್ಭ ಜಲವಿದ್ಯುತ್ ಯೋಜನೆ ಬಗೆಗೆ ಪ್ರಸ್ತಾಪವಿತ್ತು. ಈ ಯೋಜನೆ ನುಂಗುವ ಕಾಡು ಸುಮಾರು ೮೦೦  ಎಕ್ರೆಯಂತೆ. ಇವೆ ಸರ್ಕಾರದ ಆಯಾ ಇಲಾಖೆ ಯವರ ಕನ್ಸರ್ವೇಟೀವ್ ಲೆಕ್ಕಾಚಾರ. ಇದರ ಜತೆಗೆ ಅಲ್ಲಿಯ ವಿಧವಿಧದ ಜೀವವೈವಿಧ್ಯದ ಹಾನಿಯ ಲೆಕ್ಕ
ಪ್ರಾಯಶಃ ನಮಗೆ ಸಿಗಲಾರದು.

ಇದೇ ತರಹದ ಮತ್ತೊಂದು ಯೋಜನೆ ಫೆ.೨೦೨೧ ಮೊದಲ ವಾರದಲ್ಲಿ ಸದ್ದು ಮಾಡಿತ್ತು. ಸರ್ಕಾರದ ವಿಷನ್ ೨೦೨೨ ಅಡಿಯಲ್ಲಿ ಬೆಂಗಳೂರಿನ ತುರಹಳ್ಳಿ ಮೀಸಲು ಅರಣ್ಯಪ್ರದೇಶದಲ್ಲಿ (ತುರಹಳ್ಳಿ ಕಾಡಿನ ಒಟ್ಟು ವಿಸ್ತೀರ್ಣ ಸುಮಾರು ೫೯೦ ಎಕರೆ) ಸುಮಾರು ೪೦೦ ಎಕರೆ ಪ್ರದೇಶದಲ್ಲಿ ‘ಮರ ಉದ್ಯಾನವನ’ (ಟ್ರೀ ಪಾರ್ಕ್) ಮಾಡಲು ಉದ್ದೇಶಿಸಿತ್ತು. ಇಲ್ಲಿಯೂ ಸಾಕಷ್ಟು ಜೀವ ವೈವಿಧ್ಯವಿದೆ. ವಿಧವಿಧದ ಸಸ್ಯ ಸಂಕುಲವಿದೆ. ಹತ್ತಾರು ಬಗೆಯ ಪ್ರಾಣಿಪಕ್ಷಿಗಳಿವೆ. ಇದಕ್ಕೆ ಸಾರ್ವಜನಿಕ ರಿಂದ, ಸುತ್ತಮುತ್ತಲ ನಿವಾಸಿಗಳಿಂದ ’ ಟ್ರೀ ಪಾರ್ಕ್ ’ ಬೇಡವೆಂದು ಮತ್ತು ಅರಣ್ಯವನ್ನು ಹಾಗೆಯೇ ಬಿಡಲು ಪ್ರತಿಭಟನೆ ನಡೆದುದರಿಂದ ಸರ್ಕಾರ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿತು. ಮತ್ತೆ ಯಾವಾಗ ಬಲ್ಡೋರ್ಜ ಸದ್ದು ಅಲ್ಲಿ ಮೊಳಗುವುದೊ ಸರ್ಕಾರಕ್ಕೆ ಮಾತ್ರ ಗೊತ್ತು.

ಇತ್ತೀಚೆಗೆ ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಿ ನೀರು ತರುವ ಮತ್ತೊಂದು ಯೋಜನೆ ಚಾಲ್ತಿಯಲ್ಲಿದೆ. ಅದರ ಅಂದಾಜು ವೆಚ್ಚ ಸುಮಾರು ೫೯೧೨ ಕೋಟಿ. ಇದರಿಂದ ಮುಳುಗುವ ಕಾಡು, ಜಮೀನು ೪೯೯೬ ಹೆಕ್ಟೇರ್. ಕೆಲವರು ಯೋಜನೆಯಿಂದ ನಾಶವಾಗುವ ಕಾಡನ್ನು ಬೇರೆಡೆ ಬೆಳೆಸುತ್ತೇವೆ ಎನ್ನುತ್ತಾರೆ. ಅಂತಹ ಮಾತೇ ಎಷ್ಟು ಹಾಸ್ಯಾಸ್ಪದ ಎನಿಸುತ್ತದೆ. ಸಾವಿರಾರು ವರ್ಷಗಳ ಕಾಲದಿಂದ ತಾನಾಗಿಯೇ ಬೆಳೆದ ಅರಣ್ಯಕ್ಕೆ ನಾವು ಬೆಳೆಸುವ ಕೃತಕ ಕಾಡು ಸಮನಾದೀತೆ? ಕೇಳಿದರೆ ಬೆಳೆಯುತ್ತಿರುವ ಬೆಂಗಳೂರಿನ ಬಾಯಾರಿಕೆ ತಣಿಸುವುದು ಹೇಗೆ ಎಂದು ಪ್ರಶ್ನಿಸುತ್ತಾರೆ? ಆದರೆ ಬೆಂಗಳೂರನ್ನು
ಬೇಕಾಬಿಟ್ಟಿ ಬೆಳೆಯಲು ಬಿಟ್ಟು ಕೆರೆಗಳನ್ನು ನುಂಗಿ ನೀರು ಕುಡಿದಿದ್ದು ಯಾಕೆ ಎಂದರೆ ಉತ್ತರವಿಲ್ಲ.

ಇದಕ್ಕೆ ತಮಿಳುನಾಡಿನ ಕ್ಯಾತೆಯ ಜ್ಯೊತೆಗೆ ಈಗ ರಾಜಕೀಯ ಸೇರಿಕೊಂಡು ಕೆಸರೆರಚಾಟಕ್ಕೆ ಕಾರಣವಾಗಿದೆ. ಬಹುಶಃ ಇಡೀ ರಾಷ್ಟ್ರದ ತುಂಬೆಲ್ಲ ಜೂನ್ ೫ರಂದು ನೆಟ್ಟ ಗಿಡಮರಗಳನ್ನು ಒಟ್ಟು ಸೇರಿಸಿದರೂ ನಾವು ಕಳೆದುಕೊಳ್ಳುವ ಕಾಡಿನ ಕಾಲುಭಾಗದಷ್ಟೂ ಆಗಲಾರದೇನೊ. ಇವು ನಮ್ಮ ರಾಜ್ಯದ ಯೋಜನೆಗಳು ಮಾತ್ರ. ಬೇರೆ ರಾಜ್ಯಗಳಲ್ಲೂ ಈ ತರಹದ ಇನ್ನೆಷ್ಟು ಯೋಜನೆಗಳಿವೆಯೊ ಆ ದೇವರೇ ಬಲ್ಲ. ನಾವು ನೆಡುವ ಮರ ಹತ್ತಾದರೆ ಇಂತಹ ಯೋಜನೆಗಳ ಮೂಲಕ ನಾಶವಾಗುವ ದಟ್ಟ ಕಾಡಿನ ಮರಗಳ ಸಂಖ್ಯೆ ಸಾವಿರಾರು.

ಹೀಗಿರುವಾಗ ಪರಿಸರ ದಿನಾಚರಣೆ ಯಾಕೋ ಒಂದು ಅಣಕದಂತೆ ಭಾಸವಾಗುತ್ತಿದೆ ಅಂದರೆ ತಪ್ಪಿಲ್ಲವಲ್ಲ. ಈ ಯೋಜನೆಗಳ ಬಗೆಗೆ ವಿಧಾನಸೌಧದಲ್ಲಿ ಚರ್ಚೆ ಯಾಗಿದ್ದೇ ಗೊತ್ತಾಗುವುದಿಲ್ಲ. ಈ ತರಹದ ಯೋಜನೆಗಳು ಬೇಕಾ? ವಿಚಿತ್ರ ಅಂದರೆ ಯಾವುದೇ ರಾಜಕೀಯ ಪಕ್ಷಗಳೂ, ಜನಪ್ರತಿನಿಧಿಗಳೂ ಇದನ್ನು ವಿರೋಧಿಸಿಲ್ಲ. ವಿರೋಧಿಸುವುದೂ ಇಲ್ಲ. ಶರಾವತಿ ಭೂಗರ್ಭ ಜಲವಿದ್ಯುತ್ ಮತ್ತು ಹುಬ್ಬಳ್ಳಿ-ಅಂಕೋಲ ರೈಲು ನಿರ್ಮಾಣ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸೇರುತ್ತವೆ. ಈಗ ಅಲ್ಪಸ್ವಲ್ಪ ಕಾಡು ಉಳಿದಿರುವುದೇ ಪಶ್ಚಿಮ ಘಟ್ಟಗಳಲ್ಲಿ.

ಅಭಿವೃದ್ಧಿಯ ಹೆಸರಿನಲ್ಲಿ ಇನ್ನೆಷ್ಟು ಪರಿಸರವನ್ನು ಬಲಿಕೊಡುತ್ತೀರಿ? ನಾವು ಈ ರೀತಿಯಲ್ಲಿ ಕಾಡನ್ನು ಬೋಳಿಸುತ್ತ ಹೋದರೆ ಈಗಾಗಲೇ ಕಡಿಮೆ ಯಾಗುತ್ತಿರುವ ಮಳೆ ಮುಂದೊಂದು ದಿನ ಪೂರ್ಣ ನಿಂತು ಹೋಗದೇ ಹೋದರೂ ಅಲ್ಲಲ್ಲಿ ಚದುರಿದಂತೆ ಮಳೆ ಎಂಬ ಹವಾಮಾನ ವರದಿಯಂತೆ ಮಳೆರಾಯ ಲಿಂಗನ ಮಕ್ಕಿಯಂತಹ ವಿಶಾಲ ಅಣೇಕಟ್ಟನ್ನು ಒದ್ದೆ ಮಾಡಬಹುದಷ್ಟೆ. ಲಿಂಗನಮಕ್ಕಿ ಅಣೆಕಟ್ಟು ಕಟ್ಟಿದ ಮೇಲೆ, ಸುಮಾರು ೧೯೮೦ರ ನಂತರ ಎಷ್ಟುಸಾರಿ -ರ್ಣ ತುಂಬಿದೆ ಎಂದು ಒಮ್ಮೆ ದಾಖಲೆಗಳನ್ನು ತೆಗೆದು ನೋಡಿದರೆ ಗೊತ್ತಾಗುತ್ತದೆ. ಈಗ ೪೦-೫೦ ವರ್ಷಗಳ ಹಿಂದೆ ಸರಿಸುಮಾರಾಗಿ ಮಳೆಗಾಲ ಜೂನ್ ಮೊದಲ ವಾರದಲ್ಲಿ ಕರಾರುವಕ್ಕಾಗಿ ಪ್ರಾರಂಭವಾಗುತ್ತಿತ್ತು.

ಅದಕ್ಕೆ ಸರಿಯಾಗಿ ರೈತರು ಉತ್ತನೆಗೆ ಬಿತ್ತನೆಗೆ ತಯಾರುಮಾಡಿಕೊಳ್ಳುತ್ತಿದ್ದರು. ಆದರೆ ಈಗ ಮಳೆಗಾಲ ಜೂನ್ ಮೂರನೇ ಅಥವಾ ಕೊನೆಯ ಭಾಗ ವಾದರೂ ಬರುತ್ತದೆಯೆಂಬ ಗ್ಯಾರಂಟಿ ಇಲ್ಲವಾಗಿದೆ. ಜುಲೈನ ಆಗಷ್ಟ ನ ಒಂದು ೧೫-೨೦ ದಿನ ಅತಿಯಾಗಿ ಸುರಿಯುತ್ತದೆ. ಡ್ಯಾಮಿನಲ್ಲಿ ಹೂಳು ತುಂಬಿರುವುದರಿಂದ ಈ ೧೫-೨೦ ದಿನಗಳ ಮಳೆಗೆ ಅರ್ಧ ಡ್ಯಾಮ್ ತುಂಬುತ್ತದೆ. ಸರ್ಕಾರ ಈ ಸಲ ವಿದ್ಯುತ್‌ಗೆ ಯಾವ ತೊಂದರೆ ಇಲ್ಲ ಎಂದು
ನಿಟ್ಟುಸಿರು ಬಿಡುತ್ತದೆ. ಆದರೆ ಸರ್ಕಾರ, ಸಮಾಜ ಜೂನ್ ನಿಂದ ಆಗಷ್ಟ್‌ವರೆಗಿನ ಪ್ರತಿದಿನ ಆದ ಮಳೆ ಪ್ರಮಾಣವನ್ನು ಹಿಂದಿನ ೩೦-೪೦ ವರ್ಷಗಳ ಮಳೆ
ಪ್ರಮಾಣಕ್ಕೆ ಹೋಲಿಸಿದರೆ ಮಾತ್ರ ಕಡಿಮೆಯಾದ ಮಳೆ ಪ್ರಮಾಣದ ಆಘಾತಕಾರಿ ಲೆಕ್ಕ ಸಿಗಬಹುದು.

ನಮ್ಮ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಮಳೆಯನ್ನು ಸುರಿಸಲಾಗುವುದಿಲ್ಲ ಎಂಬ ಕಟುಸತ್ಯವನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾ
ಗಿದೆ. ಒಮ್ಮೆ ಈ ಪರಿಸರ, ದಟ್ಟ ಕಾಡಗಳನ್ನು ನಾಶಮಾಡಿದರೆ ಮತ್ತೆ ಮರುಸೃಷ್ಟಿ ಮಾಡಲಾರೆವು. ನಮ್ಮಲ್ಲಿ ಈಗ ಆಗಿರುವುದೆಂದರೆ ಅರಣ್ಯ ಇಲಾಖೆಯ ಮುಖ್ಯಸ್ಥರುಗಳೆಲ್ಲ ಹೆಚ್ಚಾಗಿ ನಗರದ ಹುಟ್ಟಿ ಮರಗಳ, ಗಿಡಗಳ ಜ್ಞಾನವೆಂದರೆ ಕಬ್ಬನ್ ಪಾರ್ಕ್, ಲಾಲ್‌ಬಾಗಿನಲ್ಲಿರುವ ಮರಗಳಿಗಷ್ಟೇ ಸೀಮಿತ ವಾಗಿದೆಯೆಂದರೆ ಅತಿಶಯೋಕ್ತಿಯಲ್ಲ.

ಮಣ್ಣು ಮೆತ್ತಿದರೆ ಶೂ ಕೊಳೆಯಾಗುವಂತಹ ಮನೋಭಾವ ಹೊಂದಿದವರಿಂದ ಕಾಡುನ್ನು ಉಳಿಸುವ, ಬೆಳೆಸುವ ಯೋಜನೆಗಳು ಸಫಲವಾಗುವುದು ಕಷ್ಟಸಾಧ್ಯ. ಯಲ್ಲಪ್ಪ ರೆಡ್ಡಿಯಂತವರು ಅಬ್ಬರು ಇಬ್ಬರು ಸಿಗಬಹುದು. ಇನ್ನು ಅರಣ್ಯ ಮಂತ್ರಿಯಾಗುವವರು ಆರಿಸಿ ಬಂದ ವಿಧಾನಸಭಾ ಸದಸ್ಯರಲ್ಲಿ ಯಾರೂ ಆದೀತು. ಈವರೆಗೆ ಅರಣ್ಯ ಮಂತ್ರಿ ಗಳಾದ ಬಹುತೇಕರು ಅರಣ್ಯವಿಲ್ಲದ ಪ್ರದೇಶದವರೇ! ೧೯೫೮ರಲ್ಲಿ ಚೀನಾದಲ್ಲಿ ನಾಯಕ ಮಾವೋ
ಝೆಡಾಂಗಗೆ ತಲೆಕೆಟ್ಟ ಕೆಲವು ಅಧಿಕಾರಿಗಳು ಆಹಾರದಲ್ಲಿ ಮಹಾಕ್ರಾಂತಿ ಮಾಡಲು ಹೊಲದಲ್ಲಿ ಬೆಳೆದ ಆಹಾರವನ್ನು ತಿನ್ನುವ ಗುಬ್ಬಿಗಳನ್ನು ಮತ್ತು ಇತರ ಜೀವಿಗಳನ್ನು ನಾಶಮಾಡಲು ಸಲಹೆಕೊಟ್ಟು ಸಂಪೂರ್ಣ ಗುಬ್ಬಚ್ಚಿಗಳ ಸಂತತಿಯೇ ನಾಶವಾಗಿತ್ತು.

ನಂತರ ಆಹಾರ ಬೆಳೆಗಳನ್ನು ಮಿಡತೆ ಮುಂತಾದ ಕ್ರಿಮಿಕೀಟಗಳು ತಿನ್ನತೊಡಗಿ ಅವುಗಳನ್ನು ತಿನ್ನುವ ಗುಬ್ಬಿಗಳಿಲ್ಲದೆ ಮುಂದಿನ ಮೂರು ವರ್ಷಗಳ ಕಾಲ ಚೀನಾ ಬೀಕರ ಬರಗಾಲ ಎದುರಿಸಿತ್ತು. ಆ ನಂತರ ಹುಚ್ಚು ನಾಯಕ ಗುಬ್ಬಿಗಳನ್ನು ರಷ್ಯಾ , ಭಾರತ ಮುಂತಾದ ದೇಶಗಳಿಂದ ತರಿಸಿದ್ದನೆನ್ನುತ್ತದೆ ಇತಿಹಾಸ. ಮತ್ತೊಂದು ವಿಚಾರವನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. ಕೆಲವು ವರ್ಷಗಳಿಂದ ಬೇಕಾದಷ್ಟು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಎಲ್ಲ ರಾಜ್ಯಗಳಲ್ಲಿ ಅಭಿವೃದ್ಧಿಯಾಗಿ ಮೈದಳೆದಿವೆ. ಎಲ್ಲರೂ ಈ ಬಗ್ಗೆ ಹೆಮ್ಮೆ ಪಡುವವರೆ. ದುರಂತವೆಂದರೆ ಆ ಹೆದ್ದಾರಿಗಳನ್ನು ಮಾಡುವ ಸಮಯ ದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ನೂರಾರು ವರ್ಷಗಳ ಎಷ್ಟು ಲಕ್ಷೋಪಲಕ್ಷ ಮರಗಳು ನಾಶವಾದವೆಂದು ಸರ್ಕಾರದ ಆದಿಯಾಗಿ ಯಾರಿಗಾದರೂ ಅರಿವಿದೆಯಾ? ಗೊತ್ತಿಲ್ಲ.

ಹೆದ್ದಾರಿಗಳ ಇಕ್ಕೆಲಗಳಲ್ಲಿ ಮೊದಲಿನ ಹಾಗೆ ಹಕ್ಕಿಪಕ್ಷಿಗಳಿಗೆ ಹಣ್ಣುಹಂಪಲು ಸಿಗುವ ಮರಗಿಡಗಳನ್ನು ಹಾಕಿ, ಬೆಳೆಸಿ ಅವುಗಳನ್ನು ಕಾಪಾಡುವ ಜವಾಬ್ದಾರಿಯನ್ನು ಕೂಡ ಆ ಕಂಪನಿಗಳಿಗೆ ವಹಿಸಿ ಕಂಪನಿಗಳಿಗೆ ರಸ್ತೆಗಳನ್ನು, ಟೋಲ್ ಗಳನ್ನು ಹಸ್ತಾಂತರಿಸಬೇಕಿತ್ತು. ವರ್ಷವರ್ಷವೂ ಮರಗಿಡಗಳ ಬೆಳವಣಿಗೆಯ ಬಗೆಗೆ ಮೌಲ್ಯಮಾಪನ ಮಾಡಿ ಅದನ್ನು ಮಾಡದ ಕಂಪನಿಗಳಿಗೆ ಅಂತಹ ರಸ್ತೆಗಳ ನಿರ್ವಹಣೆಯನ್ನು ತಪ್ಪಿಸಿ ಬೇರೆಯವರಿಗೆ ವಹಿಸಿ
ಕೊಡುವ ಬಗೆಗೆ ಆ ಕಂಪನಿಗಳ ಜೊತೆಗಿನ ಒಪ್ಪಂದ ಪತ್ರದ ನಮೂದಿಸಿದ್ದಿದ್ದರೆ ಖಂಡಿತ ಇಷ್ಟೊತ್ತಿಗೆ ಎಷ್ಟೋ ಹಸಿರುವಲಯ ನಿರ್ಮಾಣವಾಗುತ್ತಿತ್ತು.
ಇದನ್ನೆ ಯಾಕಾಗಿ ಮಾಡಲಿಲ್ಲ ಎಂಬುದು ಯಕ್ಷಪ್ರಶ್ನೆ.

ಇನ್ನು ಸಾಮಾಜಿಕ ಅರಣ್ಯ ಬೆಳೆಸುವ ಯೋಜನೆಗಳು ಅಕೇಶಿಯಾ, ನೀಲಗಿರಿ ಮುಂತಾದವುಕ್ಕೆ ಸೀಮಿತವಾಗಿದ್ದು ವೈವಿಧ್ಯಮಯ ಕಾಡನ್ನು ಬೆಳೆಸುವತ್ತ ಚಿತ್ತ ಹರಿಸಿದರೆ ಕಾಡಿನ ಪ್ರಾಣಿಗಳು , ಮಂಗಗಳು ತೋಟದತ್ತ ಲಗ್ಗೆ ಇಡುವುದನ್ನು ಸ್ವಲ್ಪ ಪ್ರಮಾಣದದರೂ ಕಡಿಮೆ ಮಾಡಬಹುದೇನೋ. ಇನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಈ ಯೋಜನೆಗಳಿಗೆ ಹಣಕಾಸನ್ನು ಕಡಿತಗೊಳಿಸಿದೆ ಇದ್ದರೆ ಸಾಕು.

ಜಲವಿದ್ಯುತ್ ಯೋಜನೆಗಳಿಂದ ಮತ್ತು ಕೈಗಾರೀಕ್ಕರಣಕ್ಕಾಗಿ ಒತ್ತುಕೊಟ್ಟು ದೇಶದ ಕಾಡಿನ ವಿಸ್ತಾರ ಎಲ್ಲ ರಾಜ್ಯಗಳಲ್ಲೂ ಕ್ರಮೇಣವಾಗಿ ಕಡಿಮೆ ಯಾಗುತ್ತ ಬಂತು. ಅದರ ಪರಿಣಾಮವನ್ನು ನಾವು ಬರ, ನೆರೆಹಾವಳಿ ಮುಂತಾದ ರೂಪದಲ್ಲಿ ಎದುರಿಸುತ್ತಿದ್ದೇವೆ. ೨೦೧೮ರಲ್ಲಿ ಉತ್ತರಾಖಂಡದದ ಮೇಘ ಸೋಟ, ಕೊಡಗಿನ ಅತಿವೃಷ್ಟಿ, ಉತ್ತರ ಕರ್ನಾಟಕದದ ನೆರೆಹಾವಳಿ ಮತ್ತು ಚಮೋಲಿ, ಉತ್ತರಾಖಂಡದಲ್ಲಿ ಆದ ಹಿಮಪಾತ, ದೆಹಲಿಯ ವಾಯುಮಾಲಿನ್ಯ… ಇವೆಲ್ಲವೂ ಎಚ್ಚರಿಕೆಯ ಗಂಟೆ. ಮನುಷ್ಯನಿಗೆ ಏನಾದರೂ ಅಪಾಯವಾದರೆ, ಪ್ರಾಣಕ್ಕೆ ಸಂಚುಕಾರ ಬಂದರೆ ಅದನ್ನು ತಡೆಯಲು
ಏನೋನೊ ಕ್ರಮ ತೆಗೆದುಕೊಳ್ಳಬಲ್ಲ.

ಉದಾಹರಣೆಗೆ ಕರೋನ. ಅದರಿಂದ ಪಾರಾಗುವ ಬಗೆಗೆ ವಿಶ್ವದಾದ್ಯಂತ ಪ್ರಯತ್ನಗಳು ಇನ್ನಿಲ್ಲದಂತೆ ಸಾಗಿ ಸಾಕಷ್ಖು ಯಶಸ್ವಿಯಾದೆವು. ಆದರೆ ಈ ಕಾಡುಗಳನ್ನು, ಅಲ್ಲಿರುವ ಪ್ರಾಣಿಪಕ್ಷಿಗಳನ್ನು ಮಾನವ ರಕ್ಷಿಸಬೇಕೇ ಹೊರತು ಅವಾಗಿಯೇ ಮಾನವನ ದುರಾಸೆಯಿಂದ ತಮಗೊದಗಿ ಬರುವ ಕಷ್ಟಗಳಿಂದ, ಸಂಕಷ್ಟಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲಾರವು. ಇವುಗಳನ್ನು ರಕ್ಷಣೆ ಮಾಡಬೇಕಾದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಕೊನೆಯಲ್ಲಿ ಒಂದು ಮಾತು, ಮಾನವನಿಲ್ಲದೆ ಪ್ರಕೃತಿ ಇರಬಲ್ಲದು. ಆದರೆ ಪ್ರಕೃತಿ ಇಲ್ಲದೆ ಮಾನವನ ಬದುಕನ್ನ ಊಹಿಸಲೂ ಸಾಧ್ಯವಿಲ್ಲ.