ಗ್ರಂಥ ಲೋಕ
ಪ್ರಸಾದ್ ಜಿ.ಎಂ.
‘ಕಥೆ ಇನ್ನಷ್ಟು ಇದೆ’ ಎಂಬ ಘೋಷವಾಕ್ಯದೊಂದಿಗೆ ೫೬ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಇತ್ತೀಚೆಗೆ (ನವೆಂಬರ್ ೧೪-೨೦) ದೇಶಾದ್ಯಂತ ಆಚರಿಸಲಾಯಿತು. ಈ ಸಪ್ತಾಹಕ್ಕೆ ಚಾಲನೆ ಸಿಕ್ಕಿದ್ದು ೧೯೬೮ರಲ್ಲಿ. ಅಂದಿನಿಂದ ಪ್ರತಿವರ್ಷ ಆಚರಿಸ ಲ್ಪಡು ತ್ತಿರುವ ಈ ಕಾರ್ಯಕ್ರಮವು ಗ್ರಂಥಾಲಯ ಸಮುದಾಯವನ್ನು ಬಲಪಡಿಸುವ ಧ್ಯೇಯವನ್ನು ಹೊಂದಿದ್ದು, ವಿದ್ಯಾರ್ಥಿ ಗಳಲ್ಲಿ ಗ್ರಂಥಾಲಯದ ಮಹತ್ವದ ಕುರಿತು ಅರಿವು ಮೂಡಿಸುತ್ತದೆ ಹಾಗೂ ಓದುವ ಹವ್ಯಾಸವನ್ನೂ ಉತ್ತೇಜಿಸುತ್ತದೆ.
ಗ್ರಂಥಾಲಯವು ಸಂವಿಧಾನದ ರಾಜ್ಯಪಟ್ಟಿಯಲ್ಲಿ ಬರುವ ವಿಷಯ. ಕೇಂದ್ರ ಸರಕಾರದಲ್ಲಿ ಗ್ರಂಥಾಲಯದ ಆಡಳಿತ, ನಿರ್ವಹಣೆಗೆ ಪ್ರತ್ಯೇಕ ಸಚಿವಾಲಯ/ಇಲಾಖೆ ಇಲ್ಲ; ಆದರೆ ಅದರ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿ ಬರುವ ರಾಜಾರಾಂ ಮೋಹನ್‌ರಾಯ್ ಫೌಂಡೇಷನ್ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಇದು ದೇಶದಲ್ಲಿನ ಸಾರ್ವಜನಿಕ ಗ್ರಂಥಾಲಯಗಳು ಮತ್ತು ಅದರ ಸೇವೆಗಳನ್ನು ಬೆಂಬಲಿಸುವ ನೋಡಲ್ ಏಜೆನ್ಸಿಯಾಗಿದೆ.
ಈ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, ಜಿಲ್ಲಾ, ನಗರ, ಪಟ್ಟಣ, ಪಂಚಾಯತಿ ಹಾಗೂ ಮೊಬೈಲ್ ಗ್ರಂಥಾಲಯ ಸೇರಿದಂತೆ ಕರ್ನಾಟಕದಲ್ಲಿ ಒಟ್ಟಾರೆ ೬,೭೯೮ ಗ್ರಂಥಾಲಯ ಗಳಿವೆ. ಕೇರಳವನ್ನು ಹೊರತುಪಡಿಸಿದರೆ (೮,೪೦೫) ಪಂಚಾಯಿತಿ ಮಟ್ಟದಲ್ಲಿ ಅತಿಹೆಚ್ಚು ಗ್ರಂಥಾಲಯಗಳಿರುವುದು ಕರ್ನಾಟಕದಲ್ಲೇ. ಆದರೆ ಕೆಲವೆಡೆ ಕಣ್ಣಿಗೆ ರಾಚುವಂತಿರುವ ಸಮಸ್ಯೆಗಳನ್ನು ಸರಕಾರ ಬಗೆಹರಿಸಬೇಕಿದೆ. ದೇಶದಲ್ಲಿ ವಿವಿಧ ಸ್ವರೂಪದ ಒಟ್ಟು ೪೬,೭೪೬ ಗ್ರಂಥಾಲಯಗಳಿವೆ. ಈ ಪೈಕಿ ೧೨,೧೯೧ ಗ್ರಂಥಾಲಯಗಳನ್ನು ಹೊಂದಿರುವ ಮಹಾರಾಷ್ಟ್ರಮೊದಲ ಸ್ಥಾನದಲ್ಲಿದೆ. ದೇಶದಲ್ಲಿನ ಸಾಕ್ಷರರ ಪ್ರಮಾಣವನ್ನು ಹೆಚ್ಚಿಸಲು ಗ್ರಂಥಾಲಯಗಳು ತಮ್ಮದೇ ಆದ ಕೊಡುಗೆ ನೀಡುತ್ತವೆ; ಆದರೆ ಛತ್ತೀಸ್‌ಗಢ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ಸಿಕ್ಕಿಂ, ತ್ರಿಪುರಾ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿನ ಗ್ರಂಥಾಲಯಗಳ ಸಂಖ್ಯೆ ತಲಾ ನೂರರ ಗಡಿಯನ್ನೂ ದಾಟಿಲ್ಲ.
ಇದು ಗ್ರಂಥಾಲಯಗಳ ಬಗೆಗೆ ಆಯಾ ರಾಜ್ಯ ಸರಕಾರಗಳು ಹೊಂದಿರುವ ಧೋರಣೆಯ ಸಾಕ್ಷಿರೂಪವೂ ಹೌದು. ಕೆಲ ಮಂದಿಗೆ ಪ್ರತಿದಿನವೂ ಗ್ರಂಥಾಲಯಕ್ಕೆ ಭೇಟಿ ನೀಡದಿದ್ದರೆ ದಿನ ಕಳೆಯುವುದೇ ಇಲ್ಲ. ಅಲ್ಲೊಮ್ಮೆ ಕುಳಿತು ಓದಿದರೆ ಆಗುವ ಅನುಭವವೇ ಬೇರೆ ತೆರನಾದದ್ದು. ಆ ಮಟ್ಟಿಗೆ ಗ್ರಂಥಾಲಯವು ಕೆಲವರ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ. ಮಾಹಿತಿ ತಂತ್ರಜ್ಞಾನದ ದೆಸೆಯಿಂದಾಗಿ ಇಂದು ಬೆರಳ ತುದಿಯಲ್ಲೇ ಮಾಹಿತಿ ದೊರೆಯುವಂತಿದ್ದರೂ, ಗ್ರಂಥಾಲಯದ ಪರಿಸರದಲ್ಲಿ ದಿನಪತ್ರಿಕೆ, ನಿಯತ ಕಾಲಿಕ, ಪುಸ್ತಕಗಳನ್ನು ಓದುವಾಗಿನ ಮಜವೇ ಬೇರೆ.
ಇಲ್ಲಿ ಪ್ರಾದೇಶಿಕ, ದೇಶ-ವಿದೇಶಗಳ ವಿದ್ಯಮಾನಗಳು ಗ್ರಹಿಕೆಗೆ ದಕ್ಕುವುದರ ಜತೆಗೆ ನಮ್ಮಲ್ಲಿ ಭಾಷಾಭಿಮಾನವೂ ಬೆಳೆಯುತ್ತದೆ, ಭಾಷೆಯ ಮೇಲಿನ ಹಿಡಿತವೂ ಹೆಚ್ಚುತ್ತದೆ. ಮಾತ್ರವಲ್ಲ ಎಲ್ಲ ವಯೋಮಾನ, ಜಾತಿ-ಧರ್ಮದ ವ್ಯಕ್ತಿಗಳು ಸೇರುವ ಜಾಗವಾದ ಗ್ರಂಥಾಲಯಗಳಿಂದಾಗಿ ನಮಗೆ ಅರಿವಿಲ್ಲದಂತೆಯೇ ಸಮಾನತೆಯ ಭಾವ ಸುರಿಸುತ್ತದೆ. ನಮ್ಮ ಯೋಚನಾವಿಧಾನ ಬದಲಾಗುತ್ತದೆ. ಹೀಗಾಗಿ ನಾವೆಲ್ಲರೂ ತಪ್ಪದೇ ಗ್ರಂಥಾಲಯಕ್ಕೆ ಹೋಗಬೇಕು. ಗ್ರಂಥಾಲಯಗಳನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ದೇಶದ ಸತ್ಪ್ರಜೆಗಳಾದ ನಮ್ಮ ಮೇಲಿದೆ.
ಆದರೆ ಶಾಲಾ-ಕಾಲೇಜುಗಳಲ್ಲಿ ಗುಣಮಟ್ಟದ ಗ್ರಂಥಾಲಯಗಳಿದ್ದರೂ ಭೇಟಿನೀಡದೆ ಕಾಲಹರಣ ಮಾಡುವ ವಿದ್ಯಾರ್ಥಿಗಳು ಸಾಕಷ್ಟಿದ್ದಾರೆ. ಇದು ಸಲ್ಲದು. ‘ಮನೆಯೇ ಮೊದಲ ಪಾಠಶಾಲೆ’ ಎಂಬ ನಾಣ್ಣುಡಿಯಂತೆ ಮನೆಯೇ ಮೊದಲ ಗ್ರಂಥಾಲಯ ವಾಗಬೇಕು. ಪೋಷಕರು ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ದಿನಪತ್ರಿಕೆ, ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಬೇಕು. ಈಗ ಮಕ್ಕಳು ಸ್ವಲ್ಪ ಹಠ ಮಾಡಿದರೂ ಅವರನ್ನು ಸಮಾಧಾನ ಮಾಡಲು ಪೋಷಕರು ತಕ್ಷಣ ಮೊಬೈಲ್ ಕೊಟ್ಟು ಸುಮ್ಮನಾಗಿಬಿಡುತ್ತಾರೆ; ಮಕ್ಕಳು ಅದನ್ನೇ ಚಟವಾಗಿಸಿಕೊಳ್ಳುವುದರಿಂದ ಅವರ ಭವಿಷ್ಯ ಏನಾದೀತು? ಇದರ ಪರಿಣಾಮ ಸುಸ್ಪಷ್ಟ.
ದೈಹಿಕವಾಗಿ ಮತ್ತು ಮಾನಸಿಕವಾಗಿ ಮಕ್ಕಳ ಆರೋಗ್ಯ ಹದಗೆಡುತ್ತದೆ. ಅದರಲ್ಲೂ ಮಕ್ಕಳ ಕಣ್ಣು ಹಾಗೂ ಮಿದುಳಿಗೆ ಆಗುವ
ಹಾನಿ ಅಷ್ಟಿಷ್ಟಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಸಂಶೋಧನೆ ಗಳೂ ಇದನ್ನೇ ಹೇಳುತ್ತವೆ. ಹೀಗಾಗಿ, ಪೋಷಕರು ಮೊದಲು ಓದುವ ಹವ್ಯಾಸವನ್ನು ರೂಢಿಸಿಕೊಂಡರೆ, ಅವರನ್ನು ನೋಡಿ ಎಷ್ಟೋ ಮಕ್ಕಳು ಅನುಸರಿಸುತ್ತಾರೆ. ಒಂದೊಮ್ಮೆ ಮನೆಯಲ್ಲಿ ಪುಸ್ತಕ ಸಂಗ್ರಹಕ್ಕೆ ಅನುಕೂಲಕರ ವ್ಯವಸ್ಥೆ ಇಲ್ಲದಿದ್ದರೆ ಸಾಧ್ಯ ವಾದಷ್ಟೂ ಮನೆಯ ಸನಿಹವಿರುವ ಗ್ರಂಥಾಲಯಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಬೇಕು ಮತ್ತು ಮುಂದೆ ಅವರೇ ಸ್ವತಂತ್ರವಾಗಿ ಹೋಗುವಂತೆ ಪ್ರೇರೇಪಿಸಬೇಕು.
ರಾಜ್ಯದೆಲ್ಲೆಡೆ ಸಾಕಷ್ಟು ಕಡೆ ಪುಸ್ತಕ ಮೇಳಗಳು ಆಯೋಜಿಸಲ್ಪಡುತ್ತವೆ ಹಾಗೂ ಗುಣಮಟ್ಟದ ಪುಸ್ತಕಗಳು ಅಲ್ಲಿ ರಿಯಾಯಿತಿ ದರದಲ್ಲಿ ಸಿಗುತ್ತವೆ. ಇಂಥ ನೆಲೆಗಳಿಗೂ ಭೇಟಿ ನೀಡಿ, ಪುಸ್ತಕವನ್ನು ಕೊಂಡು ಓದುವ ಅಭ್ಯಾಸದ ಕುರಿತು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಮುಖ್ಯವಾಗಿ ಸರಕಾರವು ಶಾಲಾ ಮಟ್ಟದಲ್ಲಿ ಗ್ರಂಥಾಲಯಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿ ಪಡಿಸಬೇಕು. ಶುರುವಿನಲ್ಲೇ ಮಕ್ಕಳನ್ನು ಹೀಗೆ ಗ್ರಂಥಾಲಯಗಳ ಕಡೆಗೆ ಸೆಳೆದರೆ ಮುಂದೆ ಮಕ್ಕಳು ತಾವಾಗಿಯೇ ಇತರ ಗ್ರಂಥಾಲಯಗಳಿಗೂ ಹೋಗುವ ಅಭ್ಯಾಸ ಮಾಡಿಕೊಳ್ಳುತ್ತಾರೆ.
ಮಿಕ್ಕಂತೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಧ್ಯವಾದಷ್ಟು ಮಟ್ಟಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹೆಚ್ಚೆಚ್ಚು ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಬೇಕು. ದಿನಮಾನದ ಅಗತ್ಯಕ್ಕೆ ತಕ್ಕಂತೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆಗೂ ಮುಂದಾಗಬೇಕು. ಸರಕಾರಿ ಹುದ್ದೆ ಪಡೆಯಲು ರಾಜ್ಯದ ಯುವಜನರು ಸಾಕಷ್ಟು ತಯಾರಿ ನಡೆಸುತ್ತಾರೆ; ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಗುಣಮಟ್ಟದ ಹಾಗೂ ಹಲವು ಸೌಲಭ್ಯವುಳ್ಳ ವಾಚನಾಲಯಗಳನ್ನು ತೆರೆಯಬೇಕು.
ಗ್ರಂಥಾಲಯ ವೆಂಬುದು ಒಂದು ವಿಶಿಷ್ಟ ದೇಗುಲ ಹಾಗೂ ಜನಜೀವನದ ಅವಿಭಾಜ್ಯ ಅಂಗ. ಇದನ್ನು ನಾವೆಲ್ಲರೂ ಕಾಪಾಡಿ ಕೊಳ್ಳಬೇಕು. ಅಂಬೇಡ್ಕರ್‌ರವರಿಗೆ ಪುಸ್ತಕಗಳೆಂದರೆ ಪಂಚ ಪ್ರಾಣ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿ
ದ್ದಾಗ ಅವರು ೨,೦೦೦ ಪುಸ್ತಕಗಳನ್ನು ಖರೀದಿಸಿದ್ದರಂತೆ! ೧೯೩೧ರಲ್ಲಿ ಲಂಡನ್‌ನಲ್ಲಿ ಜರುಗಿದ ದುಂಡುಮೇಜಿನ ಸಭೆಗೆ
ಅಂಬೇಡ್ಕರ್‌ರವರು ೩೨ ದೊಡ್ಡ ಪೆಟ್ಟಿಗೆಗಳಲ್ಲಿ ಪುಸ್ತಕ ಗಳನ್ನು ತಂದಿದ್ದರು. ಎಷ್ಟೇ ಆರ್ಥಿಕ ಮುಗ್ಗಟ್ಟಿದ್ದರೂ ಹೇಗೋ ಹಣ
ಹೊಂದಿಸಿಕೊಂಡು ಪುಸ್ತಕಗಳನ್ನು ಖರೀದಿಸುತ್ತಿದ್ದ ಅಂಬೇಡ್ಕರ್‌ರವರು ಮುಂಬೈನ ದಾದರ್ ಪ್ರದೇಶದಲ್ಲಿನ ತಮ್ಮ ರಾಜಗೃಹ ನಿವಾಸದಲ್ಲಿ ೫೦,೦೦೦ಕ್ಕೂ ಹೆಚ್ಚು ಪುಸ್ತಕ ಗಳನ್ನು ಸಂಗ್ರಹಿಸಿಟ್ಟಿದ್ದರು. ಆ ಕಾಲಘಟ್ಟದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪುಸ್ತಕಗಳನ್ನು ಸಂಗ್ರಹಿಸಿದ್ದು ಪ್ರಾಯಶಃ ಅವರೊಬ್ಬರೇ ಇರಬೇಕು.
ಗ್ರಂಥಾಲಯಗಳ ಪ್ರಾಮುಖ್ಯದ ಬಗ್ಗೆ ಅವರು ಮಾತನಾಡುತ್ತಾ, ‘ಸಾರ್ವಜನಿಕ ಗ್ರಂಥಾಲಯವೆಂಬುದು ಜನರಿಂದ ಜನರಿಗಾಗಿ ಇರುವ ಒಂದು ಅತ್ಯುತ್ತಮ ವ್ಯವಸ್ಥೆ. ಗ್ರಂಥಾಲಯಗಳು ಮೂಲಭೂತವಾಗಿ ಏನನ್ನೂ ಅಪೇಕ್ಷಿಸುವುದಿಲ್ಲ, ಯಾವುದೇ ಪ್ರವೇಶ ಶುಲ್ಕ ಕೇಳುವುದಿಲ್ಲ. ಇಂದು ನಮ್ಮ ನಡುವಿರುವ ತಾರತಮ್ಯವಿಲ್ಲದ, ವಾಣಿಜ್ಯೇತರ ಸ್ಥಳಗಳಲ್ಲಿ ಗ್ರಂಥಾಲಯವೂ ಒಂದು’ ಎಂದಿದ್ದಾರೆ.
ಮಾತೆತ್ತಿದರೆ ಡಾ. ಬಿ.ಆರ್.ಅಂಬೇಡ್ಕರ್‌ರವರ ಹೆಸರು ಹೇಳುವ, ಅವರ ಹೆಸರನ್ನು ಬಳಸಿ ರಾಜಕೀಯ ಮಾಡುವ ಮಂದಿ, ಅಂಬೇಡ್ಕರ್ ಅವರ ಈ ವಿಶಿಷ್ಟ ಹವ್ಯಾಸವನ್ನು ಸ್ಥಳೀಯವಾಗಿ ಉತ್ತೇಜಿಸಿದರೆ ಅದೊಂದು ಪುಣ್ಯದ ಕೆಲಸವಾಗುತ್ತದೆ. ‘ತಲೆ ತಗ್ಗಿಸಿ ನಮ್ಮನ್ನು ನೀನು ನೋಡು, ಮುಂದೆ ನೀನು ತಲೆಯೆತ್ತದ ಹಾಗೆ ಮಾಡುತ್ತೇವೆ’ ಎನ್ನುತ್ತವೆ ಸಾಮಾಜಿಕ ಜಾಲತಾಣಗಳು ಮತ್ತು ಸ್ಮಾರ್ಟ್-ನುಗಳು. ಆದರೆ, ‘ತಲೆ ತಗ್ಗಿಸಿ ನಮ್ಮನ್ನು ನೋಡಿ ಅಕ್ಷರಗಳನ್ನು ಅರಗಿಸಿಕೊಂಡೆ ಯಾದರೆ, ಮುಂದೆ ಸಮಾಜ ದಲ್ಲಿ ನೀನು ತಲೆಯೆತ್ತಿ ನಿಲ್ಲುವ ಹಾಗೆ ಮಾಡುತ್ತೇವೆ’ ಎಂದು ಭರವಸೆ ನೀಡುತ್ತವೆ ದಿನ ಪತ್ರಿಕೆಗಳು ಹಾಗೂ ಪುಸ್ತಕಗಳು. ಇವನ್ನು ಕೇವಲ ಮೋಡಿಯ ಮಾತುಗಳು ಎಂದು ನಿರ್ಲಕ್ಷಿಸದೆ ಸೂಕ್ಷ್ಮವಾಗಿ ಮನದಾಳಕ್ಕೆ ಇಳಿಸಿಕೊಂಡರೆ, ದಿನಪತ್ರಿಕೆ ಮತ್ತು ಪುಸ್ತಕ ಗಳಿಗೂ, ಈಗಿನ ಸಾಮಾಜಿಕ ಮಾಧ್ಯಮಗಳು ಮತ್ತು ಸ್ಮಾರ್ಟ್ ಫೋನ್‌ಗೂ ಇರುವ ವ್ಯತ್ಯಾಸ ನಮಗೆ ಗೊತ್ತಾಗುತ್ತದೆ. ಯಾವುದು ಉತ್ತಮ? ನೀವೇ ನಿರ್ಧರಿಸಿ.
(ಲೇಖಕರು ಮೈಸೂರಿನ ಜೆಎಸ್‌ಎಸ್
ಮಹಾವಿದ್ಯಾಪೀಠದಲ್ಲಿ ಪ್ರೂಫ್ ರೀಡರ್)