Wednesday, 18th September 2024

ಅಕ್ಷರಲೋಕದ ಸಂಭ್ರಮಕ್ಕೆ ಕಡ್ಡಿಗೀರುವುದೇಕೆ ?

ಚರ್ಚಾ ವೇದಿಕೆ

ಎಚ್.ಕೆ.ಮಧು, ದೋಹಾ

ಮುದ್ರಣ ಮಾಧ್ಯಮಗಳು ಇನ್ನೂ ಸ್ವಾಯತ್ತತೆ ಉಳಿಸಿಕೊಂಡು ಪತ್ರಿಕಾಧರ್ಮವನ್ನು ಕಾಯ್ದುಕೊಂಡಿವೆ. ಅದರಲ್ಲೂ ಮಾಲೀಕನೇ ಸಂಪಾದಕನಾದರೆ ಒತ್ತಡಗಳಿಗೆ ಬಲಿಯಾಗದೆ ಕೆಲಸ ನಿರ್ವಹಿಸಬಹುದು, ಯಾರ ಮುಲಾಜಿಗೆ ಒಳಗಾಗದೆ ನಿಷ್ಠುರ ನಿಲುವು ಕೈಗೊಳ್ಳಬಹುದು.

ಇಂದಿನ ಎಲ್ಲಾ ಬಗೆಯ ಮಾಧ್ಯಮಗಳನ್ನು, ಅದರಲ್ಲೂ ವಿಶೇಷವಾಗಿ ದೃಶ್ಯಮಾಧ್ಯಮ ಗಳನ್ನು ಜರಾಸಂಧನಂತೆ ಸೀಳಿ, ‘ಅವರು ಅತ್ತ ಕಡೆಯುವರು, ಇವರು ಈ ಕಡೆ ವಾಲಿ ದವರು, ಇವರು ಈ ‘ಪಕ್ಷ’ಪಾತಿಗಳು’ ಎನ್ನುವುದು ಹಾಗೂ ಅದೇ ರೀತಿಯಲ್ಲಿ ಸಾರ್ವಜ ನಿಕರೂ ಗುರುತಿಸುವುದು ಸೂರ್ಯನ ಬೆಳಕಿನಷ್ಟೇ ಸತ್ಯ.

ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ವಿಸ್ತರಣೆಯಾದ ಮೇಲೆ ಇದು ನಿಚ್ಚಳವಾಗಿ ಕಂಡುಬರುತ್ತಿದೆ. ಮಾಧ್ಯಮಗಳಿಗೆ ಈ ರೀತಿಯ ವಾಲುವಿಕೆ ಅನಿವಾರ್ಯವೆಂದು ಪಕ್ಷಗಳ ಮತ್ತು ನಾಯಕರುಗಳ ಭಟ್ಟಂಗಿಗಳು ಅಥವಾ ವಿರೋಧಿಗಳು ತಾವೇ ಫರ್ಮಾನು ಹೊರಡಿಸಿ ಹಣೆಪಟ್ಟಿ ಕಟ್ಟಿಬಿಟ್ಟಿದ್ದಾರೆ. ಬಹುಶಃ ಇಂದಿನ ಬಹುತೇಕ ಮಾಧ್ಯಮಗಳ ನಿಲುವು ಮತ್ತು ವೈಖರಿ ಕೂಡ ಇದಕ್ಕೆ ಪುಷ್ಟಿ ನೀಡುತ್ತವೆ.

ಹಾಗೆಂದ ಮಾತ್ರಕ್ಕೆ, ಮಾಧ್ಯಮಗಳು ವಿಷಯಾಧರಿತವಾಗಿ ಬೆಂಬಲಿಸುವುದು ಅಥವಾ ವಿರೋಧಿಸುವುದು ತಪ್ಪೇನಲ್ಲ. ಆದರೆ ವರ್ಷಪೂರ್ತಿ, ಅಟ್ಟದ ಮೇಲಿಂ ದ ಕೂಗುವಂತೆ ಹೇಳಿದ್ದೇ ಹೇಳುವ ಕಿಸುಬಾಯಿ ದಾಸನಂತೆ ಹಲುಬುವ ಮಾಧ್ಯಮಗಳ ವರ್ತನೆ ಎಷ್ಟರ ಮಟ್ಟಿಗೆ ಸರಿ? ಕಾವಲುನಾಯಿಯಂತೆ ವ್ಯವಸ್ಥೆಯ ನಾಲ್ಕನೆಯ ಸ್ತಂಭದಂತೆ ಗುರುತಿಸಿಕೊಳ್ಳಬೇಕಾದ ಮಾಧ್ಯಮಗಳು ಸ್ಪರ್ಧೆಗೆ ಬಿದ್ದಂತೆ ವ್ಯಕ್ತಿಯ ಹಾಗೂ ಸರಕಾರದ ಎಲ್ಲಾ ಕೆಲಸಗಳನ್ನು ಸಮರ್ಥಿಸಿಕೊಳ್ಳುವುದು, ಸಮೂಹ ವಿಶ್ಲೇಷಣೆಯಲ್ಲಿ ವಿರೋಧಿಗಳ ಅಭಿಪ್ರಾಯಗಳಿಗೆ ಮನ್ನಣೆ ನೀಡದಿರುವುದು, ತಮ್ಮ ನಿಲುವುಗಳನ್ನೇ ಪ್ರತಿಪಾದಿಸುವುದು, ನಿರೀಕ್ಷೆಯ ಉತ್ತರ ನೀಡುವಂತಾಗಲು ಪ್ರಶ್ನೆಗಳನ್ನು ಪೂರ್ವಗ್ರಹಪೀಡಿತರಂತೆ ಕೇಳುವುದು, ಅಬ್ಬರಿಸಿ ಬೊಬ್ಬಿರಿಯುವುದು, ಸುದ್ದಿವಾಚಕ ಸಿಬ್ಬಂದಿಯನ್ನು ಪಕ್ಕದ ಲ್ಲಿಯೇ ಕೂರಿಸಿಕೊಂಡು ಅವರನ್ನು ಬೆಪ್ಪುತಕ್ಕಡಿ ಮಾಡಿ ಮೆರೆಯುವುದು, ಸಹೋದ್ಯೋಗಿಗಳ ವಿಷಯಾನು ಮಾನಗಳಿಗೆ ‘ಬಪ್ಪರೇಬಪ್ಪ’ ಎಂದು ಸರ್ವಜ್ಞನಂತೆ ವ್ಯಾಖ್ಯಾನ ಮಾಡುವುದು, ‘ನಾನು ಹೇಳಿದ್ದೇ ವೇದವಾಕ್ಯ, ನಾನು ನಡೆದದ್ದೇ ದಾರಿ’ ಎಂಬಂತೆ ವರ್ತಿಸುವುದು, ಮೊಸರಲ್ಲಿ ಕಲ್ಲು ಹುಡುಕುವ ಪ್ರವೃತ್ತಿಯವರಂತೆ ಒಳ್ಳೆಯ ಕೆಲಸಗಳಲ್ಲೂ ತಪ್ಪು ಹುಡುಕಲು ಯತ್ನಿಸುವುದು, ಹಣಿಯುವ ಇಲ್ಲವೇ ತೇಜೋವಧೆ ಮಾಡುವ ದಿಸೆಯಲ್ಲಿ ಚಿಕ್ಕ ಚಿಕ್ಕ ಸಂಗತಿಯನ್ನೂ ಪರ್ವತಾಕಾರ ಮಾಡಿ ಬಿಂಬಿಸುವುದು, ದಿನದ ಇಪ್ಪತ್ನಾಲ್ಕು ಗಂಟೆಯೂ ಸವಕಲಾದ ವಿಷಯವನ್ನೇ ಬಿತ್ತರಿಸುವುದು, ನ್ಯಾಯಾಲಯದಲ್ಲಿ ನಡೆಯುವ ಕಲಾಪದಂತೆ ಹಾಗೂ ತೀರ್ಪು ನೀಡುವಂತೆ ರಾಜಾರೋಷವಾಗಿ ವರ್ತಿಸುವುದು, ಎಡ-ಬಲ-ಮಧ್ಯ ಪಂಥಗಳ ಮಂದಿಗೆ ಸಮಾನಾವಕಾಶ ನೀಡದೆ, ತಮ್ಮ ನಿಲುವಿಗೆ ಅನುಗುಣವಾಗಿರುವ ಪ್ರತಿನಿಧಿಗಳಿಗೆ ಬರೆಯಲು, ಚರ್ಚೆಗಳಲ್ಲಿ ಭಾಗ ವಹಿಸಲು ಮುತುವರ್ಜಿ ತೋರುವುದು ಇತ್ಯಾದಿ ವರ್ತನೆಗಳು ಕಣ್ಣಿಗೆ ರಾಚುವಂತಿವೆ.

ಬಹುಶಃ, ಇಂದಿನ ಅತ್ಯಂತ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಈ ರೀತಿಯ ಪ್ರತಿಪಾದನೆಗಳು ಮಾಧ್ಯಮಗಳಿಗೆ ಅನಿವಾರ್ಯವೇನೋ ಎನಿಸಿಬಿಟ್ಟಿದೆ. ವ್ಯವಸ್ಥೆಯಲ್ಲಿ ಒಂದು ನಿಲುವಿಗೆ ವಾಲಿಕೊಳ್ಳುವುದು ವಾಣಿಜ್ಯಿಕ ದೃಷ್ಟಿಯಿಂದ ಮಾಧ್ಯಮ ಸಂಸ್ಥೆಗಳಿಗೆ ಅನಿವಾ ರ್ಯವೇ? ತನಿಖಾ ವರದಿಗಳ ನೆರವಿನಿಂದ ಆಳುವವರ, ಭ್ರಷ್ಟರ ಮತ್ತು ಸಮಾಜದ ಸ್ವಾಸ್ಥ್ಯ ಕದಡುವವರ ಹೆಡೆಮುರಿ ಕಟ್ಟಿ, ಗೋಳಾಡಿಸಿ, ಸಾರ್ವಜನಿಕ ಕಟಕಟೆಯಲ್ಲಿ ಅಪರಾಧಿಗಳನ್ನಾಗಿಸಿ, ಸತ್ಯವನ್ನು ಅನಾವರಣಗೊಳಿಸಿ ಸುದ್ದಿ ಮಾಡುತ್ತಿದ್ದ ಮಾಧ್ಯಮಗಳು ಈಗೆಲ್ಲಿ? ಸ್ಟಿಂಗ್ ಆಪರೇಷನ್ ಮಾಡಿ ಬೆಚ್ಚಿ ಬೀಳಿಸುತ್ತಿದ್ದ ಆ ದಿನಗಳೆಲ್ಲಿ? ತಂತ್ರಜ್ಞಾನದ ಸೌಲಭ್ಯ ಹೆಚ್ಚಿದಂತೆ, ಮಾಡುವ ಹುಳುಕು ಗಳನ್ನು ಮುಚ್ಚಿಡುವ (ಕು)ತಂತ್ರಗಾರಿಕೆಯು ಹೆಚ್ಚಾಗಿದೆ ಎನಿಸುತ್ತಿದೆ.

ಹಾಗೆ ನೋಡಿದರೆ, ಮುದ್ರಣ ಮಾಧ್ಯಮಗಳು ಇನ್ನೂ ಸ್ವಾಯತ್ತತೆಯನ್ನು ಉಳಿಸಿಕೊಂಡು ಪತ್ರಿಕಾಧರ್ಮವನ್ನು ಕಾಯ್ದು ಕೊಂಡಿವೆ. ಅದರಲ್ಲೂ ಮಾಲೀಕನೇ ಸಂಪಾದಕ ನಾದರೆ ಒತ್ತಡಗಳಿಗೆ ಬಲಿಯಾಗದೆ ಕೆಲಸವನ್ನು ನಿರ್ವಹಿಸಬಹುದು, ಯಾರ ಹಂಗು-ಮುಲಾಜಿಗೆ ಒಳಗಾಗದೆ ನಿಷ್ಠುರ ನಿಲುವು ತೆಗೆದುಕೊಳ್ಳಬಹುದು. ಪತ್ರಿಕೆಯ ಓದುಗರೇ ಪ್ರಭುಗಳೆಂದು ಸತ್ಯ ಹೇಳುವ ಧೈರ್ಯ ಮಾಡಬಹುದು.

ವೈಯಕ್ತಿಕವಾಗಿ ಯಾವುದೋ ಪಕ್ಷ, ನಾಯಕ, ಸಿದ್ಧಾಂತ, ಒಲವು-ನಿಲುವು, ಪ್ರತಿಪಾದನೆಯನ್ನು ಬೆಂಬಲಿಸುವುದಕ್ಕೆ ಯಾರೂ ಅಡ್ಡಿಪಡಿಸಲಾರರು. ಆದರೆ ತನ್ನ ಇಚ್ಛೆಗೆ ಅನುಗುಣವಾಗಿ ಮಾಧ್ಯಮದವರಿಲ್ಲವೆಂದಾಗ ಅದನ್ನು ದೂರುವುದು, ಬಹಿಷ್ಕಾರ ಹಾಕುವುದು ಬರೀ ಸ್ವಾರ್ಥವಷ್ಟೇ. ಆದಾಗ್ಯೂ, ಹಳದಿ ಕನ್ನಡಕ ಧರಿಸಿಕೊಂಡು ತಮಗಾಗದ ಪತ್ರಿಕೆಗಳನ್ನು ಮತ್ತು ಪತ್ರಕರ್ತ ರನ್ನು ಮೂದಲಿಸುವ ಮಂದಿಗೇನೂ ಕಮ್ಮಿಯಿಲ್ಲ. ಕೆಲವು ಧೀಮಂತ ಪತ್ರಕರ್ತರಿಗೆ ಮಾಧ್ಯಮದಲ್ಲಿರುವ ಕೆಲವರ ಅರೆಕೊರೆ ಗಳು, ವ್ಯಸನ ಗಳು, ದೌರ್ಬಲ್ಯಗಳು, ಅಡ್ಡದಾರಿಗಳು ಖಂಡಿತವಾಗಿ ಗೊತ್ತಿರುತ್ತದೆ. ಹೀಗಾಗಿ, ಮಾಧ್ಯಮಗಳಿಗೆ ಸಂಬಂಧ
ಪಟ್ಟಂಥವರ ಅವಘಡಗಳಾದಾಗ ನೇರಾನೇರ ಬರೆಯುವುದರಲ್ಲಿ ತಪ್ಪೇನಿದೆ? ಆದರೆ ಪಾಪಾತ್ಮರನ್ನು ಹುತಾತ್ಮರನ್ನಾಗಿಸುವ ಒಂದು ವರ್ಗವೇ ನಮ್ಮ ನಡುವೆಯಿದೆ.

ಕಣ್ಣಿಗೆ (ಹೊಟ್ಟೆಗೂ!) ಎಣ್ಣೆ ಬಿಟ್ಟುಕೊಂಡು ಯಾರ‍್ಯಾರನ್ನು ಎಲ್ಲಿ ಮತ್ತು ಯಾವಾಗ ತೇಜೋವಧೆ ಮಾಡಬೇಕೆಂದು ಕಾಯು ತ್ತಿರುತ್ತಾರೆ. ರಥವನ್ನೇರಿ ಕಾಳಗ ಮಾಡಲು ಸದಾ ಸಿದ್ಧರಿರುತ್ತಾರೆ. ಸರಕಾರಕ್ಕೆ, ಸರಕಾರವನ್ನು ನಡೆಸುವ ಮಂದಿಗೆ ತಮ್ಮ ಪ್ರಾಮಖ್ಯವನ್ನು ತಿಳಿಸಲು ಜೋತುಬೀಳುತ್ತಾರೆ. ಹಿಂದೆ ಪಡೆದ ನೆರವು- ಬೆಂಬಲವನ್ನು ಮರೆತು ಕೃತಘ್ನರಾಗುತ್ತಾರೆ. ಒಟ್ಟಿನಲ್ಲಿ,
ಮರಕ್ಕೆ ತಾವು ಎಸೆದ ಕಲ್ಲಿಗೆ ಹಣ್ಣು ಬಿದ್ದರೆ ‘ನನ್ನದೆಂಥಾ ಗುರಿ’ ಎಂದು ಬೀಗಬಹುದು; ಇಲ್ಲವಾದಲ್ಲಿ ‘ಕಲ್ಲೆಸೆದವನು’ ಎಂಬ ಖ್ಯಾತಿಗೆ ಒಳಗಾಗಿ ಸುದ್ದಿಯಾಗಬಹುದು.

ಅಕ್ಷರ ಸಂಭ್ರಮಗಳಿಗೆ ಕಡ್ಡಿಗೀರುವ ಮಂದಿ, ಕನ್ನಡಿಯ ಮುಂದೆ ನಿಂತು ತಮ್ಮನ್ನೇ ತಾವು ಅವಲೋಕನ ಮಾಡಿಕೊಳ್ಳಲಿ. ಯಾರೋ ಬರುವುದನ್ನು ತಪ್ಪಿಸುವ ಹುನ್ನಾರದಿಂದ ಬಡವಾಗುವುದು ಕನ್ನಡ ಸಾರಸ್ವತ ಲೋಕವಲ್ಲ; ಸಮಾರಂಭಕ್ಕೆ ಬರಲಾ ಗದ ಸಾರ್ಥಕ ಭಾವದಿಂದ ವಂಚಿತರಾಗುವುದು ಮಂದಿಯೇ ಹೊರತು ಕನ್ನಡವಲ್ಲ.

Leave a Reply

Your email address will not be published. Required fields are marked *