Friday, 13th December 2024

ಪತ್ರಕರ್ತ ಪ್ರಜಾಸತ್ತೆಯ ಸಂರಕ್ಷಕ

ಮಾಧ್ಯಮಮಿತ್ರ

ಎ.ಎಸ್.ಬಾಲಸುಬ್ರಮಣ್ಯ

(ಇಂದು ವಿಶ್ವ ಪತ್ರಿಕಾ ಸ್ವಾತಂತ್ರ‍್ಯ ದಿನ)

ಮೇ ತಿಂಗಳ ೩ನೇ ದಿನಾಂಕದಂದು ವಿಶ್ವದೆಲ್ಲೆಡೆ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ’ ಎಂದು ಸಹ ಕರೆಯಲಾಗುತ್ತದೆ. ವಿಶ್ವಸಂಸ್ಥೆಯ ನೇತೃತ್ವದಲ್ಲಿ ಈ ದಿನವನ್ನು ಕಳೆದ ೩೦ ವರ್ಷಗಳಿಂದಲೂ ಆಚರಿಸಲಾಗುತ್ತಿದೆ. ಪತ್ರಿಕಾ ಸ್ವಾತಂತ್ರ್ಯದ ಮಹತ್ವ ವನ್ನು ತಿಳಿಸುವ ಮತ್ತು ಪ್ರಜಾಸತ್ತೆಯಲ್ಲಿ ಮಾಧ್ಯಮಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಬೇಕಾದ ಪೂರಕ ವಾತಾವರಣದ ಬಗ್ಗೆ ಎಲ್ಲರ ಗಮನ ಸೆಳೆಯುವ ಪ್ರಯತ್ನಗಳಿಗೆ ಈ ದಿನ ಮುಡಿಪಾಗಿದೆ. ಪತ್ರಿಕಾ ಸ್ವಾತಂತ್ರ್ಯದ ಮೌಲ್ಯಮಾಪನ ಮಾಡುವುದರ ಜತೆಗೆ ಮಾಧ್ಯಮಗಳ ಸ್ವಾತಂತ್ರ್ಯ ರಕ್ಷಣೆ ಮತ್ತು ತಮ್ಮ ವೃತ್ತಿಯನ್ನು ನಿರ್ವಹಿಸುವಾಗ ಪ್ರಾಣತ್ಯಾಗ ಮಾಡಿದ ಪತ್ರಕರ್ತರಿಗೆ ಈ ದಿನ ಗೌರವವನ್ನು ಸಲ್ಲಿಸಲಾಗುತ್ತದೆ.

ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ತತ್ವಗಳನ್ನು ಯುವಕರಲ್ಲಿ ಮನದಟ್ಟು ಮಾಡಲು ವಿಶ್ವಸಂಸ್ಥೆಯು ಈ ದಿನದ ಆಚರಣೆಯನ್ನು ಪ್ರೋತ್ಸಾಹಿಸು ತ್ತದೆ. ಪ್ರಜಾಸತ್ತೆಯ ಸಂರಕ್ಷಕರಾದ ಪತ್ರಕರ್ತರು, ವಾಕ್ ಮತ್ತು ಮಾಧ್ಯಮಗಳ ಸ್ವಾತಂತ್ರ್ಯವನ್ನು ರಕ್ಷಿಸಲು ಮೌಲ್ಯಯುತ ಕೊಡುಗೆ ನೀಡಿದ್ದಾರೆ. ವಿಶ್ವದಾದ್ಯಂತ ಪತ್ರಕರ್ತರು ಪ್ರತಿನಿತ್ಯ ಕಿರುಕುಳಗಳನ್ನು ಎದುರಿಸಿ ಸತ್ಯವನ್ನು ಜನತೆಯ ಮುಂದಿರಿಸುತ್ತಾರೆ.

ದಿನಾಚರಣೆ ಹಿನ್ನೆಲೆ

ಸತ್ಯವನ್ನು ಬಹಿರಂಗಪಡಿಸಿ ಜಾಗೃತಿ ಮೂಡಿಸಲು ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಪತ್ರಕರ್ತರು ಅತ್ಯಗತ್ಯ. ಈ ಪ್ರಕ್ರಿಯೆ ಯಲ್ಲಿ ಸ್ವಾಭಾವಿಕವಾಗಿಯೇ ಅವರು ಅನೇಕ ತೊಂದರೆಗಳನ್ನು ಎದುರಿಸುತ್ತಾರೆ. ೨೦ನೇ ಶತಮಾನದ ಕೊನೆಯಲ್ಲಿ ಅನೇಕ ಆಫ್ರಿಕನ್ ದೇಶಗಳಲ್ಲಿ ನಡೆದ ಅಂತರ್ಯುದ್ಧಗಳಲ್ಲಿ ಹಲವಾರು ಪತ್ರಕರ್ತರು ತಮ್ಮ ಕೆಲಸ ನಿರ್ವಹಿಸುವ ಹೊತ್ತಿನಲ್ಲಿ ಮೃತಪಟ್ಟರು. ಈ ಕುರಿತು ಜಾಗತಿಕ ಮಟ್ಟದಲ್ಲಿ ಜಾಗೃತಿ ತರುವ ಉದ್ದೇಶದಿಂದ, ನಮೀಬಿಯಾದ ರಾಜಧಾನಿ ವಿಂಡೋಕ್‌ನಲ್ಲಿ ೧೯೯೧ರಲ್ಲಿ ನಡೆದ ಯುನೆಸ್ಕೋ ಸಮ್ಮೇಳನದಲ್ಲಿ ಆಫ್ರಿಕನ್ ಪತ್ರಕರ್ತರು ಮನವಿ ಸಲ್ಲಿಸಿ ‘ವಿಂಡೋಕ್ ಘೋಷಣೆ’ಯನ್ನು ಸಿದ್ಧಪಡಿಸಿದರು.

ಸ್ವತಂತ್ರ ಮತ್ತು ಬಹುತ್ವದ ಪತ್ರಿಕೋದ್ಯಮಕ್ಕೆ ಅಡಿಪಾಯ ಹಾಕುವ ಉದ್ದೇಶವನ್ನು ಹೊಂದಿದ್ದ ಈ ಘೋಷಣೆಯನ್ನು ಸ್ವೀಕರಿಸಿ, ೧೯೯೩ರಲ್ಲಿ
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲು ವಿಶ್ವಸಂಸ್ಥೆ ನಿರ್ಧರಿಸಿತು. ಮುದ್ರಣ ಕಲೆಯ ಆರಂಭದ ದಿನಗಳಿಂದಲೂ ಪತ್ರಕರ್ತರು ಮತ್ತು ಆಡಳಿತ ವರ್ಗಗಳ ನಡುವೆ ಸತತ ಸಂಘರ್ಷಗಳು ನಡೆಯುತ್ತಿವೆ. ಇದು ಸ್ವಾಭಾವಿಕವೂ ಹೌದು. ಏಕೆಂದರೆ ಸತ್ಯ ಎದುರಿಸಲು ಆಡಳಿತವರ್ಗ ಯಾವಾಗಲೂ ಹಿಂಜರಿಯುತ್ತದೆ. ಸತ್ಯ ಮುಚ್ಚಿಡಲು ತಮ್ಮ ಎಲ್ಲ ಅಸ್ತ್ರಗಳನ್ನೂ ಅಧಿಕಾರಿಗಳು ಬಳಸುತ್ತಾರೆ. ಸಾಂವಿಧಾನಿಕ ಬೆಂಬಲ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ಮಹತ್ತರ ಉತ್ತೇಜನ ನೀಡಬಲ್ಲವು. ಪತ್ರಿಕೆಗಳು ಸಮರ್ಥವಾಗಿ ಕಾರ್ಯನಿರ್ವಹಿಸುವಲ್ಲಿ ಪ್ರಜ್ಞಾವಂತ  ಗರಿಕರ
ಪಾತ್ರವೂ ಮಹತ್ತರವಾಗಿದೆ.

ಏಕೆಂದರೆ ಪ್ರಜ್ಞಾವಂತಿಕೆ ಬೆಳೆಸುವಲ್ಲಿ ಮತ್ತು ಅದರ ಪೋಷಣೆಯಲ್ಲಿ ಪತ್ರಿಕೆಗಳು ಗುರುತರವಾದ ಪಾತ್ರ ಹೊಂದಿವೆ. ಯಾವ ರೀತಿಯಲ್ಲಿ ವ್ಯಾಖ್ಯಾನಿಸಿ ದರೂ ಇವು ಪರಸ್ಪರ ಪೂರಕವೇ ಆಗಿವೆ. ಸಮಾಜದ ಪ್ರಮುಖ ಅಂಗವಾದ ಪತ್ರಿಕಾರಂಗ, ದೇಶದ ಆಗುಹೋಗುಗಳಿಗೆ ಹಿಡಿದ ಕನ್ನಡಿ. ಪ್ರಜಾಸತ್ತೆಯ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ನಂತರ ಪತ್ರಿಕಾರಂಗಕ್ಕೆ ನಾಲ್ಕನೇ ಸ್ಥಾನ ನೀಡಿ ಗೌರವಿಸಲಾಗಿದೆ. ಏಕೆಂದರೆ, ಈ ಮೂರೂ ಅಂಗಗಳ ಕಾರ್ಯನಿರ್ವಹಣೆಯನ್ನು ಜನರಿಗೆ ವರದಿ ಮಾಡುವ, ವಿಶದಪಡಿಸುವ ಮತ್ತು ದೋಷಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಯುತ ಕೆಲಸಗಳನ್ನು ಪತ್ರಿಕೆಗಳು ನಿರ್ವಹಿಸುತ್ತವೆ. ‘ನಂಬಲರ್ಹ ಸುದ್ದಿಯನ್ನು ಪಡೆಯದ ಜನರು, ಇಂದೋ ನಾಳೆಯೋ, ಸ್ವಾತಂತ್ರ್ಯದ ತಳಪಾಯ ವನ್ನೇ ಹೊಂದದ ಪ್ರಜೆಗಳಾಗುತ್ತಾರೆ’ ಎಂದು ರಾಜ್ಯಶಾಸ್ತ್ರಜ್ಞ ಹೆರಾಲ್ಡ್ ಲಾಸ್ಕಿ ಎಚ್ಚರಿಸಿದ್ದಾರೆ.

ಪತ್ರಿಕೆಗಳು ಟೀಕೆ-ಟಿಪ್ಪಣಿಗಳ ಮೂಲಕ ತರ್ಕಬದ್ಧ ವಾದಗಳನ್ನು ಮಂಡಿಸಿ, ವಾಸ್ತವ ಸಂಗತಿಗಳನ್ನು ಜನತೆಗೆ ಮನದಟ್ಟು ಮಾಡುತ್ತವೆ. ಪತ್ರಿಕೆಗಳ ಪಾತ್ರವನ್ನು ಕುರಿತು ಫ್ರಾನ್ಸ್ ದೇಶದ ಸರ್ವಾಧಿಕಾರಿ ನೆಪೋಲಿಯನ್ ಹೇಳಿದ ಮಾತುಗಳು ಅರ್ಥಪೂರ್ಣವಾಗಿವೆ: ‘ಪತ್ರಕರ್ತ ಗರ್ಜನೆ ಮಾಡುತ್ತಾನೆ,
ಖಂಡನೆ ಮಾಡುತ್ತಾನೆ, ಬುದ್ಧಿವಾದವನ್ನು ಕೊಡುತ್ತಾನೆ, ರಾಜರ ಅಥವಾ ಪ್ರಭುತ್ವದ ಪ್ರತಿನಿಽಯಾಗುತ್ತಾನೆ ಮತ್ತು ರಾಷ್ಟ್ರಗಳಿಗೆ ವಿವೇಕ ಹೇಳುವ ಶಾಂತಿದೂತನಾಗುತ್ತಾನೆ’.

ಸುಸ್ಥಿರ ಶಾಂತಿಯ ನಿರ್ಮಾಣ
ಸಮಾಜದಲ್ಲಿ ಸುಸ್ಥಿರ ಶಾಂತಿಯನ್ನು ನಿರ್ಮಿಸುವ ಪ್ರಮುಖ ಮಾರ್ಗವೆಂದರೆ, ಪರಸ್ಪರ ತಿಳಿವಳಿಕೆಯ ಆಧಾರದ ಮೇಲೆ ಸಂವಹನವನ್ನು ಅನುಮತಿ ಸುವುದು. ಇದು ಮುಕ್ತ ಪತ್ರಿಕಾ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಮಾತ್ರ ಸಾಧ್ಯ. ವಿಶ್ವ ಪತ್ರಿಕಾ ದಿನಾಚರಣೆಯ ಕೇಂದ್ರ ತತ್ವವೂ ಇದಾಗಿದೆ.
ಇಂದಿನ ಅನೇಕ ನಾಗರಿಕ ಸಮಾಜಗಳಲ್ಲಿ ಮುಕ್ತ ಅಭಿವ್ಯಕ್ತಿಗೆ ಅನೇಕ ಅಡೆತಡೆಗಳು ಎದುರಾಗುತ್ತಿವೆ. ಪತ್ರಿಕೆಗಳ ಮೇಲೆ ಪೂರ್ವಭಾವಿ ಪರಿಶೀಲನೆ, ದಂಡ ವಿಧಿಸುವುದು, ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ, ಬಗೆಬಗೆಯ ಕಿರುಕುಳ ಮತ್ತು ಹತಾಶೆಯಿಂದ ಪತ್ರಕರ್ತರನ್ನು ಕೊಲ್ಲುವ ಪ್ರಕರಣಗಳು
ನಡೆಯುತ್ತಲೇ ಇವೆ.

ಈ ಬಗೆಯ ಹಿಂಸೆಗಳಿಗೆ ಸಾಮಾಜಿಕ ಮಾಧ್ಯಮಗಳ ಪತ್ರಕರ್ತರು ಸಹ ಹೊರತಾಗಿಲ್ಲ. ಅಧಿಕಾರಿ ವರ್ಗದವರ ಉದಾರತೆ ಮತ್ತು ಸಾರ್ವಜನಿಕರ ಬೆಂಬಲದಿಂದ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಸಾಧ್ಯ ಎನ್ನುವುದನ್ನು ಎಲ್ಲರೂ ಮನಗಾಣಬೇಕು. ಅಭಿಪ್ರಾಯಭೇದಗಳ ಸ್ವೀಕಾರ ಮತ್ತು ಗುಣಗ್ರಹಣವು ಪ್ರಜಾಸತ್ತೆಯಲ್ಲಿನ ಮೂಲಭೂತ ಅವಶ್ಯಕತೆ ಎಂಬುದನ್ನು ಎಲ್ಲರೂ ಮನಗಾಣಬೇಕು. ವಿಶ್ವದ ೧೪೬ ದೇಶಗಳ ಆರು ಲಕ್ಷ ಪತ್ರಕರ್ತ ರನ್ನು ಪ್ರತಿನಿಧಿಸುವ ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ದಾಖಲೆಗಳ ಪ್ರಕಾರ, ೨೦೨೩ರಲ್ಲಿ ೯ ಮಹಿಳೆಯರು ಸೇರಿದಂತೆ ೯೪ ಪತ್ರಕರ್ತರು ಕೆಲಸ ನಿರ್ವಹಿಸುವಾಗ ತಮ್ಮ ಪ್ರಾಣ ತೆತ್ತಿದ್ದಾರೆ.

ಉಕ್ರೇನ್ ಮತ್ತು ಇಸ್ರೇಲಿನ ಗಾಜಾ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧಗಳಲ್ಲಿ ಅನೇಕ ಪತ್ರಕರ್ತರು ಸಾವಿಗೀಡಾಗಿದ್ದಾರೆ. ಕಳೆದ ೩ ವರ್ಷಗಳ ದಾಖಲೆಗಳ ಪ್ರಕಾರ, ವಿಶ್ವದ ಬೇರೆ ಬೇರೆ ದೇಶಗಳಲ್ಲಿ ೩೯೩ ಪತ್ರಕರ್ತರನ್ನು ವಿವಿಧ ಆಪಾದನೆಗಳ ಮೇಲೆ ಸೆರೆಮನೆಗಳಲ್ಲಿ ಇರಿಸಲಾಗಿದೆ. ನಮ್ಮ ದೇಶದ ೧೦ ಪತ್ರಕರ್ತರು ಈ ಪಟ್ಟಿಯಲ್ಲಿದ್ದಾರೆ. ಅತ್ಯಧಿಕ ಸಂಖ್ಯೆಯ ೮೦ ಪತ್ರಕರ್ತರು ಚೀನಾ ಮತ್ತು ಹಾಂಕಾಂಗ್ ಜೈಲುಗಳಲ್ಲಿ ಇದ್ದಾರೆ.

ಭೂಮಿಯ ಉಳಿವಿಗಾಗಿ ಪತ್ರಿಕೆಗಳು

ವಿಶ್ವ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಕುರಿತು ಎಲ್ಲರ ಗಮನ ಸೆಳೆಯುವ ಉದ್ದೇಶದಿಂದ, ವಿಶ್ವ ಪತ್ರಿಕಾ ದಿನಾ ಚರಣೆಯ ಈ ಸಮಯದಲ್ಲಿ ಚರ್ಚೆಯ ಪ್ರಧಾನ ವಿಷಯವಾಗಿ ‘ಭೂಮಿಗಾಗಿ ಪತ್ರಿಕೆಗಳು: ಪರಿಸರ ಸಂಕಷ್ಟದ ಎದುರಲ್ಲಿ ಪತ್ರಿಕೋದ್ಯಮ’ (‘A Press for the Planet: Journalism in the face of the Environmental Crisis’) ಎಂಬ ವಿಷಯ ಕುರಿತ ಚಿಂತನ-ಮಂಥನವನ್ನು ಸಹ ಚಿಲಿ ದೇಶದ ಸ್ಯಾಂಟಿಯಾಗೊದಲ್ಲಿ ಏರ್ಪಡಿಸಲಾಗಿದೆ.

ಕೆಳಗಿನ ವಿಷಯಗಳನ್ನು ಕುರಿತಂತೆ ಚರ್ಚೆಗಳಲ್ಲಿ ಪ್ರಧಾನವಾಗಿ ಒತ್ತುನೀಡಲಾಗಿದೆ: ೧. ಪರಿಸರ ಬಿಕ್ಕಟ್ಟು ಮತ್ತು ಅದರ ಪರಿಣಾಮಗಳನ್ನು ಖಂಡಿಸು ವಲ್ಲಿ ಹಾಗೂ ತನಿಖೆ ಮಾಡುವಲ್ಲಿ ವಿಶ್ವಾಸಾರ್ಹ ಮತ್ತು ನಿಖರ ಮಾಹಿತಿಯನ್ನು ನೀಡುವ ಪ್ರಾಮುಖ್ಯತೆ. ೨. ಲಿಂಗ-ಪ್ರತಿಕ್ರಿಯಾತ್ಮಕ ದೃಷ್ಟಿಕೋನದಿಂದ ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವಾಗ, ಪತ್ರಕರ್ತರು ಮತ್ತು ಸಂವಹನ ಕಾರ್ಯಕರ್ತರು ಎದುರಿಸುತ್ತಿರುವ ಹಿಂಸೆ ಯನ್ನು ತಡೆಗಟ್ಟುವ ಮಾರ್ಗಗಳ ಪರಿಶೀಲನೆ. ೩. ಹವಾಮಾನ ಬದಲಾವಣೆ ಮತ್ತು ಪರಿಸರ ಬಿಕ್ಕಟ್ಟುಗಳ ಕುರಿತು ವರದಿ ಮಾಡುವಲ್ಲಿ ತಮ್ಮ ಸಾಮರ್ಥ್ಯವನ್ನು ಬಲಪಡಿಸಲು ಮಾಧ್ಯಮ ಸಂಸ್ಥೆಗಳನ್ನು ಬೆಂಬಲಿಸುವುದು.

೪. ಪರಿಸರ ಸಮಸ್ಯೆಗಳ ಬಗ್ಗೆ ತಪ್ಪು ಮಾಹಿತಿ ಮತ್ತು ಅದನ್ನು ನಿಭಾಯಿಸುವುದು ಹಾಗೂ ಹವಾಮಾನ ಕ್ರಿಯೆಗೆ ಸಾರ್ವಜನಿಕ ಮತ್ತು ರಾಜಕೀಯ ಬೆಂಬಲದ ಮೇಲೆ ಅದರ ಪ್ರಭಾವ ಮತ್ತು ಹವಾಮಾನ ಬದಲಾವಣೆಯಿಂದ ಪ್ರಭಾವಿತವಾಗಿರುವ ದುರ್ಬಲ ಸಮುದಾಯದ ರಕ್ಷಣೆ. ೫. ಮಾಧ್ಯಮ ದಲ್ಲಿನ ಬಹುತ್ವ, ಸಾಂಸ್ಕೃತಿಕ ವಿವಿಧತೆ, ಭಾಷಾ ವೈವಿಧ್ಯ ಮತ್ತು ಲಿಂಗಭೇದಗಳನ್ನು ಮುಕ್ತ ಸಮಾಜಗಳಲ್ಲಿ ಮೂಲಭೂತ ಅಂಶಗಳಾಗಿ ಒತ್ತಿಹೇಳು ವುದು.

ಸಮ್ಮೇಳನ ಗುರುತಿಸಿರುವ ಅಂಶಗಳು ಅರ್ಥಪೂರ್ಣವಾಗಿವೆ. ಪರಿಸರ ಸಂರಕ್ಷಣೆಯಲ್ಲಿ ಎಲ್ಲರ ಪಾತ್ರ ಗುರುತರವಾಗಿದೆ. ಜಲ ಮತ್ತು ವಾಯುಮಾಲಿನ್ಯ ಗಳು ಈಗ ಎಲ್ಲರ ಕಣ್ಣಿಗೆ ಕಾಣುತ್ತಿವೆ. ನಾವು ತಿನ್ನುವ ಆಹಾರ, ಸೇವಿಸುವ ಗಾಳಿ ಕೂಡ ದಿನದಿಂದ ದಿನಕ್ಕೆ ವಿಷಕಾರಿಯಾಗುತ್ತಿದೆ. ಬಿಸಿಲಿನ ಪ್ರಖರತೆ ವರ್ಷದಿಂದ ವರ್ಷಕ್ಕೆ ಏರುಮುಖವಾಗುತ್ತಿದೆ. ಸಮಾಜದ ಎಲ್ಲ ವರ್ಗದವರು ಒಗ್ಗೂಡಿ ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾಗಿದೆ.

ವಿಶೇಷವಾಗಿ, ಪತ್ರಿಕೆಗಳು ತಮ್ಮ ಅರ್ಥಪೂರ್ಣ ಸುದ್ದಿ ಮತ್ತು ವಿವರಣೆಗಳ ಮೂಲಕ ನಿರಂತರವಾಗಿ ಜನರ ಮನವೊಲಿಸಬೇಕಿದೆ.

(ಲೇಖಕರು ವಿಶ್ರಾಂತ ಪತ್ರಿಕೋದ್ಯಮ ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು)