ಮೂರ್ತಿಪೂಜೆ
ಕರ್ನಾಟಕದ ಪರಿಶಿಷ್ಟ ಪಂಗಡದ ಮೇಲೆ ಪ್ರಭಾವ ಬೀರಲು ಮಾಜಿ ಸಂಸದ, ನಟ ಶಶಿಕುಮಾರ್‌ರನ್ನು ಕಾಂಗ್ರೆಸ್ ಸೈನ್ಯದ ಮುಂಚೂಣಿಯಲ್ಲಿ ನಿಲ್ಲಿಸುವ ಯತ್ನ ಆರಂಭವಾಗಿದೆ. ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ ನಿರ್ಧಾರ ಬಿಜೆಪಿಗೆ ಒಂದಷ್ಟು ಲಾಭ ತರುವುದು ನಿಶ್ಚಿತ.
ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ ಕರ್ನಾಟಕವನ್ನು ಹಾದುಹೋದ ನಂತರ ಕಾಂಗ್ರೆಸ್ ಪಾಳಯದಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಹಾಗೆ ನೋಡಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಗುರಿಯಾಗಿಸಿ ‘ಪೇಸಿಎಂ’ ಎಂಬ ಮಾಸ್ಟರ್‌ಸ್ಟ್ರೋಕ್ ಬಾರಿಸಿದ ಮೇಲೆ ಕೈ ಪಾಳಯದ ಗ್ರಾಫ್ ಮೇಲೇರಿದಂತೆ ಕಾಣುತ್ತಿರುವುದು ನಿಜ.
ಹೀಗಾಗಿ, ಕರ್ನಾಟಕ ವಿಧಾನಸಭೆ ಚುನಾವಣೆ ಇವತ್ತು ನಡೆದರೂ 120ರಿಂದ 125 ಸೀಟು ಗೆಲ್ಲುವ ವಿಶ್ವಾಸ ಕಾಂಗ್ರೆಸ್ ಪಾಳಯದಲ್ಲಿ ಕಾಣುತ್ತಿದೆ. ಆದರೆ ಇಂಥ ವಿಶ್ವಾಸದ ಕುರುಹುಗಳು ಹೆಚ್ಚಾಗಿ ಕಾಣುತ್ತಿರು ವುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಾಳಯದಲ್ಲಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಾಳಯದಲ್ಲಿ ಮಾತ್ರ ಪ್ರಧಾನಿ ನರೇಂದ್ರ ಮೋದಿ ನುಗ್ಗಿದ ಮೇಲೆ ಕರ್ನಾಟಕದ ಚಿತ್ರ ಬದಲಾಗಬಹುದಾ? ಎಂಬ ಎಚ್ಚರಿಕೆ ಕಾಣುತ್ತಿದೆ.
ಅಂದಹಾಗೆ, ಇವತ್ತಿನ ಮಟ್ಟಿಗೆ ರಾಜ್ಯ ಕಾಂಗ್ರೆಸ್ ಮುಂಚೂಣಿಯಲ್ಲಿರುವುದು ನಿಜ. ಆದರೆ ಪ್ರಧಾನಿ ಮೋದಿ ಮತ್ತವರ ಪಡೆ ಕರ್ನಾಟಕಕ್ಕೆ ನುಗ್ಗಿದ ಮೇಲೆ ಪರಿಸ್ಥಿತಿ ಹೀಗೇ ಇರುತ್ತದೆ ಅಂತ ಹೇಳುವುದು ಗೆ? ಅನ್ನುವುದು ಅದರ ಯೋಚನೆ. ಹಿಮಾಚಲ ಪ್ರದೇಶ, ಗುಜರಾತ್ ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಮೋದಿ ಟೀಮ್ ಕರ್ನಾಟಕಕ್ಕೆ ಬಂದರೆ ಬಿಜೆಪಿಯ ಗ್ರಾಫ್ ಮೇಲೇರಬಹುದು ಮತ್ತು ಸ್ವಯಂಬಲದ ಮೇಲೆ ಬಿಜೆಪಿ ಅಧಿಕಾರ ಹಿಡಿಯದಿದ್ದರೂ ಅತಂತ್ರ ವಿಧಾನಸಭೆ ರೂಪು ಗೊಳ್ಳಲು ಕಾರಣವಾಗಬಹುದು ಎಂಬುದು ಈ ಬಳಗದ ಆತಂಕ.
ಮುಖ್ಯವಾಗಿ, ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಕರ್ನಾಟಕದ ಸೇನಾನೆಲೆ ಎಷ್ಟು ಮುಖ್ಯವೆಂಬುದು ಮೋದಿಪಡೆಗೆ ಗೊತ್ತಿದೆ. ಹೇಗಾದರೂ ಮಾಡಿ ಈ ಸೇನಾನೆಲೆಯ ಮೇಲಿನ ಹಿಡಿತ ತಪ್ಪದಂತೆ ನೋಡಿಕೊಳ್ಳಬೇಕೆಂಬ ಹಠವೂ ಇದೆ. ಹೀಗಾಗಿ ಅದು ಯಾವ ಪ್ರಯೋಗಕ್ಕಾದರೂ ಮುಂದಾಗಬಹುದು. ಮತ್ತದರ ಪರಿಣಾಮವಾಗಿ ರಾಜ್ಯ ಕಾಂಗ್ರೆಸ್‌ನ ಶಸ್ತ್ರಾಗಾರಗಳನ್ನು ಗುರಿಯಾಗಿಸಿ ಮೋದಿಗ್ಯಾಂಗು ದಾಳಿ ಮಾಡಬಹುದು ಎಂಬುದು ಈ ಆತಂಕದ ಹಿಂದಿರುವ ಎಚ್ಚರ.
ಹೀಗೆ ಸಿದ್ದರಾಮಯ್ಯ ಬಳಗದ ವಿಶ್ವಾಸ ಮತ್ತು ಡಿಕೆಶಿ ಬಳಗದ ಆತಂಕಗಳ ನಡುವೆಯೇ ಕಳೆದ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋಲುಂಡ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಗಮನ ಕೇಂದ್ರೀಕರಿಸಿದೆ. ಅದೇ ರೀತಿ, ಕಳೆದ ಬಾರಿ ಗೆದ್ದಿರುವ ಕ್ಷೇತ್ರಗಳ ಪೈಕಿ ಯಾವೆಲ್ಲವು ದುರ್ಬಲವಾಗಿವೆ? ಅಲ್ಪ ಅಂತರದಲ್ಲಿ ಕಳೆದುಕೊಂಡ ಕ್ಷೇತ್ರಗಳ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳ ಬೇಕು? ಅನ್ನುವುದು ಕಾಂಗ್ರೆಸ್‌ನ ಸದ್ಯದ ಯೋಚನೆ.
ಇಂಥ ಯೋಚನೆಗಳ ನಡುವೆಯೂ ಕೆಲ ಬೆಳವಣಿಗೆಗಳು ಕಾಂಗ್ರೆಸ್‌ಗೆ ನೆಮ್ಮದಿ ನೀಡುತ್ತಿವೆ. ಬಿಜೆಪಿ ಪಾಳಯದಿಂದ ಕುರುಬರು ಮೂಲೋತ್ಪಾಟನೆಯಾಗುತ್ತಿರುವುದು ಅದರಲ್ಲೊಂದು. ಕುರುಬ ಮತಗಳು ಸಿದ್ದರಾಮಯ್ಯ ಅವರ ಜತೆ ಸಾಲಿ ಡ್ಡಾಗಿರುವುದು ನಿಜವಾದರೂ, ಈಶ್ವರಪ್ಪ ಮತ್ತಿತರ ಕುರುಬ ನಾಯಕರ ಕಾರಣದಿಂದಾಗಿ ಒಂದಷ್ಟು ಮತಗಳು ಬಿಜೆಪಿಯ ಜತೆಗಿದ್ದವು. ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳಿಂದಾಗಿ ಬಿಜೆಪಿಯಲ್ಲಿ ಕುರುಬರ ಪಾಳೇಪಟ್ಟು ದುರ್ಬಲ ವಾಗಿದೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮಂತ್ರಿಪದವಿಗೆ ರಾಜೀನಾಮೆ ನೀಡಿದ ಕೆ.ಎಸ್. ಈಶ್ವರಪ್ಪ ದೋಷಮುಕ್ತ ರಾದರೂ, ಅವರಿಗೆ ಮರಳಿ ಮಂತ್ರಿಗಿರಿ ಕೊಡುವ ವಿಷಯದಲ್ಲಿ ಬಿಜೆಪಿ ಉತ್ಸುಕತೆ ತೋರುತ್ತಿಲ್ಲ. 2019ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಬೀಳಿಸಿ ಬಿಜೆಪಿಯನ್ನು ಗದ್ದುಗೆಯಲ್ಲಿ ಕೂರಿಸಲು ಯಡಿಯೂರಪ್ಪ ಹೊರಟಾಗ ಸಾಥ್ ಕೊಟ್ಟ ಎಚ್. ವಿಶ್ವನಾಥ್ ಮತ್ತು ಆರ್. ಶಂಕರ್‌ರನ್ನು ಅದಾಗಲೇ ಸೈಡ್‌ಲೈನ್ ಮಾಡಲಾಗಿದೆ.
ಇದರಿಂದ ಕ್ರುದ್ಧರಾದ ವಿಶ್ವನಾಥ್ ಕಾಂಗ್ರೆಸ್ ಗೂಡಿಗೆ ಮರಳಿದರೂ ಅಚ್ಚರಿಯಿಲ್ಲ ಎಂಬ ಪರಿಸ್ಥಿತಿಯಿದ್ದರೆ, ಶಂಕರ್ ತಮಗಾದ
ವಚನದ್ರೋಹದ ಬಗ್ಗೆ ಬೊಮ್ಮಾಯಿಯವರ ಬಳಿ ಧ್ವನಿ ಎತ್ತುತ್ತಲೇ ಇದ್ದಾರೆ. ಈ ಮಧ್ಯೆ, ವರ್ಷಾಂತ್ಯದ ವೇಳೆಗೆ ಬೆಳಗಾವಿ ಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದ ವೇಳೆ ಕುರುಬರ ಪಾಳಯ ಮತ್ತೊಂದು ಹೊಡೆತ ತಿನ್ನಲಿದೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಹುದ್ದೆಯಿಂದ ಕುರುಬ ನಾಯಕ ರಘುನಾಥರಾವ್ ಮಲ್ಕಾಪುರೆ ಅವರನ್ನು ಕೆಳಗಿಳಿಸಲು ಬಿಜೆಪಿ ಯೋಚಿಸಿದೆ.
ಜೆಡಿಎಸ್ ಪಾಳಯದಿಂದ ಬಸವರಾಜ ಹೊರಟ್ಟಿ ಅವರನ್ನು ಕರೆತರುವಾಗ, ‘ನಿಮ್ಮನ್ನು ಪರಿಷತ್ ಸಭಾಪತಿಯ ಹುದ್ದೆಯಲ್ಲಿ ಕೂರಿಸುತ್ತೇವೆ’ ಅಂತ ಯಡಿಯೂರಪ್ಪ, ಬೊಮ್ಮಾಯಿ, ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಷಿ ಭರವಸೆ ನೀಡಿದ್ದರು. ಅದರಂತೆ, ಸೆಪ್ಟೆಂಬರ್ ಅಧಿವೇಶನದಲ್ಲೇ ಹೊರಟ್ಟಿಯವರ ಪಟ್ಟಾಭಿಷೇಕ ಪೂರ್ಣವಾಗಬೇಕಿತ್ತು. ಆದರೆ ಕೆಲಕಾಲ ಕಾಯು ವುದು ಒಳ್ಳೆಯದು ಎಂಬ ಸೂಚನೆ ಬಂದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಆದರೆ ಡಿಸೆಂಬರ್‌ನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಲ್ಕಾಪುರೆ ಅವರನ್ನು ಕೆಳಗಿಳಿಸಿ, ಬಸವರಾಜ ಹೊರಟ್ಟಿಯವರ ನೆತ್ತಿಯ ಮೇಲೆ ಸಭಾಪತಿ ಕಿರೀಟ ಇಡುವ ತೀರ್ಮಾನವಾಗಿದೆ.
ಅಂದಹಾಗೆ, ಮಲ್ಕಾಪುರೆ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟಿಸಲು ದುಡಿದವರು. ಆದರೆ ಅವರು ಅನಂತ ಕುಮಾರ್ ಕ್ಯಾಂಪಿನಿಂದ ಬಂದವರಾದುದರಿಂದ, ವಿಧಾನ ಪರಿಷತ್ ಸಭಾಪತಿ ಹುದ್ದೆಯಲ್ಲಿ ಅವರನ್ನು ಉಳಿಸುವ ಆಸಕ್ತಿ ಬಿಜೆಪಿಯ ಇಬ್ಬಣಗಳಲ್ಲೂ ಇಲ್ಲ. ಅತ್ತ ಯಡಿಯೂರಪ್ಪ, ಇತ್ತ ಬಿ.ಎಲ್. ಸಂತೋಷ್ ಅವರಿಗೆ ಬೇಕಿಲ್ಲದ ಮಲ್ಕಾಪುರೆ ಈಗ ಅನಿವಾರ್ಯವಾಗಿ ಅಧಿಕಾರ ತ್ಯಜಿಸಲೇಬೇಕಾದ ಸ್ಥಿತಿ ಎದುರಾಗಿದೆ.
ಪರಿಣಾಮ? ಬಿಜೆಪಿಯಲ್ಲಿ ಕುರುಬರಿಗೆ ಉಳಿಗಾಲವಿಲ್ಲ ಎಂಬ ಮೆಸೇಜು ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ಬೆಳವಣಿಗೆ ಸಹಜವಾಗಿ ಸಿದ್ದರಾಮಯ್ಯ ಅವರ, ಆ ಮೂಲಕ ಕಾಂಗ್ರೆಸ್ ಪಕ್ಷದ ಬಲವನ್ನು ಹೆಚ್ಚಿಸಲಿದೆ ಎಂಬುದು ಸದ್ಯದ ಲೆಕ್ಕಾಚಾರ.
ಮತ್ತೊಂದೆಡೆ, ಕರ್ನಾಟಕದ ಪರಿಶಿಷ್ಟ ಪಂಗಡದ ಮೇಲೆ ಪ್ರಭಾವ ಬೀರಲು ಮಾಜಿ ಸಂಸದ, ನಟ ಶಶಿಕುಮಾರ್
ರನ್ನು ಕಾಂಗ್ರೆಸ್ ಸೈನ್ಯದ ಮುಂಚೂಣಿಯಲ್ಲಿ ನಿಲ್ಲಿಸುವ ಯತ್ನ ಆರಂಭವಾಗಿದೆ.
ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ ನಿರ್ಧಾರ ಬಿಜೆಪಿಗೆ ಒಂದಷ್ಟು ಲಾಭ ತರುವುದು ನಿಶ್ಚಿತ. ಪರಿಶಿಷ್ಟ ಜಾತಿಯ ವಿಷಯ ಬಂದಾಗ, ಇಂಥ ಲಾಭ-ನಷ್ಟದ ಲೆಕ್ಕಾಚಾರ ಸರಳವಲ್ಲದಿರಬಹುದು; ಆದರೆ ಪರಿಶಿಷ್ಟ ಪಂಗಡದ
ವಿಷಯದಲ್ಲಿ ಬಿಜೆಪಿಗೆ ಹೆಚ್ಚು ಬಲ ದೊರೆಯುವುದು ಗ್ಯಾರಂಟಿ. ಈ ಬಲವನ್ನು ತಗ್ಗಿಸಲು ಏನುಮಾಡಬೇಕು ಅನ್ನುವ ಚಿಂತನೆ ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿದೆ.
ಮೊದಲನೆಯದಾಗಿ ಶಶಿಕುಮಾರ್‌ರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಣಕ್ಕಿಳಿಸಿದರೆ ಜಿ.ಟಿ. ದೇವೇಗೌಡರನ್ನು ಅಲುಗಾಡಿಸ ಬಹುದು, ಆ ಮೂಲಕ ಮೈಸೂರು ಭಾಗದಲ್ಲಿ ನಾಯಕ ಮತಗಳು ಕಾಂಗ್ರೆಸ್ ಜತೆ ಸಾಲಿಡ್ಡಾಗಿ ನಿಲ್ಲುವಂತೆ ಮಾಡಬಹುದು ಎಂಬ ಯೋಚನೆ ಕಾಂಗ್ರೆಸ್ ಪಾಳಯ ದಲ್ಲಿ ಗಿರಕಿಯಾಡುತ್ತಿದೆ. ಚಿತ್ರದುರ್ಗದ ಮಾಜಿ ಸಂಸದ ಶಶಿಕುಮಾರ್ ಕಳೆದ ಚುನಾವಣೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದರು.
ಆದರೆ ಶಶಿಕುಮಾರ್ ಶಕ್ತಿಕೇಂದ್ರವಾಗಿಬಿಡಬಹುದು ಎಂಬ ಮುನ್ನೆಚ್ಚರಿಕೆಯಿಂದ ಕೆಲ ನಾಯಕರು ಅವರ ಕಾಲಿಗೆ ಹಗ್ಗ
ಕಟ್ಟಿದರು. ಈ ಬಾರಿ ಕಾಂಗ್ರೆಸ್ ಪಾಳಯಕ್ಕೆ ನಾಯಕ ಮತಗಳ ಕೊಡುಗೆ ಸಿಗಬೇಕೆಂದರೆ ಶಶಿಕುಮಾರ್‌ರಿಗೆ ಆದ್ಯತೆ ನೀಡುವುದು ಸೂಕ್ತ ಎಂಬ ಮಾತು ಕೇಳಿಬರುತ್ತಿದೆ. ಆದರೆ ಚಾಮುಂಡೇಶ್ವರಿ ಕ್ಷೇತ್ರವೇ ಆಗಲಿ, ಮೊಳಕಾಲ್ಮೂರು, ಚಳ್ಳಕೆರೆ ಕ್ಷೇತ್ರಗಳೇ ಆಗಲಿ ಆಟಕ್ಕೆ ವೇಗ ದಕ್ಕ ಬೇಕೆಂದರೆ ತ್ವರಿತವಾಗಿ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಫೈನಲ್ ಆಗಬೇಕು ಎಂಬುದು ಇದೇ ‘ಥಿಂಕ್‌ಟ್ಯಾಂಕ್’ನ ಮಾತು.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ವಿಷಯದಲ್ಲಿ ಒಂದು ತೀರ್ಮಾನಕ್ಕೆ ಬಂದರೆ, ಶಶಿಕುಮಾರ್ ರನ್ನು ಮೇಲೆಬ್ಬಿಸಿ ಕೂರಿಸಿದರೆ ೪೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿರುವ ನಾಯಕ ಸಮುದಾಯದ ಮತಗಳ ಮೇಲೆ ಪ್ರಭಾವ ಬೀರಬಹುದು. ಈ ಮಧ್ಯೆ, ಮರಳಿ ಮಂತ್ರಿಯಾಗುವ ಕಸರತ್ತು ಯಶಸ್ವಿಯಾಗದಿರುವುದರಿಂದ ಕೋಪಗೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕಾಂಗ್ರೆಸ್‌ಗೆ ಮರಳುವ ಮಾತಾಡುತ್ತಿದ್ದಾರಂತೆ.
ಹೀಗೆ ಶಶಿಕುಮಾರ್‌ರಿಗೆ ಪ್ರಾತಿನಿಧ್ಯ ಸಿಕ್ಕರೆ, ಜಾರಕಿಹೊಳಿ ಕೈಪಾಳಯಕ್ಕೆ ಮರಳಿದರೆ ಬಿಜೆಪಿಗೆ ಒಂದು ಮಟ್ಟದ ಹೊಡೆತ ನೀಡಬಹುದು ಎಂಬುದು ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಚರ್ಚೆಯ ಮುಖ್ಯಾಂಶ. ಈ ಮಧ್ಯೆ, ಮುಂದಿನ ಚುನಾವಣೆ ಗೆ ಹೋಗುವಾಗ ಜನತಾ ಪರಿವಾರದ ಮಾದರಿಯ ಸೈನ್ಯ ರಚಿಸಲು ಕಾಂಗ್ರೆಸ್ ಯೋಚಿಸುತ್ತಿದೆ. ಅರ್ಥಾತ್, ಎಲ್ಲ ಸಮುದಾಯಗಳ ಪ್ರಮುಖ ನಾಯಕರನ್ನು ಮುಂಚೂಣಿಯಲ್ಲಿಟ್ಟುಕೊಂಡು ಜನರ ಮುಂದೆ ಹೋಗುವುದು. ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ.ಎಚ್. ಪಟೇಲ್, ಎಸ್.ಆರ್. ಬೊಮ್ಮಾಯಿ, ಡಿ. ಮಂಜು ನಾಥ್, ಸಿ.ಎಂ. ಇಬ್ರಾಹಿಂ ಸೇರಿದಂತೆ ಹಲವು ನಾಯಕರನ್ನು ಸೈನ್ಯದ ಮುಂಚೂಣಿಯಲ್ಲಿಟ್ಟುಕೊಳ್ಳುತ್ತಿದ್ದ ಜನತಾ ಪರಿವಾರ ಹಲವು ಬಾರಿ ಯಶಸ್ವಿಯಾಗಿತ್ತು.
ಈ ಸಲ ಈ ಮಾದರಿಯನ್ನೇ ಅನುಸರಿಸುವ ಲೆಕ್ಕಾಚಾರದಲ್ಲಿದೆ ಕಾಂಗ್ರೆಸ್. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್ ರಂಥ ಪ್ರಮುಖ ನಾಯಕರ ಪಡೆ ಮುಂಚೂಣಿಯಲ್ಲಿದ್ದರೆ ಮತದಾ ರರನ್ನು ಪ್ರಭಾವಿಸಬಹುದು ಎಂಬುದು ಈ ಲೆಕ್ಕಾಚಾರದ ಭಾಗ. ಆದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ಸೈನ್ಯದ ಮುಂದೆ ಇರುವವರು ಯಾರು? ಯಡಿಯೂರಪ್ಪ ಫಂಟ್‌ಲೈನ್‌ನಲ್ಲಿದ್ದರೂ ಅವರೀಗ ಬಿಜೆಪಿ ಪಾಳಯದಲ್ಲಿ ಶಕ್ತಿ ಕಳೆದುಕೊಳ್ಳು ತ್ತಿರುವ ಹುಲಿ. ಉಳಿದಂತೆ ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಿಂತಿರುತ್ತಾರೆ. ಆದರಿದು ಹೇಗೆ ನೋಡಿದರೂ ಕಾಂಗ್ರೆಸ್ ಸೈನ್ಯದ ಅತಿರಥ-ಮಹಾರಥರಿಗೆ ಸಮನಲ್ಲ. ಹೀಗಾಗಿ ಬಿಜೆಪಿ ಸೈನ್ಯವು ಪ್ರಧಾನಿ ಮೋದಿ ಅವರ ಟೀಮಿನ ಪ್ರಮುಖರಿಗೆ ಫ್ರಂಟ್‌ಲೈನ್ ಬಿಟ್ಟುಕೊಟ್ಟು ಹಿಂದೆ ಸರಿಯಬೇಕು. ಹಾಗಾದಾಗ ಸಹಜವಾಗಿಯೇ ಅದರ ಆತ್ಮವಿಶ್ವಾಸ ಕುಗ್ಗುತ್ತದೆ ಮತ್ತು ತಮಗೆ ಗಣನೀಯ ಲಾಭವಾಗುತ್ತದೆ ಎಂಬುದು ಕಾಂಗ್ರೆಸ್‌ನ ಕೆಲ ನಾಯಕರ ಯೋಚನೆ.
ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುವುದೋ ಗೊತ್ತಿಲ್ಲ. ಆದರೆ ಚುನಾವಣೆಗೆ ಸೈನ್ಯವನ್ನು ಸಿದ್ಧಪಡಿಸುವಾಗ ಇಂಥ ಲೆಕ್ಕಾಚಾರಗಳು ಅನಿವಾರ್ಯ ಎಂಬುದು ಕಾಂಗ್ರೆಸ್‌ನ ಯೋಚನೆ.