Thursday, 12th December 2024

ಬಾಂಬೆ ಜೊತೆಗಿನ ಬೆಸುಗೆಗೊಂದಷ್ಟು ಕವನಪ್ರೇಮ

ಸಂಡೆಸಮಯ

ಸೌರಭ ರಾವ್, ಕವಯಿತ್ರಿ, ಬರಹಗಾರ್ತಿ

ಬಾಂಬೆ ಅದೆಷ್ಟು ಬರಹಗಾರರನ್ನು, ಕವಿಗಳನ್ನು ಒಂದು ಸಮ್ಮೋಹನಕ್ಕೆ ತೆರೆದುಬಿಟ್ಟಿದೆ ಎಂದು ಯೋಚಿಸಿದರೆ ಅಚ್ಚರಿ ಯಾಗುತ್ತದೆ. ಯಾವ ಕೆಲಸದ ಒತ್ತಡವಿಲ್ಲದೇ ಆ ಊರಿನ ಬಹುರೂಪಿ ಸೆಳೆತಗಳ ಪ್ರಾಮಾಣಿಕ ಪರಿಚಯ ಮಾಡಿಕೊಳ್ಳುವುದಕ್ಕೆ ಸಮಯ ಮೀಸಲಿಟ್ಟರೆ ಮಾತ್ರ ಹಾಗೆ ಕಾಡುವುದೇನೋ. ಹಾಗೆ ನೋಡಿದರೆ ಪ್ರತಿಯೊಂದು ಊರೂ, ಶಹರವೂ ನಮ್ಮಲ್ಲಿ ಹುಟ್ಟಿಸುವ ಅಲೆಗಳು ಅನೇಕ, ಭಿನ್ನ. ಆ ಸೆಳೆತಗಳ ಸಮುದ್ರಗಳು ಒಬ್ಬೊಬ್ಬರಲ್ಲಿ ಒಂದೊಂದು ಆಳ ಕಂಡುಕೊಳ್ಳುತ್ತದೇನೋ.

ಬಾಂಬೆಯಲ್ಲಿ ಅಲೆದ ಎರಡು ವಾರಗಳ ಪರಿಣಾಮ ಈಗ ವ್ಯಕ್ತವಾಗುತ್ತಿದೆ, ಕವಿತೆಗಳಾಗಿ. ಆ ಮುಗಿಯದ ಬೆರಗು, ಈ ವಾರಕ್ಕೆ:
1. ನಾವೂ ಜನವೇ ಆದ ಈ ದೊಡ್ಡ ದೊಡ್ಡ ಶಹರಗಳಲ್ಲಿ ಅಬ್ಬಾ, ಇಷ್ಟು ಜನ! ಎಂದು ಉದ್ಗರಿಸುವಂತಿಲ್ಲ. ಪರಿಚಯವೇ ಇರದ ಜನರೊಂದಿಗೆ ಸಿಗುವ ವಿಚಿತ್ರ ಆತ್ಮೀಯತೆಯ ಸಾಂತ್ವನ. ಹಾಗಂದುಕೊಳ್ಳುತ್ತಿರುವಾಗಲೇ ಯಾರೋ ತಡವರಿಸಿದಂತೆ ನಟಿಸಿ ತೋಳಿನಿಂದ ಎದೆಯ ಸವರಿ ನಡೆದುಬಿಡುತ್ತಾರೆ. ಅನಾಮಿಕತೆಯ ಬೇರೆಬೇರೆ ಮುಖಗಳು ನಮ್ಮವೇ ಅಂತರಂಗದ ವಿವಿಧ ಮುಖ ಗಳಂತೆ ಸುರುಳಿ ಬಿಚ್ಚಿಕೊಳ್ಳುತ್ತವೆ. ಯಾವುದನ್ನು ಒಪ್ಪಬೇಕು, ಯಾವುದನ್ನು ಧಿಕ್ಕರಿಸಬೇಕೋ ತಿಳಿಯದೇ ಕಾಲಾ ಘೋಡಾದ
ರಸ್ತೆಗಳ ಸುತ್ತುತ್ತೇನೆ.

ಜೆಹಾಂಗೀರ್ ಆರ್ಟ್ ಗ್ಯಾಲರಿಯ ಒಳಗಿರುವ ಕಲೆ, ಕೌಶಲವಿರಲಿ, ಹೊರಗೆ ತಮ್ಮ ಪಾಡಿಗೆ ತಾವು ಕೂತು ಅಲ್ಲೇ ತಮ್ಮದೊಂದು ಮೌನ ಪ್ರಪಂಚ ಸೃಷ್ಟಿಸಿಕೊಂಡು ಬಿಡುವ ಕಲೆಗಾರರೇನೂ ಕಮ್ಮಿ ಇಲ್ಲ. ಅವರ ಕೈಯಲ್ಲಿನ ಕುಂಚಕ್ಕಿರುವ ಖಚಿತತೆ ನನ್ನ ಹೆಜ್ಜೆಗಳಿಗಿಲ್ಲ.

ನಾ ಸವೆಸುತ್ತಿರುವ ಈ ತಿರುವು, ದಾರಿಗಳಿಗೇಕೋ ದಯವಿಲ್ಲ. ನಿರ್ಲಿಪ್ತ, ಉದಾಸ ನಿಟ್ಟುಸಿರು ಅವುಗಳದ್ದೂ, ನನ್ನದೂ
ಯಾರ ಉಸಿರಿಗೂ ತಾಕದೇ ಗಾಳಿಯಲ್ಲಿ ಕರಗಿಹೋದದ್ದು. ನನ್ನ ಮತ್ತು ಈ ಶಹರದ ನಡುವೆ ಹೀಗೊಂದು ವಿಲಕ್ಷಣ ಸಂಬಂಧ ಅದಕ್ಕೆ ಅಗತ್ಯವಿಲ್ಲದ್ದು. ನನಗೋ ಪದೇ ಪದೆ ಕಾಡಿ ಕೆಣಕಿ ಕರೆಯಿಸಿಕೊಳ್ಳುವಂಥದ್ದು.

2. ಅಯ್ಯೋ ಚಂದ್ರ ಸರಿಯಾಗಿ ಕಾಣಿಸುತ್ತಿಲ್ಲ. ಕುರ್ಲಾದ ಈ ಎತ್ತರೆತ್ತರ ಝಗಮಗ ಸಂತೆಮಳಿಗೆಗಳು ಗಗನಚುಂಬಿ ಕಟ್ಟಡಗಳ ಮಧ್ಯ ಇಣುಕಿ ಮರೆಯಾಗುತ್ತಾನೆ.

ನಾ ಕುಳಿತ ಕಾಲಾ – ಪೀಲಾ ಟ್ಯಾಕ್ಸಿಯ ವೇಗಕ್ಕೆ ವಿಲೋಮವಾಗಿ ಇವನ ದರ್ಶನದ ಸಮಯ ತಿರುಪತಿಯಂತೆ ಸರದಿಯಲ್ಲಿ ಕಾಲು ಸೋಲುವವರೆಗೂ ನಿಲ್ಲುವುದೊಂದಿಲ್ಲವಷ್ಟೇ. ಇವನ ದರ್ಶನಭಾಗ್ಯವೂ ಇವನದ್ದೇ ರೀತಿಯಲ್ಲಿ ಈ ಕ್ಷಣಕ್ಕೆ ತುಟ್ಟಿಯಾಗಿ ಬಿಟ್ಟಿದೆ.

ಇನ್ನೇನು ಸ್ವಲ್ಪವೇ ದೂರದಲ್ಲಿ ಊರು ವೇಷ ಬದಲಿಸಿಬಿಡುತ್ತದೆ. ಅಂಧೇರಿಯಲ್ಲಿ ನಾನಿರುವ ಹೋಟೆಲ್ಲಿನ ಸುತ್ತ ಭವನಗಳಿಲ್ಲ, ಚೀರುವ ದೀಪಗಳಿಲ್ಲ, ಸಾಲು ಸಾಲು ಸಂಜೆ ದೀಪಗಳ ನವಿರುಹೊನ್ನ ಬೆಳಕಲ್ಲಿ ಆ ದಾರಿಗಳ ಇಕ್ಕಟ್ಟು ಹೇಗೋ ಸಹನೀಯ ವಾಗುತ್ತದೆ. ನೆರಳುಗಳು ಮತ್ತೂ ಆಪ್ತವಾಗಿಬಿಡುತ್ತವೆ.

ಹಾಗೇ ಬೀದಿಗಳ ಮೇಲೆ ಬಿದ್ದ ಕಸದ ನಗ್ನ ಅಸಭ್ಯತೆಯೂ ತೆರೆದ ಚರಂಡಿಗಳು ಮೂಗಿಗೆ ಬೆಳಗಿನಷ್ಟೇ ಕಾಟಕೊಟ್ಟರೂ, ಕಣ್ಣಿಗೆ ಕಾಲುವೆಗಳಂತೆ ಕಂಡುಬಿಡುತ್ತವೆ. ನಮ್ಮ ಅವ್ಯವಸ್ಥೆಯ ಗೋಳಿಗೆ, ತಮ್ಮದಲ್ಲದ ತಪ್ಪಿಗೆ ಕವಿತೆಯ ಭಾಗವಾಗಿ ತಮ್ಮವೇ
ಸ್ವಾಅನುಕಂಪದಿಂದ ಮುಕ್ತವಾಗುತ್ತವೆ.

ಎಷ್ಟೇ ಆದರೂ, ಈ ಶತಮಾನದಲ್ಲೂ ಕೆಲವರು ಸಾಕುವ ಯೋಗ್ಯತೆಯಿಲ್ಲದೇ ಮಕ್ಕಳನ್ನು ಹುಟ್ಟಿಸಿ ಕಸಕ್ಕೆ ಹಾಕುವ ಪ್ರಾಣಿವರ್ಗ ನಾವು ನಮ್ಮ ಚರಂಡಿಗಳೆಷ್ಟರವು? ಹೋಟೆಲ್ಲಿನ ತಾರಸಿಗೆ ಹೋದರೆ ಚಂದ್ರ ಇಡಿಯಾಗಿ ಕಂಡಾನು ನಮ್ಮ ಬದುಕಿನ ವ್ಯತಿರಿಕ್ತ ವಿವರಗಳ ದೂರದಿಂದ ನೋಡಿ ನಕ್ಕಾನು.

ನಗುತ್ತಲೇ, ಸವೆಯುತ್ತಲೇ, ಮತ್ತೆ ಮೈ-ಕೈ ತುಂಬಿಕೊಳ್ಳುತ್ತಲೇ ಅವನಿಗಾಗಿ ಕಾತರಿಸುವ ಎಲ್ಲರ ಜೊತೆಗೂ ಇದ್ದಾನು ನನ್ನದಲ್ಲದ ಊರಿನಲ್ಲೂ ನನ್ನವನಾಗಿಬಿಟ್ಟಾನು

3.) ಅಂತರಂಗವನೆಲ್ಲಾ ತಡಕಿ ಕಿಲುಬುಗಟ್ಟಿದ ಮೂಲೆಗಳನ್ನೆೆಲ್ಲ ಕೆದಕಿ ಎಚ್ಚರಿಸಿಬಿಡುವ ನಿನ್ನ ನಿರಂತರ ಎಚ್ಚರಕ್ಕೆ
ಬಂದವರನ್ನೆಲ್ಲಾ ಸಲಹುವೆಯಾದರೂ ಆಗಾಗ ಅನಾಥರಂತೆ ಕಾಡಿಬಿಡುವ ಆ ಅತ್ಯಂತ ಅನಾಮಿಕ ಕ್ಷಣಗಳಿಗೆ ಅಂಥ ಕ್ಷಣಗಳಲ್ಲೇ ಎಲ್ಲರ ಅನಾಮಿಕತೆಯಲ್ಲೇ  ನಂಟು ಬೆಸೆದುಬಿಡುವ ನಿನ್ನ ನಿರ್ವಿಕಾರ ಮೋಡಿಗೊಂದು ನನ್ನ ಪುಟ್ಟ ಅಸಹಾಯಕ ಹುಸಿಮುನಿಸಿನ ಧಿಕ್ಕಾರ

4.) ಮರೀನ್ ಡ್ರೈವ್, ನಾರಿಮನ್ ಪಾಯಿಂಟ್ ಸೊಕ್ಕಿದಲೆಗಳ ಅಬ್ಬರವಿಲ್ಲ. ಇಲ್ಲಿ ಕಡಲತೀರ ಬಾಗುತ್ತ ಯಾವಾಗಲೂ ಅರ್ಧಚಂದ್ರನನ್ನು ನೆನಪಿಸುತ್ತದೆ. ಬಾಲ್ಯದಲ್ಲಿ ನಾವು ಬರೆದ ಯಾವ ಚಿತ್ರದಲ್ಲೂ ಚಂದ್ರ ಪೂರ್ತಿಯಾಗಲೇ ಇಲ್ಲ ಮುಗಿಯದ ನಗು, ಕೇಕೆ, ಮಾತು ಮಾತು ಮಾತಿನ ಮಧ್ಯೆೆ ಅಲ್ಲಲ್ಲಿ ನನ್ನಂತೆ ಒಂಟಿ ಕೂತು ಸಮುದ್ರದ ಮೆಲುದನಿಗೆ ಕಿವಿಯಾಗುತ್ತಿರುವ ಕೆಲವು ಜೀವಗಳೊಂದಿಗೆ ವಿಚಿತ್ರ ಸಾಮೂಹಿಕ ಏಕಾಂತ ಜಗತ್ತು ಬೇಕು, ಏಕಾಂತಕ್ಕೂ ಏಕತಾನತೆ ಬರದಂತೆ ತಡೆಯಲು ಏಕಾಂತ ಒಂಟಿತನದ ಗಡಿಯಲ್ಲಿ ಮುಗ್ಗರಿಸದಿರಲು ಈ ಸಮುದ್ರ – ಆಗಸದ ನಡುವಿನ ತೆರವಿನಲ್ಲೇಕಿಂಥ ಸಮ್ಮೋಹನ ಗ್ರಹಿಕೆಗೆ ನಿಲುಕ ದುದೇ ಅರಿವಿಗೆ ದಕ್ಕಿದ್ದಕ್ಕಿಂತ ಸತ್ಯವೆನಿಸಿಬಿಡುವ ಈ ಊರಿನ ಅನಾಮಿಕತೆಯಲ್ಲಿ ಅನಾಥರಾಗಲು ಬಿಡದೇ ಮುಕ್ತತೆ ತರುವ ಈ  ಸಮುದ್ರದ ಸಮ್ಮೋಹನ ಊರ ಗದ್ದಲಕ್ಕೆ, ಅದರ ಥಳುಕಿಗೆ ಬೆನ್ನು ಹಾಕಿ ದೃಷ್ಟಿಯ ನೇರ ನೆಟ್ಟರೆ ಸಾಕು ಇದರ ಬಿಸಿಗಾಳಿ ಉಸಿರಲ್ಲಿ ಬೆರೆತು ಆ ತೆರವಿನಲ್ಲಿ ಮಾತೇ ಇಲ್ಲದೆ ತೆರೆದುಕೊಂಡ ಬೆಸುಗೆ ಕಾಡಿನ ಊರುಗಳ, ಕೆರೆ – ಬೆಟ್ಟಗಳ ಊರುಗಳ ಹಿಂದೆ ಹಾಕಿ ಈ ಸಾಗರತೀರಕ್ಕೆೆ ಬಂದು ನಿಂತಿದ್ದೇನೆ.

ಊರೂರುಗಳಿಗೆ ನಾವು ಕೊಟ್ಟ ಹೆಸರುಗಳು ಹಾಗಿರಲಿ ದೂರ ದೂರ ದೂರ ಎಲ್ಲಿಯೂ ಸೇರದ ಅಲೆಮಾರಿತನಕ್ಕೂ ಸ್ಥಿರತೆ ತಂದುಕೊಟ್ಟ ನೆಲೆಯಿಲ್ಲದ ಎಲ್ಲರಿಗೂ ಕಾಲಡಿಯ ಇಡೀ ನೆಲವೇ ತವರಾಗಿಬಿಡುವ ಭೂಮಿಯ ಮೇಲಿನ ಅದಮ್ಯ ಪ್ರೀತಿಯ ಬಲಪಡಿಸಿದ, ಕಣ್ತುಂಬಿ ಬರುವ ಹಾಗೆ ಕಾಡಿದ ಸಾಗರತೀರವಿದು ಕಣ್ಣ ಮುಂದೆ ನೀರು, ಕ್ಷಿತಿಜದಲ್ಲಿ ನೀರು ಜೀವ, ರಕ್ತ ನೀರು ಮತ್ತೆಲ್ಲ ನೀರು ನೀರು ನೀರು