ಕಳಕಳಿ
ಬಸವರಾಜ ಶಿವಪ್ಪ ಗಿರಗಾಂ
ವಿಶ್ವದಲ್ಲಿಯೆ ಅತಿದೊಡ್ಡದಾದ ದುಬೈನ ಶಾರ್ಜಾ ಸಫಾರಿ ಪಾರ್ಕ್ ಅಂದಾಜು 2000 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಶಾರ್ಜಾ ಸಫಾರಿ ಪಾರ್ಕ್‌ಗಿಂತ ದೊಡ್ಡದಾದ ಸಫಾರಿ ಪಾರ್ಕ್ ಹರಿಯಾಣ ರಾಜ್ಯದ ಅರಾವಳಿ ಪರ್ವತ ಶ್ರೇಣಿಗಳಲ್ಲಿರುವ ಗುರುಗ್ರಾಮ ಸಮೀಪ ಅಂದಾಜು 10000 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ.
ಹರಿಯಾಣದ ಈ ಸಫಾರಿ ಪಾರ್ಕ್, ವಿಶ್ವದ ಅತಿದೊಡ್ಡ ಸಫಾರಿ ಪಾರ್ಕ್ ಆಗಲಿದೆ. ಇದನ್ನೂ ಮೀರಿದ ಸ್ಥಳವೊಂದು ನಮ್ಮಲ್ಲೇ ಇದೆ. 24000 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಯಡಹಳ್ಳಿ ರಾಷ್ಟ್ರೀಯ ಚಿಂಕಾರ ವನ್ಯಧಾಮಕ್ಕೆ ಸರಕಾರವು ಕೃಪೆ ತೋರಿ ದಲ್ಲಿ ಅಲ್ಲಲ್ಲಿ ವಿವಿಧ ಪ್ರಾಣಿಗಳ ಸ್ಥಳ ಮೀಸಲಿಟ್ಟು ವಿಶ್ವದ ಅತಿದೊಡ್ಡ ಸಫಾರಿ ಪಾರ್ಕ್ ಮಾಡಬಹುದು. ಇದರಿಂದ ಭಾರತದಲ್ಲಿ ಪ್ರವಾಸೋಧ್ಯಮಕ್ಕೆ ಉತ್ತೇಜನ ಹಾಗೂ ಲಕ್ಷಾಂತರ ಉದ್ಯೋಗ ಸೃಷ್ಟಿಸಿ ದಂತಾಗುತ್ತದೆ.
ಗ್ರಾಮೀಣ ಭಾಷೆಯಲ್ಲಿ ಚಿಗರಿ ಎಂದು ಕರೆಯುವ ಕಂದು ಬಣ್ಣದ ಶರೀರದಿಂದ ಮಿರಿಮಿರಿ ಮಿಂಚುವ ಜಿಂಕೆ ಜಾತಿಗೆ ಸೇರಿದ ಚಿಂಕಾರ (ಇಂಡಿಯನ್ ಗೆಝೆಲ್) ಪ್ರಾಣಿಯು ಭಾರತ ದಲ್ಲಿನ ಅಪರೂಪದ ಪ್ರಾಣಿ ಸಂಕುಲದಲ್ಲಿ ಒಂದಾಗಿದೆ.
ದೇಶದಲ್ಲಿರುವ ವೈವಿಧ್ಯಮಯ ಪ್ರಾಣಿ ಸಂಕುಲಗಳಲ್ಲಿ ಹಲವಾರು ಪ್ರಾಣಿಗಳು ಮಾನವನ ಘರ್ಷಣೆಯಿಂದ ಹಾಗೂ ಸೂಕ್ತ ಸೌಲಭ್ಯಗಳ ಕೊರತೆಯಿಂದ ಅಳಿನ ಅಂಚಿಗೆ ತಲುಪಿವೆ. ಇಂತಹ ಅಳಿವಿನ ಅಂಚಿನಲ್ಲಿರುವ ಚಿಂಕಾರ ವನ್ಯಜೀವಿಯನ್ನು ಸಾರ್ವಜನಿಕರು ಹಾಗೂ ಸರಕಾರವು ವಿಶೇಷ ಮುತವರ್ಜಿಯಿಂದ ಉಳಿಸಿಕೊಳ್ಳಬೇಕಾಗಿದೆ.
ಕೊಯುಮುತ್ತೂರ ಮೂಲದ ಪಕ್ಷಿ ವಿಜ್ಞಾನ ಹಾಗೂ ನೈಸರ್ಗಿಕ ಇತಿಹಾಸ ಸಂಸ್ಥೆಯ ಸಲೀಂ ಅಲಿ ಹಾಗೂ ಡಾ. ಎಚ್.ಎನ್.ಕುಮಾರ ಅವರು ಮೂರು ತಿಂಗಳುಗಳ ಕಾಲ 72 ಟಾವರ್‌ಗಳ ಮೂಲಕ ಈ ಯಡಹಳ್ಳಿ ವನ್ಯಧಾಮದಲ್ಲಿರುವ ಸಕಲ ಪ್ರಾಣಿ ಹಾಗೂ ಪಕ್ಷಿಗಳ ಚಲನ-ವಲನ ಹಾಗೂ ಜೀವನಕ್ರಮಗಳ ಕುರಿತು ಅಭ್ಯಸಿಸಿ ಅರಣ್ಯ ಇಲಾಖೆಗೆ ವರದಿ
ಸಲ್ಲಿಸಿದ್ದಾರೆ. ಈ ವರದಿಯನ್ವಯ ಚಿಂಕಾರ ಪ್ರಾಣಿ ಸಂಕುಲವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಹಾಗೂ ಅರಣ್ಯ ಇಲಾಖೆಯ ಶಿಫಾರಸ್ ಪ್ರಕಾರ ಕರ್ನಾಟಕ ಘನ ಸರಕಾರವು 2016ರಲ್ಲಿ ಈ ಪ್ರದೇಶವನ್ನು ಯಡಹಳ್ಳಿ ರ‍್ಟ್ರಾಯ ಚಿಂಕಾರ ವನ್ಯಧಾಮ ಎಂದು ಘೋಷಿಸಲಾಯಿತು.
ಇದು ರಾಜ್ಯದ ಮೊದಲ ಚಿಂಕಾರ ವನ್ಯಧಾಮವಾಗಿದ್ದು, ದೇಶದ ಎರಡನೆಯ ವನ್ಯಧಾಮವಾಗಿದೆ. ಈ ವನ್ಯಧಾಮವು ಬೀಳಗಿ ಹಾಗೂ ಮುಧೋಳ ವಲಯದ ಕೃಷ್ಣಾ ಹಾಗೂ ಘಟಪ್ರಭಾ ನದಿಗಳ ಮಧ್ಯದ 9636 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿ ಕೊಂಡಿದೆ. ಇಲ್ಲಿ ಚಿಂಕಾರ ಮಾತ್ರವಲ್ಲದೆ ಮೊಲ, ನರಿ, ಗುಳ್ಳೆ ನರಿ, ಕತ್ತೆಕಿರುಬ, ಮುಳ್ಳುಹಂದಿ, ಕಾಡು ಬೆಕ್ಕು, ಸ್ಯಾಂಡ್ಗ್ರೌಸ್, ಥೀಕ್ನೀ, ಇಂಡಿಯನ್ ಕರ್ಸರ್, ತೋಳ, ಕಾಡು ಹಂದಿ, ನಲು, ಬುರ್ಲಿ, ಬೆಳವು, ಕೌಜುಗ, ಸರೀಸೃಪ, ಜಲಚರ, ಸಸ್ತನಿ, ಬಣ್ಣದ-ಬಣ್ಣದ ಚಿಟ್ಟೆ, ಹದ್ದು, ಗುಬ್ಬಿ, ಗಿಳಿ, ಕಾಗೆ ಸೇರಿದಂತೆ ಹಲವಾರು ಪ್ರಾಣಿ-ಪಕ್ಷಿಗಳು ವಾಸವಾಗಿವೆ.
ಈ ಯಡಹಳ್ಳಿಯ ಅರಣ್ಯ ಪ್ರದೇಶವು ಕೇವಲ ವನ್ಯಜೀಗಳನ್ನಲ್ಲದೆ ಅನೇಕ ಎಲೆ ಉದುರುವ ಜಾತಿಯ ಕುರುಚಲು ಹಾಗೂ ವಿವಿಧ ಬಣ್ಣ-ಬಣ್ಣದ ಗಿಡಗಂಟಿಗಳನ್ನು ಹೊಂದಿರುವುದು ನೋಡುಗರ ಕಣ್ಣಿಗೆ ಮುದ ನೀಡುತ್ತಿದೆ. ಈ ವನ್ಯಧಾಮವು ಸುಮಾರು 100 ಚ.ಕಿ.ಮೀಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹಲವು ವೈವಿಧ್ಯಗಳಿಂದ ಕೂಡಿದೆ. ಇಲ್ಲಿರುವ ಶುಷ್ಕ ವಾತಾವರಣ ದಿಂದಾಗಿ ಸಸ್ಯಸಂಪತ್ತು ಅತ್ಯಂತ ವಿಶಿಷ್ಟ ರೂಪದಲ್ಲಿ ಬೆಳವಣಿಗೆಯನ್ನು ಹೊಂದಿದೆ.
ಭಾರತದ ಕೆಲವೇ ಸ್ಥಳಗಳಲ್ಲಿ ಬೆಳೆಯುವ ಗುಗ್ಗುಳ, ದಿಂಡಲ, ಮಶಿವಾಳ, ಇಪ್ಪೆ, ಸೊಯುಡ್ ಮುಂತಾದ ಅಪರೂಪದ ಪ್ರಭೇದಗಳ ಸಸ್ಯಕಾಶಿಯು ಈ ಅರಣ್ಯದಲ್ಲಿದೆ. ಇಂತಹ ವಿಶಿಷ್ಟ ಗುಣಗಳುಳ್ಳ ಸಸ್ಯರಾಶಿಯನ್ನು ಗುರುತಿಸಲು ಕೈಗೊಂಡ ಅಧ್ಯಯನದ ಪ್ರಕಾರ ಇಲ್ಲಿ ೪೩ ವಿವಿಧ ಕುಟುಂಬಗಳಿಗೆ ಹಾಗೂ 115 ವಿವಿಧ ಜಾತಿಗಳಿಗೆ ಸೇರಿದ ಒಟ್ಟು 143 ಸಸ್ಯ ಪ್ರಭೇದಗಳು ಇರುವುದು ಪತ್ತೆಯಾಗಿವೆ. ಇವುಗಳಲ್ಲಿ ೬ ಸಸ್ಯ ಪ್ರಭೇದಗಳು ವಿನಾಶದ ಅಂಚಿನಲ್ಲಿದ್ದು, ೩೧ ಸಸ್ಯ ಪ್ರಭೇದಗಳು ಬಹುಬೇಡಿಕೆಯ ಔಷಧಿಯ ಗುಣಗಳನ್ನು ಹೊಂದಿವೆ.
ಈ ಅರಣ್ಯದಲ್ಲಿರುವ ಗುಲಾಬಿ ಬಣ್ಣದ ಅತ್ಯಂತ ಒರಟಾದ ಕಲ್ಲು ಕಟ್ಟಡದ ಆಕರ್ಷಣೆಗಾಗಿ ಭಾರೀ ಹೆಸರುವಾಸಿಯಾಗಿದೆ. ಸಧ್ಯ ಈ ಗುಲಾಬಿ ಬಣ್ಣದ ಕಲ್ಲು ಗಣಿಗಾರಿಕೆಯನ್ನು ಇಲ್ಲಿರುವ ವನ್ಯಜೀವಿಗಳ ಸಂರಕ್ಷಣೆಗಾಗಿ ಸ್ಥಗಿತಗೊಳಿಸಲಾಗಿದೆ. ಈ ಚಿಂಕಾರ ವನ್ಯಧಾಮದಲ್ಲಿನ ನಿಸರ್ಗದ ಸುಂದರ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು. ಇದು ಭೌಗೋಳಿಕವಾಗಿ ಕರ್ನಾಟಕದ ಬಯಲು ಸೀಮೆಯಲ್ಲಿದ್ದರೂ ಈ ಭಾಗದಲ್ಲಿ ತಂಪಾದ, ಪ್ರಶಾಂತ ಹಾಗೂ ದಟ್ಟವಾದ ಸಸ್ಯಸಂಕುಲವಿರುವುದು ವಿಶೇಷ.
ಕಾಗವಾಡ- ಕಲಾದಗಿ ರಾಜ್ಯ ಹೆದ್ದಾರಿ ಹಾಗೂ ಮುಧೋಳ-ಬೀಳಗಿ ರಸ್ತೆಗಳ ಮುಖಾಂತರ ಹಾಯ್ದು ಹೋಗುವಾಗ ಪಕ್ಕದಲ್ಲಿ ಕಾಣುವ ಈ ವನ್ಯಧಾಮವು ಮಲೆನಾಡಿನ ನಿಸರ್ಗಸಿರಿಯಂತೆ ಗೋಚರಿಸುತ್ತದೆ. ಈ ವನ್ಯಧಾಮದಲ್ಲಿ ವಾಸಿಸುವ ಚಿಂಕಾರ ಗಳು ನೀಲಗಾಯ್ ಹಾಗೂ ಬ್ಲಾಕ್ ಬಕ್ಸ್ ತಳಿ ಎಂಬ ಎರಡು ಪ್ರಭೇದಗಳಿಂದ ಕೂಡಿವೆ. ಇವು ಶುಷ್ಕ ವಾತಾವರಣ ಪ್ರದೇಶ, ಕಲ್ಲಿನ ಪ್ರದೇಶ, ಉಪ ಉಷ್ಣವಲಯ, ಲಘು ಕಾಡು ಹಾಗೂ ಕುರುಚಲು ಗಿಡಗಂಟಿಗಳಲ್ಲಿ ವಾಸಿಸಲು ಇಷ್ಟಪಡುತ್ತವೆ. ಇಂತಹ ಯೋಗ್ಯ ತಾಣವನ್ನು ಹೊಂದಿದ ಈ ಯಡಹಳ್ಳಿ ವನ್ಯಧಾಮವು ಚಿಂಕಾರ ಪ್ರಾಣಿಯ ವಾಸಸ್ಥಾನಕ್ಕೆ ಹೇಳಿ ಮಾಡಿಸಿ ದಂತಿದೆ. ಈ ಪ್ರಾಣಿಯು ಮಾನವ ಚಲನ-ವಲನ ಹಾಗೂ ಮಾನವ ವಾಸನಾ ಸಂವೇಧಿಯನ್ನು ಬಹು ದೂರದಿಂದಲೆ ಪತ್ತೇಹಚ್ಚಿ ಓಡಿ ಹೋಗುವ ಸ್ವಭಾವವನ್ನು ಹೊಂದಿರುವುದು ವಿಶೇಷ.
ಪ್ರಾಣಿಸಂಕುಲದಲ್ಲೇ ಅತ್ಯಂತ ನಾಚಿಕೆ ಹಾಗೂ ಅಂಜುಬುರುಕು ಪ್ರಾಣಿಯಾಗಿರುವ ಈ ಚಿಂಕಾರ ಪ್ರಾಣಿಯ ಸಂತತಿಯ
ಅಭಿವೃದ್ಧಿಯು ಸರಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಸವಾಲಾಗಿ ಪರಿಣಮಿಸಿದೆ. ಇತ್ತೀಚಿಗೆ ಮಾಡಿದ ಸರ್ವೆ ಪ್ರಕಾರ ಚಿಂಕಾರ ಪ್ರಾಣಿಗಳು 2016ರಲ್ಲಿ ೮೫ ಇದ್ದದ್ದು ಈಗ 2022ರ ಸರ್ವೆ ಪ್ರಕಾರ ೯೨ಕ್ಕೇರಿವೆ. ಇಲ್ಲಿನ ಚಿಂಕಾರ ಪ್ರಾಣಿಗಳ ಲಿಂಗಾನುಪಾತವು ೧:೦.೮೩ (ಗಂಡು:ಹೆಣ್ಣು) ಇರುತ್ತದೆ. ದೇಶದ ಪ್ರಥಮ ಚಿಂಕಾರ ವನ್ಯಧಾಮವಾದ ರಾಜಸ್ಥಾನದ ಅಂಕಿ-
ಅಂಶಗಳಿಗೆ ಹೋಲಿಸಿದಲ್ಲಿ ಇಲ್ಲಿನ ಚಿಂಕಾರ ಸಂತತಿಯ ಬೆಳವಣಿಗೆಯು ಒಟ್ಟಾರೆ ಆಶಾದಾಯಕ ಸ್ಥಿತಿಯಲ್ಲಿದೆ.
ಈ ಪ್ರದೇಶದ ಸುತ್ತಲಿನ ಹನ್ನೆರಡು ಹಳ್ಳಿಗಳ ಜನರು ದಿನನಿತ್ಯದ ಆಹಾರ ತಯಾರಿಕೆಗಾಗಿ ಅರಣ್ಯದಲ್ಲಿನ ಒಣ ಕಟ್ಟಿಗೆಯನ್ನು ಉರುವಲಾಗಿ ಉಪಯೋಗಿಸುತ್ತಿರುವು ದರಿಂದ ಈ ಅರಣ್ಯವು ಮಾನವನ ಚಟುವಟಿಕೆಗಳಿಗೆ ಮುಕ್ತವಾದ ಪ್ರದೇಶವಾಗಿತ್ತು. ರಾಜ್ಯ ಸರಕಾರದ ೨೦೧೬ರ ಅಧಿಸೂಚನೆಯ ನಂತರ ಮಾನವ ಚಟುವಟಿಕೆಯನ್ನು ಸಂಪೂರ್ಣ ನಿಯಂತ್ರಿಸಲು ಈ ವನ್ಯಧಾಮದ ವ್ಯಾಪ್ತಿಯ ಸುತ್ತಲಿನ ಹಳ್ಳಿಯ ಕುಟುಂಬಗಳಿಗೆ ಎಲ್‌ಪಿಜಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ರಾಜ್ಯ ಸರಕಾರವು ಈ ವನ್ಯಧಾಮದಲ್ಲಿ ಅಲ್ಲಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ ಪ್ರಯುಕ್ತ ಮಾನವನ ಚಟುವಟಿಕೆಗಳು
ಈ ಪ್ರದೇಶದಲ್ಲಿ ಸಂಪೂರ್ಣವಾಗಿ ಕಡಿಮೆಯಾಗಿವೆ. ಸದ್ಯ ಈ ಎಲ್ಲ ಬೆಳವಣಿಗೆಗಳಿಂದ ಚಿಂಕಾರ ಸೇರಿದಂತೆ ಇತರೆ ಪ್ರಾಣಿ-ಪಕ್ಷಿಗಳ ಸಂತತಿಯು ಇಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ.
ಬಾಗಲಕೊಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕ ಗ್ರಾಮವಾದ ಯಡಹಳ್ಳಿಯು ಹಿಂದಿನಿಂದಲೂ ರಾಜಕೀಯ ಶಕ್ತಿ ಕೇಂದ್ರವಾಗಿ
ಪ್ರಚಲಿತದಲ್ಲಿದೆ. ಕಾರಣ ಯಡಹಳ್ಳಿಯ ದಿವಂಗತ ಆರ್.ಎಮ್ .ದೇಸಾಯಿಯವರು ದಶಕಗಳ ಕಾಲ ಶಾಸಕ ಹಾಗೂ ಸಂಸದರಾಗಿ ಕಾರ್ಯನಿರ್ವಹಿಸಿದ್ದರು. ಇವರು ತಮ್ಮ ಮರಣದವರೆಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತ, ಕಾಂಗ್ರೆಸ್ ಪಕ್ಷದ ಪ್ರಭಾವದ ಆ ಕಾಲದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವಾರು ನಾಯಕರನ್ನು ಯಡಹಳ್ಳಿಗೆ ಕರೆಯಿಸಿ ಗೌರವಿಸುತ್ತಿದ್ದರು.
ನಂತರದಲ್ಲಿ ಹೊರಹೊಮ್ಮಿದ ಯಡಹಳ್ಳಿಯ ಮತ್ತೊಬ್ಬ ಜನನಾಯಕ ಜೆ.ಟಿ.ಪಾಟೀಲರು ಸಹ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಹಲವಾರು ಜನಪರ ಕಾರ್ಯಗಳನ್ನು ನಿರ್ವಸಿ ಜಿಲ್ಲೆಯ ಬೆರಳೆಣಿಕೆಯ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಇಂತಹ ಪ್ರಭಾವಿ ವ್ಯಕ್ತಿಗಳಿಗೆ ಹಾಗೂ ಪ್ರಮುಖ ರಾಜಕೀಯ ಘಟನೆಗಳಿಗೆ ಸಾಕ್ಷಿಯಾದ ಈ ಯಡಹಳ್ಳಿಯು ಇಂದು ರಾಷ್ಟ್ರೀಯ ಚಿಂಕಾರ ವನ್ಯಧಾಮದಿಂದಾಗಿ ಮತ್ತೆ ದೇಶದ ಗಮನ ಸೆಳೆದಿದೆ. ಈ ಮೌಲ್ಯಯುತ ಪ್ರದೇಶವನ್ನು ಉಳಿಸಿ ಮುಂದಿನ ಪೀಳಿಗೆಗೆ ಸಾಗಿಸುವ ಸಲುವಾಗಿ ಯಡಹಳ್ಳಿಯ ಹಲವು ನಿಸರ್ಗ ಪ್ರೇಮಿಗಳು ಎಪ್ಪತ್ತರ ದಶಕದಿಂದ ಪ್ರಯತ್ನಿಸು ತ್ತಿರುವುದು ಶ್ಲಾಘನೀಯ.
ಇಂತಹ ವಿಶ್ವಪ್ರಸಿದ್ಧ ವನ್ಯಜೀಗಳನ್ನು ಗುರುತಿಸಿ ಉಳಿಸಿದ ಕೀರ್ತಿಗೆ ಪಾತ್ರರಾದವರು ಹಾಗೂ ಗೌರವ ವನ್ಯಜೀವಿ
ಪರಿಪಾಲಕರೆಂದು ಗುರುತಿಸಿಕೊಂಡಿರುವ ಹಿರಿಯ ರಾಜಕಾರಣಿ ದಿವಂಗತ ಆರ್.ಎಮ್.ದೇಸಾಯಿಯವರ ಪುತ್ರರಾದ ಡಾ.
ಎಮ್.ಆರ್.ದೇಸಾಯಿ ಹಾಗೂ ಮಾಜಿ ಶಾಸಕ ಜೆ.ಟಿ.ಪಾಟೀಲರು ಎಂದರೆ ತಪ್ಪಾಗಲಿಕ್ಕಿಲ್ಲ. ಇಂತಹ ಅಭೂತ ಪೂರ್ವ ಪರಿಸರಸ್ನೇಹಿ ಜವಾಬ್ದಾರಿಗಳನ್ನು ನೆರವೇರಿಸುತ್ತಿರುವ ಇವರಿಬ್ಬರ ಕಾರ್ಯವನ್ನು ಇಡಿ ಕರ್ನಾಟಕ ರಾಜ್ಯವೇ ಮೆಚ್ಚಿದೆ.
ಕಳೆದ ೫೦ ವರ್ಷಗಳಿಂದ ಈ ಅಪರೂಪದ ಅರಣ್ಯ ಹಾಗೂ ಪ್ರಾಣಿ ರಕ್ಷಣೆಗೆ ಕಂಕಣಬದ್ಧರಾಗಿ ಇವರಿಬ್ಬರೂ ಕಾರ್ಯ
ನಿರ್ವಸುತ್ತಿದ್ದಾರೆ. ಇಬ್ಬರಿಗೂ ಈಗ ೭೫ ವರ್ಷ ದಾಟಿದ್ದರೂ ಸಹ ಇವರಲ್ಲಿರುವ ಪರಿಸರ ಪ್ರೇಮ ಹಾಗೂ ಪರಿಸರ ಪ್ರeಯು
ಇನ್ನೂ ಯೌವ್ವನಾವಸ್ಥೆಯಲ್ಲಿದೆ. ಇವರ ಮನೆತುಂಬ ಬರೀ ಈ ವನ್ಯಧಾಮದಲ್ಲಿ ವಾಸವಿರುವ ಪ್ರಾಣಿಗಳ ಭಾವಚಿತ್ರಗಳು
ಹಾಗೂ ಪರಿಸರ ಜಾಗೃತಿ ಕುರಿತಾದ ಹಲವಾರು ಪುಸ್ತಕಗಳು ಇವೆ.
ಇವರು ಈ ಪ್ರಾಣಿಸಂಕುಲದ ಉಳಿಗಾಗಿ ಸ್ವಯಂ ಪ್ರೇರಣೆಯಿಂದ ಅರಣ್ಯ ವಿಜ್ಞಾನಿಗಳ ತರಹ ಗೌರವ ವಾರ್ಡನ್‌ರಾಗಿ
ಕಾರ್ಯನಿರ್ವಹಣೆ ಮಾಡುತ್ತಿರುವುದು ಅಭಿನಂದನೀಯ. ಈ ಅರಣ್ಯದ ಮೂಲೆ-ಮೂಲೆಯಲ್ಲಿರುವ ಸಂಪೂರ್ಣ ಮಾಹಿತಿ ಯನ್ನು ಬಲ್ಲ ಇವರು, ತಮ್ಮ ಸ್ವಂತ ಖರ್ಚಿನಿಂದ ಈ ಅರಣ್ಯದ ಅಲ್ಲಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಿಸಿ ಪ್ರಾಣಿ-ಪಕ್ಷಿಗಳ ಆಶ್ರಯಕ್ಕೆ ಕಾಯಕಲ್ಪ ನೀಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಯಡಹಳ್ಳಿ ಗ್ರಾಮವು ಸ್ವಚ್ಛತೆ ಹಾಗೂ ಶಿಸ್ತಿಗಾಗಿ ರಾಜ್ಯದ ಬೆರಳೆಣಿಕೆಯ ಆದರ್ಶ ಗ್ರಾಮಗಳಲ್ಲಿ ಒಂದಾಗಿದೆ.
ಸುತ್ತಲಿನ ಗ್ರಾಮಗಳಲ್ಲಿ ಗ್ರಾಮಸಭೆ ಏರ್ಪಡಿಸುವ ಮೂಲಕ ಅಲ್ಲಿರುವ ಜನತೆಗೆ ಅರಣ್ಯ ಹಾಗೂ ಪ್ರಾಣಿಸಂಕುಲದ ಮಹತ್ವ ವನ್ನು ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ. ಮೊದಲು ಈ ಭಾಗದಲ್ಲಿ ಸಂಪ್ರದಾಯದ ಹೆಸರಲ್ಲಿ ಪ್ರಾಣಿ- ಪಕ್ಷಿಗಳ ಭೇಟೆಯಾಡಲಾಗುತ್ತಿತ್ತು. ದನ-ಕರುಗಳ ಮೇವಿಗಾಗಿ ಸುತ್ತಲಿನವರು ಅರ ಣ್ಯದ ಮೇಲೆ ಅವಲಂಬಿಸಿದ್ದರು. ಅರಣ್ಯದಲ್ಲಿನ ಗಿಡ- ಮರಗಳನ್ನು ಕಡಿದು ಉರವಲಾಗಿ ಉಪಯೋಗಿಸಲಾಗುತ್ತಿತ್ತು. ಇವನ್ನೆಲ್ಲ ವುದನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ, ಅಪರೂಪದ ಅರಣ್ಯದ ಸಂರಕ್ಷಣೆ ಹಾಗೂ ಜೀವಸಂಕುಲದ ಉಳಿಗಾಗಿ ಇವರಿಬ್ಬರೂ ಸತತ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.
ಆದರೂ ಎಂದೂ ಈ ಕಾರ್ಯವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳದಿರುವುದು ಗಮನಾರ್ಹ. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಭಾಗದಲ್ಲಿ ಧಣ್ಯಾರು ಹಾಗೂ ಗೌಡರು ಎಂದೆ ಗುರುತಿಸಿಕೊಂಡ ಇವರಿಬ್ಬರ ಮಾತುಗಳಿಗೆ ಬಹಳ ತೂಕವಿರುವು ದರಿಂದಲೇ ಇಂದು ಈ ವನ್ಯಧಾಮವು ಸಂರಕ್ಷಿಸಲ್ಪಟ್ಟಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ. ಏತನ್ಮಧ್ಯೆ
ಜೆ.ಟಿ.ಪಾಟೀಲರು ಸರಕಾರದ ಮಟ್ಟದಲ್ಲಿ ಈ ಯಡಹಳ್ಳಿ ರಾಷ್ಟ್ರೀಯ ಚಿಂಕಾರ ವನ್ಯಧಾಮ ಘೋಷಣೆಗೆ ತೊಡಕಾಗಿದ್ದ
ಹಲವು ಅಡೆತಡೆಗಳನ್ನು ಸರಕಾರಕ್ಕೆ ಮನವರಿಕೆ ಮಾಡಿ ನಿವಾರಿಸಿದ್ದರು.
ವಿಧಾನಸಭೆ ಅಧಿವೇಶನದಲ್ಲಿ ಈ ವನ್ಯಧಾಮದ ಘೋಷಣೆ ಕುರಿತಾಗಿ ಹಲವಾರು ಬಾರಿ ಚರ್ಚಿಸಿ ಸದನದ ಹಾಗೂ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯುವಲ್ಲಿ ಪ್ರಮುಖ ಪಾತ್ರವಸಿದ್ದರು. ಇಂಥ ಪ್ರಯತ್ನ ವಿಫಲವಾಗಬಾರದು. ತಲೆಮಾರುಗಳವರೆಗೆ ಇದು ಸಂರಕ್ಷಣೆಯಾಗಿ ಮುಂದುವರಿಯ ಬೇಕಾದಲ್ಲಿ, ಕೇಂದ್ರ ಸರಕಾರ ವಿಶೇಷ ಆಸಕ್ತಿ ವಹಿಸುವುದು ಅಗತ್ಯ.