ರಸದೌತಣ
ಯಗಟಿ ರಘು ನಾಡಿಗ್
naadigru@gmail.com
ದೈನಂದಿನ ಬದುಕಿನಲ್ಲಿ ನಾವಾಡುವ ಮಾತುಗಳು ಕುರಿತೇಟು ಹೊಡೆದಂತೆ ನೇರವಾಗಿರಬೇಕೇ ಅಥವಾ ‘ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ’ ಸುತ್ತಿ ಬಳಸಿ ಸುಳಿದಾಡಬೇಕೇ ಅಥವಾ ಒಂದಷ್ಟು ಉಪಮಾನ-ಉಪಮೇಯಗಳಿಂದ ಅಲಂಕರಿಸಿಕೊಂಡು ವಯ್ಯಾರ ಮಾಡಿಕೊಂಡು ಹೊಮ್ಮಬೇಕೇ? ಈ ಪ್ರಶ್ನೆಯನ್ನು ಓದುತ್ತಿದ್ದಂತೆಯೇ ನೀವು, “ಛೇ,
ಇದೆಂಥಾ ಪ್ರಶ್ನೆ? ನಾವಾಡುವ ಮಾತುಗಳು ಆಯಾ ಸಂದರ್ಭ, ವಿಷಯ, ಅದಕ್ಕಿರುವ ತುರ್ತು ಮತ್ತು ನಮ್ಮೆ
ದುರು ಇರುವ ವ್ಯಕ್ತಿಯನ್ನು ಅವಲಂಬಿಸಿರುತ್ತವೆ ಅಲ್ಲವೇ?” ಎಂದು ಮರುಪ್ರಶ್ನೆ ಹಾಕಬಹುದು.
ನಿಮ್ಮ ಗ್ರಹಿಕೆ ನಿಜ. ಆದರೆ, ಹೇಳಬೇಕಾದ ವಿಷಯವನ್ನು ‘ಸರಕಾರಿ ಗೆಜೆಟ್’ನಂತೆ ಸಪ್ಪೆಯಾಗಿ ಹೇಳಿಬಿಟ್ಟರೆ, ಹೇಳೋರಿಗೂ ಕೇಳೋರಿಗೂ ರುಚಿಸದಿರಬಹುದು ಎಂಬ ಕಾರಣಕ್ಕೆ ಕೆಲವರು ವಿಭಿನ್ನ ಮಾರ್ಗಗಳನ್ನು ಬಳಸುವು ದುಂಟು. ಈ ಕಸರತ್ತಿನಲ್ಲಿ ಕೆಲವರು ತಮ್ಮ ಮಾತುಗಳಿಗೆ ಕೊಂಕು, ಟೀಕೆ, ಹೀಗಳಿಕೆ, ಅಪಹಾಸ್ಯ, ಕಾಲೆಳೆತದ ಲೇಪವನ್ನೂ ಕೊಡುವುದುಂಟು. ಆದರೆ ಮತ್ತೊಬ್ಬರ ಮನನೋಯಿಸುವ ಉದ್ದೇಶವಿಲ್ಲದ, ಹಾಸ್ಯಲೇಪಿತ ಮತ್ತು ಕಿಲಾಡಿತನದ ಮಾತುಗಳು ಹೇಳೋರಿಗೂ ಕೇಳೋರಿಗೂ ಮುದ ನೀಡುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ‘ಮೋಡಿಯ ಮಾತುಗಳು’ ಎಂಬ ಪ್ರಕಾರವೂ ಇದರಲ್ಲಿ ಸೇರಿಕೊಂಡಿದೆ. ಅದಕ್ಕಿರುವ ವ್ಯಾಖ್ಯಾನವನ್ನು ನೀಡುವುದರ ಬದಲು, ಒಂದು ಪುಟ್ಟ ಘಟನೆಯನ್ನು ವಿವರಿಸಿಬಿಟ್ಟರೆ ಆ ಪರಿಕಲ್ಪನೆ ನಿಮಗೆ ಅರ್ಥವಾದೀತು.
ಇದು ನಾನು ಪುಟ್ಟ ಹುಡುಗನಾಗಿದ್ದಾಗ ನಮ್ಮಮ್ಮ ನನ್ನಲ್ಲಿ ಹೇಳಿಕೊಂಡ ಪ್ರಸಂಗ: ಆಗಷ್ಟೇ ಮದುವೆಯಾಗಿ ಯಳ್ಳಂಬಳಸೆ ನಾಡಿಗರ ಮನೆತನದ ಕಿರಿಸೊಸೆಯಾಗಿ ಗಂಡನ ಮನೆಗೆ ಬಂದಿದ್ದರು ಅಮ್ಮ. ವಯೋವೃದ್ಧರಾದ ಅತ್ತೆ- ಮಾವ, ಮೂವರು ಮೈದುನರು, ಇಬ್ಬರು ನಾದಿನಿಯರು ಸೇರಿದಂತೆ ಗಂಡನ ಮನೆಯಲ್ಲಿ ಜನಜಾತ್ರೆ! ಹೊಸದಾಗಿ ಬಂದಿರುವಾಕೆಯ ಕೈಗಳ ಅಡುಗೆ ರುಚಿ ನೋಡಬೇಕೆಂದು ಮಾವನ (ಆಂದರೆ ನಮ್ಮ ತಾತನ) ತವಕ. ಇದನ್ನರಿತ ಅಮ್ಮ, ಮೊದಲ ದಿನ ಏನು ಅಡುಗೆ ಮಾಡುವುದೆಂದು ಅವರನ್ನೇ ಕೇಳೋಣ ಎಂದುಕೊಂಡು ಕೊಂಚ
ಹೆದರಿಕೆ-ಸಂಕೋಚದಿಂದಲೇ, “ಮಾವಯ್ಯಾ, ಇವತ್ತು ಏನು ಅಡುಗೆ ಮಾಡಲಿ?” ಎಂದು ಕೇಳಿದರು.
ಅದಕ್ಕೆ ಮಾವ, “ನೋಡವ್ವಾ ತಾಯೀ…. 15-20 ಜನರಿರೋ ಮನೆ ಇದು. ಹೊಲದಿಂದ ದಂಡಿಯಾಗಿ ಹರಿವೆ ಸೊಪ್ಪು, ದಂಟಿನ ಸೊಪ್ಪು ಬಂದಿದೆ. ಎರಡನ್ನೂ ಸಣ್ಣಗೆ ಹೆಚ್ಚಿಹಾಕಿ ಗಟ್ಟಿಯಾಗಿ ಹುಳಿ ಮಾಡಿಬಿಡಮ್ಮಾ. ಹಾಗೇ, ಹುಳಿ ಕುದಿಯುವಾಗ ಏಳೆಂಟು ಈರುಳ್ಳಿಯನ್ನ ಮೈನೋಯಿಸಿ ಹಾಕಿ ಚೆನ್ನಾಗಿ ತಿರುವಿಹಾಕಮ್ಮಾ” ಎಂದು ಹೇಳಿ ಮನೆಯ ಜಗುಲಿಯ ಮೇಲೆ ನಿರಾಳವಾಗಿ ಕೂತರಂತೆ! ಅಮ್ಮನಿಗೋ ಅಯೋಮಯ! ಹಾಗೇ ಒಮ್ಮೆ ಕಲ್ಪಿಸಿಕೊಳ್ಳಿ, ಆಗಷ್ಟೇ ತವರುಮನೆ ಬಿಟ್ಟು ಗಂಡನ ಮನೆಗೆ ಬಂದಿರುವ ಹೆಣ್ಣುಮಗಳು. 15-20 ಜನಕ್ಕೆ ಅಡುಗೆ ಮಾಡಬೇಕು, ಯಾರ‍್ಯಾರ ಇಷ್ಟಾನಿಷ್ಟಗಳು ಹೇಗಿರುತ್ತೋ, ತಾನು ಮಾಡುವ ಸೊಪ್ಪಿನ ಹುಳಿ ಅವರಿಗೆ ರುಚಿಸುತ್ತೋ ಇಲ್ಲವೋ…? ಇವೇ ಮೊದಲಾದ ಪ್ರಶ್ನೆ, ಗೊಂದಲಗಳಿಗೆ ಸಿಲುಕಿ ಅಮ್ಮನ ಮನಸ್ಸು ತರಗೆಲೆಯಂತಾಗಿತ್ತು. ಅಷ್ಟೊತ್ತಿಗೆ, ಅದೆಲ್ಲಿಗೋ ಹೋಗಿದ್ದ ನಮ್ಮಪ್ಪ ಮನೆಗೆ ಬಂದರು. ಸಿಂಹದ ಗುಹೆಯೆದುರು ಸಿಕ್ಕಿಬಿದ್ದ ಜಿಂಕೆಯಂತಿದ್ದ ಅಮ್ಮ
ನನ್ನು ನೋಡಿ, “ಏನು ಕಥೆ?” ಎಂಬಂತೆ ಅಪ್ಪ ಮುಖ ಮಾಡಿದರಂತೆ. ಆಗ ಅಮ್ಮ, ತಮ್ಮ ಮಾವಯ್ಯ ಹೇಳಿ
ದ್ದನ್ನೆಲ್ಲಾ ವಿವರಿಸಿ, “ಅವರು ಹೇಳಿದ ಹಾಗೆ ಸೊಪ್ಪಿನಹುಳಿ ಮಾಡೋಕ್ಕೆ ಪ್ರಯತ್ನಿಸ್ತೀನಿ ಕಣ್ರೀ, ಆದರೆ ಹುಳಿ
ಕುದಿಯುವಾಗ ಏಳೆಂಟು ಈರುಳ್ಳಿಯನ್ನು ‘ಮೈನೋಯಿಸಿ ಹಾಕು’ ಅಂದ್ರು ಮಾವಯ್ಯ. ಹಾಗಂದ್ರೇನು ಅಂತ ನಂಗೆ
ಗೊತ್ತಿಲ್ಲ, ಅವರನ್ನೇ ಕೇಳೋಣ ಅಂದ್ರೆ ಭಯ” ಎಂದು ಅಲವತ್ತುಕೊಂಡರಂತೆ.
ಈ ಮಾತಿಗೆ ಅಪ್ಪ ನಸುನಗುತ್ತಾ, “ಅಯ್ಯೋ ಹುಚ್ಚೀ, ಅದಕ್ಕೆ ಅಷ್ಟೊಂದು ತಲೆಕೆಡಿಸ್ಕೊಂಡಿದ್ದೀಯಾ? ಹುಳಿ ಕುದಿಯುವಾಗ ಒಂದ್ ಏಳೆಂಟು ಈರುಳ್ಳಿನ ಚೆನ್ನಾಗಿ ಜಜ್ಜಿ ಹಾಕು ಅಷ್ಟೇ. ಹೀಗೆ ಮಾಡಿದ್ರೆ ಸೊಪ್ಪಿನಹುಳಿಗೆ ಒಳ್ಳೇ ಪರಿಮಳ ಬರುತ್ತೆ” ಅಂತ ಹೇಳಿ ಸ್ನಾನಕ್ಕೆ ತೆರಳಿದರಂತೆ!! ‘ಮೋಡಿಯ ಮಾತು’ ಅಂದ್ರೇನು ಅಂತ ಪ್ರಾಯಶಃ
ನಿಮಗೀಗ ಗೊತ್ತಾಗಿರಬೇಕು. ಏನು ಅಡುಗೆ ಮಾಡಬೇಕು ಎಂಬುದನ್ನು ನೇರವಾಗಿ ಹೇಳಿದ ನಮ್ಮ ತಾತ, “ಹುಳಿ
ಕುದಿಯುವಾಗ ಏಳೆಂಟು ಈರುಳ್ಳಿಯನ್ನು ಜಜ್ಜಿಹಾಕು” ಎಂದಷ್ಟೇ ಹೇಳಬಹುದಿತ್ತು. ಆದರೆ ಹಾಗೆ ಹೇಳದೆ,
“ಈರುಳ್ಳಿಯನ್ನ ಮೈನೋಯಿಸಿ ಹಾಕಮ್ಮಾ” ಎಂದು ಅಲಂಕಾರಿಕವಾಗಿ ಹೇಳಿದ್ದರು! ಈರುಳ್ಳಿಯನ್ನು ಜಜ್ಜುವುದು
ಎಂದರೆ, ಅದರ ಮೈನೋಯಿಸಿದಂತೆಯೇ ಅಲ್ಲವೇ ಎಂಬುದು ತಾತನ ಗ್ರಹಿಕೆ! (ಅಷ್ಟಕ್ಕೂ ನಾವೆಲ್ಲರೂ ತರಕಾರಿಗಳ ಮೈನೋಯಿಸಿಯೇ ತಿನ್ನುವುದಲ್ಲವೇ?!).
ಒಟ್ಟಿನಲ್ಲಿ, ತಮ್ಮ ಮಾವಯ್ಯ ಹೇಳಿದಂತೆ ಸೊಪ್ಪಿನಹುಳಿಗೆ ಈರುಳ್ಳಿಯನ್ನು ಲಕ್ಷಣವಾಗಿ ‘ಮೈನೋಯಿಸಿ’ ಹಾಕಿ
ಕುದಿಸಿ, ತರುವಾಯ ಎಲ್ಲರಿಗೂ ಉಣಬಡಿಸಿದ ಮೇಲೆಯೇ ಅಮ್ಮನ ಮೈ-ಮನಸ್ಸು ಹಗುರಾದವಂತೆ!! ಇನ್ನು, ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಮ್ಮೆ ಪರಸ್ಪರರ ಗ್ರಹಿಕೆಯಲ್ಲಿ ಆಗುವ ಸಣ್ಣಪುಟ್ಟ ‘ಆರೋಗ್ಯಕರ’ ವ್ಯತ್ಯಯ ಗಳಿಂದಾಗಿ ನಗೆ ಉಕ್ಕುವುದುಂಟು, ಮನೆಯ ವಾತಾವರಣ ಚೇತೋಹಾರಿಯಾಗುವುದುಂಟು. ಇವೆಲ್ಲ ಅಪ್ರಯತ್ನ ವಾಗಿ ಜರುಗುವ ಘಟನೆಗಳು ಎನ್ನಿ. ಅದಕ್ಕೊಂದು ಪುಟ್ಟ ಉದಾಹರಣೆ ಇಲ್ಲಿದೆ ನೋಡಿ: ತಡರಾತ್ರಿ ಮನೆಗೆ ಮರಳಿದ ಪತಿರಾಯನು ಹೆಂಡತಿಯನ್ನು ಒಂದೇ ಸಮನೆ ಕೂಗಿ ಕರೆದು, “ಬೆಳಗ್ಗೆ 5 ಗಂಟೆಗೇ ನನ್ನನ್ನು ಎಬ್ಬಿಸು, ಬೇಗ ಆಚೆ ಹೋಗೋದಿದೆ. ತಿಂಡಿ-ಗಿಂಡಿ ಏನೂ ಬೇಡ” ಎಂದ.
ಆಗ ಹೆಂಡತಿ, “ಬೆಳಗ್ಗೆ 5 ಗಂಟೆಗೇ ಏನಂತ ರಾಜಕಾರ್ಯ ಇರೋದು ನಿಮಗೆ? ತಿಂಡಿ ಯಾಕೆ ಬೇಡ?” ಅಂತ ಮೂತಿ ಕೊಂಕಿಸಿದಾಗ ಪತಿರಾಯ, “ಡಾಕ್ಟರ್ ಹತ್ರ ತಪಾಸಣೆಗೆ ಹೋಗ್ಬೇಕು ಕಣೇ, ಬರೀ ಹೊಟ್ಟೇಲಿ ಬನ್ನಿ ಅಂತ ಹೇಳಿ ದ್ದಾರೆ” ಎಂದ. ಆದರೆ ಹೆಂಡತಿ ಅಷ್ಟಕ್ಕೇ ಸುಮ್ಮನಾಗದೆ, “ಆ ಡಾಕ್ಟರಿಗೋ ಮಾಡೋಕ್ಕೆ ಬೇರೆ ಕೆಲಸ ಇಲ್ಲ. ಅವರು ಹೇಳಿದ್ರು ಅಂತ ಬರೀ ಹೊಟ್ಟೇಲಿ ಹೋಗ್ಬೇಡಿ, ಲಕ್ಷಣವಾಗಿ ಒಂದು ಬನಿಯನ್ ಆದ್ರೂ ಹಾಕ್ಕೊಂಡು ಹೋಗಿ…” ಎಂದು ಗಂಡನ ಸ್ವಾಟೆ ತಿವಿದು ಅಡುಗೆಮನೆಗೆ ತೆರಳಿದಳು! ವೈದ್ಯಕೀಯ ತಪಾಸಣೆಯ ಒಂದು ಭಾಗವಾಗಿ ಮೂತ್ರದ ಪರೀಕ್ಷೆಗೆ ತೆರಳಬೇಕಿದ್ದ ಪತಿರಾಯ ಬೆಳಗ್ಗೆ ತಿಂಡಿ ತಿನ್ನುವಂತಿರಲಿಲ್ಲ, ಹೀಗಾಗಿ ಸಹಜ ವಾಗೇ ‘ಬರೀ ಹೊಟ್ಟೇಲಿ’ ಹೋಗಬೇಕಿತ್ತು; ಆದರೆ ಹೆಂಡತಿ ಆ ಗ್ರಹಿಕೆಯನ್ನೂ ಓವರ್‌ಟೇಕ್ ಮಾಡಿ ‘ಬರೀ ಹೊಟ್ಟೇಲಿ ಹೋಗ್ಬೇಡಿ, ಬನಿಯನ್ ಆದ್ರೂ ಹಾಕ್ಕೊಂಡು ಹೋಗಿ’ ಅಂತ ಫರ್ಮಾನು ಹೊರಡಿಸಿದಳೆಂದರೆ, ಅದು “ಹೊಟ್ಟೆ ಬಿಟ್ಕೊಂಡು ಹೋಗುವಾಗಿನ ಗಂಡನ ಅಕರಾಳ-ವಿಕರಾಳ ಅವಲಕ್ಷಣವನ್ನು” ತಡೆಯುವಲ್ಲಿನ ಹೆಂಡತಿಯ ಕಾಳಜಿಯೋ ಅಥವಾ ಅದು ಆಕೆಯ ಹಾಸ್ಯಪ್ರಜ್ಞೆಯ ದ್ಯೋತಕವೋ ಎಂಬುದನ್ನು ಊಹಿಸುವುದು ನಿಮಗೆ ಬಿಟ್ಟಿದ್ದು!
ರಂಗ ಕಲಾವಿದ, ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಹೇಳಿಕೊಂಡಿದ್ದ ಪ್ರಸಂಗವೊಂದು ಇಲ್ಲಿ ಉಲ್ಲೇಖ
ನೀಯ. ಅದುವರೆಗೂ ಮನೆಯಲ್ಲಿ ಲೋಕಾಭಿರಾಮವಾಗಿ ಹರಟುತ್ತಿದ್ದ ಹಿರಣ್ಣಯ್ಯನವರು ತಮ್ಮ ಪತ್ನಿ ಶಾಂತಾ
ಅವರನ್ನು ಕರೆದು, “ಒಂದು ಸಣ್ಣ ಕೆಲಸದ ಮೇಲೆ ಆಚೆ ಹೋಗೋದಿದೆ” ಎಂದರಂತೆ. ಅದಕ್ಕೆ ಉತ್ತರವಾಗಿ
ಶಾಂತಮ್ಮನವರು ‘ಏನೋ’ ಹೇಳಿದ್ದಕ್ಕೆ ಹಿರಣ್ಣಯ್ಯನವರು ಒಂದೇ ಸಮನೆ ಆಕ್ಷೇಪಿಸತೊಡಗಿದರಂತೆ. ಗೊಂದಲ ಗೊಂಡ ಶಾಂತಮ್ಮನವರು, “ಈಗ ನಾನೇನು ಆಡಬಾರದ್ದು ಆಡಿದೆ ಅಂತ ಹೀಗಾಡ್ತಾ ಇದ್ದೀರಿ ನೀವು?” ಎಂದು ಕೇಳಿದರಂತೆ. ಆಗ ಹಿರಣ್ಣಯ್ಯನವರು ‘ಆಗಿದ್ದೇನು’ ಎಂಬುದನ್ನು ವಿವರಿಸಿದರಂತೆ. ವಾಸ್ತವವಾಗಿ ಆಗಿದ್ದಿಷ್ಟು- ಮನೆಯವರೊಂದಿಗೆ ಹರಟುತ್ತಿದ್ದ ಹಿರಣ್ಣಯ್ಯನವರು “ಸಣ್ಣ ಕೆಲಸದ ಮೇಲೆ ಆಚೆ ಹೋಗೋ ದಿದೆ” ಎಂದು ಎದ್ದು ನಿಂತಾಗ, ಹಾಗೆ ಹೊರಗಡೆ ಹೋಗುವಾಗ ವಸವನ್ನು ಬದಲಿಸಿ ಹೋಗಲಿ ಎಂಬ ಆಶಯವನ್ನು ಶಾಂತಮ್ಮನವರು ವ್ಯಕ್ತಪಡಿಸಿದ್ದರು.
ಆದರೆ ಆಗ ಅವರು ಬಳಸಿದ್ದ ಪದಗಳಲ್ಲಿ ಸಣ್ಣ ವ್ಯತ್ಯಯವಾಗಿದ್ದಕ್ಕೆ ಹಿರಣ್ಣಯ್ಯನವರು ಆಕ್ಷೇಪಿಸಿದ್ದರು.
ಶಾಂತಮ್ಮನವರು ಗಂಡನಿಗೆ, “ಹೊರಗೆ ಹೋಗೋದಕ್ಕೆ ನಿಮಗೆ ‘ಬೇರೆ ಪಂಚೆ’ ಬೇಕಾ?” ಎಂದು ಕೇಳೋದಕ್ಕೆ
ಬದಲಾಗಿ, “ಹೊರಗೆ ಹೋಗೋದಕ್ಕೆ ನಿಮಗೆ ‘ಪಂಚೆ ಬೇರೆ’ ಬೇಕಾ?” ಎಂದು ಕೇಳಿಬಿಟ್ಟಿದ್ದರು! ಹಿರಣ್ಣಯ್ಯ
ನವರು ಮನೆಯಲ್ಲಿರುವಾಗ ಸಾಮಾನ್ಯವಾಗಿ ಪಂಚೆ- ಬನಿಯನ್ ಅಥವಾ ದೊಗಲೆ ಬನಿಯನ್-ಚಡ್ಡಿ
(‘ಷಾರ್ಟ್ಸ್’ ಅಂತೀವಲ್ಲ, ಅದು) ಧರಿಸುತ್ತಿದ್ದರು.
“ಹೊರಗೆ ಹೋಗೋಕ್ಕೆ ನಿಮಗೆ ‘ಪಂಚೆ ಬೇರೆ’ ಬೇಕಾ?” ಎಂಬ ಪತ್ನಿ ಶಾಂತಮ್ಮನವರ ಮಾತು, “ನೀವು ಹೊರಗೆ
ಹೋಗುವಾಗ ಚಡ್ಡಿಯಲ್ಲಿ ಹೋದ್ರೂ ನಡೆಯುತ್ತೆ” ಎಂಬ ಧಾಟಿಯಲ್ಲಿ ಹಿರಣ್ಣಯ್ಯನವರಿಗೆ ಕೇಳಿಸಿತ್ತು! ಆಗ
ಹಿರಣ್ಣಯ್ಯನವರು, ‘ಬೇರೆ ಪಂಚೆ’ ಮತ್ತು ‘ಪಂಚೆ ಬೇರೆ’ ಎಂಬುದಾಗಿ ಪದಗಳನ್ನು ಆಚೀಚೆ ಮಾಡಿದರೆ ಆಗುವ
ಅರ್ಥವ್ಯತ್ಯಾಸವನ್ನು ಪತ್ನಿಗೆ ತಿಳಿಹೇಳಿದಾಗ, ಅವರಿಗೂ ನಗುವನ್ನು ತಡೆಯಲಾಗಲಿಲ್ಲವಂತೆ!
ಕನ್ನಡದ ‘ಪನ್’ಡಿತ ಪರಂಪರೆಯಲ್ಲಿ ಎದ್ದುಕಾಣುವವರು ‘ವೈಎನ್‌ಕೆ’. ಇವರ ಕುರಿತಾಗಿ ಒಂದೆಡೆ ಓದಿದ
ತುಣುಕೊಂದು ಇಲ್ಲಿ ನೆನಪಾಗುತ್ತಿದೆ. ಅದ್ಯಾವುದೋ ಪಾರ್ಟಿಯಲ್ಲಿ ವೈಎನ್‌ಕೆ ಮತ್ತು ವೀರಪ್ಪ ಮೊಯ್ಲಿಯವರು
ಮುಖಾಮುಖಿಯಾದರಂತೆ. ಆಗ ಮೊಯ್ಲಿಯವರು, “ನನ್ನ ಹೊಸ ಕಾದಂಬರಿಯ ಬಗ್ಗೆ ನಿಮ್ಮ ಅಭಿಪ್ರಾಯವೇ
ನು?” ಎಂದು ಕೇಳಿದಾಗ ವೈಎನ್‌ಕೆ ಥಟ್ಟನೆ, “ಅಯ್ಯೋ ಬಿಡಿ ಮೊಯ್ಲಿ ಅವರೇ, ನಿಮ್ಮ ಕಾದಂಬರಿ ಕನ್ನಡದಲ್ಲೇ
ಒಂದು ‘ಮೊಯ್ಲಿಗಲ್ಲು’ ಆಗುತ್ತೆ” ಎಂದು ‘ಪನ್’ ಮಾಡಿದರಂತೆ!! ಈ ಪ್ರಸಂಗ ನಿಜವೋ, ಕಾಲ್ಪನಿಕವೋ ಎಂಬುದು ಇಲ್ಲಿ ಮುಖ್ಯವಲ್ಲ; ಆದರೆ, ಇಂಥ ‘PUN’ ಮತ್ತು ಅದರಿಂದ ಉದ್ಭವಿಸುವ ‘FUN’ ಯಥೋಚಿತವಾಗಿ ತುಂಬಿ ಕೊಂಡಿದ್ದರೆ ಬಾಳು ಅದೆಷ್ಟು ಸೊಗಸು, ಅಲ್ಲವೇ?
ಇದನ್ನೂ ಓದಿ: Yagati Raghu Nadig Column: ಬೆತ್ತಲೆ ರಾಜ್ಯದಲ್ಲಿ ಬಟ್ಟೆ ಹಾಕ್ಕೊಂಡೇನೇ ಮೂರ್ಖ !