ರಸದೌತಣ
ಯಗಟಿ ರಘು ನಾಡಿಗ್
naadigru@gmail.com
ಚಲನಚಿತ್ರವನ್ನು ಎರಡೂವರೆ ಗಂಟೆಯ ಮನರಂಜನೆಯ ಬಾಬತ್ತಾಗಿ ಪರಿಗಣಿಸಿ ವೀಕ್ಷಿಸಿ, ಚಿತ್ರಮಂದಿರದಿಂದ ಹೊರಬರುವಾಗ ಅದನ್ನು ಅಲ್ಲೇ ಕೊಡವಿ ಬರುವವರದು ಒಂದು ವರ್ಗ. ಮತ್ತೊಂದೆಡೆ, ಅದರ ಕಥೆ-ಹಾಡು, ಸಂಭಾಷಣೆ-ಸನ್ನಿವೇಶಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡು ಅದೇ ‘ಹ್ಯಾಂಗೋವರ್’ ಕಾಪಿಟ್ಟುಕೊಳ್ಳುವವರು, ತಮ್ಮ ಸ್ವಭಾವಾನುಸಾರ ಚಿತ್ರದ ಸಕಾರಾತ್ಮಕ/ನಕಾರಾತ್ಮಕ ಅಂಶಗಳನ್ನು ಅನುಸರಿಸುವವರು ಕೂಡ ಇದ್ದಾರೆ. ಡಾ.ರಾಜ್‌ಕುಮಾರ್‌ರ ‘ಬಂಗಾರದ ಮನುಷ್ಯ’ ಚಿತ್ರದಿಂದ ಪ್ರಭಾವಿತರಾದ ಅನೇಕ ನಗರಿಗರು ತಾವು ನಿರ್ವಹಿಸು ತ್ತಿದ್ದ ಉದ್ಯೋಗ/ವ್ಯವಹಾರವನ್ನು ಕೈಬಿಟ್ಟು ಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡದ್ದಿದೆ. ಅಣ್ಣಾವ್ರ ‘ಜೀವನಚೈತ್ರ’ದಿಂದ ಪ್ರೇರಿತರಾಗಿ ಮದ್ಯವ್ಯಸನದಿಂದ ಬಿಡಿಸಿಕೊಂಡವರ ನಿದರ್ಶನಗಳಿವೆ. ವಿಷ್ಣುವರ್ಧನ್ ಅಭಿನಯದ ‘ಬೂತಯ್ಯನ ಮಗ ಅಯ್ಯು’ವಿನಿಂದ ಬುದ್ಧಿ ಕಲಿತು, ಊರು-ಮನೆಯಲ್ಲಿನ ಸಣ್ಣಪುಟ್ಟ ವ್ಯಾಜ್ಯಗಳಿಗೆ ಕೋರ್ಟು ಮೆಟ್ಟಿಲು ಹತ್ತದೆ, ಅಲ್ಲಲ್ಲೇ ಬಗೆಹರಿಸಿಕೊಂಡವರು ಸಾಕಷ್ಟಿದ್ದಾರೆ. ಒಟ್ಟಿನಲ್ಲಿ, ಶ್ರೀಸಾಮಾನ್ಯರ
ದೈನಂದಿನ ಬದುಕಿನ ಮೇಲೆ ಚಲನಚಿತ್ರಗಳು ತಮ್ಮದೇ ಆದ ಪ್ರಭಾವ ಬೀರುವುದಿದೆ.
ಈ ಪ್ರಭಾವ ಕೆಲವೊಮ್ಮೆ ಎಲ್ಲಿಯವರೆಗೂ ಮುಟ್ಟುತ್ತದೆ ಎಂದರೆ, ಮನೆಯಲ್ಲಿ ದೇವತಾಕಾರ್ಯವಿದ್ದಾಗಲೋ,
ಅರಿಶಿನ-ಕುಂಕುಮಕ್ಕೆ ಕರೆದಾಗಲೋ, “ಎಲ್ಲಮ್ಮಾ, ಒಂದು ಹಾಡು ಹೇಳಿ” ಅಂತ ಹೆಂಗೆಳೆಯರನ್ನು ‘ಶ್ರೋತೃ’ಗಳು
ಕೋರಿದಾಗ, ಲಕ್ಷಣವಾಗಿ ದೇವರನಾಮವನ್ನೋ ಸ್ತೋತ್ರವನ್ನೋ ಹಾಡೋ ಬದಲು, ಚಲನಚಿತ್ರದ ‘ಸೋ-ಕಾಲ್ಡ್’
ಭಕ್ತಿಗೀತೆಗಳನ್ನು ಪಲುಕಿಬಿಡುತ್ತಾರೆ. ಭಕ್ತಿಲೇಪಿತ ಚಿತ್ರಗೀತೆಗಳನ್ನು ಇಂಥ ವೇಳೆ ಹಾಡಬಾರದು ಅಂತಲ್ಲ; ಆದರೆ ಇಂಥ ಎಲ್ಲವೂ ‘ಭಕ್ತಿಗೀತೆಯೇ’ ಎಂದು ನಿರ್ಧರಿಸಿಬಿಡುವುದಿದೆಯಲ್ಲಾ… ಅದು ಕೆಲವೊಮ್ಮೆ ಎಡವಟ್ಟಿನ ಸರಕಾಗುತ್ತದೆ!
ಕೊಂಚ ಫ್ಲ್ಯಾಷ್‌ಬ್ಯಾಕ್‌ಗೆ ಹೋಗೋಣ. ಪುಟ್ಟಣ್ಣ ಕಣಗಾಲರ ನಿರ್ದೇಶನದ ‘ಶರಪಂಜರ’ ಚಿತ್ರದ ‘ಹದಿನಾಲ್ಕು
ವರ್ಷ ವನವಾಸದಿಂದ ಮರಳಿಬಂದಳು ಸೀತೆ…’ ಹಾಡು ನಿಮಗೆ ಗೊತ್ತಿರುವಂಥದೇ. ಕಲ್ಪನಾ ಅಭಿನಯದಲ್ಲಿ ಮೂಡಿಬಂದಿರುವ ಈ ಗೀತೆ ನೋಡುಗರ ಕಣ್ಣನ್ನು ತೇವವಾಗಿಸುವಂಥದ್ದು. ಗೀತೆಯ ಸನ್ನಿವೇಶ ಹೀಗಿದೆ: ದಸರಾ ಬೊಂಬೆ ಕೂರಿಸಿದ್ದ ಮನೆಯುವರು ಹೆಂಗೆಳೆಯರನ್ನು ಅರಿಶಿನ- ಕುಂಕುಮಕ್ಕೆ ಕರೆದಿರುತ್ತಾರೆ. ಅಲ್ಲಿಗೆ ಬರುವ ಕಥಾನಾಯಕಿ ಕಾವೇರಿ (ಕಲ್ಪನಾ) ಬೊಂಬೆಗಳನ್ನೆಲ್ಲಾ ಆಸಕ್ತಿಯಿಂದ ನೋಡುತ್ತಿರುವಾಗ ಹೆಂಗಸೊಬ್ಬರು, “ಆ ಸೀತೆಯ ಬೊಂಬೆ ಥರವೇ ನಿಮಗೂ ಸೀರೆ ಉಡಿಸಿ ಅಲಂಕಾರ ಮಾಡಿದ್ರೆ ನೀವೂ ಹಾಗೇ ಕಾಣ್ತೀರಿ” ಎನ್ನುತ್ತಾರೆ. ಆಗ ಕಾವೇರಿ ಆ ‘ಸೀತೆ-ಬೊಂಬೆ’ಯನ್ನೇ ನೋಡಿಕೊಂಡು ‘ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ’ ಹಾಡನ್ನು ಹಾಡುತ್ತಾಳೆ. ಅರಿಯದ ವಯಸ್ಸಲ್ಲಿ ತನ್ನ ಮೇಲಾದ ಲೈಂಗಿಕ ದೌರ್ಜನ್ಯ, ಅದರ ನೆನಪಿನ ಮರುಕಳಿಕೆ ಯಿಂದಾಗಿ ಒದಗಿದ ಮನೋರೋಗ, ಕೌಟುಂಬಿಕ ಬದುಕಿನಲ್ಲಿ ಬಿದ್ದ ಮಾನಸಿಕ ಪೆಟ್ಟುಗಳು, ತನ್ನವರಿಂದಲೇ ಪರಿತ್ಯಕ್ತಳಾಗಿದ್ದು ಇತ್ಯಾದಿಗಳನ್ನು ಕಾವೇರಿ ನೆನಪಿಸಿಕೊಂಡು, ಸೀತೆಯ ದುಃಖಮಯ ಬದುಕಿನೊಂದಿಗೆ ತನ್ನನ್ನು ಸಮೀಕರಿಸಿಕೊಂಡು ಹಾಡುವ ಹಾಡಿದು. ಮೇಲ್ನೋಟಕ್ಕಿದು ಸೀತೆಯ ಕುರಿತಾದ ಗೀತೆ ಯಂತೆ ಕಂಡರೂ, ಇದು ಬೊಂಬೆಯ ನೆಪದಲ್ಲಿ ಕಾವೇರಿ ತನ್ನ ‘ಕಣ್ಣೀರ-ಕಥೆಯನ್ನು’ ಪರೋಕ್ಷವಾಗಿ ತೋಡಿಕೊಳ್ಳುವ ಹಾಡಷ್ಟೇ. ದೇವರಾಣೆಗೂ ಇದು ‘ಭಕ್ತಿಗೀತೆ’ ಅಲ್ಲ!
ಆದರೆ, ‘ಶರಪಂಜರ’ದ ಈ ಹಾಡು ಪಾಪ್ಯುಲರ್ ಆಗಿದ್ದೇ ಆಗಿದ್ದು, ನಮ್ಮೂರಿನ ಶಾಂತಮ್ಮನನ್ನು ಯಾವುದೇ ಮನೆಯವರು ಬೊಂಬೆ ಹಬ್ಬದಂದು ಅರಿಶಿನ-ಕುಂಕುಮಕ್ಕೆ ಕರೆದು “ಎಲ್ಲಮ್ಮಾ, ಒಂದು ಹಾಡು ಹೇಳಿ” ಅಂದುಬಿಟ್ಟರೆ ಸಾಕು, ಈ ‘ಹದಿನಾಲ್ಕು ವರ್ಷ ವನವಾಸದ’ ಹಾಡನ್ನು ‘ಮೈದುಂಬಿ’ ಹಾಡಿಬಿಡುತ್ತಿದ್ದರು ಶಾಂತಮ್ಮ! ಕಾರಣ, ಬೊಂಬೆ ಹಬ್ಬದ ಹಿನ್ನೆಲೆಯಲ್ಲಿ ಅದು ಚಿತ್ರೀಕರಿಸಲ್ಪಟ್ಟಿದೆಯಲ್ಲಾ ಅದಕ್ಕೆ! ಅರಿಶಿನ-ಕುಂಕುಮಕ್ಕೆ ಆಹ್ವಾನವಿಲ್ಲದಿದ್ದರೂ ‘ಚಿಗಳಿ- ತಂಬಿಟ್ಟಿನ’ ಆಸೆಗೆ ಜತೆಗೇ ಹೋಗುತ್ತಿದ್ದ ಶಾಂತಮ್ಮನ ಗಂಡನಿಗೋ ‘ಆಡಲಾಗದ ಅನುಭವಿಸಲಾಗದ’ ಪರಿಸ್ಥಿತಿ! ಹಾಡಿನಲ್ಲಿನ ಶಾಂತಮ್ಮನ ‘ಪರಕಾಯ ಪ್ರವೇಶ’ವನ್ನು ಸಾಕಷ್ಟು ವರ್ಷ ನೋಡಿದ ಆತ ಕೊನೆಗೊಮ್ಮೆ ರೋಸತ್ತು, “ಲೇಯ್ ಸಾಕು ನಿಲ್ಲಿಸೇ ನಿನ್ನ ಗೋಳಿನ ಹಾಡನ್ನ” ಅಂತ ಗದರಿ, ಈ ಗೀತೆಯ ಹಿಂದು-ಮುಂದನ್ನು ವಿವರಿಸಿದಾಗಲೇ ‘ಹದಿನಾಲ್ಕು ವರ್ಷದ’ ಈ ಹಾಡು ‘ವನವಾಸಕ್ಕೆ’ ಹೋಗಿದ್ದು!
ಈ ಸುಧಾರಣೆ ಕೆಲ ಕಾಲದವರೆಗೂ ಮುಂದುವರಿಯಿತು. ನಂತರ ಬಂತು ಕಣ್ರೀ ಶ್ರೀನಾಥ್-ಸರಿತಾ-ಗೀತಾ ಅಭಿನ
ಯದ ‘ಎರಡು ರೇಖೆಗಳು’ ಚಿತ್ರ! ಅದರಲ್ಲೂ ಇಂಥದೇ ಸನ್ನಿವೇಶವಿದೆ. ದಸರಾ ಪ್ರಯುಕ್ತ ಸರಿತಾ ಮನೆಯಲ್ಲಿ
ಬೊಂಬೆ ಇಟ್ಟಿರುತ್ತಾರೆ, ಅರಿಶಿನ ಕುಂಕುಮಕ್ಕೆ ಗೀತಾರನ್ನು ಕರೆದಿರುತ್ತಾರೆ. ಅಲ್ಲೂ ಮತ್ತದೇ, “ಎಲ್ಲಮ್ಮಾ, ಒಂದು
ಹಾಡು ಹೇಳಿ” ಎಂಬ ಕೋರಿಕೆ ಗೀತಾರಿಗೆ! ಮೊದಲು ಹಿಂಜರಿದರೂ ನಂತರ, “ನವರಾತ್ರಿ ಸಂಜೆಯಲಿ, ನನ್ನೆದೆಯ ಹಾಡಿನಲಿ, ಪ್ರಶ್ನೆಯೊಂದು ಮೂಡಿಹುದು ನೋಡಮ್ಮಾ” ಎಂಬ ಹಾಡನ್ನು ಶುರುಮಾಡೇಬಿಡುತ್ತಾರೆ. ಹಾಡಿನ ರೂಪದಲ್ಲಿ ಗೀತಾ ಕೇಳಿಕೊಂಡು ಹೋಗುವ ಪ್ರಶ್ನೆಗಳಿಗೆ ಅದೇ ಧಾಟಿಯಲ್ಲಿ ಸರಿತಾ ಉತ್ತರಿಸುತ್ತಾ ಹೋಗುತ್ತಾರೆ. ಇದು ಚಿತ್ರದ ಸನ್ನಿವೇಶವಾಯಿತು….
ಅಷ್ಟು ಹೊತ್ತಿಗೆ ನಮ್ಮೂರಲ್ಲಿ, ಮೇಲಿನ ಸನ್ನಿವೇಶದಲ್ಲಿ ಹಾಗೆ ‘ಗದರಿಕೊಂಡ’ ಗಂಡನೂ, ‘ಗದರಿಸಿಕೊಂಡ’
ಶಾಂತಮ್ಮನೂ ಕಾಲವಾಗಿದ್ದರು; ಆದರೆ ಸಾಕಷ್ಟು ಮನೆಗಳಲ್ಲಿ ಟಿವಿಗಳು ಬಂದಿದ್ದವು. ಹೀಗಾಗಿ, ‘ಎರಡು ರೇಖೆಗಳು’
ಸಿನಿಮಾವನ್ನು ನೋಡದಿದ್ದರೂ ಟಿವಿಯಲ್ಲಿ ಈ ಹಾಡನ್ನು ಸಾಕಷ್ಟು ಸಲ ನೋಡುವ ಅವಕಾಶ ಹೆಣ್ಣು ಮಕ್ಕಳಿಗೆ ಇದ್ದೇ ಇರುತ್ತಿತ್ತು. ಇಲ್ಲಿ ಕೂಡ, ‘ನವರಾತ್ರಿ ಸಂಜೆಯಲಿ’ ಹಾಡು ಬೊಂಬೆ ಹಬ್ಬದ ಸನ್ನಿವೇಶದಲ್ಲಿ ಬರುವುದರಿಂದ, ಬೊಂಬೆ ಹಬ್ಬದಂದು ಅರಿಶಿನ-ಕುಂಕುಮಕ್ಕೆ ಕರೆದಾಗ, ಈ ಹಾಡನ್ನೇ ಕಂಠದಿಂದ ಕಿತ್ತು ವಗಾಯಿಸಲು ಶುರು ಮಾಡಿಬಿಟ್ರು ನಮ್ಮೂರಿನ ಹೆಣ್-ಹೈಕ್ಳು! ಈ ಹಾಡಲ್ಲಿದ್ದುದೂ ಮತ್ತದೇ ‘ಶರಪಂಜರ’ದ ‘ಹದಿನಾಲ್ಕು ವರ್ಷ ವನವಾಸ’ದಂಥ ಗೋಳಿನ ಕಥೆಯೇ. ಆದರೆ, ‘ಎರಡು ರೇಖೆಗಳು’ ಬರೋ ಹೊತ್ತಿಗೆ ಒಂದಷ್ಟು ಇಂಪ್ರೂವ್‌ಮೆಂಟ್ ಆಗಿತ್ತು. ಅದೆಂದರೆ, ‘ಹದಿನಾಲ್ಕು ವರ್ಷ’ ಹಾಡಿನಂತೆ ಒಬ್ಬಾಕೆಯೇ ಹಾಡದೆ, ‘ನವರಾತ್ರಿ ಸಂಜೆಯಲಿ’ ಹಾಡಿನಂತೆ ‘ವಾದ-ಪ್ರತಿವಾದ’ ರೂಪದ ಸಾಲುಗಳನ್ನು ಇಬ್ಬರು ಹೆಂಗೆಳೆಯರು ಹಂಚಿಕೊಂಡು ಹಾಡುವಿಕೆ. “ಇದೊಂಥರಾ ಹೊಸ ಪ್ರಯೋಗ, ಚೆನ್ನಾಗಿರುತ್ತೆ ಬಿಡಿ” ಅನ್ನಬೇಡಿ. ಕಾರಣ ಈ ಹಾಡಿನಲ್ಲಿರೋ ಸೂಕ್ಷ್ಮವನ್ನು ಅರಿಯದೆ ಆ ‘ಯುಗಳ-ಗಾಯಕಿ’ಯರಿಂದ ಆಗುತ್ತಿದ್ದ ಎಡವಟ್ಟು!
‘ನವರಾತ್ರಿ ಸಂಜೆಯಲಿ’ ಗೀತೆಯ ಮೊದಲ ನುಡಿಯು ಶಿವ-ಗಂಗೆ-ಗೌರಿಯರ ಬಗ್ಗೆ ಬರುತ್ತದೆ; ಹೀಗಾಗಿ ಅದು ದೇವರ ಮೇಲಿನ ಹಾಡು ಎಂಬ ‘ಸಮರ್ಥನೆ’ಗೆ ‘ಎಸ್’ ಎನ್ನೋಣ. ಆದರೆ, ಎರಡನೇ ನುಡಿಯಲ್ಲಿ, ಪಾತ್ರಧಾರಿ ಗೀತಾ ಮಂಡಿಸುವ ವಾದ ಹೀಗಿದೆ: “ಮಲ್ಲೆ ಹೂವ ನಲ್ಲೆ ಮುಡಿಗೆ ಇಟ್ಟ ನಲ್ಲನು, ಎಂದೂ ಅವಳ ಬಿಟ್ಟು ನೋಡ ಬೇರೆ ಯಾರನೂ”. ಇದಕ್ಕೆ ಸರಿತಾ, “ನಲ್ಲ ನೆಟ್ಟ ಪ್ರೀತಿ ಬಳ್ಳಿ ಎರಡು ತೋಟದೇ, ಎರಡೂ ಬಳ್ಳಿ ತಂದಾ ಹೂವು ಎಲ್ಲಾ ಅವನದೇ” ಎಂಬ ಪ್ರತಿವಾದವನ್ನು ಮಂಡಿಸುತ್ತಾರೆ. ‘ಎರಡು ರೇಖೆ’ ಚಿತ್ರದ ಕಥೆಯಂತೆ, ಸರಿತಾರನ್ನು ಕಥಾ ನಾಯಕ ಶ್ರೀನಾಥ್ ಮೊದಲೇ ಮೋಹಿಸಿ, ಮದುವೆಯಾಗುವ ಭರವಸೆಯೊಂದಿಗೆ ಲೈಂಗಿಕ ಸಂಬಂಧವನ್ನೂ ಹೊಂದಿರುತ್ತಾರೆ; ಆದರೆ ತಪ್ಪುಗ್ರಹಿಕೆ ಮತ್ತು ತಮ್ಮ ತಾಯಿಯ ಕುತಂತ್ರದಿಂದಾಗಿ ಈ ಮದುವೆಯಾಗದೆ, ನಂತರ ಗೀತಾರನ್ನು ಮದುವೆಯಾಗುತ್ತಾರೆ. ಅವರಿಗೂ ಎರಡು ಮಕ್ಕಳಾಗುತ್ತವೆ. ತರುವಾಯದಲ್ಲಿ ಗೀತಾರಿಗೆ ‘ಪ್ರಣಯ ರಾಜ’ರ ಈ ‘-ಷ್‌ಬ್ಯಾಕ್ ಪ್ರಣಯ’ ಗೊತ್ತಾದರೂ, ‘ಪತಿ-ಪತ್ನಿಯ ಸಂಬಂಧದ ವಿಷಯ ಬಂದಾಗ ನಾನೇ ಹಕ್ಕುದಾರಳು; ನನ್ನ ಗಂಡನ ಪ್ರೀತಿ ನನಗಷ್ಟೇ ಮೀಸಲು’ ಎಂದು ಸಮರ್ಥಿಸುವಂತೆ ಈ ಹಾಡು ಹಾಡುತ್ತಾರೆ, ಅದು ‘ವಾದ-ಪ್ರತಿವಾದ’ದ ರೂಪ ಪಡೆಯುತ್ತೆ ಎನ್ನಿ. “ಮಲ್ಲೆ ಹೂವ ನಲ್ಲೆ ಮುಡಿಗೆ ಇಟ್ಟ ನಲ್ಲನು, ಎಂದೂ ಅವಳ ಬಿಟ್ಟು ನೋಡ ಬೇರೆ ಯಾರನು” ಎಂದು ಗೀತಾ ಹೇಳುವಾಗ, ‘ನನ್ನ ಗಂಡ ನನಗೆ ಮಾತ್ರ ಮೀಸಲು, ನೀನು ಕಣ್ಣು ಹಾಕಬೇಡ’ ಎಂಬ ಧೋರಣೆ ಅದರಲ್ಲಿ ಅಡಗಿರುತ್ತದೆ. ಆದರೆ ಮರುಕ್ಷಣದಲ್ಲೇ ಸರಿತಾ, “ನಲ್ಲ ನೆಟ್ಟ ಪ್ರೀತಿ ಬಳ್ಳಿ ಎರಡು ತೋಟದೆ, ಎರಡು ಬಳ್ಳಿ ತಂದಾ ಹೂವು ಎಲ್ಲಾ ಅವನದೇ” ಎಂದು ಪ್ರತ್ಯುತ್ತರಿಸಿ, ‘ನಿನ್ನ ಗಂಡನಿಂದ ನಿನಗಷ್ಟೇ ಮಕ್ಕಳಾಗಿಲ್ಲ, ನಿನಗಿಂತ ಮುಂಚೆ ನನಗೂ ಆಗಿದೆ. ಹೀಗಾಗಿ ಅವನ ‘ಇನ್ವಾಲ್ ಮೆಂಟ್’ ಇದ್ದುದೆಲ್ಲವೂ ಅವನಿಗೇ ಸೇರಬೇಕು’ ಎನ್ನುತ್ತಾರೆ ಸೂಚ್ಯವಾಗಿ! (ಹೀಗೆ ಎರಡು ಕಡೆ ಜರುಗಿದ ‘ಲೈಂಗಿಕ ಸಂಬಂಧ’ವನ್ನು, ಅದರ ‘-ಲಶ್ರುತಿ’ಯನ್ನು ಇಷ್ಟು ಸಭ್ಯವಾಗಿ ಕಟ್ಟಿಕೊಟ್ಟ ಗೀತರಚನೆಕಾರ ಆರ್.ಎನ್. ಜಯಗೋಪಾಲ್‌ರಿಗೆ ಥ್ಯಾಂಕ್ಸ್ ಹೇಳಲೇಬೇಕು; ‘ಅಕ್ರಮ-ಸಕ್ರಮ’ ಸಂಬಂಧದ ಪರಿಯನ್ನು ಇದಕ್ಕಿಂತ ಸಂಭಾವಿತ ರೀತಿಯಲ್ಲಿ ಪ್ರಾಯಶಃ ಹೇಳಲಾಗದು. ಇನ್ಯಾರಾದರೂ ಆಗಿದ್ದಿದ್ದರೆ, ‘ಆವ್.. ಟಚಿಂಗ್ ಟಚಿಂಗ್’, ‘ಪೆಟ್ರೋಮ್ಯಾಕ್ಸ್’, ‘ಎರಡು ಟ್ರಾಕಲ್ಲೂ ಓಡಿದ ಎಂಜಿನ್ನು’ ಎಂದೆಲ್ಲಾ ಪದಗುಚ್ಛ ಬಳಸಿ ಬರೆಯುತ್ತಿದ್ದರೇನೋ?!).
ಈಗ, ಅರಿಶಿಣ-ಕುಂಕುಮಕ್ಕೆ ಬಂದವರ ಕಥೆಗೆ ಮತ್ತೆ ಬರೋಣ. ಬೊಂಬೆ ಹಬ್ಬದಲ್ಲಿ ಈ ಹಾಡನ್ನು ‘ಹಂಚಿಕೊಂಡು’ ಹಾಡುತ್ತಿದ್ದ ಇಬ್ಬರು ಹೆಂಗೆಳೆಯರಿಗೆ ಈ ಸೂಕ್ಷ್ಮವೇ ಅರ್ಥವಾಗಿರಲಿಲ್ಲ. ಎಷ್ಟೆಂದರೂ ‘ದೇವರ ಹಾಡಲ್ಲವೇ’ ಎಂಬ ಗ್ರಹಿಕೆಗೇ ಜೋತುಬಿದ್ದು, ಚಚ್ಚಿ ಬಾರಿಸಿಬಿಟ್ಟರು! ಹಾಡು ಮುಗಿಯುತ್ತಿದ್ದಂತೆ ‘ನೆರೆದಿದ್ದವರ’ (ಅಂದರೆ ಅರಿಶಿನ-ಕುಂಕುಮಕ್ಕೆ ಬಂದಿದ್ದವರ!) ಪುಷ್ಕಳ ಚಪ್ಪಾಳೆ! ಬೊಂಬೆಗಳಿಗೆ ಮಂಗಳಾರತಿ ಮಾಡಿ, ಎಲ್ಲರಿಗೂ ಚಿಗಳಿ-ತಂಬಿಟ್ಟು-ಕೋಸಂಬರಿ ಕೊಟ್ಟು ಕಳಿಸಿದ ನಂತರ, ಈ ಹಾಡು ಹಾಡಿದ ಹೆಂಗೆಳೆಯರ ಗಂಡಂದಿರು (ಅವರೂ ‘ಒನ್ಸ್ ಎಗೇನ್’ ಆಹ್ವಾನವಿಲ್ಲದಿದ್ದರೂ ಚಿಗಳಿ-ತಂಬಿಟ್ಟಿನ ಆಸೆಗೆ ಬಂದವರು!) ಅವರಿಬ್ಬರಿಗೂ ಸರಿಯಾಗಿ ‘ಮಂಗಳಾರತಿ’ ಮಾಡಿದರು. “ಕಮಂಗಿಗಳಾ, ಸಿನಿಮಾದಲ್ಲಿರೋ ಬೊಂಬೆಹಾಡು ಅಂದ ಮಾತ್ರಕ್ಕೆ ಹಿಂದು-ಮುಂದು ನೋಡದೆ ತೋಡಿರಾಗದಲ್ಲಿ ತೋಡಿ ಬಿಡಬೇಡಿ; ಸ್ವಲ್ಪ ಅರ್ಥಮಾಡ್ಕೊಂಡು ಹಾಡಿ…” ಅಂತ ಲೈಟಾಗಿ ‘ಕ್ಲಾಸ್’ ತೆಗೆದು ಕೊಂಡು ಗದರಿದರು. ಆ ಪತಿ ಮಹಾಶಯರಲ್ಲಿ ‘ಸ್ಪೋರ್ಟಿವ್ ಸ್ಪಿರಿಟ್’ ಇದ್ದುದರಿಂದ ಈ ಪ್ರಕರಣವನ್ನು ಅತಿರೇಕಕ್ಕೆ ಬೆಳೆಸಲಿಲ್ಲ, ಆ ಮಾತು ಬೇರೆ!
ಈಗಲೂ ಟಿವಿಯಲ್ಲಿ ‘ಹದಿನಾಲ್ಕು ವರ್ಷ ವನವಾಸದಿಂದ’ ಅಥವಾ ‘ನವರಾತ್ರಿ ಸಂಜೆಯಲಿ’ ಹಾಡು ಬಂದಾಗಲೆಲ್ಲ ಈ ಎರಡು ಪ್ರಸಂಗಗಳು ನೆನಪಾಗುತ್ತವೆ…
ಇದನ್ನೂ ಓದಿ: Yagati Raghu Nadig column