Sunday, 24th November 2024

‌Yagati Raghu Nadig Column: ಉಪಚುನಾವಣೆ ಬಂದ್ರೆ ನೆನಪಾಗ್ತಾರೆ ಅಣ್ಣಾವ್ರು…

ರಸದೌತಣ

ಯಗಟಿ ರಘು ನಾಡಿಗ್

ಮುಂದಿನ ತಿಂಗಳು ರಾಜ್ಯದ ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚು
ನಾವಣೆ ನಡೆಯಲಿದ್ದು, ಅದಕ್ಕೆ ಸಂಬಂಧಿಸಿದ ‘ಹೊಯ್ -ಕೈ’ ಪ್ರಸಂಗಗಳಿಗೆ, ‘ಆಯಾರಾಂ-ಗಯಾರಾಂ’ ಘಟ
ನೆಗೆ ನೀವೆಲ್ಲಾ ಸಾಕ್ಷಿಯಾಗಿದ್ದೀರಿ. ಆದರೆ ಯಾವಾಗಲಾದರೊಮ್ಮೆ ಇಂಥ ಉಪಚುನಾವಣೆ ಎದುರಾದಾಗ, ನನ್ನಂಥ ಬಹುತೇಕರಿಗೆ ನೆನಪಾಗೋದು ‘ಅಣ್ಣಾವ್ರು’ ಎಂದೇ ಅಭಿಮಾನದಿಂದ ಕರೆಯಲ್ಪಡುವ ಡಾ.ರಾಜ್‌ಕುಮಾರ್ ಅವರು. “ಇದೇನಪ್ಪಾ ಇದೂ…? ಇಮಾಮ್‌ಸಾಬ್ರಿಗೂ ಗೋಕುಲಾಷ್ಟಮಿಗೂ ಎಲ್ಲಿಯ ಸಂಬಂಧ? ಬಹುತೇಕವಾಗಿ ಬಟ್ಟೆ ಗಲೀಜಾಗುತ್ತಲೇ ಹೋಗುವ ರಾಜಕೀಯವೆಂಬ ಕೆಸರೆಲ್ಲಿ? ಆ ಕೆಸರಿನಿಂದ ದೂರವಿದ್ದ ಅಣ್ಣಾವ್ರು ಎಲ್ಲಿ?” ಎಂದು ನೀವು ಗೊಂದಲಕ್ಕೊಳಗಾಗಬಹುದು. ಅದು ಸಹಜವೇ!

ಆದರೆ, ಯಾವುದೇ ಉಪಚುನಾವಣೆ ಬಂದಾಗ ಅಣ್ಣಾವ್ರ ನೆನಪಾಗೋದಕ್ಕೆ ಒಂದು ಕಾರಣವಿದೆ. ಅದು ತೆರೆದು ಕೊಳ್ಳುವುದು ಈ ಫ್ಲ್ಯಾಷ್‌ಬ್ಯಾಕ್ ಮೂಲಕ…. ಬಹುತೇಕರಿಗೆ ಗೊತ್ತಿರುವಂತೆ, ಕಾಂಗ್ರೆಸ್‌ನ ಅಧಿನಾ ಯಕಿಯಾಗಿದ್ದ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ ತರುವಾಯದಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿತ್ತು. ಉತ್ತರ ಪ್ರದೇಶದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಇಂದಿರಾ ಕೂಡ ‘ಧರಾಶಾಯಿ’ ಆಗಿದ್ದರು.

ಹಾಗಂತ ಅವರು ಕೈಚೆಲ್ಲಿ ಕೂರುವಂತಿರಲಿಲ್ಲ, ಫೀನಿಕ್ಸ್ ಪಕ್ಷಿಯಂತೆ ಆ ಮಣ್ಣಿನಿಂದ ಮೇಲೆದ್ದು ಬರಲೇಬೇಕಿತ್ತು.
ಆದರೆ ಸುಸೂತ್ರ ಗೆಲುವನ್ನು ತಂದುಕೊಡಬಲ್ಲ ಮತಕ್ಷೇತ್ರವನ್ನು ಕಂಡುಕೊಳ್ಳಲಾಗದೆ ಕತ್ತಲಲ್ಲಿದ್ದರು ಇಂದಿರಮ್ಮ.
ಆಗ ಅವರಿಗೆ ಆಶಾಕಿರಣವಾಗಿ ಒದಗಿದವರು ಕರ್ನಾಟಕದ ಡಿ.ಬಿ.ಚಂದ್ರೇ ಗೌಡರು. ತಾವು ಪ್ರತಿನಿಧಿಸುತ್ತಿದ್ದ ಚಿಕ್ಕಮಗಳೂರು ಸಂಸದ ಸ್ಥಾನಕ್ಕೆ ರಾಜೀನಾಮೆಯಿತ್ತ ಚಂದ್ರೇಗೌಡರು, ಇಂದಿರಾರ ಸ್ಪರ್ಧೆಗೆ ಭೂಮಿಕೆ ಒದಗಿಸಿ ದರು.

1978ರ ನವೆಂಬರ್ 9ರಂದು ‘ಉಪಚುನಾವಣೆ’ ನಿಗದಿಯಾ ಯಿತು. ಆಗ ಜನತಾ ಪರಿವಾರದ ವತಿಯಿಂದ ಒಮ್ಮತದ
ಅಭ್ಯರ್ಥಿಯೊಬ್ಬರನ್ನು ನಿಲ್ಲಿಸುವ ಕುರಿತು ಲೆಕ್ಕಾಚಾರಗಳು ಶುರುವಾದವು, ಈ ಕುರಿತಾಗಿ ಸಾರ್ವಜನಿಕ ಚರ್ಚೆಗಳೂ ನಡೆದವು. ಆಗ ಶೃಂಗೇಶ್ವರ ಎಂಬ ಓದುಗರೊಬ್ಬರು ‘ಪ್ರಜಾವಾಣಿ’ ಪತ್ರಿಕೆಯ ‘ವಾಚಕರ ವಾಣಿ’ ವಿಭಾಗದಲ್ಲಿ “ಇಂದಿರಾರ ವಿರುದ್ಧ ಸ್ಪರ್ಧಿಸಲು ಡಾ. ರಾಜ್‌ಕುಮಾರರೇ ಸೂಕ್ತ ವ್ಯಕ್ತಿ” ಎಂಬರ್ಥದ ಪತ್ರ ಬರೆದರು. ತಗಳ್ಳಿ ಶುರುವಾಯ್ತು ಅಣ್ಣಾವ್ರನ್ನ ಬೆಂಬತ್ತುವಿಕೆ!

ಅದಕ್ಕೆ ಕಾರಣವಿತ್ತು. ಅದು ಅಣ್ಣಾವ್ರು ತಮ್ಮ ಸಿನಿಜೀವನದಲ್ಲಿ ಯಶಸ್ಸಿನ ತುತ್ತತುದಿಯಲ್ಲಿದ್ದ ಕಾಲಘಟ್ಟ.
ಯಾವುದೇ ರಾಜಕಾರಣಿಗೆ ಇರಬಹುದಾದ ‘ಹಿಂಬಾಲಕರ ಪಡೆ’ಯನ್ನೂ ನೀವಾಳಿಸಿ ಒಗೆಯಬಲ್ಲಷ್ಟರ ಮಟ್ಟಿಗಿನ
‘ಅಭಿಮಾನಿ ಬಳಗ’ ಮತ್ತು ಜನಪ್ರಿಯತೆ ಅಣ್ಣಾವ್ರಿಗೆ ಇತ್ತು. ಹೀಗಾಗಿ ಚುನಾವಣಾ ಸ್ಪರ್ಧೆಗೆ ಅವರ ಮನವೊಲಿಸಲು ಇನ್ನಿಲ್ಲದ ಯತ್ನಗಳಾದವು ಜನತಾ ಪರಿವಾರಿಗರಿಂದ. ಆದರೆ ರಾಜಣ್ಣ ಇದಕ್ಕೆ ಸೊಪ್ಪು ಹಾಕದೆ ವಿನಯದಿಂದಲೇ ನಿರಾಕರಿಸಿದರು. ಸಾಲದೆಂಬಂತೆ, ನಾಮಪತ್ರ ಸಲ್ಲಿಕೆಗಿರುವ ಕೊನೆಯ ದಿನಾಂಕವು ಮುಗಿಯುವವರೆಗೂ ಪತ್ನಿ ಪಾರ್ವತಮ್ಮನವರೊಂದಿಗೆ ಅದ್ಯಾವುದೋ ಅಜ್ಞಾತ ನೆಲೆಗೆ ತೆರಳಿಬಿಟ್ಟರು. ನಂತರ, ಇಂದಿರಾ ಎದುರು ವೀರೇಂದ್ರ ಪಾಟೀಲರು ಸ್ಪರ್ಧಿಸಿದ್ದು, ಬರೋಬ್ಬರಿ 77333 ಮತಗಳ ಅಂತರದಿಂದ ಸೋತಿದ್ದು ಇವೆಲ್ಲ ಗೊತ್ತಿರು ವಂಥದ್ದೇ.

ರಾಜಕೀಯವು ತಮಗೊಗ್ಗದ ವಿಷಯ ಎಂಬ ಕಾರಣಕ್ಕೆ ಚುನಾವಣಾ ಕಣಕ್ಕೆ ಅಣ್ಣಾವ್ರು ಇಳಿಯಲಿಲ್ಲ ಎಂಬ ‘ಸ್ಥೂಲ ಸಮರ್ಥನೆಗಳು’ ಆ ಘಟ್ಟದಲ್ಲಿ ಸಂಬಂಧಪಟ್ಟವರಿಂದ ಹೊಮ್ಮಿದರೂ, “ಅಣ್ಣಾವ್ರು ಹಾಗೆ ಸಾರಾಸಗಟಾಗಿ
ನಿರಾಕರಿಸಿದ್ದೇಕೆ? ಅದರ ಹಿಂದಿನ ಸೂಕ್ಷ್ಮತೆಯೇನು?” ಎಂಬುದು ಬಹುತೇಕರನ್ನು ಕಾಡುತ್ತಿದ್ದ ಯಕ್ಷಪ್ರಶ್ನೆಯಾಗಿತ್ತು. ಅಣ್ಣಾವ್ರು ಬದುಕಿರುವವರೆಗೂ ಇದಕ್ಕುತ್ತರ ಸಿಕ್ಕಿರಲಿಲ್ಲ, ಅವರೂ ಅದನ್ನು ಎಲ್ಲೂ ಬಹಿರಂಗವಾಗಿ ಹೇಳಿ ಕೊಂಡಿರಲಿಲ್ಲ. ಆದರೆ ಅವರ ಮಗ ರಾಘವೇಂದ್ರ ರಾಜ್‌ಕುಮಾರ್ ಕೆಲ ವರ್ಷಗಳ ಹಿಂದೆ ‘ಬೆಂಗಳೂರ್
ಮಿರರ್’ ಪತ್ರಿಕೆಯೊಂದಿಗೆ ಮಾತಾಡುತ್ತಾ ಈ ಗೋಜಲನ್ನು ಬಿಡಿಸಿದ್ದುಂಟು.

ಅವರದೇ ಮಾತುಗಳ ಸಾರಸಂಗ್ರಹ ರೂಪ ಇಲ್ಲಿದೆ: “ನಾನು ಆಗಷ್ಟೇ ದ್ವಿತೀಯ ಪಿಯುಸಿ ಮುಗಿಸಿ ವೈದ್ಯಕೀಯ ಕಾಲೇಜು ಸೇರಲು ಸಜ್ಜಾಗುತ್ತಿದ್ದೆ. ಉಪಚುನಾವಣೆಯಲ್ಲಿನ ಸ್ಪರ್ಧೆಗೆ ಅಪ್ಪಾಜಿ ಹೀಗೆ ನಿರಾಕರಿಸಿದ್ದೇಕೆ ಎಂಬುದನ್ನು ತಿಳಿಯಲು ನಾನೂ ಸಾಕಷ್ಟು ಉತ್ಸುಕನಾಗಿದ್ದೆ, ಒಮ್ಮೆ ಕೇಳಿಯೇಬಿಟ್ಟೆ. ಅದಕ್ಕವರು, ‘ಇದನ್ನು ಅರ್ಥಮಾಡಿ ಕೊಳ್ಳಲು ನಿನಗಿನ್ನೂ ವಯಸ್ಸು ಚಿಕ್ಕದು, ಜತೆಗೆ ನಾನಿದನ್ನು ನಿನಗೆ ಹೇಳಲು ಕಾಲವೂ ಪಕ್ವವಾಗಿಲ್ಲ.
ಸೂಕ್ತ ಸಮಯ ಬಂದಾಗ ಹೇಳುವೆ. ಕಂದಾ, ‘ಕವಿರತ್ನ ಕಾಳಿದಾಸ’ ಚಿತ್ರದ ‘ಹೇಳುವುದಕ್ಕೂ ಕೇಳುವುದಕ್ಕೂ ಇದು
ಸಮಯವಲ್ಲ’ ಅನ್ನೋ ಸಂಭಾಷಣೆ ನಿನಗೆ ನೆನಪಿರಬೇಕಲ್ವಾ?’ ಎಂದುಬಿಟ್ಟರು….

“ಕಾಲ ಹೀಗೇ ಉರುಳುತ್ತಿತ್ತು. ಅಪ್ಪಾಜಿ ದೈವಾಧೀನರಾಗುವುದಕ್ಕೂ ಒಂದು ವರ್ಷ ಮೊದಲು, ಅಂದರೆ 2005ರಲ್ಲಿ ಆ ‘ಹೇಳುವ ಸಮಯ’ ಬಂತು. ಅದಕ್ಕೆ ಭೂಮಿಕೆಯನ್ನು ಒದಗಿಸಿದ್ದು ಅಪ್ಪಾಜಿಗೆ ಚೆನ್ನೈಯಲ್ಲಿ ಆದ ಮೊಣಕಾಲಿನ ಶಸ್ತ್ರಚಿಕಿತ್ಸೆಯ ಸಂದರ್ಭ. ಅಂದು ನನ್ನೊಬ್ಬನನ್ನೇ ಆಸ್ಪತ್ರೆಯ ಕೊಠಡಿಗೆ ಕರೆಸಿಕೊಂಡ ಅಪ್ಪಾಜಿ, ಸಾಕಷ್ಟು ವರ್ಷ ಗಳ ಹಿಂದೆ ನಾನು ಅವರಿಗೆ ಕೇಳಿದ್ದ ಪ್ರಶ್ನೆಯನ್ನು ನನಗೆ ನೆನಪಿಸಿ, ಸ್ಪರ್ಧೆಗೆ ನಿರಾಕರಿಸಿದ್ದರ ‘ನಿಜಕಾರಣ’ ವನ್ನು ಹೇಳಲು ಮುಂದಾದರು.

ಇದನ್ನು ಅವರು ನಮ್ಮಮ್ಮ ಪಾರ್ವತಮ್ಮ ಅವರಿಗಾಗಲೀ, ಸೋದರರಾದ ಶಿವಣ್ಣ, ಪುನೀತ್ ಅವರಿಗಾಗಲೀ, ತಮಗೆ
ಅತ್ಯಾಪ್ತರಾಗಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗಾಗಲೀ ಹೇಳದೆ, ನನಗೆ ಮಾತ್ರ ಹೇಳಿದ್ದೇಕೆ ಎಂದು
ಕೇಳಿಕೊಂಡರೆ ಈಗಲೂ ನನಗಚ್ಚರಿಯಾಗುತ್ತದೆ. ಅಪ್ಪಾಜಿ ಹೇಳಿದರು: ‘ಕಂದಾ, ರಾಜಕೀಯ ಕ್ಷೇತ್ರಕ್ಕೆ ನನ್ನಿಂದ
ಒಂದು ಸಕಾರಾತ್ಮಕ ಕೊಡುಗೆ ದಕ್ಕುವಂತಾಗಬೇಕು ಎಂಬುದು ನನ್ನನ್ನು ಚುನಾವಣಾ ಸ್ಪರ್ಧೆಗೆ ಒತ್ತಾಯಿಸು ತ್ತಿದ್ದವರ ಆಶಯವಾಗಿದ್ದಿದ್ದರೆ, ಪ್ರಾಯಶಃ ನಾನು ಅದನ್ನು ಪರಿಗಣಿಸುತ್ತಿದ್ದೆನೇನೋ? ಆದರೆ, ಅವರು ನನ್ನನ್ನು ಅರಸಿ ಬಂದಿದ್ದರ ಉದ್ದೇಶ ಬೇರೆಯೇ ಇತ್ತು.

ಅವರು ನನ್ನನ್ನು ಒಂದು ಆಯುಧವಾಗಿ ಬಳಸಿಕೊಳ್ಳಲು ಆಶಿಸಿದ್ದರಷ್ಟೇ. ಮುಂದೆ, ಗೋಕಾಕ್ ವರದಿಯ ಜಾರಿಗೆ
ಆಗ್ರಹಿಸಿ ಹಮ್ಮಿಕೊಳ್ಳಲಾಗಿದ್ದ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಕೆಲವರು ನನ್ನನ್ನು ಕೇಳಿಕೊಂಡಾಗ, ಸಂತಸ
ದಿಂದಲೇ ಒಪ್ಪಿಕೊಂಡೆ, ಪಾಲ್ಗೊಂಡೆ (ಇದು 1978ರ ಉಪಚುನಾವಣೆಯಾದ 5 ವರ್ಷಗಳ ನಂತರ ಘಟಿಸಿದ
ವಿದ್ಯಮಾನ). ಏಕೆಂದರೆ, ಅಲ್ಲಿ ನನ್ನ ಪಾಲ್ಗೊಳ್ಳುವಿಕೆ ಅಗತ್ಯವಾಗಿತ್ತು ಮತ್ತು ಅಲ್ಲಿ ನಾನೊಂದು ಸಕಾರಾತ್ಮಕ
ಕೊಡುಗೆ ನೀಡುವುದಕ್ಕೆ ಅವಕಾಶವಿತ್ತು. ಆದರೆ ಆ ಉಪಚುನಾವಣೆಯ ಬಾಬತ್ತು ಹಾಗಿರಲಿಲ್ಲ, ಅಲ್ಲಿ ನಾನೊಂದು ‘ಅವಶ್ಯಕತೆ’ ಆಗಿರಲಿಲ್ಲ; ಯಾರೋ ಎದುರಾಳಿಯನ್ನು ಸೋಲಿಸುವುದಕ್ಕಷ್ಟೇ ನಾನು ಬೇಕಾಗಿತ್ತು.

ನಾನು ಹೀಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದುದು ಸರಿಯಾದ ನಿರ್ಧಾರವಾಗಿತ್ತಲ್ಲವೇ ಕಂದಾ?’. ಅವರ ಈ
ಮಾತಿಗೆ ನಾನು, ‘ನಿಮ್ಮಿಂದ ತಪ್ಪು ನಡೆಯುವುದಕ್ಕೆ ಸಾಧ್ಯವೇ ಅಪ್ಪಾಜಿ..’ ಎಂದುತ್ತರಿಸಿದೆ…. “1978ರ ಆ ಕಾಲಘಟ್ಟ ದಲ್ಲಿ ನಾವು ನೆಲೆಸಿದ್ದು ಚೆನ್ನೈನಲ್ಲಿ. ಚಿಕ್ಕಮಗಳೂರು ಉಪಚುನಾವಣೆಯ ಆಸುಪಾಸಿನ ಒಂದು ದಿನ ಅಪ್ಪಾಜಿ ಹಾಗೂ ಅಮ್ಮ ಇಬ್ಬರೂ ದಿನಬಳಕೆಗೆ ಬೇಕಾಗುವ ಆಹಾರ ಪದಾರ್ಥಗಳನ್ನೆಲ್ಲಾ ಎರಡು ಕಾರುಗಳಲ್ಲಿ ತುಂಬಿಸಿ ಕೊಂಡು ತಮಿಳುನಾಡಿನ ಅದ್ಯಾವುದೋ ಅಜ್ಞಾತ ನೆಲೆಗೆ ಒಂದು ವಾರದವರೆಗೆ ಹೋಗಿಬಿಟ್ಟರು.

ಚಿಕ್ಕಮಗಳೂರು ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಇನ್ನಿಲ್ಲದಂತೆ ಬೆನ್ನತ್ತಿದ್ದ ಕೆಲ ರಾಜಕಾರಣಿ ಗಳಿಂದ ತಪ್ಪಿಸಿಕೊಳ್ಳಲು ಅವರು ಈ ಕಸರತ್ತಿಗೆ ಮುಂದಾಗಿದ್ದರು. ಅತಿರಥ- ಮಹಾರಥ ರೆನಿಸಿಕೊಂಡ ಅನೇಕರು ಅಪ್ಪಾಜಿಯನ್ನು ಭೇಟಿಯಾಗಲು ಬೆಂಗಾವಲು ಪಡೆಗಳೊಂದಿಗೆ ಬರುತ್ತಿದ್ದರೂ, ಅವರ‍್ಯಾರ ಕೈಗೂ ಅಪ್ಪಾಜಿ ಸಿಗಲಿಲ್ಲ. ಈ ಎಲ್ಲ ಬೆಳವಣಿಗೆಗಳ ಕುರಿತಾಗಿ ಅಪ್ಪಾಜಿ ಸಾರ್ವಜನಿಕವಾಗಿ ಏಕೆ ಹೇಳಿಕೊಳ್ಳಲಿಲ್ಲ ಎಂಬುದೂ ನನಗೆ ಗೊತ್ತಿಲ್ಲ. ಆ ವಿಷಯವನ್ನು ಹಾಗೆ ಮರೆಯಲ್ಲಿ ಇರಿಸಬೇಕೆಂಬುದು ಅವರ ಆಶಯವಾಗಿತ್ತು ಅನಿಸುತ್ತೆ.

ಚಿಕ್ಕಮಗಳೂರು ಉಪಚುನಾವಣೆ ನಡೆದಾದ ಕೆಲ ವರ್ಷಗಳ ನಂತರವೂ, ರಾಜಕೀಯಕ್ಕೆ ಪ್ರವೇಶಿಸು ವಂತೆ ಅಥವಾ ತಮ್ಮದೇ ಆದ ರಾಜಕೀಯ ಪಕ್ಷವೊಂದಕ್ಕೆ ಚಾಲನೆ ನೀಡುವಂತೆ ಅಪ್ಪಾಜಿಯ ಮೇಲೆ ಸಾಕಷ್ಟು ಒತ್ತಡ ಬರುತ್ತಿದ್ದು ದುಂಟು, ಆಗಲೂ ಅಪ್ಪಾಜಿ ಅದಕ್ಕೆ ಹಿಂದೇಟು ಹಾಕಿದರು (ಅಷ್ಟೊತ್ತಿಗಾಗಲೇ ನೆರೆಯ ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್ ಮತ್ತು ಆಂಧ್ರಪ್ರದೇಶದಲ್ಲಿ ಎನ್ .ಟಿ.ರಾಮರಾವ್‌ರಂಥ ಜನಪ್ರಿಯ ಚಿತ್ರನಟರು ರಾಜಕೀಯ ಕ್ಕಿಳಿದು ಯಶಸ್ವಿಯೂ ಆಗಿದ್ದರು ಎಂಬುದು ಓದುಗರ ಗಮನಕ್ಕೆ!). ತಮ್ಮ ಈ ನಡೆಗೆ ಅಪ್ಪಾಜಿಗೆ ಅವರದೇ ಆದ ಕಾರಣಗಳಿದ್ದವು.

‘ಕಂದಾ, ನಾನು ಅಷ್ಟೊಂದು ವಿದ್ಯಾವಂತನಲ್ಲ’ ಎಂದು ಅವರು ಆಗಾಗ ಹೇಳುತ್ತಿದ್ದರು. ನಿಜ, ಇದೂ ಒಂದು ಕಾರಣವಾಗಿರ ಬಹುದು. ಜತೆಗೆ, ಓರ್ವ ಜನಪ್ರಿಯ ನಟನಾಗಿ ಅವರಿಗಿದ್ದ ಹೊಣೆಗಾರಿಕೆಯೂ ಅಪ್ಪಾಜಿಯ ಈ ನಿಲುವಿಗೆ ಮತ್ತೊಂದು ಕಾರಣವಾಗಿದ್ದಿರಬಹುದು. ಏಕೆಂದರೆ, ರಾಜಕೀಯ ಪ್ರಯೋಜನಗಳನ್ನು ದಕ್ಕಿಸಿಕೊಳ್ಳ ಬೇಕೆಂಬ ಒಂದೇ ಕಾರಣಕ್ಕೆ ತಮ್ಮ ಯಾವೊಬ್ಬ ಅಭಿಮಾನಿಯನ್ನೂ ದೂರ ಮಾಡಿಕೊಳ್ಳಲು ಅಪ್ಪಾಜಿ ಬಯಸಿರ ಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ‘ಆ ದೇವರು ನನ್ನನ್ನು ಈ ಸಿನಿಮಾ ಪ್ರಪಂಚದಲ್ಲಿ ತೊಡಗಿಸಿದ್ದಾನೆ, ನನಗೆ ಜೀವನ ದಲ್ಲಿರೋದು ಇದೊಂದೇ ಉದ್ದೇಶ ಮತ್ತು ಗುರಿ’ ಎಂದು ಯಾವಾಗಲೂ ಹೇಳುತ್ತಿದ್ದ ಅಪ್ಪಾಜಿ, ಅದನ್ನು ಬದಲಿಸಲು ಎಂದೂ ಬಯಸಲಿಲ್ಲ….”.

ಇದು ರಾಘವೇಂದ್ರ ರಾಜ್‌ಕುಮಾರ್ ಅವರು ತೆರೆದಿಟ್ಟ ‘ಅಣ್ಣಾವ್ರ ಅಂತರಂಗ’. ಅಭಿಮಾನಿಗಳನ್ನೇ ‘ದೇವರು’
ಎಂದು ಸಂಬೋಧಿಸುತ್ತಿದ್ದ ಅಣ್ಣಾವ್ರು ‘ಅಭಿಮಾನಿಗಳ ದೇವರು’ ಆಗಿದ್ದು ಹೇಗೆ ಎಂಬುದಕ್ಕೆ ಇದಕ್ಕಿಂತ ಪುರಾವೆ
ಬೇಕೇ?!

ಪಾಯಿಖಾನೆಯನ್ನೂ ಬಿಡಲಿಲ್ಲವಂತೆ!

ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಂದಿರಾ ಗಾಂಧಿಯವರ ವಿರುದ್ಧ ಸ್ಪರ್ಧಿಸುವಂತೆ ಜನತಾ ಪರಿವಾರದ ಕೆಲ ರಾಜಕಾರಣಿಗಳು ಅಣ್ಣಾವ್ರನ್ನು ಬೆನ್ನತ್ತಿದ್ದ ಪರಿ ಹೇಗಿತ್ತು ಎಂಬುದಕ್ಕೆ ಇಲ್ಲೊಂದು ಸಾಕ್ಷಿಯಿದೆ. ಇದು, ಕೆಲ ತಿಂಗಳ ಹಿಂದೆ ತೀರಿಕೊಂಡ ಖ್ಯಾತ ಚಿತ್ರ ನಿರ್ದೇಶಕ ಭಗವಾನ್ (ದೊರೆ-ಭಗವಾನ್ ಜೋಡಿಯ ಖ್ಯಾತಿ) ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡ ಪಡಿಪಾಟಲು: “ಅಣ್ಣಾವ್ರು ತಮ್ಮ ಮನೆಯಲ್ಲಿ ಸಿಗದಿದ್ದಾಗ, ಅವರು ಯಾವೆಲ್ಲಾ ನೆಲೆಗಳಲ್ಲಿ ಅಡಗಿರಬಹುದು ಎಂದು ತಲಾಶೆಗಿಳಿದ ಜನತಾ ಪರಿವಾರದವರು
ಬೆಂಗಳೂರಿನ ನಮ್ಮ ಮನೆ ಹಾಗೂ ಕಚೇರಿಯನ್ನೂ ಬಿಡಲಿಲ್ಲ.

ನಮ್ಮ ಮನೆಯನ್ನಂತೂ ಮೇಲಿಂದ ಕೆಳಗಿನವರೆಗೂ ಜಾಲಾಡಿದ್ದು ಸಾಲದೆಂಬಂತೆ, ಮನೆಯ ಪಾಯಿಖಾನೆ ಯಲ್ಲೂ ಇಣುಕಿ ನೋಡಿದರು ಟಕಿಯ ಪರದೆಗಳ ಹಿಂದೆಯೂ ತಡಕಾಡಿದರು, ಮೊದಲ ಮಹಡಿಯಲ್ಲಿ ನಾನು ರೂಪಿಸಿಕೊಂಡಿದ್ದ ಥಿಯೇಟರ್‌ನಲ್ಲೂ ಹುಡುಕಿದರು…”

ಇದನ್ನೂ ಓದಿ: Yagati Raghu Nadig Column: ಬಾಯಿಮಾತು ಬಳುಕಿದರೆ ಬಾಳಲ್ಲಿ ಪುಳಕ !