Friday, 22nd November 2024

Yagati Raghu Nadig Column: ನೋಟದಲ್ಲಿ ‘ಲಿಟ್ಲ್ ಮಾಸ್ಟರ್’, ಆಟದಲ್ಲಿ ‘ಮೆಗಾ ಬ್ಲಾಸ್ಟರ್’

Yagati Raghu Nadig Column

ವಿಶ್ವರೂಪ ದರ್ಶನ ಅಂಕಣ

ಯಗಟಿ ರಘು ನಾಡಿಗ್

Yagati Raghu Nadig Column: ದಶಕಗಳ ಹಿಂದಿನ ಕಥೆಯಿದು. ಮಾಸ್ಟರ್ ಹಿರಣ್ಣಯ್ಯನವರ ಯಾವುದೋ ನಾಟಕದ ವಿಶೇಷ ಪ್ರದರ್ಶನ ಏರ್ಪಾಡಾಗಿತ್ತು. ಅದಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದವರಲ್ಲಿ ವಾಮನಾಕಾರದ ಒಬ್ಬ ವ್ಯಕ್ತಿಯೂ ಇದ್ದರು. ಪ್ರದರ್ಶನದ ನಡುವೆ ಅತಿಥಿಗಳನ್ನು ಸನ್ಮಾನಿಸಲು ಮುಂದಾದ ಹಿರಣ್ಣಯ್ಯನವರು, ‘‘ಚೋಟುದ್ದ ಇದ್ದೀಯಾ, ಅದೇನು ಆಟ ಆಡ್ತೀಯಪ್ಪಾ..?!!’’ ಎಂದು ಆ ವಾಮನಮೂರ್ತಿಯ ಮೇಲೆ ಅಕ್ಷರಶಃ ಲಲ್ಲೆಗರೆದರಂತೆ. ಹಾಗೆ ಮುದ್ದುಮಾಡಿಸಿಕೊಂಡವರು ‘ಲಿಟ್ಲ್ ಮಾಸ್ಟರ್’ (Little Master) ಎಂದೇ ಖ್ಯಾತರಾದ, ಕ್ರಿಕೆಟ್ ಜೀವನದ ದಂತಕಥೆಯಾಗಿರುವ ಗುಂಡಪ್ಪ ರಂಗನಾಥ ವಿಶ್ವನಾಥ್ ಅಥವಾ ಜಿ.ಆರ್.ವಿಶ್ವನಾಥ್ (GR Vishwanath). ಆತ್ಮೀಯರು-ಅಭಿಮಾನಿಗಳ ಬಾಯಲ್ಲಿ ಇವರು ‘ಷಾರ್ಟ್ ಆ್ಯಂಡ್ ಸ್ವೀಟ್’ ಆಗಿ ‘ವಿಶಿ’.

ಇನ್ನೊಂದು ಘಟನೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕ್ರಿಕೆಟ್ ಪಂದ್ಯ. ಬ್ಯಾಟಿಂಗ್ ಕ್ರೀಸ್‌ನಲ್ಲಿದ್ದ ‘ವಿಶಿ’ ಜಪ್ಪಯ್ಯ ಅಂದರೂ ಜಗ್ಗುತ್ತಿಲ್ಲ, ಔಟಾಗುತ್ತಿಲ್ಲ. ಬೌಲಿಂಗ್ ದಾಳಿಗೆ ಇಳಿದಿದ್ದ ಆ್ಯಂಡಿ ರಾಬರ್ಟ್ಸ್ ‘‘ದೈತ್ಯದೇಹಿಗಳ ವಿಕೆಟ್ ಅನ್ನೇ ಕೆಡವಿರುವ ನನಗೆ ಈ ಚಿಲ್ಟಾರಿ ವಿಕೆಟ್ ಒಪ್ಪಿಸದೆ ಆಟ ಆಡಿಸ್ತಾ ಇದ್ದಾನಲ್ಲಾ?’’ ಎಂದು ಸಾಕಷ್ಟು ಹತಾಶರಾಗಿದ್ದರಂತೆ. ಅಂದಹಾಗೆ, ಆಂಡಿ ರಾಬರ್ಟ್ಸ್ ಮಾರಕ ಬೌಲಿಂಗ್‌ಗೆ ಹೆಸರಾಗಿದ್ದವರು. ಅವರ ದಾಳಿಗೆ ಒಂದೋ ಎದುರಾಳಿಗಳ ವಿಕೆಟ್ ಬೀಳುತ್ತಿತ್ತು, ಇಲ್ಲವೇ ಅವರು ಎಸೆದ ಚೆಂಡು ಬ್ಯಾಟ್ಸ್ ಮನ್‌ನ ಮುಖ-ಮೂತಿಗೆ ಅಪ್ಪಳಿಸಿ ರಕ್ತ ಚಿಮ್ಮುತ್ತಿತ್ತು. ಇಂಥ ‘ರಕ್ತಚರಿತೆ’ಯಿದ್ದ ಆಂಡಿ ರಾಬರ್ಟ್ಸ್ ತಮಗೆ ವಿಕೆಟ್ ಒಪ್ಪಿಿಸದ ‘ವಿಶಿ’ ಅವರನ್ನು ಉದ್ದೇಶಿಸಿ, ‘‘ I don’t want your wicket, I want your blood’’ ಎಂದು ಹೇಳಿದ್ದರಂತೆ!!

ಮೇಲಿನ ದೃಷ್ಟಾಂತಗಳನ್ನು ಬೆಂಗಳೂರಿನಿಂದ ಬಂದಿದ್ದ ನಮ್ಮಣ್ಣ, ನಾವಿದ್ದ ಹಳ್ಳಿ ಯಗಟಿಗೆ ಬಂದಾಗ ಹೇಳಿದ್ದು. ಕ್ರಿಕೆಟ್ ಬಗ್ಗೆ ಅಸಾಧ್ಯ ಹುಚ್ಚು ಹಿಡಿಸಿಕೊಂಡಿದ್ದ ನಾನು ಅವನ್ನು ಮನಸಾರೆ ಚಪ್ಪರಿಸಿದ್ದುಂಟು. ಏಕೆಂದರೆ, ಈಗಿನಂತೆ ಆಗಿನ್ನೂ ಮನೆಮನೆಗಳಿಗೂ ಟಿವಿ ದಾಂಗುಡಿಯಿಟ್ಟಿರಲಿಲ್ಲ. ಟಿವಿಯ ಕಥೆ ಹಾಗಿರಲಿ, ಮನೆಯೊಳಗೊಂದು ರೇಡಿಯೋ ಇದ್ದರೆ ಅದೇ ಪುಣ್ಯ! ಬೆಂಗಳೂರಿನಲ್ಲೋ ದೂರದ ದೇಶದಲ್ಲೆಲ್ಲೋ ನಡೆಯುತ್ತಿದ್ದ ಟೆಸ್ಟ್ ಕ್ರಿಕೆಟ್‌ನ ಕಾಮೆಂಟರಿ ಕೇಳುವುದಕ್ಕೆ ಯಾರದ್ದಾದರೂ ಮನೆಯೊಳಗೆ ಕಾಡಿ-ಬೇಡಿ ತೂರಿಕೊಳ್ಳಬೇಕಾಗಿ ಬರುತ್ತಿದ್ದ ಕಾಲವದು. ನಂತರ ಕಿವಿಗಳಿಗೆ ಒದಗುತ್ತಿದ್ದುದು ಅಪ್ಪಟ ರಸದೌತಣ. ಕಾರಣ, ಪಂದ್ಯದ ವೀಕ್ಷಕ ವಿವರಣೆಕಾರರು ಹಾಗೂ ಅದಕ್ಕೆ ಮತ್ತಷ್ಟು ಒಗ್ಗರಣೆ ಹಾಕುತ್ತಿದ್ದ ತಜ್ಞ ವ್ಯಾಖ್ಯಾನಕಾರ ಕೃಷ್ಣಮೂರ್ತಿಯವರು ಒಂದಿಡೀ ಆಟವನ್ನು ರುಚಿಕಟ್ಟಾಗಿ ವರ್ಣಿಸುತ್ತಿದ್ದರು. ನಿಜ ಹೇಳಬೇಕೆಂದರೆ, ಅವರಿಬ್ಬರೂ ಮಹಾಭಾರತದ ಯುದ್ಧವನ್ನು ‘ಕಣ್ಣಿಗೆ ಕಟ್ಟುವಂತೆ’ ವಿವರಿಸುತ್ತಿದ್ದ ‘ಸಂಜಯ’ ಸ್ವರೂಪಿಗಳಾಗಿದ್ದರೆ, ಆಟವನ್ನು ಪ್ರತ್ಯಕ್ಷ ವೀಕ್ಷಿಸಲಾಗದ ನಮ್ಮಂಥ ಕ್ರಿಕೆಟ್ ಪ್ರೇಮಿಗಳು ‘ಸಾಂದರ್ಭಿಕ ಧೃತರಾಷ್ಟ್ರ’ರಂತಿರುತ್ತಿದ್ದೆವು. ಕಾರಣ ಬ್ಯಾಟಿಂಗ್ ವೇಳೆ ‘ವಿಶಿ’ ಮಾಡುತ್ತಿದ್ದ ಕವರ್ ಡ್ರೈವ್, ಸ್ಕ್ವೇರ್ ಕಟ್, ಲೇಟ್ ಕಟ್ ಮುಂತಾದ ವಿಶಿಷ್ಟ ಹೊಡೆತಗಳನ್ನು ಅವರು ವಿವರಿಸುತ್ತಿದ್ದ ಪರಿ ಹಾಗಿರುತ್ತಿತ್ತು. ಹೀಗೆ, ನಮ್ಮಲ್ಲಿ ಕ್ರಿಕೆಟ್ ಬಗ್ಗೆ ಅಂಥದೊಂದು ಹುಚ್ಚು ಹಿಡಿಸಿದವರು ‘ಲಿಟ್ಲ್ ಮಾಸ್ಟರ್’ ವಿಶಿ.

ವಿರಾಟ್ ಕೊಹ್ಲಿ, ರಿಷಭ್ ಪಂತ್, ಕ್ರಿಸ್ ಗೇಲ್, ಸೂರ್ಯಕುಮಾರ್ ಇಂಥವರ ಜಪ ನಡೆಯುತ್ತಿರುವ ಇಂದಿನ ಕ್ರಿಕೆಟ್ ಜಮಾನದಲ್ಲಿ ಈಗ ಇದ್ದಕ್ಕಿದ್ದಂತೆ ಜಿ.ಆರ್.ವಿಶ್ವನಾಥ್ ಅವರ ಹೆಸರಿನ ಪ್ರಸ್ತಾಪವಾಗುತ್ತಿರುವುದಕ್ಕೆ ಕಾರಣವೇನು? ಎಂದು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೊಂದು ಕಾರಣವಿದೆ. ‘ವಿಶಿ’ ಅವರು ಟೆಸ್ಟ್ ಕ್ರಿಕೆಟ್‌ಗೆಅಡಿಯಿಟ್ಟು ಈ ನವೆಂಬರ್ 15ಕ್ಕೆ 55 ವರ್ಷಗಳು ತುಂಬುತ್ತವೆ. ಹೀಗಾಗಿ ಈ ಸಿಹಿಮೆಲುಕು.

ರಭಸದ ಹೊಡೆತಗಳಿಗೆ, ಓವರ್‌ಗೆ ಮೂರ್ನಾಲ್ಕು ಸಿಕ್ಸರ್ ಬಾರಿಸುವುದಕ್ಕೆ ಹೆಸರಾದ ಬ್ಯಾಟ್ಸ್ ‌ಮನ್‌ಗಳು ಇಂದು ಸಾಕಷ್ಟಿರಬಹುದು. ಆದರೆ ಬ್ಯಾಟಿಂಗ್‌ನಲ್ಲಿ ‘ಕುಸುರಿಗಾರಿಕೆ’ಗೆ, ಕೈಗಳ ಮಣಿಕಟ್ಟನ್ನು ವಿಶಿಷ್ಟವಾಗಿ ತಿರುಗಿಸುವ ಶೈಲಿಗೆ ಹಾಗೂ ಷಾಟ್ ಹೊಡೆಯುವಾಗ ಬಲಪ್ರಯೋಗಕ್ಕಿಂತ ‘ಟೈಮಿಂಗ್’ಗೆ ಒತ್ತುಕೊಟ್ಟು 1970ರ ದಶಕದ ಉದ್ದಕ್ಕೂ ಹೆಸರಾಗಿದ್ದವರು ಜಿ.ಆರ್. ವಿಶ್ವನಾಥ್. 1967ರಲ್ಲಿ, ಪ್ರಥಮ ದರ್ಜೆಯ ಕ್ರಿಕೆಟ್‌ಗೆ ಪದಾರ್ಪಣ ಮಾಡಿದಾಗಿನ ಮೊದಲ ಪಂದ್ಯದಲ್ಲೇ ಆಂಧ್ರಪ್ರದೇಶ ತಂಡದ ವಿರುದ್ಧ ಡಬಲ್ ಸೆಂಚರಿ ಬಾರಿಸಿದ ಹೆಗ್ಗಳಿಕೆ ‘ವಿಶಿ’ ಅವರದ್ದು. ನಂತರ, 1969ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಅಡಿಯಿಟ್ಟಾಗ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸೊನ್ನೆಗೆ ಔಟಾದರು. ಆಗ ತಂಡದ ಕ್ಯಾಪ್ಟನ್ ಆಗಿದ್ದ ‘ಟೈಗರ್’ ಮನ್ಸೂರ್ ಅಲಿಖಾನ್ ಪಟೌಡಿ ಅವರು, ‘‘ಚಿಂತಿಸಬೇಡ, ರಿಲ್ಯಾಕ್ಸ್. ಬರೆದಿಟ್ಟುಕೋ, 2ನೇ ಇನ್ನಿಂಗ್ಸ್‌ನಲ್ಲಿ ನೀನು ಸೆಂಚುರಿ ಬಾರಿಸುವೆ’’ ಎಂದು ಹುರುಪು ತುಂಬಿದರು. ಅಂತೆಯೇ, ಎರಡನೇ ಇನ್ನಿಂಗ್ಸ್‌ನಲ್ಲಿ 25 ಬೌಂಡರಿಗಳನ್ನು ಒಳಗೊಂಡಿದ್ದ 137 ರನ್ನುಗಳನ್ನು ಚಚ್ಚಿ ಸೈ ಎನಿಸಿಕೊಂಡುಬಿಟ್ಟರು ವಿಶಿ. ಹೀಗೆ, ಪ್ರಥಮ ದರ್ಜೆ ಕ್ರಿಕೆಟ್‌ನ ಮೊದಲ ಪಂದ್ಯದಲ್ಲೇ ಡಬಲ್ ಸೆಂಚುರಿಯನ್ನೂ, ಮೊದಲ ಟೆಸ್ಟ್ ಪಂದ್ಯದಲ್ಲೇ ಸೆಂಚುರಿಯನ್ನೂ ಬಾರಿಸಿದ ಏಕೈಕ ಆಟಗಾರ ಎಂಬ ಹೆಮ್ಮೆಯ ಗರಿಯೂ ಇವರ ‘ಕೀರ್ತಿಕಿರೀಟ’ದಲ್ಲಿದೆ. ತರುವಾಯದ 13 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ತಮ್ಮ ಖಾತೆಗೆ ಮತ್ತೆ 13 ಸೆಂಚರಿಗಳನ್ನು ಸೇರಿಸಿಕೊಂಡರು ವಿಶಿ. ಈ ಯಾವ ಪಂದ್ಯಗಳಲ್ಲೂ ಭಾರತಕ್ಕೆ ಸೋಲಾಗಲಿಲ್ಲ. ಹೀಗಾಗಿ ‘ಆಪದ್ಬಾಂಧವ’ ಎಂಬ ಹಣೆಪಟ್ಟಿ ವಿಶಿ ಹೆಸರಿನ ಜತೆಗೆ ಸೇರಿಕೊಂಡಿದ್ದುಂಟು. ಬ್ಯಾಟ್ಸ್ ‌ಮನ್‌ಗಳು ಏಗುವುದಕ್ಕೆ ಸಾಧ್ಯವೇ ಇಲ್ಲ ಎಂಬ ಸವಾಲು ಒಡ್ಡಿದ್ದ ಪಿಚ್‌ಗಳಲ್ಲೂ ತಮ್ಮ ಕುಸುರಿಗಾರಿಕೆಯೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ವಿಶಿ. ಅತ್ಯುತ್ತಮ ಎನ್ನಬಹುದಾದ ಅವರ ಇನ್ನಿಂಗ್ಸ್‌ಗಳಲ್ಲಿ ಕೆಲವದರಲ್ಲಿ ವಿಶಿಯಿಂದ ಸೆಂಚುರಿ ಹೊಮ್ಮಿಲ್ಲದಿದ್ದರೂ, ತಂಡದ ಯಶಸ್ಸಿಗೆ ಅವು ಕೊಡುಗೆ ನೀಡಿವೆ ಎಂಬುದು ಗಮನಾರ್ಹ.

ಅದು 1974-75ರ ಕಾಲಘಟ್ಟ. ಮದ್ರಾಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ನಡೆಯುತ್ತಿತ್ತು. ಆ್ಯಂಡಿ ರಾಬರ್ಟ್ಸ್ ಅವರ ಮಾರಕ ಬೌಲಿಂಗ್ ದಾಳಿಯೆದುರು ಭಾರತ ತಂಡ ಗಳಿಸಿದ್ದು 190 ರನ್ನುಗಳಾದರೆ, ಅದರಲ್ಲಿ ವಿಶ್ವನಾಥ್ ಅವರು ಔಟಾಗದೆ ಬಾರಿಸಿದ 97 ರನ್ನುಗಳದ್ದೇ ಸಿಂಹಪಾಲು ಇತ್ತು. ಅದು ‘ಸೆಂಚುರಿ’ ಎನಿಸಿಕೊಳ್ಳದಿದ್ದರೂ, ಭಾರತೀಯ ಆಟಗಾರನೊಬ್ಬ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನೀಡಿದ ಅತ್ಯುತ್ತಮ ಪ್ರದರ್ಶನಗಳಲ್ಲೊಂದು ಎಂದೇ ಪರಿಗಣಿಸಲ್ಪಟ್ಟಿತು ಮತ್ತು ಈ ಕೊಡುಗೆ ಭಾರತ ತಂಡದ ಗೆಲುವಿಗೂ ಕಾರಣವಾಯಿತು. ಇದು WISDEN 100 ಶ್ರೇಯಾಂಕ ಪಟ್ಟಿಯಲ್ಲಿ 38th best innings of all time ಮತ್ತು ‘ Second best non-century’ ಎಂದೇ ದಾಖಲಾಗಿದೆ! 1975-76ರಲ್ಲೂ ವೆಸ್ಟ್ ಇಂಡೀಸ್ ವಿರುದ್ಧ ವಿಶಿ ಇಂಥದೇ ಮತ್ತೊಂದು ವಿಕ್ರಮವನ್ನು ದಾಖಲಿಸಿದ್ದು ಕ್ರೀಡಾಭಿಮಾನಿಗಳ ಮನದಲ್ಲಿನ್ನೂ ಹಸಿರಾಗಿದೆ. ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಆ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಒಡ್ಡಲಾಗಿದ್ದ ವಿಜಯದ ಗುರಿ 403 ರನ್ನುಗಳಾಗಿತ್ತು. ‘‘ವೆಸ್ಟ್ ಇಂಡೀಸ್ ದೈತ್ಯರ ವಿರುದ್ಧ ಸೆಣಸಿ ಇದನ್ನು ಸಾಧಿಸುವುದು ಕಷ್ಟವೇ…’’ ಎಂಬುದು ಅಗಿನ ಬಹುತೇಕ ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿತ್ತು. ಆದರೆ, ಬರೋಬ್ಬರಿ 112 ರನ್ನುಗಳನ್ನು ಚಚ್ಚಿ ಕೆಡವಿದ ವಿಶಿ, ತಮಗಿದ್ದ ‘ಆಪದ್ಬಾಂಧವ’ ಬಿರುದನ್ನು ಸಾಬೀತುಮಾಡಿದರು, ಭಾರತ ಗೆದ್ದಿತು. ಇದು ಆ ಕಾಲಘಟ್ಟದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿನ ಅತಿಹೆಚ್ಚಿನ ಮೊತ್ತದ ಯಶಸ್ವಿ ‘ರನ್-ಬೆನ್ನಟ್ಟುವಿಕೆ’ ಎಂಬ ಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿತು.

ಹಾಗೆಂದ ಮಾತ್ರಕ್ಕೆ ವಿಶಿ ತಮ್ಮ ಬ್ಯಾಟಿಂಗ್ ಪ್ರದರ್ಶನದಲ್ಲಿ ವಿಫಲರಾದ ನಿದರ್ಶನಗಳೇ ಇಲ್ಲ ಅಂತಲ್ಲ. ಪಾಕಿಸ್ತಾನದಲ್ಲಿ 1982-83ರಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತವು 3-0 ಅಂತರದಲ್ಲಿ ಎದುರಾಳಿಗೆ ಸೋತ ತಂಡದಲ್ಲಿ ವಿಶಿ ಕೂಡ ಒಬ್ಬರಾಗಿದ್ದರು. ಇದಕ್ಕೆ ಕಾರಣ, ತಮ್ಮ ಬೌಲರುಗಳೆಡೆಗೆ ಪಕ್ಷಪಾತಿಗಳಾಗಿದ್ದ ಪಾಕಿಸ್ತಾನಿ ಅಂಪೈರುಗಳು ನೀಡಿದ ಒಂದಷ್ಟು ವಿವಾದಾತ್ಮಕ ನಿರ್ಣಯಗಳು. ‘ತವರುತಂಡ’ದ ಪರವಾಗಿ ಅಂಪೈರುಗಳು ತೋರುವ ಇಂಥ ಪಕ್ಷಪಾತವೇ, ಪಂದ್ಯಗಳಲ್ಲಿ ‘ತಟಸ್ಥ ಅಂಪೈರು’ಗಳನ್ನು ತೊಡಗಿಸುವುದಕ್ಕೆ ಕಾರಣವಾಯಿತು!

‘ರಣರಂಗ’ ಕನ್ನಡ ಚಲನಚಿತ್ರದ ‘ಜಗವೇ ಒಂದು ರಣರಂಗ’ ಎಂಬ ಗೀತೆಯಲ್ಲಿ, ‘‘ಶತ್ರು ಬೀಳುವಾಗ, ಯುದ್ಧ ಮಾಡುವಾಗ, ಕರುಣೆ ಕಟ್ಟಿ ಇಡು ರಾಜಾ…’’ ಎಂಬ ಸಾಲು ಬರುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡವರು ವಿಶ್ವನಾಥ್. ಆ ಸಂದರ್ಭ ಹೀಗಿದೆ: ‘ವಿಶಿ’ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದ ಎರಡು ಟೆಸ್ಟ್ ಪಂದ್ಯಗಳಲ್ಲಿ, ಇಂಗ್ಲೆಂಡ್ ತಂಡದ ವಿರುದ್ಧ 1979-80ರಲ್ಲಿ ಆಡಲಾದ ‘ಸುವರ್ಣ ಮಹೋತ್ಸವ ಟೆಸ್ಟ್ ಪಂದ್ಯ ಕೂಡ ಒಂದು. ಇದರಲ್ಲಿ ಎದುರಾಳಿ ಬ್ಯಾಟ್ಸ್ ‌ಮನ್ ಬಾಬ್ ಟೇಲರ್ ಔಟಾಗಿ ಪೆವಿಲಿಯನ್‌ಗೆ ತೆರಳಿದ್ದೂ ಆಯಿತು. ಆದರೆ ಅಂಪೈರ್ ನೀಡಿದ್ದು ತಪ್ಪು ನಿರ್ಣಯ ಎಂದು ಗ್ರಹಿಸಿದ ವಿಶ್ವನಾಥ್, ಬಾಬ್ ಟೇಲರ್‌ರನ್ನು ಪೆವಿಲಿಯನ್‌ನಿಂದ ಮರಳಿ ಕ್ರೀಸ್‌ಗೆ ಕರೆಸಿ ಆಡುವುದಕ್ಕೆ ಅನುವುಮಾಡಿಕೊಟ್ಟರು. ಈ ನಿಲುವು ಭಾರತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು; ಏಕೆಂದರೆ, ಅಗತ್ಯವಿದ್ದ ರನ್ನುಗಳನ್ನು ಟೇಲರ್ ಪೇರಿಸಿದ್ದರಿಂದ ಇಂಗ್ಲೆಂಡ್ ತಂಡಕ್ಕೆ ಭಾರತ ಸೋತಿತು. ‘‘ವಿಶಿ ಹೀಗೇಕೆ ಮಾಡಿದರು?’’ ಎಂದು ಆ ಕ್ಷಣಕ್ಕೆ ‘ಕಟ್ಟರ್ ಕ್ರೀಡಾಭಿಮಾನಿಗಳು’ ಕೈಕೈ ಹಿಸುಕಿಕೊಂಡಿದ್ದು ಹೌದಾದರೂ, ಜಗತ್ತಿನೆಲ್ಲೆಡೆಯಿಂದ ‘ವಿಶಿ’ಯೆಡೆಗೆ ಹರಿದುಬಂದ ಮೆಚ್ಚುಗೆಯ ಸುರಿಮಳೆಯನ್ನು ಕಂಡು ‘‘ಹೀಗೂ ಉಂಟೇ?’’ ಎಂದು ಮೂಗಿನ ಮೇಲೆ ಬೆರಳಿಟ್ಟರು! ‘‘ಯುದ್ಧದಲ್ಲಿ ಸೋದರಮಾವನೇ?!’’ ಎಂಬುದೊಂದು ಮಾತಿದೆ. ಸಮರಾಂಗಣದಲ್ಲಾಗಲೀ ಕ್ರೀಡಾಂಗಣದಲ್ಲಾಗಲೀ ದಾಕ್ಷಿಣ್ಯವನ್ನು ನೋಡಬಾರದು; ಎದುರಾಳಿ ಎಂದರೆ ಎದುರಾಳಿಯೇ, ಅವನ ಮೇಲೆ ದಾಳಿ ಮಾಡುವುದೇ ಅಲ್ಲಿನ ಧರ್ಮ ಎನ್ನುವುದು ಈ ಮಾತಿನ ಅರ್ಥ. ಆದರೆ ವಿಶ್ವನಾಥ್ ಆ ಪಂದ್ಯದಲ್ಲಿ ಅಕ್ಷರಶಃ ಮಹಾಭಾರತದ ‘ಧರ್ಮರಾಯ’ನಂತೆ ನಡೆದುಕೊಂಡುಬಿಟ್ಟರು (ಈ ಘಟನೆ ಈಗ ನಡೆದಿದ್ದರೆ ವಿಶಿಗೆ Fair Play ಪುರಸ್ಕಾರ ಸಿಕ್ಕಿಬಿಡುತ್ತಿತ್ತು!). ವಿಶಿ ಪಾಲಿಗೆ ಸೋಲು-ಗೆಲುವಿಗಿಂತ ಕ್ರೀಡಾಸ್ಫೂರ್ತಿಯೇ ಯಾವಾಗಲೂ ಪರಮೋಚ್ಚ ಆಯ್ಕೆಯಾಗಿದ್ದುದು ಈ ನಿಲುವಿಗೆ ಕಾರಣ.

ವಿಶಿ ಅವರದ್ದು ದೇಶ-ಭಾಷೆಗಳ ಸೀಮೆಯನ್ನೂ ಮೀರಿದ ಕ್ರೀಡಾಸ್ಫೂರ್ತಿ ಮತ್ತು ಹೃದಯವೈಶಾಲ್ಯ. ಯಾರೂ ಅವರನ್ನು ಆಗ್ರಹಿಸದಿದ್ದರೂ ಆಕ್ಷೇಪಿಸದಿದ್ದರೂ, ತಮ್ಮ ಸರದಿಗಾಗಿ ಕಾಯುತ್ತಿರುವ ತರುಣ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಧ್ಯೇಯದಲ್ಲಿ ಅವರು ತಾವಾಗಿಯೇ ತಂಡದಲ್ಲಿನ ತಮ್ಮ ಜಾಗವನ್ನು ಬಿಟ್ಟುಕೊಟ್ಟು ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಅವರಲ್ಲಿ ಕೆನೆಗಟ್ಟಿದ್ದ ಈ ವೈಶಿಷ್ಟ್ಯಕ್ಕೆ ಸಾಕ್ಷಿ. ಒಟ್ಟು 91 ಟೆಸ್ಟ್ ಮತ್ತು 25 ಏಕದಿನ ಪಂದ್ಯಗಳನ್ನು ಆಡಿರುವ ವಿಶಿ, ಟೆಸ್ಟ್ ಪಂದ್ಯಗಳಲ್ಲಿ 41.93ರ ಬ್ಯಾಟಿಂಗ್ ಸರಾಸರಿಯೊಂದಿಗೆ 6,080 ರನ್ನುಗಳನ್ನು ಪೇರಿಸಿದರು (222 ಅವರ ಅತಿಹೆಚ್ಚಿನ ಸ್ಕೋರ್), 14 ಶತಕಗಳು, 35 ಅರ್ಧಶತಕಗಳನ್ನು ಬಾರಿಸಿದರು. ಯಾವಾಗಲೂ ‘ಸ್ಲಿಪ್’ನಲ್ಲೇ ಫೀಲ್ಡಿಂಗ್‌ಗೆ ನಿಲ್ಲುತ್ತಿದ್ದ ಅವರು 63 ಕ್ಯಾಚುಗಳನ್ನೂ ಹಿಡಿದಿದ್ದಾರೆ. ಆದರೆ, ಈ ಎಲ್ಲ ದಾಖಲೆಗಳ ಹೊರತಾಗಿಯೂ ಕ್ರೀಡಾಭಿಮಾನಿಗಳು ವಿಶಿ ಅವರನ್ನು ಈಗಲೂ ಸ್ಮರಿಸುವುದು, ಮೆಚ್ಚುವುದು ಅವರ ಕ್ರೀಡಾಸ್ಫೂರ್ತಿ ಮತ್ತು ಹೃದಯವೈಶಾಲ್ಯದ ಕಾರಣಕ್ಕಾಗಿಯೇ.

ಹಾಗೆ ನೋಡಿದರೆ, ವಿಶ್ವನಾಥ್ ಅವರು ಯಾವುದೇ ಕ್ರಿಕೆಟ್ ಕ್ಲಬ್ ಸೇರಿ ತರಬೇತಿ ಪಡೆದವರಲ್ಲ. ಅವರದ್ದೇನಿದ್ದರೂ, ‘ನೋಡಿ ತಿಳಿ, ಮಾಡಿ ಕಲಿ’ ಎಂಬ ‘ಏಕಲವ್ಯ’ ಶೈಲಿಯ ಕಲಿಕೆಯೇ. ಕ್ಲಬ್ ಆಟಗಾರರಾಗಿ ಹೆಸರುಮಾಡಿದ್ದ ತಮ್ಮ ಸೋದರ ಜಗನ್ನಾಥ್ ಹಾಗೂ ನೆರೆಯವರಾದ ಎಸ್.ಕೃಷ್ಣರ ಆಟವನ್ನು ನೋಡಿಯೇ ಬ್ಯಾಟಿಂಗ್ ಕೌಶಲವನ್ನು ರೂಢಿಸಿಕೊಂಡ ಹೆಚ್ಚುಗಾರಿಕೆ ವಿಶಿ ಅವರದ್ದು. ಆದರೆ ಆಟದ ಅಖಾಡವನ್ನು ಪ್ರವೇಶಿಸುವುದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕೆ ಕಾರಣ, ಕಟ್ಟುಮಸ್ತಾಗಿಲ್ಲದ ಅವರ ಕುಳ್ಳುದೇಹ. ಆಯ್ಕೆಗಾರರೊಬ್ಬರು ಇದೇ ಕಾರಣ ಮುಂದುಮಾಡಿ ಅಪಸ್ವರ ಹಾಡಿದ್ದೂ ಉಂಟಂತೆ. ಆದರೆ ಇಂಥ ಎಲ್ಲ ಅಡೆತಡೆಗಳನ್ನೂ ಮೀರಿ ಆಯ್ಕೆಗೊಂಡ ವಿಶಿ, 100 ರನ್ ಬಾರಿಸುವುದರೊಂದಿಗೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರಂತೆ. ನಂತರದ್ದು ಇತಿಹಾಸ!
ವಿಶ್ವದೆಲ್ಲೆಡೆಯಿಂದ ಸಾರ್ವಕಾಲಿಕ ಜನಮೆಚ್ಚುಗೆಗೆ ಪಾತ್ರರಾದ ಕ್ರಿಕೆಟಿಗರಲ್ಲಿ ಎದ್ದುಕಾಣುವ ಹೆಸರು ವಿಶ್ವನಾಥ್. ‘ಟೈಗರ್’ ಪಟೌಡಿ, ಕಪಿಲ್‌ದೇವ್, ಗ್ರೆಗ್ ಚಾಪೆಲ್, ಟ್ರೆವರ್ ಬೈಲಿ ಸೇರಿದಂತೆ ವಿಶ್ವದ ಮೂಲೆಮೂಲೆಯ ‘ಸಮಾನಸ್ಕಂಧ’ರಿಂದ ಶ್ಲಾಘನೆ ಪಡೆದ ಹೆಚ್ಚುಗಾರಿಕೆ ವಿಶಿ ಅವರದ್ದು. ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ, 1999ರಿಂದ 2004ರವರೆಗೆ ‘ಐಸಿಸಿ’ಗಾಗಿ ಮ್ಯಾಚ್ ರೆಫರಿಯಾಗಿ ಸೇವೆ ಸಲ್ಲಿಸುವ ಮೂಲಕ ಕ್ರಿಕೆಟ್ ಜತೆಗಿನ ನಂಟನ್ನು ಮುಂದುವರಿಸಿದರು ವಿಶಿ. ಇದಕ್ಕೂ ಮುನ್ನ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ (ಕೆಎಸ್‌ಸಿಎ) ಉಪಾಧ್ಯಕ್ಷರಾಗಿ, 1992-96ರ ಅವಧಿಯಲ್ಲಿ ರಾಷ್ಟ್ರೀಯ ಆಯ್ಕೆಗಾರರ ಸಮಿತಿಯ ಚೇರ್‌ಮನ್ ಆಗಿ, ಬೆಂಗಳೂರಿನಲ್ಲಿರುವ ‘ನ್ಯಾಷನಲ್ ಕ್ರಿಕೆಟ್ ಅಕಾಡೆಮಿ’ಯಲ್ಲಿ ಬ್ಯಾಟಿಂಗ್ ಕೋಚ್ ಆಗಿ, ಸಂಕ್ಷಿಪ್ತ ಅವಧಿಗೆ ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ್ದಿದೆ. ಬಿಸಿಸಿಐ ವತಿಯಿಂದ ಮಾಜಿ ಆಟಗಾರರೊಬ್ಬರಿಗೆ ಪ್ರದಾನಿಸಲಾಗುವ ‘ಸಿಕೆ ನಾಯ್ಡು ಜೀವಿತಾವಧಿ ಸಾಧನೆಯ ಪುರಸ್ಕಾರ’ಕ್ಕೂ ವಿಶಿ ಪಾತ್ರರಾಗಿದ್ದಾರೆ.

ಬ್ಯಾಟಿಂಗ್‌ನಲ್ಲಿ ಕೌಶಲಭರಿತ ಹೊಡೆತಗಳಿಗೆ, ಅಪರಿಮಿತ ಕ್ರೀಡಾಸ್ಫೂರ್ತಿಗೆ, ಹೃದಯವೈಶಾಲ್ಯಕ್ಕೆ ಹೆಸರಾಗಿರುವ ವಿಶ್ವನಾಥ್‌ರಿಗೆ, ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣ ಮಾಡಿ 55 ವರ್ಷಗಳಾಗುತ್ತಿರುವ ಈ ಸಂದಭದಲ್ಲಿ, ವಿಶ್ವಾದ್ಯಂತದ ಕ್ರೀಡಾಪ್ರೇಮಿಗಳು ಹಾಗೂ ಘಟಾನುಘಟಿ ಕ್ರಿಕೆಟಿಗರು ಅಭಿನಂದನೆ ಸಲ್ಲಿಸುವುದಕ್ಕೆ ಇದು ಸಕಾಲ ಎನ್ನೋಣವೇ?

ಲಾಲಿ ಲಾಲಿ ಸುಕುಮಾರಾ…

ವಿಶ್ವನಾಥರ ಬಗ್ಗೆ ಬರೆಯುವಾಗ ಅಪ್ರಯತ್ನವಾಗಿ ನುಸುಳಿಕೊಳ್ಳುತ್ತಾರೆ ಮತ್ತೊಬ್ಬ ‘ಲಿಟ್ಲ್ ಮಾಸ್ಟರ್’ ಸುನಿಲ್ ಗಾವಸ್ಕರ್. 70ರ ದಶಕದ ಭಾರತದ ತಂಡಕ್ಕೆ ಬ್ಯಾಟಿಂಗ್ ಆಧಾರಸ್ತಂಭಗಳಂತಿದ್ದ ಇವರಲ್ಲಿ ಒಂದಷ್ಟು ಸಾಮಾನ್ಯ ಸಂಗತಿಗಳಿದ್ದವು. ಈ ಇಬ್ಬರು ವಾಮನಮೂರ್ತಿಗಳೂ ಬ್ಯಾಟಿಂಗ್ ಕರಕೌಶಲಕ್ಕೆ ಹೆಸರಾಗಿದ್ದವರು, ಭಾರಿ ಅಭಿಮಾನಿ ಬಳಗವನ್ನು ಹೊಂದಿದ್ದವರು, ಸ್ನೇಹವನ್ನು ವಿಸ್ತರಿಸಿಕೊಂಡು ಸಂಬಂಧಿಗಳಾದವರು. ಗಾವಸ್ಕರ್ ಅವರ ಸೋದರಿ ಕವಿತಾರನ್ನು ವಿಶಿ ಮದುವೆಯಾಗಿ ನಂಟನ್ನು ಮತ್ತಷ್ಟು ಗಾಢವಾಗಿಸಿಕೊಂಡರು. ಮತ್ತೊಂದೆಡೆ, ಗಾವಸ್ಕರ್ ತಮ್ಮ ಮಗನಿಗೆ ‘ರೋಹನ್ ಜೈವಿಶ್ವ’ ಎಂದೇ ನಾಮಕರಣ ಮಾಡಿದರು. ಇದು ತಮ್ಮ ಮೂವರು ಅಚ್ಚುಮೆಚ್ಚಿನ ಆಟಗಾರರಾದ ವೆಸ್ಟ್ ಇಂಡೀಸ್‌ನ ರೋಹನ್ ಕನ್ಹಾಯ್, ನಮ್ಮವರೇ ಆದ ಎಂ.ಎಲ್.ಜಯಸಿಂಹ ಮತ್ತು ಜಿ.ಆರ್.ವಿಶ್ವನಾಥ್‌ರೆಡೆಗೆ ಗಾವಸ್ಕರ್ ಹೊಂದಿದ್ದ ಪ್ರೀತಿಯ ದ್ಯೋತಕವಾಗಿತ್ತು.

ಇಂಗ್ಲೆಂಡ್ ಮತ್ತು ಭಾರತ ನಡುವಿನ 1973-74ರ ಸರಣಿಯ ಅಂತಿಮ ಟೆಸ್ಟ್ ಪಂದ್ಯ ಬಾಂಬೆಯಲ್ಲಿ ನಡೆದಾಗ, ಅದರಲ್ಲಿ ವಿಶಿ ಸೆಂಚುರಿ ಬಾರಿಸಿದರು. ಆಗ ಇಂಗ್ಲೆಂಡ್ ಆಟಗಾರ ಟೋನಿ ಗ್ರೇಗ್ ಅವರು ಸಂತಸವನ್ನು ತಡೆಯಲಾಗದೆ, ಎದುರಾಳಿ ಎಂಬುದನ್ನೂ ಮರೆತು, ವಿಶಿಯನ್ನು ಎತ್ತಿ ಮಗುವಿನಂತೆ ತೋಳಲ್ಲಿ ಮಲಗಿಸಿಕೊಂಡು ಜೋಗುಳ ಹಾಡಿದರಂತೆ. ನಂತರ ಟೋನಿ ಗ್ರೇಗ್ ಅವರೂ ಸೆಂಚುರಿ ಬಾರಿಸಿದಾಗ, ವಿಶಿ ಮತ್ತು ಗಾವಸ್ಕರ್ ಇಬ್ಬರೂ ಸೇರಿಕೊಂಡು ಟೋನಿ ಗ್ರೇಗ್ ಅವರನ್ನೂ ಎತ್ತಿ ಹೀಗೆಯೇ ಜೋಗುಳ ಹಾಡಲು ಯತ್ನಿಸಿದರಂತೆ. ಆದರೆ ಅವರಿಗೆ ಎತ್ತಲಾಗಲಿಲ್ಲ ಎಂಬುದು ಬೇರೆ ಮಾತು!

ಚಿತ್ರನಟನೂ ಹೌದು!

ಬೆಳ್ಳಿತೆರೆಯಲ್ಲೂ ಮಿಂಚಿದ ಹೆಗ್ಗಳಿಕೆ ‘ವಿಶಿ’ ಅವರದ್ದು. ಅನಂತ್‌ನಾಗ್-ಲಕ್ಷ್ಮಿ ಅಭಿನಯದ ‘ಮಕ್ಕಳೇ ದೇವರು’ (1983) ಹಾಗೂ ಕುಮಾರ್ ಬಂಗಾರಪ್ಪ ಅಭಿನಯದ ‘ನವತಾರೆ’ (1991) ಎಂಬ ಚಲನಚಿತ್ರಗಳಲ್ಲಿ ವಿಶಿ ಅಭಿನಯಿಸಿದ್ದಾರೆ.