Thursday, 12th December 2024

ಯಹೂದಿಗಳ ಮಾರಣಹೋಮ ಮರೆಯ ನಾಡವ್‌

ವೀಕೆಂಡ್ ವಿತ್ ಮೋಹನ್

camohanbn@gmail.com

ದೇಶಭಕ್ತರ ನೆಲದಲ್ಲಿ ಹುಟ್ಟಿಯೂ, ಪ್ಯಾಲಿಸ್ತೇನಿಗಳನ್ನು ಬೆಂಬಲಿಸುವ ಯಹೂದಿ ಈತ. ಇಸ್ರೇಲ್ ಅನ್ನು ‘ಅನಾ ರೋಗ್ಯ ಪೀಡಿತ ಆತ್ಮ’ ಎಂದು ಕರೆದಿದ್ದ. ತನಗೊಂದು ಉನ್ನತ ಸ್ಥಾನಮಾನ ನೀಡಿದ ದೇಶದ ಅಸ್ತಿತ್ವದ ಬಗ್ಗೆಯೇ ಮಾತನಾಡಿದವನಿಂದ ‘ದಿ ಕಾಶ್ಮೀರ ಫೈಲ್ಸ್’ ಬಗ್ಗೆ ಬಂದ ಮಾತುಗಳು ಅಚ್ಚರಿಯೇನೂ ಅಲ್ಲ.

ಎಂಟು ದಿಕ್ಕುಗಳಲ್ಲಿಯೂ ಶತ್ರುಗಳ ಉಪಟಳದಿಂದ ಬದುಕುತ್ತಿರುವ ದೇಶ ಇಸ್ರೇಲ್. ಜಗತ್ತಿನಲ್ಲಿ ಯಹೂದಿಗಳಿಗೆ ನೆಲೆಯಿಲ್ಲದೇ
ಹೋದಾಗ ಮದ್ಯ ಏಷ್ಯಾದ ಸಣ್ಣ ಭೂಭಾಗವೊಂದನ್ನು ತನ್ನ ಕೇಂದ್ರ ಸ್ಥಾನ ಮಾಡಿ ಕೊಂಡ ಯಹೂದಿಗಳು, ಇಸ್ರೇಲ್ ಅನ್ನು ಕಟ್ಟಿದರು. ದಾಳಿಕೋರರಿಂದ ತಮ್ಮ ಅಸ್ತಿತ್ವ ವನ್ನೇ ಕಳೆದುಕೊಂಡಿದ್ದ ಯಹೂದಿಗಳಿಗೆ ದೇಶ ಕಟ್ಟುವುದು ಸುಲಭದ ಕೆಲಸ ವಾಗಿರ ಲಿಲ್ಲ.

1948ರಲ್ಲಿ ಸ್ವತಂತ್ರಗೊಂಡ ಇಸ್ರೇಲಿಗರನ್ನು ಪ್ರಪಂಚದ ಇತರ ದೇಶಗಳಿಂದ ಸಂಪೂರ್ಣ ಪ್ರತ್ಯೇಕಿಸುವ ದೊಡ್ಡ ಪ್ರಯತ್ನ ದಶಕಗಳ ಕಾಲ ನಡೆಯಿತು. ತನ್ನ ಸುತ್ತಲೂ ಇರುವ ಇಸ್ಲಾಮಿಕ್ ರಾಷ್ಟ್ರಗಳ ಉಪಟಳದಿಂದ ಬೇಸತ್ತಿದ್ದ ಇಸ್ರೇಲ್, ಜಗತ್ತಿನ ತಂತ್ರಜ್ಞಾನದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಮಾತ್ರ ರೋಮಾಂಚಕಾರಿ ಕಥೆ. ಬೆನ್ ಗುರಿಯನ್ ಅಧ್ಯಕ್ಷತೆಯಲ್ಲಿ ಇಸ್ರೇಲಿ ಗರಿಗೆ ಅಭಿವೃದ್ಧಿಯ ಉತ್ತಮ ಅಡಿಪಾಯ ಸಿಕ್ಕಿತ್ತು. ಇಸ್ರೇಲ್ ಜತೆ ಯಾವೊಂದು ದೇಶಗಳೂ ವ್ಯಾಪಾರ ಮಾಡದಂತೆ ಸುತ್ತಲೂ ಇರುವ ರಾಷ್ಟ್ರಗಳು ನಿರ್ಬಂಧ ಹೇರಿದ್ದವು. ದಶಕಗಳ ಕಾಲ ಜಗತ್ತಿನ ಮುಂದುವರಿದ ರಾಷ್ಟ್ರಗಳು ಇದಕ್ಕೆ ಬದ್ಧವಾಗಿದ್ದವು.

ಮರುಭೂಮಿಯ ನಡುಗಡ್ಡೆಯಲ್ಲಿ ಏನೂ ಮಾಡಲಾಗದ ಹೀನಾಯ ಪರಿಸ್ಥಿತಿಯಲ್ಲಿತ್ತು ಇಸ್ರೇಲ್. ಅಂತಹ ಸಂದಿಗ್ಧ ಸಮಯ ದಲ್ಲಿ ಜಗತ್ತಿನ ಯಹೂದಿಗಳೆಲ್ಲ ಒಂದುಗೂಡಿ ತಮಗಾಗಿ ಒಂದು ದೇಶ ಕಟ್ಟಲು ಆರಂಭಿಸಿದ್ದರು. ಯಹೂದಿಗಳಿಗೆ ತಮ್ಮ ದೇಶ ದಲ್ಲಿಯೇ ಎಲ್ಲ ಅಗತ್ಯ ವಸ್ತುಗಳನ್ನು ತಯಾರಿಸಿಕೊಳ್ಳಬೇಕಾದ ಪರಿಸ್ಥಿತಿ. ವಿಧಿಯಿಲ್ಲದೆ ಒಂದೊಂದೇ ವಸ್ತುಗಳ ತಯಾರಿಕೆ ಯಲ್ಲಿ ತೊಡಗಿದರು.

ಆಹಾರ ವಸ್ತುಗಳಿಗೂ ತಡೆ ಹೇರಲಾಗಿತ್ತು. ಪರಿಣಾಮ ಉಂಟಾದ ಆಹಾರದ ಕೊರತೆ ನೀಗಿಸಿಕೊಳ್ಳಲು ಛಲಬಿಡದೆ ಮರುಭೂಮಿ ಯಲ್ಲಿಯೇ ಕೃಷಿ ವಿಧಾನಗಳನ್ನು ಅಭಿವೃದ್ಧಿಪಡಿಸಿಕೊಂಡರು. ಜಗತ್ತಿನ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಹೊಂದಿರುವ ಇಸ್ರೇಲ್ ಬಳಿ ಒಂದೇ ಒಂದು ಯುದ್ಧ ವಿಮಾನವಿರಲಿಲ್ಲ. ಎರಡನೇ ಮಹಾಯುದ್ಧದಲ್ಲಿ ಅಲ್ಲಲ್ಲಿ ಉದುರಿ ಬಿದ್ದಿದ್ದ ವಿಮಾನಗಳ ಅವಶೇಷಗಳನ್ನು ಸಂಗ್ರಹಿಸಿ ಮೊದಲ ಯುದ್ಧ ವಿಮಾನ ತಯಾರಿಸಿದರು.

1965ರಲ್ಲಿ ಇಸ್ರೇಲಿ ಗುಪ್ತಚರ ಇಲಾಖೆ ‘ಮೊಸಾದ್’ ನಡೆಸಿದ ಗುಪ್ತ ಕಾರ್ಯಾಚರಣೆಯ ಮೂಲಕ ರಷ್ಯಾ ಸೈನ್ಯದ ಪೈಲಟ್‌ ನನ್ನು ಪುಸಲಾಯಿಸಿ ಮೊಟ್ಟಮೊದಲ ‘ಮಿಗ್’ ವಿಮಾನವನ್ನು ಇಸ್ರೇಲಿಗೆ ತರಲಾಯಿತು. ತದನಂತರ 1967ರಲ್ಲಿ ನಡೆದ ಆರು ದಿನಗಳ ಇಸ್ರೇಲ್ ಯುದ್ಧದಲ್ಲಿ ಇದೇ ವಿಮಾನ ಬಳಸಿ ಶತ್ರುಗಳೆದೆಯಲ್ಲಿ ನಡುಕ ಹುಟ್ಟಿಸಿದ್ದು ಇತಿಹಾಸ. ತನ್ನ ಮಗ್ಗುಲ ಮುಳ್ಳು ಪ್ಯಾಲಿ ಸ್ತೇನಿ ಉಗ್ರರ ಪ್ರತಿನಿತ್ಯದ ಉಪಟಳದಿಂದ ಇಸ್ರೇಲ್‌ಗೆ ಇನ್ನು ಹೊರಬರಲಿಕ್ಕಾಗುತ್ತಿಲ್ಲ. ಇಸ್ರೇಲಿ ಸೈನಿಕರು ಪ್ಯಾಲಿಸ್ತೇನಿನಲ್ಲಿ ನಿತ್ಯವೂ ಏನಾದರೊಂದು ಕಾರ್ಯಾಚರಣೆ ನಡೆಸುತ್ತಲೇ ಇರುತ್ತಾರೆ.

ಯಹೂದಿಗಳನ್ನು ನಿರ್ನಾಮ ಮಾಡಬೇಕೆಂಬ ಶತ್ರುಗಳ ದಾಹ ಇನ್ನೂ ಜೀವಂತವಾಗಿದೆ. ಇಸ್ರೇಲಿಗಳು ಒಮ್ಮೆ ತಮ್ಮ ಬಂದೂಕು ಗಳನ್ನು ಬಿಟ್ಟರೆ ಶತ್ರುಗಳು ರಣಹದ್ದುಗಳಂತೆ ಎರಗುವುದರಲ್ಲಿ ಅನುಮಾನವಿಲ್ಲ. ನೂರಾರು ವರ್ಷಗಳ ಹಿಂದೆ ಲಕ್ಷಾಂತರ
ಯಹೂದಿಗಳ ಮಾರಣಹೋಮ ಮಾಡಿಯೂ ಸಹ, ಅವರ ಬೇರುಗಳನ್ನು ಸಂಪೂರ್ಣ ಕಿತ್ತುಹಾಕಬೇಕೆಂಬ ಕೈಲಾಗದ ಹಠ ಇಸ್ರೇಲಿನ ಸುತ್ತಲಿನ ಶತ್ರು ರಾಷ್ಟ್ರಗಳದ್ದು. ಇಂದಿಗೂ ಪ್ಯಾಲಿಸ್ತೇನಿಗಳು ತನ್ನ ಉಗ್ರ ಪಡೆಯನ್ನು ಇಸ್ರೇಲಿನ ಮೇಲೆ ಎರಗಲು ಸಿಛೂ ಬಿಡುತ್ತಲೇ ಇರುತ್ತಾರೆ.

ಇಸ್ರೇಲ್‌ಗೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಶತ್ರುಗಳ ನಾಮಾವಶೇಷ ಸಾಧ್ಯವಾಗಿಲ್ಲ. ಇವತ್ತಿಗೂ ಇಸ್ರೇಲಿಗರಿಗೆ ತಮ್ಮ
ರಾಷ್ಟ್ರಭದ್ರತೆಯ ಸವಾಲಿದ್ದೇ ಇದೆ. ಐತಿಹಾಸಿಕ ಮಾರಣಹೋಮದ ನಂತರ ಚದುರಿಹೋಗಿದ್ದ ಯಹೂದಿಗಳು ಕಷ್ಟಪಟ್ಟು ಕಟ್ಟಿದ ಇಸ್ರೇಲಿನಲ್ಲಿ ಹುಟ್ಟಿದ ನಿರ್ದೇಶಕನೇ, ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ಚಿತ್ರವನ್ನು ಅತ್ಯಂತ ಕೆಟ್ಟ ಹಾಗೂ ಪ್ರಚಾರ ಪಡೆಯಲು ತಯಾರಿಸಿರುವ ಸಿನೆಮಾವೆಂದಿದ್ದ ‘ನಾಡವ್ ಲ್ಯಾಪಿಡ್‘.

ತನ್ನ ಪೂರ್ವಜರೂ ಕಾಶ್ಮೀರಿ ಪಂಡಿತರಂತೆಯೇ ಯಹೂದಿಗಳ ಶತ್ರುಗಳ ತಲವಾರಿಗೆ ಬಲಿಯಾದವರೆಂಬ ಸತ್ಯ ನಾಡವ್‌ಗೆ ತಿಳಿಯದ್ದೇನಲ್ಲ. ಯಹೂದಿಗಳ ಮೂಲ ನೆಲೆಯಿಂದ ಅವರನ್ನು ಪಲಾಯನ ಮಾಡಿಸಿ, ಅವರ ಮಾರಣ ಹೋಮ ನಡೆಸಿದ್ದರ ಮಾಹಿತಿ ಈತನಿಗಿದೆ. ಅದೇ ಮಾದರಿಯಲ್ಲಿ 1990ರ ದಶಕದಲ್ಲಿ ತಮ್ಮ ಮೂಲ ನೆಲೆಯಾಗಿದ್ದಂತಹ ಕಾಶ್ಮೀರದಿಂದ ಪಂಡಿತ ರನ್ನು ಇಸ್ಲಾಮಿಕ್ ಭಯೋತ್ಪಾದಕರು ಕೊಂದು, ಹೆದರಿಸಿ ಉಟ್ಟ ಬಟ್ಟೆಯಲ್ಲೇ ಓಡಿಸಿದ ಇತಿಹಾಸ ಇನ್ನೂ ಮಾಸಿಲ್ಲ.

ತಮ್ಮ ಊರುಗಳನ್ನು ಬಿಟ್ಟು ಅಲೆಮಾರಿಗಳಂತೆ ಜಮ್ಮುವಿನ ಕ್ಯಾಂಪುಗಳಲ್ಲಿ ಬಿಸಿಲಿನ ಧಗೆಯಲ್ಲಿ ಜೀವ ಕಳೆದುಕೊಂಡ
ಸಾವಿರಾರು ಪಂಡಿತರ ಕುಟುಂಬದ ಕುಡಿಗಳು ಇಂದಿಗೂ ಜೀವಂತವಾಗಿದ್ದಾರೆ. ನಾಡವ್‌ನ ಪೂರ್ವಜರೂ ಇದೇ ಮಾದರಿ ನೆಲೆ ಕಳೆದುಕೊಂಡು ಜಗತ್ತಿನಾದ್ಯಂತ ಚದುರಿ ಹೋಗಿದ್ದರು. ಒಂದೇ ವ್ಯತ್ಯಾಸವೆಂದರೆ ಕಾಶ್ಮೀರಿ ಪಂಡಿತರು, ಯಹೂದಿಗಳಂತೆ ತಿರುಗಿ ಬೀಳಲಿಲ್ಲ. ಬದಲಿಗೆ ಭಾರತದಾದ್ಯಂತ ಸಿಕ್ಕ ಸಿಕ್ಕ ಸ್ಥಳಗಳಲ್ಲಿ ತಮ್ಮ ನೆಲೆ ಕಂಡುಕೊಂಡರು.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಿದ ನಂತರ ಸ್ವತಃ ಕಷ್ಟವನ್ನನುಭವಿಸಿದ ಪಂಡಿತರೇ ಮುಂದೆ ಬಂದು ತಮ್ಮ ಕರಾಳ ಕಥೆಗಳನ್ನು ತೋಡಿಕೊಂಡಿರುವಾಗ, ಈತನಿಗೆ ಸಿನಿಮಾ ಕೆಟ್ಟದಾದ ಸುಳ್ಳು ಕಥೆಯಾಗಿ ಕಂಡದ್ದು ದುರದೃಷ್ಟಕರ. ಇಸ್ರೇಲಿನಲ್ಲಿ ನಿತ್ಯ ಸಂಗತಿಯಾಗಿರುವ ಪ್ಯಾಲಿಸ್ತೇನಿಗಳ ಜತೆಗಿನ ಕಾಳಗಗಳ ಬಗ್ಗೆ ಹಲವಾರು ಸಿನಿಮಾಗಳು ಬಂದಿವೆ. ನೆಟ್‌ಫ್ಲಿಕ್ಸ್‌ನಲ್ಲಿ ‘-ದ’ ಎಂಬ ಹೀಬ್ರು ಭಾಷೆಯ ವೆಬ್ ಸೀರೀಸ್ ಒಂದಿದೆ.

ಇದರಲ್ಲಿ ಇಸ್ರೇಲಿ ಪಡೆಗಳು ಹಾಗೂ ಪ್ಯಾಲಿಸ್ತೇನಿಗಳ ನಡುವಿನ ಕಾರ್ಯಾಚರಣೆಯನ್ನು ಚಿತ್ರಿಸಲಾಗಿದೆ. ಆ ಸೀರೀಸ್‌ನಲ್ಲಿ
ಕಾಣದ ಅಪಪ್ರಚಾರ ಕಾಶ್ಮೀರಿ ಪಂಡಿತರ ಸಿನಿಮಾದಲ್ಲಿ ಮಾತ್ರ ಈತನಿಗೆ ಕಂಡದ್ದು ಹೇಗೆ? ಈತನ ಮಾತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದು ಮತ್ತದೇ ಲೊಡ್ಡೆಗಳ ಪಟಾಲಂ. ಕಾಶ್ಮೀರಿ ಪಂಡಿತರ ಮಾರಣ ಹೋಮಕ್ಕೆ ಕಾರಣನಾದ ಯಾಸಿನ್ ಮಲ್ಲಿಕ್‌ನನ್ನು ಬೆಂಬಲಿಸಿದ್ದೂ ಇದೇ ಲೊಡ್ಡೆ ಪಟಾಲಮ್ಮಿನ ಪತ್ರಕರ್ತರೇ. ಸಿನೆಮಾಗಳಲ್ಲಿ ಅವಕಾಶ ಸಿಗದೇ ಅಲೆಯುತ್ತಿರುವ ಪ್ರಕಾಶ್ ರಾಜ ತನ್ನದೂ ಒಂದಿರಲೆಂದು ಟ್ವೀಟ್ ಮಾಡಿದ. ಒಂದು ಇಡೀ ಸಮುದಾಯವನ್ನೇ ಟಾರ್ಗೆಟ್ ಮಾಡಿ, ಅವರ ನೆಲೆಯನ್ನೇ ನಾಮಾವಶೇಷ ಮಾಡಬೇಕೆಂದಿದ್ದವರ ನೈಜ ಚಿತ್ರಣ ಕಟ್ಟಕೊಡುವ ಚಿತ್ರ ನೋಡಿದ ನಾಡವ್‌ಗೆ ತನ್ನ ದೇಶದ ಕಹಿಘಟನೆಗಳು ನೆನಪಿಗೆ ಬರಬೇಕಿತ್ತು.

ಅಮೆರಿಕದ ಬೆಂಬಲವಿಲ್ಲದಿದ್ದರೆ ಯಹೂದಿಗಳ ಪರಿಸ್ಥಿತಿ ಏನಾಗುತ್ತಿತ್ತೆಂಬ ವಾಸ್ತವ ಗೊತ್ತಿರಬೇಕಿತ್ತು. ಜಗತ್ತಿನ ವಿನಾಶಕ್ಕೆಂದೇ ಅವತರಿಸಿರುವ ಸಮುದಾಯಗಳ ಜತೆ ಹೋರಾಡಲು, ಅವರ ಭಾಷೆಯ ಉತ್ತರಿಸಬೇಕೆಂಬ ನೀತಿಯನ್ನು ಗಟ್ಟಿ ಮಾಡಿ ಕೊಂಡಿರುವ ದೇಶ ಇಸ್ರೇಲ್. ಇಸ್ರೇಲಿನಲ್ಲಿಯೂ ತನ್ನ ಸಿನೆಮಾಗಳ ಮೂಲಕ ವಿವಾದ ಮಾಡಿಕೊಂಡಿರುವ ವಿವಾದಾತ್ಮಕ ನಿರ್ದೇಶಕ ನಾಡವ್. ದೇಶಭಕ್ತರ ನೆಲದಲ್ಲಿ ಹುಟ್ಟಿಯೂ, ಪ್ಯಾಲಿಸ್ತೇನಿಗಳನ್ನು ಬೆಂಬಲಿಸುವ ಯಹೂದಿ ಈತ. ತನ್ನ ಸಿನಿಮಾದ ಬಗ್ಗೆ 2019ರಲ್ಲಿ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಇದೇ ನಾಡವ್, ಇಸ್ರೇಲ್ ಅನ್ನು ‘ಅನಾರೋಗ್ಯ
ಪೀಡಿತ ಆತ್ಮ’ ಎಂದು ಕರೆದಿದ್ದ.

ತನ್ನ ಪೂರ್ವಜರ ತ್ಯಾಗಗಳ ಬಗ್ಗೆ ಹೆಮ್ಮೆ ಪಡದೆ ತನಗೊಂದು ಉನ್ನತ ಸ್ಥಾನಮಾನ ನೀಡಿದ ದೇಶದ ಅಸ್ತಿತ್ವದ ಬಗ್ಗೆಯೇ ಮಾತ ನಾಡಿದವನ ಬಾಯಿಂದ ‘ದಿ ಕಾಶ್ಮೀರ ಫೈಲ್ಸ್’ ಬಗ್ಗೆ ಬಂದ ಮಾತುಗಳು ಯಹೂದಿಗಳಿಗೆ ಅಚ್ಚರಿಯದೇನೂ ಅಲ್ಲ.
ಸುತ್ತುವರಿದ ಶತ್ರುಗಳಿಂದ ದೇಶದ ಅಸ್ತಿತ್ವ ಉಳಿಸಿಕೊಳ್ಳಲು ಇಸ್ರೇಲಿ ಪಡೆಗಳು ಇದೀಗ ಜಗತ್ತಿನ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಯನ್ನು ಹೊಂದಿವೆ. ಇಸ್ರೇಲಿನ ಪ್ರತಿ ಮನೆಯಲ್ಲಿ ಸೈನಿಕರಿದ್ದಾರೆ. ಶತ್ರುಗಳು ತಮ್ಮ ಮೇಲೆ ಯಾವ ಸಮಯದದರೂ ಎರಗುವ ಆತಂಕ ಯಹೂದಿಗಳಿಗೆ ಇದ್ದೆ ಇದೆ.

ಜಗತ್ತಿನ ಅತ್ಯಂತ ಬುದ್ಧಿಶಾಲಿ ಮೆದುಳು ಯಹೂದಿಗಳದ್ದು. ಹೀಗಾಗಿ ಅವರನ್ನು ತನ್ನ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ
ಅಮೆರಿಕ ನಿಯೋಜಿಸಿದೆ. ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಯಹೂದಿಗಳದ್ದೇ ಮೇಲುಗೈ. ಜಗತ್ತಿನ ತಂತ್ರಜ್ಞಾನದ ದಿಕ್ಕನ್ನೇ ಬದಲಿಸಿದ ‘ಕಂಪ್ಯೂಟರ್ ಚಿಪ್’ಗಳ ಜನಕರು ಯಹೂದಿಗಳು. ಅಮೆರಿಕ ಬಾಹ್ಯಾಕಾಶ ಸಂಶೋಧನೆಯ ಬಹುತೇಕ ವಿeನಿಗಳು ಯಹೂದಿಗಳು. ಇಸ್ರೇಲಿಗರು ಈ ಮಟ್ಟಕ್ಕೆ ಬೆಳೆಯಲು ಕಾರಣ ತಮ್ಮ ಮೇಲಾದ ಆಕ್ರಮಣಗಳು. ಜಗತ್ತಿನಲ್ಲಿ ಉನ್ನತ ಸ್ಥಾನದಲ್ಲಿದ್ದರೂ ತಮ್ಮಕರಾಳ ಇತಿಹಾಸವನ್ನು ಮುಂದಿನ ಪೀಳಿಗೆಗೆ ಹೇಳುವುದನ್ನು ಅವರು ಮರೆಯುವುದಿಲ್ಲ. ತಮ್ಮ ಮೇಲಾದ ದೌರ್ಜನ್ಯವನ್ನು ಸದಾ ನೆನಪಿನಲ್ಲಿಟ್ಟುಕೊಂಡು, ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದನ್ನು ಮರೆಯುವುದಿಲ್ಲ.

ತಮ್ಮ ಮೂಲ ನೆಲೆಯನ್ನೇ ನೆಲಸಮ ಮಾಡ ಹೊರಟವರ ವಿರುದ್ಧ ಸೆಟೆದು ನಿಂತವರ ಇತಿಹಾಸ ಜಗತ್ತಿಗೆ ಅದ್ಭುತವಾಗಿ
ಕಾಣಿಸುತ್ತದೆ. ಆದರೆ ಇಸ್ಲಾಮಿಕ್ ಉಗ್ರರ ದಾಳಿಗೆ ಬಲಿಯಾದ ಕಾಶ್ಮೀರಿ ಪಂಡಿತರು ಯಾರ ವಿರುದ್ದವೂ ಯುದ್ಧಕ್ಕೆ ನಿಲ್ಲಲಿಲ್ಲ. ಇಂದಿಗೂ ತಾವು ಬಿಟ್ಟು ಬಂದ ಜಾಗಗಳನ್ನು ವಾಪಸ್ ಪಡೆಯಲು ಹವಣಿಸುತ್ತಿದ್ದಾರೆ.

ಇಸ್ರೇಲಿನಲ್ಲಿ ಯಹೂದಿಗಳ ಒಗ್ಗಟ್ಟನ್ನು ಪ್ರಶ್ನೆ ಮಾಡುವವರಿರಲಿಲ್ಲ. ಆದರೆ ಪಂಡಿತರ ವಿಚಾರದಲ್ಲಿ ಹಾಗಾಗಲಿಲ್ಲ. ಪಂಡಿತರ
ನರಮೇಧದ ಸಮಯದಲ್ಲಿ ದೇಶವನ್ನಾಳುತ್ತಿದ್ದ ಸರಕಾರವೇ ಉಗ್ರರ ಜತೆ ನಿಂತಿತ್ತು. ಇಂದು ಬಾಯಿ ಬಡಿದುಕೊಳ್ಳುತ್ತಿರುವ ಎಡಚರ ಪತ್ರಕರ್ತೆಯೇ ಉಗ್ರರ ಜತೆ ನಿಂತಿದ್ದಳು. ಪ್ಯಾಲಿಸ್ತೇನಿಗಳ ಜೀವದ ಮೇಲಿನ ಪ್ರೀತಿ ಕಾಶ್ಮೀರಿ ಪಂಡಿತರ ಜೀವದ ಮೇಲಿಲ್ಲ. ಬಾಲಿವುಡ್ ಅಂಗಳದಲ್ಲಿ ಭಾರತದ ನೈಜ ಇತಿಹಾಸವನ್ನು ನೆನಪಿಸುವ ಚಿತ್ರಗಳು ತೆರೆ ಕಂಡದ್ದು ಬಹಳ ಕಡಿಮೆ. ದಾವೂದ್ ಇಬ್ರಾಹಿಂ ಕೈಗೊಂಬೆಗಳಾಗಿದ್ದ ನಿರ್ದೇಶಕರುಗಳು, ನಿರ್ಮಾಪಕರುಗಳು ಸುಳ್ಳು ಇತಿಹಾಸದ ಚಿತ್ರಗಳನ್ನೇ ನಿರ್ಮಿಸಿದ್ದರು.

ಬಾಲಿವುಡ್‌ನಲ್ಲಿ ತೆರೆಕಂಡ ಚಿತ್ರಗಳಲ್ಲಿ ಹಿಂದೂ ದೇವರಿಗೆ ಮಾಡಿದ ಅವಮಾನಗಳು ನಾಡವ್ ಲ್ಯಾಪಿಡ್‌ನಿಗೆ ಅಪಪ್ರಚಾರವಾಗಿ ಕಾಣಲಿಲ್ಲ. ಮುಂಬೈ ಭೂಗತ ಲೋಕವನ್ನಾಳಿದ್ದು ಮುಸ್ಲಿಂ ಡಾನ್ ಗಳಾದರೂ, ಚಲನಚಿತ್ರಗಳಲ್ಲಿ ಹಿಂದೂ ಡಾನ್‌ಗಳೆಂದು
ತಪ್ಪಾಗಿ ಬಿಂಬಿಸಿದ್ದು ಎಡಚರರಿಗೆ ಅಪಪ್ರಚಾರವಾಗಿ ಕಾಣಿಸಲಿಲ್ಲ. ತನ್ನ ದೇಶದಲ್ಲಿ ತನ್ನದೇ ಪೂರ್ವಜರ ಮೇಲೆ ದಾಳಿ ನಡೆಸಿ, ಇಂದಿಗೂ ತನ್ನ ಮುಂದಿನ ಪೀಳಿಗೆಯವರಿಗೆ ಆತಂಕಕಾರಿಯಾಗಿರುವ ಪ್ಯಾಲಿಸ್ತೇನಿ ಉಗ್ರರ ಪರವಾಗಿ ನಿಲ್ಲುವ ನಾಡವ್‌ನಂಥ ಮನಃಸ್ಥಿತಿಯ ವ್ಯಕ್ತಿಗಳು ಇರುವ ತನಕ ಎಡಚರರ ಅಪಪ್ರಚಾರದ ಸಂವಹನ ಪ್ರಕ್ರಿಯೆ ಸಲೀಸಾಗಿರುತ್ತದೆ.