ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
ಇಂದು ಏಳನೇ ಅಂತಾರಾಷ್ಟ್ರೀಯ ಯೋಗ ದಿನ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿ ಈ ಕುರಿತು ಪ್ರಸ್ತಾಪಿಸಿದ್ದರು. ಅದೇ ವರ್ಷ ಡಿಸೆಂಬರ್ 11ರಂದು ನಡೆದ ಸಭೆಯಲ್ಲಿ 177 ರಾಷ್ಟ್ರಗಳು ವ್ಯಾಪಕ ಬೆಂಬಲ ವ್ಯಕ್ತಪಡಿಸಿದವು.
ಪ್ರತಿವರ್ಷ ಜೂನ್ 21ರಂದು International Day of Yoga ಆಚರಣೆಗೆ ಅನುಮೋದಿಸಿದವು. 2015ರಲ್ಲಿ ನಡೆದ ಮೊದಲ ಯೋಗ ದಿನಾಚರಣೆಯಲ್ಲಿ ಭಾರತದ ಪ್ರಧಾನಿಯ ಜತೆ 84 ದೇಶದ ಗಣ್ಯರೂ ಸೇರಿ ಸುಮಾರು 36000 ಜನ ಭಾಗವಹಿಸಿದ್ದು (ದೆಹಲಿಯ ರಾಜಪಥದಲ್ಲಿ) ಗಿನ್ನಿಸ್ ದಾಖಲೆಯ ಪುಟವನ್ನೂ ಸೇರಿತು. ಅಂದಿನಿಂದ ಪ್ರತಿವರ್ಷ ಭಾರತ ದಲ್ಲಷ್ಟೇ ಅಲ್ಲದೆ, ವಿದೇಶದಲ್ಲೂ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ.
2016ರಲ್ಲಿ ಕನ್ನಡ ಸಂಘ ಬಹ್ರೈನ್ ಆಯೋಜಿಸಿದ ಅಂತಾರಾಷ್ಟ್ರೀಯ ಯೋಗ ದಿನದಂದು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಅಧ್ಯಕ್ಷರೂ, ವ್ಯಾಸಾ ವಿಶ್ವವಿದ್ಯಾಲಯದ ಕುಲಪತಿಗಳೂ ಆದ ಪದ್ಮಶ್ರೀ ಡಾ.ಎಚ್.ಆರ್. ನಾಗೇದ್ರ ಅವರು ಗೌರವ ಅತಿಥಿಯಾಗಿ ಆಗಮಿಸಿದ್ದರು. ಅವರೊಂದಿಗೆ ಇನ್ನೋರ್ವ ಅತಿಥಿಯಾಗಿ ಬಹ್ರೈನ್ ದೇಶದ ಮಹಿಳೆ ಮುನೀರಾ ಒಬೈದ್ಲಿ ಇದ್ದರು. ಅಂದು ಅವರನ್ನು ಬೀಳ್ಕೊಟ್ಟ ನಂತರ, ವರ್ಷಕ್ಕೆ ಒಂದೆರಡು ಬಾರಿ ಹಬ್ಬಕ್ಕೆ ಶುಭಾಶಯದ ಸಂದೇಶ ಕಳಿಸುವುದು ಬಿಟ್ಟರೆ ಹೆಚ್ಚಿನ ಸಂಪರ್ಕ ಇರಲಿಲ್ಲ.
ಕಳೆದ ಎರಡು ಮೂರು ವರ್ಷದಿಂದ ಅದೂ ಇಲ್ಲವಾಗಿತ್ತು. ಮೊನ್ನೆಯೇ ಅವರು ಪುನಃ ಮಾತಿಗೆ ಸಿಕ್ಕಿದ್ದು. ಕಾರ್ಯಕ್ರಮಕ್ಕೆ ಬಂದಾಗ ಅವರ ವಿಷಯ ಸ್ವಲ್ಪ ತಿಳಿದಿತ್ತಾದರೂ ಅವರ ವ್ಯಕ್ತಿತ್ವದ ಸಂಪೂರ್ಣ ಅರಿವಿರಲಿಲ್ಲ. ಐದು ವರ್ಷದ ನಂತರ
ಮುನೀರಾ ಮತ್ತೆ ಸಿಕ್ಕಾಗ ಸಣ್ಣ ಸಂದರ್ಶನವೇ ಆಗಿ ಹೋಯಿತು. ನನ್ನಿಂದ ಪ್ರಶ್ನೆಗಳ ಸುರಿಮಳೆ, ಅದಕ್ಕೆ ಅವರ ಉತ್ತರಗಳ ಸರಮಾಲೆ. ಅವರ ಮಾತಿನ ತಿರುಳು ತೆರೆದಿಟ್ಟರೆ, ಏನೆಲ್ಲ ಪ್ರಶ್ನೆ ಕೇಳಿದೆ ಎಂದು ಪ್ರತ್ಯೇಕ ಹೇಳಬೇಕಿಲ್ಲ ಅನಿಸುತ್ತದೆ.
ಮುನೀರಾ ಆರಂಭಿಸಿದರು, ‘ನಾನು ಇಪ್ಪತ್ತು ವರ್ಷದವಳಾಗಿದ್ದಾಗ ಮೊದಲ ಬಾರಿ ಯೋಗದ ವಿಷಯ ತಿಳಿದೆ. ಯೋಗದ ವಿಷಯ ಕೇಳಿದಾಗ, ನೋಡಿದಾಗ ಕುತೂಹಲಕಾರಿ ಎಂದೆನಿಸಿತು. ಆ ದಿನಗಳಲ್ಲಿ ಕೇರಳ ಮೂಲದ ಶಿಕ್ಷಕರೊಬ್ಬರು ಬಹ್ರೈನ್ ನಲ್ಲಿ ಹಠಯೋಗದ ತರಬೇತಿ ನೀಡುತ್ತಿದ್ದರು. ಮೊದಲು ಅಂಗಸೌಷ್ಟವ ಕಾಪಾಡಿಕೊಳ್ಳಲು ಯೋಗಾಭ್ಯಾಸ ಆರಂಭಿಸುವುದು ಎಂದು ನಿರ್ಧರಿಸಿದೆ. ಯೋಗ ಕೇವಲ ಮೈಕಟ್ಟು ಅಥವಾ ದೇಹವನ್ನು ಕಾಪಾಡಿಕೊಳ್ಳುವುದಕ್ಕಷ್ಟೇ ಸೀಮಿತವಲ್ಲ ಎಂದು ಕ್ರಮೇಣ ಅರ್ಥವಾಗತೊಡಗಿತು.
ಸಮತೋಲಿತ ಸಮಗ್ರ ಆರೋಗ್ಯಕರ ಜೀವನ ಶೈಲಿಗೆ ಪ್ರಾಣಾಯಾಮದಂಥ ಉಸಿರಾಟದ ತಂತ್ರ, ಧ್ಯಾನ ಸೂತ್ರ ಎಲ್ಲವೂ ಅವಶ್ಯಕ, ಮನುಷ್ಯ ನೆಮ್ಮದಿಯಿಂದ ಬಾಳಿ ಬದುಕುವಲ್ಲಿ ಇದರ ಪಾತ್ರ ಅತ್ಯಂತ ಮಹತ್ವದ್ದು ಎಂದು ತಿಳಿಯಿತು. ಯೋಗ ಕೇವಲ ದೇಹಕ್ಕೆ ಮಾತ್ರವಲ್ಲ, ಮನಸ್ಸಿನ ಆರೋಗ್ಯಕ್ಕೂ ಅವಶ್ಯಕವಾದದ್ದು. ಯೋಗ ದಿಂದ ದೈಹಿಕವಾಗಿ, ಮಾನಸಿಕವಾಗಿ ವಿಭಿನ್ನ ಅಂಶಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ಗೊತ್ತಾಯಿತು.’
‘ನನ್ನ ಮನೆಯ ವಾತಾವರಣ ಚೆನ್ನಾಗಿದ್ದು, ಮನೆಯವರೆಲ್ಲ ಮುಕ್ತ ಮನಸ್ಸಿನವರಾಗಿದ್ದರು. ಬೇರೆ ಧರ್ಮದ ಜನರಿಗೆ, ಬೇರೆ ಯವರ ಸಂಸ್ಕೃತಿಗೆ ಗೌರವ ಕೊಡುವುದನ್ನು ನನಗೆ ಬಾಲ್ಯದ ಹೇಳಿಕೊಟ್ಟಿದ್ದರು. ಆ ದಿನಗಳಲ್ಲೂ (ಇಂದಿಗೆ ಇಪ್ಪತ್ತು ವರ್ಷಗಳ ಹಿಂದೆ) ಮನೆಯ ಹಿರಿಯರು ಯೋಗಾಭ್ಯಾಸವನ್ನು ವ್ಯಾಯಾಮ ದ ಒಂದು ಭಾಗವಾಗಿ ಕಂಡಿದ್ದರೇ ಹೊರತು, ಅದು ಒಂದು ಧರ್ಮಕ್ಕೆ ಸೇರಿದ್ದು ಎಂದು ಎಣಿಸಿರಲಿಲ್ಲ.
ಮನೆಯವರೊಂದಿಗೆ ಗೆಳತಿಯರೂ ಯಾವುದೇ ಪೂರ್ವಾಗ್ರಹ ಪೀಡಿತರಾಗಿರದೇ ಮನಸಾರೆ ಪ್ರೋತ್ಸಾಹಿಸಿದರು. ಅಷ್ಟೇ ಅಲ್ಲ, ನಾನು ಅಭ್ಯಾಸ ಮಾಡುತ್ತಿರುವುದನ್ನು ಕಂಡು, ನನ್ನ ಜತೆ ಬರುತ್ತಿದ್ದ ಗೆಳತಿಯರಲ್ಲೂ ಯೋಗದ ಕುರಿತು ಆಸಕ್ತಿ ಮೂಡಿತ್ತು. ನನ್ನೊಂದಿಗೆ ಅವರೂ ಅಭ್ಯಾಸ ಆರಂಭಿಸಿದರು.’ ‘ಯೋಗವನ್ನು ಯಾವುದೇ ಒಂದು ಧರ್ಮ ಅಥವಾ ಆಚರಣೆಯ ದೃಷ್ಟಿ ಕೋನದಿಂದ ನೋಡಬಾರದು. ಹಾಗೆ ನೋಡಿದರೆ ಇಸ್ಲಾಂ, ಹಿಂದು, ಕ್ರಿಶ್ಚಿಯನ್, ಯಾವುದೇ ಧರ್ಮವಾದರೂ ಹೇಳುವುದು ಒಂದೇ. ಪರಮಾತ್ಮ ನೊಂದಿಗೆ ಸೇರುವುದು ನಮ್ಮ ಗುರಿಯಾಗಿರಬೇಕು, ಸೃಷ್ಟಿಕರ್ತನಲ್ಲಿ ಲೀನವಾಗಬೇಕು, ಇನ್ನೊಂದು
ರೀತಿಯಲ್ಲಿ ಹೇಳುವುದಾದರೆ, ಅವನಲ್ಲಿ ನಾವು ಒಂದಾಗುವುದೇ ನಮ್ಮ ಅಂತರಂಗದ ಮೂಲ ಉದ್ದೇಶವಾಗಿರಬೇಕು.
ಯೋಗ ಎಂಬ ಪದದ ಅರ್ಥವೇ ಒಂದುಗೂಡಿಸು ಎಂಬುದು. ಹಾಗಾದರೆ ಯಾರನ್ನು, ಯಾರಲ್ಲಿ ಒಂದುಗೂಡಿಸುವುದು? ಹೇಗೆ
ಒಂದುಗೂಡಿಸುವುದು? ದೈವತ್ವದೊಂದಿಗೆ ಮಾನವನನ್ನು ಒಂದುಗೂಡಿಸುವುದಕ್ಕೆ ಯೋಗ ಒಂದು ಅದ್ಭುತ ಸಾಧನ. ಇದು ಅಧ್ಯಾತ್ಮಿಕ ಅಭ್ಯಾಸವನ್ನು ಉತ್ಕೃಷ್ಟಗೊಳಿಸುತ್ತದೆ. ಇಷ್ಟು ತಿಳಿದರೆ ಯಾವ ಸಂಘರ್ಷವೂ ಇರುವುದಿಲ್ಲ. ಯೋಗ ಧರ್ಮದ ಪರಿಧಿಯನ್ನು ಮೀರಿ ನಿಂತದ್ದು. ಅದಕ್ಕೆ ಧರ್ಮ ಅಥವಾ ಸಂಸ್ಕೃತಿಯ ಬೇಲಿ ಕಟ್ಟಬಾರದು.’
ಮುನೀರಾ ಮಾತು ಮುಂದುವರಿಸಿದ್ದರು ‘ನಾನು ಯೋಗಾಭ್ಯಾಸ ಮಾಡಲು ಆರಂಭಿಸಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಾದವು. ನಾನು ಹಠಯೋಗದಿಂದ ಆರಂಭಿಸಿದೆ. ಕ್ರಮೇಣ ಭಕ್ತಿಯೊಗ, ಧ್ಯಾನಯೋಗ, ರಾಜಯೋಗದ ಎಲ್ಲಾ ಅಂಶಗಳನ್ನೂ ಅಭ್ಯಾಸ ಮಾಡಿದೆ. ನಿಮಗೆ ಗೊತ್ತಲ್ಲ, ಯೋಗದಲ್ಲಿ ಅನೇಕ ಬಗೆಗಳಿವೆ, ಅನೇಕ ಮಜಲುಗಳಿವೆ. ಎಷ್ಟೋ ಜನ ಯೋಗ ಎಂದರೆ ಕೇವಲ
ಆಸನ ಎಂದು ತಿಳಿದಿದ್ದಾರೆ. ಯೋಗದ ವ್ಯಾಪ್ತಿ ಅದಕ್ಕೂ ಮಿಗಿಲಾದದ್ದು. ಆಸನ ಯೋಗದ ಒಂದು ಭಾಗ ಅಷ್ಟೇ.
ಯೋಗಾಭ್ಯಾಸ ಆಸನಗಳಿಗಷ್ಟೇ ಸೀಮಿತವಾಗಬಾರದು. ಅದಕ್ಕೂ ಮೀರಿ ಅಭ್ಯಾಸ ಮಾಡಿದಾಗ ಮಾತ್ರ ನಾವು ಗುರಿ ತಲುಪಲು ಸಾಧ್ಯ. ಕಳೆದ ಕೆಲವು ವರ್ಷಗಳಿಂದ ನಾನು ಅರ್ಹಟಿಕ್ ಯೋಗ ಅಭ್ಯಾಸ ಮಾಡುತ್ತಿದ್ದೇನೆ. ಅರ್ಹಟಿಕ್ ಯೋಗದ ಮಾಸ್ಟರ್ ಚೋವಾ ಕೊಕ್ ಸುಯಿ ಅಭಿವೃದ್ಧಿಪಡಿಸಿದ ಪ್ರಾಣಿಕ್ ಹೀಲಿಂಗ್ ಕಲಿಯುತ್ತಿದ್ದೇನೆ.’ ಅವರು ಯೋಗದ ವಿವಿಧ ಆಯಾಮಗಳನ್ನು
ಪಟಪಟನೆ ಅರಳು ಹುರಿದಂತೆ ಮಾತಾಡುತ್ತಿದ್ದುದನ್ನು ಕೇಳಿ ನಾನು ದಂಗಾಗಿ ಹೋದೆ.
ಅರ್ಹಟಿಕ್ ಯೋಗದ ಶಿಕ್ಷಣವನ್ನು ಎಲ್ಲಿಂದ ಪಡೆಯುತ್ತಿದ್ದೀರಿ ಎಂದು ಕೇಳಿದೆ. ‘ನಾನು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಪುಣೆಯಲ್ಲಿರುವ ಅರ್ಹಟಿಕ್ ಯೋಗ ಆಶ್ರಮಕ್ಕೆ ಹೋಗುತ್ತೇನೆ. ಅದು ಸುಂದರ ಪರಿಸರ ಹೊಂದಿದ, ಯೋಗಕ್ಕೆ ಯೋಗ್ಯವಾದ, ಧ್ಯಾನಕ್ಕೆ ಪ್ರಶಸ್ತವಾದ ಸ್ಥಳ. ಕರೋನಾದಿಂದಾಗಿ ಕಳೆದ ವರ್ಷ ಹೋಗಲು ಆಗಲಿಲ್ಲ. ಪರಿಸ್ಥಿತಿ ಹತೋಟಿಗೆ ಬಂದಮೇಲೆ ಪುನಃ ಹೋಗುತ್ತೇನೆ’ ಎಂದರು. ಅಲ್ಲಿಗೆ ನಮ್ಮ ಮಾತು ಸ್ವಲ್ಪ ಭಾರತದ ಕಡೆಗೆ ಹೊರಳಿತು. ಭಾರತ ಕುರಿತು ಅವರ ಅಭಿಪ್ರಾಯ ಕೇಳಿದೆ.
‘ಭಾರತ ಎಂದಾಕ್ಷಣ ನೆನಪಿಗೆ ಬರುವುದು ಯೋಗ.
ಅದು ಯೋಗದ ತವರೂರು. ಭಾರತ ವಿಶ್ವಕ್ಕೆ ಕೊಟ್ಟ ಅತ್ಯಮೂಲ್ಯ ಉಡುಗೊರೆ – ಯೋಗ. ಅದಕ್ಕಾಗಿ ನಾವು ಭಾರತಕ್ಕೆ, ಅಲ್ಲಿಯ ಜನರಿಗೆ ಕೃತಜ್ಞರಾಗಿದ್ದೇವೆ. ಭಾರತೀಯರು ಎಂದರೆ, ದಯೆ ಮತ್ತು ಉದಾರತೆ ತುಂಬಿ ತುಳುಕುವ ಹೃದಯ ಉಳ್ಳವರು. ಅದರಲ್ಲೂ ಭಾರತ ಮತ್ತು ಬಹ್ರೈನ್ ಸಂಬಂಧ ಇಂದು ನಿನ್ನೆಯದಲ್ಲ; ಕೆಲವು ದಶಕಗಳದ್ದು. ನಮ್ಮ ಊಟ – ತಿಂಡಿಯಲ್ಲಿ,
ಉಡುಪಿನಲ್ಲಿ ಭಾರತದ ಪ್ರಭಾವ ಕಾಣಬಹುದು.
ಪ್ರಮುಖವಾಗಿ ನಮ್ಮ ಉಡುಗೆಯ ಮೇಲಿನ ಕಸೂತಿಗಳಲ್ಲಿ ಭಾರತದ ಛಾಪು ಎದ್ದು ತೋರುತ್ತದೆ. ನಮ್ಮಲ್ಲಿ ಅನೇಕರು ಭಾರತೀಯ ಸಂಸ್ಕೃತಿಯನ್ನು, ಆಹಾರವನ್ನು ಇಷ್ಟಪಡುತ್ತಾರೆ. ವೈಯಕ್ತಿಕವಾಗಿ, ನನಗೆ ಭಾರತೀಯ ಸಂಸ್ಕೃತಿಯೊಂದಿಗೆ, ದಕ್ಷಿಣ ಭಾರತದ ಸಂಪ್ರದಾಯ ಮತ್ತು ತಿನಿಸುಗಳು ಬಹಳ ಇಷ್ಟ. ನನ್ನ ಭಾರತೀಯ ಸ್ನೇಹಿತರಲ್ಲಿ ಹೆಚ್ಚಿನವರು ದಕ್ಷಿಣದ
ಕಡೆಯವರು.’ ಎಂದರು.
ನಿಮ್ಮ ಆಹಾರ ಪದ್ಧತಿಯ ಬಗ್ಗೆ ಹೇಳಿ ಎಂದೆ. ‘ನಾನು ಕೆಲವು ವರ್ಷಗಳಿಂದ ಪೂರ್ಣ ಸಸ್ಯಾಹಾರಿ. ಪ್ರಯಾಣ ಮಾಡುವ ಸಂದರ್ಭದಲ್ಲಿ ಅಥವಾ ಇನ್ಯಾವುದೋ ಅನಿವಾರ್ಯ ಸಂದರ್ಭದಲ್ಲಿ ಬದಲಿ ವ್ಯವಸ್ಥೆಗೆ ಹೊಂದಿಕೊಳ್ಳುತ್ತೇನಾದರೂ ಮಾಂಸಾ ಹಾರ ಸೇವಿಸುವುದಿಲ್ಲ. ಅದು ನನ್ನ ವೈಯಕ್ತಿಕ ಆಯ್ಕೆ. ಮಾಂಸಾಹಾರ ನನ್ನ ದೇಹಕ್ಕೆ ಒಗ್ಗುವುದಿಲ್ಲ.’ ಅಲ್ಲಿಂದ ನಮ್ಮ ಮಾತು ಮತ್ತೆ ಯೋಗದ ಕಡೆ ತಿರುಗಿತು.
ಕೊನೆಯದಾಗಿ, ಮುಂದಿನ ಪೀಳಿಗೆಗೆ, ಯುವ ಜನತೆಗೆ ನಿಮ್ಮ ಸಂದೇಶ ಏನೆಂದು ಕೇಳಿದೆ. ‘ನಾವು ಬರೀ ಮನುಷ್ಯರಾಗಿದ್ದರೆ ಸಾಲದು. ಒಳ್ಳೆಯ ಮನುಷ್ಯರಾಗಬೇಕು, ಒಳ್ಳೆಯ ನಡತೆ ರೂಢಿಸಿಕೊಳ್ಳಬೇಕು. ನಮ್ಮಲ್ಲಿ ಒಳ್ಳೆಯತನವನ್ನು ವೃದ್ಧಿಸಿಕೊಂಡರೆ ಮಾತ್ರ ನಾವು ಸಮುದಾಯಕ್ಕೆ, ಸಮಾಜಕ್ಕೆ, ಮಾನವೀಯತೆಗೆ ಉತ್ತಮವಾದ ಕೊಡುಗೆ ನೀಡಬಹುದು. ಅದಕ್ಕೆ ಉತ್ತಮವಾದ ದೇಹ, ಆರೋಗ್ಯ, ಮನಸ್ಸು, ಆತ್ಮ ಬೇಕು.
ನಮ್ಮ ವ್ಯಕ್ತಿತ್ವ ವಿಕಸನಗೊಂಡು ಇನ್ನಷ್ಟು ಬೆಳೆದು ನಿಲ್ಲಬೇಕು. ಅದಕ್ಕೆ ಯೋಗ ಮತ್ತು ಧ್ಯಾನ ಉತ್ತಮ ಸಾಧನ. ಅದನ್ನು ಎಲ್ಲರೂ ರೂಢಿಸಿಕೊಂಡರೆ ಒಳಿತು.’ ಅವರು ತಮ್ಮ ಮಾತಿಗೆ ಪೂರ್ಣ ವಿರಾಮ ಇಟ್ಟಿದ್ದರು, ನಾನು ಯೋಚಿಸುತ್ತಿದ್ದೆ. ಹೌದಲ್ಲ, ಯೋಗ ಎನ್ನುವುದು ನಿರಂತರ. ಒಂದೆರಡು ದಿನ ಮಾಡಿ ಬಿಡುವುದಲ್ಲ. ಕಳೆದ ಎರಡು ದಶಕದಿಂದ ಮುನೀರಾ ಯೋಗವನ್ನು ತಪಸ್ಸಿನಂತೆ ಆಚರಿಸುತ್ತಿದ್ದಾರೆ. ಕೇವಲ ವರ್ಷಕ್ಕೊಂದು ದಿನ ಫೊಟೋಗಾಗಿ ಯೋಗ ಮಾಡಿದರೆ, ಮುಂದೊಂದು ದಿನ ಯೋಗ ದಿವಸವೂ ಒಂದೇ ದಿನಕ್ಕೆ ಸೀಮಿತವಾಗಿರುವ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಅಥವಾ ಕನ್ನಡ ರಾಜ್ಯೋತ್ಸವದಂಥ
ಆಚರಣೆಯ ಪಟ್ಟಿಗೆ ಹತ್ತರೊಂದಿಗೆ ಹನ್ನೊಂದಾಗಿ ಸೇರಿಕೊಳ್ಳುತ್ತದೆ. ಯೋಗ ನಿತ್ಯದ ಆಚರಣೆಯಾಗಬೇಕು.
ನಮ್ಮಲ್ಲಿ ಎಷ್ಟೋ ಜನರಿಗೆ ಯೋಗ ಎಂದರೆ ಆಸನ, ಪ್ರಾಣಾಯಾಮ. ಆಸನ ಮತ್ತು ಪ್ರಾಣಾಯಾಮ ಅಷ್ಟಾಂಗ ಯೋಗದ ಮೂರನೆಯ ಮತ್ತು ನಾಲ್ಕನೆಯ ಮಜಲು ಎನ್ನುವುದೇ ಗೊತ್ತಿಲ್ಲ. ಅದಕ್ಕಿಂತ ಮೊದಲು ಬರುವ ಯಮ, ನಿಯಮದ ಅರಿವಿಲ್ಲ. ಇನ್ನು ಕೆಲವರು ಆಸನ, ಪ್ರಾಣಾಯಾಮಕ್ಕಿಂತ ಮುಂದೆ ಹೋಗಿ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಯವರೆಗೆ ತಲುಪಲಿಲ್ಲ.
ಅದು ಅಸಾಧ್ಯವಾದ ಮಾತೇನಲ್ಲ, ಅದನ್ನು ಗಂಭೀರವಾಗಿ ಪರಿಗಣಿಸಬೇಕು, ಅಷ್ಟೇ. ಮುನೀರಾ ಅವರ ಬಗ್ಗೆ ನಿಮಗೆ ಇನ್ನೊಂದಿಷ್ಟು ಮಾಹಿತಿ ಹೇಳಲೇ ಬೇಕು. ಅವರು ಬಹ್ರೈನ್‌ನ ಪ್ರಾಣಿಕ್ ಹೀಲಿಂಗ್ ಸೆಂಟರ್‌ನಲ್ಲಿ ಯೋಗಾಭ್ಯಾಸ ಹೇಳಿ ಕೊಡುತ್ತಾರೆ. ಅದರ ಜತೆಗೆ, ವಾರದಲ್ಲಿ ಎರಡು ದಿನ, ಆನ್‌ಲೈನ್ ಮೂಲಕ ಉಚಿತವಾಗಿ ಬೇಸಿಕ್ ಮತ್ತು ಅಡ್ವಾನ್ಸ್ಡ್ ಪ್ರಾಣಿಕ್ ಹೀಲಿಂಗ್, ಪ್ರಾಣಿಕ್ ಸೈಕೋಥೆರಪಿಯನ್ನೂ ಬೋಧಿಸುತ್ತಾರೆ. ಇದಕ್ಕಾಗಿ ಬೇರೆ ಬೇರೆ ದೇಶಗಳಿಂದ ಶಿಕ್ಷಕರನ್ನು, ಬೋಧಕರನ್ನು ತರಬೇತಿ ನೀಡಲು ಕರೆಸುತ್ತಾರೆ.
ಬಹ್ರೈನ್ ದೇಶದಲ್ಲಿಯೇ ಹುಟ್ಟಿ ಬೆಳೆದ ಮುನೀರಾ ಕಮ್ಮಿ ಕುಳ ಅಲ್ಲ. ನೂರೈವತ್ತು ದೇಶದಲ್ಲಿ ಹರಡಿಕೊಂಡಿರುವ ವಿಶ್ವದ ಅತಿದೊಡ್ಡ ನ್ಯೂಟ್ರಿಷನ್ ಸಂಸ್ಥೆ ಐಐಎನ್ (ಇನ್ಸ್ಟಿಟ್ಯೂಟ್ ಫಾರ್ ಇಂಟಿಗ್ರೇಟಿವ್ ನ್ಯೂಟ್ರಿಷನ್)ನಲ್ಲಿ ಓದಿದವರು. ಬಹ್ರೈನ್ ನಲ್ಲಿ ಆಹಾರ ಮತ್ತು ಆರೋಗ್ಯ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತರ ತಜ್ಞರ ಸಹಕಾರದೊಂದಿಗೆ ಜೀವನ ಶೈಲಿ, ಆಹಾರ ಪದ್ಧತಿ ಮತ್ತು ಸ್ವಾಸ್ಥ್ಯದ ನಡುವಿನ ಅಂತರ ದೂರಗೊಳಿಸಿ, ಜನರ ದೇಹ, ಮನಸ್ಸು ಮತ್ತು ಆತ್ಮದ ಯೋಗಕ್ಷೇಮ ವೃದ್ಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
‘ದೇಹ, ಮನಸ್ಸು ಮತ್ತು ಆತ್ಮಕ್ಕೆ ಸಂತೋಷದಾಯಕ ಆಹಾರ’ ಎಂಬ ಧ್ಯೇಯವಾಕ್ಯವನ್ನಿಟ್ಟುಕೊಂಡು, ಉತ್ತಮ ಗುಣಮಟ್ಟದ, ರುಚಿಕರವಾದ, ಸಂಪೂರ್ಣ ಸಸ್ಯಾಹಾರಿ ‘ಯುನಿಕಾರ್ನ್ ನಾಮ್ಸ’ (Unicorn Noms) ಕೆಫೆ ಆರಂಭಿಸಿದ, ಯಶಸ್ವಿ ಮಹಿಳಾ ಉದ್ಯಮಿ ಅವರು. ತಾವು ಗಳಿಸಿದ್ದರಲ್ಲಿ ಒಂದಷ್ಟು ಭಾಗವನ್ನು ಸಮಾಜಕ್ಕೆ ಹಿಂತಿರುಗಿ ನೀಡಬೇಕು ಎಂಬ ಉದ್ದೇಶ ಹೊಂದಿದ ಈ ಸಂಸ್ಥೆ ಬಹ್ರೈನ್‌ನ ರಾಯಲ್ ಹ್ಯುಮೆನಿಟೇರಿಯನ್ ಫೌಂಡೇಷನ್‌ನ ಅಂಗ ಸಂಸ್ಥೆಯಾಗಿ ಕೆಲಸಮಾಡುತ್ತಿದೆ.
ವಿಧವೆಯರಿಗೆ ಕೆಲಸ ಕೊಟ್ಟು, ಅವರು ಆರ್ಥಿಕವಾಗಿ ಸಬಲರಾಗುವುದಕ್ಕೆ ಸಹಕರಿಸುತ್ತಿದ್ದಾರೆ. ಅವರ ಸಂಸ್ಥೆಯಲ್ಲಿ ಕೆಲಸ ಮಾಡುವ ವಿಧವೆಯರು ಆರೋಗ್ಯ, ಉದ್ಯೋಗ, ಪ್ರೀತಿ, ಯಶಸ್ಸು, ಅಧ್ಯಾತ್ಮ, ಹೀಗೆ ಐದು ಕ್ಷೇತ್ರಕ್ಕೆ ಸಂಬಂಧಿಸಿದ ಕೈ ಕಡಗ ತಯಾರಿಸುತ್ತಾರೆ. ಅದರಿಂದ ಬಂದ ಎಲ್ಲಾ ಲಾಭ ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣಕ್ಕೆ, ಆರೋಗ್ಯಕ್ಕೆ, ಮಕ್ಕಳ ಶಿಕ್ಷಣಕ್ಕೆ
ವಿನಿಯೋಗವಾಗುತ್ತದೆ. ‘ಸಂತೋಷವನ್ನು ಅನುಭವಿಸಿ, ಸಂತೋಷವನ್ನು ಹಂಚಿ’, ಸಮಾಜದಲ್ಲಿ ಎಲ್ಲರೂ ಸಂತೋಷದಿಂದ ಇರುವಂತೆ ಮಾಡಿ ಎನ್ನುತ್ತಾರೆ ಮುನೀರಾ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಿಂತ ಒಂದೂವರೆ ದಶಕದ ಮೊದಲೇ ಇವರು ಬಹ್ರೈನ್‌ನ ಯೋಗ ಪ್ರವರ್ತಕರಾಗಿ ದ್ದಾರೆ. ಭಾರತ ಮತ್ತು ಬಹ್ರೈನ್ ನಡುವೆ ಯೋಗದ ಸೇತುವೆ ನಿರ್ಮಿಸಿದ್ದಾರೆ. ಕೊಲ್ಲಿ ರಾಷ್ಟ್ರಗಳ ಅತ್ಯಂತ ಪುಟ್ಟ ದೇಶವಾದ ಬಹ್ರೈನ್ ನಲ್ಲಿರುವ ಯೋಗದ ರಾಯಭಾರಿ ಮುನೀರಾ ಅವರಿಗೊಂದು ಸಲಾಂ ಹೇಳೋಣ!