ಹಿಂದಿರುಗಿ ನೋಡಿದಾಗ
ಮಧುಮೇಹವು ನಮಗೆ ಬಂದಿರುವುದು ಸತ್ಯ ಎನ್ನುವುದು ನಮಗೆ ಮನವರಿಕೆಯಾಗಿದೆ. ಈಗ ಮುಂದೇನು ಮಾಡಬೇಕೆಂದು ತಿಳಿ
ಯುತ್ತಿಲ್ಲ. ಮಧುಮೇಹದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಮಾತನಾಡುತ್ತಿರುವುದು ಕಿವಿಗೆ ಬೀಳುತ್ತಿದೆ.
ಮಧುಮೇಹದ ಬಗ್ಗೆ ಹಲವಾರು ಅಂತೆಕಂತೆಗಳ ಜೊತೆಯಲ್ಲಿ ಅಂತರ್ಜಾಲದಲ್ಲಿ ದೊರೆ ಯುವ ಇಲ್ಲಸಲ್ಲದ ಮಾಹಿತಿ, ಬಂಧುಗಳೋ ಅಥವ ಗೆಳೆಯರೋ ಮಧುಮೇಹದ ಬಗ್ಗೆ ಆಡುವ ನೈರಾಶ್ಯದ ಮಾತುಗಳು, ಮಧುಮೇಹ ಬಂದಿರುವವರು ಎಲ್ಲರಂತೆ ಬದುಕನ್ನು ನಡೆಸಲಾರರು ಎಂಬ ಹತಾಶ ಸುದ್ದಿಯು ತೀವ್ರವಾಗಿ ಕಾಡಲಾರಂಭಿಸಿ, ಕೊನೆಗೆ ಯಾವ ತೀರ್ಮಾನ ವನ್ನೂ ತೆಗೆದುಕೊಳ್ಳಲಾಗದೆ ಸುಮ್ಮನಿದ್ದುಬಿಡಬಹುದು. ಥೇಟ್ ಅರ್ಜುನ ನಂತೆ!
ಅರ್ಜುನನ ಗೊಂದಲ ಮನಃಸ್ಥಿತಿಯು ಕೃಷ್ಣನಿಗೆ ಪರಿಪೂರ್ಣವಾಗಿ ಅರ್ಥವಾಗಿದೆ. ಅವನಿಗೆ ವಾಸ್ತವತೆಯ ಸ್ಥಿತಿ- ಗತಿಯನ್ನು ವಿಶ್ಲೇಷಿಸಿ ಸಾರಾಂಶವನ್ನು ವಿವರಿಸಿ ಹೇಳ ಬೇಕಾಗಿದೆ. ಈ ಯುದ್ಧವನ್ನು ನೀನು ಮಾಡಬಲ್ಲೆ, ಆ ಸಾಮರ್ಥ್ಯವು ನಿನ್ನಲ್ಲಿದೆ, ನೀನು ಸಿದ್ಧನಾಗು ಎಂದು ಧೈರ್ಯವನ್ನು ತುಂಬಬೇಕಿದೆ. ಅದನ್ನು ಕೃಷ್ಣನು ಹೇಗೆ ಮಾಡುತ್ತಾನೆ ಎನ್ನುವುದನ್ನು ನೋಡೋಣ. ಪೃಥೆಯ ಮಗನಾದ ಪಾರ್ಥನೆ!
ಷಂಡನಾಗಬೇಡ. ಇದು ನಿನಗೆ ಯೋಗ್ಯವಲ್ಲ. ಶತ್ರುಗಳನ್ನು ದಂಡಿಸುವ ಸಾಮರ್ಥ್ಯವನ್ನು ಉಳ್ಳವನೇ! ನಿನ್ನ ಮನಸ್ಸಿನ ದೌರ್ಬಲ್ಯವು ಕ್ಷುಲ್ಲಕವಾದದ್ದು. ಏಳು! ಎದ್ದೇಳು (೨-೦೩). ಪಾರ್ಥ! ನೀನು ಮಹಾನ್ ಶಕ್ತಿಶಾಲಿ! ನೀನು ಯಾರ ಮೇಲಾದರೂ ಯುದ್ಧವನ್ನು ಮಾಡಿ ಗೆಲ್ಲಬಲ್ಲ ಸಾಮರ್ಥ್ಯವನ್ನು ಉಳ್ಳವನು. ಹಾಗಾಗಿ ಹೇಡಿಯಂತೆ ಹಿಂಜರಿ ಯಬೇಡ. ಏಳು. ಎದ್ದೇಳು. ಯುದ್ಧಕ್ಕೆ ಸಿದ್ಧನಾಗು ಎಂದು ಅರ್ಜುನನಲ್ಲಿ ಧೈರ್ಯವನ್ನು ತುಂಬುತ್ತಿದ್ದಾನೆ. ಭಗವದ್ಗೀತೆಯು ನಮ್ಮ ಬದುಕಿನಲ್ಲಿ ಬರುವ ಅನಿರೀಕ್ಷಿತ ತುರ್ತುಸ್ಥಿತಿಯನ್ನು ವಿಶ್ಲೇಷಿಸಿ, ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲ ಮನೋ ಭೂಮಿಕೆಯನ್ನು ಸಿದ್ಧಪಡಿಸುವ ಅಪೂರ್ವ ಕೃತಿ.
ಕೃಷ್ಣನು ಅರ್ಜುನನ ನಿರಾಸೆಯನ್ನು, ದುಃಖವನ್ನು, ಕೋಪವನ್ನು, ನಕಾರಾತ್ಮಕ ಭಾವನೆಗಳನ್ನು ನಿವಾರಿಸುವ ಪರಿಯು ನಮ್ಮ ಬದುಕಿಗೆ ಉತ್ತಮ ಮಾರ್ಗದರ್ಶನವನ್ನು ನೀಡಬಲ್ಲುದು. ಯುದ್ಧದಿಂದ ವಿಮುಖನಾದ ಅರ್ಜುನ ನನ್ನು ಕೃಷ್ಣನು ಯುದ್ಧಕ್ಕೆ ಸಿದ್ಧ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮಧುಮೇಹ ಬಂದಿರುವ ವ್ಯಕ್ತಿಗೆ ಕೃಷ್ಣನಂತಹ ವೈದ್ಯನು ಬೇಕು. ಕೃಷ್ಣನು ನೀಡುವ ಧೈರ್ಯ, ಭರವಸೆ, ಮಾರ್ಗದರ್ಶನವನ್ನು ಮಧುಮೇಹ ತಜ್ಞರು ನೀಡಬೇಕು. ಆ ಕೆಲಸವನ್ನು ನಮ್ಮ ಕುಟುಂಬ ವೈದ್ಯರು, ವೈದ್ಯ ಕೀಯ ಸಿಬ್ಬಂದಿ ವರ್ಗದವರೂ, ಮಧುಮೇಹ ಶೈಕ್ಷಣಿಕ ಸಲಹೆಗಾರರು ನೀಡಬಹುದು ಅಥವಾ ಮನೆ ಮಂದಿಯೇ ನೀಡಬಹುದು.
ತಜ್ಞ ಆಪ್ತ ಸಲಹೆಗಾರರ ಕೆಲಸವನ್ನು ಬಂಧುಗಳು, ಗೆಳೆಯರು, ಹಿತೈಷಿಗಳೂ ಮಾಡಬಹುದು. ಹಿತೈಷಿಗಳ ಪಾತ್ರವು ದೊಡ್ಡದು. ವಾಸ್ತವದಲ್ಲಿ ಮಧುಮೇಹವೆನ್ನುವುದು ಒಂದು ರೋಗವಲ್ಲ ಮಧುಮೇಹವು ನಿನ್ನ ಗೆಳೆಯ ಮಧುಮೇಹವು ನಿನಗೆ ತೊಂದರೆ ಯನ್ನು ಕೊಡಲು ಬಂದಿಲ್ಲ. ನಿನಗೆ ಸಹಾಯವನ್ನು ಮಾಡಲು ಬಂದಿದೆ ಎನ್ನುವ ವಾಸ್ತವತೆಯನ್ನು ತಿಳಿ ಹೇಳಬೇಕು. ಮಧು ಮೇಹವು ನಮ್ಮ ಗೆಳೆಯ ಎನ್ನುವ ಮಾತನ್ನು ಬಹು ಜನರು ಒಪ್ಪಲಾರರು. ಮಧುಮೇಹವು ಹೇಗೆ ನಮ್ಮ ಗೆಳೆಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
ಮಧುಮೇಹವು ಬರುವುದಕ್ಕೆ ಮೊದಲು ನಾವು ನಡೆಸುತ್ತಿದ್ದ ಜೀವನಶೈಲಿಯನ್ನು ನೆನಪಿಸಿಕೊಳ್ಳೋಣ. ಮಿತಿಯಿಲ್ಲದೇ ಜಂಕ್ ಪದಾರ್ಥಗಳನ್ನು ತಿನ್ನುತ್ತಿದ್ದೆವು, ಜಂಕ್ ಪಾನೀಯಗಳನ್ನು ಕುಡಿಯುತ್ತಿದ್ದೆವು. ಮಾಂಸಭ ಕ್ಷಣಕ್ಕೆ ಮಿತಿಯೇ ಇರಲಿಲ್ಲ. ಸೂರ್ಯ ಹುಟ್ಟಿ ಮಾರುಮೇಲಕ್ಕೆ ಬಂದರೂ ಏಳುತ್ತಿರಲಿಲ್ಲ. ಜೊತೆಗೆ ಧೂಮಪಾನ, ಮದ್ಯಪಾನಗಳ ಚಟ ಬೇರೆ! ಸೋ- ದಲ್ಲಿ ಪ್ರತಿಷ್ಠಾಪನೆಯಾಗಿ ಟಿವಿಯ ಮುಂದೆ ಕುಳಿತರೆ, ಮಾಡುವ ಅತ್ಯಂತ ಕಠಿಣವಾದ ದೈಹಿಕ ಶ್ರಮವೆಂದರೆ ರಿಮೋಟ್ ಬಳಸಿ ಚಾನೆಲ್ ಬದಲಾಯಿಸುವುದು. ಅದಕ್ಕಿಂತ ಹೆಚ್ಚಿನ ವ್ಯಾಯಾಮವನ್ನೇ ಮಾಡುತ್ತಿರಲಿಲ್ಲ.
ಇಂತಹ ಬದುಕನ್ನು ನಡೆಸುತ್ತಿದ್ದ ನಮಗೆ ಬೊಜ್ಜು ಬಂದದ್ದು ಅತಿಶಯವಲ್ಲ. ಬೊಜ್ಜು ರೋಗಗಳ ರಾಜ. ಬೊಜ್ಜು ಬಂದಿತೆಂದರೆ ರಕ್ತದ ಏರೊತ್ತಡ, ಮಧುಮೇಹ, ಹೃದ್ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಕರೆಯದಿದ್ದರೂ ಅವು ಸಾಲಾಗಿ ಬರುತ್ತವೆ. ನಮ್ಮ ಒಡಲನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡು ತಮ್ಮ ದರ್ಬಾರನ್ನು ನಡೆಸುತ್ತವೆ. ಮಧುಮೇಹವು ನಮ್ಮ
ಜೀವನಶೈಲಿಯನ್ನು ಬದಲಾಯಿಸುತ್ತದೆ. ನಮಗೆ ಹಿತವಾದ ಆಹಾರವನ್ನು, ಹೇಗೆ ಮಿತವಾಗಿ ತಿನ್ನಬೇಕು ಎನ್ನುವ ಕಿವಿಮಾತನ್ನು ಹೇಳುತ್ತದೆ. ನಾವು ಯಾವ ಯಾವ ರೀತಿಯ ಶಾರೀರಿಕ ಚಟವಟಿಕೆಗಳಲ್ಲಿ ತೊಡಗಿಕೊಳ್ಳಬಹುದು ಎನ್ನುವ ಮಾರ್ಗದರ್ಶನವನ್ನು ನೀಡುತ್ತದೆ.
ನಮ್ಮ ಒತ್ತಡಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು, ನಮ್ಮ ಅರಿಷಡ್ವರ್ಗಗಳಿಗೆ ನಾವು ವಶರಾಗದೇ, ನಾವು ಹೇಳಿದಂತೆ ಅವು ಕೇಳುವ ಹಾಗೆ ಜೀವನಶೈಲಿಯನ್ನು ರೂಪಿಸಿಕೊಳ್ಳುವುದು ಈ ಎಲ್ಲವನ್ನೂ ಮಧುಮೇಹವು ಹೇಳಿಕೊಡುತ್ತದೆ. ಹಾಗಾಗಿ ಮಧುಮೇಹಕ್ಕೆ ಹಿಡಿ ಹಿಡಿ ಶಾಪವನ್ನು ಹಾಕುವ ಬದಲು, ಮಧುಮೇಹದೊಡನೆ ಸಹಬಾಳ್ವೆಯನ್ನು ನಡೆಸುವುದನ್ನು
ಕಲಿಯಬೇಕಾಗುತ್ತದೆ. ಕೃಷ್ಣನ ಹಾಗೆ, ಮಧುಮೇಹದೊಡನೆ ಸಹಬಾಳ್ವೆಯನ್ನು ನಡೆಸಲು ಅಗತ್ಯವಾದ ಆಪ್ತಸಲಹೆಯನ್ನು
ನೀಡುವ ಕೃಷ್ಣನಂತಹ ವೈದ್ಯರು ಎಲ್ಲರಿಗೂ ದೊರೆಯಲಿ ಎಂದು ಆಶಿಸೋಣ.
ಅಶೋಚ್ಯಾನ್ ಅನ್ವಶೋಚಃ ತ್ವಂ (೨-೧೧) ಅರ್ಜುನ! ದುಃಖಿಸಲು ಯೋಗ್ಯವಲ್ಲದ ವಿಷಯಗಳನ್ನು ಕುರಿತು ಯೋಚಿಸುತ್ತಿರುವೆ
ಕೆಲಸಕ್ಕೆ ಬಾರದ ವಿಷಯಗಳನ್ನು ಕುರಿತು ಯೋಚಿಸುತ್ತಾ ಕಾಲಹರಣವನ್ನು ಮಾಡಬೇಡ. ಈಗ ನಾವು ಮುಖ್ಯವಾಗಿ ಮಾಡಬೇಕಾದ ಕೆಲಸ ಕಾರ್ಯಗಳತ್ತ ಗಮನವನ್ನು ಹರಿಸೋಣ ಎಂದು ಅರ್ಜುನನ ಮನಸ್ಸಿನೊಳಗೆ ಕೆಲಸಕ್ಕೆ ಬಾರದ ಇಲ್ಲ ಸಲ್ಲದ ಎಲ್ಲ ಯೋಚನೆಗಳನ್ನು ದೂರವಿಡುವಂತೆ ನೇರವಾಗಿ ಹೇಳುತ್ತಿದ್ದಾನೆ. ಕೃಷ್ಣನು ಆತ್ಮವು ಅವಿನಾಶಿ ಎನ್ನುವುದನ್ನು ಮನಮುಟ್ಟುವಂತೆ ವಿವರಿಸುತ್ತಾನೆ.
ಮಧುಮೇಹವನ್ನು ಮಾತ್ರವಲ್ಲ, ನಮ್ಮ ಬದುಕಿನಲ್ಲಿ ಬರುವ ಯಾವುದೇ ಅನಾರೋಗ್ಯವಾಗಲಿ, ಕಷ್ಟ ಕಾರ್ಪಣ್ಯಗಳಾಗಿ ಎದುರಿಸಲು ನಾವು ಸ್ಥಿತಪ್ರಜ್ಞರಾಗಿರಬೇಕಾದ ಅಗತ್ಯವನ್ನು ವಿವರಿಸುತ್ತಾನೆ. ನಾವು ಯಾವ ಕೆಲಸವನ್ನು ಮಾಡಬೇಕಾಗಿದೆಯೋ, ಆ ಕೆಲಸವನ್ನು ಯಾವುದೇ ರೀತಿಯ ದ್ವಂದ್ವವನ್ನು ತೋರದೆ, ನೇರವಾಗಿ ಮಾಡಬೇಕಾದ ಅವಶ್ಯಕತೆಯನ್ನು ಒತ್ತಿ ಒತ್ತಿ
ಹೇಳುತ್ತಿದ್ದಾನೆ. ಈ ದಿಶೆಯಲ್ಲಿ ಕೃಷ್ಣನು ನಮ್ಮ ಕರ್ತವ್ಯವನ್ನು ಒಂದೊಂದಾಗಿ ವಿವರಿಸುತ್ತಾನೆ.
ಸೋಲು-ಗೆಲವುಗಳ ಬಗ್ಗೆ ಯೋಚಿಸದಿರು. ಆ ಬಗ್ಗೆ ಆಸಕ್ತಿಯನ್ನೇ ತೋರದಿರು. ನಿನ್ನ ಕೆಲಸವನ್ನು ನೀನು ಸಮಚಿತ್ತದಿಂದ
ಮಾಡು. ಅರ್ಜುನ! ಇದುವೇ ಸಮಚಿತ್ತ ಯೋಗ (೨-೪೮). ಮಧುಮೇಹ ಪೀಡಿತರು ತಮ್ಮ ವೈದ್ಯರು ನೀಡಿದ ಸಲಹೆಯನ್ನು ಚಾಚು ತಪ್ಪದಂತೆ ಪರಿಪಾಲಿಸಬೇಕಾದದ್ದು ಅಗತ್ಯ. ನಮ್ಮನ್ನು ಧೃತಿಗೆಡುವಂತೆ ಮಾಡುವ ನಕಾರಾತ್ಮಕ ವಿಚಾರಗಳನ್ನು, ಭಾವಗಳನ್ನು ದೂರವಿಡಬೇಕು.
ಹಾಗೆ ಆಗಲಿಲ್ಲವೆಂದರೆ, ಆ ಬಗ್ಗೆ ನಮ್ಮ ವೈದ್ಯರ ಜೊತೆಯಲ್ಲಿ ಚರ್ಚಿಸಬೇಕು. ಆ ಬಗ್ಗೆ ಸೂಕ್ತ ವಿವರಣೆಯನ್ನು ಲಭ್ಯ ಮಾಹಿತಿಯ ಹಿನ್ನೆಲೆಯಲ್ಲಿ ವೈದ್ಯರು ವಿವರಿಸುವರು. ಹೀಗೆ ಯಾವುದೇ ರೀತಿಯ ಇಬ್ಬಂದಿತನವಿಲ್ಲದೆ, ಅರೆ ಬರೆ ಮನಸ್ಸಿಲ್ಲಿ ಮಾಡದೆ, ಪರಿಪೂರ್ಣ ನಂಬಿಕೆಯಿಂದ, ವೈದ್ಯರು ಸೂಚಿಸಿದ ಮಾರ್ಗದಲ್ಲಿ ನಡೆಯುವುದೇ ಸಮಚಿತ್ತ ಯೋಗದ ನಿಜವಾದ ಅರ್ಥ. ನಕಾರಾತ್ಮಕ ಭಾವನೆಗಳು ಅಪಾಯಕಾರಿಯಾದವು.
ಮಧುಮೇಹ ಮಾತ್ರವಲ್ಲ, ಯಾವುದೇ ಒಂದು ರೋಗವಾದರೂ ಸರಿ, ಚಿಕಿತ್ಸೆಯನ್ನು ಪಡೆಯುವ ಸಮಯದಲ್ಲಿ ನಮ್ಮಲ್ಲಿ
ನಕಾರಾತ್ಮಕ ಭಾವನೆಗಳು ಇರಬಾರದು. ಹಾಗೆ ಇದ್ದರೆ, ನಾವು ಎಷ್ಟೇ ಉತ್ತಮ ಚಿಕಿತ್ಸೆಯನ್ನು ಪಡೆಯುತ್ತಿದ್ದರೂ ಸಹ, ಅದು
ಪರಿಪೂರ್ಣವಾಗಿ -ಲಕಾರಿಯಾಗದೇ ಹೋಗಬಹುದು. ಔಷಧ ಚಿಕಿತ್ಸೆಯು ಪರಿಪೂರ್ಣವಾಗಿ ಯಶಸ್ವಿಯಾಗಬೇಕಾದರೆ, ನಮ್ಮಲ್ಲಿ ಸಕಾರಾತ್ಮಕ/ಇತ್ಯಾತ್ಮಕ ಭಾವನೆಗಳು ಇರಲೇ ಬೇಕು. ಒಂದು ವೇಳೆ ಸಕಾರಾತ್ಮಕ ವಿಚಾರಗಳು ಬರಲಿಲ್ಲ ಎಂದೇ ಭಾವಿಸೋಣ. ಆಗ ಕೃಷ್ಣನು ಸೂಚಿಸುವ ಸಮಚಿತ್ತ ಯೋಗವನ್ನು ಅಳವಡಿಸಿಕೊಂಡರೆ ಸಾಕು, ಸಕಾರಾತ್ಮಕ ಭಾವನೆಗಳು ಸಹಜವಾಗಿ ಬರುತ್ತವೆ.
ಯಾವುದೇ ಆಕರ್ಷಕ ವಿಚಾರಗಳಿಂದ ಆಕರ್ಷಿತನಾಗದೆ, ಕಾಮ್ಯಕರ್ಮ ಫಲಗಳಿಂದ ಪ್ರಭಾವಿತನಾಗದೆ, ಮನಸ್ಸನ್ನು ಸದಾ ಏಕಾಗ್ರತೆಯಲ್ಲಿ ಇಟ್ಟಿಕೊಳ್ಳುವೆಯೋ, ಆಗ ನಿನಗೆ ನಿಶ್ಚಲವಾಗಿ ಒಂದು ದಿವ್ಯಪ್ರಜ್ಞೆಯು ದೊರೆಯುತ್ತದೆ (೨-೫೩). ನಮ್ಮ ವೈದ್ಯರ ಮಾರ್ಗದರ್ಶನದಲ್ಲಿ ಮಧುಮೇಹ ಚಿಕಿತ್ಸಾ ಯೋಜನೆಯನ್ನು ಸಮಚಿತ್ತದಿಂದ ಕಾರ್ಯರೂಪಕ್ಕೆ ತರಬೇಕು. ನಮ್ಮನ್ನು ಸಮಚಿತ್ತದಿಂದ ವಿಮುಖಗೊಳಿಸಲು ಪ್ರಯತ್ನಿಸುವ ಆಕರ್ಷಕ ಮಾತುಗಳು (ಉದಾ: ಮಧುಮೇಹವನ್ನು ಗುಣಪಡಿಸುತ್ತೇವೆ ಎನ್ನುವ ಮಿಥ್ಯಾ ಭರವಸೆ) ತಪ್ಪು ತಪ್ಪು ಮಾರ್ಗದರ್ಶನಗಳು, ಆಮಿಷಗಳು ಎಲ್ಲವೂ ದೂರವಾಗುತ್ತವೆ. ನಮಗೆ ಬಂದಿರುವ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಲು ಯಾವ ರೀತಿಯ ಚಿಕಿತ್ಸಾ ಯೋಜನೆಯು ಸೂಕ್ತವಾದದ್ದು, ಯಾವ ರೀತಿಯ ಜೀವನ ಶೈಲಿಯು ಯೋಗ್ಯವಾದದ್ದು ಎನ್ನುವ ಒಳ ತಿಳಿವು ದೊರೆಯುತ್ತದೆ.
ಮಧುಮೇಹ ಚಿಕಿತ್ಸಾ ಯೋಜನೆಯು ಯಶಸ್ವಿಯಾಗ ಬೇಕಾದರೆ ನಮ್ಮ ಮನಸ್ಸು ಪ್ರಶಾಂತವಾಗಿರಬೇಕು. ನಿಶ್ಚಲ ನೀರಿನಲ್ಲಿ ನಮ್ಮ ಪ್ರತಿಬಿಂಬವನ್ನು ನೋಡಬಹುದು. ಕುದಿಯುವ ನೀರಿನಲ್ಲಿ ನೋಡಲು ಸಾಧ್ಯವೇ ಇಲ್ಲ. ಹಾಗಾಗಿ ನಮ್ಮ ನಮ್ಮ ಮನಸ್ಸನ್ನು ಸಮಚಿತ್ತತೆಯಿಂದ ಕಾಪಾಡಿಕೊಳ್ಳಬೇಕಾ ದದ್ದು ಮುಖ್ಯ. ಪ್ರಶಾಂತ ಮನಸ್ಸು ನಮ್ಮ ರಕ್ತಶರ್ಕರದ ಪ್ರಮಾಣವನ್ನು ಹಿತ-ಮಿತ ವ್ಯಾಪ್ತಿಯಲ್ಲಿ ಕಾಪಾಡುತ್ತದೆ. ಏರಿಳಿತಕ್ಕೆ ಅವಕಾಶವನ್ನು ಮಾಡಿಕೊಡುವುದಿಲ್ಲ. ಭಗವದ್ಗೀತೆಯು ನಮ್ಮ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.
ಭಗವದ್ಗೀತೆಯು ಶೋಕ, ದುಃಖ, ನಿರಾಶೆ, ಭೀತಿ, ವಿಷಾದವೇ ಮುಂತಾದ ಭಾವನೆಗಳಿಗೆ ಅವಕಾಶವನ್ನು ಮಾಡಿಕೊಡುವುದಿಲ್ಲ.
ಸಂದರ್ಭವನ್ನು ಯುಕ್ತವಾಗಿ ವಿಶ್ಲೇಷಿಸಿ, ಅದನ್ನು ನಿಭಾಯಿಸಲು ಕಾರ್ಯೋನ್ಮುಖವಾಗುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಇದು ಮಧುಮೇಹಿಗಳಿಗೂ ಅನ್ವಯವಾಗುತ್ತದೆ. ಕುಂತಿಯ ಮಗನಾದ ಅರ್ಜುನನೇ! ದೃಢ ನಿಶ್ಚಯವನ್ನು ಕೈಗೊಂಡು ಏಳು… ಎದ್ದೇಳು (೨-೩೭). ನಿನಗೆ ಹೇಳಿದ ಕೆಲಸವನ್ನು ಮಾಡುವುದಕ್ಕಷ್ಟೇ ನಿನಗೆ ಅಽಕಾರ (೨-೪೭). ಮುಂದೆ ಏನಾಗುವುದೋ ಏನೋ ಎಂದು ಯೋಚಿಸದೆ, ಈ ಕ್ಷಣಕ್ಕೆ ನೀನು ಮಾಡಬೇಕಾದ ಕೆಲಸವನ್ನು ಮಾತ್ರ ನೀನು ಮಾಡು.
ಫಲಾಫಲಗಳ ಬಗ್ಗೆ ನೀನು ಯೋಚಿಸಬೇಕಾಗಿಲ್ಲ ಎಂದು ಅರ್ಜುನನನ್ನು ಹುರಿದುಂಬಿಸುತ್ತಿದ್ದಾನೆ. ಭಗವದ್ಗೀತೆಯಲ್ಲಿ ಕೃಷ್ಣನು ಎರಡು ಕೆಲಸಗಳನ್ನು ಒಟ್ಟೊಟ್ಟಿಗೆ ಮಾಡುತ್ತಿದ್ದಾನೆ. ಮೊದಲನೆಯದು ವಾಸ್ತವತೆಯನ್ನು ವಿಶ್ಲೇಷಿಸಿ, ಅರ್ಜುನನ ತಿಳಿವನ್ನು ಹೆಚ್ಚಿಸಿದ್ದಾನೆ. ಅದರ ಜೊತೆ ಜೊತೆಯಲ್ಲಿ ಅರ್ಜುನನು ಹೇಗೆ ಯುದ್ಧಕ್ಕೆ ಸಿದ್ಧನಾಗಬೇಕು ಎಂದು, ಅವನು ಮಾಡಲೇಬೇಕಾದ ಕೆಲಸದ ಮಹತ್ವವನ್ನೂ ವಿವರಿಸಿ, ಅವನನ್ನು ಯುದ್ಧಕ್ಕೆ ಅಣಿಗೊಳಿಸಿದ್ದಾನೆ.
ನಮ್ಮ ವೈದ್ಯರು ನಮಗೆ ಮಧುಮೇಹದ ಬಗ್ಗೆ ಅಗತ್ಯವಾದ ಎಲ್ಲ ಮಾಹಿತಿಯನ್ನು ನೀಡುತ್ತಾರೆ. ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಏನೇನು ಮಾಡ ಬೇಕೆಂದು ಹೇಳುವುದರ ಜೊತೆಯಲ್ಲಿ, ಏನೇನು ಮಾಡ ಬಾರದು ಎನ್ನು
ವುದನ್ನೂ ತಿಳಿಸಿ, ಮಧುಮೇಹ ನಿಯಂತ್ರಣ ಯೋಜನೆ ಯನ್ನು ಕಾರ್ಯರೂಪಕ್ಕೆ ತರಲು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಮಧುಮೇಹವನ್ನು ನಿಯಂತ್ರಿಸಲು ನಮಗೆ ಅತ್ಯಂತ ಮೂಲಭೂತವಾಗಿ ಬೇಕಾದದ್ದು ಇತ್ಯಾತ್ಮಕ ಮನೋಭಾವ.
ನಮಗೆ ಹಿತವಾಗಿರುವ ಆಹಾರವನ್ನು ಮಿತವಾಗಿ ಸೇವಿಸುವುದು. ವಾಹನಗಳ ಬಳಕೆಯನ್ನು ಮಿತಗೊಳಿಸುವುದು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ದೈಹಿಕ ಕೆಲಸ ಕಾರ್ಯಗಳಲ್ಲಿ ತೊಡಗುವುದು. ಉದಾಹರಣೆಗೆ ಲಿಫ್ಟ್ ಬಳಸುವ ಬದಲು ಮೆಟ್ಟಿಲನ್ನು ಉಪಯೋಗಿಸುವುದು. ಔಷಧವನ್ನು ನಿಯಮಿತವಾಗಿ ಸೇವಿಸುವುದು. ರಕ್ತಶರ್ಕರ ಪ್ರಮಾ ಣವನ್ನು ನಿಗದಿತ ಅವಧಿಗೊಮ್ಮೆ ಪರೀಕ್ಷಿಸುವುದು. ವರ್ಷ ಕ್ಕೊಮ್ಮೆ ಕಣ್ಣು- ಹೃದಯ-ಮೂತ್ರಪಿಂಡಗಳನ್ನು ಒಳಗೊಂಡಂತೆ ಇಡೀ ಶರೀರವನ್ನು ವೈದ್ಯಕೀಯ ತಪಾಸಣೆಗೆ ಒಳ ಪಡಿಸುವುದು ಇವು ಮಧುಮೇಹ ನಿಯಂತ್ರಣ ಯೋಜನೆ ಯಲ್ಲಿ ನಾವು ಕೈಗೊಳ್ಳಬೇಕಾದ ಮುಖ್ಯ ಕ್ರಮಗಳು. ಕೃಷ್ಣನು ಪ್ರತಿಯೊಬ್ಬ ಭಕ್ತನ ಬದುಕಿನ ಗುರಿಯು ಮೋಕ್ಷವಾಗಿರುತ್ತದೆ.
ಈ ಮೋಕ್ಷವನ್ನು ಪಡೆಯಲು ಜ್ಞಾನ ಮಾರ್ಗವೂ ಇದೆ ಹಾಗೆಯೇ ಕರ್ಮಮಾರ್ಗವೂ ಇದೆ. ಜ್ಞಾನಮಾರ್ಗಕ್ಕಿಂತ ಕರ್ಮ ಮಾರ್ಗವೇ ಶ್ರೇಷ್ಠ ಎನ್ನುವುದನ್ನು ನೆನಪಿನಲ್ಲಿಟ್ಟುಕೊ (೫-೦೨). ತನ್ನ ಎಲ್ಲ ಕೆಲಸ ಕಾರ್ಯಗಳನ್ನು ತ್ಯಜಿಸಿದವನು ಯೋಗಿ ಯಾಗಲು ಸಾಧ್ಯವಿಲ್ಲ (೬-೦೧). ಏನೂ ಮಾಡದೇ ಸುಮ್ಮನಿದ್ದು ಬಿಡುವುದರಿಂದ, ಕೆಲಸದಿಂದ ಮುಕ್ತನಾಗಲು ಸಾಧ್ಯವಿಲ್ಲ. ಕೆಲಸದಿಂದ ಮುಕ್ತನಾಗಬೇಕಾದರೆ ಮೊದಲು ಕೆಲಸವನ್ನು ಮಾಡಲು ಆರಂಭಿಸಬೇಕು (೩-೦೪) ಯಾರು ಬಹಿರಂಗವಾಗಿ ಕಾರ್ಯೋನ್ಮುಖವಾಗಲು ನಿರಾಕರಿಸುವನೋ… ಅವನು ಮೂಢ, ಮಿಥ್ಯಾಚಾರಿ ಎಂದೆನಿಸಿಕೊಳ್ಳುತ್ತಾನೆ (೩-೦೬).