Sunday, 15th December 2024

ಯೋಗೀಜೀ ಮಾಡೆಲ್‌ ರೀಮೇಕ್‌ ಸಿನೆಮಾವಲ್ಲ

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಕಾರ್ಯಕರ್ತರು ತಮ್ಮದೇ ಸರಕಾರ ಮತ್ತು ಪಕ್ಷದ ವಿರುದ್ಧ ನಿರಾಶೆ ಅಸಮಧಾನಗೊಂಡು ತಮ್ಮ ಹುದ್ದೆಗೆ ರಾಜೀ ನಾಮೆ ನೀಡುತ್ತಿರುವಾಗ ಹೆಜ್ಜೆಹೆಜ್ಜೆಗೂ ಬಾಹುಬಲಿಯ ಕಟ್ಟಪ್ಪನಂತೆ ಬಿಜೆಪಿ ಸಾಮ್ರಾಜ್ಯದ ಹಿತಚಿಂತಕರಾಗಿ ಒಳಗೊಳಗೇ ಕೆಲಸಮಾಡುವ ಮೇಧಾವಿಗಳು ಎಲ್ಲಿ ಅಡಗಿಕೊಂಡಿದ್ದಾರೆ? ಸಂತೋಷ್‌ಜೀ ಅವರಾಗಲಿ, ಸಂಘಪರಿ ವಾರದ ಹಿರಿಯರಾಗಲಿ ಅವರ ಸಿದ್ಧಾಂತ- ವಿಚಾರಧಾರೆಗಳ ಕುರಿತು ಗೌರವವಿದೆ.

ಹಿಂಸೆ ಗಲಭೆ ಕೃತ್ಯಗಳಲ್ಲಿ ಭಾಗಿಯಾಗಿದ್ದವರ ಆಸ್ತಿ ನೆಲಸಮಕ್ಕೆ ಬುಲ್ಡೋಜರ್ ಬದಲು ಓಮ್ನಿ ಕಾರು ಬಳಸುವಂತೆ ಆದೇಶಿಸಲು  ಸಾಧ್ಯವೇ? ಕಾನೂನು ನಿಯಮಗಳ ಪಾಲನೆ ಯನ್ನು ಯಾರೂ ಅಕ್ಷೇಪಿಸಲಾಗದು. ಈ ಕುರಿತು ಮಧ್ಯಂತರ ಆದೇಶ ನೀಡಲು
ಸಾಧ್ಯವೇ? ಹಾಗೆ ಆದೇಶ ನೀಡಿದರೆ ಕಾನೂನು ಕ್ರಮಕೈಗೊಳ್ಳದಂತೆ ಸ್ಥಳೀಯ ಆಡಳಿತವನ್ನು ತಡೆದಂತಾಗುವುದಲ್ಲವೇ? ಈ ಮಾತನ್ನು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಪಿ.ಎಸ್ ನರಸಿಂಹ ಅವರಿದ್ದ ಪೀಠ ಹೇಳಿದೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ಅವಿಷ್ಕಾರಗೊಂಡ ‘ಬುಲ್ಡೋಜರ್ ಕಾರ್ಯಾಚರಣೆ’ ಮತ್ತು ಅದರಿಂದ ಪ್ರೇರಣೆಗೊಂಡ ಇನ್ನಿತರೆ ರಾಜ್ಯಗಳು ಈ ಕಾನೂ ನನ್ನು ಬಳಸದಿರಲು ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಕೋರಿರುವ ಜಮಾಯತ್ ಉಲಮಾ- ಐ-ಹಿಂದ್ ಸೇರಿ ಹಲವು ಸಂಘಟನೆಗಳು ‘ಒಂದು ನಿರ್ದಿಷ್ಟ’ ಸಮುದಾಯದ ವಿರುದ್ಧವೇ ಈ ಕ್ರಮ ಹೆಚ್ಚಾಗಿದೆ ಎಂದು ವಾದಿಸಿತ್ತು. ವಾದ ಆಲಿಸಿದ ದ್ವಿಸದಸ್ಯರ ನ್ಯಾಯಪೀಠ, ‘ನಿರ್ದಿಷ್ಟ ಸಮುದಾಯ’ ಪದ ಬಳಕೆಗೆ ಆಕ್ರೋಶ ವ್ಯಕ್ತಪಡಿಸಿ ‘ದೇಶದಲ್ಲಿ ಇರುವುದು ಭಾರತೀಯ ಸಮುದಾವೊಂದೇ’ ಎಂದು ಎಚ್ಚರಿಕೆ ನೀಡಿತ್ತು.

ಇದು, ಅಸಮಾನ್ಯ ಬದ್ಧತೆ ಇರುವ ಒಬ್ಬ ಮುಖ್ಯಮಂತ್ರಿಗೂ ಮತ್ತು ಟಿಪಿಕಲ್ ರಾಜಕಾರಣಿಗಳಿಗೂ ಇರುವ ವ್ಯತ್ಯಾಸ. ತನ್ನ ಯವ್ವನದ 22ನೇ ವಯಸ್ಸಿಗೇ ನಾಥ ಪಂಥದ ಸನ್ಯಾಸತ್ವ ಸ್ವೀಕರಿಸಿ ಯೋಗಿ ಆದಿತ್ಯನಾಥರಾದರು. ಶೈವಸಂಪ್ರದಾಯ
ಸಂಯೋಜಿತ ಈಶ್ವರ, ಬೈರವ, ದತ್ತಾತ್ರೇಯನನ್ನು ಮುಖ್ಯವಾಗಿ ಪೂಜಿಸುವ ನಾಥ ಪಂಥದ ಮೂಲ ಉತ್ತರ ಭಾರತದ ಘೋರಕಪುರ. ಕರ್ನಾಟಕದಲ್ಲಿ ಈ ಪಂಥದ ಪ್ರಭಾವ ಸಾಕಷ್ಟಿದ್ದು ಮಂಗಳೂರಿನ ಕದರಿ ಮಂಜುನಾಥ ಮತ್ತು ಒಕ್ಕಲಿಗ ಸಮುದಾಯ ಆರಾಧಿಸುವ ಆದಿಚುಂಚನಗಿರಿನಾಥ ಈ ಪಂಥದ ಪ್ರಾಚೀನ ಪ್ರಸಿದ್ಧ ಕೇಂದ್ರಗಳು.

ಇಲ್ಲಿಯೂ ಆರಾಧನೆಯಾಗುವುದು ಕಾಲಭೈರವೇಶ್ವರನೇ. ಇಲ್ಲಿನ ಮಠದ ಸ್ವಾಮಿಗಳು ಇಂದೂ ‘ನಾಥ’ ಎಂಬ ಹೆಸರು ಹೊಂದಿ ದ್ದು ಬಾಲಗಂಗಾಧರನಾಥ, ನಿರ್ಮಲಾನಂದನಾಥ, ಸೌಮ್ಯನಂದನಾಥರಾಗಿ ನಾಥ ಪಂಥದವರಾಗಿದ್ದಾರೆ. ಇದರ ಕುರಿತು ಹಿರಿಯ ಹಿತಿಹಾಸಕಾರ ಡಾ.ಸೂರ್ಯನಾಥ ಕಾಮತ್ ಅವರು ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಮೊನ್ನೆ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಯುಪಿ ಮಾಡಲನ್ನು ತೆಗಳುವ ಭರದಲ್ಲಿ ಯೋಗಿಜೀ ಬಗ್ಗೆ ಬಾಯ್ತಪ್ಪುತ್ತಿದ್ದರು.

ಹಿಂದೆ ದಿನೇಶ್‌ಗುಂಡೂರಾವ್ ಯೋಗಿಜೀಗೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ನಾಲಿಗೆ ಹರಿಬಿಟ್ಟು ಒಕ್ಕಲಿಗ ಸಮುದಾಯದ ಕೆಂಗೆಣ್ಣಿಗೆ ಗುರಿ ಯಾಗಿದ್ದರು. ಮುಖ್ಯವಾಗಿ ಮೇಟಿ ಭದ್ರವಾಗಿರಬೇಕು. ಉತ್ತರಪ್ರದೇಶದಲ್ಲಿ ಇಡೀ ಸರಕಾರವನ್ನು ಮುಖ್ಯಮಂತ್ರಿ ಯೋಗಿಜೀ ಆವರಿಸಿಕೊಂಡಿದ್ದಾರೆ. ಸರಕಾರದ ಸ್ಟೇರಿಂಗ್ ಅವರ ಕೈಯ ಇದ್ದು ಅವರೇ ಚಾಲಕರಾಗಿ ರಾಜ್ಯವನ್ನು ಮುನ್ನಡೆಸು ತ್ತಿದ್ದಾರೆ.

ಆದ್ದರಿಂದಲೇ ಅವರು ಮತ್ತೊಮ್ಮೆ ಜನಾದೇಶ ಪಡೆದು ಮುಂದೊರೆದಿದ್ದಾರೆ. ಅದಕ್ಕೆ ತಕ್ಕಂತೆ ಜನಗಳ ನಂಬಿಕೆ ವಿಶ್ವಾಸ ಗಳಿಗನುಸಾರ ಮತಾಂತರ, ಗೋಹತ್ಯೆ, ಲವ್ ಜೀಹಾದ್ ನಿಷೇಧ ಕಾನೂನುಗಳನ್ನು ಜಾರಿಗೆ ತಂದು ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ತಮ್ಮ ಸರಕಾರದ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಕಾನೂನು ತಜ್ಞರನ್ನು ಗುಡ್ಡೆ ಹಾಕಿ ಕೊಂಡು ನಮಗಿರುವ ಸಂವಿಧಾನ ಕಾನೂನು ಕಾಯ್ದೆಗಳನ್ನೇ ಹತ್ತುಬಾರಿ ಪರಾಮರ್ಶಿಸಿ ಅದರೊಳಗಿಂದಲೇ ಇಂಥ ಬುಲ್ಡೋ ಜರ್ ಕಾನೂನನ್ನು ರಸ್ತೆಗಿಳಿಸಿದ್ದಾರೆ.

ಆ ಮೂಲಕ ದುಷ್ಕೃತ್ಯದಲ್ಲಿ ಭಾಗಿಯಾಗುವ ಗಲಭೆಕೋರರು ರೌಡಿಗಳ ಗ್ರಹಚಾರ ಬಿಡಿಸಿದ್ದಾರೆ. ಅದರಲ್ಲೂ ಕೋಮು ಗಲಬೆ
ಎಂಬುದು ಕಿಡಿಗೇಡಿಗಳಿಗೆ ಮರಣಶಾಸನವೆಂಬಂತಾಗಿದೆ. ಹೀಗಾಗಿ ಅಪರಾಧವೆಸಗಿದ ದುಷ್ಕರ್ಮಿಗಳು ತಮ್ಮ ಮನೆಯ ಮುಂದೆ ಬುಲ್ಡೋಜರ್ ಬಂದು ನಿಲ್ಲುವ ಮೊದಲೇ ಪೊಲೀಸ್ ಠಾಣೆ ತಲುಪಿ ಶರಣಾಗುತ್ತಿದ್ದಾರೆ.

ಒಂದು ಮೂಲದ ಪ್ರಕಾರ ಅಲ್ಲಿ ಎಲ್ಲ ಬಗೆಯ ಕ್ರೈಂಗಳು ಅಪರಾಧಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಮುಖ್ಯಮಂತ್ರಿಗಳ ಇಂಥ
ಜಾಣ್ಮೆ ನೋಡಿಯೇ ಮೇಲಿನಂತೆ ಸಾಕ್ಷಾತ್ ಸುಪ್ರೀಂ ಕೋರ್ಟೇ ಬುಡ್ಡೋಜರ್ ಕ್ರಮಕ್ಕೆ ತಲೆದೂಗಿ ತಡಯಾಜ್ಞೆ ನೀಡಲು ನಿರಾಕರಿಸಿದೆ. ಇದು ಒಬ್ಬ ಮುಖ್ಯಮಂತ್ರಿಗಿರಬೇಕಾದ ‘ತಲೆ’ ಮತ್ತು ಗಂಡೆದೆ. ಆದರೆ, ನಮ್ಮ ರಾಜ್ಯದ ಬಿಜೆಪಿ ಸರಕಾರವನ್ನು ನೋಡಿದರೆ ಒಬ್ಬರಾದರೂ ಆದಿತ್ಯನಾಥರಂತೆ ಬದ್ಧತೆ, ಸೈದ್ಧಾಂತಿಕತೆ, ಎದೆಗಾರಿಕೆಯುಳ್ಳ ಮುಖ ಕಾಣಸಿಗುತ್ತಿಲ್ಲ.

ಅದರಲ್ಲೂ ಗೃಹಮಂತ್ರಿಗಿರಬೇಕಾಗಿದ್ದ ಇಂಥ ಚಾಣಾಕ್ಷತೆಯ ನಯಾಪೈಸೆಯಿಲ್ಲ. ಇನ್ನು ಯಡಿಯೂರಪ್ಪನವರಿಗೆ ಸ್ಟೇರಿಂಗ್
ಕೊಟ್ಟರೂ ಕ್ಲಚ್ ಬ್ರೇಕ್ ಕೊಡದೆ ಸತಾಯಿಸಿ ಕೆಳಗಿಳಿಸಲಾಯಿತು. ಈಗಿರುವ ಬಸವರಾಜ ಬೊಮ್ಮಾಯಿಯವರನ್ನು ಗಮನಿಸಿ ನೋಡಿ ಅವರು ಪರಿಪೂರ್ಣ ಮುಖ್ಯಮಂತ್ರಿಯಾಗಿ ಪರಕಾಯ ಪ್ರವೇಶ ಮಾಡಿಯೇ ಇಲ್ಲ. ಕೇವಲ ಮುಖ್ಯಮಂತ್ರಿ ಪಾತ್ರವನ್ನು ರಿಹರ‍್ಸಲ್ ಮಾಡುತ್ತಿರುವಂತಿದೆ.

ಪಾಪ ಅವರಿಗೆ ಆಡಳಿತ ಮಾಡುವುದಕ್ಕಿಂತ ಕೇಂದ್ರ ನಾಯಕರನ್ನು ಒಲಿಸಿಕೊಳ್ಳುವುದೇ ಒಂದು ಸವಾಲು. ಗೃಹಸಚಿವ ಆರಗ ಜ್ಞಾನೇಂದ್ರರನ್ನು ನೋಡುತ್ತಿದ್ದರೆ ಗೃಹಮಂತ್ರಿಯಂತೆ ಕಾಣುವುದಿರಲಿ, ಸಿನಿಮಾದಲ್ಲಿ ನಾಯಕಿಯ ಪ್ರೀತಿಯನ್ನು ಧಿಕ್ಕರಿಸುವ ತಂದೆಯ ಪಾತ್ರಕ್ಕೂ ಹೊಂದಿಕೆಯಾಗದಂತಿದೆ. ಆರ್.ಅಶೋಕ್, ಡಾ.ಅಶ್ವತ್ಥ ನಾರಾಯಣ್, ಶ್ರೀರಾಮುಲುರಂಥ ಮೂಲ ಬಿಜೆಪಿ ಮುಖಗಳನ್ನು ನೋಡುತ್ತಿದ್ದರೆ ಬಿಜೆಪಿ ಕಾರ್ಯಕರ್ತರು ಇವರಿಗೆ ಬಾಗಿನ ಕೊಟ್ಟು, ಅರಿಶಿಣಕುಂಕುಮ ತಾಂಬೂಲ ನೀಡಿ ಮಡಿಲು ತುಂಬಿಸಬೇಕಷ್ಟೇ! ಇನ್ನು ಅನ್ಯ ಪಕ್ಷಗಳಿಂದ ವಲಸೆ ಬಂದಿರುವ ಸಚಿವರ ಮನಸ್ಥಿತಿ ಹೇಗಿದೆಯೆಂದರೆ ‘ಈಗೆಲ್ಲ ಹಿಂದುತ್ವ, ರಾಷ್ಟ್ರೀಯತೆ, ಆರ್‌ಎಸ್‌ಎಸ್ ಎಂದು ಸಮರ್ಥಿಸಿಕೊಂಡು ಕೂತರೆ ನಾಳೆ ಬಿಜೆಪಿ ಮಕಾಡೆ ಮಲಗಿದರೆ ಮತ್ತೇ ತಮ್ಮ
ಮಾತೃಪಕ್ಷಗಳ ಕದತಟ್ಟಲು ಕಷ್ಟವಾಗುತ್ತದೆ’ ಎಂಬ ಎಚ್ಚರಿಕೆಯಲ್ಲಿದ್ದಂತಿದೆ.

ಗೋಪಾಲಯ್ಯ, ಎಂಟಿಬಿ ನಾಗರಾಜ್ ಇಂಥವರಿಂದ ಕಠೋರ ಹಿಂದುತ್ವ ನಿರೀಕ್ಷಿಸಲು ಸಾಧ್ಯವೇ? ಅಂಥದನ್ನು ಪ್ರತಿಪಾದಿಸುವ ಬಸವನಗೌಡ ಯತ್ನಾಳ್ ಪಾಟೀಲ್, ಸಂಸದ ಅನಂತಕುಮಾರ್ ಹೆಗಡೆ ಅಂಥವರನ್ನು ಬಾಯಿಮುಚ್ಚಿ ಕೂರಿಸಲಾಗಿದೆ. ಇರುವಷ್ಟರಲ್ಲಿ ಸಂಸದ ಪ್ರತಾಪ್ ಸಿಂಹ, ಸಿ.ಟಿ.ರವಿ ಹೊರತು ಪಡಿಸಿದರೆ ಬಿಜೆಪಿಯ ಸಹಜ ಸಿದ್ಧಾಂತ ಅದರ ಯಾವ ನಾಯಕನಿಗೂ ಬೇಡವಾಗಿದೆ.

ಚಿತ್ರರಂಗದಲ್ಲಿ ಐರನ್‌ಲೆಗ್ ಎಂಬ ಪದವಿದೆ. ನೋಡುವುದಕ್ಕೆ ಹೀರೋ ಲಕ್ಷಣಗಳಿದ್ದರೂ ಆತನ ಸಿನಿಮಾಗಳು ಓಡುವುದೂ ಇಲ್ಲ, ಹಣಗಳಿಸುವುದೂ ಇಲ್ಲ. ಹಾಗೆಯೇ ಈಗಿನ ಸರಕಾರ ಹೇಳಿಕೊಳ್ಳುವುದಕ್ಕೆ ಮಾತ್ರ ಬಿಜೆಪಿ ಸರಕಾರ, ಹಿಂದುತ್ವದ ಸರಕಾರ,
ಡಬಲ್ ಎಂಜಿನ್ ಸರಕಾರವಷ್ಟೇ. ಇಲ್ಲಿರುವ ಎಂಜಿನ್ನೇ ಸದ್ದು ಮಾಡುತ್ತಿಲ್ಲ. ಕಾರ್ಯಕರ್ತರು ಹೇಳಿಕೊಳ್ಳಲು ಮಾತ್ರ ಕೇಂದ್ರ ದಲ್ಲಿ ದೇಶಾಭಿಮಾನದ ತಳಹದಿಯಲ್ಲಿರುವ ಮೋದಿಜಿಯವರ ಸರಕಾರವಿದೆ, ಅವರದ್ದೇ ಬಿಜೆಪಿ ಸರಕಾರ ನಮ್ಮ ನಾಡಿನಲ್ಲೂ ಇದೆ.

ನಮ್ಮದು ಕಾರ್ಯಕರ್ತರ ಪಕ್ಷವೆಂದು ಬಿಜೆಪಿ ನಾಯಕರೆಲ್ಲ ಹೇಳಿಕೊಳ್ಳುತ್ತಿದ್ದಾರೆ ಎಂದು ಸಂಭ್ರಮಿಸಬೇಕಷ್ಟೆ. ಆದರೆ ಅಂಥ ಯಾವ ನೈಜತೆಯ ಲಕ್ಷಣಗಳೂ ರಾಜ್ಯ ಸರಕಾರದಲ್ಲಿ ಗೋಚರಗೊಂಡಿಲ್ಲ. ನಮ್ಮಲ್ಲಿ ಹೇಳಿಕೊಳ್ಳುವುದಕ್ಕೆ ಗೋಹತ್ಯೆ ನಿಷೇಧ
ಕಾನೂನು ತರಲಾಯಿತು. ಅದರ ಕಾನೂನಿನ ಸೂತ್ರದಲ್ಲಿ ಅದೆಷ್ಟು ಗೋವುಗಳ ಹತ್ಯೆಯನ್ನು ತಡೆದಿದ್ದಾರೆ? ಅದೆಷ್ಟು ಗೋಕಳ್ಳ ರನ್ನು ಗೋಹಂತಕರನ್ನು ಜೈಲಿಗೆ ಅಟ್ಟಿದ್ದಾರೆ? ಅಂದಿಗೂ, ಇಂದಿಗೂ ಗೋವುಗಳ ಹಣೆಬರಹ ಮಾತ್ರ ಬದಲಾಗಲಿಲ್ಲ.

ಇನ್ನು ಮತಾಂತರ ನಿಷೇಧ ಕಾಯಿದೆ ವಿಧಾನಸಭೆಯಲ್ಲಿ ಮಂಡಿಸುವುದಕ್ಕೇ ಹರಸಾಹಸ ಪಟ್ಟು ಅನುಮೋದನೆ ಪಡೆದರೂ ವಿಧಾನ ಪರಿಷತ್ತಿನಲ್ಲಿ ಮಂಡಿಸುವ ಪ್ರಯತ್ನ ಮಾಡದೆ ಕೈಬಿಟ್ಟರು. ಈಗ ಮಾತೆತ್ತಿದರೆ ಯೋಗಿಜೀ ಮಾಡೆಲ್ ತರುತ್ತೇವೆ,
ಯುಪಿ ಮಾಡೆಲ್ ತರುತ್ತೇವೆ ಎನ್ನುತ್ತಾರೆ. ಅದೇನು ಸಿನಿಮಾನಾ, ಕನ್ನಡದಲ್ಲೂ ತೆಗೆಯುತ್ತೇವೆ ಎನ್ನುವುದಕ್ಕೆ. ಸಚಿವ ಡಾ.ಅಶ್ವತ್ಥ್‌ ನಾರಾಯಣ್ ಯೋಗಿಜಿಗಿಂತ ಮುಂದೆ ಹೋಗಿ ಕೊಲೆಗಡುಕರ ಎನ್ಕೌಂಟರ್ ಮಾಡುತ್ತೇವೆಂದು ಹೇಳುತ್ತಾರೆ. ಎಂಥ
ಸಿನಿಮಾ ಡೈಲಾಗ್ ಅಲ್ಲವೇ? ಮಾತನಾಡಿದರೆ ಗೋಡೆಗೆ ಮೊಳೆ ಹೊಡೆದಂತಿರಬೇಕು.

ಆದರೆ ಇವರ ಡೈಲಾಗ್‌ಗಳು ಆಕ್ಷನ್ ಕಟ್‌ಗೆ ಸೀಮಿತವಾದಂತಿದೆ. ಇನ್ನು ಕೇಂದ್ರದ ನಾಯಕರಿಗೆ ಬೊಮ್ಮಾಯಿಯವರನ್ನೂ ಕೆಳಗಿಳಿಸಿದರೆ ಬಿಜೆಪಿ ನೆಚ್ಚಿಕೊಂಡಿರುವ ಲಿಂಗಾಯತ ವೀರಶೈವ ಸಮುದಾಯ ಎಲ್ಲಿ ದೂರವಾಗುತ್ತದೋ ಎಂಬ ಭಯ. ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದ ಒಂದು ಕೂಟ ವೀರಶೈವ ಲಿಂಗಾಯದ ಸಮುದಾಯವನ್ನು ಹಿಂದೂಧರ್ಮ ದಿಂದ ಹೈಜಾಕ್ ಮಾಡಿ ‘ಸ್ವಧರ್ಮ’ ಸ್ಥಾಪಿಸಿ ಶಾಶ್ವತವಾಗಿ ಹಿಂದುತ್ವವನ್ನು ಬಿಜೆಪಿಯನ್ನು ಹಿಂದಕ್ಕೆ ದೂಡುವ ಅಪಾಯಕಾರಿ ಪ್ರಯತ್ನದಲ್ಲಿದೆ.

ಈಗೇನೋ ಉತ್ತರಕರ್ನಾಟಕಲ್ಲಿ ವೀರಶೈವ ಸಮುದಾಯದ ಬಲದಿಂದ ಬಿಜೆಪಿ ಬಲಿಷ್ಠವಾಗಿದೆ. ಒಂದೊಮ್ಮೆ ಹಿಂದೂಧರ್ಮ ಭಂಜಕರು ಯಶಸ್ವಿಯಾದದ್ದೇ ಆದರೆ ಆಗ ಯಾವ ಮಠಗಳೂ ಬಿಜೆಪಿಯೊಂದಿಗೆ ನಿಲ್ಲುವುದಿಲ್ಲ. ಆಗ ಬಿಜೆಪಿ ಮತ್ತು ಅದರ ಹಿಂದುತ್ವದ ಬೇಳೆ ಬೇಯುವುದು ಮಲೆನಾಡು- ಕರಾವಳಿಯಲ್ಲಿ ಮಾತ್ರ. ಆದರೀಗ ಅಲ್ಲೂ ‘ಕಠಿಣ ಕ್ರಮ’ ಪದವನ್ನು ಬಳಸಿ ಅಲ್ಲಿಯ ಕಾರ್ಯಕರ್ತರೂ ದಂಗೆ ಎಳುವಂತೆ ಮಾಡಿಕೊಂಡಿದ್ದಾರೆ ಈಗಿನ ಮಹಾನ್ ಬಿಜೆಪಿ ನಾಯಕರು.

ಇನ್ನು ಬಿ.ಎಲ.ಸಂತೋಷ್‌ಜೀಯಂಥ ಬಿಜೆಪಿಯ ಒಳಚಿಂತಕರು ಹೀಗೆಲ್ಲಿ ಮರೆಯಾಗಿದ್ದಾರೆ? ಕಾರ್ಯಕರ್ತರು ತಮ್ಮದೇ ಸರಕಾರ ಮತ್ತು ಪಕ್ಷದ ವಿರುದ್ಧ ನಿರಾಶೆ ಅಸಮಧಾನಗೊಂಡು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರುವಾಗ ಹೆಜ್ಜೆಹೆಜ್ಜೆಗೂ ಬಾಹುಬಲಿಯ ಕಟ್ಟಪ್ಪನಂತೆ ಬಿಜೆಪಿ ಸಾಮ್ರಾಜ್ಯದ ಹಿತಚಿಂತಕರಾಗಿ ಒಳಗೊಳಗೇ ಕೆಲಸ ಮಾಡುವ ಮೇಧಾವಿಗಳು ಎಲ್ಲಿ ಅಡಗಿಕೊಂಡಿದ್ದಾರೆ? ಸಂತೋಷ್‌ಜೀ ಅವರಾಗಲಿ, ಸಂಘಪರಿ ವಾರದ ಹಿರಿಯರಾಗಲಿ ಅವರ ಸಿದ್ಧಾಂತ- ವಿಚಾರ ಧಾರೆಗಳ ಕುರಿತು ಗೌರವವಿದೆ.

ತೆರೆಮರೆಯಲ್ಲಿ ಕೂತು ಅವರನ್ನು ಇಳಿಸಿ ಇವರನ್ನು ಏರಿಸಿ ಎಂದು ಕಟ್ಟಪ್ಪಣೆ ನೀಡುತ್ತ ಕೂರುವುದಲ್ಲ. ಇಂಥ ಸಮಯ
ದಲ್ಲಿ ಪಲಾಯನವಾದಿಗಳಾಗದೇ ಹೊಣೆಗಾರಿಕೆ ತೋರಬೇಕಿದೆ. ಸರಕಾರವೆಂಬುದು ಸಂವಿಧಾನಾತ್ಮವಾದದ್ದು. ಅದನ್ನು ಸ್ಥಾಪಿಸಿದ ಬಹುಮತದಾರರನಿಗೆ ತಕ್ಕಂತೆ ನಡೆದುಕೊಂಡು ಅವರ ಆಶೋತ್ತರಗಳನ್ನು ನೆರವೇರಿಸಬೇಕು.

ರಾಜ್ಯವನ್ನು ದೇಶದೊಂದಿಗೆ ಕಟ್ಟುವ ಕೆಲಸವನ್ನು ಯಾರಾದರೂ ಮಾಡಲೇಬೇಕು. ಅದಕ್ಕಾಗಿ ಸಮರ್ಥ ಕಾನೂನು ಜಾರಿಗೆ ತಂದು ಕೆಲಸ ಮಾಡುವ ಬುದ್ಧಿವಂತಿಕೆ ಜಾಣ್ಮೆ, ಮಿಗಿಲಾಗಿ ಇಚ್ಛಾಶಕ್ತಿ ಇರುವ ಗಂಡೆದೆಯ ಮಂತ್ರಿಗಳು ಬೇಕಿದೆ. ಇದನ್ನು ಉತ್ತರಪ್ರದೇಶದಲ್ಲಿ ಒಬ್ಬ ಸನ್ಯಾಸಿ ಮಾಡುತ್ತಿರುವಾಗ ರಾಜ್ಯದ ರಂಗನಾಯಕರಿಗೇನು ಬಾಧೆ? ಮೊದಲಿಗೆ ನಮ್ಮ ಸರಕಾರ, ನಮ್ಮ
ಪ್ರಜೆಗಳು, ನಮ್ಮ ಪಕ್ಷವೆಂಬ ಸ್ವಾಭಿಮಾನ ಸರಕಾರದ ಸಚಿವರಿಗೆ. ನಾಯಕರಿಗೆ ಇರದೇ ಹೋದರೆ ಹೀಗೆಲ್ಲ ಆಗುತ್ತದೆ. ರಾಜ್ಯ
ಬಿಜೆಪಿಗರು ಎಂಥ ದುರ್ಗತಿಯಲ್ಲಿದ್ದಾರೆಂದರೆ ಈಗಷ್ಟೇ ಚಿಗುರುತ್ತಿರುವ ಆಪ್ ಪಕ್ಷವೂ ಬಿಜೆಪಿ ಸರಕಾರದ ಶೇ.೪೦ ಕಮಿಷನ್ ಮತ್ತು ಭ್ರಷಾಚಾರದ ಕುರಿತು ‘ಬಿಜೆಪಿ ಬೊಗಳೆ ಆಡಳಿತ’ ಎಂಬ ಪುಸ್ತಕವನ್ನೇ ಬಿಡುಗಡೆ ಮಾಡಿದೆ.

ಸಾರ್ವತ್ರಿಕ ಚುನಾವಣೆಗೆ ಒಂಬತ್ತು ತಿಂಗಳಿದೆ . ಈಗಾಗಲೇ ಮುಂದಿನ ಚುನಾವಣೆಯನ್ನೂ ನರೇಂದ್ರ ಮೋದಿಯವರ ನೇತೃತ್ವದ ನಡೆಸಲು ಘೋಷಣೆಯಾಗಿರುವುದರಿಂದ ಬರಿಯ ಅವರ ಹೆಸರನ್ನು ಇಟ್ಟುಕೊಂಡು ಅಸಮರ್ಥರೆಲ್ಲ ಅದೇ ಮುಖಗಳನ್ನಿಟ್ಟು ಕೊಂಡು ಆರತಕ್ಷತೆ ಕಾರ್ಯಕ್ರಮಕ್ಕೆ ರೆಡಿಯಾಗುವ ಮಹಿಳೆಯರಂತೆ ಜರತಾರಿ ಸೀರೆಯುಟ್ಟು ಅಲಂಕಾರಗೊಳ್ಳುತ್ತಾರೆ.

ಬಿಜೆಪಿ ಕಾರ್ಯಕರ್ತರು ಮತಗಟ್ಟೆಗೆ ತೆರಳಿ ನೋಟಾ (NOTA-None of the Above=ಇವನ್ಯಾವನೂ ಸರಿಯ ಇಲ್ಲ!)
ಒತ್ತಿ ಮನೆ ಸೇರುತ್ತಾರೆ. ರಾಜ್ಯ ಬಿಜೆಪಿಯನ್ನು ಮೋದಿಯವರೇ ಕಾಪಾಡಬೇಕು!