Saturday, 23rd November 2024

ಹಳ್ಳಿಗಾಡಿನ ಯುವಕ ಖ್ಯಾತ ವೈದ್ಯರಾಗಿದ್ದು!

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ನಮ್ಮ ರಾಜ್ಯದಲ್ಲಿ ಹೋಮಿಯೋಪತಿ ಚಿಕಿತ್ಸಾಪದ್ಧತಿಯನ್ನು ಜನಸಾಮಾನ್ಯರಿಗೆ ತಲುಪಿಸಿದವರಲ್ಲಿ ಡಾ. ಬಿ.ಟಿ.ರುದ್ರೇಶ್
ಪ್ರಮುಖರು.

ಜತೆಗೆ ಹೋಮಿಯೋಪತಿಯನ್ನು ನಮ್ಮ ದೇಶದಲ್ಲೂ ಪ್ರಚುರಪಡಿಸಿದ ಅಪರೂಪದ ವೈದ್ಯರು. ಹಾಗೆ ನೋಡಹೋದರೆ, ಜನಸಾಮಾನ್ಯರಿಗೆ ಹೋಮಿಯೋಪತಿಯ ಹೆಸರೇ ಹೆಚ್ಚು ಪರಿಚಿತವಿಲ್ಲದ ಕಾಲದಲ್ಲಿ, ಡಾ.ರುದ್ರೇಶ್ ಅವರು ಆ ಚಿಕಿತ್ಸಾ ಪದ್ಧತಿಯನ್ನು ಕಲಿತು, ಚಿಕಿತ್ಸೆ ನೀಡಲು ಆರಂಭಿಸಿದರು ಮಾತ್ರವಲ್ಲ, ತಮ್ಮ ವಿಶಿಷ್ಟ ಅಪ್ರೋಚ್ ಮೂಲಕ ಆ ಚಿಕಿತ್ಸಾ ಪದ್ಧತಿಯ ಹೆಸರು ಮನೆ ಮಾತಾಗುವಂತೆ ಮಾಡಿದರು. ಅವರೇ ಹೇಳಿಕೊಂಡಂತೆ ಉತ್ತಮ ಜೀವನ ಶೈಲಿಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದು ಸಾರ್ವಕಾಲಿಕ ಸತ್ಯವಾದರೂ, ಕೆಲವು ಆರೋಗ್ಯ ಸಮಸ್ಯೆಗಳನ್ನು ಅವರು ಪರಿಹರಿಸಿದ ರೀತಿ ಬೆರಗು ಮೂಡಿಸುತ್ತದೆ.

ಡಾ.ಬಿ.ಟಿ.ರುದ್ರೇಶ್ ಅವರನ್ನು ಈಗ ಪ್ರಸ್ತಾಪಿ ಸಿದ್ದೇಕೆಂದರೆ, ಅವರ ಬದುಕಿನ ಸಾಧನೆಯ ಕುರಿತು ‘ಸಾಧನೆಯೇ ಬದುಕು’ ಎಂಬ ಹೊಸ ಪುಸ್ತಕ ಈಚೆಗೆ ಪ್ರಕಟಗೊಂಡಿದೆ. ಡಾ. ಬೆಳವಾಡಿ ಮಂಜುನಾಥ ಅವರು ಡಾ.ಬಿ.ಟಿ.ರುದ್ರೇಶ್ ಅವರ ಕುರಿತು ರಚಿಸಿದ ಈ ಪುಸ್ತಕ ಹಲವು ಕಾರಣಗಳಿಗಾಗಿ ಅಪರೂಪದ್ದು. ಮುಖ್ಯವಾಗಿ, ಈ ಪುಸ್ತಕದುದ್ದಕ್ಕೂ ಹರಡಿ ಕೊಂಡಿರುವ ನೂರಾರು ವರ್ಣ ಛಾಯಾಚಿತ್ರಗಳು, ಹೋಮಿಯೋಪತಿಯ ಮತ್ತು ಡಾ.ಬಿ.ಟಿ.ರುದ್ರೇಶ್ ಅವರ ಬದುಕುನ ಹಲವು ಮಜಲುಗಳನ್ನು ಸುಂದರವಾಗಿ ಕಟ್ಟಿಕೊಟ್ಟಿವೆ. ಉತ್ತಮ ಗುಣಮಟ್ಟದ ಈ ಛಾಯಾಚಿತ್ರಗಳು ಮತ್ತು ಪುಸ್ತಕದ ಪುಟಗಳು ಓದಲು ಆಪ್ಯಾಯ ಮಾನ ಎನಿಸುವುದರ ಜತೆಯಲ್ಲೇ, ಡಾ.ಬಿ.ಟಿ. ರುದ್ರೇಶ್ ಅವರ ಬದುಕಿನ ವಿವಿಧ ಘಟ್ಟಗಳನ್ನು ಓದುಗರಿಗೆ ಪರಿಚಯಿಸುತ್ತವೆ.

ಲೇಖಕ ಬೆಳವಾಡಿ ಮಂಜುನಾಥ್ ಅವರು ಈ ಪುಸ್ತಕವನ್ನು ಸಿದ್ಧಪಡಿಸುವಲ್ಲಿ ವಹಿಸಿದ ಶ್ರಮವು ಪುಟಪುಟಗಳಲ್ಲಿ ಕಂಡು ಬರುತ್ತದೆ. ಡಾ.ಬಿ.ಟಿ.ರುದ್ರೇಶ್ ಅವರ ವಿಶಿಷ್ಟ ಸಾಧನೆಯು ನಾಡಿನಾದ್ಯಂತ ಪ್ರಚಾರಗೊಂಡ ಪರಿ ಮಾತ್ರ ಅನನ್ಯ. ಎರಡು ದಶಕಗಳ ಹಿಂದೆ ಇರಬೇಕು – ಈ ಹೋಮಿಯೋಪತಿ ವೈದ್ಯರು ಮಕ್ಕಳಿಲ್ಲದ ದಂಪತಿಗೆ ಸೂಕ್ತ ಚಿಕಿತ್ಸೆ ನೀಡಿ, ಸಂತಾನಭಾಗ್ಯ ಕರುಣಿಸುತ್ತಾರೆ ಎಂದು ಕರ್ನಾಟಕದಾದ್ಯಂತ ಪ್ರಚಾರವಾಯಿತು. ಆ ಒಂದು ಅಪರೂಪದ ಸಾಧನೆಯು ಹೊರರಾಜ್ಯಗಳಿಗೂ ಪ್ರಸರಿಸುವಲ್ಲಿ ಹೆಚ್ಚು ಕಾಲ ಬೇಕಾಗಿರಲಿಲ್ಲ. ಸಾವಿರಾರು ದಂಪತಿ ಇವರ ಚಿಕಿತ್ಸೆಯಿಂದ ಮಕ್ಕಳನ್ನು ಪಡೆದದ್ದು ಒಂದು ಅದ್ಭುತ ಸುದ್ದಿಯಾಗಿ ಮನೆಮಾತಾಯಿತು. ಡಾ.ಬಿ.ಟಿ.ರುದ್ರೇಶ್ ಅವರ ಹೋಮಿಯೋಪತಿಯ ಚಿಕಿತ್ಸೆಯ ಜತೆಯಲ್ಲೇ ಉತ್ತಮ
ಜೀವನ ಪದ್ಧತಿ, ಸಮಸ್ಯೆಗೆ ಇರಬಹುದಾದ ಇತರ ಕಾರಣಗಳ ಪರಿಹಾರ ಮೊದಲಾದವುಗಳಿಗೆ ಹೆಚ್ಚು ಒತ್ತು ನೀಡಿರುವರಾದರೂ, ಮಕ್ಕಳಿಲ್ಲದವರಿಗೆ ಮಕ್ಕಳಾಗುವಂತೆ ಚಿಕಿತ್ಸೆ ನೀಡುವ ವೈದ್ಯರು ಎಂದೇ ಹೆಚ್ಚು ಪ್ರಚಾರಗೊಂಡದ್ದು ಒಂದು ವಿಸ್ಮಯವೇ ಸರಿ.

‘ಸಾಧನೆಯೇ ಬದುಕು’ ಪುಸ್ತಕದಲ್ಲಿ ಪ್ರಸ್ತಾಪಗೊಂಡಂತೆ, ಇದುವರೆಗೆ ಸುಮಾರು 3000ಕ್ಕೂ ಅಧಿಕ ದಂಪತಿ ಇವರಿಂದ ಚಿಕಿತ್ಸೆ ಪಡೆದು ಮಕ್ಕಳನ್ನು ಪಡೆದಿದ್ದಾರೆ! ಅವೆಷ್ಟೋ ಮಂದಿ ಇವರ ಫೋಟೋವನ್ನು ಮನೆಯಲ್ಲಿಟ್ಟು ಗೌರವಿಸುತ್ತಾರೆ ಅಂದರೆ, ಡಾ.ಬಿ.ಟಿ.ರುದ್ರೇಶ್ ಅವರ ಸಾಧನೆಯ ಒಂದು ಮಗ್ಗಲು ಅರಿವಾದೀತು. ಈಗ ಬಿಡುಗಡೆಗೊಂಡಿರುವ ‘ಸಾಧನೆಯೇ ಬದುಕು’ ಪುಸ್ತಕವು ಈ ವೈದ್ಯರ ಪರಿಶ್ರಮ, ಬದ್ಧತೆ, ಶಿಸ್ತು ಮತ್ತು ಸಾಧನೆಯ ಹಲವು ಮುಖಗಳನ್ನು ಪರಿಚಯ ಮಾಡಿಕೊಡುವುದು ಒಂದೆಡೆಯಾದರೆ, ಅವರ ಬದುಕಿನ ಒಳನೋಟವನ್ನು ಸಹ ಕಟ್ಟಿಕೊಡಲು ಪ್ರಯತ್ನಿಸುತ್ತದೆ. ರುದ್ರೇಶ್ ಅವರ ಬಾಲ್ಯದ ವಿವರಗಳನ್ನು ಓದುವಾಗ, ಅಂದಿನ ತೊಡಕುಗಳನ್ನು ಮೀರಿ ಅವರು ಬದುಕನ್ನು ಕಟ್ಟುಕೊಂಡ ಪರಿಯನ್ನು ಗಮನಿಸುವಾಗ, ಶ್ರದ್ಧೆಯ ಮಹತ್ವ ಅರಿವಾಗುತ್ತದೆ.

ಈ ನಿಟ್ಟಿನಲ್ಲಿ ನೋಡಿದರೆ, ಅವರ ಬದುಕು ಎಲ್ಲಾ ವಿದ್ಯಾರ್ಥಿಗಳಿಗೆ, ಯುವಜನತೆಗೆ ಒಂದು ಸೂರ್ತಿಯ ಕಥನವಾದೀತು, ಜೀವನದಲ್ಲಿ ಸಾಧನೆಯನ್ನು ಮಾಡಲು ಪ್ರೇರಣೆಯೂ ಆದೀತು. ಚಿಕ್ಕಮಗಳೂರು ಜಿಲ್ಲೆಯ ಪುಟ್ಟ ಗ್ರಾಮ ಬೆಳವಾಡಿಯಲ್ಲಿ ಜನಿಸಿದ ರುದ್ರೇಶ್ ಅವರ ಬಾಲ್ಯವು ಸಾಕಷ್ಟು ಕಷ್ಟಗಳಿಂದ ಕೂಡಿತ್ತು.

ಜತೆಗೆ, ಪಠ್ಯಕ್ರಮವನ್ನು ಇಂದಿನ ವಿದ್ಯಾರ್ಥಿಗಳ ರೀತಿ ‘ಕಷ್ಟ ಪಟ್ಟು’ ಓದಿದವರಲ್ಲ! ತರಗತಿಯ ಪಾಠಗಳನ್ನು ಕೇಳಿಸಿ ಕೊಳ್ಳುತ್ತಲೇ, ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದೂ ಸಹ ಅವರ ಮುಖ್ಯ ಹವ್ಯಾಸವಾಗಿತ್ತು! ಪರೀಕ್ಷೆಯಲ್ಲಿ  ಅಂಕಗಳಿಸುವುದು, ಪಾಸಾಗುವುದು ಅವರ ಪ್ರಿಯಾರಿಟಿ ಆಗಿರಲಿಲ್ಲ! ಆದರೆ, ಜನಸಾಮಾನ್ಯರ ಸೇವೆ ಮಾಡಲು ವೈದ್ಯ ವೃತ್ತಿಯು ಒಂದು ಸೂಕ್ತ ಮಾಧ್ಯಮವಾಗಬಲ್ಲದು ಎಂದು ಆಗಲೇ ಗುರುತಿಸಿದ ರುದ್ರೇಶ್ ಅವರು, ಆ ಕುರಿತು ಯೋಚಿಸತೊಡಗಿದರು. ಹೋಮಿಯೋಪತಿ ಕಲಿಯುವ ಆಸೆಯಿಂದ ಬೆಂಗಳೂರಿಗೆ ಬಂದರು.

ಅಲ್ಲೂ ಸಾಕಷ್ಟು ತೊಡಕುಗಳು. ಕಷ್ಟಪಟ್ಟು ಓದಿ ಪದವಿ ಮುಗಿಸಿದ ನಂತರ, ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಹೋಮಿಯೋಪತಿ ಕಾಲೇಜಿಗೆ ಖಾಯಂ ಉಪನ್ಯಾಸಕರ ಹುದ್ದೆ ಆಯ್ಕೆ ಬಯಸಿದರೂ, ಅದು ದಕ್ಕಲಿಲ್ಲ. ಮುಂದೆ ಮುಂಬಯಿ ಯಲ್ಲಿ ಹೆಚ್ಚಿನ ಅನುಭವ. ಬೆಂಗಳೂರಿಗೆ ವಾಪಸಾಗಿ, ಡಾ.ಕೃಷ್ಣಮೂರ್ತಿಯವರ ಮಾರ್ಗ ದರ್ಶನ. ೧೯೮೬ರಿಂದ ೧೯೯೨ ರ ತನಕ ಬೆಂಗಳೂರಿನ ಸರಕಾರಿ ಹೋಮಿಯೋಪತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ಅನುಭವ ಎಲ್ಲವೂ
ಅವರನ್ನು ಒಬ್ಬ ಉತ್ತಮ ವೈದ್ಯರನ್ನಾಗಿ ರೂಪಿಸಿದವು.

ಹೋಮಿಯೋಪತಿ ಚಿಕಿತ್ಸೆ ನೀಡುವ ಸಮಯದಲ್ಲೇ, ಡಾ. ರುದ್ರೇಶ್ ಅವರು ಒಬ್ಬ ಮನೋಚಿಕಿತ್ಸಕನ ರೀತಿಯೂ ತಪಾಸಣೆ ನಡೆಸುತ್ತಾರೆ ಎಂದು ನಿರೂಪಕ ಡಾ. ಬೆಳವಾಡಿ ಮಂಜುನಾಥ ಗುರುತಿಸಿದ್ದಾರೆ. ರೋಗಿಯ ಸಮಸ್ಯೆ, ಅವರ ಕೌಟುಂಬಿಕ
ಹಿನ್ನೆಲೆ, ವೈಯಕ್ತಿಕ ಸಮಸ್ಯೆ, ರೋಗಕ್ಕೆ ಸಂಬಂಧವಿಲ್ಲದಂತೆ ಕಾಣುವ ಬದುಕಿನ ಸನ್ನಿವೇಶಗಳು ಇವೆಲ್ಲವನ್ನೂ ಕೂಲಂಕುಶ ವಾಗಿ ವಿಚಾರಿಸಿ, ತಪಾಸಣೆ ನಡೆಸಿ, ಆ ನಂತರವಷ್ಟೇ ಡಾ. ರುದ್ರೇಶ್ ಚಿಕಿತ್ಸೆ ನೀಡುತ್ತಾರೆ. ಹಲವು ಕಡೆ ವಿವಿಧ ದುಬಾರಿ
ಚಿಕಿತ್ಸೆಯ ನಂತರವೂ ವಾಸಿಯಾಗದ ರೋಗಗಳು, ಡಾ. ರುದ್ರೇಶ್ ಅವರ ಚಿಕಿತ್ಸೆಯಿಂದ ವಾಸಿಯಾಗಿವೆ, ಅಂತಹ ಹಲವು ಉದಾಹರಣೆಗಳನ್ನು ಈಗಾಗಲೇ ದಾಖಲಿಸಿದ್ದಾರೆ. ಈ ಪುಸ್ತಕದಲ್ಲಿ ಅಂತಹ ವಿವರಗಳನ್ನು ಹೆಚ್ಚಾಗಿ ದಾಖಲಿಸದೇ, ಅದರ
ಹಿಂದಿರುವ ಡಾ. ರುದ್ರೇಶ್ ಎಂಬ ಶಕ್ತಿಯನ್ನು ಗುರುತಿಸುವ ಪ್ರಯತ್ನ ನಡೆಸಿರುವುದು ಅಭಿನಂದನೀಯ.

ವಿವಿಧ ಆರೋಗ್ಯ ಸಮಸ್ಯೆಗಳಿಗೆ ಇವರಿಂದ ಚಿಕಿತ್ಸೆ ಪಡೆಯಲು ಗಣ್ಯ ವ್ಯಕ್ತಿಗಳೂ ಬಯಸುವುದುಂಟು. ತಮ್ಮ ಬಾಲ್ಯಕಾಲದ ಹೀರೋ ಎನಿಸಿದ್ದ ಡಾ. ರಾಜ್‌ಕುಮಾರ್ ಅವರಿಗೆ ನೀಡಿದ ಚಿಕತ್ಸೆಯು ಅವರ ಜೀವನದ ಅಪರೂಪದ ಕ್ಷಣಗಳಲ್ಲಿ ಒಂದು.
ಡಾ. ರುದ್ರೇಶ್ ಅವರು ದೆಹಲಿಯಲ್ಲಿ ನಡೆಸಿದ ಒಂದು ಪ್ರಯೋಗ, ಚಿಕಿತ್ಸೆಯ ವಿವರಗಳು ಬೆರಗು ಹುಟ್ಟಿಸುತ್ತವೆ. 1997ರಲ್ಲಿ ದೆಹಲಿಯಲ್ಲಿ ‘ಡ್ರಾಪ್ಸಿ’ ಎಂಬ ರೋಗ ಒಂದು ಜನಸಮೂಹವನ್ನು ಕಾಡತೊಡಗಿತ್ತು. ಅದರಿಂದ ತಲೆದೋರುವ ಕಿಡ್ನಿ  ಮಸ್ಯೆಯಿಂದಾಗಿ ಹಲವರು ನಿಧನರಾಗಿದ್ದರು.

ಆಧುನಿಕ ವೈದ್ಯಪದ್ಧತಿಯಿಂದ ಅದನ್ನು ನಿಯಂತ್ರಿಸುವ ಸೂಕ್ತ ಚಿಕಿತ್ಸೆ ರೂಪುಗೊಂಡಿರಲಿಲ್ಲ. ಅಂದಿನ ಪ್ರಧಾನಿ ವಾಜಪೇಯಿ ಯವರ ಆಹ್ವಾನದ ಮೇರೆಗೆ ಡಾ.ಬಿ.ಟಿ.ರುದ್ರೇಶ್ ಅವರು ಆ ರೋಗದ ಮೂಲ ಹುಡುಕಲು ದೆಹಲಿಗೆ ಹೋದರು. ಐವತ್ತು ಜನ
ರೋಗಪೀಡಿತರನ್ನು ದಾಖಲಿಸಿಕೊಂಡು, ಸೂಕ್ತ ಚಿಕಿತ್ಸೆ ನೀಡಿ ಗುಣಮುಖರಾಗಿಸಿದ ಸಾಧನೆ ಡಾ.ರುದ್ರೇಶ್ ಅವರದ್ದು. ದೆಹಲಿಯಲ್ಲಿ ಅಂದು ಮಾರಾಟವಾಗುತ್ತಿದ್ದ ಖಾದ್ಯ ತೈಲವಾದ ಸಾಸಿವೆ ಎಣ್ಣೆಗೆ ಯಾರೋ ದತ್ತೂರ ಬೀಜವನ್ನು ಬೆರೆಸಿದ್ದರಿಂದ,
‘ಡ್ರಾಪ್ಸಿ’ ಆರೋಗ್ಯ ಸಮಸ್ಯೆ ಎದುರಾಗಿತ್ತು.

ಅಕಸ್ಮಾತ್ ಅವರಿಗೆ ಅಂದು ಯಶಸ್ಸು ದೊರಕದೇ ಹೋಗಿದ್ದರೆ, ಹೋಮಿಯೋಪತಿಗೇ ಕೆಟ್ಟ ಹೆಸರು ಬರುವ ಸಾಧ್ಯತೆ ಇತ್ತು! ಅಂತಹ ರಿಸ್ಕ್ ತೆಗೆದುಕೊಂಡು, ಡಾ. ರುದ್ರೇಶ್ ಅವರು ಅಂದು ಚಿಕಿತ್ಸೆ ನೀಡಿದರು, ಹೋಮಿಯೋಪತಿಯ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದರು. 2020ರಲ್ಲಿ ಕರೋನಾ ಸೋಂಕು ಎಲ್ಲೆಡೆ ಹರಡಲು ತೊಡಗಿದಾಗ, ಡಾ. ರುದ್ರೇಶ್ ಅವರು ಆ ವೈರಸ್‌ಗೆ ಸೂಕ್ತ ಚಿಕಿತ್ಸೆ ನೀಡುವ ಘೋಷಣೆ ಮಾಡಿದರು ಮತ್ತು ಅದರ ವಿವರಗಳನ್ನು ಸಹ ಎಲ್ಲರೊಂದಿಗೆ ಹಂಚಿಕೊಂಡರು.
ಕರ್ನಾಟಕ ಹೋಮಿಯೋಪತಿ ಮಂಡಳಿಯ ಅಧ್ಯಕ್ಷರಾಗಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ‘ಹೋಮಿಯೋ ಭವನ’ ನಿರ್ಮಾಣವು ಡಾ.ರುದ್ರೇಶ್ ಅವರ ಅಪರೂಪದ ಸಾಧನೆಗಳಲ್ಲಿ ಒಂದು.

ವಿವಿಧ ಪತ್ರಿಕೆಗಳಲ್ಲಿ ಅಂಕಣಗಳನ್ನು, ಲೇಖನಗಳನ್ನು ಬರೆದದ್ದರ ಜತೆಯಲ್ಲೇ, ಟಿವಿಗಳಲ್ಲಿ ಆರೋಗ್ಯದ ಕುರಿತಾಗಿ ಪ್ರಶ್ನೋತ್ತರ ಗಳನ್ನು ನಡೆಸಿಕೊಟ್ಟಿದ್ದಾರೆ, ಜನಸಾಮಾನ್ಯರಿಗೆ ಮಾರ್ಗದರ್ಶನ ನೀಡಿದ್ದಾರೆ. ಎಲ್ಲರೂ ತಮ್ಮ ಜೀವನ ಶೈಲಿಯನ್ನು ಬದಲಿಸಿ ಕೊಂಡು, ಸರಳ ಮತ್ತು ಆರೋಗ್ಯಪೂರ್ಣ ದಿನಚರಿಯನ್ನು ರೂಢಿಸಿಕೊಂಡು, ಔಷಧರಹಿತ ಜೀವನ ನಡೆಸಬೇಕೆಂಬುದು ಡಾ. ರುದ್ರೇಶ್‌ರ ಆಶಯ. ಪ್ರತಿದಿನ ತಮ್ಮ ಕ್ಲಿನಿಕ್‌ನಲ್ಲಿ 100 ರಿಂದ 150 ರೋಗಿಗಳ ತಪಾಸಣೆ, ಚಿಕಿತ್ಸೆ ನೀಡುತ್ತಿರುವ ಡಾ. ರುದ್ರೇಶ್ ಅವರು ‘ಅತ್ಯಂತ ಕಡಿಮೆ ವೆಚ್ಚದಲ್ಲಿ ಔಷಧರಹಿತ ಚಿಕಿತ್ಸೆ’ಯನ್ನು ನೀಡುವಲ್ಲಿ ತೆಗೆದುಕೊಳ್ಳುವ ಪರಿಶ್ರಮ ನಿಜಕ್ಕೂ ಅಪರೂ ಪದ್ದು.

ರುದ್ರೇಶ್ ಅವರು ಪಾಲಿಸಿಕೊಂಡು ಬಂದ ಕೆಲವು ಶಿಸ್ತು, ಆಶಯಗಳು ಇಂದು ಅಚ್ಚರಿಯನ್ನು ಹುಟ್ಟಿಸುತ್ತವೆ. ಅವುಗಳಲ್ಲಿ ಒಂದು ಎಂದರೆ ತಮ್ಮ ಸ್ವಂತ ಊರು ಬೆಳವಾಡಿಯಿಂದ ಯಾರಾದರೂ ಚಿಕಿತ್ಸೆ ಬಯಸಿ ಬಂದರೆ, ಅವರಿಗೆ ‘ಅಶ್ವಿನಿ ಹೋಮಿಯೋ ಕ್ಲಿನಿಕ್’ನಲ್ಲಿ ಉಚಿತ ಚಿಕಿತ್ಸೆ! ಅವರು ನಂಬಿಕೊಂಡು ಬಂದ ಇನ್ನೊಂದು ವಿಚಾರವೆಂದರೆ, ಬೃಹತ್ ಬಂಡವಾಳ ಹಾಕಿ ಹೊಸ ಹೊಸ ಆಸ್ಪತ್ರೆಯನ್ನು ನಿರ್ಮಿಸಿದರೆ, ಚಿಕಿತ್ಸೆಯ ವೆಚ್ಚವೂ ಅಧಿಕವಾಗುವುದರಿಂದ, ಸರಳವಾದ ಕಟ್ಟಡದಲ್ಲೇ ಕಾರ್ಯನಿರ್ವಹಣೆ!

ಇದರಿಂದಾಗಿ, ಅತಿ ಕಡಿಮೆ ವೆಚ್ಚದಲ್ಲಿ ಸೂಕ್ತ ಚಿಕಿತ್ಸೆಯನ್ನು ಎಲ್ಲಿರಿಗೂ ನೀಡುವ ಉದಾತ್ತ ಆಶಯ ಸಾಕಾರವಾಗಿದೆ! ‘ಸಾಧನೆಯೇ ಬದುಕು’ ಪುಸ್ತಕದಲ್ಲಿ ನಿರೂಪಕರು ಬರೆದಂತೆ, ಬಸವನಗುಡಿಯಲ್ಲಿರುವ ಡಾ. ರುದ್ರೇಶ್ ಅವರ ಚಿಕಿತ್ಸಾಲಯವು ಒಂದು ‘ನ್ಯಾಯಬೆಲೆ ಅಂಗಡಿ’ಯನ್ನು ಹೋಲುತ್ತದಂತೆ -ಅಂದರೆ ಅಷ್ಟೊಂದು ಜನಸಂದಣಿ! ಅಲ್ಲಿ ಎಲ್ಲರೂ ಸರದಿಯ ಪ್ರಕಾರವೇ ವೈದ್ಯರನ್ನು ನೋಡಬೇಕು. ಯಾವುದೇ ಶಿಫಾರಸ್ ತಂದರೂ, ಅವರವರ ಸರದಿ ಬಂದಾಗ ಮಾತ್ರ ಚಿಕಿತ್ಸೆ ದೊರೆ ಯುತ್ತದೆ.

ಅಲ್ಲಿನ ಜನಸಂದಣಿಯು ರುದ್ರೇಶ್ ಅವರ ಆಸ್ಪತ್ರೆಯ ಜನಪ್ರಿಯತೆಯನ್ನು ತೋರುತ್ತದೆ. ಪುಸ್ತಕದಲ್ಲಿ ಒಂದು ನಗು ಉಕ್ಕಿಸುವ ಆದರೆ ಅಪಾಯಕಾರಿ ಸನ್ನಿವೇಶದ ಚಿತ್ರಣವೂ ಇದೆ – ರೌಡಿ ಒಬ್ಬನು ತ್ವರಿತ ಚಿಕಿತ್ಸೆ ಬಯಸಿ, ವೈದ್ಯರ ತಲೆಗೆ ಬಂದೂಕು ಹಿಡಿದು
‘ಈಗಲೇ ಚಿಕಿತ್ಸೆ ಕೊಡಿ’ ಎಂದು ತಾಕೀತು ಮಾಡಿದ್ದನಂತೆ! ಈ ವಿಚಾರ ಕೇಳಿ ನಗು ಬಂದರೂ, ಅದೆಂತಹ ಅಪಾಯಕಾರಿ ಸನ್ನಿವೇಶವಾಗಿತ್ತು!

ಡಾ. ರುದ್ರೇಶ್ ಅವರು ಬಿಡುವಿಲ್ಲದ ವೈದ್ಯರಾದರೂ, ಅವರೊಳಗೊಬ್ಬ ಲೇಖಕನಿದ್ದಾನೆ, ಅಂಕಣಕಾರನಿದ್ದಾನೆ. ‘ಸಾಧನೆಯೇ ಬದುಕು’ ಪುಸ್ತಕದ ಒಂದು ಅಧ್ಯಾಯವು ಡಾ.ಬಿ.ಟಿ.ರುದ್ರೇಶ್ ಅವರ ಸಾಹಿತ್ಯ ಸಾಧನೆಯನ್ನು ಗುರುತಿಸುತ್ತದೆ. ಹೋಮಿಯೋ ಪತಿಯನ್ನು ಜನರಿಗೆ ಪರಿಚಯಿಸಬೇಕೆಂಬ ತುಡಿತದಿಂದಾಗಿ, ಆ ಕುರಿತು ನಿರಂತರವಾಗಿ ಕಳೆದ ಮೂರು ದಶಕಗಳಿಂದ ಡಾ. ರುದ್ರೇಶ್ ಬರೆಯುತ್ತಲೇ ಇದ್ದಾರೆ. ತಮ್ಮ ಸ್ವಂತ ಅನುಭವದ ಹಿನ್ನೆಲೆಯಲ್ಲಿ ಪುಸ್ತಕಗಳನ್ನು ರಚಿಸಿದ್ದಾರೆ, ಪ್ರಸಿದ್ಧ ಪತ್ರಿಕೆ
ಗಳಲ್ಲಿ ಅಂಕಣಗಳನ್ನೂ ಬರೆದಿದ್ದಾರೆ. ಹೋಮಿಯೋಪತಿ ಸ್ಥಾಪಕರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ.

ಇವರು ರಚಿಸಿದ ಸಾಹಿತ್ಯವು ವೈದ್ಯಕೀಯ ವಲಯದಲ್ಲೂ ಮನ್ನಣೆ ಪಡೆದು, ವೈದ್ಯ ಸಾಹಿತ್ಯಕ್ಕೆಂದೇ ಇರುವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹೋಮಿಯೋಪತಿ ಚಿಕಿತ್ಸೆಯ ಮೂಲಕ ಯಶಸ್ಸು ಕಂಡ ಹದಿನಾರು ಆಯ್ದ ಅಪರೂಪದ ಪ್ರಕರಣಗಳ ವಿವರ ನೀಡುವ ‘ಡಾ. ಬಿ.ಟಿ.ರುದ್ರೇಶ್ ಡೈರಿ’ (2017) ಇವರ ಪುಸ್ತಕಗಳ ಪೈಕಿ ಎದ್ದು ಕಾಣುವಂತಹದ್ದು. ಇವರ ಕುರಿತು ಅದಾಗಲೇ ಅಭಿನಂದನಾ ಗ್ರಂಥವಾದ ‘ಇದು ಬೆಡಗಲ್ಲ: ನಿಜದ ಬೆಳಕು’ (2016) ಪ್ರಕಟಗೊಂಡಿದೆ. ಡಾ. ರುದ್ರೇಶ್ ಅವರೇ ಸ್ವತಃ ಏಳು ಪುಸ್ತಕಗಳನ್ನು ರಚಿಸಿದ್ದಾರೆ.

ಆದರೂ, ಈಗ ಹೊರಬಂದಿರುವ, ಡಾ. ಬೆಳವಾಡಿ ಮಂಜುನಾಥ ರಚಿಸಿರುವ ‘ಸಾಧನೆಯೇ ಬದುಕು’ ತನ್ನ ಹೂರಣದಿಂದ, ಅಪರೂಪದ ಛಾಯಾಚಿತ್ರಗಳಿಂದಾಗಿ ವಿಶಿಷ್ಟ ಎನಿಸುತ್ತದೆ. ಕರ್ನಾಟಕ ಸರಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ , ಕೆಂಪೇಗೌಡ ಪ್ರಶಸ್ತಿ, ಹಂಪಿ ವಿವಿ ಯಿಂದ ನಾಡೋಜ ಪ್ರಶಸ್ತಿ, ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸೇರಿದಂತೆ ಡಾ.ಬಿ.ಟಿ.ರುದ್ರೇಶ್ ಅವರು ಹಲವಾರು ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದಾರೆ. ಕೆಲವೇ ದಶಕಗಳ ಹಿಂದೆ ಅಷ್ಟೇನೂ ಪರಿಚಿತವಾಗಿಲ್ಲದ ಹೊಮಿಯೋಪತಿ ಚಿಕಿತ್ಸಾ ಪದ್ಧತಿಯನ್ನು ಇಂದು ಜನಪ್ರಿಯಗೊಳಿಸಿರುವ ಈ ವೈದ್ಯರು ಮಾಡಿರುವ ಸಾಧನೆ ನಿಜಕ್ಕೂ ಅಪರೂಪದ್ದು.