Monday, 16th September 2024

ಬದುಕಿನ ಭರವಸೆಯ ಯುವನಿಧಿ

ಅಶ್ವತ್ಥಕಟ್ಟೆ

ranjith.hoskere@gmail.com

ಇಡೀ ದೇಶದಲ್ಲಿ ಒಂದೊಂದೇ ರಾಜ್ಯಗಳನ್ನು ಕಳೆದುಕೊಳ್ಳುತ್ತಿದ್ದ ಕಾಂಗ್ರೆಸ್‌ಗೆ ಉಸಿರಾಡಲು ಅನುವು ಮಾಡಿಕೊಟ್ಟಿದ್ದು, ಮರುಹುಟ್ಟು ನೀಡಿದ್ದು ಕರ್ನಾಟಕದ ವಿಧಾನಸಭಾ ಚುನಾವಣೆ. ಈ ಚುನಾವಣೆಯಲ್ಲಿ ೩ ದಶಕದ ಫಲಿತಾಂಶವನ್ನು ಧ್ವಂಸ ಮಾಡಿ, ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನು ಕಾಂಗ್ರೆಸ್ ಹಿಡಿಯಿತು.

ಇದಾದ ಬಳಿಕ ಪಂಚರಾಜ್ಯ ಚುನಾವಣೆಯಲ್ಲಿ ಹೇಳಿಕೊಳ್ಳುವ ಫಲಿತಾಂಶ ಸಿಗದಿದ್ದರೂ, ದೇಶದ ಪ್ರಮುಖ ರಾಜ್ಯವಾಗಿರುವ ಕರ್ನಾಟಕ ನಮ್ಮ ಕೈಯಲ್ಲಿದೆ ಎನ್ನುವ ‘ವಿಶ್ವಾಸ’ ಕಾಂಗ್ರೆಸ್ ನಾಯಕರಲ್ಲಿದೆ. ಈ ಪ್ರಮಾಣದಲ್ಲಿ ಭರ್ಜರಿ ಬಹುಮತವನ್ನು ರಾಜ್ಯದ ಮತದಾರರು ಕಾಂಗ್ರೆಸ್ ಗೆ ನೀಡಲು, ಹಿಂದಿನ ಬಿಜೆಪಿ ಸರಕಾರದ ಭ್ರಷ್ಟಚಾರ, ನಾಯಕತ್ವದ ಸಮಸ್ಯೆ ಕಾರಣ ಎನ್ನುವ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಆದರೆ ಈ ಮಟ್ಟಿಗೆ ಹೀನಾಯವಾಗಿ ಸೋಲುವುದಕ್ಕೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ ‘ಪಂಚಖಾತ್ರಿ’ಗಳೇ ಕಾರಣ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲಲೇಬೇಕಾದ ಅನಿವಾರ್ಯವಿತ್ತು. ಆದರೆ ಬಿಜೆಪಿ ಲೋಕಸಭಾ ಚುನಾವಣಾ ದೃಷ್ಟಿಯಿಂದ ಕರ್ನಾಟಕವನ್ನು ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಘಟಾನುಘಟಿ ನಾಯಕರೆಲ್ಲ ಕರ್ನಾಟಕದಲ್ಲಿಯೇ ಬೀಡುಬಿಟ್ಟಿದ್ದರು. ಆದರೆ ಈ ಎಲ್ಲವನ್ನು ಮೀರಿ ಕಾಂಗ್ರೆಸ್‌ಗೆ ಭರ್ಜರಿ ಬಹುಮತ ಬರುವುದಕ್ಕೆ ಪ್ರಮುಖ ಕಾರಣ, ಕಾಂಗ್ರೆಸ್ ಘೋಷಿಸಿದ ಪಂಚಖಾತ್ರಿ ಘೋಷಣೆ ಗಳು.

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಗೂ ಮೊದಲೇ ಘೋಷಿಸಿದ ಗ್ಯಾರಂಟಿಗಳು ರಾಜ್ಯ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಈ ಎಲ್ಲ ಘೋಷಣೆ ಪೂರ್ಣಗೊಳಿಸಲು ಸಾಧ್ಯವೇ ಇಲ್ಲ ಎನ್ನುವ ಮಾತುಗಳನ್ನು ಬಿಜೆಪಿ ನಾಯಕರೆಲ್ಲ ಹೇಳಿಕೊಂಡು ಬಂದರೂ, ಈ ಎಲ್ಲವನ್ನು ಮೀರಿ ಕಾಂಗ್ರೆಸ್‌ನ ಘೋಷಣೆಗಳನ್ನು ನೋಡಿಯೇ ಕೈ ಪಡೆಗೆ ಮತದ ವರವನ್ನು ನೀಡುವ ಮೂಲಕ ಜನರು ಭರ್ಜರಿ ಜಯ ಕರುಣಿಸಿದರು. ಪಂಚಗ್ಯಾರಂಟಿಯಲ್ಲಿ ಶಕ್ತಿ ಹಾಗೂ ಗೃಹಲಕ್ಷ್ಮೀ ಯೋಜನೆ ನೇರವಾಗಿ ಮಹಿಳಾ ಮತದಾರರ ಮೇಲೆ ಪರಿಣಾಮ ಬೀರಿದರೆ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಇಡೀ ಕುಟುಂಬದ ಮೇಲೆ ಪ್ರಭಾವ ಬೀರುವ ಘೋಷಣೆ ಗಳಾಗಿದ್ದವು.

ಅಂತಿಮ ಘೋಷಣೆಯಾಗಿದ್ದ ‘ಯುವನಿಧಿ’ಯೂ ಯುವ ಮತದಾರರನ್ನು ಪಕ್ಷದತ್ತ ಸೆಳೆಯುವ ನಿಟ್ಟಿನಲ್ಲಿ ಮಹತ್ವದ್ದಾಗಿತ್ತು. ರಾಜ್ಯದ ಮತದಾರರ ಪಟ್ಟಿಯಲ್ಲಿ ೧೮ರಿಂದ ೨೮ ವರ್ಷ ದೊಳಗಿನ ಮತದಾರರ ಸಂಖ್ಯೆ ೨೦ ಲಕ್ಷವನ್ನು ಮೀರಿದೆ. ಇವರಲ್ಲಿ ಪದವಿಯನ್ನು ಪಡೆಯಲು ಬಯಸುತ್ತಿರುವ, ಪದವಿ ವ್ಯಾಸಂಗ ಮಾಡುತ್ತಿರುವ ಅಥವಾ ಈಗಷ್ಟೆ ಓದು ಮುಗಿಸಿ, ಕೆಲಸ ಅರಸುತ್ತಿರುವವರಿದ್ದಾರೆ. ಈ ಮತದಾರರನ್ನು ಗಮನದಲ್ಲಿರಿಸಿಕೊಂಡೇ ಘೋಷಿಸಿದ ಯುವನಿಧಿಯ
ಮೂಲಕ, ಪದವಿ ಮಾಡಿ ಕೆಲಸ ಸಿಗದವರಿಗೆ ಮೂರು ಸಾವಿರ ಹಾಗೂ ಡಿಪ್ಲೊಮಾ ಮಾಡಿದವರಿಗೆ ೧೫೦೦ ರು. ನಿರುದ್ಯೋಗ ನಿಧಿ ನೀಡುವ ಘೋಷಣೆಯನ್ನು ಮಾಡಿತ್ತು.

ಇದು ಹಳ್ಳಿ ಭಾಗದಲ್ಲಿ ಬಹುದೊಡ್ಡ ಪರಿಣಾಮ ಬೀರಿತ್ತು ಎಂದರೆ ತಪ್ಪಾಗುವುದಿಲ್ಲ. ಪಂಚ ಗ್ಯಾರಂಟಿಗಳಲ್ಲಿ ಬಹುತೇಕ ಯಶಸ್ವಿಯಾಗುವುದಿಲ್ಲ ಎನ್ನುವ ಆರೋಪದ ಹೊರತಾಗಿಯೂ, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಏಳೇ ತಿಂಗಳಲ್ಲಿ ರಾಜ್ಯ ಸರಕಾರ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಐದನೇ ಘೋಷಣೆಯಾಗಿದ್ದ ಯುವನಿಽಯನ್ನು ಕಳೆದ ವಾರವಷ್ಟೇ, ಅರ್ಹ ಫಲಾನುಭವಿಗಳಿಗೆ ನಗದು ಹಣ ವರ್ಗಾವಣೆ ಮಾಡುವ ಮೂಲಕ ಕೊಟ್ಟ ಮಾತಿನಂತೆ ಎಲ್ಲ ಗ್ಯಾರಂಟಿಗಳನ್ನು ಸರಕಾರ ಜಾರಿಗೊಳಿಸಿದೆ.

ಯುವನಿಽ ಯೋಜನೆಯಲ್ಲಿ ಸರಕಾರ ನೀಡುವ ಮೂರು ಸಾವಿರ ರುಪಾಯಿಗಳಾಗಲಿ, ಗೃಹಲಕ್ಷ್ಮೀ ಯೋಜನೆಯಲ್ಲಿ ನೀಡುವ ಎರಡು ಸಾವಿರ ರು.ಗಳಾಗಲಿ ನಗರ ಪ್ರದೇಶದ ಜನರಿಗೆ ಅಥವಾ ಮೇಲ್ಮಧ್ಯಮ ವರ್ಗದವರಿಗೆ ದೊಡ್ಡ ಮೊತ್ತ ವಾಗಲಿಕ್ಕಿಲ್ಲ. ಆದರೆ ಗ್ರಾಮೀಣ ಭಾಗದ ಜನರಿಗೆ ಇದು ಬಹುದೊಡ್ಡ ಮೊತ್ತವಾಗಿರುತ್ತದೆ. ಮನೆಯ ಸಣ್ಣ ಪುಟ್ಟ ಖರ್ಚಿಗೆ, ಅಥವಾ ಉದ್ಯೋಗ ಹುಡುಕಾಟದಲ್ಲಿರುವ ಯುವಕರಿಗೆ ಸಣ್ಣ ಪ್ರಮಾಣದಲ್ಲಿ ಬೇಕಾಗುವ ಹಣದ ಮೌಲ್ಯ ಅವರಿಗೆ ಮಾತ್ರ ತಿಳಿದಿರುತ್ತದೆ.

ಹಾಗೆ ನೋಡಿದರೆ, ಕರ್ನಾಟಕ ಸರಕಾರ ಈಗ ಜಾರಿ ಗೊಳಿಸಿರುವ ನಿರುದ್ಯೋಗ ಭತ್ಯೆ ಎನ್ನುವುದು ಹೊಸ ಆಲೋಚನೆ ಏನಲ್ಲ. ದೇಶದ ಅಥವಾ ರಾಜ್ಯದ ಮಟ್ಟಿಗೆ ಇದು ಹೊಸದೆನಿಸಿದರೂ, ಹಲವು ದೇಶಗಳಲ್ಲಿ ಉದ್ಯೋಗ ಕಳೆದುಕೊಂಡರೆ ಅವರ ಜೀವನ ನಿರ್ವಹಣೆಗೆ ಸರಕಾರದ ವತಿಯಿಂದಲೇ ಇಂತಿಷ್ಟು ಹಣವನ್ನು ಸಂದಾಯ ಮಾಡಲಾಗುತ್ತದೆ. ಇದೇ ರೀತಿ ಕೆಲಸ ಸಿಗದ ಯುವಕರಿಗೂ ಇಂತಿಷ್ಟು ವರ್ಷಗಳವರೆಗೆ ಸರಕಾರವೇ ಹಣ ನೀಡುವ ಪದ್ಧತಿಯಿದೆ. ಇದೇ ಪರಿಕಲ್ಪನೆಯಲ್ಲಿ ರಾಜ್ಯ ಕಾಂಗ್ರೆಸ್ ಸಣ್ಣ ಬದಲಾವಣೆ ಮಾಡಿಕೊಂಡು, ಉದ್ಯೋಗ ಸಿಗದ ಯುವಕರಿಗೆ ವಿಶೇಷ ಭತ್ಯೆ ನೀಡುವ ಪ್ರಯತ್ನಕ್ಕೆ ಕೈಹಾಕಿದೆ.

ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿರುವ ಹಲವರು ಹೇಳುತ್ತಿರುವಂತೆ ಪಂಚ ಗ್ಯಾರಂಟಿಗಳು ರಾಜ್ಯದ ಖಜಾನೆಗೆ ಹೆಚ್ಚಿನ ಹೊರೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ಯೋಜನೆಗಳಿಗಾಗಿ ಕಾಂಗ್ರೆಸ್ ಸರಕಾರ ಹೊಸ ಅಭಿವೃದ್ಧಿ ಯೋಜನೆಗಳನ್ನು ತಡೆಹಿಡಿದು, ‘ಮುಂದೆ ನೋಡೋಣ’ ಎನ್ನುವ ಮನಸ್ಥಿತಿಯಲ್ಲಿರುವುದು ಸತ್ಯ. ಆದರೆ ಈ ಯೋಜನೆಯ ಲಾಭವಾಗಿಯೇ ಇಲ್ಲ ಎನ್ನುವುದು ಮಾತ್ರ ಒಪ್ಪುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಈ ಯೋಜನೆಗಳನ್ನು
ಜನ ಒಪ್ಪದಿದ್ದರೆ ಕಾಂಗ್ರೆಸ್‌ಗೆ ಕ್ಲೀನ್ ಸ್ವೀಪ್ ಸಿಗುತ್ತಿರಲಿಲ್ಲ. ಇದರೊಂದಿಗೆ ಕಾಂಗ್ರೆಸ್‌ನ ಈ ಯೋಜನೆಗಳನ್ನು ಇತರೆ ರಾಜ್ಯಗಳಲ್ಲಿ ಬಿಜೆಪಿ ‘ಕಾಪಿ’ ಮಾಡುವ ಪ್ರಮೇಯವೂ ಬರುತ್ತಿರಲಿಲ್ಲ.

ರಾಜ್ಯದ ಆರ್ಥಿಕ ವಿಷಯದಲ್ಲಿ ನೋಡುವುದಾದರೆ ಈ ಎಲ್ಲ ಯೋಜನೆಗಳು ದುಂದುವೆಚ್ಚ ಎನಿಸಬಹುದು. ಆದರೆ ಒಂದು ಗ್ರಾಮದ ಕೂಲಿ ಕುಟುಂಬದ ಪರಿಸ್ಥಿತಿಯಲ್ಲಿ ನಿಂತು ನೋಡಿದರೆ, ಈ ಯೋಜನೆಗಳ ಮಹತ್ವ ಅರಿವಾಗುತ್ತದೆ. ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ವಿಷಯವನ್ನು ಮುಂದಿಟ್ಟು ಕೊಂಡು ಮಾತನಾಡಿದ್ದರು. ಸಣ್ಣ ಹಳ್ಳಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಯೊಬ್ಬ ಬೆಂಗಳೂರಿಗೆ ಬಂದು ಕೆಲಸ ಹುಡುಕಾಡ
ಬೇಕೆಂದರೆ ಕನಿಷ್ಠ ಒಂದೆರೆಡು ತಿಂಗಳು ‘ಸ್ವಂತ ಖರ್ಚಿ’ನಲ್ಲಿ ಬದುಕಬೇಕು. ಇದರೊಂದಿಗೆ ಕೆಲಸ ಹುಡುಕುವ ವೇಳೆ ಅಗತ್ಯ ಬೀಳುವ ಸಣ್ಣ ಪುಟ್ಟ ಖರ್ಚಿಗೋ ಅಥವಾ ಯಾವುದಾದರೂ ಸರಕಾರಿ ಪರೀಕ್ಷೆ ಬರೆಯಲು ಕಟ್ಟುವ ಪರೀಕ್ಷಾ ಶುಲ್ಕಕ್ಕೋ ಮನೆಯಲ್ಲಿ ಕೇಳಲು ಸಾಧ್ಯವಾಗದ ಎಷ್ಟೋ ಯುವಕರಿಗೆ ಈ ಯುವನಿಧಿಯ ಮಾಸಿಕ ಮೂರು ಸಾವಿರ ರು. ವರದಾನವಾಗಿದೆ ಎಂದರೆ ತಪ್ಪಾಗುವುದಿಲ್ಲ.

ವಯಸ್ಸಿಗೆ ಬಂದ ಅನೇಕರು ಸಣ್ಣಪುಟ್ಟ ಖರ್ಚಿಗೆ ಪೋಷಕರ ಬಳಿ ಕೈಚಾಚಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವೊಮ್ಮೆ ಪದವಿ ಪಡೆದು ಹಲವು ತಿಂಗಳೂ ಕಳೆದರೂ, ಕೆಲಸ ಸಿಗದಿದ್ದಾಗ ಮನೆಯಲ್ಲಿ ನೋಡುವ ರೀತಿಯೇ ಬದಲಾಗಿರುತ್ತದೆ. ಅಂಥವರಿಗೆ ಮಾಸಿಕ ಮೂರು ಸಾವಿರ ರು. ಬಂದರೆ ಕೊನೆಪಕ್ಷ ತಮ್ಮ ಖರ್ಚನ್ನು ತಾವೇ ನಿಭಾಯಿಸುವಷ್ಟರ ಮಟ್ಟಿಗೆ ಬದುಕಬಹುದು. ಇನ್ನು ಈ ಹಂತದಲ್ಲಿ ರಾಜ್ಯ ಸರಕಾರ ನಿರುದ್ಯೋಗಿಗಳಿಗೆ ಭತ್ಯೆ ನೀಡುವುದು ಎಷ್ಟು ಉತ್ತಮ ವಿಚಾರವೋ, ಇದರ ಜತೆಜತೆಗೆ ಉದ್ಯೋಗವನ್ನು ಸೃಷ್ಟಿಸುವ ನಿಟ್ಟಿನಲ್ಲಿಯೂ ಸರಕಾರ ಆಲೋಚಿಸಬೇಕಿದೆ. ಯಾವುದೇ ಸರಕಾರವಾದರೂ, ರಾಜ್ಯದ ಅಥವಾ ದೇಶದ ನಿರುದ್ಯೋಗಿಗಳಿಗೆಲ್ಲ ಸರಕಾರಿ ಕೋಟಾದಲ್ಲಿಯೇ ಉದ್ಯೋಗ ಸೃಷ್ಟಿಸುವುದು ಅಸಾಧ್ಯ.

ಆದರೆ ಸರಕಾರಗಳು, ಸರಕಾರಿ ಕೆಲಸಗಳೊಂದಿಗೆ ಖಾಸಗಿ ಬಂಡವಾಳ ಹೂಡಿಕೆ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ರೀತಿಯಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಇದರ ಭಾಗವಾಗಿ ರಾಜ್ಯ ಸರಕಾರದ ವತಿಯಿಂದಲೇ ಈಗಾಗಲೇ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಇಂಥ ಯೋಜನೆಗಳು ಇನ್ನಷ್ಟು ಹೆಚ್ಚಾಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ
ಯುವನಿಧಿ ಮಾತ್ರವಲ್ಲದೇ ಇಡೀ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ವಿಷಯದಲ್ಲಿ ಹಲವು ಅನುಮಾನಗಳಿದ್ದವು.

ರಾಜ್ಯದ ಬಜೆಟ್‌ನ ಶೇ.೬೦ರಷ್ಟು ಭಾಗ ಬದ್ಧತಾ ವೆಚ್ಚಕ್ಕೆ ಹೋಗಲಿದೆ. ಇನ್ನುಳಿದ ಬಾಕಿ ಅನುದಾನದಲ್ಲಿ ವಾರ್ಷಿಕವಾಗಿ ಸುಮಾರು ೫೦ರಿಂದ ೫೮ ಸಾವಿರ ಕೋಟಿ ರು. ಬೇಡುವ ಯೋಜನೆಗಳನ್ನು ಜಾರಿಗೊಳಿಸಿದರೆ, ಅಭಿವೃದ್ಧಿ ಕಾರ್ಯಗಳಿಗೆ ತಂದರೆಯಾಗುತ್ತದೆ ಎನ್ನುವುದು ಹಲವರ ಅಂಬೋಣ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೇರಿದಂತೆ ಸಮಸ್ತ ಕಾಂಗ್ರೆಸಿಗರು, ಮುಂದಿನ ವರ್ಷಕ್ಕೆ ಎಲ್ಲವೂ ಸರಿಹೋಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಇನ್ನೊಂದು ತಿಂಗಳಲ್ಲಿ ಮಂಡನೆ ಯಾಗಲಿರುವ ಪೂರ್ಣಪ್ರಮಾಣದ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಹೇಗಾಗಲಿದೆ ಎನ್ನುವುದು ತಿಳಿಯಲಿದೆ. ಕೊಟ್ಟ
ಮಾತು ಉಳಿಸಿಕೊಳ್ಳಲು ಪಂಚಗ್ಯಾರಂಟಿಗಳನ್ನು ಒಂದೇ ಗುಕ್ಕಿಗೆ ಈಡೇರಿಸಿರುವ ರಾಜ್ಯ ಕಾಂಗ್ರೆಸ್ ಸರಕಾರ ೨೦೨೪- ೨೫ನೇ ಆರ್ಥಿಕ ವರ್ಷದಲ್ಲಿ ಗ್ಯಾರಂಟಿ, ಬದ್ಧತಾ ವೆಚ್ಚ ಹಾಗೂ ಅಭಿವೃದ್ಧಿಯನ್ನು ಯಾವ ರೀತಿ ನಿರ್ವಹಿಸಲಿದೆ ಎನ್ನುವುದಕ್ಕೆ ಉತ್ತರ ಮುಂದಿನ ಬಜೆಟ್‌ವರೆಗೆ ಕಾಯಬೇಕಿದೆ.

ಕೊನೆಯದಾಗಿ ಯುವನಿಽ ಯೋಜನೆಯನ್ನು ಘೋಷಣೆ ಮಾಡುತ್ತಿದ್ದಂತೆ ಸರಕಾರ ಯುವಕರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ಇದರಿಂದ ಯುವಕರು ಕೆಲಸ ಹುಡುಕುವ ಬದಲು ಮನೆಯಲ್ಲಿ ಆರಾಮಾಗಿರುತ್ತಾರೆ ಎನ್ನುವ ಮಾತುಗಳೆಲ್ಲ ಕೇಳಿಬಂದವು. ಆದರೆ ಇನ್ನೊಂದು ಬದಿಯಲ್ಲಿಯೂ ಈ ಯೋಜನೆಯನ್ನು ನೋಡಬಹುದು. ಯಾವುದೇ ಯೋಜನೆಗಳನ್ನು ಸರಕಾರ ಜಾರಿಗೊಳಿಸಿದಾಗಲೂ ಸಾಧಕ-ಬಾಧಕಗಳೆರಡೂ ಇರುವುದು ನಿಶ್ಚಿತ. ಇಂಥ ಯೋಜನೆಗಳನ್ನು ಜಾರಿಗೊಳಿಸಿದ ಸಮಯದಲ್ಲಿ ಸದರಿ ಯೋಜನೆಯ ದುರ್ಬಳಕೆಯಾಗುವ ಸಾಧ್ಯತೆಗಳಿರುತ್ತವೆ.

ಆದ್ದರಿಂದ ಕೇವಲ ನಕಾರಾತ್ಮಕ ವಿಷಯಗಳನ್ನು ಮಾತ್ರ ನೋಡದೆ, ಯೋಜನೆಯ ಸಕಾರಾತ್ಮಕ ಅಂಶಗಳನ್ನು ಗಮನಿಸಬೇಕಿದೆ. ಟೀಕೆ ಟಿಪ್ಪಣಿಯ ಹೊರತಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ಯುವನಿಽಯ ಸಾಧಕ-ಬಾಧಕ ಗಳನ್ನು ಮೀರಿ, ಕಾಲೇಜಿನಿಂದ ಪದವಿ ಹಿಡಿದು ಕೆಲಸ ಅರಸಿ ಬರುವ ಯುವಕರಿಗೆ ‘ಮರುಭೂಮಿಯಲ್ಲಿ ಓಯಾಸಿಸ್’ ಎನ್ನುವುದಂತು ಸ್ಪಷ್ಟ.

Leave a Reply

Your email address will not be published. Required fields are marked *