ಈಗಿನಿಂದಲೇ ರಾಜಕೀಯ ವೇದಿಕೆ ಸಜ್ಜುಗೊಳಿಸಿದ ಮಂಡ್ಯದ ಸೊಸೆ, ಸಂಸದೆ ಸುಮಲತಾ
ತವರು ಮಂಡ್ಯ, ಮದ್ದೂರಿನಿಂದಲೇ ರಾಜಕೀಯಕ್ಕೆ ಎಂಟ್ರಿ: ಅಭಿಷೇಕ್ ಅಂಬರೀಶ್
ವಿಶೇಷ ವರದಿ: ನಾಗಯ್ಯ ಲಾಳನಕೆರೆ ಮಂಡ್ಯ
ಸಂಸದೆ ಸುಮಲತಾ ಅಂಬರೀಶ್ ಇದೀಗ ಚಾಣಾಕ್ಷ ನಡೆಯನ್ನಿಟ್ಟಿದ್ದಾರೆ. ಮಂಡ್ಯದಲ್ಲಿ ಮನೆ ನಿರ್ಮಾಣದ ಜೊತೆ ಜೊತೆಗೆ ಮಗನ ರಾಜಕೀಯ ಭವಿಷ್ಯಕ್ಕೂ
ಅಡಿಗಲ್ಲು ಹಾಕಿದ್ದಾರೆ!
ಸೆರಗೊಡ್ಡಿ ಮತಭಿಕ್ಷೆ ಬೇಡುವ ಮೂಲಕ ಮತದಾರನ ಮನಗೆದ್ದು ಪಕ್ಷೇತರವಾಗಿ ಆಯ್ಕೆಯಾದ ಸಂಸದೆ ಯೆಂಬ ಖ್ಯಾತಿಗೆ ಪಾತ್ರವಾದ ಸಂಸದೆ ಸುಮಲತಾ ಅಂಬರೀಶ್, ಇದೀಗ ಮತ್ತೊಮ್ಮೆ ಮಂಡ್ಯದ ಜನರಿಗೆ ಮೋಡಿ ಮಾಡಲು ಹೊರಟಿದ್ದಾರೆ!
ಬೆಂಗಳೂರು -ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆಯೇ ಮಂಡ್ಯ-ಮದ್ದೂರು ನಡುವಿನ ಹನಕೆರೆ ಬಳಿ ಸ್ವಂತ ಮನೆ ನಿರ್ಮಾಣಕ್ಕೆ ಇಂದು ಅಡಿಗಲ್ಲು ಹಾಕಿದ್ದಾರೆ. ತನ್ನ ಆಪ್ತ ಹನಕೆರೆ ಶಶಿ ಅವರಿಗೆ ಸೇರಿದ 30 ಗುಂಟೆ ಜಾಗವನ್ನು ಖರೀದಿಸಿದ್ದು ಇಂದು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. 8-10 ತಿಂಗಳೊಳಗೆ ಮನೆಮಾಡಿ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ದತೆ ಆರಂಭಿಸುವ ಲೆಕ್ಕಾಚಾರ ನಡೆದಿದೆ. ಸುಮಲತಾ ಮನೆ ನಿರ್ಮಾಣದ ಭೂ ಪೂಜೆ ನೆರವೇರಿಸಿದ ಬೆನ್ನಲ್ಲೇ ರಾಜಕೀಯ ಚರ್ಚೆಗಳೂ ಶುರುವಾಗಿವೆ.
ಪುತ್ರನ ರಾಜಕೀಯ ಭವಿಷ್ಯಕ್ಕೆ ಅಡಿಗಲ್ಲು: ಪುತ್ರ ಅಭಿಷೇಕ್ ಅಂಬರೀಶ್ ಗೆ ರಾಜಕೀಯ ಭವಿಷ್ಯ ಕಟ್ಟಿಕೊಡುವ ನಿಟ್ಟಿನಲ್ಲಿಯೇ ಈ ಮನೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ ಅನ್ನೋ ಲೆಕ್ಕಾಚಾರ ಈಗಾಗಲೆ ಆರಂಭ ವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಂಬರೀಶ್ ತವರು ಕ್ಷೇತ್ರಗಳಾದ ಮದ್ದೂರು ಅಥವಾ ಮಂಡ್ಯದಿಂದ ಅಭಿಷೇಕ್ನನ್ನು ಕಣಕ್ಕಿಳಿಸುವ ಪ್ಲಾನ್ ಇದಾಗಿದೆ ಎನ್ನಲಾಗಿದೆ.
ಅಂಬಿ ಹುಟ್ಟೂರು ದೊಡ್ಡರಸಿನಕೆರೆ ಗ್ರಾಮವಾಗಿದೆ. ಇದೀಗ ಹನಕೆರೆ ಬಳಿ ನಿರ್ಮಿಸಲು ಉದ್ದೇಶಿಸಿರುವ ಮನೆ ಮಂಡ್ಯ-ಮದ್ದೂರು ಕ್ಷೇತ್ರಗಳೆರಡಕ್ಕೂ ಹತ್ತಿರವೇ
ಇದೆ. ಹೀಗಾಗಿ ಚುನಾವಣಾ ಕಾಲದಲ್ಲಿ ಹನಕೆರೆ ಗ್ರಾಮ ಹತ್ತಿರವೇ ಇರುವುದರಿಂದ ರಾಜಕೀಯ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂಬ ಪ್ಲಾನ್ ನಿಂದಲೇ ನೂತನ ಮನೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ ಎಂಬ ಮಾತುಗಳೂ ಆಪ್ತವಲಯದಿಂದಲೇ ಕೇಳಿ ಬಂದಿದೆ.
ರೆಬಲ್ ಅಂಬರೀಶ್ ಪುತ್ರ ಅಭಿಷೇಕ್ ಕೂಡ ಜನ ಬಯಸೋದಾದ್ರೆ ಅಪ್ಪನ ತವರು ಕ್ಷೇತ್ರದಿಂದಲೇ ರಾಜಕೀಯಕ್ಕೆ ಎಂಟ್ರಿಕೊಡ್ತೇನೆ ಅಂತ ಈಗಾಗಲೆ ಹೇಳಿರೋ ಮಾತು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಒಟ್ಟಾರೆ ಸಂಸದೆ ಸುಮಲತಾ ಅಂಬರೀಶ್ ಅವರ ಮನೆ ನಿರ್ಮಾಣದ ಹಿಂದೆ ಲೆಕ್ಕಾಚಾರಗಳು ಮಾತ್ರ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.